ಎಸ್‌ಐಆರ್; ಸಚಿವ ಸಂಪುಟಕ್ಕೆ ಮಾಹಿತಿ ನೀಡಿದ ಇಲಾಖೆ,ತುದಿಗಾಲಲ್ಲಿ ನಿಂತ ಮುಖ್ಯ ಚುನಾವಣಾಧಿಕಾರಿ

ಬೆಂಗಳೂರು; ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮತ್ತು ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸಚಿವ ಸಂಪುಟಕ್ಕೆ ಮಾಹಿತಿಯನ್ನು ಒದಗಿಸಿದೆ. ಈ ಮಾಹಿತಿ ಪಡೆದಿರುವ ಸಚಿವ ಸಂಪುಟವು ಈ ಬಗ್ಗೆ ಇನ್ನೂ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಆದರೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅವರು ಎಸ್‌ಐಆರ್ ನಡೆಸಲು ತುದಿಗಾಲಲ್ಲಿ ನಿಂತಿದ್ದಾರೆ.!

 

ಬಿಹಾರದಲ್ಲಿ ಈಗಾಗಲೇ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡಿದೆಯಲ್ಲದೇ ಕರ್ನಾಟಕದಲ್ಲೂ ಎಸ್‌ಐಆರ್ ನಡೆಸಲು ಕೇಂದ್ರ ಸರ್ಕಾರವು ಶೀಘ್ರದಲ್ಲಿಯೇ ಆದೇಶ ಹೊರಡಿಸಲಿದೆ. ಇದರ ಬೆನ್ನಲ್ಲೇ ಮತ್ತು ಆಡಳಿತ ಸುಧಾರಣೆ ಇಲಾಖೆಯು 2026ರ ಫೆಬ್ರುವರಿ 5ರಂದು ನಡೆದಿದ್ದ ಸಚಿವ ಸಚಿವ ಸಂಪುಟಕ್ಕೆ ಎಸ್‌ಐಆರ್ ಕುರಿತಾದ ಸಮಗ್ರ ಮಾಹಿತಿಯನ್ನು ಒದಗಿಸಿದೆ.

 

ವಿಬಿ ಜಿ ರಾಮ್ ಜಿ ಮಸೂದೆಯನ್ನು ವಿರೋಧಿಸಿ ಕರ್ನಾಟಕ ವಿಧಾನಸಭೆಯಲ್ಲಿ ಈಗಾಗಲೇ ನಿರ್ಣಯ ಕೈಗೊಂಡಿರುವ ರಾಜ್ಯ ಸರ್ಕಾರವು, ಎಸ್‌ಐಆರ್‍‌ ವಿರುದ್ಧ ಏನು ತೀರ್ಮಾನ ಕೈಗೊಳ್ಳಲಿದೆ ಎಂಬ ಬೆಳವಣಿಗೆಗಳ ಬಗ್ಗೆ ಕುತೂಹಲ ಮೂಡಿಸಿದೆ. ಈ ನಡುವೆಯೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು, ಸಚಿವ ಸಂಪುಟಕ್ಕೆ ಇದರ ಸಮಗ್ರ ಮಾಹಿತಿ ಒದಗಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಈ ಮಾಹಿತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯಿಂದಾಗಿ ರಾಜ್ಯದ ಜನತೆ ತೀವ್ರವಾಗಿ ಸಂಕಷ್ಟಗಳನ್ನು ಎದುರಿಸಲಿದ್ದಾರೆ ಎಂದು ಬಿಜೆಪಿಯೇತರ ಮತ್ತು ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳು ತೀವ್ರವಾಗಿ ವಿರೋಧಿಸುತ್ತಿವೆ. ಈ ನಡುವೆ ಕರ್ನಾಟಕದಲ್ಲಿಯೂ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಮತ್ತು ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ಸಚಿವ ಸಂಪುಟಕ್ಕೆ ನೀಡಿರುವ ಮಾಹಿತಿಯು ಮುನ್ನೆಲೆಗೆ ಬಂದಿದೆ.

 

ಸಚಿವ ಸಂಪುಟಕ್ಕೆ ಸಲ್ಲಿಸಿರುವ ಪ್ರಸ್ತಾವದಲ್ಲೇನಿದೆ?

 

ಭಾರತದ ಸಂವಿಧಾನದ 324ನೇ ವಿಧಿ ಮತ್ತು ಜನತಾ ಪ್ರಾತಿನಿಧ್ಯ ಅಧಿನಿಯಮ, 1950ರ ನಿಬಂಧನೆಗಳ ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಬಳಸಿಕೊಂಡು ಭಾರತ ಚುನಾವಣೆ ಆಯೋಗವು ಮತದಾರರ ಪಟ್ಟಿಯ ನಿಖರತೆ, ಒಳಗೊಳ್ಳುವಿಕೆ ಮತ್ತು ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ನಿಯತಕಾಲಿಕವಾಗಿ ಪರಿಷ್ಕರಣೆ ಕೈಗೊಳ್ಳುತ್ತದೆ ಎಂದು ವಿವರಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

 

 

ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಗಳನ್ನು ನಡೆಸಲು ಮತದಾರರ ಪಟ್ಟಿಗಳ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಮೂಲಭೂತ ಅವಶ್ಯಕತೆಯಾಗಿದೆ. ಹೀಗಾಗಿ ಮತದಾರ ಪಟ್ಟಿಯಲ್ಲಿ ಎಲ್ಲಾ ಅರ್ಹ ನಾಗರೀಕರ ಸೇರ್ಪಡೆ, ಅನರ್ಹ ವ್ಯಕ್ತಿಗಳನ್ನು ತೆಗೆದುಹಾಕುವುದು ಮತ್ತು ಚುನಾವಣೆ ಪ್ರಕ್ರಿಯೆಯ ಒಟ್ಟಾರೆ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಸಲು ಭಾರತ ಚುನಾವಣೆ ಆಯೋಗವು ಉದ್ದೇಶಿಸಿದೆ. ಈ ಕುರಿತು ಮುಖ್ಯ ಚುನಾವಣಾಧಿಕಾರಿಗಳು ಇವರು ಮಾಹಿತಿಯನ್ನು ಒದಗಿಸಿದ್ದಾರೆ.

 

ಈ ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಮಾಹಿತಿಗಾಗಿ ಮಾತ್ರ ಮಂಡಿಸಲಾಗಿದೆ. ಈ ಪ್ರಸ್ತಾವನೆ ಕುರಿತು ಇತರೆ ಇಲಾಖೆಗಳೊಂದಿಗೆ ಸಮಾಲೋಚನೆ ಅಗತ್ಯವಿರುವುದಿಲ್ಲ. ಅಗತ್ಯವಿರುವ ಮಾಹಿತಿಯನ್ನು ಮುಖ್ಯ ಚುನಾವಣಾಧಿಕಾರಿಗಳಿಂದ ಪಡೆಯಲಾಗಿದೆ ಎಂದು ಸಚಿವ ಸಂಪುಟ ಟಿಪ್ಪಣಿಯಲ್ಲಿ ಹೇಳಿರುವುದು ಗೊತ್ತಾಗಿದೆ.
ಸಚಿವ ಸಂಪುಟಕ್ಕೆ ಮಂಡಿಸಿರುವ ಮಾಹಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದ್ದಾರೆ.

 

 

ಮುಖ್ಯ ಚುನಾವಣಾಧಿಕಾರಿಗಳು ಒದಗಿಸಿರುವ ಮಾಹಿತಿಯಲ್ಲೇನಿದೆ?

 

ಮುಖ್ಯ ಚುನಾವಣಾಧಿಕಾರಿಗಳು ವಿಶೇಷ ಸಮಗ್ರ ಪರಿಷ್ಕರಣೆ ಮತ್ತು ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ರಾಜ್ಯ ಸರ್ಕಾರಕ್ಕೆ ಸಮಗ್ರ ಮಾಹಿತಿ ಒದಗಿಸಿದ್ದಾರೆ. 1950-51ರಲ್ಲಿ ದೇಶದಲ್ಲಿ ಮೊದಲ ಮತದಾರರ ಪಟ್ಟಿಯನ್ನು 1951ರ ನವೆಂಬರ್‍‌ 15ರಂದು ಸಿದ್ಧಪಡಿಸಲಾಗಿತ್ತು. 1952-56ರ ಅವಧಿಯಲ್ಲಿ ಪ್ರತೀ ವರ್ಷ ಸುಮಾರು ಶೇ. 20ರಷ್ಟು ರಾಜ್ಯಗಳಲ್ಲಿ ಎಸ್‌ಐಆರ್‍‌ ನಡೆಸಲಾಗಿದೆ. 1961ರಲ್ಲಿ ನಗರ ಪ್ರದೇಶಗಳಿಗಾಗಿ ಎಸ್‌ಐಆರ್ ನಡೆಸಲಾಗಿದೆ. 1965-66ರಲ್ಲಿ ಶೇ. 40ರಷ್ಟು ರಾಜ್ಯಗಳಲ್ಲಿ ಮತ್ತು 1966ರಲ್ಲಿ ಶೇ. 60ರಷ್ಟು ರಾಜ್ಯಗಳಲ್ಲಿ ಎಸ್‌ಐಆರ್ ನಡೆಸಲಾಗಿದೆ.

 

1983-84 ಮತ್ತು 1987-89ರಲ್ಲಿಯೂ ಅವಧಿಯಲ್ಲಿ ಇಡೀ ಭಾರತದಾದ್ಯಂತ ಎಸ್‌ಐಆರ್ ನಡೆಸಲಾಗಿದೆ. 1993ರಲ್ಲಿ ಜಮ್ಮು ಕಾಶ್ಮೀರ ಹೊರತುಪಡಿಸಿ ಭಾರತದಾದ್ಯಂತ ಎಸ್‌ಐಆರ್ ನಡೆಸಲಾಗಿದೆ. 1995ರಲ್ಲಿ 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ನಡೆಸಲಾಗಿದೆ. 2002ರಲ್ಲಿ ಕರ್ನಾಟಕ ಸೇರಿದಂತೆ 29 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ನಡೆಸಲಾಗಿದೆ ಎಂಬ ಮಾಹಿತಿಯನ್ನು ನೀಡಿದೆ.

 

 

ಕರ್ನಾಟಕದಲ್ಲಿ 2002ರಲ್ಲಿ ನಡೆಸಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)ಯೇ ಕೊನೆಯದಾಗಿದೆ. ಅಲ್ಲದೇ ಇದನ್ನೆ ಮೂಲ ಪಟ್ಟಿ ಎಂದು ಪರಿಗಣಿಸಲಾಗಿದೆ. 2025ರ ಎಸ್‌ಐಆರ್ ಸಂದರ್ಭದಲ್ಲಿ 2002ರರ ಮತದಾರರ ಪಟ್ಟಿ ಪ್ರಮುಖ ಉಲ್ಲೇಖದ ದಾಖಲೆಯಾಗಿದೆ. 2002ರಲ್ಲಿ ರಾಜ್ಯದಲ್ಲಿ ಒಟ್ಟು 28 ಜಿಲ್ಲೆಗಳು ಹಾಗೂ 224 ವಿಧಾನಸಭೆ ಕ್ಷೇತ್ರಗಳಿದ್ದವು ಎಂದು ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

 

ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಅಗತ್ಯವೇ?

 

ಮತದಾರರ ಪಟ್ಟಿಯು ಪ್ರಜಾಪ್ರಭುತ್ವದ ಮೂಲ ಆಧಾರವಾಗಿದೆ. ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರು ತಪ್ಪದೇ ಮತದಾರರ ಪಟ್ಟಿಯಲ್ಲಿ ಸೇರಬೇಕು. ಅನರ್ಹ (ಪುನರಾವರ್ತಿತ, ಸ್ಥಳಾಂತರಗೊಂಡ, ಮೃತ ಹೊಂದಿದ) ಮತದಾರರು ಮತದಾರರ ಪಟ್ಟಿಯಿಂದ ವಜಾಗೊಳ್ಳಬೇಕು. ಈ ಕಾರಣಕ್ಕೆ ವಿಶೇಷ ಸಮಗ್ರ ಪರಿಷ್ಕರಣೆ ಅಗತ್ಯವಿದೆ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ಒದಗಿಸಿದ್ದಾರೆ.

 

ಭಾರತ ಚುನಾವಣೆ ಆಯೋಗವು ಸಹ ಕರ್ನಾಟಕದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ನಡೆಸುವ ವೇಳಾಪಟ್ಟಿಯನ್ನು ಶೀಘ್ರದಲ್ಲಿ ಹೊರಡಿಸುವ ನಿರೀಕ್ಷೆಯಿದೆ. ಆದರೆ ಭಾರತ ಚುನಾವಣೆ ಆಯೋಗದ ನಿರ್ದೇಶನದ ಪ್ರಕಾರ ಪೂರ್ವಭಾವಿಯಾಗಿ 2025ರ ಮತದಾರರ ಪಟ್ಟಿಯಲ್ಲಿನ ಮತದಾರರನ್ನು 2002ರ ಮತದಾರರ ಪಟ್ಟಿಯಿಂದ ಮ್ಯಾಪಿಂಗ್‌ ಮಾಡುವ ಪೂರ್ವಭಾವಿ ಕಾರ್ಯವು ಪ್ರಗತಿಯಲ್ಲಿದೆ. ಭಾರತ ಚುನಾವಣೆ ಆಯೋಗವು ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಪ್ರಕಟಣೆ ಹೊರಡಿಸಿದ ನಂತರ ವೇಳಾಪಟ್ಟಿಯಂತೆ ಪರಿಷ್ಕರಣೆ ಕಾರ್ಯವನ್ನು ಪೂರ್ಣ ಪ್ರಮಾಣದಲ್ಲಿ ಕೈಗೊಳ್ಳಲಾಗುವುದು ಎಂದು ವಿವರಿಸಿರುವುದು ತಿಳಿದು ಬಂದಿದೆ.

 

 

ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ರಾಜ್ಯದಲ್ಲಿ ಈಆಗಲೇ ರಾಜ್ಯಮಟ್ಟದಿಂದ ಡಿಇಒ, ಇಆರ್‍‌ಒ, ಎಇಆರ್‍‌ಒ, ಬಿಎಲ್‌ಒ ಸೂಪರ್‍‌ವೈಸರ್‍‌ಗಳು, ಬಿಎಲ್‌ಒಗಳಿಗೆ ತರಬೇತಿ ನೀಡಲಾಗಿದೆ. ತರಬೇತಿಯಲ್ಲಿ ಅವರ ಪಾತ್ರ ಹಾಗೂ ಜವಾಬ್ದಾರಿ, ಮ್ಯಾಪಿಂಗ್ ಮಾಡುವ ವಿಧಾನಗಳನ್ನು ವಿವರಿಸಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳು ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

 

ಮ್ಯಾಪಿಂಗ್‌ ಹೇಗಾಗಲಿದೆ?

 

2002ರ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದು ಪ್ರಸ್ತುತ 40 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮತದಾರರ ಮ್ಯಾಪಿಂಗ್‌ ನ್ನು ಬಿಎಲ್‌ಒ ಅವರು ಪರಿಶೀಲನೆ ನಡೆಸಲಿದ್ದಾರೆ. ಆ ನಂತರ ಬಿಎಲ್‌ಒ ಆಪ್‌ ಮೂಲಕ ಕಡ್ಡಾಯವಾಗಿ ದೃಢೀಕರಿಸಿದ ನಂತರ ಮ್ಯಾಪಿಂಗ್ ಮಾಡಲಿದೆ. 2002ರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೂ 40 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮತದಾರರ ವಂಶಸ್ಥರ ಮ್ಯಾಪಿಂಗ್ ಸಹ ಕೈಗೊಳ್ಳಲಾಗುತ್ತಿದೆ.

 

ಇಂತಹ ಮತದಾರರನ್ನು 2002ರ ಪಟ್ಟಯಲ್ಲಿ ಹೆಸರು ಹೊಂದಿರುವ ಅವರ ತಂದೆ, ತಾಯಿ, ತಾತ, ಅಜ್ಜಿಯೊಂದಿಗೆ ಮ್ಯಾಪಿಂಗ್ ಮಾಡಲಾಗುತ್ತದೆ. ಅಲ್ಲದೇ ಭಾರತದ ಚುನಾವಣೆ ಆಯೋಗದ ನಿರ್ದೇಶನದ ಪ್ರಕಾರ ವಂಶಸ್ಥರ ಮ್ಯಾಪಿಂಗ್‌, ಮಗ, ಮಗಳು, ಮೊಮ್ಮಗ, ಮೊಮ್ಮಗಳು (ತೃತೀಯ ಲಿಂಗಿ) ಸಹ ಅನ್ವಯವಾಗಲಿದ್ದಾರೆ ಎಂದು ವಿವರಿಸಿದೆ.

 

 

ಹಾಗೆಯೇ ಕರ್ನಾಟಕ ರಾಜ್ಯದ 2025ರ ಮತದಾರರ ಪಟ್ಟಿಯಲ್ಲಿ ಹೆಸರಿರುವ ಮತದಾರರು 2002ರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅವಧಿಯಲ್ಲಿ ಕರ್ನಾಟಕ ರಾಜ್ಯದ ಮತದಾರರ ಪಟ್ಟಿಯಲ್ಲಿ ಇಲ್ಲದೇ ಇರುವ ಆದರೆ ಬೇರೆ ರಾಜ್ಯ, ಕೇಂದ್ರಾಡಳಿತ ಪ್ರದೇಶದಲ್ಲಿ ಈ ಹಿಂದೆ ನಡೆದ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಂತರ ಪ್ರಕಟಿಸಿದ ಮತದಾರರ ಪಟ್ಟಿಯಲ್ಲಿ ಹೆಸರಿದ್ದ ಪಕ್ಷದಲ್ಲಿ ಅಂತಹ ಮತದಾರರನ್ನೂ ಸಹ ಮ್ಯಾಪಿಂಗ್ ಮಾಡಲು ಬಿಎಲ್ಒ ಆಪ್‌ನಲ್ಲಿ ಅವಕಾಶ ಕಲ್ಪಿಸಿದೆ ಎಂದು ಮಾಹಿತಿ ನೀಡಿದೆ.

 

 

ಕರ್ನಾಟಕದಲ್ಲಿ ಮ್ಯಾಪಿಂಗ್ ಪ್ರಗತಿ ಹೇಗಿದೆ?

 

2002ರಲ್ಲಿ ರಾಜ್ಯದಲ್ಲಿ 3,55,92,524 ಮತದಾರರಿದ್ದರೇ 2025ರಲ್ಲಿ 5,57,36,561ರಷ್ಟು ಸಂಖ್ಯೆಯ ಮತದಾರರಿದ್ದಾರೆ. 2026ರ ಜನವರಿ 28ರ ಪ್ರಕಾರ ರಾಜ್ಯದಲ್ಲಿ 5,57,36,561 ಒಟ್ಟು ಮತದಾರರಿದ್ದಾರೆ. ಈ ಮತದಾರರ ಪಟ್ಟಿಯು ನಿರಂತರವಾಗಿ ನವೀಕರಣಗೊಳ್ಳುತ್ತಿದೆ.

 

 

ಈ ಪೈಕಿ 3,12,57,088 ಮತದಾರರು 40 ವರ್ಷ ಮೇಲ್ಪಟ್ಟವರಾಗಿದ್ದಾರೆ. ಈ ಪೈಕಿ 1,96,46,707 ಸಂಖ್ಯೆಯ ಮತದಾರರನ್ನಷ್ಟೇ ಮ್ಯಾಪಿಂಗ್ ಮಾಡಲಾಗಿದೆ.

 

 

ಇದು ಒಟ್ಟು ಮತದಾರರ ಸಂಖ್ಯೆಗೆ ಹೋಲಿಸಿದರೆ ಶೇ 62.86ರಷ್ಟಿದೆ.

 

 

 

 

 

 

40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮತದಾರರ ಸಂಖ್ಯೆಯು 2,44,79,473ರಷ್ಟಿದೆ. ಇದರಲ್ಲಿ ವಂಶಸ್ಥರ ಮ್ಯಾಪಿಂಗ್‌ ಆಗಿರುವವರ ಸಂಖ್ಯೆಯು 1,52,39,492ರಷ್ಟಿದೆ. ಒಟ್ಟಾರೆ 3,48,86,199 ಮತದಾರರು ಮ್ಯಾಪಿಂಗ್ ಆಗಿದ್ದಾರೆ ಎಂದು ಅಂಕಿ ಸಂಖ್ಯೆಗಳನ್ನು ಮುಖ್ಯ ಚುನಾವಣಾಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.

 

 

ಜಿಲ್ಲಾವಾರು ಪಟ್ಟಿ ಇಲ್ಲಿದೆ

 

2026ರ ಜನವರಿ 28ರ ಪ್ರಕಾರ ಬೆಳಗಾವಿಯಲ್ಲಿ 41,85,986 ಒಟ್ಟು ಮತದಾರರಿದ್ದಾರೆ. ಬಾಗಲಕೋಟೆಯಲ್ಲಿ 16,47,346, ವಿಜಯಪುರದಲ್ಲಿ 19,95,147, ಕಲ್ಬುರ್ಗಿಯಲ್ಲಿ 23,88,636, ರಾಯಚೂರಿನಲ್ಲಿ 17,32,895, ಕೊಪ್ಪಳದಲ್ಲಿ 12,06,245,

 

 

ಗದಗ್‌ನಲ್ಲಿ 9,05,649,  ಧಾರವಾಡದಲ್ಲಿ 16,30, 595, ಉತ್ತರ ಕನ್ನಡದಲ್ಲಿ 12,29,149, ಹಾವೇರಿಯಲ್ಲಿ 13,53,427, ಬಳ್ಳಾರಿಯಲ್ಲಿ 12,48, 457, ಚಿತ್ರದುರ್ಗದಲ್ಲಿ 14,43,845,

 

ದಾವಣಗೆರೆಯಲ್ಲಿ 15,21,071, ಶಿವಮೊಗ್ಗದಲ್ಲಿ 15,30,765, ಉಡುಪಿಯಲ್ಲಿ 10,66, 261 ಒಟ್ಟು ಮತದಾರರಿದ್ದಾರೆ. ಚಿಕ್ಕಮಗಳೂರಿನಲ್ಲಿ 9,79,447, ತುಮಕೂರಿನಲ್ಲಿ 23,10,062, ಚಿಕ್ಕಬಳ್ಳಾಪುರದಲ್ಲಿ 10,73,109,

 

 

ಕೋಲಾರದಲ್ಲಿ 13,08,833, ಬೆಂಗಳೂರು ಗ್ರಾಮಾಂತರದಲ್ಲಿ 9,21,994, ರಾಮನಗರದಲ್ಲಿ 9,37,759, ಮಂಡ್ಯದಲ್ಲಿ 15,83,629, ಹಾಸನದಲ್ಲಿ 15,54,308, ದಕ್ಷಿಣ ಕನ್ನಡದಲ್ಲಿ 18,16,918,

 

 

ಕೊಡಗಿನಲ್ಲಿ 4,77,556, ಮೈಸೂರಿನಲ್ಲಿ 27,94,405, ಚಾಮರಾಜನಗರದಲ್ಲಿ 8,78,079, ಬೆಂಗಳೂರು ನಗರ ಜಿಲ್ಲೆ- 40,09,295, ಯಾದಗಿರಿ- 10,53,385, ವಿಜಯನಗರ ಜಿಲ್ಲೆ- 11,50317 ಒಟ್ಟು ಮತದಾರರಿದ್ದಾರೆ.

 

 

 

ಬಿಬಿಎಂಪಿ (ಕೇಂದ್ರ ) ವ್ಯಾಪ್ತಿಯಲ್ಲಿ 18,81,361, ಬಿಬಿಎಂಪಿ ಉತ್ತರದಲ್ಲಿ 23,14,930, ಬಿಬಿಎಂಪಿ ದಕ್ಷಿಣದಲ್ಲಿ 21,33,685, ಬೆಂಗಳೂರು ನಗರ ಜಿಲ್ಲೆಯಲ್ಲಿ 40,09,295, ಯಾದಗಿರಿಯಲ್ಲಿ 10,53,385, ವಿಜಯನಗರ ಜಿಲ್ಲೆಯಲ್ಲಿ 11,50317 ಸಂಖ್ಯೆಯಷ್ಟು ಒಟ್ಟು ಮತದಾರರಿದ್ದಾರೆ ಎಂದು ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

 

 

ಮ್ಯಾಪಿಂಗ್‌ ಮಾಡಿರುವ ಪ್ರಗತಿ ಪಟ್ಟಿಯಲ್ಲಿ ಬಿಬಿಎಂಪಿ ಕೇಂದ್ರ ವ್ಯಾಪ್ತಿಯಲ್ಲಿ ಶೇ. 30.3, ಬಿಬಿಎಂಪಿ ಉತ್ತರದಲ್ಲಿ ಶೇ. 28.57, ಬಿಬಿಎಂಪಿ ದಕ್ಷಿಣದಲ್ಲಿ ಶೇ.28.61ರಷ್ಟು, ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ. 31.62ರಷ್ಟು ಮಾತ್ರ ಪ್ರಗತಿಯಾಗಿರುವುದು ಕಂಡು ಬಂದಿದೆ.

 

ಕರ್ನಾಟಕದಲ್ಲೂ ಎಸ್‌ಐಆರ್‍‌ಗೆ ಕೇಂದ್ರದಿಂದ ಶೀಘ್ರದಲ್ಲೇ ಆದೇಶ

 

ಈಗಾಗಲೇ ದೇಶದಾದ್ಯಂತ ಎಸ್‌ಐಆರ್ ಕೈಗೊಳ್ಳಲು ಭಾರತ ಚುನಾವಣೆ ಆಯೋಗವು ಆದೇಶ ಹೊರಡಿಸಿದೆ. ಮೊದಲ ಹಂತದಲ್ಲಿ ಬಿಹಾರ ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಯು ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ ಒಟ್ಟು 12 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ಕೈಗೊಂಡಿದೆ.

 

 

ಕರ್ನಾಟಕದಲ್ಲೂ ಎಸ್‌ಐಆರ್ ನಡೆಸಲು ಕೇಂದ್ರ ಸರ್ಕಾರವು ಶೀಘ್ರದಲ್ಲಿಯೇ ಆದೇಶ ಹೊರಡಿಸಲಿದೆ. ಹೀಗಾಗಿ ಭಾರತ ಚುನಾವಣೆ ಆಯೋಗದ ನಿರ್ದೇಶನದ ಪ್ರಕಾರ ಪೂರ್ವಭಾವಿಯಾಗಿ 2025ರ ಮತದಾರರ ಪಟ್ಟಿಯಲ್ಲಿನ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಮಾಡುವ ಕಾರ್ಯವು ಪ್ರಗತಿಯಲ್ಲಿದೆ ಎಂದು ವಿವರಿಸಿರುವುದು ಗೊತ್ತಾಗಿದೆ.

 

 

 

ಭಾರತ ಚುನಾವಣೆ ಆಯೋಗವು ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಪ್ರಕಟಣೆ ಹೊರಡಿಸಿದ ನಂತರ ವೇಳಾಪಟ್ಟಿ ಪ್ರಕಾರ ಪರಿಷ್ಕರಣೆ ಕಾರ್ಯವನ್ನು ಪೂರ್ಣಪ್ರಮಾಣದಲ್ಲಿ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

 

ಎಸ್‌ಐಆರ್‍‌ಗೆ ವಿರೋಧವೇಕೆ?

 

2025 ಜೂನ್ 24ರಂದು ಇಸಿಐ ತನ್ನ ಆದೇಶ ಸಂಖ್ಯೆ (23/ಇಆರ್‌ಎಸ್ /2025) ಮೂಲಕ, ಸಂವಿಧಾನದ ವಿಧಿ 324ರ ಅಡಿಯಲ್ಲಿ ದೇಶಾದ್ಯಂತ ಎಸ್‌ಐಆರ್‌ ಪ್ರಾರಂಭಿಸುವುದಾಗಿ ಘೋಷಿಸಿದೆ. ಮೊದಲಿಗೆ ಬಿಹಾರದಲ್ಲಿ ಆಗಸ್ಟ್–ಸೆಪ್ಟೆಂಬರ್ 2025ರಲ್ಲಿ ಈ ಎಸ್‌ಐಆರ್ ನಡೆದಿದೆ.

 

24 ಜೂನ್ 2025ರ ಪ್ರಕಾರ 7.89 ಕೋಟಿ ಮತದಾರರ ಪೈಕಿ 65 ಲಕ್ಷ ಮತದಾರರನ್ನು ತೆಗೆಯಲಾಗಿದೆ. ಈ ಹಂತದಲ್ಲಿ ಸುಪ್ರೀಂಕೋರ್ಟ್ ವಿಚಾರಣೆ ನಡೆಸುವ ಮೂಲಕ ಮಧ್ಯ ಪ್ರವೇಶಿಸಿತ್ತು. 1 ಆಗಸ್ಟ್ 2025(36 ದಿನಗಳ ಅಂತರದಲ್ಲಿ) 7.24 ಕೋಟಿ ಮತದಾರರು ಇದ್ದರು. ಈ ಪೈಕಿ 3.66ಲಕ್ಷ ಮತದಾರರನ್ನು ತೆಗೆಯಲಾಗಿದೆ ಎಂದು ವಿವರಿಸುತ್ತಾರೆ ಲೇಖಕ ಬಿ ಶ್ರೀಪಾದ್ ಭಟ್.

 

ಈ ಮಧ್ಯೆ 30 ಸೆಪ್ಟೆಂಬರ್ 2025ರ ಹೊತ್ತಿಗೆ 21.53 ಲಕ್ಷ ಮತದಾರರನ್ನು ಸೇರಿಸಲಾಗಿದೆ. 12 ರಾಜ್ಯಗಳಾದ ಅಂಡಮಾನ್ ನಿಕೋಬಾರ್, ಛತ್ತೀಸಗಢ, ಗೋವಾ, ಗುಜರಾತ್, ಕೇರಳ, ಲಕ್ಷದ್ವೀಪ, ಮಧ್ಯಪ್ರದೇಶ, ಪುದುಚೆರಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಜನವರಿ 2026ರೊಳಗೆ ಪೂರ್ಣಗೊಂಡಿದೆ. 6.5 ಕೋಟಿ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಪ. ಬಂಗಾಳದಲ್ಲಿ 1.36 ಕೋಟಿ ಮತದಾರರ ಮ್ಯಾಪಿಂಗ್ ಆಗಿದ್ದರೂ ಅವರಿಗೆ ಹತ್ತಾರು ಸಮಸ್ಯೆಗಳನ್ನು ಉಲ್ಲೇಖಿಸಿ ನೋಟಿಸ್ ನೀಡಲಾಗಿದೆ ಎಂದು ತಮ್ಮ ವಿವರಣೆಯನ್ನು ಮುಂದುವರಿಸುತ್ತಾರೆ ಬಿ ಶ್ರೀಪಾದ್ ಭಟ್.

 

‘ಅಷ್ಟು ಮಾತ್ರವಲ್ಲ ಮುಂದಿನ ದಿನಗಳಲ್ಲಿ ಇವರು ಎಸ್ ಐಆರ್ ನಲ್ಲಿ ಇಲ್ಲ ಎಂದು ಸರ್ಕಾರದ ಕಲ್ಯಾಣ ಯೋಜನೆಗಳಿಂದ ವಂಚಿತರಾಗಬಹುದು,’ ಎಂಬ ಆತಂಕವನ್ನೂ ವ್ಯಕ್ತಪಡಿಸುತ್ತಾರೆ. ಈ ಪಟ್ಟಿಯ ಆರು ರಾಜ್ಯಗಳಿಗೆ 2026ರಲ್ಲಿ ವಿಧಾನಸಭಾ ಚುನಾವಣೆಗಳೂ ನಿಗದಿಯಾಗಿದೆ. ಜನಪ್ರತಿನಿಧಿಗಳ ಕಾಯ್ದೆ 1950 ಮತ್ತು ಮತದಾರರ ನೋಂದಣಿ ನಿಯಮಗಳು 1960 ಪ್ರಕಾರ ಮತದಾರರ ಪಟ್ಟಿ ತಯಾರಿಸಲು ಮೂರು ವಿಧಾನಗಳಿವೆ. ತೀವ್ರವಾದ ಪರಿಷ್ಕರಣೆ (intensive revision) ಸಾರಾಂಶ ಪರಿಷ್ಕರಣೆ (summary revision) ಕೆಲವೊಮ್ಮೆ ತೀವ್ರವಾಗಿ, ಕೆಲವೊಮ್ಮೆ ಸಾರಾಂಶ ಎಂದು ಹೇಳಲಾಗಿದೆ.

 

ಆದರೆ ʼವಿಶೇಷ ತೀವ್ರವಾದ ಪರಿಷ್ಕರಣೆʼ ಎನ್ನುವುದು ಕಾನೂನಿನಲ್ಲಿ, ಸಂವಿಧಾನದಲ್ಲಿ ಪ್ರಸ್ತಾಪವಿಲ್ಲ. ಇದನ್ನು ಕೇಂದ್ರ ಗೃಹ ಇಲಾಖೆ ನಿರ್ದೇಶನದ ಮೇರೆಗೆ ಇಸಿಐ ನಡೆಸುತ್ತಿದೆ. ಈ ಸಂಸ್ಥೆ ಸ್ವಾಯತ್ತತೆ ಕಳೆದುಕೊಂಡಿರುವದರಿಂದ, ತನ್ನದೇ ಸ್ವತಂತ್ರ ನಿಲುವು ತೆಗೆದುಕೊಳ್ಳಲು ಸಾಧ್ಯವೇ ಇಲ್ಲದಿರುವುದರಿಂದ ಮೋದಿ ನೇತೃತ್ವ ಸರ್ಕಾರದ ಅಡಿಯಾಳಾಗಿ ಕಾರ್ಯ ನಿರ್ವಹಿಸುತ್ತಿದೆ ಎನ್ನುತ್ತಾರೆ ಶ್ರೀಪಾದ್ ಭಟ್.

 

ಕಾನೂನು ತಜ್ಞರು ಹೇಳಿದಂತೆ ತೀವ್ರವಾದ ಪರಿಷ್ಕರಣೆಯನ್ನು ಒಂದು ನಿರ್ದಿಷ್ಠ ಕ್ಷೇತ್ರಕ್ಕೆ ಮಾತ್ರ ಅನ್ವಯಿಸಬಹುದೇ ಹೊರತು ಇಡೀ ರಾಜ್ಯಕ್ಕಲ್ಲ. ಆದರೆ ಇಸಿಐ ಇಡೀ ಬಿಹಾರ್‌ ರಾಜ್ಯಕ್ಕೆ ಅನ್ವಯಿಸಿ ಎಸ್‌ಐಆರ್‌ ನಡೆಸಿದೆ. 2025 ಜೂನ್ 24ರಂದು ಇಸಿಐ ಬಿಹಾರ ರಾಜ್ಯ ಸರ್ಕಾರಕ್ಕೆ ಬರೆದ ಪತ್ರದಲ್ಲೂ, ಕಾನೂನಾತ್ಮಕವಾಗಿ ʼವಿಶೇಷ ಪರಿಷ್ಕರಣೆಯ ಅಗತ್ಯವೇನಿದೆ?ʼ ಎಂದು ಸ್ಪಷ್ಟೀಕರಣ ನೀಡಿಲ್ಲ. ಅಲ್ಲದೇ ಕಾರಣಗಳು ಏನೆಂದು ವಿವರಿಸಿಲ್ಲ. ಅದರ ನಿರ್ಧಾರಗಳು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೇಳುತ್ತಾರೆ ಶ್ರೀಪಾದ್ ಭಟ್.

 

ಹಾಗೆಯೇ ಪ.ಬಂಗಾಳ, ಕೇರಳ, ತಮಿಳುನಾಡುನಲ್ಲಿ ಕೆಲವೇ ತಿಂಗಳುಗಳಲ್ಲಿ ಚುನಾವಣೆ ನಡೆಯಲಿದೆ. ತರಾತುರಿಯಲ್ಲಿ ಕೇವಲ ಎರಡು ತಿಂಗಳಲ್ಲಿ ಎಸ್ ಐಆರ್ ನಡೆಸುವ ಉದ್ದೇಶವೇನು, ವಾಸ್ತವದಲ್ಲಿ ವಿಸ್ತ್ರತ ಪರಿಷ್ಕರಣೆಗೆ ಒಂದು ವರ್ಷ ಅವಧಿಯ ಅಗತ್ಯವಿದೆ ಎನ್ನುತ್ತಾರೆ ಶ್ರೀಪಾದ್ ಭಟ್.

 

ಸಂವಿಧಾನ ವಿರೋಧಿಯೇ?

 

ಸಂವಿಧಾನದ ವಿಧಿ 326ರ ನೀತಿಯು 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯರಿಗೆ ಮತದಾನದ ಹಕ್ಕನ್ನು ಖಚಿತಪಡಿಸಿದೆ. ಅವರಲ್ಲಿ ತಾರತಮ್ಯ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ ಇಸಿಐ ವಿಧಿ 324ರ ಅಡಿಯಲ್ಲಿ ತನ್ನ ಜವಬ್ದಾರಿಯನ್ನು ಮಾತ್ರ ಹೇಳಿಕೊಳ್ಳುತ್ತಿದೆಯೇ ಹೊರತು ವಿಧಿ 326ರ ಅಡಿಯಲ್ಲಿ ತಾರತಮ್ಯ ಮಾಡುವಂತಿಲ್ಲ ಎನ್ನುವುದನ್ನು ಉಲ್ಲಂಘಿಸಲಾಗಿದೆ.

 

ಆಧಾರ್ ಕಾರ್ಡ, ಮತದಾರ ಗುರುತಿನ ಚೀಟಿ(ಎಪಿಕ್), ಪಡಿತರ ಚೀಟಿ ಮುಂತಾದವುಗಳನ್ನು ಆಧರಿಸಿ ಪೌರತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿದೆ, ಆ ಮೂಲಕ ಸಂವಿಧಾನದ ನೀತಿಯನ್ನು ಉಲ್ಲಂಘಿಸುತ್ತಿದೆ. ಕಾನೂನಿನ ಪ್ರಕಾರ ಗೃಹ ಇಲಾಖಗೆ ಮಾತ್ರ ಪೌರತ್ವವನ್ನು ನಿರ್ಧರಿಸುವ ಹಕ್ಕಿದೆ. ಇಸಿಐಗೆ ಇಲ್ಲ. ಆದರೆ ಇದನ್ನು ಪಾಲಿಸುತ್ತಿಲ್ಲ ಎಂದು ಹೇಳುತ್ತಾರೆ ಶ್ರೀಪಾದ್ ಭಟ್.

Your generous support will help us remain independent and work without fear.

Latest News

Related Posts