Thursday | June 25, 2026 |

ಪಿಟಿಸಿಎಲ್, ಸರ್ಕಾರಿ ಗೋಮಾಳ, ಅರಣ್ಯ ಪ್ರದೇಶದ ಜಮೀನು ಸ್ವರೂಪ ಮರೆಮಾಚಿದ ಆರೋಪ; ಡಿ ಸಿ ವರದಿ ಒಪ್ಪದೇ ತಹಶೀಲ್ದಾರ್ ವಿರುದ್ಧ ಆರೋಪಪಟ್ಟಿ ಜಾರಿಗೊಳಿಸಿದ ಸರ್ಕಾರ

ಬೆಂಗಳೂರು;  ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಸಾದಲಿ ಹೋಬಳಿಯ ಪುರ ಬೈರನಹಳ್ಳಿ ಗ್ರಾಮದ ಸರ್ವೆ ನಂಬರ್ 36/1, 36/2, 43, 44 ಮತ್ತು 45ರಲ್ಲಿ ಸರ್ಕಾರಿ ಗೋಮಾಳ ಮತ್ತು ಅರಣ್ಯ ಪ್ರದೇಶದ ಜಮೀನುಗಳನ್ನು ಭೂಪರಿವರ್ತನೆ ಮಾಡಿದ್ದಾರೆ  ಎಂಬ ಆರೋಪಕ್ಕೆ ಗುರಿಯಾಗಿರುವ ಶಿಡ್ಲಘಟ್ಟ ತಾಲೂಕಿನ ಹಿಂದಿನ ತಹಶೀಲ್ದಾರ್ ಬಿ ಎನ್ ಸ್ವಾಮಿ ಅವರಿಗೆ ಕಂದಾಯ ಇಲಾಖೆಯು  ಕಾರಣ ಕೇಳಿ ನೋಟೀಸ್‌ ಜಾರಿ ಮಾಡಿದೆ. ಹಾಗೆಯೇ ಆರೋಪ ಪಟ್ಟಿಯನ್ನೂ ಜಾರಿಗೊಳಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ ಪ್ರಭು ಅವರು  2026ರ ಜೂನ್ 6ರಂದು  ಸಲ್ಲಿಸಿರುವ ವಾಸ್ತವಾಂಶದ ವರದಿಯಲ್ಲಿ ಈ ಪ್ರಕರಣವನ್ನೇ ಮುಕ್ತಾಯಗೊಳಿಸಬೇಕು ಎಂದು ಕೋರಿದ್ದರು. ಇದರ ಬೆನ್ನಲ್ಲೇ ಇದೇ ಪ್ರಕರಣದಲ್ಲಿ  ತಹಶೀಲ್ದಾರ್‍‌ ಬಿ ಎನ್ ಸ್ವಾಮಿ ಅವರಿಗೆ ಕಾರಣ ಕೇಳಿ ನೋಟೀಸ್‌ ಜಾರಿ ಮಾಡಿರುವುದು ಮುನ್ನೆಲೆಗೆ ಬಂದಿದೆ.

ಸ್ವಾಮಿ ಅವರಿಂದ ಕಾರಣ ಕೇಳಿರುವ ಕಂದಾಯ ಇಲಾಖೆಯು 2026ರ ಜೂನ್‌ 12ರಂದು ನೋಟೀಸ್‌ ಜಾರಿಗೊಳಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಪಿಟಿಸಿಎಲ್ ಕಾಯ್ದೆ,  ಸರ್ಕಾರಿ ಗೋಮಾಳ ಮತ್ತು ಅರಣ್ಯ ಪ್ರದೇಶದ ಜಮೀನುಗಳ ಸ್ವರೂಪವನ್ನೇ ಮರೆಮಾಚಿ ನೂರಾರು ಕೆರೆ ವಿಸ್ತೀರ್ಣದ ಜಮೀನಿಗೆ ಪೋಡಿ ದುರಸ್ತಿ  ಮಾಡಲಾಗಿದೆ. ಅಲ್ಲದೇ ಸರ್ಕಾರದ ಪೂರ್ವಾನುಮೋದನೆ ಇಲ್ಲದೆಯೇ ಭೂ ಪರಿವರ್ತನೆ ಮಾಡಲು ಶಿಫಾರಸ್ಸು ಮಾಡಲಾಗಿದೆ. ಇದನ್ನು ಪರಿಶೀಲಿಸದೆಯೇ ಜಿಲ್ಲಾಧಿಕಾರಿಯೂ ಅಧಿಕೃತ ಜ್ಞಾಪನ ಪತ್ರವನ್ನೂ ಹೊರಡಿಸಿದ್ದಾರೆ ಎಂಬ ಪ್ರಕರಣವನ್ನು ಟಿ ನರಸಿಂಹಮೂರ್ತಿ ಎಂಬುವರು ದಾಖಲೆ ಸಮೇತ ದೂರು ನೀಡಿದ್ದರು.

ಈ ಪ್ರಕರಣದ ಬಗ್ಗೆ ಪ್ರಾದೇಶಿಕ ಆಯುಕ್ತರು ಸಹ ವರದಿ ಕೇಳಿದ್ದರೂ ಸಹ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯು ವರದಿಯನ್ನೇ ನೀಡಿರಲಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಕಂದಾಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ಜಿಲ್ಲಾಧಿಕಾರಿಯಿಂದ ವರದಿ ಕೇಳಿದ್ದರು. ಜಿಲ್ಲಾಧಿಕಾರಿಯು 2026ರ ಜೂನ್‌ 6ರಂದು ಕಂದಾಯ ಇಲಾಖೆಗೆ ವಾಸ್ತವಾಂಶದ ವರದಿ ಸಲ್ಲಿಸಿದ್ದರು.

ಡಿ ಸಿ ವರದಿಯಲ್ಲೇನಿತ್ತು?

ಶಿಡ್ಲಘಟ್ಟ ತಾಲೂಕು ಸಾದಲಿ ಹೋಬಳಿ ಪುರಬೈರನಹಳ್ಳಿ ಗ್ರಾಮದ ಸರ್ವೆ ನಂಬರ್‍‌ 43 ( ಹಳೇ ಸರ್ವೇ ನಂಬರ್‍‌ 2) ಎಸ್‌ ಎನ್ ಶ್ರೀನಿವಾಸಪ್ಪ ಎಂಬುವರಿಗೆ 2003ರ ಡಿಸೆಂಬರ್‍‌ 31ರಂದು ಬಗರ್ ಹುಕುಂ ಸಮಿತಿಯ ತೀರ್ಮಾನದಂತೆ ಮಂಜೂರಾಗಿದೆ. ಮೂಲ ಮಂಜೂರಿದಾರರು ಬಲಜಿಗ ಜನಾಂಗಕ್ಕೆ ಸೇರಿದ್ದಾರೆ. ತಹಶೀಲ್ದಾರ್ ಮತ್ತು ಅರಣ್ಯ ಸಿಬ್ಬಂದಿಯ ಜಂಟಿ ಸ್ಥಳ ತನಿಖಾ ವರದಿಯಂತೆ ಈ ಜಮೀನು ಅರಣ್ಯ ವ್ಯಾಪ್ತಿಗೆ ಒಳಪಟ್ಟಿಲ್ಲ.  ಹೀಗಾಗಿ ಈ ಮಂಜೂರಾತಿಯು ಪಿಟಿಸಿಎಲ್‌ ಕಾಯ್ದೆ ವ್ಯಾಪ್ತಿಗೆ ಒಳಪಟ್ಟಿಲ್ಲ ಎಂದು ವಾಸ್ತವಾಂಶದ ವರದಿಯಲ್ಲಿ ವಿವರಿಸಿದ್ದರು.

ಸರ್ವೆ ನಂಬರ್‍‌ 44ರಲ್ಲಿಯೂ ಸಹ ಪಕೃದ್ದೀನ ಸಾಬ್ ಎಂಬುವರಿಗೆ 2003ರ ಡಿಸೆಂಬರ್‍‌ 31ರಂದು ಅಧಿಕೃತವಾಗಿ ಜ್ಞಾಪನದಂತೆ ಮಂಜೂರಾಗಿದೆ. ತಹಶೀಲ್ದಾರ್ ಮತ್ತು ಅರಣ್ಯ ಸಿಬ್ಬಂದಿಯ ಜಂಟಿ ಸ್ಥಳ ತನಿಖಾ ವರದಿಯಂತೆ ಈ ಜಮೀನು ಅರಣ್ಯ ವ್ಯಾಪ್ತಿಗೆ ಒಳಪಟ್ಟಿಲ್ಲ.  ಹೀಗಾಗಿ ಈ ಮಂಜೂರಾತಿಯು ಪಿಟಿಸಿಎಲ್‌ ಕಾಯ್ದೆ ವ್ಯಾಪ್ತಿಗೆ ಒಳಪಟ್ಟಿಲ್ಲ ಎಂದು ವಾಸ್ತವಾಂಶದ ವರದಿಯಲ್ಲಿ  ದೃಢಪಡಿಸಿದ್ದರು.

 

 

ಸರ್ವೆ ನಂಬರ್ 45ರಲ್ಲಿ ಡಿ ಎನ್ ಸುಬಾನ್‌ ಸಾಬಿ ಎಂಬುವರಿಗೆ 2003ರಲ್ಲಿ  ಮಂಜೂರಾಗಿದೆ. ತಹಶೀಲ್ದಾರ್ ಮತ್ತು ಅರಣ್ಯ ಸಿಬ್ಬಂದಿಯ ಜಂಟಿ ಸ್ಥಳ ತನಿಖಾ ವರದಿಯಂತೆ ಈ ಜಮೀನು ಅರಣ್ಯ ವ್ಯಾಪ್ತಿಗೆ ಒಳಪಟ್ಟಿಲ್ಲ.  ಹೀಗಾಗಿ ಈ ಮಂಜೂರಾತಿಯು ಪಿಟಿಸಿಎಲ್‌ ಕಾಯ್ದೆ ವ್ಯಾಪ್ತಿಗೆ ಒಳಪಟ್ಟಿಲ್ಲ ಎಂದು ವಾಸ್ತವಾಂಶದ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ. ಅದೇ ರೀತಿ ಸರ್ವೆ ನಂಬರ್‍‌ 36ರಲ್ಲಿನ ವೆಂಕಟರಾಯಪ್ಪ ಎಂಬುದಾಗಿ ಸಾಗುವಳಿ ಚೀಟಿ ವಿತರಿಸಲಾಗಿದೆ. ದರಖಾಸ್ತು ಮೆಮೋರಾಂಡಂನ ಜೆರಾಕ್ಸ್‌ ಪ್ರತಿಯಲ್ಲಿ ವಡ್ಡರ ಜಾತಿ ಎಂದು ನಮೂದಾಗಿದೆ.

ವಡ್ಡರ ಜಾತಿಯು 1977ರ ಸೆ.3ರ ಆದೇಶದ ಪ್ರಕಾರ ಜಾತಿಗಳ ಪಟ್ಟಿಯ ಕ್ರಮ ಸಂಖ್ಯೆ 23ರಲ್ಲಿ ಪರಿಶಿಷ್ಟ ಜಾತಿಗೆ ಸೇರಿರುತ್ತದೆ. ಮಂಜೂರಿ ಜಮೀನು ಎಂಬುದು ಜಮೀನಿನ ಮಂಜೂರಿಯು ಮಂಜೂರಿಯ ಸಮಯದಲ್ಲಿ ಪರಿಶಿಷ್ಟ ಜಾತಿಗೆ, ಪರಿಶಿಷ್ಟ ಪಂಗಡಕ್ಕೆ ಎಂದು ನಿರ್ದಿಷ್ಟವಾಗಿ ಮಂಜೂರಿಯಾಗಿದ್ದಲ್ಲಿ ಮಾತ್ರ ಆ ಮಂಜೂರಾತಿಯು ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತದೆ. ಈ ಸಂಬಂಧ ರಿಟ್‌ ಅರ್ಜಿ 28263/2004ಗೆ ಸಂಬಂಧಿಸಿದಂತೆ 2012ರ ಜುಲೈ 3ರಲ್ಲೇ ತೀರ್ಪು ನೀಡಿದೆ ಎಂದು ಜಿಲ್ಲಾಧಿಕಾರಿಯು ವಿವರಿಸಿದ್ದರು.

 

 

‘ಶಿಡ್ಲಘಟ್ಟ ತಾಲೂಕು ಸಾದಲಿ ಹೋಬಳಿ ಪುರಭೈರನಹಳ್ಳಿ ಗ್ರಾಮದ ಸರ್ವೆ ನಂಬರ್ 36/1, 36/2, 43, 44 ಮತ್ತು 45ರಲ್ಲಿ ವಿವರವಾದ ವಾಸ್ತವಾಂಶದ ವರದಿಯನ್ನು ಸಲ್ಲಿಸಲಾಗಿದೆ. ಈ ದೂರು ಪ್ರಕರಣವನ್ನು ಮುಕ್ತಾಯಗೊಳಿಸುವ ಸಂಬಂಧ ಇಲಾಖೆ ಹಂತದಲ್ಲಿ ಕ್ರಮವಹಿಸಬಹುದು ಎಂದು ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಯು ವರದಿ ಸಲ್ಲಿಸಿದ್ದಾರೆ,’ ಎಂದು ಕಂದಾಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ವರದಿಯಲ್ಲಿ ಸಮಜಾಯಿಷಿ ನೀಡಿದ್ದರು.

 

 

ಈ ವರದಿಯನ್ನು ಪರಿಶೀಲಿಸಿದ್ದ ಕಂದಾಯ ಇಲಾಖೆಯು ತಹಶೀಲ್ದಾರ್ ಬಿ ಎನ್ ಸ್ವಾಮಿ ಎಂಬುವರಿಗೆ ನೋಟೀಸ್‌ ಮತ್ತು ಆರೋಪ ಪಟ್ಟಿ  ಜಾರಿಗೊಳಿಸಿದೆ.

ಆರೋಪ ಪಟ್ಟಿಯಲ್ಲೇನಿದೆ?

ಶಿಡ್ಲಘಟ್ಟ ತಾಲೂಕಿನ ಸಾದಲಿ ಹೋಬಳಿ ಪುರಬೈರನಹಳ್ಳಿ ಗ್ರಾಮದ ಸರ್ವೆ ನಂಬರ್‍‌ 36/1, 36/2, 43, 44 ಮತ್ತು 45ಕ್ಕೆ ಸಂಬಂಧಿಸಿದಂತೆ ಸಾಗುವಳಿ ಚೀಟಿಯ ಜೆರಾಕ್ಸ್‌ ಪ್ರತಿಯಲ್ಲಿ ಮಂಜೂರಿದಾರರ ಹೆಸರು ಶ್ರೀ ವೆಂಕಟರಾಯಪ್ಪ ಎಂದು 1957ರ ಜುಲೈ 8ರಂದು ವಿತರಿಸಲಾಗಿದೆ ಮತ್ತು ದರಕಾಸ್ತು ಮೆಮೋರಾಂಡಂನ ಜೆರಾಕ್ಸ್‌ ಪ್ರತಿಯಲ್ಲಿ ವಡ್ಡರ ಜಾತಿ ಎಂದು ನಮೂದಾಗಿದೆ. ವಡ್ಡರ ಜಾತಿಯು 1977ರ ಸೆ.3ರ ಅದೇಶದ ಪ್ರಕಾರ ಜಾತಿಗಳ ಪಟ್ಟಿಯಲ್ಲಿ ಕ್ರಮ ಸಂಖ್ಯೆ 23ರಲ್ಲಿ ಪರಿಶಿಷ್ಟ ಜಾತಿಗೆ ಸೇರಿದೆ.

ಸರ್ವೆ ನಂಬರ್‍‌ 36/1, 36/2, 43, 44 ಮತ್ತು 45ರಲ್ಲಿ ಮೂಲತಃ ಸರ್ಕಾರಿ ಮತ್ತು ಅರಣ್ಯ ಜಮೀನುಗಳನ್ನು ಪಿಟಿಸಿಎಲ್ ಕಾಯ್ದೆ ಕರ್ನಾಟಕ ಭೂ ಕಂದಾಯ ನಿಯಮಗಳು ಹಾಗೂ ಅರಣ್ಯ ಕಾಯ್ದೆ ಉಲ್ಲಂಘನೆ ಮಾಡಿ ದುರಸ್ತಿ ಮಾಡಲಾಗಿದೆ. ಅದೇ ರೀತಿ ಸರ್ಕಾರದ ಪೂರ್ವಾನುಮೋದನೆ ಪಡೆಯದೇ ಜಮೀನುಗಳ ಭೂಪರಿವರ್ತನೆಗೆ ಶಿಫಾರಸ್ಸು ಮಾಡಲಾಗಿದೆ. ಈ ಜಮೀನುಗಳನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳ ಅಡಿಯಲ್ಲಿ ಅಕ್ರಮ ಸಾಗುವಳಿ ಸಕ್ರಮೀಕರಣ ಯೋಜನೆಯಡಿ ಅರ್ಜಿದಾರರಿಗೆ ವ್ಯವಸಾಯ ಮಾಡಲು ಅನುಕೂಲ ಮಾಡಿಕೊಟ್ಟಿತ್ತು.

 

 

‘ವ್ಯವಸಾಯದ ಉದ್ದೇಶಕ್ಕಾಗಿ ಸಕ್ರಮವಾದ ಜಮೀನುಗಳನ್ನು ಕಾನೂನುಬಾಹಿರವಾಗಿ ಪೋಡಿ-ದುರಸ್ತಿ ಮಾಡಿ ಭೂಪರಿವರ್ತನೆ ಕೈಗೊಳ್ಳಲು ನಿಯಮಬಾಹಿರವಾಗಿ ವರ್ತಿಸಿದ್ದೀರಿ. ಅಧಿಕಾರ ದುರುಪಯೋಗಪಡಿಸಿಕೊಂಡು ದುರ್ನಡತೆ, ಕರ್ತವ್ಯ ಲೋಪ ಎಸಗುವ ಮೂಲಕ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ 2021ರ ನಿಯಮ 3ನ್ನು ಉಲ್ಲಂಘಿಸಲಾಗಿದೆ. ಹೀಗಾಗಿ 1957ರ ನಿಯಮ 12ರ ಅನ್ವಯ ಶಿಸ್ತುಕ್ರಮಕ್ಕೆ ಗುರಿಯಾಗಿರುತ್ತೀರಿ,’ ಎಂದು ಕಂದಾಯ ಇಲಾಖೆಯು ಹೊರಡಿಸಿರುವ ಆರೋಪ ಪಟ್ಟಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಟಿ ನರಸಿಂಹಮೂರ್ತಿ ನೀಡಿದ್ದ  ದೂರಿನಲ್ಲೇನಿತ್ತು?

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಸಾದಲಿ ಹೋಬಳಿಯ ಪುರ ಬೈರನಹಳ್ಳಿ ಗ್ರಾಮದ ಸರ್ವೆ ನಂಬರ್ 36/1, 36/2, 43, 44 ಮತ್ತು 45ರಲ್ಲಿ ಸರ್ಕಾರಿ ಗೋಮಾಳ ಮತ್ತು ಅರಣ್ಯ ಪ್ರದೇಶವಿದೆ. ಈ ಜಮೀನುಗಳಿಗೆ ಶಿಡ್ಲಘಟ್ಟ ತಹಶೀಲ್ದಾರ್ ಅವರು ಭೂಪರಿವರ್ತನೆ ಮಾಡಿದ್ದಾರೆ ಎಂದು ನರಸಿಂಹಮೂರ್ತಿ ಎಂಬುವರು ಕಂದಾಯ ಇಲಾಖೆಗೆ 2 ಬಾರಿ ದೂರು ಸಲ್ಲಿಸಿದ್ದರು. 2025ರ ಆಗಸ್ಟ್‌ 1ರಂದು ನೀಡಿದ್ದ ಮೊದಲನೇ ಬಾರಿ ನೀಡಿದ್ದ ದೂರಿನ ಮೇಲೆ ಸರ್ಕಾರವು ಯಾವುದೇ ಕ್ರಮ ವಹಿಸದ ಕಾರಣ 2025ರ ಸೆ.17ರಂದು ದೂರು ನೀಡಿದ್ದರು.

 

 

ಸರ್ವೆ ನಂಬರ್ 36/1, 36/2, 43, 44 ಮತ್ತು 45ರಲ್ಲಿ ಸರ್ಕಾರಿ ಗೋಮಾಳ ಮತ್ತು ಅರಣ್ಯ ಪ್ರದೇಶಗಳಿಗೆ ಶಿಡ್ಲಘಟ್ಟದ ತಹಶೀಲ್ದಾರ್ ಸ್ವಾಮಿ ಎಂಬುವರು ಲಂಚದ ಹಣ ಪಡೆದು ಕಾನೂನುಬಾಹಿರವಾಗಿ ಪೋಡಿ ದುರಸ್ತಿ ಮಾಡಿದ್ದಾರೆ. ಮತ್ತು ಸರ್ಕಾರದ ಪೂರ್ವಾನುಮತಿ ಪಡೆಯದೇ ಭೂ ಪರಿವರ್ತನೆಗೆ ಶಿಫಾರಸ್ಸು ಮಾಡಿದ್ದಾರೆ. ಈ ಜಮೀನಿನಲ್ಲಿ ಪಿಟಿಸಿಎಲ್‌ ಕಾಯ್ದೆಗೆ ಒಳಪಟ್ಟಿರುವ ಜಮೀನುಗಳಿವೆ ಎಂದು ನರಸಿಂಹಮೂರ್ತಿ ಎಂಬುವರು ದೂರಿನಲ್ಲಿ ದಾಖಲೆ ಸಹಿತವಾಗಿ ವಿವರಿಸಿದ್ದರು.

 

 

‘2025ರ ಆಗಸ್ಟ್‌ 1ರಂದು ಇಲಾಖೆಗೆ ದೂರು ನೀಡಲಾಗಿತ್ತು. ಆದರೆ ಇದುವರೆಗೂ ಇಲಾಖೆಯಿಂದ ಯಾವುದೇ ರೀತಿಯ ಕ್ರಮ ಜರುಗಿಸಿಲ್ಲ. ಇದು ಬೇಸರದ ಸಂಗತಿ. ಸಾರ್ವಜನಿಕ ಹಿತಾಸಕ್ತಿಯಡಿ ಸರ್ಕಾರಕ್ಕೆ  ದೂರನ್ನು ನೀಡಿದಾಗ ಅವುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ,’ ಎಂದು ನರಸಿಂಹಮೂರ್ತಿ ಅವರು ದೂರಿನಲ್ಲಿ ಸರ್ಕಾರದ ಗಮನಸೆಳೆದಿದ್ದರು.

 

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕು ಸಾದಲಿ ಹೋಬಳಿಯ ಪುರಬೈರನಹಳ್ಳಿ ಗ್ರಾಮದ ಹಳೇ ಸರ್ವೆ ನಂಬರ್ 2ರಲ್ಲಿ ಗೋಮಾಳ ಮತ್ತು ಗೋವುಕಾಡು (ಅರಣ್ಯ ಪ್ರದೇಶ) ಇದೆ. ಇದರ ಹೊಸ ಸರ್ವೆ ನಂಬರ್‍‌ 36/1 ಮತ್ತು 36/2ರಲ್ಲಿ 1 ಎಕರೆ 35 ಗುಂಟೆ ಹಾಗೂ 2 ಎಕರೆ ಸೇರಿ ಒಟ್ಟಾರೆ 3 ಎಕರೆ 35 ಗುಂಟೆ ಜಮೀನು ಇದೆ. ಹೊಸ ಸರ್ವೆ ನಂಬರ್‍‌ 43ರಲ್ಲಿ 2 ಎಕರೆ, ಸರ್ವೆ ನಂಬರ್‍‌ 44ರಲ್ಲಿ 2 ಎಕರೆ, ಸರ್ವೇ ನಂಬರ್‍‌ 45ರಲ್ಲಿ 1 ಎಕರೆ 30 ಗುಂಟೆ ಜಮೀನು ಸೇರಿ ಒಟ್ಟಾರೆ 5 ಎಕರೆ 30 ಗುಂಟೆ ಜಮೀನು ಸಹ ಮೂಲತಃ ಸರ್ಕಾರಿ ಗೋಮಾಳ ಮತ್ತು ಅರಣ್ಯ ಭೂಮಿಗೆ ಸೇರ್ಪಡೆಯಾಗಿದೆ ಎಂದು ವಿವರಿಸಿದ್ದರು.

 

 

 

ಈ ಜಮೀನುಗಳು ಇತ್ತೀಚೆಗಷ್ಟೇ ಕರ್ನಾಟಕ ಭೂ ಮಂಜೂರಾತಿ ನಿಯಮಗಳಡಿಯಲ್ಲಿ ಅಕ್ರಮ ಸಾಗುವಳಿ ಸಕ್ರಮೀಕರಣ ಯೋಜನೆಯಡಿ ಅರ್ಜಿದಾರರಿಗೆ ವ್ಯವಸಾಯ ಮಾಡಿ ಜೀವನೋಪಾಯಕ್ಕೆ ಆಧಾರವಾಗಲಿ ಎಂಬ ಉದ್ದೇಶದಿಂದ ಮಂಜೂರು ಮಾಡಿ ಸಾಗುವಳಿ ಚೀಟಿ ನೀಡಲಾಗಿದೆ.

 

 

 

ಈ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 108(ಎ) (1) ಅಡಿ ಜಮೀನನ್ನು ಮಂಜೂರು ಪಡೆದವರು ಅವನಿಗೆ/ಅವಳಿಗೆ ಸಾಗುವಳಿ ಚೀಟಿ ಅಥವಾ ಮಂಜೂರು ಮಾಡಿದ ಪ್ರಮಾಣಪತ್ರವನ್ನು ನೀಡಿದ ದಿನಾಂಕದಿಂದ 25 ವರ್ಷದ ಅವಧಿಯವರೆಗೆ ಭೂಮಿಯನ್ನು ಪರಭಾರೆ ಮಾಡಲು ಅವಕಾಶವಿಲ್ಲ. ಅಥವಾ ವ್ಯವಸಾಯೇತರ ಉದ್ದೇಶಗಳಿಗಾಗಿ ಬಳಸಲು ಸಹ ಅವಕಾಶವಿಲ್ಲ.

 

 

ಆದರೂ ಶಿಡ್ಲಘಟ್ಟದ ತಹಶೀಲ್ದಾರ್ ಸ್ವಾಮಿ ಎಂಬುವರು ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ದೂರಿನಲ್ಲಿ ನರಸಿಂಹಮೂರ್ತಿ ಅವರು ಆಪಾದಿಸಿದ್ದಾರೆ. ಪೋಡಿ ದುರಸ್ತಿ ಮಾಡಿದ್ದಲ್ಲದೇ ಈ ಜಮೀನುಗಳನ್ನು ಭೂ ಪರಿವರ್ತನೆ ಮಾಡಲು ಶಿಫಾರಸ್ಸು ಕೂಡ ಮಾಡಿದ್ದಾರೆ ಎಂದು ದೂರಿನಲ್ಲಿ ಸಾಕ್ಷ್ಯವನ್ನೂ ಒದಗಿಸಿದ್ದರು.

 

 

ಹಳೇ ಸರ್ವೆ ನಂಬರ್‍‌ 2 ಮತ್ತು ಹೊಸ ಸರ್ವೆ ನಂಬರ್‍‌ 36/1ರಲ್ಲಿನ 1 ಎಕರೆ 35 ಗುಂಟೆ ವಿಸ್ತೀರ್ಣದ ಜಮೀನಿನಲ್ಲಿ ರೆಸಿಡೆನ್ಷಿಯಲ್ ಲೇ ಔಟ್ ಮಾಡಲು ಭೂ ಪರಿವರ್ತನೆಗೆ ಶಿಫಾರಸ್ಸು ಮಾಡಲಾಗಿದೆ. ತಹಶೀಲ್ದಾರ್ ಮಾಡಿದ್ದ ಈ ಶಿಫಾರಸ್ಸಿಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯವರು 2025ರ ಜನವರಿ 1ರಂದು ಅಧಿಕೃತ ಜ್ಞಾಪನ ಪತ್ರ ( ಸಂಖ್ಯೆ 735808) ಹೊರಡಿಸಿದ್ದರು.

 

 

ಅದೇ ರೀತಿ ಹೊಸ ಸರ್ವೇ ನಂಬರ್ 36/2ರಲ್ಲಿ 2 ಎಕರೆಯಲ್ಲಿಯೂ ರೆಸಿಡೆನ್ಷಿಯಲ್ ಲೇ ಔಟ್ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಲು ತಹಶೀಲ್ದಾರ್ ಮಾಡಿದ್ದ ಶಿಫಾರಸ್ಸಿಗೆ ಜಿಲ್ಲಾಧಿಕಾರಿಯವರು 2025ರ ಜನವರಿ 1ರಂದೇ ಆಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದರು.

 

 

ಹಾಗೆಯೇ ಹೊಸ ಸರ್ವೆ ನಂಬರ್‍‌ 43ರಲ್ಲಿನ 2 ಎಕರೆ, 44ರಲ್ಲಿನ 2 ಎಕರೆ, 45ರಲ್ಲಿ 1 ಎಕರೆ 30 ಗುಂಟೆ ಜಮೀನಿನಲ್ಲಿ ಕೈಗಾರಿಕೆ ಉದ್ದೇಶದ ಕ್ರಷರ್ ಉದ್ದೇಶಕ್ಕೆ  ಭೂ ಪರಿವರ್ತನೆ ಮಾಡಲಾಗಿತ್ತು. ತಹಶೀಲ್ದಾರ್ ಅವರು ಮಾಡಿದ್ದ ಈ ಎಲ್ಲಾ ಶಿಫಾರಸ್ಸುಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯವರು ಒಂದೇ ದಿನದಲ್ಲಿ ಅಂದರೇ 2024ರ ಆಗಸ್ಟ್‌ 6ರಂದೇ ಆಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದರು.

 

 

 

 

 

ಜಿಲ್ಲಾಧಿಕಾರಿಯವರು ಹೊರಡಿಸಿದ್ದ ಅಧಿಕೃತ ಜ್ಞಾಪನ ಪತ್ರದಲ್ಲಿನ ಸರ್ವೆ ನಂಬರ್‍‌ಗಳಲ್ಲಿನ ಜಮೀನುಗಳು ಮಂಜೂರು ಆಗಿ 25 ವರ್ಷಗಳ ಅವಧಿಯವರೆಗೆ ಪರಭಾರೆ ಮಾಡಲು ಅವಕಾಶವಿಲ್ಲ. ಅಲ್ಲದೇ ಪರಭಾರ ನಿಷಿದ್ಧದ ಅವಧಿಯೂ ಮುಕ್ತಾಯವಾಗಿಲ್ಲ. ‘ಆದರೂ ಸಹ ಈ ಜಮೀನು ಕ್ರಯವಾಗಿದೆ. ಕರ್ನಾಟಕ ಭೂ ಕಂದಾಯ ಕಾನೂನು ನಿಯಮಗಳನ್ನು ಪಾಲಿಸಬೇಕಿದ್ದ ತಹಶೀಲ್ದಾರ್ ಅವರು ಕಾನೂನು ನಿಯಮಗಳನ್ನೆಲ್ಲಾ ಉಲ್ಲಂಘಿಸಿ ನಿಯಮಬಾಹಿರವಾಗಿ ವರ್ತಿಸಿದ್ದಾರೆ ಎಂದು ದೂರಿದ್ದರು.

ಅಲ್ಲದೇ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತಮ್ಮ  ವೈಯಕ್ತಿಕ ಹಿತಾಸಕ್ತಿಗಾಗಿ ಯಾವುದೋ ಆಮಿಷಕ್ಕೆ ಒಳಗಾಗಿ ಲಂಚದ ಹಣವನ್ನು ಸ್ವೀಕರಿಸಿ ಈ ಜಮೀನನ್ನು ಕೃಷಿಯೇತರ ಉದ್ದೇಶಗಳಿಗಾಗಿ ಭೂ ಪರಿವರ್ತನೆ ಮಾಡಲು ಶಿಫಾರಸ್ಸು ಮಾಡಿರುವುದು ದಾಖಲೆಗಳ ಮೂಲಕ ಬೆಳಕಿಗೆ ಬಂದಿದೆ,’ ಎಂದು ದೂರುದಾರ ನರಸಿಂಹಮೂರ್ತಿ ಅವರು ಸರ್ಕಾರದ ಗಮನಸೆಳೆದಿದ್ದರು.

ಅದಷ್ಟೇ ಅಲ್ಲ, ಈ ಜಮೀನುಗಳ ಮೂಲ ಮಂಜೂರಿದಾರರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಈ ಜಮೀನುಗಳು ಒಳಪಟ್ಟಿವೆ. ಇಂತಹ ಜಮೀನುಗಳನ್ನು ಭೂ ಪರಿವರ್ತನೆ ಮಾಡುವ ಮೊದಲು ಸರ್ಕಾರದಿಂದ ಕಡ್ಡಾಯವಾಗಿ ಪೂರ್ವಾನುಮೋದನೆ ಪಡೆಯಬೇಕು. ಪೂರ್ವಾನುಮತಿ ಪಡೆದ ನಂತರವಷ್ಟೇ ಭೂ ಪರಿವರ್ತನೆ ಮಾಡಬೇಕು. ಹಾಗೆಯೇ ಇವೇ ಜಮೀನುಗಳ ಪೈಕಿ ಕೆಲವು ಜಮೀನುಗಳು ಅರಣ್ಯಕ್ಕೆ ಸಂಬಂಧಿಸಿವೆ. ಹೀಗಾಗಿ ಅರಣ್ಯ ಮತ್ತು ಕಾನೂನು, ನಿಯಮಗಳ ಅನ್ವಯ ಅರಣ್ಯ ಭೂಮಿಗಳನ್ನು ಯಾವುದೇ ಕಾರಣಕ್ಕೂ ಯಾರಿಗೂ ಮಂಜೂರು ಮಾಡಲು ಅವಕಾಶವೇ ಇಲ್ಲ.

ಆದರೂ ‘ತಹಶೀಲ್ದಾರ್ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿ ಸತ್ಯ ಸಂಗತಿಗಳನ್ನು ಮರೆಮಾಚಿ ಮೇಲಾಧಿಕಾರಿಗಳಿಗೆ ಅಸತ್ಯವಾದ ವರದಿ ಸಲ್ಲಿಸಿ ಭೂ ಪರಿವರ್ತನೆ ಮಾಡಿಸುವಲ್ಲಿ ಸಫಲರಾಗಿದ್ದಾರೆ. ಈ ಎಲ್ಲಾ ಅಕ್ರಮಗಳಿಂದ ತಪ್ಪಿಸಿಕೊಳ್ಳಲು ಈಚೆಗಷ್ಟೇ ಬೆಂಗಳೂರಿನಲ್ಲಿರುವ ಕಂದಾಯ ಇಲಾಖೆ ಅಯುಕ್ತರ ಕಚೇರಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ,’ ಎಂದು ದೂರಿನಲ್ಲಿ ಆಪಾದಿಸಿದ್ದರು.

ಈ ದೂರಿಗೆ ಸಂಬಂಧಿಸಿದಂತೆ ವರದಿ ನೀಡಬೇಕು ಎಂದು ಹೆಚ್ಚುವರಿ ಪ್ರಾದೇಶಿಕ ಆಯುಕ್ತರು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅವರಿಗೆ 2025ರ ಮಾರ್ಚ್‌ 7 ಮತ್ತು  ಸೆ.31 ರಂದು ಪತ್ರ ಬರೆದಿದ್ದರು.

 

 

ಆದರೂ ಈ ಪತ್ರದ ಆಧರಿಸಿ ಜಿಲ್ಲಾಧಿಕಾರಿಯವರು ಯಾವುದೇ ಕ್ರಮವಹಿಸಿಲ್ಲ. ಹೀಗಾಗಿ ಕಂದಾಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರೇ ನೇರವಾಗಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು.

ಕಟಾರಿಯಾ ಪತ್ರದಲ್ಲೇನಿತ್ತು?

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಸಾದಲಿ ಹೋಬಳಿಯ ಪುರಬೈರನಹಳ್ಳಿ ಗ್ರಾಮದ ಸರ್ವೆ ನಂಬರ್‍‌ 36/1, 36/2, 43, 44 ಮತ್ತು 45ರಲ್ಲಿ  ಸರ್ಕಾರಿ ಜಮೀನಿದೆ. ಪಿಟಿಎಲ್ ಕಾಯ್ದೆ ಮತ್ತು ಕರ್ನಾಟಕ ಭೂ ಕಂದಾಯ ನಿಯಮಗಳು ಮತ್ತು ಅರಣ್ಯ ಕಾಯ್ದೆಗಳನ್ನು ಉಲ್ಲಂಘಿಸಿ ಪೋಡಿ ದುರಸ್ತಿ ಮಾಡಿ ಸರ್ಕಾರದ ಪೂರ್ವಾನುಮೋದನೆ ಪಡೆಯದೇ ಜಮೀನುಗಳ ಭೂ ಪರಿವರ್ತನೆಗೆ ಶಿಫಾರಸ್ಸು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ವರದಿ ಸಲ್ಲಿಸಿಲ್ಲ ಎಂದು ಕಟಾರಿಯಾ ಅವರ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

 

 

ದೂರಿನಲ್ಲಿರುವ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಸ್ಪಷ್ಟವಾದ ಅಭಿಪ್ರಾಯ ಸಲ್ಲಿಸಬೇಕು. ಹಾಗೂ ಒಂದು ವೇಳೆ ದೂರಿನಲ್ಲಿರುವ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಕಂಡು ಬಂದಲ್ಲಿ ಕರಡು ದೋಷಾರೋಪಣೆ ಪಟ್ಟಿಯನ್ನು ತುರ್ತಾಗಿ ಸಲ್ಲಿಸಬೇಕು ಎಂದು ಕಟಾರಿಯಾ ಅವರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದನ್ನು ಸ್ಮರಿಸಬಹುದು.

Hot this week

ಮೆಟ್ರೋ ರೈಲು 3ನೇ ಹಂತಕ್ಕೆ 7.02 ಎಕರೆ ಭೂಮಿ; 203.76 ಕೋಟಿ ರುಪಾಯಿ ಭೂ ಪರಿಹಾರ ಕೇಳಿದ ರಕ್ಷಣಾ ಇಲಾಖೆ, ಸರ್ಕಾರದ ನಿಲುವೇನು?

ಬೆಂಗಳೂರು: ಮೆಟ್ರೋ ರೈಲು ಯೋಜನೆಯ ಮೂರನೇ ಹಂತದ ಅನುಷ್ಠಾನಕ್ಕಾಗಿ ಅಗತ್ಯವಿರುವ 7.02...

39, 437.37 ಕೋಟಿ ರು ಮೊತ್ತದ ಕಸ ವಿಲೇವಾರಿ ಟೆಂಡರ್ ಪ್ರಕ್ರಿಯೆ ಪರಿಶೀಲನೆ; ನಿಗದಿತ ಅವಧಿಯೊಳಗೆ ವರದಿ ಸಲ್ಲಿಸುವಲ್ಲಿ ಅಂಜುಂ ಪರ್ವೇಜ್ ಸಮಿತಿ ವಿಫಲ, 15 ದಿನಗಳ ಕಾಲಾವಕಾಶ ವಿಸ್ತರಣೆ

ಬೆಂಗಳೂರು; ಸಮಗ್ರ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯೂಎಂಎಲ್‌ ಯೋಜಿಸಿದ್ದ ಟೆಂಡರ್ ಪ್ಯಾಕೇಜ್‌ಗಳನ್ನು...

ಸುರಂಗ ಮಾರ್ಗ; ಸಂಚಾರ ದಟ್ಟಣೆ ಕಡಿಮೆಯಾದರೂ 40 ವರ್ಷಕ್ಕೆ ಗುತ್ತಿಗೆ ವಿಸ್ತರಣೆಗೆ ಪ್ರಸ್ತಾವ, ಅದಾನಿ ಎಂಟರ್ ಪ್ರೈಸೆಸ್‌ಗೆ ಡಿ ಕೆ ಸರ್ಕಾರದಿಂದ 10 ವರ್ಷ ಅವಧಿಯ ಗಿಫ್ಟ್‌!

ಬೆಂಗಳೂರು; ಗ್ರೇಟರ್‌ಬೆಂಗಳೂರು ಪ್ರದೇಶ ವ್ಯಾಪ್ತಿಯಲ್ಲಿನ ಹೆಬ್ಬಾಳ (ಎಸ್ಟಿಮ್‌ಮಾಲ್) ಜಂಕ್ಷನ್‌ನಿಂದ ಹೆಚ್‌.ಎಸ್‌.ಆರ್‌ ಲೇಔಟ್‌...
Please Scan to make Your Contribution

Topics

ಮೆಟ್ರೋ ರೈಲು 3ನೇ ಹಂತಕ್ಕೆ 7.02 ಎಕರೆ ಭೂಮಿ; 203.76 ಕೋಟಿ ರುಪಾಯಿ ಭೂ ಪರಿಹಾರ ಕೇಳಿದ ರಕ್ಷಣಾ ಇಲಾಖೆ, ಸರ್ಕಾರದ ನಿಲುವೇನು?

ಬೆಂಗಳೂರು: ಮೆಟ್ರೋ ರೈಲು ಯೋಜನೆಯ ಮೂರನೇ ಹಂತದ ಅನುಷ್ಠಾನಕ್ಕಾಗಿ ಅಗತ್ಯವಿರುವ 7.02...

39, 437.37 ಕೋಟಿ ರು ಮೊತ್ತದ ಕಸ ವಿಲೇವಾರಿ ಟೆಂಡರ್ ಪ್ರಕ್ರಿಯೆ ಪರಿಶೀಲನೆ; ನಿಗದಿತ ಅವಧಿಯೊಳಗೆ ವರದಿ ಸಲ್ಲಿಸುವಲ್ಲಿ ಅಂಜುಂ ಪರ್ವೇಜ್ ಸಮಿತಿ ವಿಫಲ, 15 ದಿನಗಳ ಕಾಲಾವಕಾಶ ವಿಸ್ತರಣೆ

ಬೆಂಗಳೂರು; ಸಮಗ್ರ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯೂಎಂಎಲ್‌ ಯೋಜಿಸಿದ್ದ ಟೆಂಡರ್ ಪ್ಯಾಕೇಜ್‌ಗಳನ್ನು...

ಸುರಂಗ ಮಾರ್ಗ; ಸಂಚಾರ ದಟ್ಟಣೆ ಕಡಿಮೆಯಾದರೂ 40 ವರ್ಷಕ್ಕೆ ಗುತ್ತಿಗೆ ವಿಸ್ತರಣೆಗೆ ಪ್ರಸ್ತಾವ, ಅದಾನಿ ಎಂಟರ್ ಪ್ರೈಸೆಸ್‌ಗೆ ಡಿ ಕೆ ಸರ್ಕಾರದಿಂದ 10 ವರ್ಷ ಅವಧಿಯ ಗಿಫ್ಟ್‌!

ಬೆಂಗಳೂರು; ಗ್ರೇಟರ್‌ಬೆಂಗಳೂರು ಪ್ರದೇಶ ವ್ಯಾಪ್ತಿಯಲ್ಲಿನ ಹೆಬ್ಬಾಳ (ಎಸ್ಟಿಮ್‌ಮಾಲ್) ಜಂಕ್ಷನ್‌ನಿಂದ ಹೆಚ್‌.ಎಸ್‌.ಆರ್‌ ಲೇಔಟ್‌...

ದಲಿತರ ಜಮೀನು ಭೂ ಪರಿವರ್ತನೆ; ಜಿಲ್ಲಾಧಿಕಾರಿಯಿಂದ ವಾಸ್ತವಾಂಶ ವರದಿ, ಪ್ರಕರಣವನ್ನೇ ಮುಚ್ಚಿ ಹಾಕಿತೇ?

ಬೆಂಗಳೂರು;  ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಸಾದಲಿ ಹೋಬಳಿಯ ಪುರ ಬೈರನಹಳ್ಳಿ...

ಜಿಬಿಎ 5 ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣ; 992.00 ಕೋಟಿ ರು ವೆಚ್ಚ , 749 ಕಿಮೀ ಉದ್ದದಲ್ಲಿ 88 ಕಿ ಮೀ ಮಾತ್ರ ಪೂರ್ಣ

ಬೆಂಗಳೂರು; ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 5 ನಗರಪಾಲಿಕೆಗಳು ಮುಖ್ಯಮಂತ್ರಿಗಳ ಮೂಲ...

Related Articles

Popular Categories

error: Content is protected !!