ಮಹೇಶ್‌ ಹೆಗಡೆ ವಿರುದ್ಧ ಸಾಬೀತಾಗದ ಅಪರಾಧ, ಆಪಾದಿತ ಪತ್ತೆಯಾಗದ ಕಾರಣ ‘ಸಿ’ ವರದಿ ಸಲ್ಲಿಕೆ

photo credit;altnews

ಬೆಂಗಳೂರು; ಪರೇಶ್‌ ಮೇಸ್ತ ಸಾವಿನ ಪ್ರಕರಣಕ್ಕೆ ಸಂಬಧಿಸಿದಂತೆ  ಮುಸ್ಲಿಂ ಸಮುದಾಯದ ಮೇಲೆ ದ್ವೇ‍ಷ, ಸಾರ್ವಜನಿಕ ಸೌಹಾರ್ದತೆಗೆ ಧಕ್ಕೆ, ಪ್ರಚೋದನಾಕಾರಿ ತಪ್ಪು ಸಂದೇಶ, ಕೋಮು ಸಂಬಂಧಿತ ಗಲಭೆ ಮತ್ತು ಶಾಂತಿ ಕದಡುವ ಕೃತ್ಯ ಅಪರಾಧ ಎಸಗಿರುವ ಪ್ರಕರಣದಲ್ಲಿ  ಮಹೇಶ್‌ ವಿಕ್ರಂ ಹೆಗಡೆ ಎಂಬಾತನ ವಿರುದ್ಧ ಎಫ್‌ಐಆರ್‍‌ ದಾಖಲಾಗಿ ನ್ಯಾಯಾಂಗ ಬಂಧನದಲ್ಲಿದ್ದರೂ ಸಹ ಅಪರಾಧ ಸಾಬೀತು ಪಡಿಸುವಲ್ಲಿ ತನಿಖಾಧಿಕಾರಿಗಳು ವಿಫಲರಾಗಿದ್ದಾರೆ.

 

ಅಲ್ಲದೇ ಈ ಪ್ರಕರಣದಲ್ಲಿ ಆಪಾದಿತನು ಪತ್ತೆಯಾಗದ ಕಾರಣ ನ್ಯಾಯಾಲಯಕ್ಕೆ ತುರ್ತು ‘ಸಿ’ ಅಂತಿಮ ವರದಿಯನ್ನೂ ಸಲ್ಲಿಸಲಾಗಿತ್ತು. ಮತ್ತು ಈ ಪ್ರಕರಣದಲ್ಲಿ ಮುಂದೆಯೂ ಕೂಡ ಪತ್ತೆಯಾಗುವ ಧೋರಣೆಗಳು ಕಂಡು ಬರುವುದಿಲ್ಲ ಎಂದು ನೀಡಿದ್ದ ತನಿಖಾ ವರದಿಯನ್ನು  ‘ದಿ ಫೈಲ್‌’ ಇದೀಗ ಬಹಿರಂಗಪಡಿಸುತ್ತಿದೆ.

 

ಮಹೇಶ್‌ ವಿಕ್ರಂ ಹೆಗಡೆ  ಎಂಬಾತನ ವಿರುದ್ಧ ಪ್ರಕರಣವನ್ನು ವಿಚಾರಣೆಯಿಂದ ಹಿಂಪಡೆದುಕೊಳ್ಳುವ ಸಂಬಂಧದ ಕಡತವನ್ನು ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಅವರಿಗೆ ಹಿರಿಯ ಪೊಲೀಸ್‌ ಅಧಿಕಾರಿಗಳು ಸಲ್ಲಿಸಿರುವ ಬೆನ್ನಲ್ಲೇ ತನಿಖಾಧಿಕಾರಿಗಳ ವರದಿಯೂ ಮುನ್ನೆಲೆಗೆ ಬಂದಿದೆ. ತನಿಖಾ ವರದಿ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪರೇಶ್‌ ಮೇಸ್ತಾ ಸಾವಿಗೆ ಸಂಬಂಧಿಸಿದಂತೆ ಪೋಸ್ಟ್‌ಕಾರ್ಡ್‌  ನ್ಯೂಸ್‌ ಜಾಲತಾಣದಲ್ಲಿ 2017ರ ಡಿಸೆಂಬರ್‍‌ 12ರಂದು ಪ್ರಕಟವಾಗಿದ್ದ ಸುದ್ದಿಯು ಕೋಮು ಗಲಭೆಗೆ ಕಾರಣವಾಗಿತ್ತಲ್ಲದೇ ಮುಸ್ಲಿಂ ಸಮುದಾಯದ ಮೇಲೆ ದ್ವೇ‍ಷ, ಸಾರ್ವಜನಿಕ ಸೌಹಾರ್ದತೆಗೆ ಧಕ್ಕೆ, ಪ್ರಚೋದನಾಕಾರಿ ತಪ್ಪ ಸಂದೇಶ ರವಾನಿಸಿತ್ತು ಎಂಬ ಆರೋಪ ಕುರಿತಂತೆ ಮಹೇಶ್‌ ವಿಕ್ರಂ ಹೆಗಡೆ ಮತ್ತು ವಿವೇಕ ಶೆಟ್ಟಿ ಎಂಬುವರ ವಿರುದ್ಧ ತಹಶೀಲ್ದಾರ್‍‌ ಗೋವಿಂದನಾಯಕ ಅವರು ಠಾಣೆಗೆ ದೂರು ನೀಡಿದ್ದರು.

 

ಈ ದೂರನ್ನಾಧರಿಸಿ ತನಿಖೆ ಕೈಗೆತ್ತಿಕೊಂಡಿದ್ದ ತನಿಖಾಧಿಕಾರಿಗಳು,  ಪೋಸ್ಟ್‌ ಕಾರ್ಡ್‌ ಸುದ್ದಿ ಜಾಲತಾಣದಲ್ಲಿ ಪ್ರಕಟವಾಗಿದ್ದ ಸಂದೇಶದ ವರದಿಯಲ್ಲಿ ಯಾರು ಸಂದೇಶ ರವಾನಿಸಿರುತ್ತಾರೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿಯೇ ಇಲ್ಲ ಎಂದು ವರದಿ ನೀಡಿದ್ದರು ಎಂಬುದು ತಿಳಿದು ಬಂದಿದೆ.

 

ಅಲ್ಲದೇ ‘ಪ್ರಕರಣ ದಾಖಲಾಗಿ ಈಗಾಗಲೇ 3 ವರ್ಷ 4 ತಿಂಗಳುಗಳು ಕಳೆದಿದ್ದು ಈ ವರೆಗೂ ಆರೋಪಿತರನ್ನು ಸ್ಪಷ್ಟಪಡಿಸಿ ಅಪರಾಧ ಸಾಬೀತುಪಡಿಸಲು ಸಾಧ್ಯವಾಗದೇ ಇರುವುದರಿಂದ ಈ ಪ್ರಕರಣದಲ್ಲಿ ಮುಂದೆಯೂ ಕೂಡ ಪತ್ತೆಯಾಗುವ ಧೋರಣೆಗಳು ಕಂಡು ಬರುವುದಿಲ್ಲ. ಇದೊಂದು ಆಪಾದಿತನು ಪತ್ತೆಯಾಗದ ಪ್ರಕರಣ ಎಂದು ಪರಿಗಣಿಸಿ ತುರ್ತು ‘ಸಿ’ ಅಂತಿಮ ದಾಖಲಾತಿ ಪುಸ್ತಕದಲ್ಲಿ ದಾಖಲಿಸಿ ‘ಸಿ ‘ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ನಿವೇದಿಸಿಕೊಳ್ಳಲಾಗಿತ್ತು,’ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಮ್‌ ಕಾರ್ಡ್ ಮತ್ತು ಮೊಬೈಲ್‌ನ್ನು ಬೆಂಗಳೂರು ಸೈಬರ್‍‌ ಪೊಲೀಸ್‌ ಠಾಣೆ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಆದರೆ ಇದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿರಲಿಲ್ಲ. ಅಲ್ಲದೇ ಈ ಪ್ರಕರಣದಲ್ಲಿ ಉಚ್ಛ ನ್ಯಾಯಾಲಯದ ತಡೆಯಾಜ್ಞೆಯೂ ಸಹ ನೀಡಿದ್ದರಿಂದಾಗಿ ತನಿಖೆಯನ್ನೇ ಸ್ಥಗಿತಗೊಳಿಸಲಾಗಿತ್ತು. ಆರೋಪಿತ ಮಹೇಶ್‌ ವಿಕ್ರಂ ಹೆಗಡೆ ಎಂಬಾತನು ಪ್ರಚೋದನಾಕಾರಿ ಸಂದೇಶವನ್ನು ಕಳಿಸಲು ಬಳಸಿದ ಪೋಸ್ಟ್‌ಕಾರ್ಡ್‌ ನ್ಯೂಸ್‌ ವೆಬ್‌ಸೈಟ್‌ಗೆ ಸಂಬಂಧಿಸಿದಂತೆ godaddy.comನ ಈ ಮೇಲ್‌ಗೂ ಹಾಗೂ ಸಾಮಾನ್ಯ ವಿಚಾರಣೆ, ದೂರಿನ ವಿಭಾಗಕ್ಕೂ ತನಿಖಾಧಿಕಾರಿಗಳು ಈ ಮೇಲ್‌ ಕಳಿಸಿದ್ದರು ಎಂಬುದು ವರದಿಯಿಂದ ತಿಳಿದು ಬಂದಿದೆ.

 

‘ಸದರಿ ಸಂದೇಶದ ವರದಿಯಲ್ಲಿ ಯಾರು ಸಂದೇಶ ರವಾನಿಸಿರುತ್ತಾರೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿದ್ದು ಇರುವುದಿಲ್ಲ. ಆದ್ದರಿಂದ ಈ ಸಂದೇಶವನ್ನು ಯಾರು ರವಾನಿಸಿರುತ್ತಾರೆ ಎಂಬ ಬಗ್ಗೆ ಸ್ಪಷ್ಟೀಕರಿಸಲು ಸಾಧ್ಯವಾಗಿದ್ದು ಇರುವುದಿಲ್ಲ. ಪೋಸ್ಟ್‌ ಕಾರ್ಡ್‌ ಜಾಲತಾಣದಲ್ಲಿ ಆರೋಪಿತರ ಮಾಹಿತಿ ಹಾಗೂ ಪೂರ್ಣ ವಿಳಾಸದ ಕುರಿತು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ ,’ ಎಂದು ವರದಿಯಲ್ಲಿ ಕಾರವಾರ ಶಹರ ಪೊಲೀಸ್‌  ಠಾಣೆಯ ಪೊಲೀಸ್‌ ಉಪ ನಿರೀಕ್ಷಕರು ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಪರೇಶ ಮೇಸ್ತ ಮೃತ ದೇಹ ಪತ್ತೆಯಾದ ನಂತರ ಅವರ ಸಾವಿನ ಕಾರಣ ಸನ್ನಿವೇಶಗಳ ಬಗ್ಗೆ ಊಹಾಪೋಹಗಳು ಕೂಡಿದ ಸಂದೇಶದ ಪೋಸ್ಟ್‌ಗಳನ್ನು ಕಳಿಸುವ ಕೆಲವು ಕಿಡಿಗೇಡಿಗಳು ಸಮಾಜದಲ್ಲಿ ಕೋಮುಗಲಭೆ ಮತ್ತು ಶಾಂತಿ ಸುವ್ಯವಸ್ಥೆಯನ್ನು ಕದಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇತಹ ಪ್ರಚೋದನೆಯಿಂದ ಕುಮಟಾ, ಕಾರವಾರ, ಶಿರಸಿಗಳಲ್ಲಿ ಕಲ್ಲು ತೂರಾಟ, ಅಂಗಡಿಗಳಿಗೆ ಬೆಂಕಿ ಹಚ್ಚುವಂತಹ ಘಟನೆಗಳು ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಲಾಠಿ ಚಾರ್ಜ್‌, ಆಶ್ರುವಾಯು ಪ್ರಯೋಗ ಇತ್ಯಾದಿಗಳ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಈಗಾಗಲೇ ಪೊಲೀಸ್‌ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ,’ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಆಪಾದಿತನ ಡೆಲ್‌ ಹೆಸರಿನ ಲ್ಯಾಪ್‌ಟಾಪ್‌ ವಶಪಡಿಸಿಕೊಂಡಿದ್ದರು. ಇದರಲ್ಲಿ ಪೋಸ್ಟ್‌ ಆದ ಸಮಾಚಾರ, ಸಂದೇಶಗಳನ್ನು ಪರಿಶೀಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರಚೋದನಕಾರಿ ಸಂದೇಶ ISIS BRUTALITY FOLLOWED TO MURDER PARESH MESTA, BUT WHO GAVE INSTRUCTION TO PROVE IT AS NATURAL DEATH ಎಂಬ ಶಿರೋನಾಮೆಯಡಿಯಲ್ಲಿ ಸಂದೇಶ ಪೋಸ್ಟ್‌ ಆಗಿತ್ತು.

