Monday | March 23, 2026 |

ಭೂ ಸ್ವಾಧೀನ, ಪರಿಹಾರದಲ್ಲಿ ಅಕ್ರಮ; ಬಿಸ್ವಾಸ್ ವರದಿ ಮೂಲೆಗುಂಪು, 29.96 ಕೋಟಿ ನಷ್ಟ ಪ್ರಕರಣಕ್ಕೆ ಕ್ಲೀನ್ ಚಿಟ್

Support THE-FILE

spot_img

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸಾಬೀತಾಗಿದ್ದ  ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯ ಹಿನ್ನೀರಿನಿಂದ ಮುಳುಗಡೆಯಾಗಿರುವ ಮಾಸ್ತಿಹೊಳೆ ಗ್ರಾಮದ ಜಮೀನುಗಳನ್ನು ಎರಡೆರಡು ಬಾರಿ ಭೂಸ್ವಾಧೀನಪಡಿಸಿಕೊಂಡು ಪರಿಹಾರ ನೀಡಿ  26.96 ಕೋಟಿಯಷ್ಟು  ಆರ್ಥಿಕ ನಷ್ಟ ಪ್ರಕರಣದ ತನಿಖಾ ವರದಿಗೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿನ ಪ್ರಾದೇಶಿಕ ಆಯುಕ್ತರು ಮತ್ತು ವಿಶೇಷ ಜಿಲ್ಲಾಧಿಕಾರಿಗಳು  ಎಳ್ಳು ನೀರು ಬಿಟ್ಟಿದ್ದಾರೆ.

ಹಿಡಕಲ್ ಜಲಾಶಯ ಹಿನ್ನೀರಿನಿಂದ ಮುಳುಗಡೆಯಾಗಿರುವ ಜಮೀನುಗಳನ್ನು   ಎರಡೆರಡು ಬಾರಿ ಭೂ ಸ್ವಾಧೀನಪಡಿಸಿಲ್ಲ ಹಾಗೂ ಯಾವುದೇ ಆರ್ಥಿಕ ನಷ್ಟವುಂಟಾಗಿಲ್ಲ ಎಂದು ಕ್ಲೀನ್‌ ಚಿಟ್‌ ನೀಡಿರುವುದು ಆರ್‍‌ಟಿಐ ದಾಖಲೆಗಳಿಂದ ಬಹಿರಂಗವಾಗಿದೆ.

ಸರ್ಕಾರಕ್ಕೆ  26.96 ಕೋಟಿಯಷ್ಟು ಆರ್ಥಿಕ ನಷ್ಟವುಂಟಾಗಿದೆ ಎಂದು ಬೆಳಗಾವಿಯ ಅಂದಿನ ಪ್ರಾದೇಶಿಕ ಆಯುಕ್ತರಾಗಿದ್ದ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು 2022ರಲ್ಲೇ   ನೀಡಿದ್ದ ವರದಿಯನ್ನು  ಬೆಳಗಾವಿಯ ವಿಶೇಷ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದ  ಕೆಎಎಸ್ ಅಧಿಕಾರಿ ಶ್ರೀಹರ್ಷ ಎಸ್ ಶೆಟ್ಟಿ ಅವರು,  ಬಿಸ್ವಾಸ್ ಅವರ ವರದಿಯನ್ನೇ ತಳ್ಳಿ ಹಾಕಿದ್ದಾರೆ.

ಈ ಪ್ರಕರಣದಲ್ಲಿ ಯಾವುದೇ  ನಷ್ಟವುಂಟಾಗಿಲ್ಲ ಮತ್ತು ಎರಡೆರಡು ಬಾರಿ ಭೂ ಸ್ವಾಧೀನವಾಗಿಲ್ಲ ಎಂದು ವರದಿ ನೀಡಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ. ಅಲ್ಲದೇ ಸರ್ಕಾರ ಬದಲಾದಂತೆ ಪ್ರಾದೇಶಿಕ ಆಯುಕ್ತರು ಮತ್ತು ವಿಶೇಷ ಜಿಲ್ಲಾಧಿಕಾರಿಗಳ  ವರದಿಗಳೂ ಬದಲಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ವಿಶೇಷವೆಂದರೇ ಸಿದ್ದರಾಮಯ್ಯ ಅವರ ನೇತೃತ್ವದ ಮೊದಲ ಅವಧಿಯಲ್ಲಿಯೇ  ಎರಡೆರಡು ಬಾರಿ ಭೂ ಸ್ವಾಧೀನಪಡಿಸಿಕೊಂಡು ಸರ್ಕಾರಕ್ಕೆ ಆರ್ಥಿಕ ನಷ್ಟವುಂಟು ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಎರಡನೇ ಅವಧಿಯಲ್ಲಿ ಈ ಪ್ರಕರಣವನ್ನು ಮುಚ್ಚಿ ಹಾಕಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

ಈ ಪ್ರಕರಣದ ಕುರಿತು ‘ದಿ ಫೈಲ್‌’ , ತನಿಖಾ ವರದಿ ಸೇರಿದಂತೆ ಸಮಗ್ರ ಕಡತವನ್ನು ಆರ್‍‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

ಹಿಡಕಲ್ ಜಲಾಶಯ ಹಿನ್ನೀರಿನಿಂದ ಮುಳುಗಡೆಯಾಗಿರುವ ಮಾಸ್ತಿಹೊಳೆ ಗ್ರಾಮದ ಜಮೀನುಗಳನ್ನು ಎರಡೆರಡು ಬಾರಿ ಭೂಸ್ವಾಧೀನಪಡಿಸಿಕೊಂಡು ಪರಿಹಾರ ನೀಡಲಾಗಿದೆ ಎಂದು ಅನಾಮಧೇಯ ವ್ಯಕ್ತಿಯೊಬ್ಬರು ಲೋಕಾಯುಕ್ತ ಮತ್ತು  ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಈ ದೂರನ್ನಾಧರಿಸಿ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು  2022ರ ಏಪ್ರಿಲ್‌ 11ರಂದೇ ತನಿಖಾ ವರದಿ ಸಲ್ಲಿಸಿದ್ದರು.

 

 

2022ರಲ್ಲಿ ನೀಡಿದ್ದ ತನಿಖಾ ವರದಿಯನ್ನು ಪುನರ್ ಪರಿಶೀಲನೆ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ  ಕ್ಲೀನ್ ಚಿಟ್‌ ನೀಡಿರುವುದು ದಾಖಲೆಗಳಿಂದ ತಿಳಿದು ಬಂದಿದೆ.

ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ರಂಗಪ್ರವೇಶ

ಈ ಹಂತದಲ್ಲೇ ಸಚಿವ ಸತೀಶ್ ಜಾರಕಿಹೊಳಿ ಮತ್ತು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರಕರಣದಲ್ಲಿ  ರಂಗ ಪ್ರವೇಶ ಮಾಡಿದ್ದರು.  ಲೋಕೋಪಯೋಗಿ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಈ ವರದಿಯನ್ನು ಪುನರ್ ಪರಿಶೀಲನೆ ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋರಿದ್ದರು.

 

 

 

ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು 2022ರಲ್ಲಿ ಸಲ್ಲಿಸಿದ್ದ ವರದಿಯನ್ನು ಕಂದಾಯ ಇಲಾಖೆಯ ಕಾರ್ಯದರ್ಶಿಗಳಿಗೆ ಸಲ್ಲಿಕೆಯಾಗಿದೆ. ಈ ಸಂಬಂಧ ಲೋಕಾಯುಕ್ತರಿಗೆ ಸಲ್ಲಿಸಿದ ದೂರಿನ ಅನ್ವಯ ಕೈಗೊಂಡ ತನಿಖೆಯಲ್ಲಿ ರೈತರು ಎರಡು ಬಾರಿ ಪರಿಹಾರ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಪ್ರಾದೇಶಿಕ ಆಯುಕ್ತರು ನೀಡಿರುವ ವರದಿಯನ್ನು ಪುನರ್ ಪರಿಶೀಲಿಸಿ, ವರದಿಯನ್ನು ಕೈಬಿಡಬೇಕು. ಅಲ್ಲದೇ ಭೂ ಮಾಲೀಕರಿಗೆ ತಲಾ 04 ಎಕರೆ ಜಮೀನು ಮಂಜೂರು ಮಾಡಬೇಕು  ಎಂದು ಸತೀಶ್ ಜಾರಕಿಹೊಳಿ ಕೋರಿದ್ದರು.

ಈ ಕೋರಿಕೆಯನ್ನು ಪರಿಗಣಿಸಿದ್ದ ಸಿದ್ದರಾಮಯ್ಯ ಅವರು ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದ್ದರು.ಸತೀಶ್ ಜಾರಕಿಹೊಳಿ ಅವರ ಕೋರಿಕೆಯಂತೆ ಪುನರ್ ಪರಿಶೀಲನೆ ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂದಾಯ ಸಚಿವರಿಗೆ ಸೂಚಿಸಿದ್ದರು.

 

 

 

ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೂ ಸತೀಶ್ ಜಾರಕಿಹೊಳಿ ಅವರು ಮನವಿ ಸಲ್ಲಿಸಿದ್ದರು.

 

 

ಸಚಿವ ಕೃಷ್ಣಬೈರೇಗೌಡ ಅವರು  ತ್ವರಿತವಾಗಿ ಪರಿಶೀಲನೆ ಮಾಡಿ ಮುಂದಿನ ಕ್ರಮದ ಬಗ್ಗೆ ವರದಿ ನೀಡಬೇಕು ಎಂದು ಸೂಚಿಸಿದ್ದರು.

ಸಚಿವರ ಸೂಚನೆಯಂತೆ ಹಾಲಿ ಪ್ರಾದೇಶಿಕ ಆಯುಕ್ತರು, 2022ರಲ್ಲಿನ ಪ್ರಾದೇಶಿಕ ಆಯುಕ್ತರ ತನಿಖಾ ವರದಿಯನ್ನು ಪುನರ್ ಪರಿಶೀಲನೆ ಮಾಡಿ ಇದರಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ವರದಿ ನೀಡಿರುವುದು ದಾಖಲೆಗಳಿಂದ ಗೊತ್ತಾಗಿದೆ.

ದೂರಿನಲ್ಲೇನಿತ್ತು?

1969-79ನೇ ಸಾಲಿನಲ್ಲಿ ಹಿಡಕಲ್ ಡ್ಯಾಮ್ ಹಿನ್ನೀರಿನಿಂದ ಮುಳುಗಡೆಯಾಗಿರುವ ಹುಕ್ಕೇರಿ ತಾಲೂಕಿನ 22 ಹಳ್ಳಿಗಳ ಜಮೀನುಗಳಿಗೆ ಸರ್ಕಾರದಿಂದ ಈಗಾಗಲೇ ಪರಿಹಾರ ನೀಡಲಾಗಿದೆ. ಆದರೂ ಮಾಸ್ತಿಹೊಳಿ ಗ್ರಾಮಸ್ಥರು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಮತ್ತೊಮ್ಮೆ ಪರಿಹಾರ ಪಡೆದಿದ್ದಾರೆ. ಒಂದು ವೇಳೆ ಪರಿಹಾರ ನೀಡುವುದಾದರೇ 21 ಗ್ರಾಮಗಳ ರೈತರಿಗೆ ಸಹ ಪರಿಹಾರ ನೀಡಬೇಕು. ಮಾಸ್ತಿಹೊಳಿ ಗ್ರಾಮಸ್ಥರಿಗೆ ಖೊಟ್ಟಿ ದಾಖಲೆಗಳ ಮೇಲೆ ನೀಡಿರುವ ಪರಿಹಾರವನ್ನು ಹಿಂಪಡೆದು ಸರ್ಕಾರಕ್ಕೆ ಮರುಪಾವತಿಸಬೇಕು. ತಪ್ಪಿತಸ್ಥರ ಮೇಲೆ ಕಾನೂನು ರೀತಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ದೂರು ಸಲ್ಲಿಕೆಯಾಗಿತ್ತು.

 

ಲೋಕಾಯುಕ್ತದಿಂದಲೂ ತನಿಖೆ

ಮತ್ತೊಂದು ವಿಶೇಷವೆಂದರೇ ಈ ಪ್ರಕರಣದ ಬಗ್ಗೆ ಅನಾಮಧೇಯ ವ್ಯಕ್ತಿ  ಲೋಕಾಯುಕ್ತಕ್ಕೂ 2017ರಲ್ಲೇ  ದೂರು ಸಲ್ಲಿಸಿದ್ದರು. ಈ ದೂರಿನಲ್ಲಿ ನೇಋವಾಗಿ ಪ್ರಭಾರಿ ಉಪ ವಿಭಾಗಾಧಿಕಾರಿಯಾಗಿದ್ದ ರಾಜಶ್ರೀ ಜೈನಾಪುರ ಮತ್ತು ತಹಶೀಲ್ದಾರ್ ಗಸ್ತಿ ಎಂಬುವರನ್ನು ಪ್ರತಿವಾದಿಯನ್ನಾಗಿಸಿದ್ದರು.  ಈ ದೂರಿನ ಕುರಿತು  ವಿಚಾರಣೆ ನಡೆಸಿತ್ತು. 2018ರಲ್ಲಿಯೇ ಲೋಕಾಯುಕ್ತ ಎಸ್ಪಿ , ಎಡಿಜಿಪಿಗೆ ವಿಚಾರಣೆ ವರದಿ ಸಲ್ಲಿಸಿದ್ದರು.

 

 

ಲೋಕಾ ತನಿಖೆಯಲ್ಲಿ ಕಂಡುಬಂದಿದ್ದೇನು?

ಹುಕ್ಕೇರಿ ತಾಲೂಖಿನ ಹಿಡಕಲ್ ಜಲಾಶಯ ನಿರ್ಮಾಣವಾದ ನಂತರ ಇಲ್ಲಿಯವರೆಗೆ ಒಟ್ಟು 17 ಅವಾರ್ಡ್‌ಗಳು ಅಗಿದ್ದವು. 1973ರಲ್ಲಿ ಪ್ರಥಮ ಅವಾರ್ಡ್ ಆಗಿತ್ತು. ಅಂತಿಮವಾಗಿ 2015-16ರವರೆಗೆ 17 ಅವಾರ್ಡ್‌ಗಳು ಆಗಿದ್ದವು. 1973ರಿಂದ 1991ರವರೆಗೆ ಹಿಡಕಲ್ ಜಲಾಶಯ ಹಿನ್ನೀರಿನಲ್ಲಿ ಮುಳುಗಡೆಯಾದ ರೈತರಿಗೆ ಪರಿಹಾರ ಧನ ವಿತರಣೆ ಮಾಡಿದ ಬಗ್ಗೆ ನಗದು ಪುಸ್ತಕ ಹಾಗೂ ಬೇರೆ ಯಾವುದೇ ದಾಖಲಾತಿಯೂ ವಿಶೇಷ ಭೂ ಸ್ವಾಧೀನಾಧಿಕಾರಿಗಳ ಬಳಿ ಇರಲಿಲ್ಲ. ಮಾಸ್ತಿಹೊಳಿ ಗ್ರಾಮದ ಕೆಲವೊಂದು ಸರ್ವೆ ನಂಬರ್‍‌ಗಳಿಗೆ ಸಂಬಂಧಪಟ್ಟಂತೆ ಎರಡು ಹಾಗೂ ಮೂರು ಬಾರಿ ಅವಾರ್ಡ್‌ ಅನುಮೋದನೆಯಾಗಿರುವುದನ್ನು ಲೋಕಾಯುಕ್ತ ಸಂಸ್ಥೆಯ ಪೊಲೀಸ್‌ ವಿಭಾಗವು ಪತ್ತೆ ಹಚ್ಚಿತ್ತು.

 

 

ಆದರೆ ಎರಡು ಮತ್ತು ಮೂರು ಬಾರಿ ಪರಿಹಾರ ಧನ ವಿತರಣೆ ಮಾಡಿದ ಬಗ್ಗೆ ದಾಖಲೆಗಳೇ ಲಭ್ಯವಿಲ್ಲ ಎಂದು ವಿಶೇಷ ಭೂ ಸ್ವಾಧೀನಾಧಿಕಾರಿಗಳು ಲೋಕಾಯುಕ್ತ ತನಿಖಾ ತಂಡಕ್ಕೆ ಪತ್ರ ಮುಖೇನ ತಿಳಿಸಿದ್ದರು.

 

 

 

ಕೆಲ ಸರ್ವೆ ನಂಬರ್‍‌ಗಳನ್ನು ಪಟ್ಟಿಯನ್ನು ಪರಿಶೀಲಿಸಿದ್ದ ತನಿಖಾ ತಂಡವು ಮಂಜೂರಾಗಿದ್ದ ಅವಾರ್ಡ್‌ಗಳಲ್ಲಿ ಜಂಟಿ ಸರ್ವೆ ಪ್ರಕಾರ ಹೆಚ್ಚುವರಿ ಕ್ಷೇತ್ರಗಳು ಭೂ ