ತಜ್ಞರಲ್ಲದವರಿಂದ ಸಿಟಿ ಸ್ಕ್ಯಾನ್‌ ನಿರ್ವಹಣೆ; ವರದಿಗಳ ವಿಶ್ವಾಸರ್ಹತೆ ಪ್ರಶ್ನಾರ್ಹ, ಆಘಾತಕಾರಿ ಸಂಗತಿ ಬಹಿರಂಗ

ಬೆಂಗಳೂರು;ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ  ಸೂಕ್ತ ತಜ್ಞತೆ ಇಲ್ಲದ ವೈದ್ಯರು, ಸಿಬ್ಬಂದಿಗಳು ಪೆಟ್‌ ಸಿಟಿ ಸ್ಕ್ಯಾನ್‌  ಯಂತ್ರವನ್ನು ನಿರ್ವಹಿಸುತ್ತಿದ್ದಾರೆ ಎಂಬ ಆಘಾತಕಾರಿ ಸಂಗತಿಯನ್ನು ತನಿಖಾ ವರದಿಯು  ಬಹಿರಂಗಗೊಳಿಸಿದೆ.

 

ತಜ್ಞತೆ ಇಲ್ಲದ ವೈದ್ಯರು ಮತ್ತು ಅನುಭವವೇ ಇಲ್ಲದ ಸಿಬ್ಬಂದಿಗಳ ಕಾರ್ಯನಿರ್ವಹಿಸುತ್ತಿರುವುದು  ರೋಗಿಗಳ ಮೇಲೆ  ದುಷ್ಪರಿಣಾಮ ಬೀರುವ  ಸಾಧ್ಯತೆ ಇದೆ ಎಂದು ತನಿಖಾ ತಂಡವು ಸರ್ಕಾರಕ್ಕೆ ವರದಿ ನೀಡಿದೆ.  ಇದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಕರಾಳತೆಯನ್ನು ಪರಿಚಯಿಸಿದೆ.

 

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಕಾರ್ಯನಿರ್ವಹಣೆ ಕುರಿತು ಸ್ವೀಕೃತವಾದ ಎಲ್ಲಾ ದೂರುಗಳ ಬಗ್ಗೆ ಖಜಾನೆ ಆಯುಕ್ತರಾದ ಡಾ ಅರುಂಧತಿ ಚಂದ್ರಶೇಖರ್‌ ಅವರ ಅಧ್ಯಕ್ಷತೆಯ  ತನಿಖಾ ತಂಡವು ಪರಿಶೀಲಿಸಿದೆ.

 

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಡಾ ಕೆ ಸುಧಾಕರ್‌ ಅವರು ವೈದ್ಯಕೀಯ ಮತ್ತು ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ಪೆಟ್‌ ಸಿಟಿ ಸ್ಕ್ಯಾನ್‌ ಯಂತ್ರಗಳ ಖರೀದಿ ಪ್ರಕ್ರಿಯೆ ನಡೆದಿತ್ತು. ಇದರಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ ಎಂದು ಹಲವು ದೂರುಗಳು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದವು. ಈ ಕುರಿತು ಸರ್ಕಾರ ನೇಮಿಸಿದ್ದ ತನಿಖಾ ತಂಡವು ನೀಡಿರುವ  ವರದಿಯು ವೈದ್ಯಕೀಯ ಶಿಕ್ಷಣ ಇಲಾಖೆ ಕೈ ಸೇರಿದೆ ಎಂದು ತಿಳಿದು ಬಂದಿದೆ.

 

ಪೆಟ್‌ ಸಿಟಿ ಸ್ಕ್ಯಾನ್‌ ಖರೀದಿ, ನಿರ್ವಹಣೆ, ಕಾರ್ಯಕ್ಷಮತೆಯೂ ಸೇರಿದಂತೆ ಹಲವು ರೀತಿಯ ಆಡಳಿತಾತ್ಮಕ ಲೋಪದೋಷಗಳನ್ನು ತನಿಖಾ ತಂಡವು ಪತ್ತೆ ಹಚ್ಚಿದೆ. ಈ ವರದಿಯನ್ನು ಇದೀಗ ಸಚಿವ ಡಾ ಶರಣ ಪ್ರಕಾಶ್ ಪಾಟೀಲ್‌ ಅವರಿಗೆ ಮಂಡಿಸಲಾಗಿದೆ ಎಂದು ಗೊತ್ತಾಗಿದೆ.

 

ಇದರ ಪ್ರತಿಯು ( ಸಂಖ್ಯೆ; ಎಂಇಡಿ 162 ಕೆಯುಎಂ 2023 (ಭಾ-2) ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಟೆಂಡರ್‌ ಕರಾರಿನಂತೆ ಶುಶ್ರೂಷಕ ಸಿಬ್ಬಂದಿ ಹಾಗೂ ವಾರ್ಡ್‌ ಬಾಯ್‌ಗಳನ್ನು ನೇಮಿಸಿಲ್ಲ. ಕಿದ್ವಾಯಿ ಸಂಸ್ಥೆಯ ಸಿಬ್ಬಂದಿಯನ್ನೇ ನಿಯೋಜಿಸಿದೆ. ಇದು ಟೆಂಡರ್‌ ನಿಯಮಗಳ ಉಲ್ಲಂಘನೆ. ಸೂಕ್ತ ತಜ್ಞತೆ ಇಲ್ಲದ ವೈದ್ಯರು, ಸಿಬ್ಬಂದಿಗಳು ನೀಡುವ ವರದಿಗಳ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿದೆ. ಹಾಗೂ ಸೂಕ್ತ ಅನುಭವವಿಲ್ಲದ ಸಿಬ್ಬಂದಿಗಳು ಪೆಟ್‌ ಸಿಟಿ ಸ್ಕ್ಯಾನ್‌ ಯಂತ್ರದ ನಿರ್ವಹಣೆ ಮಾಡುತ್ತಿರುವುದರಿಂದ ರೋಗಿಗಳಿಗೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ,’  ಎಂಬ ಆಘಾತಕಾರಿ ಸಂಗತಿಯನ್ನೂ ಬಯಲಿಗೆಳೆದಿದೆ.

 

ಪೆಟ್‌ ಸಿಟಿ ಸ್ಕ್ಯಾನ್‌ ಯಂತ್ರವನ್ನು ಖರೀದಿಸುವ ಸಂಬಂಧ ಕೆಟಿಪಿಪಿ ನಿಯಮಾನುಸಾರ ಹಾಗೂ ಸರ್ಕಾರದ ಆದೇಶ ಸಂಖ್ಯೆ (ಆಇ908 ವೆಚ್ಚ/12/2019 ದಿ.21.07.2020) ಟೆಂಡರ್‌ನ ಅಂದಾಜು ಮೊತ್ತದಷ್ಟೇ ಸರಾಸರಿ ವಾರ್ಷಿಕ ವಹಿವಾಟಿನಲ್ಲಿ ಈ ನಿಬಂಧನೆಯನ್ನು ಮೂರು ಪಟ್ಟು ಅಧಿಕವಾಗಿ ನಿಗದಿಪಡಿಸಿರುವುದರಿಂದ ಅರ್ಥಿಕ ಸಾಮರ್ಥ್ಯವುಳ್ಳ ಎಲ್ಲಾ ಸಂಸ್ಥೆಗಳು ಭಾಗವಹಿಸುವುದನ್ನು ತಪ್ಪಿಸಿದಂತಾಗುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಭಾರತದೊಂದಿಗೆ ಗಡಿ ಹಂಚಿಕೆ ಮಾಡಿಕೊಂಡ ದೇಶಗಳೊಂದಿಗೆ ಯಾವುದೇ ಸಂಗ್ರಹಣೆ ಅಥವಾ ಸೇವೆಯನ್ನು ಪಡೆಯುವ ಮುನ್ನ ಸರ್ಕಾರದಿಂದ ಅಧಿಕೃತಗೊಳಿಸಲಾದ ಸಮಿತಿಯಿಂದ (ಸರ್ಕಾರದ ಆದೇಶ ಸಂಖ್ಯೆ ; ಆಇ 455 ವೆಚ್ಚ-12/2020 ದಿ.25.08.2020) ಅನುಮೋದನೆ ಪಡೆಯುವುದು ಕಡ್ಡಾಯವಾಗಿರುತ್ತದೆ. ಆದರೆ ಈ ಈ ಸಂಗ್ರಹಣೆಯಲ್ಲಿ ಈ ಆದೇಶದಂತೆ ರಚಿಸಲಾದ ಸಮಿತಿಯಿಂದ ಅನುಮೋದನೆ ಪಡೆದ ಕುರಿತು ವಿವರಗಳೇ ಇಲ್ಲ ಎಂಬುದು ತನಿಖಾ ವರದಿಯಿಂದ ಗೊತ್ತಾಗಿದೆ.

 

ಸಮಿತಿಯ ಪರಿಶೀಲನೆ ವೇಳೆ ಸ್ವೀಕೃತವಾಗಿದ್ದ ದೂರಿನಲ್ಲಿ ಈ ವಿಷಯದ ಕುರಿತು ನಮೂದಾಗಿದೆ. ಕಡತದಲ್ಲಿನ ಲಭ್ಯವಿರುವ ದಾಖಲೆಗಳಿಂದ ಈ ವಿಷಯವು ಸತ್ಯಾಂಶದಿಂದ ಕೂಡಿರುವುದು ಕಂಡು ಬಂದಿದೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.

 

‘ಇಂತಹ ಪ್ರಮುಖ ಉಪಕರಣದ ಸಂಗ್ರಹಣೆಗೆ ಪೂರ್ವ ಸಿದ್ಧತೆ ಇಲ್ಲದೇ ತಾಂತ್ರಿಕ ಪರಿಣಿತರ ಅಭಿಪ್ರಾಯ ಪಡೆಯದೇ ಪ್ರಕ್ರಿಯೆ ಆರಂಭಿಸಿ ನಂತರದಲ್ಲಿ ತಾಂತ್ರಿಕ ಪರಿಣಿತರನ್ನು ಗುರುತಿಸಲು ಕ್ಲಿಷ್ಟಕರವಾಗಿರುತ್ತದೆ,’ ಎಂದು ತನಿಖಾ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

 

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಹಾಲಿ ನಿರ್ದೇಶಕರು 2022ರ ಅಕ್ಟೊಬರ್‌ 17ರಂದು ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳುವ ದಿನದಂದು  ಪೂರ್ವ  ದಿನಾಂಕ ನಮೂದಿಸಿ ಪೆಟ್‌ ಸಿಟಿ ಸ್ಕ್ಯಾನ್‌ ಸೇವೆ ಒದಗಿಸಲು ನಿಯಮಬಾಹಿರವಾಗಿ  ಬೆಂಗಳೂರು ಮೆಡಿಕಲ್ ಸೆಂಟರ್‌ ಅವರಿಗೆ ಕಾರ್ಯಾದೇಶ ನೀಡಲಾಗಿತ್ತು ಎಂಬುದನ್ನು ತನಿಖೆ ವೇಳೆಯಲ್ಲಿ ದೃಢಪಟ್ಟಿರುವುದು ಗೊತ್ತಾಗಿದೆ.

 

ಪೆಟ್‌ ಸಿಟಿ ಸ್ಕ್ಯಾನ್‌ ಯಂತ್ರ ಖರೀದಿ ಕುರಿತಾಗಿ ಇನ್‌ವಾಯ್ಸ್‌ನ್ನು ತನಿಖಾ ತಂಡವು ಪರಿಶೀಲನೆ ನಡೆಸಿತ್ತು.  ಪಾಲುದಾರ ಸಂಸ್ಥೆಯು ಶೇ.12ರ ದರದಲ್ಲಿ ಜಿಎಸ್‌ಟಿ ಪಾವತಿಸಿತ್ತು. ಕೇಂದ್ರ ಸರ್ಕಾರದ ಅಧಿಸೂಚನೆ ಸಂಖ್ಯೆ 43/2017, ಇಂಟಿಗ್ರೇಟೆಡ್‌ ಟ್ಯಾಕ್ಸ್‌ ರ ಅನುಬಂಧ -ಸಿನಲ್ಲಿ ಐಟಂ ಸಂಖ್ಯೆ ಸಿಟಿ ಸ್ಕ್ಯಾನ್‌ ಯಂತ್ರವೂ ಸೇರಿದಂತೆ ಇತರೆ ಉಪಕರಣಗಳ ಜಿಎಸ್‌ಟಿ ದರವನ್ನೂ ಶೇ.18ಕ್ಕೆ ನಿಗದಿಪಡಿಸಲಾಗಿತ್ತು.

 

ಆದರೆ  ‘ಬಿಎಂಎಸ್‌ ಸಂಸ್ಥೆಯು ಶೇ.12ರ ದರದಲ್ಲಿ ಜಿಎಸ್‌ಟಿ ಪಾವತಿಸಿರುವುದು ನಿಯಮಾನುಸಾರವಾಗಿರುವುದು ಕಂಡು ಬಂದಿರುವುದಿಲ್ಲ. ಇದರ ಕ್ರಮಬದ್ಧತೆ ಕುರಿತು ವಾಣಿಜ್ಯ ತೆರಿಗೆ ಇಲಾಖೆಯಿಂದ ವಿವರವಾದ ಪರಿಶೀಲನೆ ಅಗತ್ಯವಿರುತ್ತದೆ,’ ಎಂದು ತನಿಖಾ ತಂಡವು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

 

ಅಲ್ಲದೇ ಕಿದ್ವಾಯಿ ಸಂಸ್ಥೆ ಹಾಗೂ ಪಾಲುದಾರ ಸಂಸ್ಥೆಯು ಪೆಟ್‌ ಸಿಟಿ ಸ್ಕ್ಯಾನ್‌ ಯಂತ್ರ ಖರೀದಿ ಹಾಗೂ ಅವಶ್ಯಕ ರೇಡಿಯೋ ಆಕ್ಟೀವ್‌ ಸಾಮಗ್ರಿಗಳು ಹಾಗೂ ರಾಸಾಯನಿಕಗಳ ಸಂಗ್ರಹಣೆಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ವಿಚಾರಣೆ ಸಮಿತಿಗೆ ಒದಗಿಸಿಲ್ಲ.  ರೋಗಿಗಳಿಗೆ ಸೇವೆ ನೀಡಲು ಟೆಂಡರ್‌ ನೀಡಲು ಆಯ್ಕೆಯಾದ ಪಾಲುದಾರ ಸಂಸ್ಥೆಯು ಸಂಬಂಧಿತ ದಾಖಲಾತಿಗಳನ್ನು ಪರಿಶೀಲನೆಗೆ ಹಾಜರುಪಡಿಸಲು ನಿರಾಕರಿಸಿರುವುದು ಸಂಶಯಗಳಿಗೆ ಆಸ್ಪದ ಮಾಡಿಕೊಟ್ಟಿದೆ ಎಂದು ತನಿಖಾ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಇನ್ನು, ಸಂಸ್ಥೆಯಲ್ಲಿ ಪೆಟ್‌ ಸಿಟಿ ಸ್ಕ್ಯಾನ್‌ ಸೇವೆ  ಆರಂಭಿಸುವ ಮುನ್ನ ಪೆಟ್‌ ಸಿಟಿ ಸ್ಕ್ಯಾನ್‌ ಯಂತ್ರ ಖರೀದಿ ಕುರಿತಾದ ಎಲ್ಲಾ ದಾಖಲೆಗಳನ್ನು ಕಿದ್ವಾಯಿ ಸಂಸ್ಥೆಯು ಪರಿಶೀಲಿಸಿ ಒಂದು ಪ್ರತಿಯನ್ನು ಸಂರಕ್ಷಿಸಬೇಕಿತ್ತು. ಆದರೆ ಸಂಸ್ಥೆಯಲ್ಲಿ ಯಾವುದೇ  ಮೂಲ ದಾಖಲಾತಿಗಳನ್ನು ಸಂರಕ್ಷಿಸಿಲ್ಲ. ಎಲ್ಲವನ್ನೂ ಪಾಲುದಾರ ಸಂಸ್ಥೆಯಿಂದ ಪಡೆದು ಸಮಿತಿಗೆ ಒದಗಿಸಿದೆ. ಇದು ಆಡಳಿತಾತ್ಮಕ ವೈಫಲ್ಯತೆ ಮತ್ತು ಪೂರ್ಣ ಪ್ರಕ್ರಿಯೆ ಬಗ್ಗೆಯೇ ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಪೆಟ್‌ ಸಿಟಿ ಸ್ಕ್ಯಾನ್‌ ಹಾಗೂ ಇತರೆ ಸ್ಕ್ಯಾನ್‌ಗಳನ್ನು ಮಾಡಲು ಹೊರಗಿನ ರೋಗಿಗಳಿಂದ ಹೆಚ್ಚುವರಿ ದರ ವಿಧಿಸಿದೆ. ಆದರೆ ಈ ಕುರಿತು ಏಕಗವಾಕ್ಷಿ ಸಮಿತಿ ಸಭೆ ಅಥವಾ ಟೆಂಡರ್‌ ದಾಖಲಾತಿಯಲ್ಲಿ ಯಾವುದೇ ಉಲ್ಲೇಖವಿರುವುದಿಲ್ಲ. ಈ ಮೊತ್ತವನ್ನು ಯಾವ ಆಧಾರದ ಮೇಲೆ ನಿಗದಿಪಡಿಸಲಾಗಿದೆ ಎಂಬ ಕುರಿತು  ಯಾವುದೇ ಮಾಹಿತಿಯೂ ಲಭ್ಯವಿಲ್ಲ ಎಂದು ತನಿಖಾ ತಂಡವು  ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

‘ಈ ರೀತಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಇಲ್ಲದೇ ಹೆಚ್ಚಿನ ದರ ನಿಗದಿಪಡಿಸಿರುವುದು ಕೆಟಿಪಿಪಿ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಕರಾರು ಒಪ್ಪಂದದಲ್ಲಿ ಹೊರಗಿನ ರೋಗಿಗಳಿಗೆ ಹೆಚ್ಚುವರಿ ದರ ವಿಧಿಸುವ ಕುರಿತು ನಮೂದಿದ್ದರೂ ಸಹ ಸಂಸ್ಥೆಗೆ ಭೇಟಿ ನೀಡಿದ ಎಲ್ಲಾ ನಗದು ಪಾವತಿಸುವ ರೋಗಿಗಳಿಂದ (ಒಳ ರೋಗಿಗಳು ಸೇರಿದಂತೆ) ಹೆಚ್ಚುವರಿ ಮೊತ್ತವನ್ನು ಸಂಗ್ರಹಿಸುತ್ತಿರುವುದು ಕಂಡುಬಂದಿದೆ,’ ಎಂದು ಕಿದ್ವಾಯಿಯ ಮತ್ತೊಂದು ಮುಖವನ್ನು ತನಿಖಾ ತಂಡವು ತೆರೆದಿಟ್ಟಿರುವುದು ದಾಖಲೆಯಿಂದ ಗೊತ್ತಾಗಿದೆ.

 

ಟೆಂಡರ್ ಷರತ್ತುಗಳನ್ನು ಮೀರಿ ರೋಗಿಗಳಿಂದ ಹೆಚ್ಚುವರಿ ಹಣ ಪಾವತಿಸಿಕೊಳ್ಳುತ್ತಿರುವುದು ನಿಯಮಬಾಹಿರ ಅಪರಾಧ. ಅಲ್ಲದೇ ಟೆಂಡರ್‌ನ ಕರಾರು ಒಪ್ಪಂದದಂತೆ ಹೆಚ್ಚುವರಿಯಾಗಿ ರೋಗಿಗಳಿಂದ ಪಡೆಯಬೇಕಿದ್ದ 2,000 ರು.ಗಳನ್ನು ಪೂರ್ಣವಾಗಿ ಖಾಸಗಿ ಸಂಸ್ಥೆಯೇ ಬಳಸಿಕೊಳ್ಳುತ್ತಿರುವುದು ಹೊರ ಗುತ್ತಿಗೆ ಸಂಸ್ಥೆಗೆ ಲಾಭದಾಯಕವಾಗಿದೆ ಎಂದೂ ತನಿಖಾ ತಂಡವು ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

 

ಹಾಗೆಯೇ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿ ವೈಎಸ್‌ಆರ್‌ ಆರೋಗ್ಯ ಶ್ರೀ ಯೋಜನೆಯಡಿ ನೋಂದಾಯಿತ ರೋಗಿಗಳಿಗೆ ಕರಾರಿನಂತೆ 7,200 ರು.ಗಳನ್ನುಮಾತ್ರ ಪಡೆಯಬೇಕು. ಆದರೆ ಈ ರೋಗಿಗಳಿಂದಲೂ 9,000 ರು. ಹಾಗೂ ಕೆಲವು ಪ್ರಕರಣಗಳಲ್ಲಿ 9,200 ರು.ಗಳನ್ನು ಪಡೆದುಕೊಂಡಿರುವುದು ಪರಿಶೀಲನೆ ವೇಳೆ ಪತ್ತೆ ಹಚ್ಚಿದೆ. ‘ಈ ರೀತಿ ಹೆಚ್ಚುವರಿಯಾಗಿ ಹಣ ಪಾವತಿಸಿಕೊಂಡಿರುವುದು ನಿಯಮಬಾಹಿರ. ಇದರಿಂದ ಪಾಲುದಾರ ಸಂಸ್ಥೆಗೆ ಆರ್ಥಿಕ ಲಾಭ ಉಂಟಾಗುವ ಸಾಧ್ಯತೆ ಇದೆ,’ ಎಂದೂ ವರದಿಯು ಹೇಳಿದೆ.

 

2023ರ ಫೆ.23ರಲ್ಲಿ ಮಾಡಿಕೊಂಡಿರುವ ಕರಾರು ಒಪ್ಪಂದದ ತಿದ್ದುಪಡಿಯಂತೆ ಏಕರೂಪವಾಗಿ 400 ರು. ನಿಗದಿಪಡಿಸಿರುವುದನ್ನು ಮಾರ್ಪಡಿಸಿ ಪ್ರತಿ ದಿನ 26ರಿಂದ 40 ಸ್ಕ್ಯಾನ್ ಮಾಡಿದಲ್ಲಿ 400/-41 ರಿಂದ 59 ಸ್ಕ್ಯಾನ್‌ ಮಾಡಿದಲ್ಲಿ 600 ರು., ಹಾಗೂ 60ಕ್ಕಿಂತ ಹೆಚ್ಚು ಸ್ಕ್ಯಾನ್  ಮಾಡಿದಲ್ಲಿ 800 ರು. ಗಳನ್ನು ಹೊಂದಾಣಿಕೆ/ಪಾಲುದಾರರಿಂದ ವಸೂಲಿಸಿ ಬಾಕಿ ಮೊತ್ತವನ್ನು ಮಾತ್ರ  ಪಾಲುದಾರರಿಗೆ ಪಾವತಿಸಬೇಕು. ಈ ರೀತಿ ಬಳಕೆದಾರರ ಶುಲ್ಕವನ್ನು ಕಡಿಮೆ ಮಾಡಿರುವುದು ಪಾಲುದಾರ ಸಂಸ್ಥೆಗೆ ಲಾಭದಾಯಕವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

 

ಸುತ್ತೋಲೆಯ ಅಂಶಗಳಂತೆ ಪ್ರತಿ ತಿಂಗಳು ಸೆಂಟ್ರಲ್‌ ಮೆಡಿಕಲ್‌ ಸ್ಟೋರ್‌ನಿಮದ ಪಡೆಯಲು ನೀಡಲಾದ ಕಾಂಟ್ರಾಸ್ಟ್‌ ಮತ್ತು ಕನ್ಸೂಮಬಲ್‌ ಗಳ ಬೇಡಿಕೆ ಪತ್ರಗಳು ಲಭ್ಯವಿದೆ. ಆದರೆ ಬಿಎಂಎಸ್‌ ಸಂಸ್ಥೆಗೆ ಪಾವತಿಸಿದ ಮೊತ್ತದಲ್ಲಿಲ ಈ ವೆಚ್ಚವನ್ನು ಕಡಿತಗೊಳಿಸಿರುವುದು ಕಂಡು ಬಂದಿರುವುದಿಲ್ಲ. ಇದರಿಂದಾಗಿ ಕಿದ್ವಾಯಿ ಸಂಸ್ಥೆಗೆ ಆರ್ಥಿಕ ನಷ್ಟ ಉಂಟಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

 

‘ಕಂಪ್ಲೀಷನ್‌ ಸರ್ಟಿಫಿಕೇಟ್‌ ಜಾರಿ ಮಾಡದೇ ಪೆಟ್‌ ಸಿಟಿ ಸ್ಕ್ಯಾನ್‌ ಸೇವೆಗಳನ್ನು ಆರಂಭಿಸಿರುವುದು ಕ್ರಮಬದ್ಧವಾಗಿರುವುದಿಲ್ಲ. ರೋಗಿಗಳ ಹಿತದೃಷ್ಟಿಯಿಂದ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳನ್ನು ಖಾತ್ರಿ ಪಡಿಸಿಕೊಳ್ಳದೇ ಖಾಸಗಿ ಸಂಸ್ಥೆ ಕಾರ್ಯಾರಂಭ ಮಾಡಲು ಅನುಮತಿಸಿರುವುದು ಸೂಕ್ತವಾಗಿರುವುದಿಲ್ಲ,’ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

SUPPORT THE FILE

Latest News

Related Posts