ಪಿ ಡಿ ಖಾತೆಗೆ ವರ್ಗಾವಣೆಯಾಗದ ಬಹುಕೋಟಿ ಮೊತ್ತ; ಸರ್ಕಾರದ ಸೂಚನೆಯನ್ನೇ ಧಿಕ್ಕರಿಸಿತೇ ನಿಗಮ?

ಬೆಂಗಳೂರು; ರಾಜ್ಯದ ವಿವಿಧ ಸಮುದಾಯ ಅಭಿವೃದ್ದಿ  ನಿಗಮಗಳ ಜಿಲ್ಲಾ ವಲಯದ ಬ್ಯಾಂಕ್‌ ಖಾತೆಯಲ್ಲಿನ ಮೊತ್ತವನ್ನು ಪಿ ಡಿ ಖಾತೆಗೆ ವರ್ಗಾಯಿಸಬೇಕು ಎಂದು ಆರ್ಥಿಕ ಇಲಾಖೆ ಸೂಚನೆ ನೀಡಿದ್ದರೂ ಡಾ ಅಂಬೇಡ್ಕರ್‍‌ ಅಭಿವೃದ್ದಿ ನಿಗಮವು ಇನ್ನೂ ಪೂರ್ತಿ ಮೊತ್ತವನ್ನು ಪಿ ಡಿ ಖಾತೆಗೆ  ವರ್ಗಾಯಿಸಿಲ್ಲ.

 

ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳು ಖಾಸಗಿ ಬ್ಯಾಂಕ್‌ಗಳಲ್ಲಿ ಠೇವಣಿ ರೂಪದಲ್ಲಿ ಇರಿಸಿದ್ದ ಹಣವನ್ನು ರಾಜ್ಯ ಹುಜೂರ್‍‌ ಖಜಾನೆಗೆ ವಾಪಸ್‌ ಮಾಡಬೇಕು ಎಂದು ಎಲ್ಲಾ ಸಮುದಾಯಗಳ ಅಭಿವೃದ್ಧಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿತ್ತು. ಇದರ ಬೆನ್ನಲ್ಲೇ ಅಂಬೇಡ್ಕರ್‍‌ ಅಭಿವೃದ್ಧಿ ನಿಗಮವು ಪಿಡಿ ಖಾತೆಗೆ ಪೂರ್ತಿ ಮೊತ್ತವನ್ನು ವರ್ಗಾಯಿಸಿಲ್ಲ ಎಂಬುದು ಮುನ್ನೆಲೆಗೆ ಬಂದಿದೆ.

 

ಪಿ ಡಿ ಖಾತೆಗಳಿಗೆ ಪೂರ್ತಿ ಮೊತ್ತವನ್ನು ವರ್ಗಾವಣೆ ಮಾಡದೇ ಇರುವ ನಿಗಮಗಳಿಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಎಂ ಟಿ ರೇಜು ಅವರು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ  2024ರ ಜುಲೈ 26ರಂದು  ಪತ್ರವನ್ನು ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಎಲ್ಲಾ ನಿಗಮಗಳ ಜಿಲ್ಲಾ ವಲಯದ ಬ್ಯಾಂಕ್‌ ಖಾತೆಯಲ್ಲಿನ ಮೊತ್ತವನ್ನು ಪಿ ಡಿ ಖಾತೆಗೆ ವರ್ಗಾಯಿಸಿ, ಬ್ಯಾಂಕ್‌ ಖಾತೆಯನ್ನು ಕೂಡಲೇ ಮುಕ್ತಾಯಗೊಳಿಸುವಂತೆ ಸ್ಪಷ್ಟ ಸೂಚನೆ ನೀಡಲು ಹಾಗೂ ಇದರಂತೆ ಕ್ರಮವಹಿಸದ ವ್ಯವಸ್ಥಾಪಕ ನಿರ್ದೇಶಕರುಗಳನ್ನು ನೇರ ಹೊಣೆಗಾರರನ್ನಾಗಿ ಶಿಸ್ತು ಕ್ರಮ ಕೈಗೊಳ್ಳಲು ತಿಳಿಸಿದೆ.  ಜಿಲ್ಲಾ ವಲಯದ ಬ್ಯಾಂಕ್‌ ಖಾತೆಯಲ್ಲಿನ ಮೊತ್ತವನ್ನು ಪಿ ಡಿ ಖಾತೆಗೆ ವರ್ಗಾಯಿಸುವ ಕುರಿತು ತೆಗೆದುಕೊಂಡ ಕ್ರಮದ ವರದಿಯನ್ನು ಕೂಡಲೇ ಆರ್ಥಿಕ ಇಲಾಖೆಗೆ ಸಲ್ಲಿಸಬೇಕು,’ ಎಂದು ಡಾ ರೇಜು ಅವರು ಪತ್ರದಲ್ಲಿ ಸೂಚಿಸಿರುವುದು ಗೊತ್ತಾಗಿದೆ.

 

ಬ್ಯಾಂಕ್‌ ಖಾತೆಯಲ್ಲಿನ ಮೊತ್ತವನ್ನು ಪಿ ಡಿ ಖಾತೆಗೆ ವರ್ಗಾಯಿಸಿ ಆರ್ಥಿಕ ವ್ಯವಹಾರವನ್ನು ಪಿ ಡಿ ಖಾತೆ ಮೂಲಕವೇ ಕೈಗೊಂಡು ಬ್ಯಾಂಕ್‌ ಖಾತೆಗಳನ್ನು ಮುಕ್ತಾಯಗೊಳಿಸಬೇಕು. ಈ ಬಗ್ಗೆ ನಿಗದಿತ ನಮೂನೆಯನ್ನು ಸಹ ನಿಗಮಗಳಿಗೆ ಕಳಿಸಿತ್ತು. ಆದರೆ ಅಂಬೇಡ್ಕರ್‍‌ ಅಭಿವೃದ್ಧಿ ನಿಗಮವು ಪೂರ್ತಿ ಮೊತ್ತವನ್ನು ಪಿ ಡಿ ಖಾತೆಗೆ ವರ್ಗಾಯಿಸಿಲ್ಲ ಎಂಬುದು ಪತ್ರದಿಂದ ತಿಳಿದು ಬಂದಿದೆ.

 

‘ಡಾ ಅಂಬೇಡ್ಕರ್‍‌ ಅಭಿವೃದ್ಧಿ ನಿಗಮದಲ್ಲಿನ ಎಲ್ಲಾ ಜಿಲ್ಲಾ ವಲಯದ ಎಲ್ಲಾ ಬ್ಯಾಂಕ್‌ ಖಾತೆಗಳ ಮೊತ್ತವನ್ನು ಪಿ ಡಿ ಖಾತೆಗೆ ವರ್ಗಾಯಿಸುವಂಗೆ ತಿಳಿಸಲಾಗಿದ್ದು ಇನ್ನೂ ಪೂರ್ತಿ ಮೊತ್ತವನ್ನು ಪಿ ಡಿ ಖಾತೆಗೆ ವರ್ಗಾಯಿಸದಿರುವುದು ಕಂಡುಬಂದಿರುತ್ತದೆ,’ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಈ ಕುರಿತು ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರೊಂದಿಗೆ ಆರ್ಥಿಕ ಇಲಾಖೆಯ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ನಿಗಮಗಳ ಹೆಸರಿನಲ್ಲಿ ಹೊಸದಾಗಿ ಠೇವಣಿ ಖಾತೆಗಳನ್ನು ತೆರೆಯುವ ಕುರಿತು 2023ರ ಏಪ್ರಿಲ್‌ 17ರಂದೇ ಆರ್ಥಿಕ ಇಲಾಖೆಯು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಟಿಪ್ಪಣಿ ಹೊರಡಿಸಿತ್ತು. ಈ ಪತ್ರದ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಸರ್ಕಾರದಿಂದ ನಿಗಮಗಳಿಗೆ ಬಿಡುಗಡೆ ಮಾಡಲಾಗುತ್ತಿರುವ ಅನುದಾನ ಬಹುತೇಕ ನಿಗಮಗಳಿಗೆ ಆಯಾ ಸಾಲಿನಲ್ಲಿಯೇ ಬಳಕೆಯಾಗುತ್ತಿಲ್ಲ. ಇದಕ್ಕೆ ಹಲವಾರು ಕಾರಣಗಳಿದ್ದು ಈ ಬಳಕೆಯಾಗದ ಅನುದಾನವನ್ನು ಆಯಾ ನಿಗಮದಲ್ಲಿ ಬ್ಯಾಂಕ್‌ ಖಾತೆಯಲ್ಲಿಟ್ಟು ಮುಂದಿನ ಸಾಲಿಗೆ ಬಳಕೆ ಮಾಡಿಕೊಳ್ಳುತ್ತಿವೆ. ಸರ್ಕಾರದ ಅನುದಾನ ಕಾಲಮಿತಿಯಲ್ಲಿ ವೆಚ್ಚವಾಗದೇ ಅನಗತ್ಯವಾಗಿ ಬ್ಯಾಂಕ್‌ ಖಾತೆಯಲ್ಲಿ ಸಂಗ್ರಹಣೆಯಾಗುತ್ತಿದೆ. ಹೀಗಾಗಿ ಸರ್ಕಾರದ ಇತರೆ ಯೋಜನೆಗಳಿಗೆ ಅನುದಾನ ಕೊರತೆಯಾಗಿರುತ್ತದೆ,’ ಎಂದು 2023ರ ಏಪ್ರಿಲ್‌ 17ರಂದು ಬರೆದಿದ್ದ ಪತ್ರದಿಂದ ತಿಳಿದು ಬಂದಿದೆ.

 

ಸಮಾಜ ಕಲ್ಯಾಣ, ಬುಡಕಟ್ಟು, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಅಧೀನದಲ್ಲಿ ಒಳಪಡುವ ಎಲ್ಲಾ 19 ನಿಗಮ, ಮಂಡಳಿಗಳ ಹೆಸರಿನಲ್ಲಿ ಪ್ರಧಾನ ಲೆಕ್ಕ ಶೀರ್ಷಿಕೆ 8449 ಅಡಿಯಲ್ಲಿ ಪ್ರತ್ಯೇಕವಾಗಿ ಠೇವಣಿ ಖಾತೆಗಳನ್ನು ಸಂಬಂಧಪಟ್ಟ ಖಜಾನೆಯಲ್ಲಿ ತೆರೆಯಲು ಅನುಮತಿ ನೀಡಿತ್ತು. ಠೇವಣಿ ಖಾತೆಯನ್ನು ನಿರ್ವಹಿಸಲು Non Treasure DDO ಕೋಡ್ ಕೂಡ ನೀಡಲಾಗಿತ್ತು.

 

ನಿಗಮಗಳ ಬ್ಯಾಂಕ್‌ ಖಾತೆಯಲ್ಲಿ ಉಳಿದಿರುವ ಅನುದಾನವನ್ನು ಖಜಾನೆ ಠೇವಣಿ ಖಾತೆಗೆ ವರ್ಗಾಯಿಸಿ ಬ್ಯಾಂಕ್‌ ಖಾತೆಗಳಲ್ಲಿನ ಬಡ್ಡಿ ಹಣವನ್ನು ಪ್ರತ್ಯೇಕ ಲೆಕ್ಕ ಶೀರ್ಷಿಕೆಯಡಿ ಜಮೆ ಮಾಡಿ ಬ್ಯಾಂಕ್‌ ಖಾತೆಗಳನ್ನು ಮುಕ್ತಾಯಗೊಳಿಸಬೇಕು. ಹಾಗೂ ನಿಗಮಗಳ ಠೇವಣಿ ಖಾತೆಯಲ್ಲಿ ಸರ್ಕಾರದ ಯೋಜನೆ, ಕಾಮಗಾರಿಗೆ ಸಂಬಂಧಿಸಿದ ಅನುದಾನವನ್ನು ನಿರ್ವಹಿಸಿ, ಯಾವುದೇ ವಿಳಂಬವಿಲ್ಲದೇ ಯೋಜನೆ, ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿತ್ತು.

 

2023ರ ಏಪ್ರಿಲ್‌ 17ರಂದು ಹೊರಡಿಸಿದ್ದ ಟಿಪ್ಪಣಿಯಂತೆ ಬಹುತೇಕ ನಿಗಮಗಳು ಕಾರ್ಯನಿರ್ವಹಿಸಿರಲಿಲ್ಲ. ನಿಗಮಗಳ ಬ್ಯಾಂಕ್‌ ಖಾತೆಗಳಲ್ಲಿ ಉಳಿದಿರುವ ಅನುದಾನವನ್ನು ಖಜಾನೆ ಠೇವಣಿ ಖಾತೆಗೆ ವರ್ಗಾಯಿಸಿರಲಿಲ್ಲ. ಅಲ್ಲದೇ ಬ್ಯಾಂಕ್‌ ಖಾತೆಗಳಲ್ಲಿರುವ ಬಡ್ಡಿ ಹಣವನ್ನೂ ಮುಕ್ತಾಯಗೊಳಿಸಿರಲಿಲ್ಲ.

