ಬೆಂಗಳೂರು; ಗೃಹ ಲಕ್ಷ್ಮಿ ಯೋಜನೆ ಚಾಲನಾ ಕಾರ್ಯಕ್ರಮದ ಪ್ರಚಾರಕ್ಕಾಗಿ ಈಗಾಗಲೇ 17.40 ಕೋಟಿ ರು.ಗಳು ಮಂಜೂರು ಮಾಡಿದ್ದರೂ ಸಹ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರ ಸೂಚನೆ ಮೇರೆಗೆ ಹೆಚ್ಚುವರಿಯಾಗಿ 2 ಕೋಟಿ ರು.ಗಳನ್ನು ಭರಿಸಲು ಆದೇಶ ಹೊರಡಿಸಿರುವುದು ಇದೀಗ ಬಹಿರಂಗವಾಗಿದೆ.
ಮೈಸೂರಿನಲ್ಲಿ 2023ರ ಆಗಸ್ಟ್ 30ರಂದು ನಡೆದ ಗೃಹ ಲಕ್ಷ್ಮಿ ಸೌಲಭ್ಯ ವಿತರಣೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಖಾಸಗಿ ಪ್ರಚಾರ ಫಲಕಗಳಲ್ಲಿ ಜಾಹೀರಾತಿನ ಮೂಲಕ ಪ್ರಚುರ ಪಡಿಸಲು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರ ಸೂಚನೆಯಂತೆ ಹೊರಡಿಸಿರುವ ಆದೇಶವು ಚರ್ಚೆಗೆ ಗ್ರಾಸವಾಗಿದೆ.
ಪ್ರಸ್ತುತ ರಾಜ್ಯದಲ್ಲಿರುವ ಆರ್ಥಿಕ ನಿರ್ಬಂಧಗಳ ಕಾರಣದಿಂದಾಗಿ ಗೃಹ ಲಕ್ಷ್ಮಿ ಯೋಜನೆಯನ್ನು ಅನುಷ್ಠಾನಗೊಳಿಸುವುದು ಕಾರ್ಯಸಾಧುವಲ್ಲ ಮತ್ತು ಪ್ರತೀ ವರ್ಷವೂ ಈ ಯೋಜನೆಗೆ ಅಗಾಧ ಪ್ರಮಾಣದ ಹಣ ನೀಡುವುದು ಅಸಾಧ್ಯ ಎಂದು ಆರ್ಥಿಕ ಇಲಾಖೆಯು ನೀಡಿದ್ದ ಅಭಿಪ್ರಾಯವನ್ನೂ ಬದಿಗೊತ್ತಿ ಜಾರಿಗೆ ತಂದಿರುವ ಈ ಯೋಜನೆಯ ಪ್ರಚಾರಕ್ಕೆ ಕೋಟ್ಯಂತರ ರುಪಾಯಿಗಳಷ್ಟು ಖರ್ಚು ಮಾಡುತ್ತಿರುವುದು ಮುನ್ನೆಲೆಗೆ ಬಂದಿದೆ.
ಈ ಯೋಜನೆಯ ಸೌಲಭ್ಯ ವಿತರಣೆ ಸಂಬಂಧ ಮೈಸೂರಿನಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ತಗುಲುವ ವೆಚ್ಚಕ್ಕೆ ಸಂಬಂಧಿಸಿದಂತೆ ಹಣ ಬಿಡುಗಡೆ ಮಾಡಲು 2023ರ ಸೆ.5ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಸಚಿವರ ಸೂಚನೆಯಲ್ಲೇನಿತ್ತು?
ಗೃಹ ಲಕ್ಷ್ಮಿ ಯೋಜನೆಯ ಪ್ರಯುಕ್ತ ಮುಂದಿನ 01 ತಿಂಗಳ ಅವಧಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನೀಡಿರುವ 5.75 ಕೋಟಿ ರು.ಗಳ ದರದಲ್ಲಿ ಖಾಸಗಿ ಪ್ರಚಾರ ಫಲಕಗಳಲ್ಲಿ ಪ್ರಚುರ ಪಡಿಸಬೇಕು. ಬೆಳಗಾವಿ ಜಿಲ್ಲೆಯಾದ್ಯಂತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನೀಡಿರುವ 25 ಲಕ್ಷ ರು. ದರದಲ್ಲಿ ಕೆಎಸ್‌ಆರ್‍ಟಿಸಿ ಬಸ್‌ಗಳ ಬ್ರಾಂಡಿಂಗ್ ಮಾಡುವುದು, ರಾಜ್ಯ ಹಾಗೂ ರಾಷ್ಟ್ರಮಟ್ಟದ ಸುದ್ದಿವಾಹಿನಿಗಳಲ್ಲಿ ಗೃಹ ಲಕ್ಷ್ಮಿ ಕಾರ್ಯಕ್ರಮದ ದಿನದಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನೀಡಿರುವ 40 ಲಕ್ಷ ರು.ಗಳ ದರದಲ್ಲಿ ಜಾಹೀರಾತು ನೀಡಬೇಕು. ಕಾರ್ಯಕ್ರಮ ದಿನದಂದು ರಾಷ್ಟ್ರ, ರಾಜ್ಯ, ಬೆಳಗಾವಿ ಹಾಗೂ ಮೈಸೂರು ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನೀಡಿರುವ 45 ಲಕ್ಷ ರು.ಗಳ ದರದಲ್ಲಿ ಜಾಹೀರಾತು ನೀಡಬೇಕು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು ಎಂಬುದು ಆದೇಶದಿಂದ ಗೊತ್ತಾಗಿದೆ.
ಈ ಸೂಚನೆಯನ್ನು ಪಾಲಿಸಿರುವ ಇಲಾಖಾಧಿಕಾರಿಗಳು ‘ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2023-24ನೇ ಸಾಲಿನಲ್ಲಿ ರಾಜ್ಯದ ಕುಟುಂಬದಲ್ಲಿನ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2,000 ರು.ಗಳನ್ನು ನೀಡುವ ಗೃಹ ಲಕ್ಷ್ಮಿ ಯೋಜನೆಯ ಚಾಲನಾ ಕಾರ್ಯಕ್ರಮದ ಪ್ರಚಾರಕ್ಕಾಗಿ ಈಗಾಗಲೇ ಮಂಜೂರು ಮಾಡಿರುವ 17.40 ಕೋಟಿ ರು. ಗಳ ಜೊತೆಗೆ 2.00 ಕೋಟಿ ರು.ಗಳ ವೆಚ್ಚವನ್ನು (ಲೆಕ್ಕ ಶೀರ್ಷಿಕೆ; 2235-02-103–0-73) ಭರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿದೆ,’ ಎಂದು ಆದೇಶದಲ್ಲಿ ಹೇಳಲಾಗಿದೆ.
ಶಾಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶೂ, ಸಾಕ್ಸ್‌ಗಳನ್ನು ಖರೀದಿಸಲು ಶಿಕ್ಷಕರನ್ನು ದಾನಿ ಬಳಿ ನಿಲ್ಲಿಸಿ, ಶಾಲಾ ಕಾಲೇಜುಗಳ ಉನ್ನತೀಕರಣ ಪ್ರಸ್ತಾವನೆಗಳನ್ನು ಮುಂದಿನ ಎರಡು ವರ್ಷ ತನಕ ವಿಸ್ತರಿಸಿರುವ ಕಾಂಗ್ರೆಸ್ ಸರ್ಕಾರವು ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕ್ರಮಗಳಿಗಾಗಿ 50 ಲಕ್ಷ ರು.ಗಳನ್ನು ಬಳಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕ್ರಮಗಳಿಗೆ ಒಟ್ಟಾರೆ 50 ಲಕ್ಷ ರು. ಪೈಕಿ 25 ಲಕ್ಷ ರು.ಗಳನ್ನು ಬಿಡುಗಡೆಗೊಳಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 2023ರ ಜುಲೈ 10ರಂದು ಆದೇಶವನ್ನು (ಮಮಿ 70 ಮಮಾ 2023 (ಭಾಗ-16) ಹೊರಡಿಸಿತ್ತು.
ಗೃಹ ಲಕ್ಷ್ಮಿ; ಸಿಎಂ, ಡಿಸಿಎಂ, ಸಚಿವರ ಫೋಟೋ ಶೂಟ್ ಸೇರಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಕ್ಕೆ 50 ಲಕ್ಷ ರು ವೆಚ್ಚ
ಮಹಿಳಾ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ ಉದ್ಯೋಗಿನಿ ಲೆಕ್ಕ ಶೀರ್ಷಿಕೆಯಡಿ (ಲೆಕ್ಕ ಶೀರ್ಷಿಕೆ; 2235-02-103-0-38-059) ನಿಗದಿಪಡಿಸಿರುವ 1100.00 ಲಲಕ್ಷ ರು. ಅನುದಾನದಲ್ಲಿ ಗೃಹ ಲಕ್ಷ್ಮಿ ಯೋಜನೆ ಸಂಬಂಧಿತ ಕಾರ್ಯಕ್ರಮಗಳಿಗಾಗಿ ಐಇಸಿ ಪರಿಕರಗಳೀಗೆ 840.90 ಲಕ್ಷ ರು.ಗ ಅನುದಾನವನ್ನು ಒಂದು ಬಾರಿಗೆ ಮಾತ್ರ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದರು. ಈ ಅನುದಾನದಲ್ಲಿ ಒಟ್ಟು 50 ಲಕ್ಷ ರು.ಗಳನ್ನು ನಿಗದಿಪಡಿಸಿದ್ದನ್ನು ಸ್ಮರಿಸಬಹುದು.