ಬೆಂಗಳೂರು; ರಾಜ್ಯದ ಹಲವು ವೈದ್ಯಕೀಯ ಕಾಲೇಜುಗಳ ವ್ಯಾಪ್ತಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ, ಮೇಲ್ದರ್ಜೆ ಮತ್ತು ಕಾರ್ಯನಿರ್ವಹಣೆಗೆ ಅನುದಾನ ಕೊರತೆಯಾಗಿದೆ. ಹಾಗೆಯೇ ಆರ್ಥಿಕ ಇಲಾಖೆಯ ಸಾಮರ್ಥ್ಯವು ದುರ್ಬಲವಾಗಿದೆ. ಹೀಗಾಗಿ ಈ ಯೋಜನೆಗಳನ್ನು ಜಾರಿಗೊಳಿಸಬೇಕಾದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ನೀತಿಗೆ ಮೊರೆ ಹೋಗುವುದು ಅನಿವಾರ್ಯವಾಗಿದೆ.
ವೈದ್ಯಕೀಯ ಕಾಲೇಜುಗಳ ಕಾರ್ಯನಿರ್ವಹಣಾ ಅನುದಾನದಲ್ಲಿ ಬಿಕ್ಕಟ್ಟುಗಳನ್ನು ಎದುರಿಸುತ್ತಿವೆ. ಹೀಗಾಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಡಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸುವುದು ಒಳಿತು ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯಿಸಿದೆ. ಅಲ್ಲದೇ ಈ ಯೋಜನೆಯನ್ನು ಮುಂದಿನ ಒಂದೆರಡು ವರ್ಷಗಳ ಮುಂದೂಡಬೇಕು ಎಂದು ಸಲಹೆ ನೀಡಿದೆ.
ಗ್ಯಾರಂಟಿ ಯೋಜನೆಗಳಿಗೆ ಪ್ರತಿ ವರ್ಷವೂ ಅನುದಾನ ಹೊಂದಿಸಲು ಸಾಧ್ಯವಾಗದು ಮತ್ತು ಈ ಯೋಜನೆಗಳಿಗೆ ಪ್ರಸ್ತಾಪಿತ ಮೊತ್ತವನ್ನು ಒದಗಿಸಿದಲ್ಲಿ ಇತರೆ ಯೋಜನೆಯ ಲೆಕ್ಕ ಶೀರ್ಷಿಕೆಗಳಲ್ಲಿ ಅನುದಾನ ಕೊರತೆಯಾಗಲಿದೆ ಎಂದು ಆರ್ಥಿಕ ಇಲಾಖೆಯು ಹೇಳಿದ್ದರ ಬೆನ್ನಲ್ಲೇ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಕೊರತೆಯಾಗಿರುವುದು ಮುನ್ನೆಲೆಗೆ ಬಂದಿದೆ.
ಈ ಸಂಬಂಧ ಆರ್ಥಿಕ ಇಲಾಖೆಯು 2024ರ ಫೆ.13ರಂದೇ ತನ್ನ ಅಭಿಪ್ರಾಯವನ್ನು ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ (FD 220 EXP-5/2022 MED 471 MMC 2021) ಕಳಿಸಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸಲು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಪರಿಶೀಲಿಸಿತ್ತು. ಯಾವುದೇ ಸಂಸ್ಥೆಯ ಸಮಗ್ರ ಅಭಿವೃದ್ಧಿಗೆ ಹಣ ಹೊಂದಿಸುವುದು ಹಣಕಾಸು ಇಲಾಖೆಯ ಸಾಮರ್ಥ್ಯವು ತೀವ್ರವಾಗಿ ದುರ್ಬಲವಾಗಿದೆ ಎಂಬ ಅಂಶವನ್ನು ಉಲ್ಲೇಖಿಸಿರುವುದು ತಿಳಿದುಬಂದಿದೆ.
ಮಾಡ್ಯುಲರ್ ಶಸ್ತ್ರಚಿಕಿತ್ಸೆ ಕೊಠಡಿ ಕಾಮಗಾರಿ ಸೇರಿದಂತೆ ಸೂಪರ್ ಸ್ಪೆಷಾಲಿಟಿ ಎಚ್‌ಸಿಇಗಳಿಗೆ 855 ಕೋಟಿ ರು ಮತ್ತು ಇತರೆ ವೈದ್ಯಕೀಯ ಕಾಲೇಜುಗಳಿಗೆ 2,300 ಕೋಟಿ ರು ಮೊತ್ತದ ಯೋಜನೆಗೆ ಇತ್ತೀಚೆಗಷ್ಟೇ ಅನುಮೋದನೆ ದೊರೆತಿತ್ತು ಎಂಬುದು ಆರ್ಥಿಕ ಇಲಾಖೆಯ ಅಭಿಪ್ರಾಯದಿಂದ ಗೊತ್ತಾಗಿದೆ.
‘ಇದು ಮುಂದಿನ ನಾಲ್ಕು ವರ್ಷಗಳ ಹಂಚಿಕೆಗೆ ಸಮಾನವಾಗಿದೆ. ಪರಿಷ್ಕೃತ ಅಂದಾಜುಗಳು ವಾಡಿಕೆಯಂತೆ ಬರುತ್ತಿರುವುದರಿಂದ ಮತ್ತು ಹೊಸ ಪ್ರಸ್ತಾವನೆಗಳನ್ನು ನಿಯಮಿತವಾಗಿ ಸಲ್ಲಿಸಲಾಗುತ್ತಿರುವುದರಿಂದ, ಯಾವುದೇ ಸಂಸ್ಥೆಯ ಸಮಗ್ರ ಅಭಿವೃದ್ಧಿಗೆ ಹಣಕಾಸು ಒದಗಿಸುವ ಆರ್ಥಿಕ ಇಲಾಖೆಯ ಸಾಮರ್ಥ್ಯವು ತೀವ್ರವಾಗಿ ದುರ್ಬಲಗೊಳ್ಳುತ್ತದೆ. ಅಲ್ಲದೇ ಯಾವುದೇ ಕೆಲಸವು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತಿಲ್ಲ,’ ಎಂದು ಅಭಿಪ್ರಾಯದಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.
ನಿಯಮಗಳ ಪ್ರಕಾರ ಬಂಡವಾಳ ವೆಚ್ಚದೊಂದಿಗೆ ಕಾರ್ಯನಿರ್ವಹಣಾ ವೆಚ್ಚವನ್ನೂ ಸಂಯೋಜಿಸಲಾಗುತ್ತದೆ. ಇದರ ಪ್ರಕಾರ ಬಂಡವಾಳ ವೆಚ್ಚ 100 ಕೋಟಿ ರು. ನೊಂದಿಗೆ ಶೆ.15-20ರಷ್ಟು ಕಾರ್ಯನಿರ್ವಹಣಾ ವೆಚ್ಚವನ್ನು ಸಂಯೋಜಿಸಲಾಗುತ್ತದೆ. ಈಗಾಲೇ ಸುಮಾರು 3,000 ಕೋಟಿ ರು ಗಳ ಕಾಮಗಾರಿಗಳಿಗೆ ಈಗಾಗಲೇ ಅನುಮೋದನೆ ನೀಡಿದ್ದು ಅದರ ಕಾರ್ಯನಿರ್ವಹಣಾ ವೆಚ್ಚವೇ 450-600 ಕೋಟಿ ರು.ಗಳಾಗುತ್ತವೆ.
ಬದ್ಧತಾ ವೆಚ್ಚವನ್ನು ಇದರಿಂದ ಹೊರಗಿಡಲಾಗಿದೆ. ಇದರ ಪ್ರಕಾರ ವೈದ್ಯಕೀಯ ಕಾಲೇಜುಗಳು ಕಾರ್ಯನಿರ್ವಹಣಾ ವೆಚ್ಚದಲ್ಲಿ ಬಿಕ್ಕಟ್ಟನ್ನು ಎದುರಿಸುತ್ತಿವೆ ಎಂದು ಉಲ್ಲೇಖಿಸಿರುವುದು ಗೊತ್ತಾಗಿದೆ.
ಹೀಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆಯನ್ನು ಈ ಪರಿಸ್ಥಿತಿಯಲ್ಲಿ ಒಪ್ಪಿಕೊಳ್ಳುತ್ತಿಲ್ಲ ಎಂದು ಆರ್ಥಿಕ ಇಲಾಖೆಯು ವಿಷಾದಿಸಿದೆ. ಅಲ್ಲದೇ ಇದನ್ನು ಒಂದೆರಡು ವರ್ಷಗಳ ಕಾಲ ಮುಂದೂಡಬೇಕು ಎಂದೂ ಸಲಹೆ ನೀಡಿದೆ. ಅಥವಾ ಪಿಪಿಪಿ ವಿಧಾನದ ಮೂಲಕ ಇದನ್ನು ಜಾರಿಗೊಳಿಸಬಹುದು ಎಂದೂ ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.