ಬೆಂಗಳೂರು; ಕಲಬುರಗಿ-ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಗಳ ಕುರಿತು ವಿಸ್ತೃತ ತನಿಖೆ ನಡೆಸಬೇಕು ಎಂದು ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ಸಿದ್ದರಾಮರೆಡ್ಡಿ ವಿ ಪಾಟೀಲ್ ಅವರು ನಾಲ್ಕು ವರ್ಷಗಳ ಹಿಂದೆಯೇ ಬರೆದಿದ್ದ ಪತ್ರವು ಸಹಕಾರ ಇಲಾಖೆಯಲ್ಲಿ ತೆವಳುತ್ತಿದೆ.
ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾಗಿರುವ ಬಹುಕೋಟಿ ಅಕ್ರಮಗಳ ಕುರಿತು ಲೋಕಾಯುಕ್ತ ತನಿಖೆ ನಡೆಸಲು ಈಚೆಗಷ್ಟೇ ಸಹಕಾರ ಇಲಾಖೆಯು ಆದೇಶಿಸಿತ್ತು. ಈ ಬೆಳವಣಿಗೆ ಮಧ್ಯೆಯೇ ಕಲ್ಬುರ್ಗಿ-ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿನ ಹಗರಣಗಳ ತನಿಖೆಗೆ ಸಂಬಂಧಿಸಿದಂತೆ ಕಳೆದ 5 ವರ್ಷಗಳಿಂದಲೂ ಯಾವುದೇ ಕ್ರಮವಹಿಸಿಲ್ಲ. ಹೀಗಾಗಿ ಬ್ಯಾಂಕ್‌ನ ಅಧ್ಯಕ್ಷರು 2020ರ ಜೂನ್ 30ರಂದು ಬರೆದಿದ್ದ ಪತ್ರವು ಇಲಾಖೆಯಲ್ಲಿ ಕೊಳೆಯುತ್ತಿದೆ.
ಕಲ್ಬುರ್ಗಿ ಯಾದರಿಗಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ನಲ್ಲಿನ ಹಗರಣಗಳ ಬಗ್ಗೆ ತನಿಖೆ ನಡೆಸಬೇಕು ಎಂದು 2020ರ ಜೂನ್ 30ರಂದು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಆದರೆ ಈ ಪತ್ರದ ಕುರಿತು 4 ವರ್ಷಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ ಕ್ರಮ ಕೈಗೊಳ್ಳುವಲ್ಲಿ ಹಿಂದಿನ ಬಿಜೆಪಿ ಮತ್ತು ಹಾಲಿ ಕಾಂಗ್ರೆಸ್ ಸರ್ಕಾರವು ವಿಫಲವಾಗಿದೆ.
ಸದ್ಯ ಈ ಪತ್ರವು 2024ರ ಅಕ್ಟೋಬರ್ 19ರಿಂದಲೂ ಸಹಕಾರ ಇಲಾಖೆಯಲ್ಲಿಯೇ ಇರುವುದು ಇ-ಆಫೀಸ್ ಲಾಗಿನ್‌ನಿಂದ ತಿಳಿದು ಬಂದಿದೆ.

ಪತ್ರದಲ್ಲೇನಿತ್ತು?
ಕಲ್ಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್ ನಷ್ಟ ಅನುಭವಿಸುತ್ತಿದೆ. ಜನ ಸಾಮಾನ್ಯರು ಬ್ಯಾಂಕ್‌ನಲ್ಲಿ ಠೇವಣಿ ಇಡಲು ಹಿಂಜರಿಯುತ್ತಿದ್ದಾರೆ. ಠೇವಣಿ ಸಂಗ್ರಹಣೆಯಲ್ಲಿ ಪ್ರಗತಿಯೇ ಇರುವುದಿಲ್ಲ. ದಿನದಿಂದ ದಿನಕ್ಕೆ ಠೇವಣಿಗಳು ಕಡಿಮೆ ಆಗುತ್ತಿವೆ. ಬ್ಯಾಂಕ್‌ನ ಬ್ಯಾಲೆನ್ಸ್ ಶೀಟ್‌ನ ಪ್ರಕಾರ ಸುಮಾರು 60.00 ಕೋಟಿ ನಷ್ಟದಲ್ಲಿದೆ. 2011ರಿಂದ 2015ರ ಅವಧಿಯಲ್ಲಿ ನೀಡಿದ್ದ ವಿವಿಧ ರೀತಿಯ ಸಾಲಗಳು ಇವತ್ತಿಗೂ ಬ್ಯಾಂಕ್‌ಗೆ ಮರು ಪಾವತಿ ಆಗಿಲ್ಲ ಎಂದು ಸಿದ್ರಾಮರೆಡ್ಡಿ ವಿ ಪಾಟೀಲ್ ಅವರು ಪತ್ರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

ಈ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಸೋಮಶೇಖರ ಗೋನಾಯಕ ಮತ್ತು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಶರಣಬಸಪ್ಪ ಬೆಣ್ಣೂರು ಅವರು ಕಾರಣರು. ಇವರು ಸೂಚಿಸಿದಂತೆ ವ್ಯಕ್ತಿಗಳಿಗೆ ಸಾಲ ನೀಡಲಾಗಿದೆ. ಈ ಪೈಕಿ ಬೆಣ್ಣೂರು ಅವರ ಸಂಬಂಧಿಕರದ್ದೇ ಹೆಚ್ಚಿನ ಪಾಲಿದೆ. ತಮ್ಮ ಸ್ನೇಹಿತರಿಗೆ ಕೋಟಿಗಟ್ಟಲೇ ಸಾಲಗಳನ್ನು ನೀಡಿ ಬ್ಯಾಂಕ್‌ನ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಅದೇ ರೀತಿ ವಿಶ್ವನಾಥ ಮಲಕೂಡ ಅವರು ಕಲ್ಬುರ್ಗಿ ಜಿಲ್ಲೆಯಲ್ಲಿ ಉಪ ನಿಬಂಧಕರಾಗಿ ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಚಿಂಚೋಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 1.50 ಕೋಟಿ ರು. ಅವ್ಯವಹಾರ ನಡೆದಿತ್ತು. ಇದನ್ನು ಮುಚ್ಚಿ ಹಾಕಲಾಗಿದೆ. ಹೀಗಾಗಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ ನಷ್ಟವಾಗಿದೆ ಎಂದು ಪ್ರಸ್ತಾಪಿಸಿರುವುದು ಗೊತ್ತಾಗಿದೆ.

ವಿಶ್ವನಾಥ ಮಲಕೂಡ ಅವರು ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ 150 ಕೋಟಿ ರು.ನಷ್ಟು ಮಧ್ಯಮಾವಧಿ ಸಾಲ ವಿತರಣೆ ಆಗಿದೆ. ಈ ಪೈಕಿ ಸ್ವಲ್ಪ ಹಣವನ್ನಷ್ಟೇ ವಸೂಲಿ ಮಾಡಲಾಗಿದೆ.
ಬೆಣ್ಣೂರು ಅವರ ಅವಧಿಯಲ್ಲಿ ನೀಡಿದ್ದ ಒಟ್ಟು ಸಾಲದ ಪೈಕಿ 85.00 ಕೋಟಿಯಷ್ಟು ಮರು ಪಾವತಿಗೆ ಬಾಕಿ ಇದೆ. ಸಾಲದ ಅರ್ಜಿ, ದಾಖಲೆಗಳು ಪೂರ್ಣ ಪ್ರಮಾಣದಲ್ಲಿ ಇಲ್ಲದೇ ಇದ್ದರೂ ಸಹ ಮಂಜೂರು ಮಾಡಲಾಗಿದೆ. ಹೀಗಾಗಿ ಸಾಲ ನೀಡಿದ್ದ ಉದ್ದೇಶವು ಈಡೇರಿಲ್ಲ. ಹಸುಗಳು ಇಲ್ಲದೇ ಇದ್ದರೂ ಸಹ ಹೈನುಗಾರಿಕೆ ಸಾಲ ನೀಡಲಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಈ ಬ್ಯಾಂಕ್‌ನಲ್ಲಿ 302 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿವೆ. 2019-20ನೇ ಸಾಲಿನಲ್ಲಿ 30,120 ಸದಸ್ಯರಿಗೆ 71.87 ಕೋಟಿ ಸಾಲ ನೀಡಲಾಗಿತ್ತು. ಈ ಜಿಲ್ಲೆಯಲ್ಲಿರುವ ರೈತರಿಗೆ ಕನಿಷ್ಟ 460 ಕೋಟಿ ಕೃಷಿ ಸಾಲದ ಅವಶ್ಯಕತೆ ಇದೆ. ಆದರೆ ಈ ಅವಶ್ಯಕತೆಗೆ ಅನುಗುಣವಾಗಿ ರೈತರಿಗೆ ಕೃಷಿ ಮತ್ತು ಕೃಷಿ ಪೂರಕ ಸಾಲ ನೀಡಲು ಬ್ಯಾಂಕ್ ವಿಫಲವಾಗಿದೆ ಎಂದು ತಿಳಿದು ಬಂದಿದೆ.

2017ರ ಮಾರ್ಚ್‌ನಲ್ಲಿ 17,785 ರೈತರಿಗೆ ಮಂಜೂರಾಗಿದ್ದ 26.65 ಕೋಟಿ ಮೊತ್ತದ ಅಲ್ಪಾವಧಿ ಸಾಲವು ಸುಳ್ಳು ಸಾಲವಾಗಿದೆ. ಈ ಪೈಕಿ 17.92 ಕೋಟಿ ಸಾಲ ಮನ್ನಾ ಕ್ಲೈಂ ಮಾಡಲಾಗಿದೆ. ಇದು ಅತ್ಯಂತ ಗಂಭೀರ ಪ್ರಕರಣ ಎಂದು ಕಲ್ಬುರ್ಗಿ ವಿಭಾಗದ ಸಹಕಾರ ಸಂಘಗಳ ಜಂಟಿ ನಿಬಂಧಕರು ವರದಿ ಮಾಡಿದ್ದರು. ಆದರೂ ಬ್ಯಾಂಕ್‌ನ ಆಡಳಿತ ಮಂಡಳಿಯು ಯಾವುದೇ ಕ್ರಮ ಜರುಗಿಸಿಲ್ಲ ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಅದೇ ರೀತಿ ನಬಾರ್ಡ್ ಕೂಡ 2020ರಲ್ಲೇ ವರದಿ ಮಾಡಿತ್ತು. ಇದರ ಪ್ರಕಾರ 2018ರ ಮಾರ್ಚ್ 3 ಅಂತ್ಯಕ್ಕೆ 137.28 ಕೋಟಿ ರು.ಗಳಿಂದ 2019ರ ಮಾರ್ಚ್ 31ರ ಅಂತ್ಯಕ್ಕೆ 57.96 ಕೋಟಿಗೆ ಇಳಿಕೆಯಾಗಿತ್ತು. ಈ ಅವಧಿಯಲ್ಲಿ ಶೇ.53.55ರಷ್ಟು ಋಣಾತ್ಮಕ ಬೆಳವಣಿಗೆ ಆಗಿದೆ ಎಂದು ವರದಿಯಲ್ಲಿ ದಾಖಲಿಸಿತ್ತು.
ಹಾಗೆಯೇ ಬ್ಯಾಂಕ್‌ನ ಅನುತ್ಪಾದಕ ಆಸ್ತಿಗಳ ಪ್ರಮಾಣವು ಶೇ.16.09ರಿಂದ ಶೇ.23.23ಕ್ಕೆ ಹೆಚ್ಚಳವಾಗಿದೆ. ಕೃಷಿ ಸಾಲವು 432 ಕೋಟಿಯಿಂದ 315 ಕೋಟಿಗ4 ಮತ್ತು 2019-20ನೇ ಸಾಲಿನಲ್ಲಿ 71 ಕೋಟಿಗೆ ಇಳಿಕೆಯಾಗಿತ್ತು. 2018-19ನೇ ಸಾಲಿನಲ್ಲೇ 36 ಕೋಟಿ ಕ್ರೊಢೀಕೃತ ನಷ್ಟ ಅನುಭವಿಸಿತ್ತು ಎಂಬುದು ತಿಳಿದು ಬಂದಿದೆ.

‘ಬ್ಯಾಂಕ್‌ನಲ್ಲಿನ ಹಲವು ನ್ಯೂನತೆಗಳನ್ನು ಸರಿಪಡಿಸಲು ಸಹಕಾರ ಸಂಘಗಳ ನಿಬಂಧಕರು 2019ರ ಫೆ.25 ಮತ್ತು ಸೆ.26ರಂದು ಸಭೆಗಳನ್ನು ನಡೆಸಿ ಹಲವು ಸೂಚನೆಗಳನ್ನು ನೀಡಿದ್ದರು. ಸಾಲ ವಸೂಲಾತಿ ಮಾಡಿ ನಬಾರ್ಡ್‌ನಿಂದ ಪುನರ್ಧನ ಪಡೆಯುವ ನಿಟ್ಟಿನಲ್ಲಿ ಈ ಬ್ಯಾಂಕ್ ಯಾವುದೇ ಸೂಚನೆಗಳನ್ನೂ ಪಾಲಿಸಿಲ್ಲ. ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆಯನ್ನೂ ಹಾಕಿಕೊಂಡಿರಲಿಲ್ಲ. ಹೀಗಾಗಿ ಈ ಬ್ಯಾಂಕ್‌ನ್ನು ಸೂಪರ್‍ಸೀಡ್ ಮಾಡಬೇಕು ಎಂದು ರಿಜಿಸ್ಟ್ರಾರ್ ಕೋರಿದ್ದರು.
ಶಾಸನಬದ್ಧವಾಗಿ ನಿರ್ವಹಿಸಬೇಕಾಗಿದ್ದ ಈ ಬ್ಯಾಂಕ್ ತನ್ನ ಕರ್ತವ್ಯಗಳನ್ನು ಪಾಲಿಸಿಲ್ಲ. ನಬಾರ್ಡ್ ಮತ್ತು ಸಹಕಾರ ಸಂಘಗಳ ನಿಬಂಧಕರು ಹಾಗೂ ಸರ್ಕಾರ ಕಾಲಕಾಲಕ್ಕೆ ನೀಡಿದ್ದ ಸೂಚನೆಗಳನ್ನು ಪಾಲಿಸದೆಯೇ ರೈತ ಸಹಕಾರಿ ಸದಸ್ಯರನ್ನು ಸಂಕಷ್ಟಕ್ಕೆ ದೂಡಿರುವುದು ದಾಖಲೆಯಿಂದ ತಿಳಿದು ಬಂದಿದೆ.
ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ರೈತರಿಗೆ 460 ಕೋಟಿ ರು. ಕೃಷಿ ಸಾಲದ ಅವಶ್ಯಕತೆ ಇದ್ದರೂ 2019-20ನೇ ಸಾಲಿನಲ್ಲಿ 30,120 ಸದಸ್ಯರಿಗೆ 71.87 ಕೋಟಿ ರು. ಸಾಲ ನೀಡಿದೆ. ಅವಶ್ಯಕತೆಗನುಗುಣವಾಗಿ ರೈತರಿಗೆ ಕೃಷಿ ಮತ್ತು ಕೃಷಿ ಪೂರಕ ಸಾಲ ನೀಡಲು ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಸಾಲ ವಿತರಣೆಯಲ್ಲಿ ಕೋಟ್ಯಂತರ ರು. ಅಕ್ರಮ; ಕಲಬುರಗಿ ಡಿಸಿಸಿ ಬ್ಯಾಂಕ್ ಸೂಪರ್‌ಸೀಡ್?
ಕಲ್ಬುರ್ಗಿ ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಇಷ್ಟೆಲ್ಲಾ ಅಪರತಪರಗಳು ನಡೆದಿದ್ದರೂ ಸಹ ಹಿಂದಿನ ಬಿಜೆಪಿ ಮತ್ತು ಹಾಲಿ ಕಾಂಗ್ರೆಸ್ ಸರ್ಕಾರವು ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ.
ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ನಲ್ಲಿ ಬಹುಕೋಟಿ ಹಗರಣ; ಲೋಕಾಯುಕ್ತದಿಂದ ತನಿಖೆ, ಹೊರಬಿದ್ದ ಆದೇಶ
ಕೋಲಾರ-ಚಿಕ್ಕಬಳ್ಳಾಪುರ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ನಡೆದಿರುವ ಹಗರಣಗಳ ಕುರಿತು ರಾಜ್ಯ ಸರ್ಕಾರವು ಈಚೆಗಷ್ಟೇ ಲೋಕಾಯುಕ್ತ ತನಿಖೆಗೆ ವಹಿಸಿದೆ. ಈ ಕುರಿತು ದಿ ಫೈಲ್ 2026ರ ಏಪ್ರಿಲ್ 18ರಂದೇ ವರದಿ ಪ್ರಕಟಿಸಿತ್ತು.




