Friday | May 1, 2026 |

ಸಮಗ್ರ ಉಪ ನಗರ ಯೋಜನೆ; ಆದಾಯದ ಮೂಲಗಳೇ ಇಲ್ಲ, ಆಸ್ತಿ ಸಂಪನ್ಮೂಲವಿರದಿದ್ದರೂ 3,650 ಕೋಟಿ ಸಾಲದ ಲೆಕ್ಕಾಚಾರ, ಆರ್ಥಿಕ ಇಲಾಖೆಯನ್ನೇ ಬಗ್ಗಿಸಿದ ನಗರಾಭಿವೃದ್ಧಿ

ಬೆಂಗಳೂರು; ರಾಮನಗರ ತಾಲೂಕು ಬಿಡದಿ ಹೋಬಳಿಯ 10 ಗ್ರಾಮಗಳ ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪ ನಗರ ಯೋಜನೆ ಅನುಷ್ಟಾನಕ್ಕೆ ಹೆಚ್ಚುವರಿಯಾಗಿ ಸರ್ಕಾರವು ನೇರವಾಗಿ 2,443 ಕೋಟಿ ರು ಅನುದಾನ ನೀಡಬೇಕು ಎಂಬ ನಗರಾಭಿವೃದ್ಧಿ ಇಲಾಖೆಯ ಬೇಡಿಕೆಯನ್ನು ಆರ್ಥಿಕ ಇಲಾಖೆಯು ಅಂಗೀಕರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಿಸಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಆರ್ಥಿಕ ಇಲಾಖೆಯನ್ನೇ ಬಗ್ಗಿಸಿರುವ  ನಗರಾಭಿವೃದ್ಧಿ ಇಲಾಖೆಯು ಯೋಜನೆಗೆ ಸಚಿವ ಸಂಪುಟದ ಅನುಮೋದನೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಕೈಗೆತ್ತಿಕೊಳ್ಳಬೇಕು ಎಂದು ಮೊದಲು ಹೇಳಿದ್ದ ಆರ್ಥಿಕ ಇಲಾಖೆಯು ತನ್ನ ಅಭಿಪ್ರಾಯವನ್ನೇ ಬದಲಿಸಿದೆ. ಪಿಪಿಪಿ ಮಾದರಿ ಬದಲು ನಗರಾಭಿವೃದ್ಧಿ ಇಲಾಖೆಯು ಇಚ್ಛಿಸಿದಂತೆ  ಇಪಿಸಿ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಸಲಹೆ ನೀಡಿದೆ. ಇಡೀ ಯೋಜನೆಗೆ ಸಂಬಂಧಿಸಿದಂತೆ  ಆರ್ಥಿಕ ಇಲಾಖೆಯು ಮೊದಲು ನೀಡಿದ್ದ ಅಭಿಪ್ರಾಯವನ್ನೇ ಬದಲಿಸಿದೆ. ನಗರಾಭಿವೃದ್ಧಿ ಇಲಾಖೆಯು ತನಗೆ ಅನುಕೂಲವಾಗುವ ರೀತಿಯಲ್ಲಿ ಎರಡನೇ ಅಭಿಪ್ರಾಯ ಪಡೆದಿದೆ.

ಅಲ್ಲದೇ ಪ್ರಸ್ತುತ ಹಣಕಾಸು ನಿರ್ಬಂಧಗಳು ಇರುವ ಕಾರಣ ಇಂತಹ ಬೇಡಿಕೆಯನ್ನು ಬೆಂಬಲಿಸಲು ಸಾಧ್ಯವೇ ಇಲ್ಲ ಎಂದೂ ಆರ್ಥಿಕ ಇಲಾಖೆ ಹೇಳಿತ್ತು. ಅಲ್ಲದೇ ಈ ಯೋಜನೆಗೆ ಯಾವುದೇ ಅನುದಾನವು ಮೀಸಲಿರಿಸಿಲ್ಲ. ಸಾಲಕ್ಕೆ ಖಾತರಿ ನೀಡುವ ಸಂಬಂಧ ಆರ್ಥಿಕ ಇಲಾಖೆಯು ತನ್ನ ನಿಲುವನ್ನೇ ಬದಲಿಸಿದೆ.

ರಾಜ್ಯ ಕಾಂಗ್ರೆಸ್‌ ಸರ್ಕಾರವು ಈ ಯೋಜನೆಗಾಗಿ ಹೆಚ್ಚುವರಿಯಾಗಿ ಅನುದಾನ ಬೇಡಿಕೆ ಇಡುವ ಪ್ರಸ್ತಾವವನ್ನು ಆರ್ಥಿಕ ಇಲಾಖೆಯು ಮೊದಲು ನಿರಾಕರಿಸಿತ್ತು. ಈ ಬಗ್ಗೆ ಮೊದಲಿನ ಸಚಿವ ಸಂಪುಟ ಸಭೆಯಲ್ಲಿ  ಚರ್ಚೆ ನಡೆದಿತ್ತಾದರೂ ಅಂತಿಮ ನಿರ್ಧಾರ ತೆಗೆದುಕೊಳ್ಳದೇ ಈ ವಿಷಯವನ್ನು ಮುಂದೂಡಿತ್ತು. 2026ರ ಏಪ್ರಿಲ್ 30ರಂದು ನಡೆದ ಸಚಿವ ಸಂಪುಟಕ್ಕೆ (ನಅಇ ಸಿ 227/2026)  ಎರಡನೇ ಬಾರಿ ಇದೇ ಪ್ರಸ್ತಾವವನ್ನು ಮಂಡಿಸಿತ್ತು. ಈ ಎರಡನೇ ಪ್ರಸ್ತಾವವನ್ನು ಪರಿಶೀಲಿಸಿದ್ದ  ಆರ್ಥಿಕ ಇಲಾಖೆಯು ಸಹ ತನ್ನ ಅಭಿಪ್ರಾಯವನ್ನೇ  ಬದಲಿಸಿಕೊಂಡಿತ್ತು.

ಮತ್ತೊಂದು ವಿಶೇಷವೆಂದರೇ ಬಿಎಂಆರ್‍‌ಡಿಎ ವ್ಯಾಪ್ತಿಯಲ್ಲಿ ಆಸ್ತಿ ಸಂಪನ್ಮೂಲವಿರದಿದ್ದರೂ ಸಹ  ಹೆಚ್ಚುವರಿಯಾಗಿ 3,650 ಕೋಟಿಯಷ್ಟು ಅಡಮಾನ ಸಾಲ ಪಡೆಯಲು ಲೆಕ್ಕಾಚಾರ ಹಾಕಿತ್ತು.

ಈ ಯೋಜನೆಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿರುವ ರಹಸ್ಯ ಹಾಳೆಗಳ ಪ್ರಸ್ತಾವನೆಯು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

 

ಗ್ರೇಟರ್ ಬೆಂಗಳೂರು ಸಮಗ್ರ ಉಪ ನಗರ ಯೋಜನೆ ಅನುಷ್ಟಾನಗೊಳಿಸಲು ಈಗಾಗಲೇ 7,481 ಎಕರೆ 21 ಗುಂಟೆ ವಿಸ್ತೀರ್ಣ ಜಮೀನು ಭೂ ಸ್ವಾಧೀನಕ್ಕಾಗಿ ಪ್ರಾಥಮಿಕ ಅಧಿಸೂಚನೆಯನ್ನು ವರ್ಷದ ಹಿಂದೆಯೇ ಅಂದರೇ 2025ರ ಮಾರ್ಚ್‌ 13ರಂದು ಕರ್ನಾಟಕ ರಾಜ್ಯಪತ್ರದಲ್ಲಿ ಈಗಾಗಲೇ ಹೊರಡಿಸಿದೆ. ಆದರೆ ಈ ಯೋಜನೆಗೆ ಯಾವುದೇ ಅನುದಾನವನ್ನು ಮೀಸಲಿರಿಸಿಲ್ಲ. ಹೀಗಾಗಿ ಈ ಯೋಜನೆಯನ್ನು ಅನುಷ್ಟಾನಗೊಳಿಸಲೇಬೇಕು ಎಂದು ಹಠಕ್ಕೆ ಬಿದ್ದಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ಬಿಎಂಆರ್‍‌ಡಿಎ ವ್ಯಾಪ್ತಿಯಲ್ಲಿನ ಪ್ರಾಧಿಕಾರಗಳ ಮೂಲಕ ಸ್ವತ್ತುಗಳನ್ನು ಅಡಮಾನವಿರಿಸಿ ಬ್ಯಾಂಕ್‌ಗಳಿಂದ 3,500 ಕೋಟಿ ರು ಸಾಲ ಪಡೆಯಲು ಉದ್ದೇಶಿಸಿರುವುದು ಸಚಿವ ಸಂಪುಟ ಟಿಪ್ಪಣಿ ಹಾಳೆಗಳಿಂದ ತಿಳಿದು ಬಂದಿದೆ.

ಏನಿದು ಯೋಜನೆ?

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂಧ ರಾಮನಗರ ಜಿಲ್ಲೆ (ಪ್ರಸ್ತುತ ಬೆಂಗಳೂರು ದಕ್ಷಿಣ) ರಾಮನಗರ ತಾಲೂಕು ಬಿಡದಿ ಹೋಬಳಿಯ ಬೈರಮಂಗಲ, ಬನ್ನಿಗಿರಿ, ಹೊಸೂರು, ಕೆ ಜಿ ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಅರಳಾಳುಸಂಶದ್ರ, ಕೆಂಪಯ್ಯನಪಾಳ್ಯ, ಕಂಚುಗಾರನಹಳ್ಳಿ ಕಾವಲು, ಮಂಡಲಹಳ್ಳಿ ಹಾಗೂ ಹಾರೋಹಳ್ಳಿ ತಾಲೂಕು ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಭಾಗಶಃ ಗ್ರಾಮ ಸೇರಿ ಒಟ್ಟು 10 ಗ್ರಾಮಗಳ ವ್ಯಾಪ್ತಿಯ ಪ್ರದೇಶದಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪ ನಗರ ಯೋಜನೆ ಅನುಷ್ಠಾನಗೊಳಿಸಲು ಅನುಮೋದನೆ ದೊರೆತಿದೆ.

 

ಒಟ್ಟಾರೆ 7,481 ಎಕರೆ 21 ಗುಂಟೆ ವಿಸ್ತೀರ್ಣ ಹೊಂದಿರುವ ಈ 9 ಗ್ರಾಮಗಳಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪ ನಗರ ರೂಪುಗೊಳ್ಳಲಿದೆ. ಹೊಸೂರಿನಲ್ಲಿ ಅತೀ ಹೆಚ್ಚು ಅಂದರೇ 2,544 ಎಕರೆ 34 ಗುಂಟೆ, ಅರಳಾಳುಸಂದ್ರದಲ್ಲಿ 1,494 ಎಕರೆ 10 ಗುಂಟೆ, ಬೈರಮಂಗಲದಲ್ಲಿ 1,131 ಎಕರೆ 15 ಗುಂಟೆ ಜಮೀನಿದೆ.

 

 

ಈ ಜಮೀನಿನಲ್ಲಿ ಸರ್ಕಾರಕ್ಕೆ ಸೇರಿದ 830 ಎಕರೆ 37 ಗುಂಟೆ ಇದ್ದರೇ ಖಾಸಗಿ ಮಾಲೀಕತ್ವದಲ್ಲಿ 6,650 ಎಕರೆ 33 ಗುಂಟೆ ಜಮೀನಿದೆ. ಬೈರಮಂಗಲದಲ್ಲಿ 1,060 ಎಕರೆ 04 ಗುಂಟೆ, ಅರಳಾಳುಸಂದ್ರದಲ್ಲಿ 1,217 ಎಕರೆ ವಿಸ್ತೀರ್ಣದ ಜಮೀನು ಖಾಸಗಿ ಮಾಲೀಕತ್ವದಲ್ಲಿದೆ.
ಗ್ರಾಮವಾರು ಒಪ್ಪಂದದ ಐ ತೀರ್ಪಿನಡಿಯಲ್ಲಿ ಭೂ ಪರಿಹಾರವನ್ನು ಸರ್ಕಾರವು ನಿರ್ಧರಿಸಿದೆ. ಇದರ ಪ್ರಕಾರ ಎಕರೆಗೆ 2.07 ಕೋಟಿ ರು ನಿಂದ 2.14 ಕೋಟಿ, ರಸ್ತೆ ಬದಿಯಲ್ಲಿನ ಜಮೀನುಗಳಿಗೆ ಎಕರೆಗೆ 2.19 ಕೋಟಿ ರು ನಿಂದ 2.26 ಕೋಟಿ 68 ಲಕ್ಷ ರು ನಿಗದಿಪಡಿಸಿರುವುದು ಸಚಿವ ಸಂಪುಟ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಅಭಿವೃದ್ಧಿಪಡಿಸಿದ ಜಮೀನಿನಲ್ಲಿ ಪ್ರಾಧಿಕಾರಕ್ಕೆ ಲಭ್ಯವಾಗುವ ವಿಸ್ತೀರ್ಣದ ಪೈಕಿ ಸೇ. 44.5ರಷ್ಟು ಅಭಿವೃದ್ಧಿ ಹೊಂದಿ ಮಾರಾಟ ಮಾಡಬಹುದಾದ ವಿಸ್ತೀರ್ಣವು ಲಭ್ಯವಾಗಲಿದೆ ಎಂದು ನಿರೀಕ್ಷಿಸಿದೆ. ಭೂ ಮಾಲೀಕರಿಗೆ ವಸತಿ ನಿವೇಶನಗಳ ರೂಪದಲ್ಲಿ ಪ್ರತಿ ಎಕರೆಗೆ ಭೂ ಮಾಲೀಕರಿಗೆ 8,693 ಚರ ಅಡಿ, ವಾಣಿಜ್ಯ ನಿವೇಶನಗಳ ರೂಪದಲ್ಲಿ ಪ್ರತಿ ಎಕರೆಗೆ 8,723 ಚದರ ಅಡಿ ನೀಡಲಿದೆ.

 

 

ಪ್ರಾಧಿಕಾರದ ಈ ಕ್ರಮಕ್ಕೆ ಬಹುತೇಕ ಭೂ ಮಾಲೀಕರು ಒಪ್ಪಿದ್ದಾರೆ. ಭೂ ಸ್ವಾಧೀನಕ್ಕಾಘಿ ಅಧಿಸೂಚನೆ ಹೊರಡಿಸಿರುವ ಖಾಸಗಿ ಜಮೀನಿನ ಮಾಲೀಕತ್ವದ ಜಮೀನುಗಳ ಪೈಕಿ ಶೇ. 50 ರಷ್ಟು ಜಮೀನಿಗೆ ಹಣದ ರೂಪದಲ್ಲಿ ಪರಿಹಾರ ಹಾಗೂ ಉಳಿಕೆ ಶೇ. 50ರಷ್ಟು ಜಮೀನಿಗೆ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಪಡೆಯಲು ಭೂ ಮಾಲೀಕರು ಇಚ್ಛಿಸಿದ್ದಾರೆ ಎಂದು ಸಚಿವ ಸಂಪುಟ ಟಿಪ್ಪಣಿ ಹಾಳೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಈ ಯೋಜನಾ ಪ್ರದೇಶದಲ್ಲಿ ಇರುವ 830 ಎಕರೆ 37.08 ಗುಂಟೆ ವಿಸ್ತೀರ್ಣದ ಸರ್ಕಾರಿ ಜಮೀನಿಗೆ ಚಾಲ್ತಿ ಮಾರ್ಗಸೂಚಿ ದರಗಳ ಶೇ. 50ರಷ್ಟನ್ನು ಪಾವತಿಸಲಿದೆ. ಈ ಜಮೀನನ್ನು ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಈಗಾಗಲೇ ಅನುಮೋದನೆಯೂ ದೊರೆತಿದೆ. ಇದಕ್ಕಾಗಿ 121.47 ಕೋಟಿ ರು ವೆಚ್ಚವಾಗಲಿದೆ. ಅದೇ ರೀತಿ ಖಾಸಗಿ ಮಾಲೀಕತ್ವದಲ್ಲಿರುವ 6,650 ಎಕರೆ 33 ಗುಂಟೆ ವಿಸ್ತೀರ್ಣದ ಜಮೀನುಗಳಲ್ಲಿ ಶೇ. 50ರಷ್ಟು ವಿಸ್ತೀರ್ಣಕ್ಕೆ ನಗದು ಪರಿಹಾರ ಪಾವತಿಸಲು 8,959.87 ಕೋಟಿ ರು ಸೇರಿದಂತೆ ಒಟ್ಟಾರೆ 9,081.34 ಕೋಟಿ ರು ವೆಚ್ಚವಾಗಲಿದೆ ಎಂದು ಅಂದಾಜಿಸಿದೆ.

ಹಾಗೆಯೇ ಈ ಯೋಜನೆಯಲ್ಲಿ 1,800 ಎಕರೆ ಪ್ರದೇಶದಲ್ಲಿ ವಸತಿ ಬಡಾವಣೆಯನ್ನು 5,681 ಎಕರೆ ಪ್ರದೇಶದಲ್ಲಿ ಏಕ ನಿವೇಶನಗಳನ್ನು ಅಭಿವೃದ್ಧಿಪಡಿಸಲು ಯೋಜಿಸಿದೆ. 1,800 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ವಸತಿ ಬಡಾವಣೆ ರಚಿಸಲಿದೆ. ಮಾರ್ಗಸೂಚಿಗಳ ಅನುಸಾರ ಅಂದಾಜು 1.5 ಕೋಟಿಗಳಷ್ಟು ಹಾಗೂ ಬೃಹತ್‌ ಏಕ ನಿವೇಶನಗಳ ಅಭಿವೃದ್ಧಿಗೆ ಎಕರೆಗೆ 0.66 ಕೋಟಿ ಆಗಲಿದೆ ಎಂದು ಅಂದಾಜಿಸಿದೆ. ರಸ್ತೆ, ಚರಂಡಿ, ನೀರು ಸರಬರಾಜು, ಒಳ ಚರಂಡಿ ಇನ್ನಿತರೆ ಕಾಮಗಾರಿಗಳಿಗೆ ಒಟ್ಟಾರೆ 6,580 ಕೋಟಿ ರು ವೆಚ್ಚವಾಗಲಿದೆ.

 

 

ಸಾಲದ ಮೊತ್ತಕ್ಕೆ ಬಡ್ಡಿ ಎಷ್ಟಿದೆ?

ಈ ಯೋಜನೆ ಅನುಷ್ಠಾನ ಅಭಿವೃದ್ದಿ ಹಂತದಲ್ಲಿ ಸಾಲದ ಮೊತ್ತಕ್ಕೆ ನೀಡಬೇಕಾದ ಬಡ್ಡಿ ಮೊತ್ತ ಅಂದರೇ ಐಡಿಸಿಪಿ (INTEREST DURING CONSTRUCTION PERIOD) ಅನ್ನು ಸರ್ಕಾರವೇ ಭರಿಸಬೇಕಿದೆ. ಮೂರು ವರ್ಷಗಳ ಅವಧಿಗೆ ಒಟ್ಟಾರೆ ಸರ್ಕಾರದಿಂದಲೇ 2,443 ಕೋಟಿ ರು ಕೋರಿದೆ.

 

 

ಆದರೆ ಆರ್ಥಿಕ ಇಲಾಖೆಯು 2,443 ಕೋಟಿ ರು ಅನುದಾನ ನೀಡುವ ಬೇಡಿಕೆಯನ್ನು ಆರ್ಥಿಕ ಇಲಾಖೆಯು ಅಂಗೀಕರಿಸಿಲ್ಲ.
ಈ ಎಲ್ಲಾ ಮೂಲಗಳಿಂದ ಕ್ರೋಢೀಕರಿಸಿದ ಸಂಪನ್ಮೂಲಗಳು ಮತ್ತು ಬಾಹ್ಯ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲಕ್ಕೆ 3,897 ಕೋಟಿ ರು ಬಡ್ಡಿ ಸೇರಿದಂತೆ ಒಟ್ಟಾರೆ 22,001 ಕೋಟಿ ರು ಯೋಜನೆ ವೆಚ್ಚ ಹೊಂದಿದೆ.

 

 

ಆರ್ಥಿಕ ಸಂಪನ್ಮೂಲಗಳೇನು?

ಈ ಯೋಜನೆಗೆ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಇಲಾಖೆಯು ಉದ್ದೇಶಿಸಿದೆ. ಇದರ ಪ್ರಕಾರ ಬೆಂಗಳೂರು ಮಹಾಗನರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಯೋಜನಾ ಪ್ರಾಧಿಕಾರಗಳಲ್ಲಿನ ಆಂತರಿಕ ಸಂಪನ್ಮೂಲವು 1,150 ಕೋಟಿ ರು ಪೈಕಿ 404 ಕೋಟಿ ರು ಜಮೆಯಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 2,000 ಕೋಟಿ ರು.ಗಳನ್ನು ಬಿಡಿಎನ ಈಕ್ವಿಟಿ ರೂಪದಲ್ಲಿ ಪಡೆಯಲು ಅನುಮೋದನೆ ಕೋರಲಿದೆ.

 

 

ಬಿಎಂಆರ್‍‌ಡಿಎ ವ್ಯಾಪ್ತಿಯಲ್ಲಿನ ಸಿ ಎ ನಿವೇಶನಗಳ ನಗದೀಕರಣ, ಅಡಮಾನವಿರಿಸಿ ವಿವಿಧ ಹಣಕಾಸು ಸಂಸ್ಥೆಗಳಿಂದ 3,500 ಕೋಟಿ ರು ಸಾಲ ಪಡೆಯಲಿದೆ. ಇದಕ್ಕೆ ಸರ್ಕಾರದ ಗ್ಯಾರಂಟಿ ಕೋರಲಿದೆ. ಹುಡ್ಕೋ ಬ್ಯಾಂಕ್‌ನಿಂದ 9,011 ಕೋಟಿ ರು ಸಾಲ ಪಡೆಯಲಿದೆ. ಮಂಜೂರಾತಿ ಸಂದರ್ಭದಲ್ಲಿನ ದರಗಳ ಅನುಸಾರ ಬಡ್ಡಿ ದರ ವಿಧಿಸಿ ಸಾಲ ನೀಡಲು ಸಮ್ಮತಿಸಿರುವುದು ಟಿಪ್ಪಣಿಯಿಂದ ಗೊತ್ತಾಗಿದೆ.

ಒಟ್ಟಾರೆ ಇಡೀ ಯೋಜನೆಯ ವೆಚ್ಚವು 15,661 ಕೋಟಿ ರು ಆಗಲಿದೆ.

 

 

ಈ ಯೋಜನೆಗೆ ಬಿಡಿಎಯು 2026-27ರಲ್ಲಿ 1,500 ಕೋಟಿ, 2027-28ರಲ್ಲಿ 500 ಕೋಟಿ ರು ಈಕ್ವಿಟಿ ರೂಪದಲ್ಲಿ ಹೂಡಲಿದೆ. ಈ ಯೋಜನೆಯ ಪಾಲುದಾರನಾಗಿರುವ ಬಿಡಿಎಗೆ 368 ಎಕರೆ ಪ್ರದೇಶವನ್ನು ನೀಡಲಿದೆ. ಈ ಯೋಜನೆಯಿಂದ ಪ್ರಾಧಿಕಾರಕ್ಕೆ ಮೂರನೇ ವರ್ಷದಿಂದ ಅದಾಯ ಬರಲಿದೆ ಎಂದು ಅಂದಾಜಿಸಿದೆ.

33,562 ಕೋಟಿ ಆದಾಯ ಬರಲಿದೆಯೆ?

ಈ ಯೋಜನೆಯಲ್ಲಿ ಅಭಿವೃದ್ಧಿಪಡಿಸಿದ ನಿವೇಶನ, ಜಮೀನು ಮಾರಾಟದಿಂದ 22,654 ಕೋಟಿ, ಆಸ್ತಿ ತೆರಿಗೆಯಿಂದ 5,739 ಕೋಟಿ, ಪ್ರೀಮಿಯಂ ಎಫ್‌ಎಆರ್‍‌ ನಿಂದ 5,169 ಕೋಟಿ ರು ಸೇರಿ 33,562 ಕೋಟಿ ಆದಾಯ ಬರಲಿದೆ ಎಂದು ಅಂದಾಜಿಸಿದೆ.

 

 

ಪ್ರಾಧಿಕಾರಕ್ಕೆ ಲಭ್ಯವಾಗುವ ಮಾರಾಟ ಮಾಡಬಹುದಾದ ಜಮೀನುಗಳಲ್ಲಿ ಕೈಗಾರಿಕೆ ಉದ್ದೇಶದ ಜಮೀನುಗಳನ್ನು ಚದರ ಅಡಿಗೆ 2,220 ರು ಹಾಗೂ ವಾಣಿಜ್ಯ ಜಮೀನುಗಳನ್ನು ಚದರ ಅಡಿಗೆ 2,300 ರು ನಂತೆ ಮಾರಾಟ ಮಾಡಿದರೆ ಈ ಆದಾಯ ಬರಲಿದೆ ಎಂದು ಅಂದಾಜಿಸಿದೆ. ಯೋಜನೆಯ ಒಟ್ಟು ವೆಚ್ಚ ಅಂದರೇ ಬಾಹ್ಯ ಮೂಲಗಳಿಂದ ಪಡೆಯುವ ಸಾಲ ಮತ್ತು ಬಡ್ಡಿ ಸೇರಿ ಅಂದಾಜು 22,001 ಕೋಟಿ ರು ಆಗಲಿದೆ. ಇದರ ಮೂಲಕ 22,654 ಕೋಟಿ ರು ಆದಾಯ ಮತ್ತು ಇದರಿಂದ ಪ್ರಾಧಿಕಾರಕ್ಕೆ 653 ಕೋಟಿ ರು ನಿವ್ವಳ ಆದಾಯ ಬರಲಿದೆ. ಇತರೆ ಆದಾಯ ಮೂಲಗಳಾದ ಆಸ್ತಿ ತೆರಿಗೆ ಮತ್ತು ಪ್ರೀಮಿಯಂ ಎಫ್‌ಎಆರ್‍‌ ಮುಖೇನ ಮುಂದಿನ 15 ವರ್ಷಗಳ ಅವಧಿಯವರೆಗೆ ಒಟ್ಟಾರೆ 33,562 ಕೋಟಿ ರು ಬರಲಿದೆ ಎಂದು ಅಂದಾಜಿಸಿದೆ.

ಸರ್ಕಾರ ಗ್ಯಾರಂಟಿ ನೀಡಿಲ್ಲ-ಬೇಡಿಕೆಯನ್ನೂ ಬೆಂಬಲಿಸಿಲ್ಲ

ಈ ಯೋಜನೆಗಾಗಿ ನಗರಾಭಿವೃದ್ಧಿ ಇಲಾಖೆಯು ಹೆಚ್ಚುವರಿ ಅನುದಾನಕ್ಕೆ ಸರ್ಕಾರದ ಕದ ತಟ್ಟಿದೆ. ಅಲ್ಲದೇ ಯೋಜನೆಗೆ ಸರ್ಕಾರಿ ಖಾತ್ರಿ ನೀಡಬೇಕು ಎಂದು ಕೋರಿದೆ. ಈ ಪ್ರಸ್ತಾವನೆಯನ್ನು ಪರಿಶೀಲಿಸಿರುವ ಆರ್ಥಿಕ ಇಲಾಖೆಯು ಪ್ರಸ್ತುತ ಹಣಕಾಸಿನ ನಿರ್ಬಂಧಗಳ ಹಿನ್ನೆಲೆಯಲ್ಲಿ ಇಲಾಖೆಯ ಈ ಬೇಡಿಕೆಯನ್ನು ಬೆಂಬಲಿಸಿಲ್ಲ.

ಹೆಚ್ಚುವರಿ ರೂ. 2,443 ಕೋಟಿ ನೇರ ಸರ್ಕಾರಿ ಅನುದಾನ/ಬೀಜ ಹಣವಾಗಿ ನೀಡುವ ಬೇಡಿಕೆಯನ್ನು ಅಂಗೀಕರಿಸಲು ಸಾಧ್ಯವಿಲ್ಲ. ಮೊದಲು ಹೇಳಿದಂತೆ, ಇದು ಸಂಪೂರ್ಣವಾಗಿ ವಾಣಿಜ್ಯ ಅಭಿವೃದ್ಧಿಯಾಗಿದ್ದು, ಸರ್ಕಾರದಿಂದ ಭದ್ರಪಡಿಸಲಾಗಬಾರದು. ಇಂತಹ ಹೂಡಿಕೆಗಳಿಗೆ ಬಜೆಟ್‌ನಲ್ಲಿ ಯಾವುದೇ ವ್ಯವಸ್ಥೆ ಇಲ್ಲ ಮತ್ತು ಪ್ರಸ್ತುತ ಹಣಕಾಸು ನಿರ್ಬಂಧಗಳನ್ನು ಗಮನಿಸಿದರೆ, ಇಂತಹ ಬೇಡಿಕೆಯನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

 

 

ಮರುಪಾವತಿ ಅವಧಿಯ ಬಡ್ಡಿ ಹೊರತಾಗಿಸುವುದು

ಒಟ್ಟು ಯೋಜನಾ ವೆಚ್ಚದ ಅಂದಾಜು ರೂ. 22,001 ಕೋಟಿ ಆಗಿದೆ. ಇದರಲ್ಲಿ “ಮರುಪಾವತಿ ಅವಧಿಯ ಬಡ್ಡಿ” ರೂ. 3,897 ಕೋಟಿಗಳನ್ನು ಒಳಗೊಂಡಿದೆ. ಈ ಅಂಶವನ್ನು ಸಚಿವ ಸಂಪುಟ ಅನುಮೋದನೆ ಪಡೆಯುವ ಉದ್ದೇಶಕ್ಕಾಗಿ ಒಟ್ಟು ಅಂದಾಜು ಯೋಜನಾ ವೆಚ್ಚದಿಂದ ಹೊರತಾಗಿಸಬೇಕು. ಮರುಪಾವತಿ ಅವಧಿಯ ಬಡ್ಡಿ ಒಂದು ಕಾರ್ಯಾಚರಣಾ ವೆಚ್ಚವಾಗಿದೆ. ಭವಿಷ್ಯದ ಆದಾಯದಿಂದ ಇದನ್ನು ಭರಿಸುವಂತಾಗಬೇಕು. ಮತ್ತು ಇದು ಪ್ರಾರಂಭಿಕ ಮೂಲಧನ ಯೋಜನಾ ವೆಚ್ಚದ ಭಾಗವಾಗಿರಬಾರದು ಎಂದು ಸಲಹೆ ನೀಡಿದೆ.

ಪಿಪಿಪಿ ಮಾದರಿಯನ್ನು ಅಂಗೀಕರಿಸಿ

ರಾಜ್ಯದ ಖಜಾನೆಯ ಮೇಲೆ ಹಣಕಾಸು ಭಾರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ರಚನಾತ್ಮಕವಾಗಿ ಪರಿಷ್ಕರಿಸಬೇಕು ಎಂದು ಆರ್ಥಿಕ ಇಲಾಖೆಯು ಸಲಹೆ ನೀಡಿದೆ. ಖಾಸಗಿ ಭಾಗಸ್ಫೂರ್ತಿ ಮೂಲಸೌಕರ್ಯ ಅಭಿವೃದ್ಧಿ ವೆಚ್ಚವನ್ನು ಹೊತ್ತುಕೊಳ್ಳಬೇಕು ಮತ್ತು ತನ್ನ ಹೂಡಿಕೆಯನ್ನು ವಾಣಿಜ್ಯ/ಉದ್ಯಮಿಕ ಜಾಗಗಳ ದೀರ್ಘಾವಧಿ ಬಾಡಿಗೆ/ಮಾರಾಟದ ಮೂಲಕ ಹಾಗೂ ಸರ್ಕಾರಕ್ಕೆ ಸೂಕ್ತ ಆದಾಯ ಹಂಚಿಕೆ ಮೂಲಕ ವಸೂಲು ಮಾಡಬೇಕು. ಇದು ಅಭಿವೃದ್ಧಿ ಹಂತದಲ್ಲಿ “ಸರ್ಕಾರದ ಶೂನ್ಯ ಹೊಣೆಗಾರಿಕೆ” ಯನ್ನು ಖಚಿತಪಡಿಸುತ್ತದೆ. ಮತ್ತು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದರ ಮೇಲೆ ಖಾಸಗಿ ಭಾಗಸ್ಫೂರ್ತಿಯ ಮೂಲಧನ ವಸೂಲಾತಿ ಮೇಲೆ ಅವಲಂಬಿತವಾಗಿರುವುದರಿಂದ ಕಾರ್ಯಕ್ಷಮತೆಯ ಆಧಾರಿತ ಪ್ರೋತ್ಸಾಹವನ್ನು ಉಂಟು ಮಾಡಲಿದೆ ಎಂದು ಅಭಿಪ್ರಾಯಿಸಿದೆ.

 

 

ಸರ್ಕಾರದ ಭರವಸೆ ಏನಿದೆ?

ಇಲಾಖೆಯು ಕೋರಿರುವ 12,511 ಕೋಟಿ ಮೊತ್ತದ ಸರ್ಕಾರದ ಭರವಸೆಗಳ ಬೇಡಿಕೆ ಅನುಕೂಲಕರವಲ್ಲ. ಜಿಬಿಡಿಎ ತನ್ನ ಸ್ವಂತ ಆಂತರಿಕ ಆದಾಯ ಮೂಲಗಳ ಮೂಲಕ ಹಾಗೂ ಇತರ ಬಿಎಂಆರ್‌ಡಿಎ ಯೋಜನಾ ಪ್ರಾಧಿಕಾರಗಳಿಂದ ಶೇ 50ರಷ್ಟು ನಿಧಿಗಳ ವರ್ಗಾವಣೆಯ ಮೂಲಕ (FD/147/EXP9/2026-EXP9-FINANCE DEPT.SEC I/1073737/2026) ಯೋಜನೆಯನ್ನು ಜಾರಿಗೆ ತರುವ ಬದ್ಧತೆಯ ಆಧಾರದ ಮೇಲೆ ನೀಡಲ್ಪಟ್ಟಿದೆ. ಈ ಯೋಜನೆ ಸಂಪೂರ್ಣವಾಗಿ ವಾಣಿಜ್ಯ ಉದ್ದೇಶ ಹೊಂದಿದ್ದು, ರಾಜ್ಯದ ಲೆಕ್ಕಪತ್ರದಲ್ಲಿ ಅನಿಶ್ಚಿತ ಬಾಧ್ಯತೆಗಳನ್ನು ಸೇರಿಸದೇ ಸ್ವಯಂ-ಪೋಷಿತ ಮಾದರಿಯಾಗಿ ರಚಿಸಬೇಕು ಎಂದು ಹೇಳಿದೆ.

ಕರ್ನಾಟಕ ಸರ್ಕಾರ ವಾಣಿಜ್ಯ ಯೋಜನೆಗಳನ್ನು ಜಾರಿಗೆ ತರಲು ಬಿಡಿಎ ಅಥವಾ ಕೆಐಎಡಿಬಿ ಮುಂತಾದ ಸಂಸ್ಥೆಗಳಿಗೆ ಹಣಕಾಸು ಒದಗಿಸುವುದಿಲ್ಲ ಎಂಬುದು ಗಮನಾರ್ಹವಾಗಿದೆ. ಇಂತಹ ಯೋಜನೆಗಳು ತಮ್ಮ ಸ್ವಂತ ಸಾಮರ್ಥ್ಯದಲ್ಲಿ ನಿಲ್ಲಬೇಕು ಮತ್ತು ಸ್ವಯಂ-ಪೋಷಿತವಾಗಿರಬೇಕು. ಸರ್ಕಾರದ ಭರವಸೆಯ ಬದಲಾಗಿ, ಸ್ವಾಧೀನಪಡಿಸಿಕೊಳ್ಳಲಾಗುತ್ತಿರುವ ಭೂಮಿಯನ್ನು ಖಾಸಗಿ ರಿಯಲ್ ಎಸ್ಟೇಟ್ ಅಭಿವೃದ್ಧಿಗಳಲ್ಲಿ ಅನುಸರಿಸುವ ಪದ್ಧತಿಯಂತೆ ಸಾಲ ನೀಡುವ ಸಂಸ್ಥೆಗಳ ಬಳಿ ಗಿರವಿ ಇಡಬಹುದು ಎಂದು ಸಲಹೆ ನೀಡಿದೆ.
ಹಂತ ಹಂತವಾಗಿ ಜಾರಿಗೆ ತರಬೇಕು.

 

 

ಹಣಕಾಸು ಶಿಸ್ತು ಕಾಪಾಡಲು ಮತ್ತು ಮಾರುಕಟ್ಟೆ ಅಪಾಯವನ್ನು ಕಡಿಮೆಗೊಳಿಸಲು, ಯೋಜನೆಯನ್ನು ಹಂತ ಹಂತವಾಗಿ ಜಾರಿಗೆ ತರಬೇಕು. ಯೋಜನೆಯನ್ನು ಸಣ್ಣ ಮತ್ತು ನಿರ್ವಹಣೆಗೆ ಅನುಕೂಲಕರ ಭಾಗಗಳಾಗಿ ಜಾರಿಗೆ ತರುವುದರಿಂದ ಪ್ರಾಧಿಕಾರವು ರಿಯಲ್ ಎಸ್ಟೇಟ್ ಬೇಡಿಕೆಯನ್ನು ಪರಿಣಾಮಕಾರಿಯಾಗಿ ಅಳೆಯಲು ಮತ್ತು ಮೌಲ್ಯಮಾಪನ ಮಾಡಲು ಸಾಧ್ಯವಾಗುತ್ತದೆ ಎಂದಿದೆ.

ವಿಶೇಷವಾಗಿ, ಕೆಎಸ್‌ಐಐಡಿಸಿ ಯ 400 ಎಕರೆ ಬೆಂಗಳೂರು ಸಿಗ್ನೇಚರ್ ಬಿಸಿನೆಸ್ ಪಾರ್ಕ್ ಮತ್ತು ಬಿಐಎಎಲ್‌ನ 300 ಏಕರೆ ಬಿಸಿನೆಸ್ ಪಾರ್ಕ್ ವಿಮಾನ ನಿಲ್ದಾಣದ ಸಮೀಪದಲ್ಲಿದ್ದರೂ ಹಂತ ಹಂತವಾಗಿ ಅಭಿವೃದ್ಧಿಯಾಗುತ್ತಿವೆ. ಇದೇ ರೀತಿಯ ತಂತ್ರವನ್ನು ಅನುಸರಿಸುವುದರಿಂದ ಹಂತ ಹಂತವಾಗಿ ನಿಧಿಗಳನ್ನು ಸಂಗ್ರಹಿಸಲು ಮತ್ತು ಕಾಲಕ್ರಮೇಣ ಭೂಮಿಯ ಸಂಪೂರ್ಣ ಮೌಲ್ಯವನ್ನು ಸಾಧಿಸಲು ಸಹಾಯವಾಗುತ್ತದೆ ಎಂದು ಅಭಿಪ್ರಾಯಿಸಿದೆ.

ಸೀಡ್‌ ಫಂಡ್‌ ಮತ್ತು ಇಕ್ವಿಟಿ

ಭೂಮಿ ಸ್ವಾಧೀನಕ್ಕಾಗಿ ಪ್ರಾಥಮಿಕ ಸೀಡ್‌ ಫಂಡ್‌ಗಾಗಿ ಬಿಡಿಎ ಮತ್ತು ಬಿಎಂಆರ್‍‌ಡಿಎ ಮೂಲಗಳಿಂದ ದೊರೆಯುವ ಕೊಡುಗೆಯನ್ನು ಬಳಸಬೇಕು. ಹೆಚ್ಚುವರಿ ರೂ. 2,443 ಕೋಟಿ ನೇರ ಸರ್ಕಾರಿ ಅನುದಾನ/ ಸೀಡ್‌ ಫಂಡ್‌ ರೂಪದಲ್ಲಿ ನೀಡುವ ಬೇಡಿಕೆಯನ್ನು ಅಂಗೀಕರಿಸಲು ಸಾಧ್ಯವಿಲ್ಲ. ಮೊದಲು ಹೇಳಿದಂತೆ, ಇದು ಸಂಪೂರ್ಣವಾಗಿ ವಾಣಿಜ್ಯ ಅಭಿವೃದ್ಧಿಯಾಗಿದೆ. ಸರ್ಕಾರದಿಂದ ಭದ್ರಪಡಿಸಲಾಗದು. ಇಂತಹ ಹೂಡಿಕೆಗಳಿಗೆ ಬಜೆಟ್‌ನಲ್ಲಿ ಯಾವುದೇ ವ್ಯವಸ್ಥೆ ಇಲ್ಲ ಮತ್ತು ಪ್ರಸ್ತುತ ಹಣಕಾಸು ನಿರ್ಬಂಧಗಳನ್ನು ಗಮನಿಸಿದರೆ, ಇಂತಹ ಬೇಡಿಕೆಯನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಅನುಮೋದಿಸಿದ್ದಾರೆ.

 

 

ಪಿಪಿಪಿ ಮಾದರಿ ಕಷ್ಟಸಾಧ್ಯವೆಂದ ನಗರಾಭಿವೃದ್ಧಿ ಇಲಾಖೆ

ನಗರಾಭಿವೃದ್ಧಿ ಇಲಾಖೆಯು ಆರ್ಥಿಕ ಇಲಾಖೆಯ ಅಭಿಪ್ರಾಯವನ್ನು ಒಪ್ಪಿದೆ. ಯೋಜನೆಯ ಒಟ್ಟು ಅಂದಾಜು ವೆಚ್ಚ 18,104 ಕೋಟಿ ಎಂದು ಪರಿಗಣಿಸಿದೆ. ಪಿಪಿಪಿ ಮಾದರಿ ಅನುಸರಿಸಲು ನಗರಾಭಿವೃದ್ಧಿ ಇಲಾಖೆಯು ಒಪ್ಪಿಲ್ಲ. ‘ಯೋಜನೆಯ ಬಹುಪಾಲು ವೆಚ್ಚವು (ಶೇ.60ಕ್ಕಿಂತ ಹೆಚ್ಚು) ಭೂ ಸ್ವಾಧೀನ ಮತ್ತು ಭೂ ಮಾಲೀಕರಿಗೆ ಪರಿಹಾರ (ನಿವೇಶನ) ನೀಡುವುದಕ್ಕೆ ಸಂಬಂಧಿಸಿದ್ದು ಇದನ್ನು ಪಿಪಿಪಿ ಮಾದರಿಯಲ್ಲಿ ಕಷ್ಟಸಾಧ್ಯವಾಗಲಿದೆ,’ ಎಂದು ಹೇಳಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಅಭಿವೃದ್ಧಿಪಡಿಸಿದ ನಿವೇಶನಗಳ ಹರಾಜು ಅಥವಾ ಟೆಂಡರ್ ಪ್ರಕ್ರಿಯ ಮೂಲಕ ಆದಾಯ ನಿರೀಕ್ಷಿಸಿದೆಎ. ಇದರಿಂದ ಸಂಬಂಧಿಸಿದ ಭೂ ಸ್ವಾಧೀನ ವೆಚ್ಚವನ್ನು ಸಹ ಹಿಭರಿಸಲು ಸಾಧ್ಯವಾಗಲಿದೆ ಪ್ರಾಥಮಿಕ ಹಂತದಲ್ಲಿಯೇ ಖಾಸಗಿ ಅಭಿವೃದ್ಧಿದಾರರ ಮುಖೇನ ಅಭಿವೃದ್ಧಿಪಡಿಸಿದಲ್ಲಿ ನಿವೇಶನ, ಜಮೀನುಗಳನ್ನು ಸಾಕಷ್ಟು ಕಡಿಮೆ ದರದಲ್ಲಿ ಅಭಿವೃದ್ಧಿದಾರರಿಗೆ ನೀಡಬೇಕಾದ ಪರಿಸ್ಥಿತಿ ಉದ್ಭವಿಸಲಿದೆ ಎಂದು ಊಹಿಸಿರುವುದು ತಿಳಿದು ಬಂದಿದೆ.

ಈ ಯೋಜನೆಯಲ್ಲಿ ಮೂಲತಃ ಭೂ ಸ್ವಾಧೀನ ವೆಚ್ಚವೇ ಬಹುಪಾಲು ಇದೆ. ಹೀಗಾಗಿ ಖಾಸಗಿ ಹೂಡಿಕೆದಾರರನ್ನು ಅವಲಂಬಿಸಿವುದು ಕಷ್ಟಸಾಧ್ಯವಾಗಲಿದೆ. ಈ ಹಿಂದೆ ಇದೇ ಯೋಜನೆಗೆ ಡಿಎಲ್‌ಎಫ್‌ ಕಂಪನಿಯನ್ನು ಖಾಸಗಿ ಪಾಲುದಾರರನ್ನಾಘಿ ಗುರುತಿಸಿ ಅನುಮೋದನೆ ನೀಡಿತ್ತು. ಆದರೆ ಖಾಸಗಿ ಪಾಲುದಾರರು ಈ ಯೋಜನೆಯನ್ನು ಅನುಷ್ಠಾನಗೊಳಿಸಲು ವಿಳಂಬ ಮಾಡಿದ್ದರಲ್ಲದೇ ಹಿಂಜರಿದಿದ್ದರು. ಹೀಗಾಗಿ ಈ ಯೋಜನೆಯು ದಶಕಕ್ಕೂ ಮೀರಿ ಸ್ಥಗಿತಗೊಂಡಿತ್ತು ಎಂದು ಪಿಪಿಪಿ ಮಾದರಿಯನ್ನು ನಗರಾಭಿವೃದ್ಧಿ ಇಲಾಖೆಯು ತಳ್ಳಿ ಹಾಕಿದೆ.

 

 

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಯೋಜನೆ ವೆಚ್ಚವನ್ನು ಮರು ಪಡೆಯುವ ಸಾಮರ್ಥ್ಯ ಹೊಂದಿದೆ. ಆದರೂ ಅನಿರೀಕ್ಷಿತ ಪರಿಸ್ಥಿತಿಗಳಲ್ಲಿ ಮಾತ್ರ step-in ಮಾಡಲು ಸರ್ಕಾರದ ಭರವಸೆ ಕೋರಿದೆ. ಈ ಹಿನ್ನೆಲೆಯಲ್ಲಿ ಹುಡ್ಕೋದಿಂದ ಪಡೆಯುವ 9,011 ಕೋಟಿ ರು ಸಾಲಕ್ಕೆ ಮಾತ್ರ ಸರ್ಕಾರದ ಗ್ಯಾರಂಟಿ ನೀಡಬೇಕು ಎಂದು ಕೋರಿದೆ.

ಆದಾಯದ ಮೂಲವೇ ಇಲ್ಲ

ಈ ಯೋಜನೆ ಅನುಷ್ಠಾನಗೊಳಿಸಲು 2024-25ನೇ ಸಾಲಿನ ಆಯವ್ಯಯದ 270ನೇ ಕಂಡಿಕೆಯಲ್ಲಿ ಘೋಷಿಸಿದೆ. ಆದರೆ ಯಾವುದೇ ಅನುದಾನವನ್ನೂ ಮೀಸಲಿರಿಸಿಲ್ಲ. ಅಲ್ಲದೇ ಹೆಚ್ಚಿನ ಆರ್ಥಿಕ ಸಂಪನ್ಮೂಲ ಕ್ರೋಢಿಕರಿಸಿಲು ಯಾವುದೇ ಆದಾಯದ ಮೂಲಗಳು ಇಲ್ಲ. ಹೀಗಾಗಿ ಸೀಡ್‌ ಫಂಡ್‌ ಮೂಲಕ ಆರ್ಥಿಕ ಬೆಂಬಲ ಬೇಕು ಎಂದು ಸಮರ್ಥಿಸಿಕೊಂಡಿರುವುದು ಗೊತ್ತಾಗಿದೆ.

ಆರ್ಥಿಕ ಇಲಾಖೆಯ ಬದಲಾದ ಅಭಿಪ್ರಾಯದಲ್ಲೇನಿದೆ?

ಈ  ಹಿಂದಿನ ಅನುಭವವನ್ನು ಗಮನದಲ್ಲಿಟ್ಟುಕೊಂಡು ಪಿಪಿಪಿ  ಮಾದರಿಯಲ್ಲಿ ಮುಂದುವರೆಯುವುದು ಸೂಕ್ತ ನಿರ್ಧಾರವಲ್ಲ ಎಂದು ಆಡಳಿತ ಇಲಾಖೆಯು ವಿವರಿಸಿದೆ. ಈ ಕಾರಣಗಳಿಂದ, ಆಡಳಿತ ಇಲಾಖೆಯು  ನೀಡಿದ ಇಪಿಸಿ  ಮಾದರಿಯಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳುವ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಒಪ್ಪಿಕೊಂಡಿದೆ. ಪಿಪಿಪಿ ಮಾದರಿಯನ್ನು ಕೈ ಬಿಡಬಹುದು ಎಂದು ಆರ್ಥಿಕ ಇಲಾಖೆಯು ತನ್ನ ಎರಡನೇ ಅಭಿಪ್ರಾಯದಲ್ಲಿ ವಿವರಿಸಿದೆ.

 

 

ಹುಡ್ಕೋ ಸಂಸ್ಥೆಯು ಸರ್ಕಾರದ ಭರವಸೆ ಇಲ್ಲದೆ ರೂ. 5050 ಕೋಟಿವರೆಗೆ ಸಾಲ ನೀಡಲು ಸಾಧ್ಯವಿದೆ ಎಂದು ಸೂಚಿಸಿದೆ.   ಸರ್ಕಾರದ ಭರವಸೆಯನ್ನು ಕಡಿಮೆಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಈ ಅವಕಾಶವನ್ನು ಬಳಸಿಕೊಳ್ಳಬೇಕು.  ಜಿಬಿಎಯು  5,050 ಕೋಟಿಯನ್ನು ಸರ್ಕಾರದ ಭರವಸೆ ಇಲ್ಲದೆ ಪಡೆಯಬೇಕು. ಮತ್ತು ಉಳಿದ 3,961 ಕೋಟಿಗೆ ಮಾತ್ರ ಸರ್ಕಾರದ ಭರವಸೆ ನೀಡಬೇಕು. ಆಡಳಿತ ಇಲಾಖೆಯು  ಸಾಲವನ್ನು ಹಂತ ಹಂತವಾಗಿ ಬಿಡುಗಡೆ ಮಾಡುವಂತೆ ಸೂಚಿಸಿದೆ.  ಸರ್ಕಾರದ ಭರವಸೆ ಇಲ್ಲದ ಸಾಲವನ್ನು ಮೊದಲು  ಸಂಪೂರ್ಣವಾಗಿ ಬಳಸಿಕೊಂಡ ನಂತರ ಮಾತ್ರ ಭರವಸೆಯ ಸಾಲವನ್ನು ಪಡೆಯಬೇಕು ಎಂದು ಹೇಳಿದೆ.  ಇದಲ್ಲದೆ, ಸಾಲದ ಸೇವೆಗಾಗಿ ಒಂದು ಎಸ್ಕ್ರೋ ಖಾತೆಯನ್ನು ತೆರೆಯಬೇಕು ಎಂದು ಸೂಚಿಸಲಾಗಿದೆ.

ಹುಡ್ಕೋ ಬ್ಯಾಂಕ್ ಸಾಲಗಳು ಮತ್ತು ಎಲ್ಲಾ ಯೋಜನಾ ಆದಾಯಗಳನ್ನು ಮೊದಲಿಗೆ ಹುಡ್ಕೋ /ಬ್ಯಾಂಕ್ ಸಾಲಗಳ ಸೇವೆಗೆ ಮೀಸಲಿಡಬೇಕು ಎಂದು ಹೇಳಿದೆ.

 

 

ಸಚಿವ ಸಂಪುಟ ಸಭೆಯಲ್ಲಿ ಆಡಳಿತ ಇಲಾಖೆಯು  ವಿವರಿಸಿರುವ ಪ್ರಕಾರ  ಭೂಸ್ವಾಧೀನವನ್ನು ಒಂದೇ ಬಾರಿ ಪೂರ್ಣಗೊಳಿಸಬೇಕಿದೆ. ಹೀಗಾಗಿ  ಯೋಜನೆಯನ್ನು ಹಂತಗೊಳಿಸುವುದು ಕಷ್ಟಕರವಾಗಿದೆ. ಆದರೂ ಆಡಳಿತ ಇಲಾಖೆಯು ಯೋಜನೆಯನ್ನು ಹಂತಗೊಳಿಸುವುದು ಸೂಕ್ತ ಎಂದು ಪುನರುಚ್ಚರಿಸಿದೆ.  ಚಿಕ್ಕ ಹಂತಗಳಲ್ಲಿ ಇದನ್ನು ಕೈಗೆತ್ತಿಕೊಳ್ಳಬಹುದು ಎಂದು ಸೂಚಿಸಲಾಗಿದೆ.  ಅಂದರೆ ಮೊದಲ ಹಂತದಲ್ಲಿ ಶೇ.  70ರಷ್ಟು  ಪೂರ್ಣಗೊಂಡ ನಂತರ ಮತ್ತು ಈ ಸ್ಥಳಗಳ  ಶೇ.  70ರ ಹಂಚಿಕೆಗಾಗಿ ದೃಢವಾದ ಬದ್ಧತೆಗಳಿರುವ ಸಂದರ್ಭದಲ್ಲಿ ಎರಡನೇ ಹಂತವನ್ನು ಪ್ರಾರಂಭಿಸಬಹುದು. ಎರಡನೇ ಹಂತವನ್ನು ಮೊದಲ ಹಂತದ ಆರಂಭದಿಂದ ಎರಡು ವರ್ಷಗಳ ಒಳಗೆ ಕೈಗೆತ್ತಿಕೊಳ್ಳಬಹುದು ಎಂದು ಸಲಹೆ ನೀಡಿದೆ.

ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಣಾಮಕಾರಿಯಾಗಿ ನಿರ್ವಹಣೆಯಾಗುತ್ತವೆ. ಮತ್ತು ಬಂಡವಾಳದ ಪರಿವರ್ತನೆ ಸಾಧ್ಯವಾಗುತ್ತದೆ.  ಹಾಗೂ ಸಾಲಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ ಎಂದು ಹೇಳಿದೆ.

ಈ ಮೊದಲು ಹುಡ್ಕೋದಿಂದ 12,511 ಕೋಟಿ ರು ಸಾಲ ಮಂಜೂರಾಗಿತ್ತು. ಈ ಮೊತ್ತದ ಸಾಲದ ಪೈಕಿ ಬಿಎಂಆರ್‍‌ಡಿಎ ಆಸ್ತಿಯನ್ನು ಅಡಮಾನವಿರಿಸುವ ಉದ್ದೇಶವಿತ್ತು. ಅಡಮಾನವಿರಿಸಿದ ಸ್ವತ್ತುಗಳಿಂದ 3,500 ಕೋಟಿ ರು ಸಾಲ ಎತ್ತುವ ಅಂದಾಜಿಸಿತ್ತು. ಸರ್ಕಾರದಿಂದ 9,011 ಕೋಟಿ ರು ಸಾಲಕ್ಕೆ ಗ್ಯಾರಂಟಿ ಕೋರಿತ್ತು. ಅಲ್ಲದೇ ಬಿಎಂಆರ್‍‌ಡಿಎ ವ್ಯಾಪ್ತಿಯಲ್ಲಿ ಲಭ್ಯವಿದ್ದ ಆಸ್ತಿಗಳನ್ನು   ಮರು ಮೌಲ್ಯಮಾಪನ ಮಾಡಿದಲ್ಲಿ ಅಡಮಾನ ರೂಪದಲ್ಲಿ 3,650 ಕೋಟಿಯಷ್ಟು ಸಾಲ ಪಡೆಯಬಹುದು ಎಂದು ಲೆಕ್ಕಾಚಾರ ಹಾಕಿತ್ತು.

 

 

ಆದರೆ ಹೆಚ್ಚುವರಿ ಅಡಮಾನ ಸಾಲ ಪಡೆದಲಯ ಬಿಎಂಆರ್‍‌ಡಿಎಲ್ಲಿ ಆಸ್ತಿ ಸಂಪನ್ಮೂಲವೇ ಲಭ್ಯವಿಲ್ಲ. ಹೀಗಾಗಿ 9,011 ಕೋಟಿ ರು ಮೊತ್ತಕ್ಕೆ ಸರ್ಕಾರದ ಗ್ಯಾರಂಟಿ ಕೋರಿತ್ತು. ಇಲ್ಲವಾದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಅಗತ್ಯವಿರುವ ಆರ್ಥಿಕ ಸಂಪನ್ಮೂಲವು ಲಭ್ಯವಾಗುವುದಿಲ್ಲ ಎಂದು ನಗರಾಭಿವೃದ್ಧಿ ಇಲಾಖೆಯು ಹೇಳಿತ್ತು.

ಸಮಗ್ರ ಉಪನಗರ ಯೋಜನೆ; ಸಾಮಾಜಿಕ ಅಧ್ಯಯನ, ಪರಿಸರ ಅಧ್ಯಯನದಿಂದ ವಿನಾಯಿತಿ! ಪತ್ರ ಮುನ್ನೆಲೆಗೆ

ಸಮಗ್ರ ಉಪ ನಗರ ಯೋಜನೆಗೆ ಸಂಬಂಧಿಸಿದಂತೆ ಸಾಮಾಜಿಕ ಮತ್ತು ಪರಿಸರ ಅಧ್ಯಯನದಿಂದ ವಿನಾಯಿತಿ ನೀಡಬೇಕು ಎಂದು ಕೋರಿದ್ದ ಪ್ರಸ್ತಾವವನ್ನು ನಗರಾಭಿವೃದ್ದಿ ಇಲಾಖೆಯು ತಳ್ಳಿ ಹಾಕಿತ್ತು. ಈ ಕುರಿತು ದಿ ಫೈಲ್‌ 2025ರ ಜನವರಿ 30ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

Hot this week

ಬಿಡಿಎ ಇಂಜಿನಿಯರ್ ಮೆಂಬರ್ ಹುದ್ದೆಗೆ ಪ್ರವೀಣ್‌ ಲಿಂಗಯ್ಯ ನೇಮಕದಲ್ಲಿ ಡಿಸಿಎಂ ಮೇಲುಗೈ, ಜಾರಕಿಹೊಳಿ ಮೌನ; ಕೆಟ್ಟ ಪೂರ್ವ ನಿದರ್ಶನಕ್ಕೆ ನಾಂದಿ ಹಾಡಿದ ಸಿಎಂ

ಬೆಂಗಳೂರು;  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿರುವ ಇಂಜಿನಿಯರ್ ಮೆಂಬರ್ ಹುದ್ದೆಗೆ ಪ್ರವೀಣ್‌ ಲಿಂಗಯ್ಯ...

ಕಲ್ಬುರ್ಗಿ ಡಿಸಿಸಿ ಬ್ಯಾಂಕ್‌ನಲ್ಲಿ ಬಹು ಕೋಟಿ ಅಕ್ರಮ; ತನಿಖೆಗೆ ಮುಂದಾಗದ ಸರ್ಕಾರ, ತೆವಳುತ್ತಿದೆ ಕಡತ

ಬೆಂಗಳೂರು;  ಕಲಬುರಗಿ-ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಗಳ...

ಬಿಡಿಎ ಇಂಜಿನಿಯರ್ ಮೆಂಬರ್ ಹುದ್ದೆಗೆ ಪ್ರವೀಣ್‌ ಲಿಂಗಯ್ಯ ನೇಮಕಕ್ಕೆ ಒತ್ತಡ; ವಿವಾದಕ್ಕೆ ದಾರಿಯಾದ ಡಿಸಿಎಂ ಟಿಪ್ಪಣಿ, ನಿಯಮ ಉಲ್ಲಂಘನೆ?

ಬೆಂಗಳೂರು; ಬಿಬಿಎಂಪಿ ವೃಂದಕ್ಕೆ ಸೇರಿರುವ ಮುಖ್ಯ ಇಂಜಿನಿಯರ್  ಪ್ರವೀಣ್ ಲಿಂಗಯ್ಯ ಅವರನ್ನು...

ಆಧಾರ್ ಕಾರ್ಡ್‌ಗಿಂತಲೂ ಶಕ್ತಿ ಸ್ಮಾರ್ಟ್‌ ದುಬಾರಿ, ಎಸ್‌ಪಿವಿ ರಚನೆಯಾದರೂ ಸಿಗದ ಕಾರ್ಡ್‌; 185 ಕೋಟಿ ವೆಚ್ಚ ಭರಿಸುವವರಾರು?

ಬೆಂಗಳೂರು; ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ  ಸೌಲಭ್ಯ ಕಲ್ಪಿಸುವ 'ಶಕ್ತಿ'...

ಟೆಲಿಕಾಂ ಕಂಪನಿಯಿಂದ ವಿಧಾನಸೌಧ ಟರೇಸ್‌ ಅನಧಿಕೃತ ಬಳಕೆ; ವಸೂಲಾಗದ ನೆಲಬಾಡಿಗೆ, ನಿಯಮ ಉಲ್ಲಂಘಿಸಿದ್ದರೂ ಕ್ರಮವಿಲ್ಲ

ಬೆಂಗಳೂರು; ಟೆಲಿಕಾಂ ಮೂಲಸೌಕರ್ಯ ಕಂಪನಿಗಳಲ್ಲಿ ಖ್ಯಾತಿ ಹೊಂದಿರುವ ಆಂಧ್ರ ಪ್ರದೇಶ ಮೂಲದ...

Topics

ಬಿಡಿಎ ಇಂಜಿನಿಯರ್ ಮೆಂಬರ್ ಹುದ್ದೆಗೆ ಪ್ರವೀಣ್‌ ಲಿಂಗಯ್ಯ ನೇಮಕದಲ್ಲಿ ಡಿಸಿಎಂ ಮೇಲುಗೈ, ಜಾರಕಿಹೊಳಿ ಮೌನ; ಕೆಟ್ಟ ಪೂರ್ವ ನಿದರ್ಶನಕ್ಕೆ ನಾಂದಿ ಹಾಡಿದ ಸಿಎಂ

ಬೆಂಗಳೂರು;  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿರುವ ಇಂಜಿನಿಯರ್ ಮೆಂಬರ್ ಹುದ್ದೆಗೆ ಪ್ರವೀಣ್‌ ಲಿಂಗಯ್ಯ...

ಕಲ್ಬುರ್ಗಿ ಡಿಸಿಸಿ ಬ್ಯಾಂಕ್‌ನಲ್ಲಿ ಬಹು ಕೋಟಿ ಅಕ್ರಮ; ತನಿಖೆಗೆ ಮುಂದಾಗದ ಸರ್ಕಾರ, ತೆವಳುತ್ತಿದೆ ಕಡತ

ಬೆಂಗಳೂರು;  ಕಲಬುರಗಿ-ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಗಳ...

ಬಿಡಿಎ ಇಂಜಿನಿಯರ್ ಮೆಂಬರ್ ಹುದ್ದೆಗೆ ಪ್ರವೀಣ್‌ ಲಿಂಗಯ್ಯ ನೇಮಕಕ್ಕೆ ಒತ್ತಡ; ವಿವಾದಕ್ಕೆ ದಾರಿಯಾದ ಡಿಸಿಎಂ ಟಿಪ್ಪಣಿ, ನಿಯಮ ಉಲ್ಲಂಘನೆ?

ಬೆಂಗಳೂರು; ಬಿಬಿಎಂಪಿ ವೃಂದಕ್ಕೆ ಸೇರಿರುವ ಮುಖ್ಯ ಇಂಜಿನಿಯರ್  ಪ್ರವೀಣ್ ಲಿಂಗಯ್ಯ ಅವರನ್ನು...

ಆಧಾರ್ ಕಾರ್ಡ್‌ಗಿಂತಲೂ ಶಕ್ತಿ ಸ್ಮಾರ್ಟ್‌ ದುಬಾರಿ, ಎಸ್‌ಪಿವಿ ರಚನೆಯಾದರೂ ಸಿಗದ ಕಾರ್ಡ್‌; 185 ಕೋಟಿ ವೆಚ್ಚ ಭರಿಸುವವರಾರು?

ಬೆಂಗಳೂರು; ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ  ಸೌಲಭ್ಯ ಕಲ್ಪಿಸುವ 'ಶಕ್ತಿ'...

ಟೆಲಿಕಾಂ ಕಂಪನಿಯಿಂದ ವಿಧಾನಸೌಧ ಟರೇಸ್‌ ಅನಧಿಕೃತ ಬಳಕೆ; ವಸೂಲಾಗದ ನೆಲಬಾಡಿಗೆ, ನಿಯಮ ಉಲ್ಲಂಘಿಸಿದ್ದರೂ ಕ್ರಮವಿಲ್ಲ

ಬೆಂಗಳೂರು; ಟೆಲಿಕಾಂ ಮೂಲಸೌಕರ್ಯ ಕಂಪನಿಗಳಲ್ಲಿ ಖ್ಯಾತಿ ಹೊಂದಿರುವ ಆಂಧ್ರ ಪ್ರದೇಶ ಮೂಲದ...

ನೀಟ್‌, ಕೆ-ಸಿಇಟಿ ತರಬೇತಿ; ಅಲ್ಪಸಂಖ್ಯಾತರ ಇಲಾಖೆಯಲ್ಲಿ ಟೆಂಡರ್ ನಿಯಮ ಉಲ್ಲಂಘನೆ, ನಿಯಮಬಾಹಿರ ಚಟುವಟಿಕೆ, ಸರ್ಕಾರಕ್ಕೆ ಲೀಗಲ್ ನೋಟೀಸ್‌

ಬೆಂಗಳೂರು; ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ವಸತಿ ಕಾಲೇಜು ವಿದ್ಯಾರ್ಥಿಗಳಿಗೆ ಆಫ್‌ಲೈನ್ ಮಾದರಿಯಲ್ಲಿ...

ವರ್ಗಾವಣೆ ರದ್ದುಗೊಳಿಸಲು ತಲಾ 20 ಲಕ್ಷಕ್ಕೆ ಬೇಡಿಕೆ ಆರೋಪ; ಟೆಂಡರ್ ಕಮಿಷನ್ ಆಪಾದನೆ ಬೆನ್ನಲ್ಲೇ ಕರೀಗೌಡರ ವಿರುದ್ಧ ದೂರು

ಬೆಂಗಳೂರು; ಒಂದೆಡೆ ಮಂಜೂರಾಗಿರುವ ಹುದ್ದೆಗಳನ್ನು  ಭರ್ತಿ ಮಾಡುತ್ತಿಲ್ಲ, ಶೇ. 40ರಷ್ಟು ಹುದ್ದೆಗಳು...

Related Articles

Popular Categories

error: Content is protected !!