 

ಈ ಶಿರೋನಾಮೆಯ ಕೆಳಗಡೆ ಒಬ್ಬ ವ್ಯಕ್ತಿಯ ಮೃತ ದೇಹದ ಭಾವಚಿತ್ರ ಇತ್ತು. ಎರಡನೇ ಪುಟದಲ್ಲಿ The Brutal Murder of Paresh Mesta has sent shivers in karnataka and especially in Mangalore ಎಂದು ಪ್ರಾರಂಭವಾಗಿ ಪುಟದ ಕೊನೆಯಲ್ಲಿ The report says that there is a tattoo on the right foream depiciting picture of SHIVAJI and MARATAHA in Hindi and states that Tatoo was not destoryed and intact ಅಂತ ಮುಕ್ತಾಯವಾಗಿರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

 

ಮೂರನೇ ಮತ್ತು ನಾಲ್ಕನೇ ಮತ್ತು ಐದನೇ ಪುಟದಲ್ಲಿ Dr Shankar M Bakkanavar Associate professor Department of Forensic Medicine KMC Manipal ಇವರು ಹೊನ್ನಾವರ ಪೊಲೀಸ್‌ ವೃತ್ತ ನಿರೀಕ್ಷಕರಿಗೆ ಪರೇಶ್‌ ಮೇಸ್ತಾ ಮರಣದ ಕುರಿತು ನೀಡಿರುವ ಪ್ರಮಾಣ ಪತ್ರದ ಫೋಟೋ ಪ್ರತಿಗಳನ್ನು ಹಾಕಲಾಗಿರುತ್ತದೆ. ಅರನೇ ಪುಟವು Now let us take a look at video takein by a person called virenddra during te last rites which clearly shows the burnt mark on his leg ಅಂತ ಪ್ರಾರಂಭವಾಗಿ ಅದರ ಕೆಳಗಡೆ  ಒಂದು ವಿಡಿಯೋ ಚಿತ್ರಣವನ್ನು ಹಾಕಲಾಗಿರುತ್ತದೆ.

 

ಹಾಗೂ ಪುಟದ ಕೊನೆಯಲ್ಲಿ His mother said she saw the body of her son and was mutilated beyond repair, his genitals were cut, face was burnt and head was smashed from behind ಎಂದು ಮುಕ್ತಾಯವಾಗಿರುತ್ತದೆ. ಏಳನೇ ಪುಟವು So according to the video and statement given by Paresh’s parents ಎಂದು ಪ್ರಾರಂಭವಾಗಿ ಪುಟದ ಕೊನೆಯಲ್ಲಿ it is sadi that the next day dead body was thrown in shetty lake which was later identified by the villagers and informed their parents ಎಂದು ಮುಕ್ತಾಯವಾಗಿರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

 

ಎಂಟನೇ ಪುಟದಲ್ಲಿ The parents have oopenly alleged the police knew every details of their son’s death ಎಂದು ಪ್ರಾರಂಭವಾಗಿ ಪುಟದ ಕೊನೆಯಲ್ಲಿ Siddaramaiaha government cleaning it was nota murder ಎಂದು ಮುಕ್ತಾಯವಾಗಿರುತ್ತದೆ. ಮತ್ತು ಕೊನೆಯಲ್ಲಿ ಪುಟದ ಬಲ ಭಾಗದಲ್ಲಿ Aiswarya S ಎಂದು ಬರೆದಿರುತ್ತದೆ ಎಂದು ತನಿಖಾ ವರದಿಯಲ್ಲಿ ವಿವರಿಸಲಾಗಿದೆ.

 

 

ಕಳೆದ 6 ವರ್ಷಗಳ ಹಿಂದೆ ಕಾರವಾರ ಪೊಲೀಸ್‌ ಠಾಣೆಯಲ್ಲಿ ಮಹೇಶ್‌ ಹೆಗ್ಡೆ ಮತ್ತು ವಿವೇಕ ಶೆಟ್ಟಿ ಎಂಬುವರ ವಿರುದ್ಧ ಕಾರವಾರ ತಾಲೂಕು ತಹಶೀಲ್ದಾರ್‌ ನೀಡಿದ್ದ ದೂರನ್ನಾಧರಿಸಿ ತನಿಖೆ ನಡೆಸಿದ್ದ ಪೊಲೀಸರು ಸಲ್ಲಿಸಿದ್ದ ‘ಸಿ’ ಅಂತಿಮ ವರದಿಯನ್ನು ನ್ಯಾಯಾಲಯವು ಒಪ್ಪಿಕೊಂಡಿದೆ.

 

ಮಹೇಶ್‌ ಹೆಗಡೆ ವಿರುದ್ಧ ಪ್ರಕರಣ; ವಿಚಾರಣೆಯಿಂದ ಹಿಂಪಡೆಯಲು ಗೃಹ ಸಚಿವರಿಗೆ ಕಡತ ಮಂಡನೆ

 

ಅಂತಿಮ ವರದಿಯನ್ನು ನ್ಯಾಯಾಲಯವು ಒಪ್ಪಿಕೊಂಡಿರುವುದನ್ನು ಮುಂದಿರಿಸಿರುವ ಕಾರವಾರ ಪೊಲೀಸ್‌ ಇನ್ಸ್‌ಪೆಕ್ಟರ್‌ ಅವರು ಈ ಪ್ರಕರಣವನ್ನು ಅಭಿಯೋಜನೆಯಿಂದ ಹಿಂಪಡೆದುಕೊಳ್ಳಲು ಯಾವುದೇ ಅಭ್ಯಂತರವಿಲ್ಲವೆಂದು 2023ರ ಅಕ್ಟೋಬರ್‌ 1ರಂದು ಅಭಿಪ್ರಾಯ ನೀಡಿರುವುದು ದಾಖಲೆಗಳಿಂದ ತಿಳಿದು ಬಂದಿತ್ತು.   ಪರೇಶ್‌ ಮೇಸ್ತಾ ಸಾವಿನ ಪ್ರಕರಣವನ್ನು ಬಿಜೆಪಿ ಪಕ್ಷವು ರಾಜಕೀಯಕರಣಗೊಳಿಸಿತ್ತು. ಒತ್ತಡಕ್ಕೆ ಮಣಿದಿದ್ದ 2017ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಪ್ರಕರಣವನ್ನು ಸಿಬಿಐಗೆ ವಹಿಸಿದ್ದರು.

 

ಪರೇಶ್‌ ಮೇಸ್ತಾ ಹತ್ಯೆ; ಸಿಬಿಐ ವರದಿಗೂ ಮುನ್ನವೇ ಪ್ರಕರಣಗಳ ವಿಚಾರಣೆ ಕೈಬಿಟ್ಟಿದ್ದೇಕೆ?

 

ಪ್ರಕರಣವನ್ನು ತನಿಖೆ ನಡೆಸಿದ್ದ ಸಿಬಿಐ, ಪರೇಶ್‌ ಮೇಸ್ತಾ ಸಾವು ಆಕಸ್ಮಿಕ ಎಂದು ಹೇಳಿತ್ತು. ಅಲ್ಲದೇ ಈ ಸಂಬಂಧ ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಕೂಡ ಸಲ್ಲಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts