ನಿಗಮಗಳಿಂದ ಆದೇಶ ಉಲ್ಲಂಘನೆ; ಬಿಒಬಿ ಸೇರಿ ಖಾಸಗಿ ಬ್ಯಾಂಕ್‌ಗಳಲ್ಲಿ 1,731.16 ಕೋಟಿ ರು ಠೇವಣಿ

ಬೆಂಗಳೂರು; ಹಿಂದುಳಿದ ವರ್ಗಗಳ ಕಲ್ಯಾಣ, ಕಂದಾಯ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧೀನದಲ್ಲಿರುವ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮ ಮತ್ತು ಮಂಡಳಿಗಳು ಬ್ಯಾಂಕ್‌ ಆಫ್‌ ಬರೋಡಾ ಸೇರಿದಂತೆ ಇನ್ನಿತರೆ ಖಾಸಗಿ ಬ್ಯಾಂಕ್‌ಗಳಲ್ಲಿ 1,731.16 ಕೋಟಿ ರು.ಗಳನ್ನು ಠೇವಣಿ ಇರಿಸಿರುವುದು ಇದೀಗ ಬಹಿರಂಗವಾಗಿದೆ.

 

ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳು ಮತ್ತು ಮಂಡಳಿಗಳು ಸರ್ಕಾರದ ಖಜಾನೆಯಲ್ಲಿಯೇ ಖಾತೆಗಳನ್ನು ತೆರೆದು ಅಲ್ಲಿಯೇ ಜಮೆ ಮಾಡಬೇಕು ಮತ್ತು ನಿರ್ವಹಿಸಬೇಕು ಎಂದು ಸರ್ಕಾರ ಹೊರಡಿಸಿದ್ದ ಆದೇಶವನ್ನೂ ಉಲ್ಲಂಘಿಸಿವೆ.

 

ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದಲ್ಲಿನ  ಆರ್ಥಿಕ ಅಪರಾಧ ಪ್ರಕರಣದಲ್ಲಿ ಸಚಿವ ಬಿ ನಾಗೇಂದ್ರ ಅವರು ರಾಜೀನಾಮೆ ನೀಡಿರುವ  ಬೆನ್ನಲ್ಲೇ  ಆರ್ಥಿಕ ಇಲಾಖೆಯು  2024ರ ಮೇ 30ರಂದು ರಾಜ್ಯಮಟ್ಟದ ಬ್ಯಾಂಕರ್‍‌ಗಳ ಸಮಾಲೋಚನ ಮಂಡಳಿಗೆ  ಬರೆದಿದ್ದ ಪತ್ರಕ್ಕೆ ಮಹತ್ವ ಬಂದಿದೆ.  ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

2024ರ ಏಪ್ರಿಲ್‌ನಲ್ಲಿ ಹೊರಡಿಸಿದ್ದ ಆದೇಶವನ್ನು ಪುನರುಚ್ಛರಿಸಿರುವ ಇಲಾಖೆಯು, ಸಮುದಾಯಗಳ ಅಭಿವೃದ್ಧಿ ನಿಗಮ, ಮಂಡಳಿಗಳು ಖಾಸಗಿ ಬ್ಯಾಂಕ್‌ಗಳಲ್ಲಿ ತೆರೆದಿರುವ ಎಲ್ಲಾ ಬಗೆಯ ಖಾತೆಗಳನ್ನೂ ತಕ್ಷಣದಿಂದಲೇ ಸ್ಥಗಿತಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಲ್ಲದೇ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮ ಮತ್ತು ಮಂಡಳಿಗಳು ಯಾವ್ಯಾವ ಬ್ಯಾಂಕ್‌ನಲ್ಲಿ ಎಷ್ಟೆಷ್ಟು ಹಣವನ್ನು ಇರಿಸಿದೆ ಎಂಬ ಪಟ್ಟಿಯನ್ನೂ ಮಾಡಿದೆ.

 

ಆರ್ಥಿಕ ಇಲಾಖೆಯು ಮಾಡಿರುವ ಪಟ್ಟಿಯ ಪ್ರಕಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸೇರಿದಂತೆ ಬಹುತೇಕ ನಿಗಮಗಳು ಬ್ಯಾಂಕ್‌ ಆಫ್‌ ಬರೋಡಾದಲ್ಲಿಯೇ ಖಾತೆ ತೆರೆದಿವೆ. ನಿಶ್ಚಿತ ಠೇವಣಿ ಮತ್ತು ಉಳಿತಾಯ ಖಾತೆಗಳಲ್ಲಿ ಈ ನಿಗಮಗಳು ಕೋಟ್ಯಂತರ ರುಪಾಯಿಗಳನ್ನು ಇರಿಸಿರುವುದು ಗೊತ್ತಾಗಿದೆ.

 

ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವೊಂದೇ ಬ್ಯಾಂಕ್‌ ಆಫ್‌ ಬರೋಡಾ ಮತ್ತು ಐಸಿಐಸಿಐ ಬ್ಯಾಂಕ್‌ನಲ್ಲಿ 310.99 ಕೋಟಿ ರು.ಗಳನ್ನು ಇರಿಸಿತ್ತು. ಇದೀಗ ಸರ್ಕಾರದ ಸೂಚನೆಯಂತೆ ಈ ಬ್ಯಾಂಕ್‌ನಲ್ಲಿ ಖಾತೆಗಳಲ್ಲಿದ್ದ ಇಷ್ಟೂ ಮೊತ್ತವನ್ನು ಹಿಂಪಡೆದು ರಾಜ್ಯ ಸರ್ಕಾರ ಖಜಾನೆಯಲ್ಲಿನ ಖಾತೆಗಳಿಗೆ ವರ್ಗಾಯಿಸಿದೆ ಎಂದು ಗೊತ್ತಾಗಿದೆ.

 

 

ಉಪ್ಪಾರ ಅಭಿವೃದ್ಧಿ ನಿಗಮವು ಬ್ಯಾಂಕ್‌ ಆಫ್‌ ಬರೋಡಾದಲ್ಲಿ 7.40 ಕೋಟಿ ರು.,   ವೀರಶೈವ ಲಿಂಗಾಯುತ ಅಭಿವೃದ್ಧಿ ನಿಗಮವು ಸಹ  61.52 ಕೋಟಿ ರು.ಗಳನ್ನು ಇರಿಸಿದೆ. ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮವು ಕೆನರಾ ಬ್ಯಾಂಕ್‌ನಲ್ಲಿ 10.51 ಕೋಟಿ ರು.ಗಳನ್ನು ಇರಿಸಿದೆ.

 

ನಿಜ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮವು ಬ್ಯಾಂಕ್‌ ಆಫ್‌ ಬರೋಡಾದಲ್ಲಿ70.73 ಕೋಟಿ ರು.ಗಳನ್ನು ಇರಿಸಿದೆ. ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮವು ಕೆನರಾ ಬ್ಯಾಂಕ್‌ನಲ್ಲಿ 15.40 ಲಕ್ಷ ರು.ಗಳನ್ನು ಇರಿಸಿದೆ. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ 8.42 ಕೋಟಿ ರು.ಗಳನ್ನು ಇರಿಸಿದೆ. ಬಾಬು ಜಗಜೀವನ್‌ ಚರ್ಮೋದ್ಯಮ ಅಭಿವೃದ್ಧಿ ಮಂಡಳಿಯು ಯೂನಿಯನ್‌ ಬ್ಯಾಂಕ್‌ನಲ್ಲಿ 1.14 ಕೋಟಿ ರು. ಮೊತ್ತವನ್ನು ಇರಿಸಿದೆ.

 

ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮವು ಬ್ಯಾಂಕ್‌ ಆಫ್‌ ಬರೋಡಾದಲ್ಲಿ 1,123.57 ಕೋಟಿ ರು.ಗಳನ್ನು ಇರಿಸಿದೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮವು ಯೂನಿಯನ್‌, ಕೆನರಾ ಬ್ಯಾಂಕ್‌ನಲ್ಲಿ 110.64 ಕೋಟಿ ರು.ಗಳನ್ನು ಇರಿಸಿದೆ.

 

ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮವು ಕೆನರಾ ಬ್ಯಾಂಕ್‌, ಐಡಿಬಿಐ, 12.85 ಲಕ್ಷ ರು., ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮವು ಐಸಿಐಸಿಐ ಮತ್ತು ಎಸ್‌ಬಿಐನಲ್ಲಿ 25.93 ಕೋಟಿ ರು.ಗಳನ್ನು ಇರಿಸಿರುವುದು ಗೊತ್ತಾಗಿದೆ.

 

ಸರ್ಕಾರದ ಖಜಾನೆಯಲ್ಲಿ ತೆರೆದಿರುವ ಖಾತೆಗಳಲ್ಲಿಯೇ ನಿಗಮ ಮಂಡಳಿಗಳು ಹಣವನ್ನು ಜಮಾ ಮಾಡಬೇಕು ಎಂದು ಸರ್ಕಾರವು 2023ರ ಏಪ್ರಿಲ್‌ 17ರಂದು ಆದೇಶದಲ್ಲಿ ಸೂಚಿಸಿತ್ತು. ಆದರೂ ಹಲವು ಅಭಿವೃದ್ಧಿ ನಿಗಮಗಳು ಕ್ರಮ ಜರುಗಿಸಿರಲಿಲ್ಲ. ಅಲ್ಲದೇ ಆದೇಶವನ್ನು ಉಲ್ಲಂಘಿಸಿದ್ದರೂ ಆರ್ಥಿಕ ಇಲಾಖೆಯೂ ಸಹ ಯಾವುದೇ ಶಿಸ್ತು ಕ್ರಮ ಕೈಗೊಂಡಿರಲಿಲ್ಲ.

 

ಖಾಸಗಿ ಬ್ಯಾಂಕ್‌ಗಳಲ್ಲಿ ಇರಿಸಿದ್ದ ಮೊತ್ತವನ್ನು ಹಿಂಪಡೆದು ರಾಜ್ಯ ಖಜಾನೆಯಲ್ಲಿ ಹೊಂದಿರುವ ಖಾತೆಗಳಿಗೆ ವರ್ಗಾಯಿಸಬೇಕು ಎಂಬ ಬಗ್ಗೆ ಆರ್ಥಿಕ ಇಲಾಖೆಯು ಏಪ್ರಿಲ್‌ನಲ್ಲಿ ಬರೆದಿದ್ದ ಪತ್ರದ ಕುರಿತು ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ, ಸಮಾಜ ಕಲ್ಯಾಣ ಸಚಿವ ಡಾ ಹೆಚ್ ಸಿ ಮಹದೇವಪ್ಪ, ಕಂದಾಯ ಸಚಿವ  ಕೃಷ್ಣಬೈರೇಗೌಡ ಅವರೊಂದಿಗೆ ಚರ್ಚಿಸಿರಲಿಲ್ಲ ಎಂದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts