ಬೆಂಗಳೂರು; ಅನುಸೂಚಿತ ಜಾತಿಯ ಪಟ್ಟಿಯಲ್ಲಿರುವ ಬೇಡ ಜಂಗಮ ಸಮುದಾಯದ ಹೆಸರಿನಲ್ಲಿ ಇತರೆ ಸಮುದಾಯವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ಬಗ್ಗೆ ಕಂದಾಯ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಸಂಬಂಧ ಪಟ್ಟ ಇಲಾಖೆಗಳೊಂದಿಗೆ ಕರ್ನಾಟಕ ವಿಧಾನಸಭೆಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಸಭೆಗೆ ಏಕಾಏಕೀ ನುಗ್ಗಿ ದಾಂಧಲೆ ನಡೆಸಿದ್ದ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ವಕೀಲರೂ ಆದ ಬಿ ಡಿ ಹಿರೇಮಠ್ ಅವರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ಕುರಿತು ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯು ಶಾಸಕರ ಭವನದಲ್ಲಿ ಶಾಸಕರ ಭವನದಲ್ಲಿ 2022ರ ಏಪ್ರಿಲ್ 27ರಂದು ನಡೆಸಿದ್ದ ಸಭೆಯಲ್ಲಿ ಬಿ ಡಿ ಹಿರೇಮಠ್ ಅವರು ಯಾವ ಅನುಮತಿಯೂ ಇಲ್ಲದೆಯೂ ನುಗ್ಗಿ ಸಮಿತಿಯ ಅಧ್ಯಕ್ಷರು ಸದಸ್ಯರುಗಳು ಹಾಗೂ ಇಲಾಖಾಧಿಕಾರಿಗಳಿಗೆ ತಮ್ಮನ್ನು ನೋಡಿಕೊಳ್ಳುವುದಾಗಿ ಬೆದರಿಕೆ ಹಾಕುವುದರ ಜತೆ ವಿಧಾನಸೌಧಕ್ಕೆ ಬೆಂಕಿ ಹಾಕುವುದಾಗಿಯೂ ಸಹ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸಮಿತಿಯು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಗಮನಕ್ಕೆ ತಂದಿತ್ತು. ಅವರ ನಿರ್ದೇಶನದಂತೆ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ವಸುಂಧರಾದೇವಿ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ಮೇ 10ರಂದು ದೂರು ದಾಖಲಿಸಿದ್ದಾರೆ. ದೂರಿನ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ದೂರಿನಲ್ಲೇನಿದೆ?
ಸುಮಾರು 11-30 ಗಂಟೆಗೆ ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ವಕೀಲರೂ ಆದ ಬಿ ಡಿ ಹಿರೇಮಠ್ ಅವರು ಸಮಿತಿ ಸಭೆಗೆ ಯಾವುದೇ ಅನುಮತಿ ಪಡೆಯದೇ ಏಕಾಏಕೀ ಅತಿಕ್ರಮವಾಗಿ ಪ್ರವೇಶಿಸಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರುಗಳಿಗೆ ಯಾವುದೇ ಗೌರವ ಕೊಡೆದೇ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ವಿಷಯವನ್ನು ಚರ್ಚಿಸಲು ಅಡಚಣೆ ಉಂಟು ಮಾಡಿರುತ್ತಾರೆ. ಅಲ್ಲದೆ ಸಮಿತಿಯ ಅಧ್ಯಕ್ಷರು ಸದಸ್ಯರುಗಳು ಹಾಗೂ ಇಲಾಖಾಧಿಕಾರಿಗಳಿಗೆ ತಮ್ಮನ್ನು ನೋಡಿಕೊಳ್ಳುವುದಾಗಿ ಬೆದರಿಕೆ ಹಾಕುವುದರ ಜತೆ ವಿಧಾನಸೌಧಕ್ಕೆ ಬೆಂಕಿ ಹಾಕುವುದಾಗಿಯೂ ಸಹ ಬೆದರಿಕೆ ಹಾಕಿರುತ್ತಾರೆ.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರು ಸದಸ್ಯರು ಮತ್ತು ಇಲಾಖಾಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಅಡಚಣೆ ಉಂಟು ಮಾಡಿರುತ್ತಾರೆ. ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಸಮಿತಿಯ ಅಧ್ಯಕ್ಷರು ಸಭಾಧ್ಯಕ್ಷರಿಗೆ ಹಕ್ಕುಚ್ಯುತಿ ಸೂಚನೆಯನ್ನು ಸಲ್ಲಿಸಿದ್ದಾರೆ. ಇವರ ವಿರುದ್ಧ ದೂರು ದಾಖಲಿಸಿ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಸಭಾಧ್ಯಕ್ಷರು ನಿರ್ದೇಶಿಸಿದ್ದಾರೆ.
ಈ ಸಭೆಯಲ್ಲಿ ಕಂದಾಯ, ಸಮಾಜ ಕಲ್ಯಾಣ, ಕಾನೂನು ಇಲಾಖೆ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಿದ ಡಿಜಿಪಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಇನ್ನಿತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಶಾಸಕ ಎಂ ಪಿ ರೇಣುಕಾಚಾರ್ಯ ಅವರ ಪುತ್ರಿಗೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಿದ್ದ ಪ್ರಕರಣವು ಬಹಿರಂಗಗೊಂಡಿದ್ದ ಬೆನ್ನಲ್ಲೇ ಸಮಿತಿಯು ಸುಳ್ಳು ಜಾತಿಪ್ರಮಾಣ ಪತ್ರ ಪಡೆಯುತ್ತಿರುವ ಪ್ರಕರಣಗಳ ಕುರಿತು ವಿಚಾರಣೆಗೆ ಕೈಗೆತ್ತಿಕೊಂಡಿರುವುದನ್ನು ಸ್ಮರಿಸಬಹುದು.