ಬೆಂಗಳೂರು; ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಇದ್ದ ಕನಿಷ್ಠ ಭೂಮಿ ಅವಶ್ಯಕತೆ ತೆಗೆದುಹಾಕುವುದು ಸೇರಿದಂತೆ ಮತ್ತಿತರೆ ಮಾನದಂಡ ಮತ್ತು ಅಗತ್ಯ ಅರ್ಹತೆಗಳನ್ನು ಸಡಿಲಗೊಳಿಸಲು ರಾಜ್ಯ ಕಾಂಗ್ರೆಸ್ ಸರ್ಕಾರವು ಇದೀಗ ಮುಂದಾಗಿದೆ. ಇದಕ್ಕೆ ಕೇಂದ್ರ ಸರ್ಕಾರವು ಉನ್ನತ ಶಿಕ್ಷಣ ವಲಯದಲ್ಲಿ ಈಸ್ ಡೂಯಿಂಗ್ ಬ್ಯುಸಿನೆಸ್ ಮಾದರಿ ಪರಿಚಯಿಸುವುದರ ಭಾಗವಾಗಿ ನೀಡಿರುವ ಸಲಹೆಯನ್ನು ಮುಂದಿರಿಸಿಕೊಂಡಿದೆ.
ಕೇಂದ್ರ ಸರ್ಕಾರದ ಹಲವು ಸಲಹೆಗಳನ್ನು ತಿರಸ್ಕರಿಸುತ್ತಲೇ ಬಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು, ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಇರುವ ನಿಯಮಗಳನ್ನು ಸಡಿಲಗೊಳಿಸುವ ಸಂಬಂಧ ಕೇಂದ್ರದ ಸಲಹೆಯನ್ನು ತಾತ್ವಿಕವಾಗಿ ಒಪ್ಪಿಕೊಂಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಈ ನಡೆಯು ಶಿಕ್ಷಣ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವಿಶೇಷವೆಂದರೆ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕಿಂತಲೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಅಗತ್ಯವಿದ್ದ ಕನಿಷ್ಟ 20 ಎಕರೆ ಇರಲು ಹಿಂದಿನ ಸಚಿವ ಡಾ ಎಂ ಸಿ ಸುಧಾಕರ್ ಅವರು ಅನುಮೋದಿಸಿದ್ದರೇ ಅಧಿಕಾರಿಗಳು ಅದನ್ನು 15 ಎಕರೆಗೆ ಕಡಿಮೆಗೊಳಿಸಬಹುದು ಎಂದು ಸಲಹೆ ನೀಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ದಿ ಫೈಲ್ ಗೆ ಕೆಲವು ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.
ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಇರುವ ಅಗತ್ಯತೆಗಳ ಕುರಿತು ಭಾರತ ಸರ್ಕಾರದ ಸಚಿವ ಸಂಪುಟದ ವಿಶೇಷ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಇರುವ ಕೆಲವು ನಿಯಂತ್ರಣಗಳನ್ನು ಸಡಿಲಿಸುವುದು, ಸುಲಭವಾಗಿ ವ್ಯವಹಾರ ನಡೆಸುವ ಕುರಿತು ಚರ್ಚೆ ನಡೆಸಲಾಗಿತ್ತು.

ಅದರಲ್ಲೂ ವಿಶೇಷವಾಗಿ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿತ್ತು. ಈ ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಚರ್ಚೆಯ ಸಂದರ್ಭದಲ್ಲಿ, ಉನ್ನತ ಶಿಕ್ಷಣದಲ್ಲಿ ಇನ್‌ಪುಟ್ ಆಧಾರಿತ ನಿಯಂತ್ರಣ (Input-based Regulation) ಪದ್ಧತಿಯಿಂದ ಫಲಿತಾಂಶ ಆಧಾರಿತ ನಿಯಂತ್ರಣ (Outcome-based Regulation) ಪದ್ಧತಿಗೆ ಪರಿವರ್ತನೆಯ ಅಗತ್ಯತೆ ಕುರಿತು ಚರ್ಚಿಸಲಾಗಿತ್ತು. ಚರ್ಚೆಯ ನಂತರ ವಿಶೇಷ ಕಾರ್ಯದರ್ಶಿಗಳು ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಸಂಬಂಧಿಸಿದಂತೆ ಹಲವು ಪ್ರಮುಖ ಸಲಹೆಗಳನ್ನು ನೀಡಿದ್ದರು.
ಕನಿಷ್ಟ ಭೂಮಿ ಅವಶ್ಯಕತೆ ತೆಗೆದುಹಾಕುವುದು
ಖಾಸಗಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಪ್ರಸ್ತುತ ನಿಗದಿಪಡಿಸಿರುವ ಕನಿಷ್ಠ ಭೂಮಿಯ ಅವಶ್ಯಕತೆಯನ್ನು ಮರುಪರಿಶೀಲಿಸಬೇಕು. ಅಗತ್ಯವಿದ್ದರೆ ಅದನ್ನು ಸಡಿಲಿಸುವುದು ಅಥವಾ ಸಂಪೂರ್ಣವಾಗಿ ತೆಗೆದುಹಾಕಬೇಕು. ಸಮರ್ಪಕವಾದ ಶೈಕ್ಷಣಿಕ ಸೌಲಭ್ಯಗಳು, ಸಂಶೋಧನಾ ಮೂಲಸೌಕರ್ಯ, ವಿದ್ಯಾರ್ಥಿ ಬೆಂಬಲ ಸೇವೆಗಳು ಹಾಗೂ ಇತರೆ ಅಗತ್ಯ ಸೌಲಭ್ಯಗಳು ಲಭ್ಯವಿರಬೇಕು. ಸಣ್ಣ ಅಥವಾ ಸೀಮಿತ ವಿಸ್ತೀರ್ಣದ ಕ್ಯಾಂಪಸ್‌ನಿಂದಲೂ ಗುಣಮಟ್ಟದ ಉನ್ನತ ಶಿಕ್ಷಣವನ್ನು ಒದಗಿಸಲು ಸಾಧ್ಯ ಎಂದು ಭಾರತ ಸರ್ಕಾರದ ಸಚಿವ ಸಂಪುಟವು ನಡೆಸಿದ್ದ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿತ್ತು.
ಹೆಚ್ಚುವರಿಯಾಗಿ ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಪ್ರಸ್ತುತ ವಿಶ್ವವಿದ್ಯಾಲಯಗಳ ಮಾನ್ಯತೆಗಾಗಿ ಯಾವುದೇ ಕನಿಷ್ಠ ಭೂಮಿ ಅವಶ್ಯಕತೆಯನ್ನು ನಿಗದಿಪಡಿಸಿಲ್ಲ. ಹಾಗೂ ಇದೇ ರೀತಿಯ ಸುಧಾರಣೆಗಳನ್ನು ಹಲವು ರಾಜ್ಯಗಳು ಸಹ ಪರಿಶೀಲಿಸುತ್ತಿವೆ ಎಂಬ ಮಾಹಿತಿಯನ್ನು ಸಭೆಯಲ್ಲಿ ತಿಳಿಸಿತ್ತು.
ಕಡ್ಡಾಯ ಎಂಡೋಮೆಂಟ್ ನಿಧಿ ಅವಶ್ಯಕತೆ ತೆಗೆದುಹಾಕಿ













