Monday | April 27, 2026 |

ಟೆಲಿಕಾಂ ಕಂಪನಿಯಿಂದ ವಿಧಾನಸೌಧ ಟರೇಸ್‌ ಅನಧಿಕೃತ ಬಳಕೆ; ವಸೂಲಾಗದ ನೆಲಬಾಡಿಗೆ, ನಿಯಮ ಉಲ್ಲಂಘಿಸಿದ್ದರೂ ಕ್ರಮವಿಲ್ಲ

ಬೆಂಗಳೂರು; ಟೆಲಿಕಾಂ ಮೂಲಸೌಕರ್ಯ ಕಂಪನಿಗಳಲ್ಲಿ ಖ್ಯಾತಿ ಹೊಂದಿರುವ ಆಂಧ್ರ ಪ್ರದೇಶ ಮೂಲದ ವಾಲ್ಗೋ ಇನ್ಫ್ರಾ ಕಂಪನಿಯು ಕರ್ನಾಟಕದ ವಿಧಾನಸೌಧ ಟರೇಸ್‌ನ್ನು ಕಳೆದ 3 ವರ್ಷಗಳಿಂದಲೂ ಅನಧಿಕೃತವಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ಇದೀಗ ಬಹಿರಂಗವಾಗಿದೆ. ಅಲ್ಲದೇ ಈ ಕಂಪನಿಯು ನಿಯಮ ಉಲ್ಲಂಘನೆ ಮಾಡಿದ್ದರೂ ಸಹ ಸರ್ಕಾರವು ಇದುವರೆಗೂ ಒಂದೇ ಒಂದು ಕ್ರಮವನ್ನೂ ಜರುಗಿಸಿಲ್ಲ.

ಕರ್ನಾಟಕ, ಆಂಧ್ರ, ತೆಲಂಗಾಣದ ಮುಖ್ಯಮಂತ್ರಿಗಳು ಸೇರಿದಂತೆ ದೇಶದ ಹಲವು ರಾಜಕಾರಣಿಗಳೊಂದಿಗೆ ಅತ್ಯಂತ ನಿಕಟ ಸಂಪರ್ಕ ಹೊಂದಿರುವ ಶ್ರೀಧರರಾವ್‌ ಅವರು ಮುಖ್ಯಸ್ಥರಾಗಿರುವ ಈ ಕಂಪನಿಯು ವಿಧಾನಸೌಧ ಟರೇಸ್‌ನ್ನು ಅನಧಿಕೃತವಾಗಿ ಬಳಸಿಕೊಂಡಿದ್ದರೂ ಲೋಕೋಪಯೋಗಿ ಇಲಾಖೆಯು ಯಾವುದೇ ಕ್ರಮವಹಿಸಿಲ್ಲ.

ಇದಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್‍‌ಗೆ 2026ರ ಏಪ್ರಿಲ್‌ 15ರಂದೇ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ವಿಧಾನಸೌಧದಲ್ಲಿ ಸರ್ಕಾರಕ್ಕೆ ಯಾವುದೇ ಶುಲ್ಕ ವಿಧಿಸದೆ 5G ಸಿಗ್ನಲ್-ಬೂಸ್ಟಿಂಗ್ ಆಂಟೆನಾಗಳನ್ನು ಸ್ಥಾಪಿಸಿತ್ತು. ಇದರಿಂದಾಗಿ ಅಧಿಕಾರಿಗಳು ಮತ್ತು ಸಂದರ್ಶಕರಿಗೆ ಸಂವಹನ ಸುಧಾರಿಸಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೀಗ ಈ ಕಂಪನಿಯು ವಿಧಾನಸೌಧದ ಟರೇಸ್‌ ಮೇಲೆ ಮೊಬೈಲ್ ಅಳವಡಿಕೆ ಮಾಡಿದ್ದರೂ ಸಹ ಕರಾರು ಮಾಡಿಕೊಂಡಿಲ್ಲ.

ವಿಧಾನಸೌಧ ಟರೇಸ್ ಅನಧಿಕೃತ ಬಳಕೆ

ವಿಧಾನಸೌಧ ಆವರಣದಲ್ಲಿ ಮೊಬೈಲ್‌ ಸಿಗ್ನಲ್ ವ್ಯಾಪ್ತಿಯನ್ನು ಹೆಚ್ಚಿಸುವ ಸಂಬಂಧ ವಾಲ್‌ ಗೋ ಇನ್ಫ್ರಾ ಸಂಸ್ಥೆಯು ವಿಧಾನಸೌಧ ಟರೇಸ್‌ ಮೇಲೆ ಮೊಬೈಲ್ ಟವರ್ ಅಳವಡಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಸರ್ಕಾರವು ಕೆಲವು ಸೂಚನೆಗಳನ್ನು ನೀಡಿತ್ತು. ಅಲ್ಲದೇ ಈ ಸಂಬಂಧ ಸೂಚನಾ ಪತ್ರವನ್ನೂ ನೀಡಿತ್ತು. ಇದಕ್ಕೆ ಸಂಬಂಧಿಸಿದಂತೆ ವಾಲ್‌ ಗೋ ಇನ್ಫ್ರಾ ಸಂಸ್ಥೆಯು ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ ಎಂಬುದು ಪತ್ರದಿಂದ ತಿಳಿದು ಬಂದಿದೆ.

3 ವರ್ಷದಿಂದ ನೆಲಬಾಡಿಗೆಯೂ ಇಲ್ಲ

ವಿಧಾನಸೌಧದ ಟರೇಸ್‌ ಮೇಲೆ ಮೊಬೈಲ್ ಟವರ್ ಅಳವಡಿಸುವ ಮೂಲಕ ಈ ಕಂಪನಿಯು ವಿಧಾನ ಸೌಧ ಕಟ್ಟಡವನ್ನು ಬಳಸಿಕೊಂಡಿತ್ತು. ಸರ್ಕಾರಿ ಕಟ್ಟಡವನ್ನು ಬಳಕೆ ಮಾಡಿಕೊಂಡಿರುವುದರಿಂದ ನಿಯಮಾನುಸಾರ ನೆಲ ಬಾಡಿಗೆಯನ್ನೂ ನೀಡಬೇಕು. ಆದರೆ ಈ ಕಂಪನಿಯು 3 ವರ್ಷದಿಂದಲೂ ನೆಲಬಾಡಿಗೆಯನ್ನೇ ಪಾವತಿಸಿಲ್ಲ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಬರೆದಿರುವ ಪತ್ರದಲ್ಲಿ ನೆಲಬಾಡಿಗೆಯ ಮೊತ್ತ ಎಷ್ಟೆಂದು ನಮೂದಿಸಿಲ್ಲ. ಹೀಗಾಗಿ ನೆಲಬಾಡಿಗೆಯ ಮೊತ್ತದ ಬಗ್ಗೆ ಖಚಿತ ಮಾಹಿತಿಯೂ ಇಲ್ಲವಾಗಿದೆ.

 

 

ಷರತ್ತು ಉಲ್ಲಂಘನೆ

ವಿಧಾನಸೌಧ ಕಟ್ಟಡದ ಮೇಲೆ ಮೊಬೈಲ್ ಟವರ್ ಅಳವಡಿಸುವ ಸಂಬಂಧ ಈ ಕಂಪನಿಗೆ ಸರ್ಕಾರವು ಹಲವು ಷರತ್ತುಗಳನ್ನು ವಿಧಿಸಿತ್ತು. ಈ ಷರತ್ತುಗಳ ಬಗ್ಗೆ ಸರ್ಕಾರವು ಸೂಚನಾ ಪತ್ರಗಳನ್ನು ಕಳಿಸಿತ್ತು. ಆದರೆ ಈ ಯಾವ ಸೂಚನೆ ಪತ್ರಗಳಿಗೆ ಕಂಪನಿಯು ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಹೀಗಾಗಿ ಷರತ್ತುಗಳ ಉಲ್ಲಂಘನೆಯಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್‍‌ಗೆ ಬರೆದಿರುವ ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಕರಾರು ಮಾಡಿಕೊಂಡಿಲ್ಲವೇ?

ಈ ಕಂಪನಿಯು ವಿಧಾನಸೌಧ ಟರೇಸ್‌ ಮೇಲೆ ಪ್ರಾಯೋಗಿಕವಾಗಿ ಅಳವಡಿಸಿರುವ ಟವರ್‍‌ಗೆ ಸಂಬಂಧಿಸಿದಂತೆ ಯಾವುದೇ ಕರಾರು ಮಾಡಿಕೊಂಡಿಲ್ಲ. ಬದಲಿಗೆ ಅನಧಿಕೃತವಾಗಿ ಬಳಕೆ ಮಾಡಿಕೊಂಡಿರುವುದು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಪತ್ರದಲ್ಲಿ ಹೇಳಿರುವುದು ತಿಳಿದು ಬಂದಿದೆ.

ಹೀಗಾಗಿ ವಿಧಾನಸೌಧ ಟರೇಸ್‌ ಮೇಲೆ ವಾಲ್ಗೋ ಇನ್ಫ್ರಾ ಸಂಸ್ಥೆಯ ಮೂಲಕ ಅಳವಡಿಸಿರುವ ಮೊಬೈಲ್ ಟವರ್‍‌ಗಳನ್ನು ತೆರವುಗೊಳಿಸಬೇಕು,’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್‍‌ಗೆ ನಿರ್ದೇಶಿಸಿರುವುದು ಪತ್ರದಿಂದ ಗೊತ್ತಾಗಿದೆ.

ಆದರೆ 2023ರಿಂದಲೂ ನೆಲ ಬಾಡಿಗೆ ಪಾವತಿಸದೇ ಮೊಬೈಲ್ ಟವರ್ ಅಳವಡಿಸಿರುವ ಈ ಕಂಪನಿಯಿಂದ ನೆಲ ಬಾಡಿಗೆ ವಸೂಲಿ ಮಾಡಿದ ನಂತರ ತೆರವುಗೊಳಿಸಬೇಕು ಎಂದು ಪತ್ರದಲ್ಲಿ ಸೂಚಿಸಿಲ್ಲ.

ಕಂಪನಿಯ ಹಿನ್ನೆಲೆ

ವಾಲ್‌ಗೋ ಇನ್ಫ್ರಾ ಕಂಪನಿಯು ಶ್ರೀಧರ್ ರಾವ್ ನೇತೃತ್ವದ ಪ್ರಮುಖ ಟೆಲಿಕಾಂ ಮೂಲಸೌಕರ್ಯ ಕಂಪನಿಯಾಗಿದೆ. ಕರ್ನಾಟಕದಲ್ಲಿ ವೊಡಾಫೋನ್ ಐಡಿಯಾದ (Vi) 5G ಸೇವೆಗಳನ್ನು ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದು ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ಒದಗಿಸುತ್ತಿದೆ. ಮೈಸೂರು ವೈದ್ಯಕೀಯ ಕಾಲೇಜಿನಂತಹ ಪ್ರಮುಖ ಸ್ಥಳಗಳಲ್ಲಿ 5G ನೆಟ್‌ವರ್ಕ್ ಅನ್ನು ಕಂಪನಿ ಸ್ಥಾಪಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಲ್ಗೋ ಇನ್ಫ್ರಾ ಸಂಸ್ಥೆಯು ಮೈಸೂರು ವೈದ್ಯಕೀಯ ಕಾಲೇಜಿನ ಶತಮಾನೋತ್ಸವದ ಅಂಗವಾಗಿ ವಾಲ್ಗೋ ಇನ್ಫ್ರಾ ಸಂಸ್ಥೆಯ 5G ನೆಟ್‌ವರ್ಕ್ ಮತ್ತು ಡೇಟಾ ಸೇವೆಗಳನ್ನು ಉದ್ಘಾಟಿಸಿದ್ದರು.

 

 

ಕರ್ನಾಟಕದಲ್ಲಿ ವೊಡಾಫೋನ್ ಐಡಿಯಾ ಇತ್ತೀಚೆಗೆ ಬಿಡುಗಡೆ ಮಾಡಿದ 5G ಸೇವೆಗಳಿಗೆ ವಾಲ್ಗೋ ಇನ್ಫ್ರಾ ನಿರ್ಣಾಯಕ ಮೂಲಸೌಕರ್ಯ ಬೆಂಬಲವನ್ನು ಒದಗಿಸಿದೆ, ಇದು ಟೆಲಿಕಾಂ ಆಪರೇಟರ್‌ಗೆ ರಾಜ್ಯದಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮುಂದಿನ ಪೀಳಿಗೆಯ ಸಂಪರ್ಕವನ್ನು ವಿಸ್ತರಿಸಲು ಅನುವು ಮಾಡಿಕೊಡಲಿದೆ ಎಂದು ಹೇಳಲಾಗಿದೆ.

 

 

ವಾಲ್ಗೋ ಇನ್ಫ್ರಾ ಕರ್ನಾಟಕದಲ್ಲಿ ಮಾತ್ರವಲ್ಲದೆ ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿಯೂ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು, ಸಣ್ಣ ವ್ಯಾಪಾರ ಮಾಲೀಕರು ಮತ್ತು ಪ್ರಯಾಣಿಕರು ಸೇರಿದಂತೆ ವೈವಿಧ್ಯಮಯ ಹಿನ್ನೆಲೆಯ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ನೆಟ್‌ವರ್ಕ್ ಪೂರೈಕೆದಾರರ ಕಾರ್ಯತಂತ್ರವು ಗ್ರಾಮೀಣ ಮತ್ತು ಕಡಿಮೆ ಆದಾಯದ ಪ್ರದೇಶಗಳಲ್ಲಿ ಸಂಪರ್ಕ ಅಂತರವನ್ನು ಮುಚ್ಚುವುದರ ಮೇಲೆ ಕೇಂದ್ರೀಕರಿಸಿದೆ.

 

ವಿಧಾನಪರಿಷತ್ ಸಭಾಪತಿ, ವಿಧಾನಸಭೆ ಸ್ಪೀಕರ್‍‌ರೊಂದಿಗೆ ಶ್ರೀಧರರಾವ್

 

ಹೈದರಾಬಾದ್ ಉದ್ಯಮಿಯಾಗಿರುವ ಶ್ರೀಧರರಾವ್ ಅವರ 7 ವರ್ಷ ವಯಸ್ಸಿನ ಮಗನ ಹುಟ್ಟುಹಬ್ಬಕ್ಕೆ ಕೂಪರ್‍‌ನ್ನು ಉಡುಗೊರೆಯಾಗಿ ನೀಡಿದ್ದರು. ಈ ಚಿತ್ರವು ಅಂತರ್ಜಾಲದಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಈ ಕಾರ್ಯಕ್ರಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

 

 

ಮೊಬೈಲ್ ಟವರ್ ಅಳವಡಿಕೆಗೆ ಸಂಬಂಧಿಸಿದ ಶುಲ್ಕಗಳು ಮತ್ತು ಬಾಡಿಗೆಯನ್ನು ಭಾರತ ಸರ್ಕಾರವೇ ನಿಗದಿಪಡಿಸಿದೆ. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರತಿ ಟವರ್ ಅಳವಡಿಕೆಗೆ ಸ್ಥಳೀಯ ಸಂಸ್ಥೆಗಳಿಗೆ ಉದಾಹರಣೆಗೆ ಬಿಬಿಎಂಪಿ ಸುಮಾರು 50,000 ರೂ. ಶುಲ್ಕ ನಿಗದಿಪಡಿಸಿತ್ತು. ಟವರ್ ಅಳವಡಿಸಿದ ಆಸ್ತಿಯ ಮಾಲೀಕರಿಗೆ ತಿಂಗಳಿಗೆ ಅಂದಾಜು 5,000 ರೂ. ದಿಂದ 60,000 ರೂ. ವರೆಗೆ ಬಾಡಿಗೆ ಸಿಗಬಹುದು ಎಂದು ಹೇಳಲಾಗಿತ್ತು.

ಸರ್ಕಾರಿ ಕಟ್ಟಡಗಳ ಮೇಲೆ ಟವರ್ ಅಳವಡಿಸಲು ಪ್ರತಿ 1,000 ಚ.ಮೀ. ವಿಸ್ತೀರ್ಣಕ್ಕೆ ಸುಮಾರು 1 ಲಕ್ಷ ರೂ. ಒಂದು ಬಾರಿಯ ಶುಲ್ಕವನ್ನು ಮೊಬೈಲ್ ಕಂಪನಿಯು ಪಾವತಿಸಬೇಕಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಭೂಮಿ ಮತ್ತು ಕಟ್ಟಡಗಳ ಮೇಲೆ ಅಳವಡಿಸಿರುವ ದೂರಸಂಪರ್ಕ ಗೋಪುರಗಳಿಗೆ (ಮೊಬೈಲ್‌ ಟವರ್‌) ಆಸ್ತಿ ತೆರಿಗೆ ವಿಧಿಸಿ, ಸಂಗ್ರಹಿಸುವ ತೀರ್ಮಾನವನ್ನು 2014-15ರಲ್ಲೇ ತೀರ್ಮಾನ ಕೈಗೊಂಡಿದ್ದರೂ ಸಹ ಟೆಲಿಕಾಂ ಸೇವಾ ಕಂಪನಿಗಳು ನಯಾಪೈಸೆ ತೆರಿಗೆ ಪಾವತಿಸದೆ ಪಾಲಿಕೆಗೆ ಸೆಡ್ಡು ಹೊಡೆಯುತ್ತಲೇ ಬಂದಿವೆ.

