ತೆರಿಗೆ ಪಾವತಿಸದಿರುವ ಕುಟುಂಬ ಯಜಮಾನಿಗೂ ತಲುಪದ ‘ಗೃಹ ಲಕ್ಷ್ಮಿ’; ಲಿಖಿತವಾಗಿ ಒಪ್ಪಿಕೊಂಡ ಸರ್ಕಾರ

ಬೆಂಗಳೂರು;  ವರಮಾನ ತೆರಿಗೆಯನ್ನೂ ಪಾವತಿಸದೇ ಇರುವ ಕುಟುಂಬದ ಯಜಮಾನಿಗೂ ಗೃಹ ಲಕ್ಷ್ಮಿ ಯೋಜನೆಯು ತಲುಪಿಲ್ಲ ಎಂದು ಸರ್ಕಾರವೇ ಇದೀಗ ಲಿಖಿತವಾಗಿ ಒಪ್ಪಿಕೊಂಡಿದೆ.

 

ಗೃಹ ಲಕ್ಷ್ಮಿ ಯೋಜನೆಯೂ ಸೇರಿದಂತೆ ಇನ್ನಿತರೆ ಗ್ಯಾರಂಟಿ ಯೋಜನೆಗಳು ಫಲಪ್ರದವಾಗಿವೆ ಎಂದು ಸರ್ಕಾರ ಹೇಳಿಕೊಳ್ಳುತ್ತಿರುವ ನಡುವೆಯೇ ಈ ಯೋಜನೆಯ ಮಾನದಂಡಗಳಿಗೆ ಒಳಪಟ್ಟಿರುವವರಿಗೂ 2,000 ರು. ತಲುಪಿಲ್ಲ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.

 

ಗೃಹ ಲಕ್ಷ್ಮಿ ಯೋಜನೆಯ ಕುರಿತಾಗಿ ಕಾಂಗ್ರೆಸ್‌ ಶಾಸಕ ಕೆ ಷಡಕ್ಷರಿ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‍‌ ಅವರು ವರಮಾನ ತೆರಿಗೆ ಪಾವತಿಸದೇ ಇರುವವರಿಗೂ ಈ ಯೋಜನೆ ತಲುಪಿಲ್ಲ ಎಂದು ಲಿಖಿತ ಉತ್ತರ ಒದಗಿಸಿದ್ದಾರೆ.

 

‘ಗೃಹ ಲಕ್ಷ್ಮಿ ಯೋಜನೆಯು ವರಮಾನ ತೆರಿಗೆ ಪಾವತಿಸದೇ ಇರುವ ಕುಟುಂಬದ ಯಜಮಾನಿಗೆ ತಲುಪದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ವೃತ್ತಿ ತೆರಿಗೆ ಪಾವತಿಸದೇ ಇರುವ ಕುಟುಂಬದ ಯಜಮಾನಿಗೆ ತಲುಪದಿರುವುದು ಸರ್ಕಾರದ ಗಮನಕ್ಕೆ ಬಂದಿಲ್ಲ,’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ್‍‌ ಅವರು ಉತ್ತರದಲ್ಲಿ ತಿಳಿಸಿದ್ದಾರೆ.

 

 

ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ, ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಜಿಎಸ್‌ಟಿ ಸಲ್ಲಿಸಿದ್ದರೇ ಅಂತಹವರು ಗೃಹ ಲಕ್ಷ್ಮಿ ಯೋಜನೆಗೆ ಅರ್ಹರಾಗಿರುವುದಿಲ್ಲ ಎಂದೂ ಉತ್ತರದಲ್ಲಿ ವಿವರಿಸಿದ್ದಾರೆ.

 

ಗೃಹ ಲಕ್ಷ್ಮಿ ಯೋಜನೆಯಡಿ ನೋಂದಣಿಯಾಗಿ ಆದಾಯ ತೆರಿಗೆ ಪಾವತಿದಾರ, ಜಿಎಸ್‌ಟಿ ಪಾವತಿದಾರ ಎಂದು ತೋರುವ ಫಲಾನುಭವಿಗಳಿಗೆ ಧನ ಸಹಾಯ ಪಾವತಿಸಿಲ್ಲ. ಎನ್‌ಪಿಸಿಐ ವಿಫಲವಾಗಿರುವಂತಹದ್ದು ಮತ್ತು ತಾಂತ್ರಿಕ ಸಮಸ್ಯೆಗಳಿಂದಲೂ ಸಹ ಫಲಾನುಭವಿಗಳಿಗೆ ಸಹ ಫಲಾನುಭವಿಗಳಿಗೆ ಧನ ಸಹಾಯ ಪಾವತಿಸಿಲ್ಲ ಎಂದು ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

 

 

ತಿಪಟೂರು ತಾಲೂಕುವೊಂದರಲ್ಲೇ ಈ ಯೋಜನೆಯಿಂದ 1,565 ಸಂಖ್ಯೆಯ ಫಲಾನುಭವಿಗಳು ವಂಚಿತರಾಗಿದ್ದಾರೆ. ಈ ಪೈಕಿ 1,178 ಮಂದಿ ಐಟಿ, ಜಿಎಸ್‌ಟಿ ಎಂದೂ ಎನ್‌ಪಿಸಿಐ ವೈಫಲ್ಯದಿಂದ 387 ಮಂದಿ ವಂಚಿತರಾಗಿದ್ದಾರೆ ಎಂದು ಪಟ್ಟಿಯನ್ನೂ ಒದಗಿಸಿದೆ.

 

 

ಆದಾಯ ಪಾವತಿದಾರರಿಗೆ ಸಂಬಂಧಿಸಿದಂತೆ ಅಗತ್ಯವಿರುವ ಮಾಹಿತಿಯನ್ನು ಕೇಂದ್ರ ಸರ್ಕಾರದ ಐಟಿ ಇಲಾಖೆಯಿಂದ ಪಡೆಯಲು ಕ್ರಮ ವಹಿಸಿದೆ. ಜಿಎಸ್‌ಟಿ ಪಾವತಿಗೆ ಸಂಬಂಧಿಸಿದಂತೆ ಅಗತ್ಯವಿರುವ ಮಾಹಿತಿಯನ್ನು ವಾಣಿಜ್ಯ ತೆರಿಗೆ ಇಲಾಖೆಯಿಂದ ನೇರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯೇ ಮಾಹಿತಿ ಪಡೆಯಲು ಕ್ರಮ ವಹಿಸಬಹುದು ಎಂದು ಇ-ಆಡಳಿತ ಕೇಂದ್ರದ ಸಿಇಒ ತಿಳಿಸಿದ್ದಾರೆ ಎಂಬ ಮಾಹಿತಿಯನ್ನೂ ಉತ್ತರದಲ್ಲಿ ನೀಡಿದ್ದಾರೆ.

 

‘ಗೃಹ ಲಕ್ಷ್ಮಿ ಫಲಾನುಭವಿಗಳ ಪೈಕಿ ಜಿಎಸ್‌ಟಿ ಪಾವತಿದಾರರೆಂದು ತೋರುತ್ತಿರುವ ಫಲಾನುಭವಿಗಳ ಮಾಹಿತಿಯನ್ನು 2024ರ ಸೆ.30ರಲ್ಲಿದ್ದಂತೆ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಒದಗಿಸುವಂತೆ ಇಡಿಸಿಎಸ್‌ ನಿರ್ದೇಶನಾಲಯವನ್ನು ಕೋರಿದೆ. ಇದನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆಗೂ ಸೂಚಿಸಲಾಗಿದೆ,’ ಎಂದು ಮಾಹಿತಿ ಒದಗಿಸಿದ್ದಾರೆ.

 

ಈ ಯೋಜನೆಯು ಜಾರಿಯಾದ ದಿನದಿಂದ 2024ರ ಅಕ್ಟೋಬರ್‍‌ವರೆಗೂ ಒಟ್ಟು 15 ತಿಂಗಳು ಧನ ಸಹಾಯ ಪಾವತಿಸಲಾಗಿದೆ ಎಂದು ಶಿಕಾರಿಪುರ ಶಾಸಕ ವಿಜಯೇಂದ್ರ ಯಡಿಯೂರಪ್ಪ ಅವರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‍‌ ಅವರು ಉತ್ತರ ಒದಗಿಸಿದ್ದಾರೆ.

 

 

ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದಶನಾಲಯದ ಮಾಹಿತಿಯಂತೆ ಒಟ್ಟು 2,13,064 ಮಂದಿ ಫಲಾನುಭವಿಗಳು ಐಟಿ, ಜಿಎಸ್‌ಟಿ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಈ ಫಲಾನುಭವಿಗಳಿಗೆ ಧನ ಸಹಾಯ ಪಾವತಿಸಿಲ್ಲ. ಅಕ್ಟೋಬರ್‍‌ 2024ರ ಅಂತ್ಯಕ್ಕೆ ಈ ಯೋಜನೆಯಡಿ ಒಟ್ಠಾರೆ 1,26,24,547 ಫಲಾನುಭವಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಉತ್ತರಿಸಿರುವುದು ತಿಳಿದು ಬಂದಿದೆ.

 

 

ಹಾಗೆಯೇ ಈ ಯೋಜನೆ ಆರಂಭದಿಂದ ಸೆಪ್ಟಂಬರ್‍‌ 2024ರವರೆಗೆ 1,00,408 ಫಲಾನುಭವಿಗಳ ಮಾಹಿತಿಯು ಎನ್‌ಪಿಸಿಐ ವಿಫಲವಾಗಿರುವುದರಿಂದ ಎಲ್ಲಾ ಕಂತುಗಳ ಹಣವನ್ನು ಸ್ವೀಕರಿಸಿಲ್ಲ. ಆಗಸ್ಟ್‌ 2023ರಿಂದ ಸೆಪ್ಟಂಬರ್‍‌ 2024ವರೆಗೆ ಒಟ್ಟಾರೆ 32,686.28 ಕೋಟಿ ರು. ಧನ ಸಹಾಯ ಪಾವತಿಸಿದೆ. ಅಲ್ಲದೇ 1,23,41,658 ಅರ್ಹ ಫಲಾನುಭವಿಗಳ ಪೈಕಿ 1,20,05,189 ಫಲಾನುಭವಿಗಳಿಗಷ್ಟೇ ಧನ ಸಹಾಯ ಪಾವತಿಸಿದೆ ಎಂದು ಅಂಕಿ ಅಂಶಗಳನ್ನು ನೀಡಿದ್ದಾರೆ.

 

 

 

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪೈಕಿ ಶೇ.50.91ರಷ್ಟು ಮಹಿಳೆಯರಿಗೆ ಹಣ ಉಳಿತಾಯವಾಗುತ್ತಿಲ್ಲ. ಶೇ. 5.92ರಷ್ಟು ಫಲಾನುಭವಿಗಳು ಗೃಹ ಲಕ್ಷ್ಮಿ ಹಣವನ್ನು ಚೀಟಿ ವ್ಯವಹಾರದಲ್ಲಿ ಹೂಡಿದ್ದಾರೆ ಎಂದು ಅಂಗನವಾಡಿ, ಆಶಾ ಕಾರ್ಯಕರ್ತೆಯರು ನಡೆಸಿರುವ ಸಮೀಕ್ಷೆಯು ಹೊರಗೆಡವಿತ್ತು.

 

ಗೃಹಲಕ್ಷ್ಮಿ; ಶೇ.50.91ರಷ್ಟು ಉಳಿತಾಯವಾಗದ ಹಣ, ಶೇ.5.92ರಷ್ಟು ಚೀಟಿ ವ್ಯವಹಾರದಲ್ಲಿ ಹೂಡಿಕೆ

ಅದೇ ರೀತಿ ಶೇ.4.9ರಷ್ಟು ತುರ್ತು ಅವಶ್ಯಕತೆಗಳಿಗಾಗಿ, ಶೇ.2.16ರಷ್ಟು ಮಕ್ಕಳ ಮದುವೆಗಾಗಿ ಉಳಿತಾಯ ಮಾಡುತ್ತಿರುವುದಾಗಿ ಅಭಿಪ್ರಾಯಿಸಿದ್ದರು.

 

2024-25ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನೀಡಿರುವ ಬೇಡಿಕೆ ಪಟ್ಟಿಯಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಹೆಚ್ಚುವರಿಯಾಗಿ 31,920 ಕೋಟಿ ರು ಒದಗಿಸಲು ಬೇಡಿಕೆ ಸಲ್ಲಿಸಿತ್ತು.

ಗೃಹಲಕ್ಷ್ಮಿ ಯೋಜನೆಗೆ 31,920 ಕೋಟಿ ರು ಬೇಡಿಕೆ, 18 ಯೋಜನೆಗಳಿಗೆ ಕೇವಲ 332.72 ಕೋಟಿ ಉಳಿಕೆ

 

ವಿಶೇಷವೆಂದರೇ ಇದೇ ಇಲಾಖೆಯ ಇನ್ನಿತರೆ ಯೋಜನೆಗಳ ಅನುದಾನ ಬಿಡುಗಡೆ ಸಂಬಂಧ ಆರ್ಥಿಕ ಇಲಾಖೆಯು ಮೊತ್ತವನ್ನೂ ನಿಗದಿಪಡಿಸಿ ಸೂಚಿಸಿದೆ. ಆದರೆ ಗೃಹ ಲಕ್ಷ್ಮಿ ಯೋಜನೆಗೆ ಇಂತಿಷ್ಟೇ ಮೊತ್ತ ಎಂದು ಸೂಚಿಸಿರಲಿಲ್ಲ.

ಗೃಹ ಲಕ್ಷ್ಮಿ; ನಿರಂತರ ಸಾಲದ ಸುಳಿ, ಆದಾಯದ ಕೊರತೆ, ಹಣಕಾಸು ಹೊಣೆಗಾರಿಕೆ ಕಾಯ್ದೆ ಉಲ್ಲಂಘನೆ

ಇನ್ನು, ಈ ಯೋಜನೆಯ ಪ್ರಚಾರ, ಜಾಹೀರಾತು, ಅರ್ಜಿ ಶುಲ್ಕ, ಸಮಾಲೋಚಕರ ವೇತನ ಹಾಗೂ ಇತರೆ ವೆಚ್ಚಗಳಿಗೆಂದು 20 ಕೋಟಿ ರು. ಅವಶ್ಯಕತೆ ಇದೆ ಎಂದೂ ಬೇಡಿಕೆ ಪಟ್ಟಿಯಲ್ಲಿ ವಿವರಿಸಿದೆ.

ಗೃಹ ಲಕ್ಷ್ಮಿ; ಸಿಎಂ, ಡಿಸಿಎಂ, ಸಚಿವರ ಫೋಟೋ ಶೂಟ್‌ ಸೇರಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಕ್ಕೆ 50 ಲಕ್ಷ ರು ವೆಚ್ಚ

ಜಿಲ್ಲಾ ವಲಯದ ಯೋಜನೆ ಮತ್ತು ಇತರೆ ಯೋಜನೆಗಳಿಗೆ 2024-25ನೇ ಸಾಲಿಗೆ 39,369.82 ಕೋಟಿ ರು. ಕೋರಿದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ 186.43 ಕೋಟಿ ರು., ಮಕ್ಕಳ ಹಕ್ಕುಗಳ ನಿರ್ದೇಶನಾಲಯಕ್ಕೆ 273.69 ಕೋಟಿ ರು., ವಿಕಲ ಚೇತನರ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯಕ್ಕೆ 292.47 ಕೋಟಿ ರು., ಕರ್ನಾಟಕ ಬಾಲ ವಿಕಾಸ ಅಕಾಡೆಮಿಗೆ 11.89 ಕೋಟಿ ರು., ಕರ್ನಾಟಕ ರಾಜ್ಯಮಹಿಳಾ ಆಯೋಗಕ್ಕೆ 6.35 ಕೋಟಿ ರು., ಕರ್ನಾಟಕ ರಾಜ್ಯ ಮಕ್ಕಳ ಆಯೋಗಕ್ಕೆ 3.23 ಕೋಟಿ ರು., ಬಾಲಭವನಗಳಿಗೆ 54.02 ಕೋಟಿ ರು., ಕೋರಿದೆ.

‘ಗೃಹ ಲಕ್ಷ್ಮಿ’ಯೋಜನೆಗೆ ಚಾಲನೆ; ಪ್ರಚಾರ ಫಲಕಗಳಲ್ಲಿನ ಜಾಹೀರಾತೂ ಸೇರಿ 19.4 ಕೋಟಿ ರು. ವೆಚ್ಚ

2024-25ನೇ ಸಾಲಿನಲ್ಲಿ ಘೋಷಿಸಲಿರುವ ಹೊಸ ಯೋಜನೆಗಳಾದ ಸ್ಮಾರ್ಟ್‌ ಅಂಗನವಾಡಿ ಯೋಜನೆಗೆ 408 ಕೋಟಿ ರು., ಅಂಗವನಾಡಿ ಮಕ್ಕಳಿಗೆ ಎರಡು ಜೊಗೆ ಸಮವಸ್ತ್ರ, ಶೂ ಸಾಕ್ಸ್‌ಗಳನ್ನು ಒದಗಿಸಲು 212.30 ಕೋಟಿ ರು., ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಎರಡು ಜೊತೆ ಹೆಚ್ಚುವರಿ ಸಮವಸ್ತ್ರಗಳೀಗೆ 13.75 ಕೋಟಿ ರು., ಅಂಗನವಾಡಿ ಕಟ್ಟಡಗಳ ನಿರ್ಮಾಣ ಯೋಜನೆಗಳಿಗೆ 200.00 ಕೋಟಿ ರು., ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಘಟಕಗಳನ್ನು ಆರಂಭಿಸುವ ಸಂಬಂಧ 0.95 ಕೋಟಿ ರು., ಬೇಕಿದೆ.

ಗೃಹಲಕ್ಷ್ಮಿ ಕಾರ್ಯಕ್ರಮ ಚಾಲನೆ, ಹೋರ್ಡಿಂಗ್ಸ್‌ ಸೇರಿ ಪ್ರಚಾರಕ್ಕೆ ಈವರೆಗೆ 36.35  ಕೋಟಿ ರು. ಮಂಜೂರು

ಶ್ರೇಷ್ಠ ಆವಾಸ ಯೋಜನೆಗೆ 83.32 ಕೋಟಿ ರು., ತೀವ್ರತರ ವಿಕಲಚೇತನರ ಆರೈಕೆದಾರರಿಗೆ ಮಾಸಾಶನಕ್ಕೆ 57.42 ಕೋಟಿ ರು., ಸಮುದಾಯ ಆಧರಿತ ಪುನಶ್ಚೇತನ ಯೋಜನೆಗೆ 1.30 ಕೋಟಿ ರು., ಹಿರಿಯ ದೃಷ್ಟಿ ಯೋಜನೆಗೆ 1.35 ಕೋಟಿ ರು., ರಾಜ್ಯ ವಿಕಲಚೇತನರ ನಿಧಿ ಸ್ಥಾಪನೆಗೆ 10.00 ಕೋಟಿ ರು., ರಾಜ್ಯದಲ್ಲಿ ಬೆನ್ನುಹುರಿ ಅಪಘಾತಕ್ಕೆ ಒಳಗಾದವರ ಪುನರ್ವಸತಿ ಕೇಂದ್ರ ಸ್ಥಾಪನೆಗೆ 1.52 ಕೋಟಿ ರು., ಸರ್ಕಾರಿ ಅನುಪಾಲನ ಗೃಹಗಳಿಗೆ 4.00 ಕೋಟಿ ರು., ಬ್ಯಾಟರಿ ಚಾಲಿತ ವ್ಹೀಲ್‌ ಚೇರ್‍‌ಗಳಿಗೆ 50 ಕೋಟಿ ರು., ಅಂಗವಿಕಲ ಮಕ್ಕಳ ಕೇಂದ್ರೀಕೃತ ವಿಶೇಷ ಶೈಕ್ಷಣಿಕ ಯೋಜನೆಗೆ 3.83 ಕೋಟಿ ರು. ಅಂದಾಜಿಸಿದೆ.

 

ಅದೇ ರೀತಿ ವಿಕಲಚೇತರಿಗೆ ಮಾಸಾಶನ ಹೆಚ್ಚಿಸಲು 754.20 ಕೋಟಿ ರು., ಸ್ವಯಂ ಉದ್ಯೋಗಕ್ಕಾಗಿ 6.00 ಕೋಟಿ ರು., ಶಿಶುಪಾಲನಾ ಭತ್ಯೆ ನೀಡಲು 0.70 ಕೋಇಟ ರು., ಸಾಧನೆ ಯೋಜನೆಯಡಿ ಕ್ರೀಡಾ ಸಾಧಕರಿಗೆ ಪ್ರೋತ್ಸಾಹ ಧನಕ್ಕೆ 5.60 ಕೋಟಿ ರು., ವಿವಾಹ ಪ್ರೋತ್ಸಾಹ ಧನಕ್ಕೆ 5.50 ಕೋಟಿ ರು., ಹಿರಿಯ ನಾಗರೀಕರಿಗೆ ಮಾಸಶಾನ ಹೆಚ್ಚಿಸಲು 2,891.53 ಕೋಟಿ ರು. ಬೇಡಿಕೆ ಇರಿಸಿದೆ.

SUPPORT THE FILE

Latest News

Related Posts