ಮಹೇಶ್‌ ಹೆಗಡೆ ವಿರುದ್ಧ ಪ್ರಕರಣ; ವಿಚಾರಣೆಯಿಂದ ಹಿಂಪಡೆಯಲು ಗೃಹ ಸಚಿವರಿಗೆ ಕಡತ ಮಂಡನೆ

ಬೆಂಗಳೂರು; ಮುಸ್ಲಿಂ ಸಮುದಾಯದ ಮೇಲೆ ದ್ವೇ‍ಷ, ಸಾರ್ವಜನಿಕ ಸೌಹಾರ್ದತೆಗೆ ಧಕ್ಕೆ, ಪ್ರಚೋದನಾಕಾರಿ ತಪ್ಪು ಸಂದೇಶ, ಕೋಮು ಸಂಬಂಧಿತ ಗಲಭೆ ಮತ್ತು ಶಾಂತಿ ಕದಡುವ ಕೃತ್ಯ ಅಪರಾಧ ಎಸಗಿರುವ ಆರೋಪಕ್ಕೆ ಗುರಿಯಾಗಿರುವ ಮಹೇಶ್‌ ಹೆಗಡೆ ಎಂಬಾತನ ವಿರುದ್ಧ ಪ್ರಕರಣವನ್ನು ವಿಚಾರಣೆಯಿಂದ ಹಿಂಪಡೆದುಕೊಳ್ಳಲು ಕಾಂಗ್ರೆಸ್‌ ಸರ್ಕಾರವು ಮುಂದಾಗಿರುವುದನ್ನು ‘ದಿ ಫೈಲ್‌’ ಇದೀಗ ಹೊರಗೆಡವುತ್ತಿದೆ.

 

ಬಂಧನದಲ್ಲಿಡಲು ಸೂಕ್ತ ಕಾರಣಗಳಿಲ್ಲ ಎಂದು ಪುನೀತ್‌ ಕೆರೆಹಳ್ಳಿ ಎಂಬಾತನನ್ನು ಬಂಧಮುಕ್ತಗೊಳಿಸಿ ಹೊರಡಿಸಿರುವ ಆದೇಶವು ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಇದೀಗ ಪೋಸ್ಟ್‌ ಕಾರ್ಡ್‌ ವೆಬ್‌ಸೈಟ್‌ನ ಮಹೇಶ್‌ ವಿಕ್ರಂ ಹೆಗ್ಡೆ ವಿರುದ್ಧದ ಪ್ರಕರಣವನ್ನು ಅಭಿಯೋಜನೆಯಿಂದ ಹಿಂಪಡೆದುಕೊಳ್ಳಲು ಮುಂದಾಗಿರುವುದು ಮುನ್ನೆಲೆಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಕಳೆದ 6 ವರ್ಷಗಳ ಹಿಂದೆ ಕಾರವಾರ ಪೊಲೀಸ್‌ ಠಾಣೆಯಲ್ಲಿ ಮಹೇಶ್‌ ಹೆಗ್ಡೆ ಮತ್ತು ವಿವೇಕ ಶೆಟ್ಟಿ ಎಂಬುವರ ವಿರುದ್ಧ ಕಾರವಾರ ತಾಲೂಕು ತಹಶೀಲ್ದಾರ್‌ ನೀಡಿದ್ದ ದೂರನ್ನಾಧರಿಸಿ ತನಿಖೆ ನಡೆಸಿದ್ದ ಪೊಲೀಸರು ಸಲ್ಲಿಸಿದ್ದ ‘ಸಿ’ ಅಂತಿಮ ವರದಿಯನ್ನು ನ್ಯಾಯಾಲಯವು ಒಪ್ಪಿಕೊಂಡಿದೆ.

 

ಅಂತಿಮ ವರದಿಯನ್ನು ನ್ಯಾಯಾಲಯವು ಒಪ್ಪಿಕೊಂಡಿರುವುದನ್ನು ಮುಂದಿರಿಸಿರುವ ಕಾರವಾರ ಪೊಲೀಸ್‌ ಇನ್ಸ್‌ಪೆಕ್ಟರ್‌ ಅವರು ಈ ಪ್ರಕರಣವನ್ನು ಅಭಿಯೋಜನೆಯಿಂದ ಹಿಂಪಡೆದುಕೊಳ್ಳಲು ಯಾವುದೇ ಅಭ್ಯಂತರವಿಲ್ಲವೆಂದು 2023ರ ಅಕ್ಟೋಬರ್‌ 1ರಂದು ಅಭಿಪ್ರಾಯ ನೀಡಿರುವುದು ದಾಖಲೆಗಳಿಂದ ತಿಳಿದು ಬಂದಿದೆ.

 

ಅಭಿಪ್ರಾಯದಲ್ಲೇನಿದೆ?

 

ಸದರಿ ಪ್ರಕರಣದಲ್ಲಿ ನಡೆಸಿದ ತನಿಖೆಯಿಂದ ಆರೋಪಿತರ ಪತ್ತೆ ಹೊರಡದ ಕಾರಣ ಸದರಿ ಪ್ರಕರಣವನ್ನು ತುರ್ತು ನಾಪತ್ತೆ ಎಂದು ಪರಿಗಣಿಸಿ ಸಿಜೆಎಂ ನ್ಯಾಯಾಲಯಕ್ಕೆ 2021ರ ಏಪ್ರಿಲ್‌ 8ರಂದು ‘ಸಿ’ ಅಂತಿಮ ವರದಿಯನ್ನು ಸಲ್ಲಿಸಿದ್ದು ನ್ಯಾಯಾಲಯದ ಎಸ್‌ ಆರ್‌ ನಂ 37/2021ರಲ್ಲಿ ವಿಚಾರಣೆ ನಡೆದು 2021ರ ಅಕ್ಟೋಬರ್‌ 29ರಂದು ‘ಸಿ’ ಅಂತಿಮ ವರದಿಯು ಅಂಗೀಕೃತವಾಗಿರುತ್ತದೆ. ಆದ್ದರಿಂದ ಸದರಿ ಪ್ರಕರಣವನ್ನು ಅಭಿಯೋಜನೆಯಿಂದ ಹಿಂಪಡೆದುಕೊಳ್ಳಲು ಯಾವುದೇ ಅಭ್ಯಂತರ ಇರುವುದಿಲ್ಲವೆಂದು ಅಭಿಪ್ರಾಯ ಪಡಲಾಗಿದೆ ಎಂದು ಪೊಲೀಸ್‌ ಇನ್ಸ್‌ಪೆಕ್ಟರ್‌ ಅವರು ಹೇಳಿರುವುದು ದಾಖಲೆಯಿಂದ ಗೊತ್ತಾಗಿದೆ.

 

ಪ್ರಕರಣವನ್ನು ಹಿಂಪಡೆಯುವ ಸಂಬಂಧ ಗೃಹ ಸಚಿವ ಡಾ ಜಿ ಪರಮೇಶ್ವರ್‌ ಅವರ ಆದೇಶಕ್ಕೆ ಕಡತವನ್ನು ಮಂಡಿಸಲಾಗಿದೆ ಎಂದು ತಿಳಿದು ಬಂದಿದೆ.

 

ಪ್ರಕರಣದ ವಿವರ

 

ಹೊನ್ನಾವರದಲ್ಲಿ ಪರೇಶ್‌ ಮೇಸ್ತಾ ಎಂಬಾತನ ಹತ್ಯೆಯಾಗಿತ್ತು. ಈತನ ಸಾವಿನ ಕುರಿತಾಗಿ ಮುಸ್ಲಿಂ ಸಮುದಾಯದ ಮೇಲೆ ದ್ವೇಷ ಉಂಟು ಮಾಡುವಂತಹ, ಪ್ರಚೋದನಾಕಾರಿ ಸಂದೇಶಗಳನ್ನು ರವಾನಿಸಿ ಸಾರ್ವಜನಿಕ ಸೌಹಾರ್ದತೆಗೆ ಧಕ್ಕೆ ತರುವ ರೀತಿಯಲ್ಲಿ ಪೋಸ್ಟ್‌ ಕಾರ್ಡ್‌ ವೆಬ್‌ಸೈಟ್‌ನಲ್ಲಿ (postcard.news) ಸಂದೇಶಗಳನ್ನು ಬಿತ್ತರಿಸಲಾಗಿತ್ತು.

 

ಅಲ್ಲದೇ ಈ ಸಂದೇಶಗಳು ಮತ್ತು ಬರವಣಿಗೆಗಳು ಸಮಾಜದಲ್ಲಿ ಕೋಮು ಸಂಬಂಧಿತ ಗಲಭೆಗಳು ಮತ್ತು ಎರಡು ಕೋಮಿನ ಮಧ್ಯೆ ದ್ವೇಷ ಭಾವನೆ ಬೆಳೆಯಲು ಕಾರಣವಾಗಿತ್ತು. ಹಾಗೆಯೇ ಸಮಾಜದಲ್ಲಿ ಶಾಂತಿಯನ್ನು ಕದಡುವ ಕೃತ್ಯವಾಗಿತ್ತು. ಈ ಅಪರಾಧದಡಿಯಲ್ಲಿ ಪೋಸ್ಟ್‌ ಕಾರ್ಡ್‌ ನ್ಯೂಸ್‌ ಜಾಲತಾಣದ ವಿವೇಕ ಶೆಟ್ಟಿ ಮತ್ತು ಮಹೇಶ ಹೆಗಡೆ ಎಂಬಾತನ ವಿರುದ್ಧ ಕಾರವಾರ ಪೊಲೀಸ್‌ ಠಾಣೆಯಲ್ಲಿ ತಾಲೂಕು ದಂಡಾಧಿಕಾರಿ ಗೋವಿಂದ ನಾಯ್ಕ ಎಂಬುವರು ದೂರು ದಾಖಲಿಸಿದ್ದರು. ಈ ದೂರನ್ನಾಧರಿಸಿ 2017ರ ಡಿಸೆಂಬರ್‌ 14ರಂದು ಎಫ್‌ಐಆರ್‌ ಕೂಡ ದಾಖಲಾಗಿತ್ತು.

 

ಮಹೇಶ್‌ ಹೆಗಡೆ ಮತ್ತು ವಿವೇಕ ಶೆಟ್ಟಿ ಎಂಬುವರ ವಿರುದ್ಧ ಐಪಿಸಿ 183, ಕಲಂ 153, 153 (ಎ) 505 (2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

 

ಪ್ರಕರಣದ ಕುರಿತು ತನಿಖೆ ಕೈಗೊಂಡಿದ್ದ ಪೊಲೀಸರು 2021ರ ಏಪ್ರಿಲ್‌ 8ರಂದು ನ್ಯಾಯಾಲಯಕ್ಕೆ ‘ಸಿ’ ಅಂತಿಮ ವರದಿಯನ್ನು ಸಲ್ಲಿಸಿದ್ದರು.

 

ಅಲ್ಲದೇ ಪರೇಶ್‌ ಮೇಸ್ತಾ ಸಾವಿನ ಪ್ರಕರಣವನ್ನು ಬಿಜೆಪಿ ಪಕ್ಷವು ರಾಜಕೀಯಕರಣಗೊಳಿಸಿತ್ತು. ಒತ್ತಡಕ್ಕೆ ಮಣಿದಿದ್ದ 2017ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಪ್ರಕರಣವನ್ನು ಸಿಬಿಐಗೆ ವಹಿಸಿದ್ದರು.

 

ಪರೇಶ್‌ ಮೇಸ್ತಾ ಹತ್ಯೆ; ಸಿಬಿಐ ವರದಿಗೂ ಮುನ್ನವೇ ಪ್ರಕರಣಗಳ ವಿಚಾರಣೆ ಕೈಬಿಟ್ಟಿದ್ದೇಕೆ?

 

ಪ್ರಕರಣವನ್ನು ತನಿಖೆ ನಡೆಸಿದ್ದ ಸಿಬಿಐ, ಪರೇಶ್‌ ಮೇಸ್ತಾ ಸಾವು ಆಕಸ್ಮಿಕ ಎಂದು ಹೇಳಿತ್ತು. ಅಲ್ಲದೇ ಈ ಸಂಬಂಧ ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಕೂಡ ಸಲ್ಲಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts