Thursday | June 25, 2026 |

ಮೆಟ್ರೋ ರೈಲು 3ನೇ ಹಂತಕ್ಕೆ 7.02 ಎಕರೆ ಭೂಮಿ; 203.76 ಕೋಟಿ ರುಪಾಯಿ ಭೂ ಪರಿಹಾರ ಕೇಳಿದ ರಕ್ಷಣಾ ಇಲಾಖೆ, ಸರ್ಕಾರದ ನಿಲುವೇನು?

ಬೆಂಗಳೂರು: ಮೆಟ್ರೋ ರೈಲು ಯೋಜನೆಯ ಮೂರನೇ ಹಂತದ ಅನುಷ್ಠಾನಕ್ಕಾಗಿ ಅಗತ್ಯವಿರುವ 7.02 ಎಕರೆ ಭೂಮಿಗೆ ರಕ್ಷಣಾ ಇಲಾಖೆಯು ಮಾರ್ಗಸೂಚಿ ಮೌಲ್ಯಕ್ಕಿಂತ ಹೆಚ್ಚಾಗಿ ಹೆಚ್ಚುವರಿ ನಗದು ಪರಿಹಾರವನ್ನು ಪಾವತಿಸುವ ಬೇಡಿಕೆ ಮುಂದಿರಿಸಿದೆ. ಒಂದೊಮ್ಮೆ ಬಿಎಂಆರ್‍‌ಸಿಎಲ್‌ ಈ ಬೇಡಿಕೆಯನ್ನು ಒಪ್ಪಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ತಪ್ಪು ಮಾದರಿಗೆ ನಿರ್ಮಾಣಕ್ಕೆ ನಾಂದಿ ಹಾಡಲಿದೆ.

ರಕ್ಷಣಾ ಇಲಾಖೆಯು ಮುಂದಿರಿಸಿರುವ ಈ ಬೇಡಿಕೆಯನ್ನು ಒಪ್ಪಬೇಕೇ ಬೇಡವೇ ಎಂಬ ಕುರಿತು ಬಿಎಂಆರ್‍‌ಸಿಎಲ್‌ 50ನೇ ಉನ್ನತ ಅಧಿಕಾರಯುಕ್ತ ಸಮಿತಿ 2026ರ ಜೂನ್‌ 17ರಂದು ಸಭೆ ನಡೆಸಿತ್ತು ಈ ಸಭೆಯಲ್ಲಿ ಚರ್ಚೆ ವೇಳೆ ರಕ್ಷಣಾ ಇಲಾಖೆಯು ಮುಂದಿರಿಸಿರುವ ಈ ಬೇಡಿಕೆಯನ್ನು ಬಿಎಂಆರ್‍‌ಸಿಎಲ್‌ ಒಪ್ಪದೇ ಇರಲು ನಿರ್ಧರಿಸಿದೆ.

ಬಿಎಂಆರ್‍‌ಸಿಎಲ್‌ನ 50ನೇ ಉನ್ನತ ಅಧಿಕಾರಯುಕ್ತ ಸಮಿತಿಯ ಸಭೆ ನಡವಳಿಗಳು ದಿ ಫೈಲ್ ಗೆ ಲಭ್ಯವಾಗಿವೆ.

ಏನಿದು ಪ್ರಕರಣ?

ಬೆಂಗಳೂರು ಮೆಟ್ರೋ ಯೋಜನೆಯ ಹಂತ–3ಕ್ಕೆ ಭಾರತ ಸರ್ಕಾರವು 2024ರ ಸೆ.13ರಂದು ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಯೋಜನೆಯು ಎರಡು ಕಾರಿಡಾರ್‌ಗಳನ್ನು ಒಳಗೊಂಡಿದೆ. ಅವುಗಳಲ್ಲಿ ಕಾರಿಡಾರ್–1 ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರದವರೆಗೆ ಇರುವ ಔಟರ್ ರಿಂಗ್ ರೋಡ್ ಮಾರ್ಗವಾಗಿದೆ. ಇದರ ಉದ್ದ 32.15 ಕಿ.ಮೀ. ಇದೆ.

ಈ ಯೋಜನೆಯ ಈ ಭಾಗದ ಕಾಮಗಾರಿ ನಿರ್ವಹಣೆಗೆ ಸುಮಾರು 7.02 ಎಕರೆ (28,398 ಚ.ಮೀ.) ರಕ್ಷಣಾ ಇಲಾಖೆಯ ಭೂಮಿ ಅಗತ್ಯವಿದೆ. ಈ ಭೂಮಿ ಜಾಲಹಳ್ಳಿ ಗ್ರಾಮ ಸರ್ವೇ ನಂ. 52 ಮತ್ತು 53 ಹಾಗೂ ಜಾಲಹಳ್ಳಿ ವಿಲೇಜ್, ಯೇಶವಂತಪುರ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕಿನ ಸರ್ವೇ ನಂ. 44, 45, 52, 53 ಮತ್ತು 54 ರಲ್ಲಿ ಒಳಗೊಂಡಿದೆ.

 

 

ಈ ಪ್ರದೇಶವು ವಾಯುಪಡೆಯ ನಿಲ್ದಾಣದ (Air Force Station) ವಶದಲ್ಲಿದೆ. ಇದಕ್ಕಾಗಿ ಬಿಎಂಆರ್‍‌ಸಿಎಲ್‌ ಫೆಬ್ರವರಿ 2025ರಲ್ಲಿ ರಕ್ಷಣಾ ಇಲಾಖೆಯ ಪೋರ್ಟಲ್‌ನಲ್ಲಿ ಕಾರ್ಯಾನುಮತಿ (Working Permission) ಪಡೆಯಲು ಅರ್ಜಿ ಸಲ್ಲಿಸಿತ್ತು. ನಂತರ ನಂತರ ಬಿಎಂಆರ್‍‌ಸಿಎಲ್‌, ರಕ್ಷಣಾ ಎಸ್ಟೇಟ್‌ಗಳ ಉಪ ನಿರ್ದೇಶಕರ (ಭೂಮಿ) ಬಳಿ ಪ್ರಸ್ತಾವಿತ ಭೂಮಿಯನ್ನು ಸಮ ಮೌಲ್ಯದ ಮೂಲಸೌಕರ್ಯ (Equivalent Value Infrastructure – EVI) ಆಧಾರದ ಮೇಲೆ ಹಸ್ತಾಂತರಿಸುವ ಕುರಿತು ಮನವಿ ಮಾಡಿತ್ತು.

ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು 27.09.2023 ರಂದು ಹೊರಡಿಸಿದ ಅಧಿಸೂಚನೆಯ ಪ್ರಕಾರ ಈ ಭೂಮಿಯ ಮೌಲ್ಯ ₹185,24,50,000/- ಎಂದು ನಿಗದಿಯಾಗಿದೆ. ಇದಕ್ಕೆ ಅನುಗುಣವಾಗಿ ಬಿಎಂಆರ್‍‌ಸಿಎಲ್‌ ರಕ್ಷಣಾ ಅಧಿಕಾರಿಗಳಿಗೆ ಸಮ ಮೌಲ್ಯದ ಮೂಲಸೌಕರ್ಯ ಒದಗಿಸುವ ಬದಲಾಗಿ ₹18,52,45,000/- ಮೊತ್ತವನ್ನು ನೇರವಾಗಿ ಪಾವತಿಸಲು ತನ್ನ ಒಪ್ಪಿಗೆಯನ್ನು ತಿಳಿಸಿತ್ತು. ಈ ಕುರಿತು 2025ರ ಡಿಸೆಂಬರ್ 8 ಮತ್ತು 2026ರ ಫೆ.6ರಂದು ಪತ್ರಗಳ ಮೂಲಕ, ನಾಗರಿಕ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯ ಅನುಮತಿ ನೀಡಬೇಕು ಎಂದು ಕೋರಿತ್ತು.

 

ಇದನ್ನು ಪರಿಗಣಿಸಿದ್ದ ರಕ್ಷಣಾ ಸಚಿವಾಲಯ (MoD) ಈ ಭೂಮಿಯಲ್ಲಿ ಮೆಟ್ರೋ ವಯಾಡಕ್ಟ್ ಹಾಗೂ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣಕ್ಕಾಗಿ ಷರತ್ತುಬದ್ಧ ಕಾರ್ಯಾನುಮತಿಯನ್ನು ನೀಡಿರುವುದಾಗಿ ತಿಳಿಸಿತ್ತು. ಅಲ್ಲದೇ ಭಾರತ ಸರ್ಕಾರದ ರಕ್ಷಣಾ ಇಲಾಖೆಗೆ ₹185,24,50,000/- ಮೊತ್ತದ EVI ಹಾಗೂ ಹೆಚ್ಚುವರಿಯಾಗಿ 10% ನಗದು ಪರಿಹಾರವನ್ನು ಠೇವಣಿ ಇಡುವ ಷರತ್ತಿನಡಿ ಅನುಮತಿ ನೀಡಲಾಗಿತ್ತು.

ಹೀಗಾಗಿ, ರಕ್ಷಣಾ ಇಲಾಖೆಗೆ ಪಾವತಿಸಬೇಕಾದ ಭೂಮಿಯ ಒಟ್ಟು ಪರಿಹಾರ ಮೊತ್ತವು ₹203,76,95,000/- (₹203.77 ಕೋಟಿ) ಆಗುತ್ತದೆ. ಈ ಸಂಬಂಧ ರಕ್ಷಣಾ ಸಚಿವಾಲಯದ (MoD)ದೊಂದಿಗೆ ಒಪ್ಪಂದ ಪತ್ರ (Memorandum of Understanding – MoU)ವನ್ನು ಅನುಮತಿ ನೀಡಿದ ದಿನಾಂಕದಿಂದ ಒಂದು ತಿಂಗಳೊಳಗೆ ಬಿಎಂಆರ್‍‌ಸಿಎಲ್‌ ಸಹಿ ಮಾಡಬೇಕಿದೆ.

 

 

ಹೆಚ್ಚುವರಿ ಶೇ. 10 ನಗದು ಪರಿಹಾರ ಕೇಳಿದ್ದೇಕೆ?

ರಕ್ಷಣಾ ಅಧಿಕಾರಿಗಳು ಹೆಚ್ಚುವರಿ 10% ನಗದು ಪರಿಹಾರವನ್ನು ಕೇಳಿರುವ ಕಾರಣವನ್ನು ಸ್ಪಷ್ಟಪಡಿಸಿದ್ದಾರೆ. 2023-24ನೇ ಸಾಲಿನ ಮಾರುಕಟ್ಟೆ ಮಾರ್ಗಸೂಚಿ ಮೌಲ್ಯಗಳನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪ್ರಕಟಿಸಿರುವುದರಿಂದ ಆ ಭೂಮಿಯ ಮೌಲ್ಯ ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಪಷ್ಟನೆ ಒದಗಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.

ಹೀಗಾಗಿ ಆಸ್ತಿಯ ಪ್ರಸ್ತುತ ಮಾರುಕಟ್ಟೆ ಮೌಲ್ಯವಾದ ₹185.25 ಕೋಟಿಯ ಮೇಲೆ ಒಟ್ಟು ಶೇ. 10ರಷ್ಟು ಹೆಚ್ಚುವರಿ ಮೊತ್ತವನ್ನು ಕೇಳಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ. ಭಾರತೀಯ ವಾಯುಪಡೆಯ ಅಧಿಕಾರಿಗಳು ಈ ಬೇಡಿಕೆಯನ್ನು ಸಮಂಜಸವೆಂದು ಪರಿಗಣಿಸಿದ್ದಾರೆ. ಜಾಲಹಳ್ಳಿ ಮತ್ತು ಯಲಹಂಕ ವಾಯುಪಡೆ ಭೂಮಿಗಳಲ್ಲಿ ಅಗತ್ಯ ಮೂಲಸೌಕರ್ಯ ನಿರ್ಮಾಣಕ್ಕಾಗಿ ಬಳಸಲಾಗುವುದು ಮತ್ತು ವಿವಾದಿತ ಭೂಮಿಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವುದು ಗೊತ್ತಾಗಿದೆ.

ಹೆಚ್ಚುವರಿ ನಗದು ಪರಿಹಾರ ಬೇಡಿಕೆ ಒಪ್ಪದ ಸಮಿತಿ

ಉನ್ನತಾಧಿಕಾರ ಸಮಿತಿಯು (HPC) ಈ ವಿಷಯವನ್ನು ಸುದೀರ್ಘವಾಗಿ ಚರ್ಚಿಸಿದೆ. ಅನ್ವಯವಾಗುವ ಮಾರ್ಗಸೂಚಿ ಮೌಲ್ಯಕ್ಕಿಂತ ಹೆಚ್ಚಾಗಿ ಹೆಚ್ಚುವರಿ ನಗದು ಪರಿಹಾರವನ್ನು ಪಾವತಿಸುವ ಬೇಡಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವುದು ತಿಳಿದು ಬಂದಿದೆ.

 

 

‘ಏಕೆಂದರೆ ಇದರಿಂದ ಮುಂದಿನ ದಿನಗಳಲ್ಲಿ ತಪ್ಪು ಮಾದರಿ (precedent) ನಿರ್ಮಾಣವಾಗುವ ಸಾಧ್ಯತೆ ಇದೆ. ಆದ್ದರಿಂದ, ರಕ್ಷಣಾ ಎಸ್ಟೇಟ್ ಅಧಿಕಾರಿ (Defence Estate Officer) ಯವರು ಭೂಮಿಯನ್ನು ಬಿಎಂಆರ್‍‌ಸಿಎಲ್‌ಗೆ ಹಸ್ತಾಂತರಿಸುವ ಸಂದರ್ಭದಲ್ಲಿ ಹೆಚ್ಚುವರಿ ನಗದು ಪರಿಹಾರವನ್ನು ಒತ್ತಾಯಿಸಬಾರದು, ‘ ಎಂದು ಸಭೆಯಲ್ಲಿ ಚರ್ಚೆಯಾಗಿರುವುದು ನಡವಳಿಯಿಂದ ಗೊತ್ತಾಗಿದೆ.

ಅದೇ ರೀತಿ ಕರ್ನಾಟಕ ರಾಜ್ಯ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು 2023ರ ಸೆ.27ರಂದು ಪ್ರಕಟಿಸಿರುವ ಮಾರ್ಗಸೂಚಿ ಮೌಲ್ಯ ಆಧಾರದ ಮೇಲೆ ನಿಗದಿಪಡಿಸಿರುವ ₹185,24,50,000/- ಮೊತ್ತದ ಸಮಮೌಲ್ಯದ ಮೂಲಸೌಕರ್ಯ (EVI) ವ್ಯವಸ್ಥೆಯನ್ನು ಸ್ವೀಕರಿಸಬೇಕು ಎಂದು ಉನ್ನತ ಅಧಿಕಾರ ಸಮಿತಿಯು ಕೋರಿದೆ.

ಈ ಹಿನ್ನೆಲೆಯಲ್ಲಿ, ಉನ್ನತಾಧಿಕಾರ ಸಮಿತಿಯು ಬಿಎಂಆರ್‍‌ಸಿಎಲ್‌ಗೆ ರಕ್ಷಣಾ ಸಚಿವಾಲಯ (MoD), ಭಾರತ ಸರ್ಕಾರದ ಉನ್ನತ ಮಟ್ಟದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ಹಾಗೂ ಮುಖ್ಯಮಂತ್ರಿಗಳ ಕಚೇರಿಯ ಮೂಲಕ ಸೂಕ್ತ ಮನವಿಯನ್ನು ಸಲ್ಲಿಸಬೇಕು ಎಂದು ಸಮಿತಿಯು ನಿರ್ದೇಶಿಸಿದೆ.

ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ–3ಕ್ಕೆ ಅಗತ್ಯವಿರುವ ಜಾಲಹಳ್ಳಿ ಗ್ರಾಮ, ಯಶವಂತಪುರ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕಿನ ಸರ್ವೇ ನಂ. 44, 45, 52, 53 ಮತ್ತು 54 ರಲ್ಲಿರುವ ಪೀಣ್ಯ ಗ್ರಾಮ ಸರ್ವೇ ನಂ. 52 ಮತ್ತು 53ರ 28,398 ಚ.ಮೀ. (7.02 ಎಕರೆ) ರಕ್ಷಣಾ ಇಲಾಖೆಯ ಭೂಮಿಯನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಹೆಚ್ಚುವರಿ ನಗದು ಪರಿಹಾರವನ್ನು ಒತ್ತಾಯಿಸಬಾರದು ಎಂದು ಮನವಿ ಮಾಡಲು ಸೂಚಿಸಿರುವುದು ಗೊತ್ತಾಗಿದೆ.

ಅದೇ ರೀತಿ ಕೆಇಆರ್‍‌ಸಿಯು 2024ರ ಫೆ.2ರಂದು ಹೊರಡಿಸಿರುವ ಆದೇಶದಂತೆ ಬಿಎಂಆರ್‍‌ಸಿಎಲ್‌ ಸ್ವಯಂ ನಿರ್ವಹಣಾ (Self-Execution) ಕಾಮಗಾರಿಗಳಿಗಾಗಿ ಕೆಪಿಸಿಟಿಸಿಎಲ್‌ ಗೆ ಪಾವತಿಸಬೇಕಾದ ಮೇಲ್ವಿಚಾರಣಾ ಶುಲ್ಕವನ್ನು ₹1.5 ಲಕ್ಷಗಳಿಗೆ ಮಿತಿಗೊಳಿಸುವ ಕುರಿತು ಚರ್ಚೆ ನಡೆಸಿದೆ.

ಈ ಸಂಬಂಧ ಬಿಎಂಆರ್‍‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಸ್ವಯಂ ನಿರ್ವಹಣಾ ಕಾಮಗಾರಿಗಳ ಯಾವುದೇ ವಿಧದ ಕೆಲಸಗಳಿಗೂ ಬಿಎಂಆರ್‍‌ಸಿಎಲ್‌ನಿಂದ ಮೇಲ್ವಿಚಾರಣಾ ಶುಲ್ಕವನ್ನು ವಸೂಲಿಸುತ್ತಿದೆ ಎಂದು ಉನ್ನತಾಧಿಕಾರ ಸಮಿತಿಗೆ ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

 

 

ಈ ಹಿಂದೆ ಮೆಟ್ರೋ ಹಂತ–1ರ ಕಾಮಗಾರಿಗಳ ಸಂದರ್ಭದಲ್ಲಿ ಕೆಪಿಟಿಸಿಎಲ್‌ ಪ್ರತಿ ಸ್ವಯಂ ನಿರ್ವಹಣಾ ಕಾಮಗಾರಿಗೆ ಗರಿಷ್ಠ ₹15 ಲಕ್ಷಗಳ ಮೇಲ್ವಿಚಾರಣಾ ಶುಲ್ಕವನ್ನು ವಿಧಿಸುತ್ತಿತ್ತು. ಆದರೆ ನಂತರ ಮೆಟ್ರೋ ಹಂತ–2 ಕಾಮಗಾರಿಗಳ ಸಂದರ್ಭದಲ್ಲಿ 2018ರ ಜೂನ್‌ 27ರಂದು ಕೆಪಿಟಿಸಿಎಲ್‌ನ ಆದೇಶದ ಪ್ರಕಾರ ರಿಸೀವಿಂಗ್‌ ಸಬ್ ಸ್ಟೇಷನ್‌ಗೆ ₹1.50 ಕೋಟಿ ರಿಂದ ₹5.00 ಕೋಟಿ ವರೆಗೆ ಶುಲ್ಕವನ್ನು ಹೆಚ್ಚಿಸಿದೆ.

ಈ ವೆಚ್ಚದಲ್ಲಿ ಉಂಟಾದ ಭಾರೀ ಏರಿಕೆಯನ್ನು ಉನ್ನತ ಅಧಿಕಾರ ಸಮಿತಿಯು ಪರಿಗಣಿಸಿದೆ. ಅಲ್ಲದೇ ಈ ವಿಷಯವನ್ನು 28 ಏಪ್ರಿಲ್ 2022ರಂದು ನಡೆದ ಬಿಎಂಆರ್‍‌ಸಿಎಲ್‌ನ 43ನೇ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಿತ್ತು. ಹಂತ–1 ಯೋಜನೆಯಂತೆ, ಮೆಟ್ರೋ ಹಂತ–2 ಯೋಜನೆಯ ಎಲ್ಲಾ ಕಾಮಗಾರಿಗಳಿಗೂ ಮೇಲ್ವಿಚಾರಣಾ ಶುಲ್ಕವನ್ನು ₹15 ಲಕ್ಷಗಳಿಗೆ ಮಿತಿಗೊಳಿಸುವಂತೆ ಮನವಿ ಮಾಡಿತ್ತು.

ಆದರೆ, ಸ್ವಯಂ ನಿರ್ವಹಣಾ ಕಾಮಗಾರಿಗಳ ಮೇಲ್ವಿಚಾರಣಾ ಶುಲ್ಕವನ್ನು ಅಂದಾಜು ವೆಚ್ಚದ ಶೇ. 2.5 ದರದಲ್ಲಿ ವಿಧಿಸಬೇಕು ಎಂದು ಉನ್ನತ ಅಧಿಕಾರ ಸಮಿತಿಯು ನಿರ್ದೇಶಿಸಿದೆ. ಇದೇ ರೀತಿಯ ವ್ಯವಸ್ಥೆಯನ್ನು ರಾಷ್ಟ್ರೀಯ ಹೆದ್ದಾರಿ ಯೋಜನೆಯ ಯೋಜನೆಗಳಲ್ಲಿಯೂ ಅನುಸರಿಸಲಾಗುತ್ತಿದೆ.

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು 2024ರ ಫೆ.2ರಂದು ಹೊರಡಿಸಿದ್ದ ಆದೇಶದ ಮೂಲಕ ಸ್ವಯಂ ನಿರ್ವಹಣಾ ಕಾಮಗಾರಿಗಳ ವಿಷಯದಲ್ಲಿ ಗ್ರಾಹಕ/ಅರ್ಜಿದಾರನು ಸ್ವತಃ ಕಾಮಗಾರಿ ನಿರ್ವಹಿಸಿದರೆ, ಪರವಾನಗಿದಾರ (Licensee) ಮೇಲ್ವಿಚಾರಣಾ ಶುಲ್ಕವನ್ನು ಅಂದಾಜು ವೆಚ್ಚದ ಶೇ. 5ರ ದರದಲ್ಲಿ ಅಥವಾ ಗರಿಷ್ಠ ₹1.5 ಲಕ್ಷಗಳವರೆಗೆ ಮಾತ್ರ ವಿಧಿಸಬಹುದು ಎಂದು ಸೂಚಿಸಿತ್ತು.

ಆದರೆ, ಕೆಪಿಟಿಸಿಎಲ್‌ ಈ ವಿಷಯದಲ್ಲಿ ಬಿಎಂಆರ್‍‌ಸಿಎಲ್‌ಗೆ ವಿಧಿಸುತ್ತಿದ್ದ ಮೇಲ್ವಿಚಾರಣಾ ಶುಲ್ಕವನ್ನು ಅಂದಾಜು ವೆಚ್ಚದ ಶೇ. 2.5ರ ದರದಲ್ಲಿ ಮುಂದುವರಿಸಿತ್ತು., ಇದು ಬಹುತೇಕ ಸಂದರ್ಭಗಳಲ್ಲಿ ಕೆಇಆರ್‍‌ಸಿ ನಿಗದಿಪಡಿಸಿದ ₹1.5 ಲಕ್ಷ ಮಿತಿಯನ್ನು ಮೀರಿತ್ತು. ಇದರ ಪರಿಣಾಮವಾಗಿ ಮೆಟ್ರೋ ಹಂತ–2, 2A ಮತ್ತು 2B ಯೋಜನೆಗಳ ಕಾಮಗಾರಿಗಳು ವಿಳಂಬವಾಗದಂತೆ ಪೂರ್ಣಗೊಳಿಸಬೇಕಿತ್ತು. ಈ ಹಿತದೃಷ್ಟಿಯಿಂದ ಬಿಎಂಆರ್‍‌ಸಿಎಲ್‌ ಮತ್ತು ಕೆಇಆರ್‍‌ಸಿ ಆದೇಶದ ನಂತರವೂ ಸ್ವಯಂ ನಿರ್ವಹಣಾ ಕಾಮಗಾರಿಗಳಿಗಾಗಿ ಕೆಪಿಟಿಸಿಎಲ್‌ ಕೇಳಿದ್ದ ಹೆಚ್ಚುವರಿ ಮೊತ್ತವನ್ನು ಪಾವತಿಸಿತ್ತು.

ಆದರೂ 2024ರ ಫೆ.2ರಂದು ಕೆಇಆರ್‍‌ಸಿ ಹೊರಡಿಸಿದ್ದ ಬಳಿಕವೂ ಕೆಪಿಟಿಸಿಎಲ್‌ ಹೆಚ್ಚುವರಿ ವಸೂಲಿ ಮಾಡಲಾದ ಮೊತ್ತವನ್ನು ಹಿಂದಿರುಗಿಸಲು ನಿರಾಕರಿಸಿದೆ ಎಂದು ಸಮಿತಿಗೆ ತಿಳಿಸಿದೆ.

 

 

ಉನ್ನತಾಧಿಕಾರ ಸಮಿತಿಯು ಈ ವಿಷಯವನ್ನು ಚರ್ಚಿಸಿದೆ. 2024ರ ಫೆ.2ರಂದು ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೆಪಿಟಿಸಿಎಲ್‌ಗೆ ನಿರ್ದೇಶಿಸಿದೆ. ಬಿಎಂಆರ್‍‌ಸಿಎಲ್‌ ಸ್ವಯಂ ನಿರ್ವಹಣಾ (Self-Execution) ಕಾಮಗಾರಿಗಳಿಗಾಗಿ ಕೈಗೊಂಡಿರುವ ಕಾಮಗಾರಿಗಳ ಮೇಲ್ವಿಚಾರಣಾ ಶುಲ್ಕವನ್ನು ಗರಿಷ್ಠ ₹1.5 ಲಕ್ಷಗಳಿಗೆ ಮಾತ್ರ ಸೀಮಿತಗೊಳಿಸಬೇಕು. ಜೊತೆಗೆ 2024 ರ ಫೆ.2ರ ಕೆಇಆರ್‌ಸಿ ಆದೇಶದ ನಂತರ ಬಿಎಂಆರ್‍‌ಸಿಎಲ್‌ ನಿಂದ ಇಂತಹ ಸ್ವಯಂ ನಿರ್ವಹಣಾ ಕಾಮಗಾರಿಗಳಿಗಾಗಿ ವಸೂಲಿಸಲಾದ ಹೆಚ್ಚುವರಿ ಮೊತ್ತವನ್ನು ಹಿಂದಿರುಗಿಸಬೇಕು ಎಂದು ಕೆಪಿಟಿಸಿಎಲ್‌ಗೆ ಸೂಚಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.

Hot this week

39, 437.37 ಕೋಟಿ ರು ಮೊತ್ತದ ಕಸ ವಿಲೇವಾರಿ ಟೆಂಡರ್ ಪ್ರಕ್ರಿಯೆ ಪರಿಶೀಲನೆ; ನಿಗದಿತ ಅವಧಿಯೊಳಗೆ ವರದಿ ಸಲ್ಲಿಸುವಲ್ಲಿ ಅಂಜುಂ ಪರ್ವೇಜ್ ಸಮಿತಿ ವಿಫಲ, 15 ದಿನಗಳ ಕಾಲಾವಕಾಶ ವಿಸ್ತರಣೆ

ಬೆಂಗಳೂರು; ಸಮಗ್ರ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯೂಎಂಎಲ್‌ ಯೋಜಿಸಿದ್ದ ಟೆಂಡರ್ ಪ್ಯಾಕೇಜ್‌ಗಳನ್ನು...

ಸುರಂಗ ಮಾರ್ಗ; ಸಂಚಾರ ದಟ್ಟಣೆ ಕಡಿಮೆಯಾದರೂ 40 ವರ್ಷಕ್ಕೆ ಗುತ್ತಿಗೆ ವಿಸ್ತರಣೆಗೆ ಪ್ರಸ್ತಾವ, ಅದಾನಿ ಎಂಟರ್ ಪ್ರೈಸೆಸ್‌ಗೆ ಡಿ ಕೆ ಸರ್ಕಾರದಿಂದ 10 ವರ್ಷ ಅವಧಿಯ ಗಿಫ್ಟ್‌!

ಬೆಂಗಳೂರು; ಗ್ರೇಟರ್‌ಬೆಂಗಳೂರು ಪ್ರದೇಶ ವ್ಯಾಪ್ತಿಯಲ್ಲಿನ ಹೆಬ್ಬಾಳ (ಎಸ್ಟಿಮ್‌ಮಾಲ್) ಜಂಕ್ಷನ್‌ನಿಂದ ಹೆಚ್‌.ಎಸ್‌.ಆರ್‌ ಲೇಔಟ್‌...

ದಲಿತರ ಜಮೀನು ಭೂ ಪರಿವರ್ತನೆ; ಜಿಲ್ಲಾಧಿಕಾರಿಯಿಂದ ವಾಸ್ತವಾಂಶ ವರದಿ, ಪ್ರಕರಣವನ್ನೇ ಮುಚ್ಚಿ ಹಾಕಿತೇ?

ಬೆಂಗಳೂರು;  ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಸಾದಲಿ ಹೋಬಳಿಯ ಪುರ ಬೈರನಹಳ್ಳಿ...
Please Scan to make Your Contribution

Topics

39, 437.37 ಕೋಟಿ ರು ಮೊತ್ತದ ಕಸ ವಿಲೇವಾರಿ ಟೆಂಡರ್ ಪ್ರಕ್ರಿಯೆ ಪರಿಶೀಲನೆ; ನಿಗದಿತ ಅವಧಿಯೊಳಗೆ ವರದಿ ಸಲ್ಲಿಸುವಲ್ಲಿ ಅಂಜುಂ ಪರ್ವೇಜ್ ಸಮಿತಿ ವಿಫಲ, 15 ದಿನಗಳ ಕಾಲಾವಕಾಶ ವಿಸ್ತರಣೆ

ಬೆಂಗಳೂರು; ಸಮಗ್ರ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯೂಎಂಎಲ್‌ ಯೋಜಿಸಿದ್ದ ಟೆಂಡರ್ ಪ್ಯಾಕೇಜ್‌ಗಳನ್ನು...

ಸುರಂಗ ಮಾರ್ಗ; ಸಂಚಾರ ದಟ್ಟಣೆ ಕಡಿಮೆಯಾದರೂ 40 ವರ್ಷಕ್ಕೆ ಗುತ್ತಿಗೆ ವಿಸ್ತರಣೆಗೆ ಪ್ರಸ್ತಾವ, ಅದಾನಿ ಎಂಟರ್ ಪ್ರೈಸೆಸ್‌ಗೆ ಡಿ ಕೆ ಸರ್ಕಾರದಿಂದ 10 ವರ್ಷ ಅವಧಿಯ ಗಿಫ್ಟ್‌!

ಬೆಂಗಳೂರು; ಗ್ರೇಟರ್‌ಬೆಂಗಳೂರು ಪ್ರದೇಶ ವ್ಯಾಪ್ತಿಯಲ್ಲಿನ ಹೆಬ್ಬಾಳ (ಎಸ್ಟಿಮ್‌ಮಾಲ್) ಜಂಕ್ಷನ್‌ನಿಂದ ಹೆಚ್‌.ಎಸ್‌.ಆರ್‌ ಲೇಔಟ್‌...

ದಲಿತರ ಜಮೀನು ಭೂ ಪರಿವರ್ತನೆ; ಜಿಲ್ಲಾಧಿಕಾರಿಯಿಂದ ವಾಸ್ತವಾಂಶ ವರದಿ, ಪ್ರಕರಣವನ್ನೇ ಮುಚ್ಚಿ ಹಾಕಿತೇ?

ಬೆಂಗಳೂರು;  ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಸಾದಲಿ ಹೋಬಳಿಯ ಪುರ ಬೈರನಹಳ್ಳಿ...

ಜಿಬಿಎ 5 ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣ; 992.00 ಕೋಟಿ ರು ವೆಚ್ಚ , 749 ಕಿಮೀ ಉದ್ದದಲ್ಲಿ 88 ಕಿ ಮೀ ಮಾತ್ರ ಪೂರ್ಣ

ಬೆಂಗಳೂರು; ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 5 ನಗರಪಾಲಿಕೆಗಳು ಮುಖ್ಯಮಂತ್ರಿಗಳ ಮೂಲ...

Related Articles

Popular Categories

error: Content is protected !!