ಬೆಂಗಳೂರು ನಗರದಲ್ಲಿ ಸುಮಾರು 10 ಸಾವಿರ ಮೊಬೈಲ್‌ ಟವರ್‌ಗಳು ಇದೆ ಎಂದು ಅಂದಾಜಿಸಿದೆ. ಈ ಟವರ್‌ಗಳನ್ನು ಅಳವಡಿಸಿರುವ ಟೆಲಿಕಾಂ ಕಂಪನಿಗಳು ಅಳವಡಿಕೆ ಶುಲ್ಕವನ್ನೂ ಪಾವತಿಸುತ್ತಿಲ್ಲ. ಆಸ್ತಿ ತೆರಿಗೆಯನ್ನೂ ಕಟ್ಟುತ್ತಿಲ್ಲ. ಆದರೂ ಈ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಾಹಸಕ್ಕೆ ಪಾಲಿಕೆ ಅಧಿಕಾರಿಗಳು ಕೈಹಾಕಿಲ್ಲ. ಹೀಗಾಗಿಯೇ, ಪಾಲಿಕೆಗೆ ವಾರ್ಷಿಕ ಕೋಟ್ಯಂತರ ರೂ. ಆದಾಯ ಖೋತಾ ಆಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಾರ್ಷಿಕ 19 ಸಾವಿರ ರೂ. ನಿಗದಿ

ಕೆಎಂಸಿ ಕಾಯಿದೆ 1976ರ ಕಲಂ 108 ‘ಎ’ ಹಾಗೂ ಅದರಡಿಯಲ್ಲಿ ರಚಿಸಲಾದ ಬಿಬಿಎಂಪಿ ಆಸ್ತಿ ತೆರಿಗೆ ನಿಯಮಾವಳಿಗಳು-2009ರ ಅನ್ವಯ ಪಾಲಿಕೆ ವ್ಯಾಪ್ತಿಯಲ್ಲಿ ಭೂಮಿ ಮತ್ತು ಕಟ್ಟಡಗಳ ಮೇಲೆ ಸ್ಥಾಪಿಸಲಾದ ಮೊಬೈಲ್‌ ಟವರ್‌ಗಳ ಮೇಲೆ ಆಸ್ತಿ ತೆರಿಗೆ ವಿಧಿಸಿ, ಸಂಗ್ರಹಿಸಲು ಅವಕಾಶ ಕಲ್ಪಿಸಲಾಗಿತ್ತು. ಸ್ವತ್ತಿನ ಮಾಲೀಕರು ಮೊಬೈಲ್‌ ಟವರ್‌ಗಳನ್ನು ಘೋಷಿಸಿಕೊಂಡು ತೆರಿಗೆ ಪಾವತಿಸುತ್ತಿದ್ದರು.

ಆ ಬಳಿಕ ಟೆಲಿಕಾಂ ಆಪರೇಟರ್‌ಗಳು ಹೈಕೋರ್ಟ್‌ನಲ್ಲಿ ದಾವೆ ಹೂಡಿ ಕಾಯಿದೆಯಲ್ಲಿನ ಕಟ್ಟಡದ ವ್ಯಾಖ್ಯಾನದಡಿ ಮೊಬೈಲ್‌ ಟವರ್‌ಗಳ ಬಗ್ಗೆ ಉಲ್ಲೇಖವಿಲ್ಲ. ಹೀಗಾಗಿ, ಮೊಬೈಲ್‌ ಟವರ್‌ಗಳ ಮೇಲೆ ಆಸ್ತಿ ತೆರಿಗೆ ವಿಧಿಸಿ, ಸಂಗ್ರಹಿಸಲು ಪಾಲಿಕೆಗೆ ಅವಕಾಶವಿಲ್ಲ. ಆದ ಕಾರಣ, ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದರು.