 

ಅಲ್ಲದೇ ಯಾವುದೇ ನಿಗಮ, ಮಂಡಳಿಗಳು ಠೇವಣಿ ಖಾತೆಗಳ ಮೂಲಕ ಯೋಜನೆ ಕಾಮಗಾರಿಗಳನ್ನು ನಿರ್ವಹಿಸಿರಲಿಲ್ಲ. ಹೀಗಾಗಿ ಠೇವಣಿ ಖಾತೆಯ ಆಡಳಿತಗಾರರು  ಪ್ರತಿ ತಿಂಗಳು ನಗದು ಪುಸ್ತಕ ಶಿಲ್ಕಿಗೂ ಹಾಗೂ ಖಜಾನೆ ಅಖೈರು ಶಿಲ್ಕಿಗೂ ಲೆಕ್ಕ ಸಮನ್ವಯಗೊಂಡಿರಲಿಲ್ಲ.

 

ಹಾಗೆಯೇ ‘ಠೇವಣಿ ಖಾತೆಯನ್ನು ಪ್ರಾರಂಭಿಸಿದ್ದ ಉದ್ದೇಶವು ಈ ಠೇವಣಿ ಖಾತೆಯಿಂದಲೇ ನಿಗಮದ ಎಲ್ಲಾ ಆರ್ಥಿಕ ವ್ಯವಹಾರಗಳು ನಡೆಯಬೇಕು. ಬ್ಯಾಂಕ್‌ ಖಾತೆಗಳಲ್ಲಿ ಜಮೆ ಮಾಡಿರುವ ಸರ್ಕಾರದ ಹಣವನ್ನು ಸದುಪಯೋಗಪಡಿಸಿಕೊಳ್ಳಬಹುದಿತ್ತು. ಆದರೆ ಈ ಉದ್ದೇಶವು ಈಡೇರಿರಲಿಲ್ಲ,’ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಹಿಂದಿನ ಅಪರ ಮುಖ್ಯ ಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್‌ ಅವರು ಪತ್ರದಲ್ಲಿ ವಿವರಿಸಿದ್ದರು.

 

ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮ ಮತ್ತು ಮಂಡಳಿಗಳು ಖಾಸಗಿ ಮತ್ತು ಸರ್ಕಾರಿ  ಬ್ಯಾಂಕ್‌ಗಳಲ್ಲಿ ಇರಿಸಿರುವ  1,731.16 ಕೋಟಿ ರು.ಗಳನ್ನು ಠೇವಣಿ ಇರಿಸಿತ್ತು. ಆದರೆ ಈ ಮಾಹಿತಿಯನ್ನು ಆರ್‍‌ಟಿಐ ಅಡಿಯಲ್ಲಿ ಒದಗಿಸಿರಲಿಲ್ಲ.

 

ಖಾಸಗಿ ಬ್ಯಾಂಕ್‌ಗಳಲ್ಲಿ 1,731.16 ಕೋಟಿ ಠೇವಣಿ; ಕಡತ ಬಹಿರಂಗಕ್ಕೆ ನಕಾರ, ಆರ್‍‌ಟಿಐ ಅರ್ಜಿ ತಿರಸ್ಕಾರ

 

ಆರ್ಥಿಕ ಇಲಾಖೆಯು ಮಾಡಿರುವ ಪಟ್ಟಿಯ ಪ್ರಕಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸೇರಿದಂತೆ ಬಹುತೇಕ ನಿಗಮಗಳು ಬ್ಯಾಂಕ್‌ ಆಫ್‌ ಬರೋಡಾದಲ್ಲಿಯೇ ಖಾತೆ ತೆರೆದಿವೆ. ನಿಶ್ಚಿತ ಠೇವಣಿ ಮತ್ತು ಉಳಿತಾಯ ಖಾತೆಗಳಲ್ಲಿ ಈ ನಿಗಮಗಳು ಕೋಟ್ಯಂತರ ರುಪಾಯಿಗಳನ್ನು ಇರಿಸಿದ್ದವು.

ನಿಗಮಗಳಿಂದ ಆದೇಶ ಉಲ್ಲಂಘನೆ; ಬಿಒಬಿ ಸೇರಿ ಖಾಸಗಿ ಬ್ಯಾಂಕ್‌ಗಳಲ್ಲಿ 1,731.16 ಕೋಟಿ ರು ಠೇವಣಿ

ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವೊಂದೇ ಬ್ಯಾಂಕ್‌ ಆಫ್‌ ಬರೋಡಾ ಮತ್ತು ಐಸಿಐಸಿಐ ಬ್ಯಾಂಕ್‌ನಲ್ಲಿ 310.99 ಕೋಟಿ ರು.ಗಳನ್ನು ಇರಿಸಿತ್ತು. ಇದೀಗ ಸರ್ಕಾರದ ಸೂಚನೆಯಂತೆ ಈ ಬ್ಯಾಂಕ್‌ನಲ್ಲಿ ಖಾತೆಗಳಲ್ಲಿದ್ದ ಇಷ್ಟೂ ಮೊತ್ತವನ್ನು ಹಿಂಪಡೆದು ರಾಜ್ಯ ಸರ್ಕಾರ ಖಜಾನೆಯಲ್ಲಿನ ಖಾತೆಗಳಿಗೆ ವರ್ಗಾಯಿಸಿತ್ತು.

