ಮಿನಿ ಫುಡ್‌ ಪಾರ್ಕ್‌ ಯೋಜನೆ ; ನಿರ್ದಿಷ್ಟ ಅನುದಾನ ಮೀಸಲಿರಿಸದೇ ಆಯವ್ಯಯದಲ್ಲಿ ಘೋಷಣೆ

ಬೆಂಗಳೂರು; ರಾಜ್ಯದಲ್ಲಿ ಕೃಷಿ, ತೋಟಗಾರಿಕೆ ಉತ್ಪನ್ನಗಳು ಪೋಲಾಗುವುದನ್ನು ತಪ್ಪಿಸುವ ಉದ್ದೇಶದಿಂದ ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಿನಿ ಆಹಾರ ಪಾರ್ಕ್‌ಗಳನ್ನು ಸ್ಥಾಪಿಸಲಾಗುವುದು ಎಂದು 2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವ ಸರ್ಕಾರವು ಈ ಉದ್ದೇಶಕ್ಕೆ ನಿರ್ದಿಷ್ಟವಾದ ಮೀಸಲು ಅನುದಾನವನ್ನೇ ಉಲ್ಲೇಖಿಸಿಲ್ಲ. ನಿರ್ದಿಷ್ಟ ಅನುದಾನ ಒದಗಿಸದಿದ್ದಲ್ಲಿ ಈ ಯೋಜನೆಯು ಅನುಷ್ಠಾನಗೊಳಿಸುವುದು ಸಾಧ್ಯವಾಗುವುದಿಲ್ಲ ಎಂಬ ಅಭಿಪ್ರಾಯವನ್ನು ಇಲಾಖೆಯು ವ್ಯಕ್ತಪಡಿಸಿದೆ.

 

ಕೃಷಿ ಇಲಾಖೆ ಅಡಿಯಲ್ಲಿ ಘೋಷಿಸಿರುವ ನೂತನ ಯೋಜನೆಗಳ ಪೈಕಿ ಮಿನಿ ಆಹಾರ ಪಾರ್ಕ್‌ ಯೋಜನೆಯೂ ಒಂದಾಗಿತ್ತು. ಈ ಸಂಬಂಧ ಕನಾಟಕ ಆಹಾರ ನಿಗಮವು ವಿಸ್ತೃತ ಯೋಜನೆ ವರದಿಯನ್ನು ಸಲ್ಲಿಸಿತ್ತು. ಆದರೂ ಯೋಜನೆ ಅನುಷ್ಠಾನಕ್ಕಾಗಿ ನಿರ್ದಿಷ್ಟವಾದ ಮೀಸಲು ಅನುದಾನವನ್ನೇ ಒದಗಿಸಿಲ್ಲ ಎಂಬ ಅಂಶ ಇದೀಗ ಬಹಿರಂಗವಾಗಿದೆ. ಈ ಸಂಬಂಧ ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಣೆಯಾಗಿರುವ ಎಲ್ಲಾ ಯೋಜನೆಗಳಿಗೂ ತ್ವರಿತಗತಿಯಲ್ಲಿ ಸರ್ಕಾರಿ ಆದೇಶಗಳನ್ನು ಹೊರಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಆಯಾ ಇಲಾಖೆ ಘೋಷಣೆಗಳ ಅನುಷ್ಠಾನಕ್ಕಾಗಿ ಅನುದಾನದ ಮೂಲಗಳನ್ನು ಹುಡುಕಲಾರಂಭಿಸಿದ್ದಾರೆ.

 

ಮಿನಿ ಆಹಾರ ಪಾರ್ಕ್‌ ಯೋಜನೆ ಅನುಷ್ಠಾನಕ್ಕೆ ಯಾವುದೇ ನಿರ್ದಿಷ್ಟ ಮೀಸಲು ಅನುದಾನವನ್ನು ಉಲ್ಲೇಖಿಸದ ಕಾರಣ ರಾಜ್ಯದಲ್ಲಿ 5 ಮಿನಿ ಆಹಾರ ಪಾರ್ಕ್‌ಗಳನ್ನು ಮೊದಲ ವರ್ಷದಲ್ಲಿ 50.00 ಕೋಟಿ ರು.ಗಳ ಅನುದಾನಕ್ಕೆ ಪ್ರಸ್ತಾಪಿಸಿದೆ. ಆದರೆ ಈ ಅನುದಾನವನ್ನು ಹೊಂದಿಸಲು ಮಾಡಿಕೊಂಡಿರುವ ಪರ್ಯಾಯ ವ್ಯವಸ್ಥೆ ಬಗ್ಗೆ ಯಾವುದೇ ಬಾಹ್ಯ ಮೂಲವನ್ನು ವಿವರಿಸಿಲ್ಲ ಎಂಬ ಅಂಶ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಮಿನಿ ಆಹಾರ ಪಾರ್ಕ್‌ಗಳನ್ನು ಸ್ಥಾಪಿಸುವುದರಿಂದ ಕ್ಲಸ್ಟರ್‌ ವಿಧಾನದಲ್ಲಿ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಉದ್ಯಮಿಗಳನ್ನು ಉತ್ತೇಜಿಸಲು ಆಧುನನಿಕ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ದಿಪಡಿಸುವ ಗುರಿ ಹೊಂದಿದೆ.

 

ಪಿಎಂಎಫ್‌ಎಂಇ ಯೋಜನೆಯಡಿ ಒಂದು ಜಿಲ್ಲೆ ಒಂದು ಉತ್ಪನ್ನವಾಗಿ ಗುರುತಿಸಿರುವ ಜಿಲ್ಲೆಗಳಲ್ಲಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನು ಅನುಷ್ಠಾನಗೊಳಿಸಬಹುದು. ಈ ಯೋಜನೆ ಅನುಷ್ಠಾನಗೊಳಿಸಿದ್ದಲ್ಲಿ ರೈತರು ಬೆಳೆದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನು ಮೌಲ್ಯವರ್ಧನೆಗೊಳಿಸಿ ರೈತರ ಆದಾಯ ಹೆಚ್ಚಿಸಿ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸಲು ಸಹಾಯವಾಗುತ್ತದೆ. ಆದರೆ ಈ ಹೊಸ ಯೋಜನೆಗೆ ಅವಶ್ಯವಿರುವ ಅನುದಾನವನ್ನು ಸರ್ಕಾರ ಒದಗಿಸಿದಲ್ಲಿ ಸಹಮತಿ ನೀಡಬಹುದು ಎಂದು ಯೋಜನಾ ಇಲಾಖೆಯು ಹೇಳಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

‘ಈ ಯೋಜನೆಗೆ ಹಣಕಾಸು ಇಲಾಖೆಯು ಹೊಸ ಲೆಕ್ಕಶೀರ್ಷಿಕೆ ಸೃಷ್ಟಿಸಿ ಅಥವಾ ಈಗಾಗಲೇ ಇರುವ ಯೋಜನೆಗಳ ಜತೆಗೆ ಹೆಚ್ಚುವರಿಯಾಗಿ ಈ ಯೋಜನೆಯನ್ನೂ ಸೇರಿಸಿ ಅನುದಾನವನ್ನು ಒದಗಿಸಿದ್ದಲ್ಲಿ ಈ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಬಹುದು. ಅನುದಾನವನ್ನು ಒದಗಿಸದಿದ್ದಲ್ಲಿ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾಗುವುದಿಲ್ಲ,’ ಎಂಬ ಅಭಿಪ್ರಾಯವನ್ನು ಇಲಾಖೆಯು ನೀಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಮಿನಿ ಆಹಾರ ಪಾರ್ಕ್‌ಗಳನ್ನು ಹೊಂದಿರದೇ ಇರುವ ರಾಜ್ಯದ 5 ಜಿಲ್ಲೆಗಳಲ್ಲಿ ಆರಂಭಿಕ ಹಂತದಲ್ಲಿ ಸ್ಥಾಪಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ನೀತಿಯಡಿಯಲ್ಲಿ ಈಗಾಗಲೇ ಭೂಮಿ ಹೊಂದಿರುವವರಿಗೆ ಮತ್ತು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮೊದಲ ಆದ್ಯತೆ ನೀಡಲು ಸರ್ಕಾರವು ಉದ್ದೇಶಿಸಿದೆ.

 

2022-23ನೇ ಮೊದಲ ವರ್ಷದಲ್ಲಿ 50.00 ಕೋಟಿ ರು.ಗಳನ್ನು ನಿಗದಿಪಡಿಸಿ ಪ್ರಥಮ ವರ್ಷದಲ್ಲಿ 5 ಪಾರ್ಕ್‌ಗಳನ್ನು ಸ್ಥಾಪಿಸಿ ನಂತರದ ವರ್ಷದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಸ್ತರಣೆ ಮಾಡಲಿದೆ. ಈ ಹೊಸ ಯೋಜನೆಗೆ ಅನುಷ್ಠಾನಕ್ಕೆ ಬೇಕಾದ ಒಟ್ಟು ಮೊತ್ತವು ರಾಜಸ್ವ ಹಾಗೂ  ಬಂಡವಾಳ ವೆಚ್ಚವಾಗಿ ವಿಂಗಡಿಸಿ ಪುನರಾವರ್ತಿತ ಹಾಗೂ ಒಂದು ಬಾರಿಯ ಅಂದಾಜು ಮೊತ್ತವಾಗಿದ್ದು ಇದು ಅನುದಾನದ ರೂಪದಲ್ಲಿದ್ದು ಮರುಕಳಿಸದ ಸ್ವರೂಪದಲ್ಲಿರುತ್ತದೆ ಎಂಬ ಅಂಶವು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

the fil favicon

SUPPORT THE FILE

Latest News

Related Posts