ಬೆಂಗಳೂರು; ಗೃಹ ಲಕ್ಷ್ಮಿ ಯೋಜನೆಯ ಪ್ರಚಾರ ಮತ್ತು ಚಾಲನಾ ಕಾರ್ಯಕ್ರಮಗಳಿಗೆ ಇದುವರೆಗೂ 36.35 ಕೋಟಿ ರು. ವೆಚ್ಚ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಿರುವುದು ಇದೀಗ ಬಹಿರಂಗವಾಗಿದೆ.
ಯೋಜನೆ ಫಲಾನುಭವಿಗಳಿಗೆ ಹಣ ಪಾವತಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಆಗುತ್ತಿಲ್ಲ ಎಂಬ ಹಲವು ದೂರುಗಳು ಕೇಳಿ ಬಂದಿರುವ ಬೆನ್ನಲ್ಲೇ ಯೋಜನೆ ಪ್ರಚಾರಕ್ಕೆ ಇದುವರೆಗೂ 36.35 ಕೋಟಿ ರು, ಮಂಜೂರಾಗಿರುವುದು ಮುನ್ನೆಲೆಗೆ ಬಂದಿದೆ.
ಯೋಜನೆಯ ಚಾಲನಾ ಕಾರ್ಯಕ್ರಮಕ್ಕೆ ಅನುದಾನ ಬಿಡುಗಡೆ ಸಂಬಂಧ ಅ.3ರ ಅಂತ್ಯಕ್ಕೆ ಒಟ್ಟಾರೆ 8 ಸರ್ಕಾರಿ ಆದೇಶಗಳನ್ನು ಹೊರಡಿಸಿದೆ. ಈ ಆದೇಶದ ಪ್ರತಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಗೃಹಲಕ್ಷ್ಮಿ ಯೋಜನೆಯ ಪ್ರಚಾರಕ್ಕಾಗಿ 17.40 ಕೋಟಿ ರು.ಗಳು ಮಂಜೂರು ಮಾಡಿ ಆದೇಶ ಹೊರಡಿಸಿದ ಎರಡೇ ಎರಡು ದಿನದ ಅಂತರದಲ್ಲಿ ಯೋಜನೆ ಚಾಲನೆ ಕಾರ್ಯಕ್ರಮದ ಹೆಸರಿನಲ್ಲಿ 12.10 ಕೋಟಿ ರು. ಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿ ಆದೇಶ ಹೊರಡಿಸಿತ್ತು.
ಇದೀಗ ಖಾಸಗಿ ಪ್ರಚಾರ ಫಲಕ, ಹೋರ್ಡಿಂಗ್ಸ್‌ಗಳಲ್ಲಿ ಪ್ರಚಾರ ಮಾಡಲು 4.85 ಕೋಟಿ ರು.ಗಳನ್ನು ಮಂಜೂರು ಮಾಡಿರುವುದು ಸೇರಿದಂತೆ ಒಟ್ಟಾರೆಯಾಗಿ 36.35 ಕೋಟಿ ರು.ಗಳನ್ನು ಯೋಜನೆಯ ಪ್ರಚಾರಕ್ಕೆ ವೆಚ್ಚ ಮಾಡಲು ಅನುಮೋದಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಪ್ರಸ್ತುತ ರಾಜ್ಯದಲ್ಲಿರುವ ಆರ್ಥಿಕ ನಿರ್ಬಂಧಗಳ ಕಾರಣದಿಂದಾಗಿ ಗೃಹ ಲಕ್ಷ್ಮಿ ಯೋಜನೆಯನ್ನು ಅನುಷ್ಠಾನಗೊಳಿಸುವುದು ಕಾರ್ಯಸಾಧುವಲ್ಲ ಮತ್ತು ಪ್ರತೀ ವರ್ಷವೂ ಈ ಯೋಜನೆಗೆ ಅಗಾಧ ಪ್ರಮಾಣದ ಹಣ ನೀಡುವುದು ಅಸಾಧ್ಯ ಎಂದು ಆರ್ಥಿಕ ಇಲಾಖೆಯು ನೀಡಿದ್ದ ಅಭಿಪ್ರಾಯವನ್ನೂ ಬದಿಗೊತ್ತಿ ಜಾರಿಗೆ ತಂದಿರುವ ಈ ಯೋಜನೆಯ ಚಾಲನೆ ಮತ್ತು ಪ್ರಚಾರಕ್ಕೆ 36.35 ಕೋಟಿ ರು.ಗಳನ್ನು ಖರ್ಚು ಮಾಡುತ್ತಿರುವುದು ಮುನ್ನೆಲೆಗೆ ಬಂದಿದೆ.
‘2023-24ನೇ ಸಾಲಿನಲ್ಲಿ ರಾಜ್ಯದ ಕುಟುಂಬದಲ್ಲಿನ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2,000 ರು.ಗಳನ್ನು ನೀಡುವ ಗೃಹ ಲಕ್ಮಿ ಯೋಜನೆಗೆ ಹೆಚ್ಚಿನ ಪ್ರಚಾರ ಅವಶ್ಯವಿರುತ್ತದೆ. ಆದ್ದರಿಂದ ಖಾಸಗಿ ಹೋರ್ಡಿಂಗ್ಸ್‌ಗಳಲ್ಲಿ ಯೋಜನೆಯನ್ನು ಪ್ರಚಾರ ಮಾಡಲು ಬಾಕಿ ಇರುವ 4.85 ಕೋಟಿ ರು ಗಳನ್ನು ಬಿಡುಗಡೆಗೊಳಿಸಲು ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಈ ಸಂಬಂಧ 2023ರ ಅಕ್ಟೋಬರ್ 3ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಗೃಹ ಲಕ್ಷ್ಮಿ ಯೋಜನೆಯ ಚಾಲನಾ ಕಾರ್ಯಕ್ರಮದ ಪ್ರಚಾರಕ್ಕಾಗಿ ಈಗಾಗಲೇ ಮಂಜೂರು ಮಾಡಿರುವ 17.40 ಕೋಟಿ ರು. ಗಳ ಜೊತೆಗೆ 2.00 ಕೋಟಿ ರು.ಗಳ ವೆಚ್ಚವನ್ನು (ಲೆಕ್ಕ ಶೀರ್ಷಿಕೆ; 2235-02-103–0-73) ಭರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಿಗೆ 2023ರ ಸೆ.5ರಂದು ಆಡಳಿತಾತ್ಮಕ ಮಂಜೂರಾತಿ ನೀಡಿತ್ತು.
‘ಗೃಹ ಲಕ್ಷ್ಮಿ’ ಯೋನೆಯ ಚಾಲನಾ ಕಾರ್ಯಕ್ರಮಕ್ಕೆ ಈಗಾಗಲೇ ಅನುಮತಿಸಿರುವ 9.62 ಕೋಟಿ ರು.ಗಳನ್ನು ಒಳಗೊಂಡಂತೆ ಒಟ್ಟು 12.10 ಕೋಟಿ ರು.ಗಳ ವೆಚ್ಚವನ್ನು (ಲೆಕ್ಕ ಶೀರ್ಷಿಕೆ; 2235-02-103-0-73) ಭರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರು 2023ರ ಸೆ.7ರಂದು ಆದೇಶ ಹೊರಡಿಸಿದ್ದಾರೆ.
ಈ ಆದೇಶಕ್ಕೆ ಆರ್ಥಿಕ ಇಲಾಖೆಯು (ಟಿಪ್ಪಣಿ ಸಂಖ್ಯೆ; ಆಇ 274 ವೆಚ್ಚ-10/2023 ದಿನಾಂಕ 29-08-2023ರಲ್ಲಿ ನೀಡಿರುವ ಸಹಮತಿ ಮೇರೆಗೆ) ಸಹಮತಿ ವ್ಯಕ್ತಪಡಿಸಿರುವುದು ಆದೇಶದಿಂದ ತಿಳಿದು ಬಂದಿದೆ. ಪ್ರಚಾರ ಮತ್ತು ಯೋಜನೆ ಚಾಲನೆ ಕಾರ್ಯಕ್ರಮಕ್ಕೆ ಒಟ್ಟಾರೆಯಾಗಿ 31.5 ಕೋಟಿ ರು.ಗಳನ್ನು ವೆಚ್ಚ ಮಾಡಲು ಆಡಳಿತಾತ್ಮಕ ಮಂಜೂರಾತಿ ನೀಡಿದಂತಾಗಿದೆ.
ಈ ಯೋಜನೆಯ ಚಾಲನೆಯನ್ನು ಆರಂಭದಲ್ಲಿ ಬೆಳಗಾವಿಯಲ್ಲಿ ನಡೆಸಲು ಸರ್ಕಾರ ಉದ್ದೇಶಿಸಿತ್ತು. ಯೋಜನೆಯ ಸೌಲಭ್ಯ ವಿತರಣೆ ಕಾರ್ಯಕ್ರಮಕ್ಕಾಗಿ ಆಗಮಿಸುವ ಮಹಿಳೆಯರ ಅನುಕೂಲಕ್ಕಾಗಿ ಕೆಎಸ್‌ಆರ್‍ಟಿಸಿ ಬಸ್ 1,000, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆಯಿಂದ 1,56,50,000 ರು. ವೆಚ್ಚದಲ್ಲಿ ಬಾಡಿಗೆ ಆಧಾರದ ಮೇಲೆ ಪಡೆಯಲು 2023ರ ಆಗಸ್ಟ್ 11ರಂದು ಆಡಳಿತಾತ್ಮಕ ಮಂಜೂರಾತಿ ನೀಡಿತ್ತು.
ಬೆಳಗಾವಿಯಲ್ಲಿ ನಡೆಯಲಿರುವ ಗೃಹ ಲಕ್ಷ್ಮಿ ಯೋಜನೆಯ ಸೌಲಭ್ಯ ಮತ್ತು ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರಿಗೆ, ಫಲಾನುಭವಿಗಳಿಗೆ ಹಾಗೂ ಸಾರ್ವಜನಿಕರಿಗೆ ಊಟದ ವ್ಯವಸ್ಥೆಗಾಗಿ 1,53,00,000 ರು.ಗಳಿಗೆ 2023ರ ಅಗಸ್ಟ್ 11ರಂದು (ಲೆಕ್ಕ ಶೀರ್ಷಿಕೆ; 2235-02-103-0-73) ಆಡಳಿತಾತ್ಮಕ ಅನುಮೋದನೆ ನೀಡಿತ್ತು.
ಮೈಸೂರಿನಲ್ಲಿ ನಡೆದಿದ್ದ ಗೃಹ ಲಕ್ಷ್ಮಿ ಯೋಜನೆಯ ಸೌಲಭ್ಯ, ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಫಲಾನುಭವಿಗಳಿಗೆ ಹಾಗೂ ಸಾರ್ವಜನಿಕರಿಗೆ ಊಟ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಇತರೆ ಮೂಲಸೌಕರ್ಯಗಳನ್ನು ಒದಗಿಸಲು ಹೆಚ್ಚುವರಿಯಾಗಿ ತಗುಲುವ 1,00,00,000 ರು.ಗಳನ್ನು ((ಲೆಕ್ಕ ಶೀರ್ಷಿಕೆ; 2235-02-103-0-73) ಅಡಿಯಲ್ಲಿ ಈಗಾಗಲೇ ಬಿಡುಗಡೆ ಮಾಡಿದ್ದ 4600.00 ಕೋಟಿ ರು.ಗಳಲ್ಲಿ ಭರಿಸಲು 2023ರ ಆಗಸ್ಟ್ 19ರಂದು ಆಡಳಿತಾತ್ಮಕ ಮಂಜೂರಾತಿ ನೀಡಿರುವುದು ಆದೇಶದಿಂದ ತಿಳಿದು ಬಂದಿದೆ.
ಅದೇ ರೀತಿ ಗೃಹ ಲಕ್ಷ್ಮಿ ಯೋಜನೆಯ ಸೌಲಭ್ಯ ವಿತರಣೆ ಅನುಷ್ಠಾನಗೊಳಿಸುವ ಸಂಬಂಧ ಮೈಸೂರಿನಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ಎಂಸಿ ಅಂಡ್ ಎ ಮೂಲಕ ಸೇವೆ ಪಡೆಯುವ ಉದ್ದೇಶದಿಂದ 5,53,14,808 ರು.ಗಳನ್ನು ವೆಚ್ಚ ಮಾಡಲು 2023ರ ಆಗಸ್ಟ್ 22ರಂದು ಆದೇಶ ಹೊರಡಿಸಿತ್ತು. ಹಾಗೆಯೇ ಇದರ ಕಾರ್ಯಕ್ರಮಕ್ಕೆ ಆಗಮಿಸುವ ಮಹಿಳೆಯರ ಅನುಕೂಲಕ್ಕಾಗಿ 1,000 ಕೆಎಸ್‌ಆರ್‍ಟಿಸಿ ಬಸ್‌ಗಳನ್ನು 1,56,50,000 ರು. ವೆಚ್ಚದಲ್ಲಿ ಬಾಡಿಗೆ ಆಧಾರದ ಮೇಲೆ ಪಡೆಯಲು ಅನುಮತಿ ನೀಡಲಾಗಿತ್ತು. ಅಲ್ಲದೇ ಈ ಕಾರ್ಯಕ್ರಮದಲ್ಲಿ ಊಟಕ್ಕೆ ತಗುಲುವ ವೆಚ್ಚ 1,53,00,000 ರು. ಹಾಗೂ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೆಚ್ಚುವರಿಯಾಗಿ 1,00,00,000 ರು.ಗಳನ್ನು ಭರಿಸಲು ಅನುಮತಿ ನೀಡಿರುವುದು ಗೊತ್ತಾಗಿದೆ.
ಮೈಸೂರಿನಲ್ಲಿ 2023ರ ಆಗಸ್ಟ್ 30ರಂದು ನಡೆದ ಗೃಹ ಲಕ್ಷ್ಮಿ ಸೌಲಭ್ಯ ವಿತರಣೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಖಾಸಗಿ ಪ್ರಚಾರ ಫಲಕಗಳಲ್ಲಿ ಜಾಹೀರಾತಿನ ಮೂಲಕ ಪ್ರಚುರ ಪಡಿಸಲು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರ ಸೂಚನೆಯಂತೆ ಹೊರಡಿಸಿದ್ದ ಆದೇಶವು ಚರ್ಚೆಗೆ ಗ್ರಾಸವಾಗಿತ್ತು.
‘ಗೃಹ ಲಕ್ಷ್ಮಿ’ಯೋಜನೆಗೆ ಚಾಲನೆ; ಪ್ರಚಾರ ಫಲಕಗಳಲ್ಲಿನ ಜಾಹೀರಾತೂ ಸೇರಿ 19.4 ಕೋಟಿ ರು. ವೆಚ್ಚ
ಸಚಿವರ ಸೂಚನೆಯಲ್ಲೇನಿತ್ತು?
ಗೃಹ ಲಕ್ಷ್ಮಿ ಯೋಜನೆಯ ಪ್ರಯುಕ್ತ ಮುಂದಿನ 01 ತಿಂಗಳ ಅವಧಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನೀಡಿರುವ 5.75 ಕೋಟಿ ರು.ಗಳ ದರದಲ್ಲಿ ಖಾಸಗಿ ಪ್ರಚಾರ ಫಲಕಗಳಲ್ಲಿ ಪ್ರಚುರ ಪಡಿಸಬೇಕು. ಬೆಳಗಾವಿ ಜಿಲ್ಲೆಯಾದ್ಯಂತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನೀಡಿರುವ 25 ಲಕ್ಷ ರು. ದರದಲ್ಲಿ ಕೆಎಸ್‌ಆರ್‍ಟಿಸಿ ಬಸ್‌ಗಳ ಬ್ರಾಂಡಿಂಗ್ ಮಾಡುವುದು, ರಾಜ್ಯ ಹಾಗೂ ರಾಷ್ಟ್ರಮಟ್ಟದ ಸುದ್ದಿವಾಹಿನಿಗಳಲ್ಲಿ ಗೃಹ ಲಕ್ಷ್ಮಿ ಕಾರ್ಯಕ್ರಮದ ದಿನದಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನೀಡಿರುವ 40 ಲಕ್ಷ ರು.ಗಳ ದರದಲ್ಲಿ ಜಾಹೀರಾತು ನೀಡಬೇಕು. ಕಾರ್ಯಕ್ರಮ ದಿನದಂದು ರಾಷ್ಟ್ರ, ರಾಜ್ಯ, ಬೆಳಗಾವಿ ಹಾಗೂ ಮೈಸೂರು ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನೀಡಿರುವ 45 ಲಕ್ಷ ರು.ಗಳ ದರದಲ್ಲಿ ಜಾಹೀರಾತು ನೀಡಬೇಕು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು ಎಂಬುದು ಆದೇಶದಿಂದ ಗೊತ್ತಾಗಿದೆ.
ಶಾಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶೂ, ಸಾಕ್ಸ್‌ಗಳನ್ನು ಖರೀದಿಸಲು ಶಿಕ್ಷಕರನ್ನು ದಾನಿ ಬಳಿ ನಿಲ್ಲಿಸಿ, ಶಾಲಾ ಕಾಲೇಜುಗಳ ಉನ್ನತೀಕರಣ ಪ್ರಸ್ತಾವನೆಗಳನ್ನು ಮುಂದಿನ ಎರಡು ವರ್ಷ ತನಕ ವಿಸ್ತರಿಸಿರುವ ಕಾಂಗ್ರೆಸ್ ಸರ್ಕಾರವು ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕ್ರಮಗಳಿಗಾಗಿ 50 ಲಕ್ಷ ರು.ಗಳನ್ನು ಬಳಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕ್ರಮಗಳಿಗೆ ಒಟ್ಟಾರೆ 50 ಲಕ್ಷ ರು. ಪೈಕಿ 25 ಲಕ್ಷ ರು.ಗಳನ್ನು ಬಿಡುಗಡೆಗೊಳಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 2023ರ ಜುಲೈ 10ರಂದು ಆದೇಶವನ್ನು (ಮಮಿ 70 ಮಮಾ 2023 (ಭಾಗ-16) ಹೊರಡಿಸಿತ್ತು.
ಗೃಹ ಲಕ್ಷ್ಮಿ; ಸಿಎಂ, ಡಿಸಿಎಂ, ಸಚಿವರ ಫೋಟೋ ಶೂಟ್ ಸೇರಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಕ್ಕೆ 50 ಲಕ್ಷ ರು ವೆಚ್ಚ
ಮಹಿಳಾ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ ಉದ್ಯೋಗಿನಿ ಲೆಕ್ಕ ಶೀರ್ಷಿಕೆಯಡಿ (ಲೆಕ್ಕ ಶೀರ್ಷಿಕೆ; 2235-02-103-0-38-059) ನಿಗದಿಪಡಿಸಿರುವ 1100.00 ಲಲಕ್ಷ ರು. ಅನುದಾನದಲ್ಲಿ ಗೃಹ ಲಕ್ಷ್ಮಿ ಯೋಜನೆ ಸಂಬಂಧಿತ ಕಾರ್ಯಕ್ರಮಗಳಿಗಾಗಿ ಐಇಸಿ ಪರಿಕರಗಳೀಗೆ 840.90 ಲಕ್ಷ ರು.ಗ ಅನುದಾನವನ್ನು ಒಂದು ಬಾರಿಗೆ ಮಾತ್ರ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದರು. ಈ ಅನುದಾನದಲ್ಲಿ ಒಟ್ಟು 50 ಲಕ್ಷ ರು.ಗಳನ್ನು ನಿಗದಿಪಡಿಸಿದ್ದನ್ನು ಸ್ಮರಿಸಬಹುದು.
ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನಗೊಳಿಸುವುದಕ್ಕೆ ಆರ್ಥಿಕ ಇಲಾಖೆಯು ತಕರಾರುಗಳನ್ನು ಎತ್ತಿತ್ತು. ಸದ್ಯದ ಆರ್ಥಿಕ ನಿರ್ಬಂಧಗಳಿರುವ ಕಾರಣ ಈ ಯೋಜನೆಯನ್ನು ಅನುಷ್ಠಾನಗೊಳಿಸುವುದು ಮತ್ತು ಪ್ರತೀ ವರ್ಷ ಈ ಯೋಜನೆಗೆ ಅನುದಾನ ಹೊಂದಿಸುವುದು ಕಷ್ಟಕರವಾಗಲಿದೆ ಎಂದೂ ಆರ್ಥಿಕ ಇಲಾಖೆಯು ವಿವರಿಸಿತ್ತು.
ಗೃಹ ಲಕ್ಷ್ಮಿ; ನಿರಂತರ ಸಾಲದ ಸುಳಿ, ಆದಾಯದ ಕೊರತೆ, ಹಣಕಾಸು ಹೊಣೆಗಾರಿಕೆ ಕಾಯ್ದೆ ಉಲ್ಲಂಘನೆ
ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನದ ಕುರಿತು ಆರ್ಥಿಕ ಇಲಾಖೆಯು ನೀಡಿದ್ದ ಅಭಿಪ್ರಾಯವನ್ನು ಬದಿಗೊತ್ತಿ ಜಾರಿಗೆ ತಂದಿರುವುದು ಮುಂದಿನ ದಿನಗಳಲ್ಲಿ ಮಹಾಲೆಕ್ಕಪರಿಶೋಧಕರ ಆಕ್ಷೇಪಣೆಗೆ ಗುರಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.