ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆ, ನಿಗಮ ಮಂಡಳಿಗಳು ಬಾಕಿ ಉಳಿಸಿಕೊಂಡಿರುವ ಬಹುಕೋಟಿ ಮೊತ್ತವನ್ನು ಪಾವತಿಸಬೇಕು ಎಂದು ಬಿಎಸ್‌ಎನ್‌ಎಲ್‌ನ ಕರ್ನಾಟಕ ವೃತ್ತ ಮುಖ್ಯ ಪ್ರಧಾನ ವ್ಯವಸ್ಥಾಪಕರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದಿದ್ದ ಪತ್ರದ ಮೇಲೆ ಕ್ರಮ ಕೈಗೊಳ್ಳದ ಕಾರಣ, ಇದೀಗ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಬಿಎಸ್ಎನ್‌ಎಲ್‌ನಿಂದ ಸ್ಥಿರ ದೂರವಾಣಿ, ಬ್ರಾಡ್ ಬ್ಯಾಂಡ್, ಅಂತರ್ಜಾಲ ಸಂಪರ್ಕ ಕಲ್ಪಿಸುವ ಎಫ್‌ಟಿಟಿಎಚ್ (ಫೈಬರ್ ಟು ದಿ ಹೋಂ), ವಿಪಿನ್ (ವರ್ಚುವಲ್ ಪ್ರೈವೈಟ್ ನೆಟ್‌ವರ್ಕ್) ಮೊಬೈಲ್ ಸಂಪರ್ಕ ಸೇವೆ ಪಡೆಯುತ್ತಿರುವ ರಾಜ್ಯದಾದ್ಯಂತ ಸರ್ಕಾರದ ವಿವಿಧ ಇಲಾಖೆಗಳು 29.09 ಕೋಟಿ ಬಾಕಿ ಉಳಿಸಿಕೊಂಡಿವೆ. 2024ರಲ್ಲಿಯೂ ಸಹ 34 ಕೋಟಿಯಷ್ಟು ಬಾಕಿ ಉಳಿಸಿಕೊಂಡಿತ್ತು. ನವೆಂಬರ್ ಅಂತ್ಯಕ್ಕೆ 44.18 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದವು.
ನಿರಂತರವಾಗಿ ಬಿಲ್ ಪಾವತಿ ಆಗದಿದ್ದರೂ ಸರ್ಕಾರದ ವಿವಿಧ ಯೋಜನೆಗಳಿಗೆ ಡಿಜಿಟಲ್ ಸಂಪರ್ಕದ ಅಗತ್ಯ ಮತ್ತು ಅನಿವಾರ್ಯ ಮನಗಂಡು ತಡೆರಹಿತವಾಗಿ ಸೇವೆ ನೀಡುತ್ತಿದೆ. ಆದರೆ ಬಿಲ್ ಪಾವತಿಗೆ ಉಳಿದಿರುವುದರಿಂದ ಗುಣಮಟ್ಟದ ಸೇವೆ ನೀಡಲು ಕಷ್ಟಪಡುತ್ತಿದೆ. ಕೆಲವು ಇಲಾಖೆಗಳು ದೊಡ್ಡ ಮೊತ್ತದ ಬಿಲ್ ಪಾವತಿಗೆ ಬಾಕಿ ಉಳಿಸಿಕೊಂಡಿವೆ. ಹಳೆ ಬಾಕಿ ಬಿಲ್‌ಗಳನ್ನು ತಕ್ಷಣ ಪಾವತಿಸಬೇಕು ಎಂದು ಬಿಎಸ್‌ಎನ್‌ಎಲ್ ಕರ್ನಾಟಕ ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ರವಿ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಒಂದು ವರ್ಷದ ಹಿಂದೆಯೇ ಪತ್ರ ಬರೆದಿದ್ದರು.
ಹೀಗಾಗಿ ಸ್ವತಃ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರೇ ನೇರವಾಗಿ ರಾಜ್ಯ ಸರ್ಕಾರದ ಮುಖ್ಯಮಂತ್ರಿಗೆ 2025ರ ಸೆ.6ರಂದೇ ಪತ್ರ ಬರೆದಿದ್ದರು. ಆದರೂ ಬಾಕಿ ಮೊತ್ತವನ್ನು ಪಾವತಿಸಲು ಕ್ರಮ ಕೈಗೊಂಡಿರಲಿಲ್ಲ. ಈ ಪತ್ರ ಬರೆದ 3 ತಿಂಗಳ ನಂತರ ಎಚ್ಚೆತ್ತುಕೊಂಡಿರುವ ಸರ್ಕಾರವು ಬಾಕಿ ಇರುವ ಮೊತ್ತವನ್ನು ಪಾವತಿಸುವ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ನಿಗಮ ಮಂಡಳಿಗಳಿಗೆ ಪತ್ರ ಬರೆದಿದೆ.
ವಸತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಕರ್ನಾಟಕ ಗೃಹ ಮಂಡಳಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ರಾಜೀವ್ ಗಾಂಧಿ ವಸತಿ ನಿಗಮ, ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಾರೆ.

2026ರ ಜನವರಿ 28ರಂದು ಬರೆದಿರುವ ಪತ್ರವು ‘ದಿ ಫೈಲ್’ಗೆ ಲಭ್ಯವಾಗಿದೆ.
ಕೆಹೆಚ್‌ಬಿ ಸೇರಿದಂತೆ ಸರ್ಕಾರಿ ಇಲಾಖೆಗಳು ಮತ್ತು ನಿಗಮ ಮಂಡಳಿಗಳಿಂದ ಬಿಎಸ್‌ಎನ್‌ಎಲ್‌ಗೆ ಒಟ್ಟಾರೆ 29.09 ಕೋಟಿಯಷ್ಟು ಬಾಕಿ ಇದೆ. 2024ರಲ್ಲಿಯೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು 36.29 ಕೋಟಿಯಷ್ಟು ಮೊತ್ತವನ್ನು ಪಾವತಿಸಲು ಬಾಕಿ ಉಳಿಸಿಕೊಂಡಿದ್ದವು. ಇದೀಗ 2025ರಲ್ಲಿಯೂ 29.09 ಕೋಟಿಯನ್ನು ಬಾಕಿ ಉಳಿಸಿಕೊಂಡಿರುವುದು ಮುನ್ನೆಲೆಗೆ ಬಂದಿದೆ.
ರಾಜ್ಯ ಸರ್ಕಾರದ ಹಲವು ಇಲಾಖೆಗಳು 2025ರ ಜುಲೈ ಅಂತ್ಯಕ್ಕೆ 44.18 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದವು. ಹೀಗಾಗಿ ಈ ಮೊತ್ತವನ್ನು ಪಾವತಿಸಲು ಸರ್ಕಾರದ ಇಲಾಖೆಗಳಿಗೆ ನಿರ್ದೇಶನ ನೀಡಬೇಕು ಎಂದು ಕೇಂದ್ರ ಸಂಪರ್ಕ ಖಾತೆಯ ಸಚಿವ ಜ್ಯೋತಿರಾದಿತ್ಯ ಸಿಂಧ್ಯ ಅವರು ಮುಖ್ಯಮಂತ್ರಿಗೆ ನೇರವಾಗಿ ಬರೆದಿದ್ದ ಪತ್ರದಲ್ಲಿ ಕೋರಿದ್ದರು.

ಬಾಕಿ ಉಳಿಸಿಕೊಂಡಿರುವ ಇಲಾಖೆಗಳ ಪೈಕಿ ಪೊಲೀಸ್ ಇಲಾಖೆಯು 6.54 ಕೋಟಿ, ರೂರಲ್ ಫೈಬರ್ ಪ್ರಾಜೆಕ್ಟ್ ಶಾಖೆಯಿಂದ 3.51 ಕೋಟಿ ಪಾವತಿಸಬೇಕಿದೆ. ಕೊಪ್ಪಳದ ಕಿಮ್ಸ್‌ನಿಂಧ 81,705, ಕೆಪಿಟಿಸಿಎಲ್‌ನಿಂದ 5,37,990, ಕೃಷ್ಣ ಭಾಗ್ಯ ಜಲ ನಿಗಮದಿಂದ 1,33,518 , ಮೆಸ್ಕಾಂನಿಂದ 87,806, ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದಿಂದ 2,13,524, ಪರಿಶಿಷ್ಟ ಪಂಗಡಗಳ ಇಲಾಖೆಯು 42,288, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 1,46,724, ಮುನ್ಸಿಪಲ್ ಕಾರ್ಪೋರೇಷನ್ನಿಂದ 8,93,582, ಮೈಸೂರು ಮಹಾನಗರಪಾಲಿಕೆ 5,34,790, ಗಣಿ ನಿಯಂತ್ರಕರ ಕಚೇರಿ 1,04,880, ಪಿಡಬ್ಲ್ಯೂಡಿ ಕಚೇರಿಗಳು 28,956, ಕೆಎಚ್‌ಎಸ್‌ಡಿಆರ್‍ಪಿ 55,954, ಕಂದಾಯ ಇಲಾಖೆ 1.71 ಕೋಟಿ, ಆರ್‍ಡಿಪಿಆಋf 17,71,437, ಸಮಾಜ ಕಲ್ಯಾಣ ಇಲಾಖೆ 26,55,369, ಕ್ರೀಡಾ ಇಲಾಖೆ 51,547, ಸಾರಿಗೆ ಇಲಾಖೆ 12,40,665, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ 12,57,025 ರು ಸೇರಿ ಒಟ್ಟಾರೆ 29,09,51,889 ರು ಬಾಕಿ ಉಳಿಸಿಕೊಂಡಿರುವುದು ಪತ್ರದಿಂದ ತಿಳಿದು ಬಂದಿದೆ.

ಹಿಂದಿನ ಸರ್ಕಾರಗಳ ಅವಧಿಯಲ್ಲಿಯೂ ಎಲ್ಲಾ ಇಲಾಖೆಗಳು 38.54 ಕೋಟಿ ರು. ಬಾಕಿ ಉಳಿಸಿಕೊಂಡಿದ್ದವು. ಬಾಕಿ ಉಳಿಸಿಕೊಂಡಿರುವ ದೂರವಾಣಿ ಬಿಲ್‌ನ್ನು ಪಾವತಿಸಲು ಸರ್ಕಾರದ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಬೇಕು ಎಂದು ಬಿಎಸ್‌ಎನ್‌ಎಲ್‌ನ ಮುಖ್ಯ ವ್ಯವಸ್ಥಾಪಕ ಸುಶೀಲ್‌ಕುಮಾರ್ ಮಿಶ್ರಾ ಅವರು 2020ರ ಮಾರ್ಚ್ 2ರಂದು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ ಎಸ್ ಎನ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ದರು. 2020ರಿಂದ 2026ರವರೆಗೂ ಪೂರ್ಣ ಪ್ರಮಾಣದಲ್ಲಿ ಬಾಕಿ ಮೊತ್ತ ಪಾವತಿಯಾಗಿಲ್ಲ.
ಇಲಾಖೆಗಳ ಕಚೇರಿಗಳಲ್ಲಿರುವ ಸ್ಥಿರ ದೂರವಾಣಿ ಬಳಕೆಗೆ ಸಂಬಂಧಿಸಿದಂತೆ 34.59 ಕೋಟಿ ರು., ಅಧಿಕಾರಿ, ನೌಕರರು ಬಳಸಿಕೊಂಡಿರುವ ಮೊಬೈಲ್ ಸೇವೆಗಳಿಗೆ ಸಂಬಂಧಿಸಿದಂತೆ 3.95 ಕೋಟಿ ರು. ಬಾಕಿ ಉಳಿದಿತ್ತು.

‘ಸರಿಯಾದ ಸಮಯಕ್ಕೆ ಹೊರ ಬಾಕಿ ಪಾವತಿಯಾಗದಿದ್ದರೆ ಸೇವೆಗಳನ್ನು ವಿಸ್ತರಿಸಲು ಕಷ್ಟಕರವಾಗುತ್ತದೆ. ಸರ್ಕಾರದ ಇಲಾಖೆಗಳಿಗೆ ಡಿಜಿಟಲ್ ಸಂಪರ್ಕ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಬಾಕಿ ಉಳಿಸಿಕೊಂಡಿರುವ ದೂರವಾಣಿ ಮೊತ್ತವನ್ನು ಪ್ರಮುಖ ಆದ್ಯತೆಯಾಗಿ ಪರಿಗಣಿಸಿ ತಕ್ಷಣವೇ ಪಾವತಿಸಲು ಕ್ರಮ ಕೈಗೊಳ್ಳಬೇಕು,’ ಎಂದು ಸುಶೀಲ್‌ಕುಮಾರ್ ಮಿಶ್ರಾ 5 ವರ್ಷಗಳ ಹಿಂದೆಯೇ ಕೋರಿದ್ದರು.
ದೂರವಾಣಿ ಮೊತ್ತವನ್ನು 2019ರ ಡಿಸೆಂಬರ್ 31 ಅಂತ್ಯಕ್ಕೆ ಬಾಕಿ ಉಳಿಸಿಕೊಂಡಿದ್ದ ಇಲಾಖೆಗಳಲ್ಲಿ ಇ-ಆಡಳಿತ ಇಲಾಖೆ ಅಗ್ರ ಸ್ಥಾನದಲ್ಲಿತ್ತು. ಈ ಇಲಾಖೆ 11,77,59,953 ಕೋಟಿ ರು. ಬಾಕಿ ಉಳಿಸಿಕೊಂಡಿದ್ದರೆ ಪೊಲೀಸ್ ಇಲಾಖೆ 9,53,23,581 ಕೋಟಿ, ಪಿಡಿಒಗಳಿಂದ 5,47,60,039 ಕೋಟಿ, ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ನಾಡ ಕಚೇರಿಗಳು 2,81,06,219 ಕೋಟಿ ಬಾಕಿ ಉಳಿಸಿಕೊಳ್ಳುವ ಮೂಲಕ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದವು.
ಕಿಯೋನಿಕ್ಸ್ 82,96,553 ರು., ಕೃಷಿ ಇಲಾಖೆ 37,21,543 ರು., ಬಿಬಿಎಂಪಿ 38,29,622 ರು., ಶಿಕ್ಷಣ ಇಲಾಖೆ 34,92,708 ರು., ಆರೋಗ್ಯ ಇಲಾಖೆ 35,01,241 ರು., ಅರಣ್ಯ ಇಲಾಖೆ 19,51,259 ರು., ಕಾರ್ಮಿಕ ಇಲಾಖೆ 3,11,780 ರು., ಎಂ-ಗೌರ್ನೆನ್ಸ್ 9,06,066 ರು., ತಾಲೂಕು ಪಂಚಾಯ್ತಿಗಳಿಂದ 11,12,518 ರು., ಸಾರಿಗೆ ಇಲಾಖೆ 13,02,495 ರು., ನಗರಾಭಿವೃದ್ಧಿ ಇಲಾಖೆ 11,64,577 ರು., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 4,72,900 ರು., ಸೇರಿದಂತೆ ಇನ್ನಿತರೆ ಇಲಾಖೆಗಳು ಲಕ್ಷಾಂತರ ರು.ಮೊತ್ತವನ್ನು ಬಾಕಿ ಉಳಿಸಿಕೊಂಡಿದ್ದವು.
ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್‌ಎನ್‌ಎಲ್) ರಾಜ್ಯದ ಸರ್ಕಾರಿ ಸೇವೆಗಳಿಗೆ ದೂರವಾಣಿ ಸೌಲಭ್ಯ ಒದಗಿಸುತ್ತಿದೆ. ನಾಡಕಚೇರಿಗಳು, ಕೆ ಸ್ವಾನ್ ಯೋಜನೆ, ಸಿಸಿಟಿಎನ್‌ಎಸ್ ಯೋಜನೆ, ಪೊಲೀಸ್ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳಿಗೆ ಸ್ಥಿರ ದೂರವಾಣಿ ಉಪಕರಣಗಳನ್ನು ಒದಗಿಸುತ್ತಿದೆ.