 

 

ಉಪ್ಪಾರ ಅಭಿವೃದ್ಧಿ ನಿಗಮವು ಬ್ಯಾಂಕ್‌ ಆಫ್‌ ಬರೋಡಾದಲ್ಲಿ 7.40 ಕೋಟಿ ರು.,   ವೀರಶೈವ ಲಿಂಗಾಯುತ ಅಭಿವೃದ್ಧಿ ನಿಗಮವು ಸಹ  61.52 ಕೋಟಿ ರು.ಗಳನ್ನು ಇರಿಸಿದೆ. ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮವು ಕೆನರಾ ಬ್ಯಾಂಕ್‌ನಲ್ಲಿ 10.51 ಕೋಟಿ ರು.ಗಳನ್ನು ಇರಿಸಿದೆ.

 

 

ನಿಜ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮವು ಬ್ಯಾಂಕ್‌ ಆಫ್‌ ಬರೋಡಾದಲ್ಲಿ70.73 ಕೋಟಿ ರು.ಗಳನ್ನು ಇರಿಸಿದೆ. ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮವು ಕೆನರಾ ಬ್ಯಾಂಕ್‌ನಲ್ಲಿ 15.40 ಲಕ್ಷ ರು.ಗಳನ್ನು ಇರಿಸಿದೆ.

 

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ 8.42 ಕೋಟಿ ರು.ಗಳನ್ನು ಇರಿಸಿದೆ. ಬಾಬು ಜಗಜೀವನ್‌ ಚರ್ಮೋದ್ಯಮ ಅಭಿವೃದ್ಧಿ ಮಂಡಳಿಯು ಯೂನಿಯನ್‌ ಬ್ಯಾಂಕ್‌ನಲ್ಲಿ 1.14 ಕೋಟಿ ರು. ಮೊತ್ತವನ್ನು ಇರಿಸಿದೆ.

 

 

ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮವು ಬ್ಯಾಂಕ್‌ ಆಫ್‌ ಬರೋಡಾದಲ್ಲಿ 1,123.57 ಕೋಟಿ ರು.ಗಳನ್ನು ಇರಿಸಿದೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮವು ಯೂನಿಯನ್‌, ಕೆನರಾ ಬ್ಯಾಂಕ್‌ನಲ್ಲಿ 110.64 ಕೋಟಿ ರು.ಗಳನ್ನು ಇರಿಸಿದೆ.

 

 

ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮವು ಕೆನರಾ ಬ್ಯಾಂಕ್‌, ಐಡಿಬಿಐ, 12.85 ಲಕ್ಷ ರು., ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮವು ಐಸಿಐಸಿಐ ಮತ್ತು ಎಸ್‌ಬಿಐನಲ್ಲಿ 25.93 ಕೋಟಿ ರು.ಗಳನ್ನು ಇರಿಸಿರುವುದು ಗೊತ್ತಾಗಿದೆ.

 

 

ಸರ್ಕಾರದ ಖಜಾನೆಯಲ್ಲಿ ತೆರೆದಿರುವ ಖಾತೆಗಳಲ್ಲಿಯೇ ನಿಗಮ ಮಂಡಳಿಗಳು ಹಣವನ್ನು ಜಮಾ ಮಾಡಬೇಕು ಎಂದು ಸರ್ಕಾರವು 2023ರ ಏಪ್ರಿಲ್‌ 17ರಂದು ಆದೇಶದಲ್ಲಿ ಸೂಚಿಸಿತ್ತು. ಆದರೂ ಹಲವು ಅಭಿವೃದ್ಧಿ ನಿಗಮಗಳು ಕ್ರಮ ಜರುಗಿಸಿರಲಿಲ್ಲ. ಅಲ್ಲದೇ ಆದೇಶವನ್ನು ಉಲ್ಲಂಘಿಸಿದ್ದರೂ ಆರ್ಥಿಕ ಇಲಾಖೆಯೂ ಸಹ ಯಾವುದೇ ಶಿಸ್ತು ಕ್ರಮ ಕೈಗೊಂಡಿರಲಿಲ್ಲ.

SUPPORT THE FILE

Latest News

Related Posts