16,625 ಕೆರೆಗಳಲ್ಲಿ ಶೇಕಡ 30ಕ್ಕಿಂತಲೂ ಕಡಿಮೆ ಪ್ರಮಾಣದ ನೀರು; ಜನ, ಜಾನುವಾರುಗಳಿಗೆ ಸಂಕಷ್ಟ

ಬೆಂಗಳೂರು; ತೀವ್ರ ಬರಗಾಲಕ್ಕೆ ತುತ್ತಾಗಿರುವ ರಾಜ್ಯದಲ್ಲಿ ಹನಿ ನೀರಿಗೂ ತತ್ವಾರ ಶುರುವಾಗಿದೆ. ಇದರ ಮಧ್ಯೆಯೇ ರಾಜ್ಯದ 16,625 ಕೆರೆಗಳಲ್ಲಿ ಶೇಕಡ 30ಕ್ಕಿಂತಲೂ ಕಡಿಮೆ ಪ್ರಮಾಣದ ನೀರಿದೆ. ಹೀಗಾಗಿ ನಗರ ಪ್ರದೇಶಗಳನ್ನೂ ಒಳಗೊಂಡಂತೆ ಕೆರೆ ಸುತ್ತಮುತ್ತಲಿನ ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗುವ ಪರಿಸ್ಥಿತಿ ತಲೆದೋರಿದೆ.

 

ಕೆರೆಗಳಲ್ಲಿ ನೀರು ಖಾಲಿ ಆಗುತ್ತಿರುವ ಕುರಿತು ಅಭಿವೃದ್ಧಿ ಆಯುಕ್ತರಾದ ಡಾ ಶಾಲಿನಿ ರಜನೀಶ್‌ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಹವಮಾನ ಅವಲೋಕನ ಸಮಿತಿ ಸಭೆಯಲ್ಲಿ ಕೆರೆಗಳಲ್ಲಿನ ನೀರಿನ ಪರಿಸ್ಥಿತಿ ಕುರಿತು ಚರ್ಚೆಯಾಗಿದೆ. 2024ರ ಮಾರ್ಚ್‌ 28ರಂದು ನಡೆದಿದ್ದ ಸಭೆಯ ನಡವಳಿಗಳು ‘ದಿ ಫೈಲ್‌’ ಗೆ ಲಭ್ಯವಾಗಿದೆ.

 

ಮುಂಗಾರಿಗಿಂತ ಮುಂಚಿತವಾಗಿ ಕೆರೆಗಳಿಗೆ ಸಾಕಷ್ಟು ಮಳೆ ನೀರು ಸಂಗ್ರಹಣೆ ಮಾಡಲು ಅಗತ್ಯವಿರುವ ಎಲ್ಲಾ ಕಾಮಗಾರಿಗಳನ್ನು ವಿವಿಧ ಇಲಾಖೆಗಳ ಯೋಜನೆಗಳಡಿಯಲ್ಲಿ ಕೈಗೆತ್ತಿಕೊಳ್ಳಬೇಕು ಎಂದು ಡಾ ಶಾಲಿನಿ ರಜನೀಶ್‌ ಅವರು 2024ರ ಮಾರ್ಚ್‌ 30ರಂದು ಎಲ್ಲಾ ಇಲಾಖೆಗಳ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

 

ರಾಜ್ಯದಲ್ಲಿ ಜಿಲ್ಲಾ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ 12,657, ಸಣ್ಣ ನೀರಾವರಿ ಇಲಾಖೆಯಲ್ಲಿ 3,252, ಜಲಸಂಪನ್ಮೂಲ ಇಲಾಖೆಯಲ್ಲಿ 85, ಪೌರಾಡಳಿತ ಇಲಾಖೆ ವ್ಯಾಪ್ತಿಯಲ್ಲಿ 248, ಕರ್ನಾಟಕ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ 377, ಕೆಪಿಸಿಎಲ್‌ ವ್ಯಾಪ್ತಿಯಲ್ಲಿ 6 ಕೆರೆ ಸೇರಿದಂತೆ ಒಟ್ಟಾರೆ 16,625 ಕೆರೆಗಳಿವೆ. ಈ ಕೆರೆಗಳಲ್ಲಿ ಸುಮಾರು ಶೇಕಡಾ 30ಕ್ಕಿಂತಲೂ ಕಡಿಮೆ ಪ್ರಮಾಣದ ನೀರಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

 

ಕರ್ನಾಟಕ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿನ ಕೆರೆಗಳ ಪೈಕಿ ಚಿತ್ರದುರ್ಗದಲ್ಲಿ 25, ಕೋಲಾರದಲ್ಲಿ 15, ಶಿವಮೊಗ್ಗದಲ್ಲಿ 75, ತುಮಕೂರಿನಲ್ಲಿ 27, ಉತ್ತರ ಕನ್ನಡದಲ್ಲಿ 28 ಕೆರೆಗಳಿವೆ. ಈ ಕೆರೆಗಳಲ್ಲಿಯೂ ಶೇ.30ಕ್ಕಿಂತಲೂ ಕಡಿಮೆ ನೀರಿದೆ ಎಂಬುದು ಪತ್ರದಿಂದ ಗೊತ್ತಾಗಿದೆ.

 

2023ರ ಡಿಸೆಂಬರ್‍‌ ಅಂತ್ಯಕ್ಕೆ ರಾಜ್ಯದ ಸುಮಾರು 1,288ಕ್ಕೂ ಹೆಚ್ಚು ಕೆರೆಗಳಲ್ಲಿ ಶೇ.30ರಷ್ಟು ಮಾತ್ರ ನೀರಿತ್ತು. ಇದರಲ್ಲಿ 425ಕ್ಕೂ ಹೆಚ್ಚು ಕೆರೆಗಳಲ್ಲಿ ಒಂದು ಹನಿಯೂ ನೀರಿರಲಿಲ್ಲ. 1033 ಕೆರೆಗಳಲ್ಲಿ ಶೇ.31 ರಿಂದ 50 ರಷ್ಟು ನೀರಿತ್ತು. 760 ಕೆರೆಯಲ್ಲಿ ಶೇ.51 ರಿಂದ 99 ಭಾಗ ನೀರಿತ್ತು.

 

ತುಮಕೂರು ಜಿಲ್ಲೆಯಲ್ಲಿ 371 ಕೆರೆಗಳಿವೆ. ಇದರಲ್ಲಿ ಡಿಸೆಂಬರ್‍‌ ಅಂತ್ಯಕ್ಕೇ 68 ಕೆರೆಯಲ್ಲಿ ನೀರಿರಲಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ 290 ಕೆರೆಗಳ ಪೈಕಿ 113 ಕೆರೆಯಲ್ಲಿ ನೀರಿಲ್ಲದಂತಾಗಿತ್ತು. ವಿಜಯಪುರ, ಬಾಗಲಕೋಟೆ, ಚಾಮರಾಜನಗರ, ಕಲಬುರಗಿ, ಬಳ್ಳಾರಿ, ವಿಜಯನಗರ ಮತ್ತಿತರ ಜಿಲ್ಲೆಗಳಲ್ಲೂ ಇಂತದ್ದೇ ಪರಿಸ್ಥಿತಿ ಇತ್ತು.

 

ಬೆಂಗಳೂರು ನಗರ ಜಿಲ್ಲೆಯಲ್ಲಿ 149 ಕೆರೆಗಳ ಜೀರ್ಣೋದ್ಧಾರಕ್ಕೆ ಮುಂದಾಗಿರುವ ಸರ್ಕಾರವು ಇದಕ್ಕಾಗಿ 910.70 ಕೋಟಿ ರು ಅಂದಾಜು ವೆಚ್ಚದ ಕಾರ್ಯ ಯೋಜನೆಯನ್ನು ಸಿದ್ಧಪಡಿಸಿದೆ. ಇದರಲ್ಲಿ ಕೆರೆಗಳ ನೀರಿನ ಸಾಮರ್ಥ್ಯ ಸೇರಿದಂತೆ ಇನ್ನಿತರೆ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ 656.15 ಕೋಟಿ ರು., ಇತರೆ ಕಾಮಗಾರಿಗಳಿಗೆ 254.56 ಕೋಟಿ ರು ಸೇರಿದೆ.

 

ಬೆಂಗಳೂರು ದಕ್ಷಿಣ ವ್ಯಾಪ್ತಿಯ ಕೆರೆಗಳಿಗೆ 69.68 ಕೋಟಿ ರು., ಬೆಂಗಳೂರು ಪೂರ್ವಕ್ಕೆ 73.97 ಕೋಟಿ ರು., ಬೆಂಗಳೂರು ಉತ್ತರಕ್ಕೆ 102.75 ಕೋಟಿ ರು., ಆನೇಕಲ್‌ ತಾಲೂಕಿನಲ್ಲಿನ ಮೂರು ಘಟಕಗಳಿಗೆ 421.6 ಕೋಟಿ ರು., ಯಲಹಂಕದ 2 ಘಟಕಗಳಲ್ಲಿ 242.4 ಕೋಟಿ ರು ಅಂದಾಜಿಸಿದೆ.

Your generous support will help us remain independent and work without fear.

Latest News

Related Posts