ಅರ್ಹ ಪ್ರಕರಣಗಳೂ ಮಿಸ್ಸಿಂಗ್‌ ರೆಕಾರ್ಡ್ಸ್‌ಗೆ ರವಾನೆ, ತಹಶೀಲ್ದಾರ್‍‌ಗಳ ಕಳಪೆ ಆಡಳಿತ; ಪ್ರಗತಿ ಕುಂಠಿತ

ಬೆಂಗಳೂರು; ಭೂ ಮಾಪನ, ಬಗರ್‍‌ ಹುಕುಂ ಸಾಗುವಳಿ, ಇನಾಂ ಮಂಜೂರಾತಿ ಸೇರಿದಂತೆ ಕಂದಾಯ ವಿಷಯಗಳಿಗೆ ಸಂಬಂಧಿಸಿದಂತೆ ತಹಶೀಲ್ದಾರ್‍‌ಗಳ ಹಂತದಲ್ಲಿಯೇ ಆಡಳಿತ ಕುಸಿದು ಬಿದ್ದಿದೆ. ವಿನಾ ಕಾರಣ ಅವಶ್ಯವಿಲ್ಲದ ವಿಷಯಕ್ಕೆ ಸರ್ಕಾರಕ್ಕೆ ಸ್ಪಷ್ಟೀಕರಣ ಕೋರುವುದು, ಕ್ಷುಲಕ ಕಾರಣಗಳಿಗೆ ಸರ್ಕಾರಕ್ಕೆ ಕಡತ  ಸಲ್ಲಿಸುವುದು ಸೇರಿದಂತೆ ಇನ್ನಿತರೆ ವಿಷಯಗಳಲ್ಲಿ ಕಾಲಹರಣ  ಮಾಡುತ್ತಿರುವ  ತಹಶೀಲ್ದಾರ್‍‌ಗಳು ಕಳಪೆ ಆಡಳಿತ ನೀಡುತ್ತಿರುವುದು ಇದೀಗ ಬಹಿರಂಗವಾಗಿದೆ.

 

ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಅಧಿವೇಶನಕ್ಕೂ ಮುನ್ನ ನಡೆಸಿದ್ದ ವಿಡಿಯೋ ಸಂವಾದದಲ್ಲಿ ತಹಶೀಲ್ದಾರ್‍‌ಗಳ ಕಳಪೆ ಆಡಳಿತವು ಬಹಿರಂಗವಾಗಿದೆ. ಅಲ್ಲದೇ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರೇ  ತಹಶೀಲ್ದಾರ್‍‌ ಹಂತದಲ್ಲೇ ಕಳಪೆ ಆಡಳಿತ ಹೇಗಾಗುತ್ತಿದೆ ಎಂದು ಹಲವು ಪ್ರಕರಣಗಳನ್ನು ಖುದ್ದು  ಅನಾವರಣಗೊಳಿಸಿರುವುದು ತಿಳಿದು ಬಂದಿದೆ.

 

ಹಾಗೆಯೇ  ಅರ್ಹ ಪ್ರಕರಣಗಳನ್ನೂ ಸಹ ಮಿಸ್ಸಿಂಗ್‌ ರೆಕಾರ್ಡ್ಸ್‌ ಗೆ ಕಳಿಸಲಾಗುತ್ತಿದೆ. ಅನೇಕ ತಾಲೂಕುಗಳಲ್ಲಿ ದಾಖಲಾತಿಗಳ ಡಿಜಿಟೈಜೇಷನ್‌ ವಿಚಾರದಲ್ಲಿಯೂ ಭಾರೀ ಹಿಂದೆ ಬಿದ್ದಿದ್ದಾರೆ. ಕೃಷ್ಣಬೈರೇಗೌಡ ಅವರು ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ್ದ ವೇಳೆಯಲ್ಲಿ  ತಹಶೀಲ್ದಾರ್‍‌ಗಳ ಆಡಳಿತ ವೈಖರಿಯ ಹಲವು ಮುಖಗಳು ಮುನ್ನೆಲೆಗೆ ಬಂದಿವೆ.

 

ಕುರುಗೋಡು ತಾಲೂಕಿಗೆ ಸಂಬಂಧಿಸಿದಂತೆ ಕಳೆದ ಪರಿಶೀಲನಾ ಸಭೆಯಲ್ಲಿಯೂ 36 ಪ್ರಕರಣಗಳು ಬಾಕಿ ಇದ್ದವು. ಈ ಬಾರಿ ಪರಿಶೀಲನಾ ಸಭೆಯಲ್ಲಿಯೂ  ಸಹ  36 ಪ್ರಕರಣಗಳು ಬಾಕಿ ಇದ್ದವು.  ಅಂದರೇ ಒಂದೇ ಒಂದು ಪ್ರಕರಣದಲ್ಲಿ ಪ್ರಗತಿಯೂ ಕಂಡು ಬಂದಿಲ್ಲ. ಇದಕ್ಕೆ ಸ್ಪಷ್ಟನೆ ನೀಡಿದ್ದ ತಹಶೀಲ್ದಾರ್‍‌, ಪ್ರಗತಿಯಾಗದೇ ಇರುವ ಎಲ್ಲಾ ಪ್ರಕರಣಗಳೂ ಇನಾಂ ಭೂಮಿಗೆ ಸಂಬಂಧಿಸಿವೆ, ಹೀಗಾಗಿ ಸ್ಪಷ್ಟೀಕರಣ ಕೋರಿ ಸರ್ಕಾರಕ್ಕೆ ಕಡತ ಸಲ್ಲಿಸಲಾಗಿದೆ ಎಂದು ಜಾರಿಕೊಳ್ಳಲು ಯತ್ನಿಸಿದ್ದರು.

 

 

ಆದರೆ ವಾಸ್ತವದಲ್ಲಿ ಈ ಎಲ್ಲಾ ಪ್ರಕರಣಗಳನ್ನೂ ಜಿಲ್ಲಾಧಿಕಾರಿಗಳ ಹಂತದಲ್ಲೇ ಸೂಕ್ತ ಕ್ರಮ ವಹಿಸಬೇಕು. ಈ ಬಗ್ಗೆ  ಹಲವಾರು ಬಾರಿ ಸುತ್ತೋಲೆ, ಆದೇಶಗಳನ್ನೂ ಸಹ ಹೊರಡಿಸಲಾಗಿದೆ. ಆದರೂ ಸ್ಪಷ್ಟೀಕರಣ ಕೋರಿ ಸರ್ಕಾರಕ್ಕೆ ಸಲ್ಲಿಸಿ  ಕ್ಷುಲಕವಾಗಿ ವರ್ತಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಖುದ್ದು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರೇ ಚಾಟಿ ಬೀಸಿದ್ದರು.

 

‘ಕಾಯ್ದೆ ಮತ್ತು ನಿಯಮಗಳ ಅನ್ವಯ ಪರಿಶೀಲಿಸಿ ಜಿಲ್ಲಾಧಿಕಾರಿಗಳ ಹಂತದಲ್ಲಿ ಸೂಕ್ತ ಕ್ರಮ ವಹಿಸಬೇಕು ಎಂದು ಕಂದಾಯ ಆಯುಕ್ತರು ತಿಳಿಸಿದರು. ವಿನಾಕಾರಣ ಅವಶ್ಯವಿಲ್ಲದ ವಿಷಯಕ್ಕೆ ಸರ್ಕಾರಕ್ಕೆ ಸ್ಪಷ್ಟೀಕರಣ ಕೋರುವುದು ಕಾಲಹರಣ ಮಾಡುವುದು ಸರಿಯಾದ ಕ್ರಮವಲ್ಲ,’ ಎಂದು ಸಭೆಯಲ್ಲಿಯೇ ತಹಶೀಲ್ದಾರ್‍‌ಗಳ ಮುಖವಾಡವನ್ನು ಕಳಚಿರುವುದು ಗೊತ್ತಾಗಿದೆ.

 

ಕುಂದಾಪುರ ತಾಲೂಕಿನಲ್ಲಿ ಬಹುತೇಕ ಶೇ. 90ರಷ್ಟು ಪ್ರಕರಣಗಳು ಪೂರ್ಣಗೊಂಡಿವೆ. ಶೇ. 10 ಪ್ರಕರಣಗಳಲ್ಲಿ ಏಕೆ ತಡೆಯಾಗಿದೆ, ಪ್ರಕರಣಗಳನ್ನು ವಿಲೇವಾರಿ ಮಾಡಿಲ್ಲ . ಗದಗ್, ಪೊನ್ನಂಪೇಟೆ, ಗುರುಮಿಟ್ಕಲ್‌ ತಾಲೂಕುಗಳಲ್ಲಿ ಪ್ರಗತಿ ಕುಂಠಿತವಾಗಿದೆ.  ತ್ವರಿತವಾಗಿ ಪ್ರಕರಣಗಳನ್ನು ಮುಕ್ತಾಯಗೊಳಿಸುತ್ತಿಲ್ಲ.

 

 

ತುಮಕೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿನ ಕೆಲವು ತಾಲೂಕುಗಳ ಹೊರತುಪಡಿಸಿ ಉಳಿದಂತಹ ಎಲ್ಲಾ ತಾಲೂಕುಗಳಲ್ಲೂ ಡಾಟಾ ಎಂಟ್ರಿ ವೈಸ್‌, ಗ್ರಾಮ ಆಡಳಿತಾಧಿಕಾರಿ ಮತ್ತು ಕಂದಾಯ ನಿರೀಕ್ಷಕರ ಹಂತದಲ್ಲಿ 1ರಿಂದ 5 ಪ್ರಕರಣಗಳು ಮುಕ್ತಾಯಗೊಂಡಿಲ್ಲ.

 

ಕೆಲವು ತಾಲೂಕುಗಳಲ್ಲಿ ಕಳಪೆ ಕೆಲಸ ಆಗಿದೆ. ಉದಾಹರಣೆಗೆ ಗದಗ್ ಜಿಲ್ಲೆಯಲ್ಲಿ 150ರಲ್ಲಿ 150 ಪ್ರಕರಣಗಳು ಮಿಸ್ಸಿಂಗ್‌ ರೆಕಾರ್ಡ್ಸ್‌ ಎಂದು ವಾಪಾಸ್‌ ಆಗಿವೆ.  ಮಿಸ್ಸಿಂಗ್ ರೆಕಾರ್ಡ್ಸ್‌ ವಾಪಾಸ್‌ ಬಂದಿರುವುದಕ್ಕೆ ಸಂಬಂಧಿಸಿದಂತೆ 1,50,000 ಪ್ರಕರಣಗಳು ಅಳತೆಗಾಗಿ ಕಳಿಸಲಾಗಿದೆ. 1,66,000 ಪ್ರಕರಣಗಳು ಮಿಸ್ಸಿಂಗ್‌ ರೆಕಾರ್ಡ್ಸ್‌ ಗೆ ಹೋಗಿರುತ್ತದೆ. ಅರ್ಹ ಪ್ರಕರಣಗಳನ್ನೂ ಸಹ ಮಿಸ್ಸಿಂಗ್‌ ರೆಕಾರ್ಡ್ಸ್‌ ಗೆ ಕಳಿಸಿರುವುದು ಕಂಡು ಬಂದಿದೆ.

 

ಕಾರ್ಕಳ ತಾಲೂಕಿನಲ್ಲಿ ಕಳೆದ ಪರಿಶೀಲನಾ ಸಭೆಯಲ್ಲಿ 221 ಪ್ರಕರಣಗಳು ಬಾಕಿ ಇದ್ದವು. ಈ ಬಾರಿಯೂ 191 ಪ್ರಕರಣಗಳು ಬಾಕಿ ಇವೆ. ಕೇವಲ 30 ಪ್ರಕರಣಗಳು ಮುಕ್ತಾಯಗೊಂಡಿವೆ. ಹೆಚ್ಚು ಪ್ರಕರಣಗುಳುಳ್ಳ  ಉಳ್ಳಾಲ ತಾಲೂಕಿನಲ್ಲಿ 227 ಪ್ರಕರಣಗಳು ಪ್ರಗತಿಯಾಗಿವೆ. ಕುಂದಾಪುರ ತಾಲೂಕಿನಲ್ಲಿ 113 ಪ್ರಕರಣಗಳು ಪ್ರಗತಿಯಾಗಿವೆ. ಉಳಿದೆಡೆ ಪ್ರಗತಿಯು ಕುಂಠಿತವಾಗಿರುವುದು ಗೊತ್ತಾಗಿದೆ.

 

 

ಶಿಡ್ಲಘಟ್ಟ, ಪಿರಿಯಾಪಟ್ಟಣ ತಾಲೂಕುಗಳು ತಹಶೀಲ್ದಾರ್‍‌ ಪರಿಶೀಲಿಸಿ ಹಿಂದಿರುಗಿಸಿರುವ ಪ್ರಕರಣಗಳು ಮತ್ತೆ ಸೇರ್ಪಡೆಯಾಗಿವೆ. ಹೀಗಾಗಿ ಈ ತಾಲೂಕುಗಳಲ್ಲಿ ಸರಿಯಾದ ಪ್ರಗತಿಯೇ  ಕಂಡುಬಂದಿಲ್ಲ.  ಲಾಗಿನ್‌ಗಳಲ್ಲಿ ಎಷ್ಟು ಸ್ವೀಕೃತವಾಗಿದೆ, ಇದರಲ್ಲಿ ಎಷ್ಟು ಚಲನವಲನಗಳಾಗಿವೆ ಎಂಬುದನ್ನೂ   ಪರಿಶೀಲಿಸುತ್ತಿಲ್ಲ. ಬದಲಾಗಿ ಎಷ್ಟು ಪ್ರಕರಣಗಳು ಸಂಪೂರ್ಣವಾಗಿ ವಿಲೇಯಾಗಿದೆ ಎಂದು ಪರಿಶೀಲಿಸಲಾಗುತ್ತಿದೆ. ಬಹುತೇಕ  ಎಲ್ಲಾ ತಹಶೀಲ್ದಾರ್‍‌ಗಳೂ  ಇದೇ ರೀತಿ ನೆಪ ಒಡ್ಡಿ  ಪ್ರಗತಿ ಕುಂಠಿತವಾಗಿದೆ ಎಂದ ತಿಳಿಸುತ್ತಿದ್ದಾರೆ.

 

ಗ್ರಾಮ ಆಡಳಿತಾಧಿಕಾರಿಗಳಿಗೆ ಪದೇ ಪದೇ ಪ್ರಕರಣಗಳು ಹಿಂದಿರುಗುತ್ತಿದೆ ಎಂದರೇ ಕಳಪೆ ಕೆಲಸ ಆಗಿರುತ್ತದೆ. ಈ ರೀತಿ ಕಳಪೆ ಕೆಲಸ ಆಗದಂತೆ ನೋಡಿಕೊಳ್ಳುವುದು ಸಹ ತಹಶೀಲ್ದಾರ್‍‌ ರ ಜವಾಬ್ದಾರಿಯಾಗಿರುತ್ತದೆ. ಆದರೂ ತಹಶೀಲ್ದಾರ್‍‌ಗಳು ಈ ಜವಾಬ್ದಾರಿಯನ್ನು ಪೂರ್ಣ ಪ್ರಮಾಣದಲ್ಲಿ ನಿಭಾಯಿಸುತ್ತಿಲ್ಲ.

 

ಮಳವಳ್ಳಿ ತಾಲೂಕಿಗೆ ಸಂಬಂಧಿಸಿದಂತೆ ಕೇವಲ 9 ಪ್ರಕರಣಗಳು ಮಾತ್ರ ಮುಕ್ತಾಯಗೊಂಡಿವೆ. 9 ಪ್ರಕರಣಗಳು ಸಹ ಡೀಮ್ಡ್‌ ಸರ್ವೆಗೆ ಸಂಬಂಧಿಸಿದೆ. ಕಂದಾಯ ಇಲಾಖೆಯ ಗೋಮಾಳ ಜಮೀನಿನಲ್ಲಿರುವ ಈ ಜಮೀನು ಅರಣ್ಯ ಇಲಾಖೆಗೆ ಸಂಬಂಧಸಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.  ಈ ಅಂಶವನ್ನೇ ಮುಂದಿರಿಸಿದ್ದ  ತಹಶೀಲ್ದಾರ್‍‌, ಪ್ರಗತಿ  ಕುಂಠಿತವಾಗಲು ಇದೇ  ಕಾರಣ ಎಂದಿದ್ದರು.

 

ಹುಣಸೂರು, ಕೆ ಆರ್‍‌ ಪೇಟೆ, ದೊಡ್ಡಬಳ್ಳಾಪುರ, ತಿಪಟೂರು, ದಾವಣಗೆರೆ, ಬೇಲೂರು, ಪೊನ್ನಂಪೇಟೆ, ಬ್ಯಾಡಗಿ, ಕುಣಿಗಲ್, ಸಾಗರ, ಗೌರಿಬಿದನೂರು, ಶ್ರೀನಿವಾಸಪುರ, ಬಾಗೇಪಲ್ಲಿ, ಮಂಡ್ಯ, ಮಧುಗಿರಿ, ಚಿಂತಾಮಣಿ, ನಾಗಮಂಗಲ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಪ್ರಗತಿ ಕುಂಠಿತವಾಗಿದೆ.  ಈ ಎಲ್ಲಾ ತಹಸೀಲ್ದಾರ್‍‌ಗಳು 1 ರಿಂದ 5 ಪ್ರಕರಣಗಳನ್ನು ತ್ವರಿತವಾಗಿ ಮುಕ್ತಾಯಗೊಳಿಸಿಲ್ಲ.

 

ಗ್ರಾಮ ಆಡಳಿತಾಧಿಕಾರಿಗಳ ಬಳಿ 1ರಿಂದ 5 ಮಾಡಲು 27,000 ಪ್ರಕರಣಗಳು ಬಾಕಿ ಇವೆ. ಗ್ರಾಮ ಆಡಳಿತಾಧಿಕಾರಿಗಳು ಮೇಲ್ಪಟ್ಟು ತಹಶೀಲ್ದಾರ್‍‌ ವರೆಗೆ 11,025 ಪ್ರಕರಣಗಳು ಬಾಕಿ ಇವೆ. ಹೀಗಾಗಿ  ಒಟ್ಟಾರೆಯಾಗಿ 37,000 ಪ್ರಕರಣಗಳು ಬಾಕಿ ಇವೆ. ಗ್ರಾಮ ಆಡಳಿತಾದಿಕಾರಿ ಮತ್ತು ಕಂದಾಯ ನಿರೀಕ್ಷಕರ ಹಂತದಲ್ಲಿ 1 ರಿಂದ 5 ಪ್ರಕರಣಗಳು ಡಿಸೆಂಬರ್‍‌ ಅಂತ್ಯವಾಗುತ್ತಿದ್ದರೂ  ಸಂಪೂರ್ಣವಾಗಿ ಮುಕ್ತಾಯಗೊಂಡಿಲ್ಲ.  ತಹಶೀಲ್ದಾರ್‍‌ ಹಂತದಲ್ಲಿ ಜನವರಿ ಅಂತ್ಯದೊಳಗೆ ಸಂಪೂರ್ಣವಾಗಿ ಪ್ರಕರಣಗಳನ್ನು ಮುಕ್ತಾಯಗೊಳಿಸಿರಬೇಕು ಎಂದು ಕಟ್ಟುನಿಟ್ಟಾಗಿ ನಿರ್ದೇಶನ ನೀಡಿರುವುದು ತಿಳಿದು ಬಂದಿದೆ.

 

ನ್ಯಾಮತಿ ತಾಲೂಕಿನಲ್ಲಿ ಈ ಹಿಂದೆ ಹೊಸದಾಗಿ ಸೃಜನೆಯಾದ ಕಂದಾಯ ಗ್ರಾಮಕ್ಕೆ 1 ರಿಂದ 5 ಮಾಡಲು ಶಿರಸ್ತೆದಾರರ ಲಾಗಿನ್‌ನಿಂದ ಗ್ರಾಮ ಆಡಳಿತಾಧಿಕಾರಿಯವರ ಲಾಗಿನ್‌ಗೆ ಕಳಿಸಲು ತಾಂತ್ರಿಕ ಸಮಸ್ಯೆ ಉಂಟಾಗಿದೆ.

 

ಮೂಡಿಗೆರೆ ತಾಲೂಕಿನಲ್ಲಿ 1ರಿಂದ 5 ಮಾಡಲು ಎಡಿಎಲ್‌ಆರ್‍‌ ವಿವಾದಿತ ಪ್ರಕರಣಗಳನ್ನು ಗ್ರಾಮ ಆಡಳಿತಾಧಿಕಾರಿಗಳಿಗೆ ಕಳಿಸಲು ಅವಕಾಶವಿಲ್ಲ. ಯಾವುದಾದರೂ ದಾಖಲೆಗಳುನ್ನು ಲಭ್ಯವಾದಲ್ಲಿ ಮತ್ತೊಮ್ಮೆ ಅಪ್‌ಲೋಡ್‌ ಮಾಡಲು ಅವಕಾಶವಿಲ್ಲ. ನರಸಿಂಹರಾಜಪುರ ತಾಲೂಕಿನಲ್ಲಿ 24 ಪ್ರಕರಣಗಳಲ್ಲಿ 20 ಪ್ರಕರಣಗಳಿಗೆ ತಾಂತ್ರಿಕ ಸಮಸ್ಯೆಯಿದೆ.  ದಾವಣಗೆರೆಯ  ಭೂ ದಾಖಲೆಗಳ ಸಹಾಯಕ ನಿರ್ದೇಶಕರ ವ್ಯಾಪ್ತಿಯಲ್ಲಿ 6 ರಿಂದ 10ಕ್ಕಾಗಿ ಬಂದಿರುವ ಪ್ರಕರಣಗಳಲ್ಲಿ ಈಗಾಗಲೇ ಪೋಡಿ ಮತ್ತು ದುರಸ್ತಿಯಾಗಿರುವ ಪ್ರಕರಣಗಳು ಬಂದಿವೆ.  ಇಂಡೀಕರಣದಲ್ಲಿ ಕೆಲವು ಪ್ರಕರಣಗಳು ಅನುಬಂಧ 1ಕ್ಕೆ ಅರ್ಹವಾಗಿರುತ್ತವೆ. ಈ ಹಂತದಲ್ಲಿ ತಹಶೀಲ್ದಾರ್‍‌ ಗೆ ಹಿಂದಿರುಗಿಸಲು ಅಥವಾ ರಿಪೋರ್ಟ್‌ ಕಳಿಸಲು ಅವಕಾಶ ನೀಡಬೇಕು. ಇಂತಹ ಹಲವಾರು ಸಮಸ್ಯೆಗಳೂ ತಳಹಂತದಲ್ಲಿ ಇರುವುದು ಕಂಡು ಬಂದಿದೆ.

 

ಹೊಸದುರ್ಗ ತಾಲೂಕಿನಲ್ಲಿ ಸೇಂದಿವನ ಫಾರಂ ನಂ 53ರಲ್ಲಿ ಮಂಜೂರಾಗಿದೆ. ಇದರಲ್ಲಿ 80 ಮಂಜೂರುದಾರರಿದ್ದಾರೆ. ಈ ಕುರಿತಂತೆ ಸರ್ಕಾರದಿಂದ ಸೂಕ್ತ ನಿರ್ದೇಶನ ನೀಡಬೇಕು. ಮತ್ತು ಕಡೂರು ತಾಲೂಕಿನಲ್ಲಿ ಅಮೃತ್‌ ಮಹಲ್‌ ಕಾವಲ್‌ಗೆ ಸಂಬಂಧಿಸಿದಂತೆ ಪ್ರಕರಣಗಳು ಬಾಕಿ ಇವೆ. ಈ ಕುರಿತು ಸರ್ಕಾರದಿಂದ ಸೂಕ್ತ ನಿರ್ದೇಶನವೇ ನೀಡಿಲ್ಲ.

 

ಅನುಬಂಧ 1ಕ್ಕೆ ಸಂಬಂಧಿಸಿದಂತೆ ಆಕಾರ್ ಬಂದ್‌ ಗಿಂತಲೂ ಕಡಿಮೆಯಿರುವ ಮಂಜೂರಾತಿಯಲ್ಲಿ ಪ್ರಗತಿ ಕಂಡು ಬಂದಿದೆ. ಕಳೆದ ಬಾರಿ 1,41,000ಮಂಜೂರಾತಿದಾರರ ಅನುಬಂಧ ಸೃಜನೆಯಾಗಿದೆ. ಈ ಬಾರಿ 1,54,000 ಅನುಬಂಧ ಸೃಜನೆಯಾಗಿದೆ.

 

 

ಒಂದೇ ಸರ್ವೇ ನಂಬರ್‍‌ನಲ್ಲಿ ಹಲವಾರು ಮಂಜೂರಾತಿದಾರರು ಇದ್ದಾಗ ಸರ್ವೇ ಮಾಡಿದ ನಂತರ ಮತ್ತೆ ಕ್ರಮವಹಿಸಬೇಕು. ಮತ್ತು ಇದನ್ನು ಆಫ್‌ಲೈನ್‌ನಲ್ಲಿ ಕ್ರಮವಹಿಸಿದ್ದಾಗ ಯಾವುದೇ ಗೋಚರತೆಯಿರುವುದಿಲ್ಲ. ಆದ್ದರಿಂದ ಈ ಕುರಿತು ಯಾವುದಾದರೂ ಮಾಡ್ಯುಲ್‌ ಲಭ್ಯವಿದೆಯೇ ಎಂಬ ಪ್ರಶ್ನೆಗೆ ಸ್ವತಃ ಸಚಿವರ ಬಳಿಯೇ ಉತ್ತರವಿಲ್ಲ.   ಕಂದಾಯ ಇಲಾಖೆಯಲ್ಲಿ 1ರಿಂದ 5 ಫಾರ್ಮಾಟ್‌ ಇದ್ದಂತೆ ಸರ್ವೇ ಇಲಾಖೆಯಲ್ಲಿ 6ರಿಂದ 10 ಮಾಡಲು ಒಂದು ಫಾರ್ಮಾಟ್‌ ಇದೆ. ಅದನ್ನು ಡಿಜಿಟೈಜೇಷನ್‌ ಮಾಡಿದ್ದಲ್ಲಿ ಇಂತಹ ಪ್ರಕರಣಗಳಿಗೆ ಕ್ರಮವಹಿಸಬಹುದು. ಇದನ್ನು ಸಿದ್ಧಪಡಿಸಲು 3ರಿಂದ 4 ವಾರಗಳ ಕಾಲಾವಕಾಶ ಬೇಕು.

 

ಹಿಂದೆ ಮಂಜೂರಾತಿಯಾಗಿದ್ದು ಪಹಣಿಯಲ್ಲಿ ನಮೂದಾಗಿರುವುದಿಲ್ಲ. ಇಂತಹ ಪ್ರಕರಣಗಳು ಹಲವು ತಾಲೂಕುಗಳಲ್ಲಿ ಕಂಡು ಬಂದಿದೆ. ಒಟ್ಟಾರೆಯಾಗಿ 7,415 ಪ್ರಕರಣಗಳು ಬಾಕಿ ಇವೆ. ಮಂಜೂರಾತಿ ಕುರಿತು ನೀವೇ ಧೃಡೀಕರಣ ನೀಡಿ ಬಗರ್‍‌ ಹುಕುಂ ಸಮಿತಿಗೆ ತರುತ್ತಿಲ್ಲ. ಇಂತಹ ಹತ್ತಾರು ಸಮಸ್ಯೆಗಳು ತಹಶೀಲ್ದಾರ್ ಹಂತದಲ್ಲಿದ್ದರೂ ಸಹ ಸರ್ಕಾರವು ಆಡಳಿತದಲ್ಲಿ ಸುಧಾರಣೆ ತರುತ್ತಿಲ್ಲ ಎಂಬುದು ಈ ಪ್ರಕರಣಗಳಿಂದ ಗೊತ್ತಾಗಿದೆ.

Your generous support will help us remain independent and work without fear.

Latest News

Related Posts