ಬೆಂಗಳೂರು; ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ಶಾಲೆಗಳು ಶಿಥಿಲಗೊಂಡಿದ್ದರೂ ಸಹ ಕಟ್ಟಡಗಳ ದುರಸ್ತಿಗೆ ಕೋರಿದ್ದ 120 ಕೋಟಿ ರು ಅನುದಾನ ಪ್ರಸ್ತಾವವನ್ನು ಆರ್ಥಿಕ ಇಲಾಖೆಯು ಎರಡು ಬಾರಿ ತಿರಸ್ಕರಿಸಿರುವುದು ಇದೀಗ ಬಹಿರಂಗವಾಗಿದೆ.
ಕರ್ನಾಟಕ ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ (2025-26)ಯ ಅಧ್ಯಕ್ಷ ತನ್ವೀರ್ ಸೇಠ್ ಅವರು ಇಂದು ವಿಧಾನಮಂಡಲಕ್ಕೆ ಮಂಡಿಸಿದ ವರದಿಯಲ್ಲಿ ಈ ಮಾಹಿತಿ ಇದೆ.

ಅಹಿಂದ ವರ್ಗಗಳ ಚಾಂಪಿಯನ್ ಎಂಬ ಖ್ಯಾತಿ ಪಡೆದಿರುವ ಸಿದ್ದರಾಮಯ್ಯ ಅವರ ಅವಧಿಯಲ್ಲಿಯೇ ಕೇವಲ 120 ಕೋಟಿ ರುಪಾಯಿಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ದುರಸ್ತಿಗೆ ಮಂಜೂರು ಮಾಡಿಲ್ಲ. ಸರ್ಕಾರದ ಸಾಧನೆಗಳು, ಕಾರ್ಯಕ್ರಮಗಳನ್ನು ಪ್ರಚಾರ ಮಾಡಲು ಒಂದು ಸಾವಿರಕ್ಕೂ ಹೆಚ್ಚು ಕೋಟಿ ರುಪಾಯಿಗಳನ್ನು ಖರ್ಚು ಮಾಡಿರುವ ಕಾಂಗ್ರೆಸ್ ಸರ್ಕಾರವು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿ ವಸತಿ ಶಾಲೆಗಳ ದುರಸ್ತಿಗೆ 125 ಕೋಟಿ ರುಪಾಯಿಗಳನ್ನು ನೀಡದಿರುವುದು ಚರ್ಚೆಗೆ ಗ್ರಾಸವಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ವಿದ್ಯಾರ್ಥಿ ವಸತಿ ಶಾಲೆಗಳು ಸುಮಾರು 20 ವರ್ಷಗಳ ಹಿಂದೆಯೇ ನಿರ್ಮಾಣವಾಗಿವೆ. ಈ ಕಟ್ಟಡಗಳು ಅತ್ಯಂತ ಹಳೆಯ ಕಟ್ಟಡಗಳಾಗಿವೆ. ಹೀಗಾಗಿ ಈ ಎಲ್ಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ ಆದರೂ ಸಹ ಸರ್ಕಾರವು ಈ ಕಟ್ಟಡಗಳ ದುರಸ್ತಿಗೆ ಅನುದಾನವನ್ನು ಒದಗಿಸಿಲ್ಲ ಎಂದು ಸಮಿತಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
‘ಈ ಕಟ್ಟಡಗಳ ದುರಸ್ತಿಗೆ ಸುಮಾರು 120 ಕೋಟಿ ರುಪಾಯಿಗಳ ಅನುದಾನವನ್ನು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಯು ಆರ್ಥಿಕ ಇಲಾಖೆಯಿಂದ 2 ಬಾರಿ ತಿರಸ್ಕೃತವಾಗಿದೆ. ಪ್ರಾರಂಭದಿಂದಲೂ ಸಂಸ್ಥೆಯು ವಿದ್ಯಾರ್ಥಿ ವಸತಿ ನಿಲಗಳ ದುರಸ್ತಿಗೆ ಅನುದಾನವನ್ನು ಕೋರಿ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದೆ,’ ಎಂದು ವರದಿಯಲ್ಲಿ ವಿವರಿಸಿದೆ.

ಅದೇ ರೀತಿ 2026-27ನೇ ಸಾಲಿನ ಆಯವ್ಯಯದಲ್ಲಿ ವಸತಿ ಶಾಲೆಗಳ ಕಟ್ಟಡಗಳ ದುರಸ್ತಿ ಕಾಮಗಾರಿಗೆ ಹೆಚ್ಚಿನ ಒತ್ತನ್ನು ನೀಡಿ ಈ ವಸತಿ ಶಾಲೆಗಳ ಕಟ್ಟಡಗಳ ನಿರ್ವಹಣೆ ಮಾಡಲಿಲ್ಲವೆಂದರೇ ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ತೊಂದರೆಯಾಗಲಿದೆ ಎಂದು ಸಮಿತಿಯು ಕಳವಳ ವ್ಯಕ್ತಪಡಿಸಿದೆ.
ಇಲಾಖೆ ವ್ಯಾಪ್ತಿಯ ವಸತಿ ನಿಲಯಗಳನ್ನು ಕೆಆರ್‍ಇಡಿಎಲ್ ನಿರ್ವಹಿಸುತ್ತಿದೆ. ಆದರೂ ವಸತಿ ನಿಲಯಗಳಲ್ಲಿ ನೀರು ಸೋರಿಕೆಯಾಗುತ್ತಿವೆ. ಕಟ್ಟಡಗಳ ನಿರ್ಮಾಣ ಸಮಯದಲ್ಲಿಯೇ ಅವೈಜ್ಞಾನಿಕವಾಗಿ ಕಾಮಗಾರಿ ನಿರ್ವಹಿಸಲಾಗಿದೆ. ಕಟ್ಟಡ ಮೇಲ್ಛಾವಣಿ ಸಮನಾಂತರವಾಗಿದೆ. ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗಿಲ್ಲ. ಹೀಗಾಗಿ ಕಟ್ಟಡದ ಮೇಲ್ಭಾಗದಲ್ಲಿ ನೀರು ಶೇಖರಣೆಗೊಂಡು ಕಟ್ಟಡಗಳ ಗೋಡೆಗಳು ಶಿಥಿಲಗೊಳ್ಳುತ್ತಿವೆ. ಹೀಗಾಗಿ ಕಟ್ಟಡಗಳಲ್ಲಿ ನೀರು ಸೋರಿ ದುರಸ್ತಿಗೆ ಬಂದಿವೆ. ಈ ವಸತಿ ನಿಲಯಗಳ ದುರಸ್ತಿ ಕಾಮಗಾರಿಗೆ ಸರ್ಕಾರಕ್ಕೆ ಅನುದಾನ ಕೋರಿದೆ. ಆದರೆ ಈವರೆಗೂ ಅನುದಾನ ಬಿಡುಗಡೆಯಾಗಿಲ್ಲ ಎಂದು ಸಮಿತಿಯು ತನ್ನ ವರದಿಯಲ್ಲಿ ವಿವರಿಸಿದೆ.

ಚಾಮರಾಜನಗರ, ಬೆಳಗಾವಿ, ಕಾರವಾರ, ಉಡುಪಿ ಮತ್ತು ಮೈಸೂರು ಜಿಲ್ಲೆಗಳಲ್ಲಿನ ಅರಣ್ಯದಂಚಿನಲ್ಲಿರುವ ವಿದ್ಯಾರ್ಥಿ ವಸತಿ ನಿಲಗಳ ಕಟ್ಟಡಗಳಿಗೆ ಕಾಂಪೌಂಡ್ ಕೂಡ ಇಲ್ಲ. ಈ ಕಾಂಪೌಂಡ್ ವಾಲ್ ನಿರ್ಮಾಣ ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ. ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ವಸತಿ ಶಾಲೆಗಳ ನಿರ್ಮಾಣಕ್ಕೆ ಮಾಡಿರುವ ವಿನ್ಯಾಶದ ರೀತಿ ಮೇಲ್ಛಾವಣಿಯನ್ನು ಇಳಿಜಾರಿನಲ್ಲಿ ನಿರ್ಮಾಣ ಮಾಡಿದಾಗ ಮಳೆ ನೀರು ಶೇಖರಣೆಯಾಗದೇ ಗೋಡೆಗಳು ಕಟ್ಟಡಗಳು ಶಿಥಿಲಗೊಳ್ಳುವುದಿಲ್ಲ. ಕಟ್ಟಡಗಳು ಸುಸ್ಥಿತಿಯಲ್ಲಿರಲಿದೆ ಎಂದು ಹೇಳಿದೆ.
ಹೋಬಳಿ ಮಟ್ಟದಲ್ಲಿರುವ ಹೆಣ್ಣು ಮಕ್ಕಳ ವಸತಿ ಶಾಲೆಗಳನ್ನು ಒಳಗೊಂಡಂತೆ ಎಲ್ಲಾ ವಸತಿ ಶಾಲೆಗಳಲ್ಲಿ ಶೌಚಾಲಯವಿದೆ. ಈ ಶೌಚಾಲಯಗಳನ್ನು ಸ್ಥಳೀಯ ಸಂಸ್ಥೆಗಳು ನಿರ್ವಹಣೆ, ಸ್ವಚ್ಛ ಮಾಡಲು ವಾರ್ಷಿಕವಾಗಿ ಒಂದು ವಸತಿ ಶಾಲೆಗೆ ಈ ಹಿಂದೆ ಒಂದು ಸಾವಿರ ರೂಪಾಯಿ ನೀಡಲಾಗುತ್ತಿದೆ. ಪ್ರಸ್ತುತ ಈ ಒಂದು ಸಾವಿರ ರುಪಾಯಿ ವೇತನವನ್ನು ಪರಿಷ್ಕರಿಸಿ ವಾರ್ಷಿಕವಾಗಿ ಮೂರು ಸಾವಿರ ರುಪಾಯಿಗೆ ಪರಿಷ್ಕರಿಸಿದೆ. ಆದರೆ ಈ ಹಣವು ಕಡಿಮೆ ಎಂದು ಪೌರ ಕಾರ್ಮಿಕರು ಶೌಚಾಲಯಗಳ ಸ್ವಚ್ಛತಾ ಕಾರ್ಯಕ್ಕೆ ಒಪ್ಪಿದಲ್ಲ. ಹೀಗಾಗಿ ವಾರ್ಷಿಕವಾಗಿ ನೀಡುವ ಹಣವನ್ನು ಪರಿಷ್ಕರಿಸಬೇಕು ಎಂದು ಸಮಿತಿಯು ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ವರದಿಯಿಂದ ತಿಳಿದು ಬಂದಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿನ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಇಂದಿಗೂ ಬಹುತೇಕ ಕಡೆ ಸ್ವಂತ ಕಟ್ಟಡಗಳಿಲ್ಲ. ಬಾಡಿಗೆ ಕಟ್ಟಡಗಳ ಬಾಡಿಗೆ ಪ್ರಮಾಣವು ಸಹ ಸ್ಥಳದಿಂದ ಸ್ಥಳಕ್ಕೆ ಬದಲಾವಣೆಯಾಗುತ್ತದೆ. ಹಾಗಾಗಿ ಕಟ್ಟಡಗಳ ಮಾಲೀಕರಿಗೆ ಇಲಾಖೆ ನೀಡುತ್ತಿರುವ ಬಾಡಿಗೆ ದರದಲ್ಲಿ ವ್ಯತ್ಯಾಸವಾಗುತ್ತಿದೆ. ಕಳೆದ 3 ವರ್ಷಗಳಲ್ಲಿ ಸುಮಾರು 300 ವಿದ್ಯಾರ್ಥಿ ನಿಲಯಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಗ್ರಾಮೀಣ ಭಾಗದಲ್ಲಿರುವ ಇನ್ನೂ 62 ವಿದ್ಯಾರ್ಥಿ ನಿಲಯಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಇಲಾಖೆ ಅಡಿಯಲ್ಲಿ ಒಟ್ಟು 2,659 ವಿದ್ಯಾರ್ಥಿ ನಿಲಯಗಳಿವೆ. ಈ ಪೈಕಿ 1,644 ಕಡೆ ಸ್ವಂತ ಕಟ್ಟಡವಿದೆ. 744 ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಬಾಡಿಗೆ ಕಟ್ಟಡಗಳಲ್ಲಿರುವ ವಿದ್ಯಾರ್ಥಿ ನಿಲಯಗಳಲ್ಲಿ ಸ್ಥಳಾವಕಾಶದ ಕೊರತೆಯೂ ಇದೆ. 445 ಸ್ಥಳಗಳಲ್ಲಿ ನಿವೇಶನಗಳೇ ಲಭ್ಯವಿಲ್ಲ. ಸ್ವಂತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿ ನಿಲಯಗಳ ಪೈಕಿ ಶೇ.50ರಷ್ಟು ವಿದ್ಯಾರ್ಥಿ ನಿಲಯಗಳು ಹಳೆಯ ಕಟ್ಟಡಗಳಾಗಿವೆ. ಈ ಎಲ್ಲಾ ಕಟ್ಟಡಗಳು ದುರಸ್ತಿಗೆ ಬಂದಿವೆ. ಈ ಕಟ್ಟಡಗಳನ್ನು ದುರಸ್ತಿಪಡಿಸಲು ಹೆಚ್ಚುವರಿ ಅನುದಾನದ ಅವಶ್ಯಕತೆ ಇದೆ.

2026-27ನೇ ಸಾಲಿನ ಆಯವ್ಯಯದಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ನಿವೇಶನ ಲಭ್ಯವಿರುವ 250 ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ 417 ಕೊಟಿ ರು ಅನುದಾನದ ಅವಶ್ಯಕತೆ ಇದೆ ಎಂದು ಅಧಿಕಾರಿಗಳು ಸಮಿತಿಗೆ ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

ಅದೇ ರೀತಿ ಅಲ್ಪಸಂಖ್ಯಾತರ ಶಾಲೆ, ವಸತಿ ಶಾಲೆಗಳ ದುರಸ್ತಿಗೆ ಆಯವ್ಯಯದಲ್ಲಿ ಅನುದಾನ ಕೇಳುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಇಲಾಖೆಯಲ್ಲಿ ಇನ್ನೂ ಚರ್ಚೆ ನಡೆಸುವುದರಲ್ಲೇ ಕಾಲಹರಣವಾಗಿದೆ. ಅಲ್ಪಸಂಖ್ಯಾತರ ಶಾಲೆಗಳ ಪೈಕಿ ದಕ್ಷಿಣ ಕರ್ನಾಟಕದಲ್ಲಿ ಪ್ರವೇಶಾತಿಯು ಕಡಿಮೆಯಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರವೇಶಾತಿಗಳು ಆಗುತ್ತಿವೆ. ಆದರೂ ಸಹ ಮೂಲಭೂತ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸಿಲ್ಲ.

ಹಾಗೆಯೇ ಅಲ್ಪಸಂಖ್ಯಾತರ ಶಾಲೆ ಮತ್ತು ವಸತಿ ಶಾಲೆಗಳಿಗೆ 2,062 ಹುದ್ದೆಗಳನ್ನು ನೇಮಕ ಮಾಡಿ 9 ವರ್ಷಗಳಾಗಿದೆ. ಆ ನಂತರ ಯಾವುದೇ ಹುದ್ದೆಯೂ ಮಂಜೂರಾಗಿಲ್ಲ. 2011ರಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಅನುಮೋದನೆ ದೊರಕಿತ್ತು. 2011ರಲ್ಲಿ 1,711 ಹುದ್ದೆಗಳು ಖಾಲಿ ಇದ್ದವು. ಸದ್ಯ 9,783 ಹುದ್ದೆಗಳನ್ನು ಪರಿಷ್ಕರಣೆ ಮಾಡಲಾಗಿದೆ.
ಮೌಲಾನಾ ಆಜಾದ್ ಶಾಲೆಗಳ ಪೈಕಿ 100 ಶಾಲೆಗಳಿಗೆ ಮಾತ್ರ ದೈಹಿಕ ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ. ಉಳಿದ ಶಾಲೆಗಳಿಗೆ ಹುದ್ದೆಗಳು ಮಂಜೂರಾಗಿಲ್ಲ. ಪ್ರಸ್ತುತ ಶಾಲೆಗೆ 9 ಜನ ಶಿಕ್ಷಕರಂತೆ 300 ಶಾಲೆಗಳಿಗೆ ಶಿಕ್ಷಕರ ಖಾಲಿ ಹುದ್ದೆ ಭರ್ತಿ ಮಾಡಲು ಅನುಮೋದನೆ ದೊರೆತಿದೆ ಎಂದು ಅಧಿಕಾರಿಗಳು ಸಮಿತಿಗೆ ಮಾಹಿತಿ ನೀಡಿರುವುದು ವರದಿಯಿಂದ ಗೊತ್ತಾಗಿದೆ.

ವಸತಿ ಶಾಲೆಗಳಲ್ಲಿ ವಿಷಯಾಧಾರಿತ ಶಿಕ್ಷಕರುಗಳನ್ನು ನೀಡಲಾಗಿದೆ. ಉಳಿದ ಭಾಷಾ ಶಿಕ್ಷಕರನ್ನು ನೀಡಿಲ್ಲ. ಈ ಹುದ್ದೆಗಳನ್ನು ಭರ್ತಿ ಮಾಡಲು ಆಥಿfಕ ಇಲಾಖೆ ಅನುಮೋದನೆಗೆ ಪ್ರಸ್ತಾವನೆ ಕಳಿಸಲಾಗಿದೆ. ವಸತಿ ಶಾಲೆಗಳಲ್ಲಿನ ಸುಮಾರು 800 ಹುದ್ದೆಗಳು ಮುಂಬಡ್ತಿ ನೀಡಲು ಬಾಕಿ ಇದೆ. ಈ ಇಲಾಖೆಗೆ 2022-23ರಿಂದ 2024-25ನೇ ಸಾಲಿನ ಮೂರು ವರ್ಷಗಳಲ್ಲಿ ಒಟ್ಟಾರೆ 5,671.11 ಕೋಟಿಯಷ್ಟು ಅನುದಾನ ಒದಗಿಸಿದೆ. ಈ ಪೈಕಿ 5,560.22 ಕೋಟಿ ರು ಬಿಡುಗಡೆ ಮಾಡಿತ್ತು. ಬಿಡುಗಡೆ ಮಾಡಿದ್ದ ಅನುದಾನದಲ್ಲಿ 5,247.08 ಕೋಟಿ ರು ವೆಚ್ಚವಾಗಿದೆ. ವೆಚ್ಚ ಮಾಡಲು ಇನ್ನೂ 313.13 ಕೋಟಿ ರು ಬಾಕಿ ಇದೆ.