ಈ ದಾವೆಯನ್ನು ಕೂಲಂಕಷವಾಗಿ ಪರಿಶೀಲಿಸಿದ್ದ ನ್ಯಾಯಾಲಯವು, ರಾಜ್ಯ ಸರಕಾರವು ಕೆಎಂಸಿ ಕಾಯಿದೆ 1976ರ ಪ್ರಕರಣ 2 ಖಂಡ, 1 ‘ಎ’ ಉಪ ಖಂಡದಲ್ಲಿ ಕಟ್ಟಡದ ವ್ಯಾಖ್ಯಾನಕ್ಕೆ ತಿದ್ದುಪಡಿ ತಂದು ‘ದೂರಸಂಪರ್ಕ ಗೋಪುರಗಳು ಅಥವಾ ಜಾಹೀರಾತು ನಿರ್ಮಾಣ ಸೇರಿದಂತೆ ಯಾವುದೇ ಇತರೆ ನಿರ್ಮಾಣಗಳು, ಯಾವುದೇ ಹೆಸರು ಕರೆಯಲಿ’ ಎಂದು ಸೇರ್ಪಡೆ ಮಾಡಿ 2015ರ ಜ.9ರಂದು ಅಧಿಸೂಚನೆ ಹೊರಡಿಸಿತ್ತು. ಆದ ಕಾರಣ, 2015ರ ಜ.9ರಿಂದ ಅನ್ವಯವಾಗುವಂತೆ ಮೊಬೈಲ್‌ ಟವರ್‌ಗಳ ಮೇಲೆ ಆಸ್ತಿ ತೆರಿಗೆ ವಿಧಿಸಿ, ಸಂಗ್ರಹಿಸಬಹುದೆಂದು ತೀರ್ಪು ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು.

ಈ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಭೂಮಿ ಮತ್ತು ಕಟ್ಟಡಗಳ ಮೇಲೆ ಸ್ಥಾಪಿಸಲಾದ ಮೊಬೈಲ್‌ ಟವರ್‌ಗಳ ಮೇಲೆ ಆಸ್ತಿ ತೆರಿಗೆಯನ್ನು 2014-15ನೇ ಸಾಲಿನ ಎರಡನೇ ಅರ್ಧ ವಾರ್ಷಿಕದಿಂದ ಅಂದರೆ, 2014ರ ಅ.1ರಿಂದ ಬಿಬಿಎಂಪಿ ಕಾಯಿದೆ ಮತ್ತು ನಿಯಮಗಳನ್ವಯ ಪ್ರತಿಯೊಂದು ಮೊಬೈಲ್‌ ಟವರ್‌ಗೆ ನಿಗದಿಪಡಿಸಿರುವ ಆಸ್ತಿ ತೆರಿಗೆ, ಉಪಕರ, ಬಡ್ಡಿ ಮತ್ತು ದಂಡದ ಸಹಿತ ಬಾಕಿ ಆಸ್ತಿ ತೆರಿಗೆ ಸಂಗ್ರಹಿಸಲು ಆದೇಶಿಸಿತ್ತು. ಪ್ರತಿ ಮೊಬೈಲ್‌ ಟವರ್‌ಗೆ ವಾರ್ಷಿಕ ತೆರಿಗೆ, ಉಪಕರ, ಬಡ್ಡಿ ಸೇರಿ 19 ಸಾವಿರ ರೂ. ನಿಗದಿಪಡಿಸಲಾಗಿದೆ.

100-120 ಕೋಟಿ ರೂ. ಬಾಕಿ

ಬೆಂಗಳೂರು ನಗರದಲ್ಲಿ ಮೊಬೈಲ್‌ ಟವರ್‌ಗಳನ್ನು ಅಳವಡಿಸಿರುವ ಟೆಲಿಕಾಂ ಸೇವಾ ಕಂಪನಿಗಳು 100 ರಿಂದ 120 ಕೋಟಿ ರೂ. ಅಧಿಕ ಮೊತ್ತದಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿವೆ. ತೆರಿಗೆ ಸುಸ್ತಿದಾರರಿಗಾಗಿ ಜಾರಿಗೊಳಿಸಿದ್ದ ಒಂದು ಬಾರಿ ಪರಿಹಾರ ಯೋಜನೆಯಡಿ (ಒಟಿಎಸ್‌) ದಂಡ, ಬಡ್ಡಿ ರಹಿತವಾಗಿ ಬಾಕಿ ಪಾವತಿಸಲು ಟೆಲಿಕಾಂ ಕಂಪನಿಗಳಿಗೂ ಅವಕಾಶ ಮಾಡಿಕೊಡಲಾಗಿತ್ತು. 2018ರಲ್ಲಿ ತೆರಿಗೆ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ಟೆಲಿಕಾಂ ಕಂಪನಿಗಳೊಂದಿಗೆ ಸಭೆ ನಡೆಸಿ, ಮೊಬೈಲ್‌ ಟವರ್‌ಗಳನ್ನು ಘೋಷಿಸಿಕೊಳ್ಳುವಂತೆ ಸೂಚಿಸಿತ್ತು. ಆಗ ಆರು ಕಂಪನಿಗಳು 6,766 ಮೊಬೈಲ್‌ ಟವರ್‌ಗಳನ್ನು ಘೋಷಿಸಿಕೊಂಡಿದ್ದವು. ಉಳಿದ ಕಂಪನಿಗಳು ಘೋಷಣೆ ಮಾಡಿಕೊಂಡಿರಲಿಲ್ಲ.

ಮೊಬೈಲ್‌ ಟವರ್‌ಗಳ ನಿಯಂತ್ರಣಕ್ಕೆ ನಗರಾಭಿವೃದ್ಧಿ ಇಲಾಖೆಯು 2016ರಲ್ಲಿ ಕರಡು ನೀತಿ ಪ್ರಕಟಿಸಿದೆ. ಪ್ರತಿ ಟವರ್‌ ಅಳವಡಿಕೆಗೆ 50 ಸಾವಿರ ರೂ. ಶುಲ್ಕ ನಿಗದಿಪಡಿಸಿ, ಸ್ಥಳೀಯ ಸಂಸ್ಥೆಗಳಿಗೆ ಪಾವತಿಸಬೇಕೆಂದು ನೀತಿಯಲ್ಲಿ ಹೇಳಲಾಗಿತ್ತು. ಆದರೆ, ಈ ನೀತಿ ಪ್ರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಪಾಲಿಕೆಯು ಕಡ್ಡಾಯವಾಗಿ 50 ಸಾವಿರ ಶುಲ್ಕ ವಸೂಲಿ ಮಾಡಬೇಕು ಎಂಬ ನಿರ್ಣಯವನ್ನು 2017ರಲ್ಲಿ ನಡೆದ ಕೌನ್ಸಿಲ್‌ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಇದಾಗಿ 7 ವರ್ಷ ಕಳೆದರೂ ಟೆಲಿಕಾಂ ಕಂಪನಿಗಳು ಅಳವಡಿಕೆ ಶುಲ್ಕ ಪಾವತಿ ಮಾಡಿಲ್ಲ.

Hot this week

ನೀಟ್‌, ಕೆ-ಸಿಇಟಿ ತರಬೇತಿ; ಅಲ್ಪಸಂಖ್ಯಾತರ ಇಲಾಖೆಯಲ್ಲಿ ಟೆಂಡರ್ ನಿಯಮ ಉಲ್ಲಂಘನೆ, ನಿಯಮಬಾಹಿರ ಚಟುವಟಿಕೆ, ಸರ್ಕಾರಕ್ಕೆ ಲೀಗಲ್ ನೋಟೀಸ್‌

ಬೆಂಗಳೂರು; ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ವಸತಿ ಕಾಲೇಜು ವಿದ್ಯಾರ್ಥಿಗಳಿಗೆ ಆಫ್‌ಲೈನ್ ಮಾದರಿಯಲ್ಲಿ...

ವರ್ಗಾವಣೆ ರದ್ದುಗೊಳಿಸಲು ತಲಾ 20 ಲಕ್ಷಕ್ಕೆ ಬೇಡಿಕೆ ಆರೋಪ; ಟೆಂಡರ್ ಕಮಿಷನ್ ಆಪಾದನೆ ಬೆನ್ನಲ್ಲೇ ಕರೀಗೌಡರ ವಿರುದ್ಧ ದೂರು

ಬೆಂಗಳೂರು; ಒಂದೆಡೆ ಮಂಜೂರಾಗಿರುವ ಹುದ್ದೆಗಳನ್ನು  ಭರ್ತಿ ಮಾಡುತ್ತಿಲ್ಲ, ಶೇ. 40ರಷ್ಟು ಹುದ್ದೆಗಳು...

ಬ್ರಾಂಡೆಡ್ ಔಷಧಿ ಮಾರಾಟ, ರೋಗಿಗಳಿಂದ ಹಣ ವಸೂಲಿ, ಖಾಸಗಿ ಅಂಬ್ಯುಲೆನ್ಸ್ ಜಾಲ, ಪ್ರಭಾವವಿದ್ದರೇ ಐಸಿಯು ಹಾಸಿಗೆ; ವಿಕ್ಟೋರಿಯಾ ನರಕ ದರ್ಶನ ಮಾಡಿಸಿದ ಲೋಕಾ ತನಿಖೆ

ಬೆಂಗಳೂರು; ಬೆಂಗಳೂರು ನಗರದ ಹೃದಯಭಾಗದಲ್ಲಿರುವ ವಿಕ್ಟೋರಿಯಾ ಆಸ್ಪತ್ರೆ ಮತ್ತು ಟ್ರಾಮಾ ಕೇಂದ್ರದಲ್ಲಿ...

ಈಜಿಪುರ ಮೇಲ್ಸೇತುವೆ ಕಾಮಗಾರಿ; ಪರಿಷ್ಕೃತ ಅಂದಾಜಿನಲ್ಲಿಯೇ ಲೋಪ ಪತ್ತೆ, 8.80 ಕೋಟಿ ಮೊತ್ತಕ್ಕೆ ಲೆಕ್ಕ ಪರಿಶೋಧಕರ ಆಕ್ಷೇಪಣೆ

ಬೆಂಗಳೂರು;  ಈಜಿಪುರ ಎಲಿವೇಟೆಡ್ ಕಾಮಗಾರಿಗೆ ಸಂಬಂಧಿಸಿದಂತೆ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯು ಮಾಡಿದ್ದ...

204 ತಾಲೂಕುಗಳ 2,280 ಗ್ರಾ.ಪಂ.ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ!; ಮುನ್ನೆಚ್ಚರಿಕೆ ವಹಿಸದಿದ್ದರೇ ಹನಿ ನೀರಿಗೂ ತತ್ವಾರ

ಬೆಂಗಳೂರು; ರಾಜ್ಯದಲ್ಲಿ  2026ರ ಬೇಸಿಗೆ ಅವಧಿಯಲ್ಲಿ 204 ತಾಲೂಕುಗಳ ಸುಮಾರು 2,280...

Topics

ನೀಟ್‌, ಕೆ-ಸಿಇಟಿ ತರಬೇತಿ; ಅಲ್ಪಸಂಖ್ಯಾತರ ಇಲಾಖೆಯಲ್ಲಿ ಟೆಂಡರ್ ನಿಯಮ ಉಲ್ಲಂಘನೆ, ನಿಯಮಬಾಹಿರ ಚಟುವಟಿಕೆ, ಸರ್ಕಾರಕ್ಕೆ ಲೀಗಲ್ ನೋಟೀಸ್‌

ಬೆಂಗಳೂರು; ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ವಸತಿ ಕಾಲೇಜು ವಿದ್ಯಾರ್ಥಿಗಳಿಗೆ ಆಫ್‌ಲೈನ್ ಮಾದರಿಯಲ್ಲಿ...

ವರ್ಗಾವಣೆ ರದ್ದುಗೊಳಿಸಲು ತಲಾ 20 ಲಕ್ಷಕ್ಕೆ ಬೇಡಿಕೆ ಆರೋಪ; ಟೆಂಡರ್ ಕಮಿಷನ್ ಆಪಾದನೆ ಬೆನ್ನಲ್ಲೇ ಕರೀಗೌಡರ ವಿರುದ್ಧ ದೂರು

ಬೆಂಗಳೂರು; ಒಂದೆಡೆ ಮಂಜೂರಾಗಿರುವ ಹುದ್ದೆಗಳನ್ನು  ಭರ್ತಿ ಮಾಡುತ್ತಿಲ್ಲ, ಶೇ. 40ರಷ್ಟು ಹುದ್ದೆಗಳು...

ಈಜಿಪುರ ಮೇಲ್ಸೇತುವೆ ಕಾಮಗಾರಿ; ಪರಿಷ್ಕೃತ ಅಂದಾಜಿನಲ್ಲಿಯೇ ಲೋಪ ಪತ್ತೆ, 8.80 ಕೋಟಿ ಮೊತ್ತಕ್ಕೆ ಲೆಕ್ಕ ಪರಿಶೋಧಕರ ಆಕ್ಷೇಪಣೆ

ಬೆಂಗಳೂರು;  ಈಜಿಪುರ ಎಲಿವೇಟೆಡ್ ಕಾಮಗಾರಿಗೆ ಸಂಬಂಧಿಸಿದಂತೆ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯು ಮಾಡಿದ್ದ...

Related Articles

Popular Categories

error: Content is protected !!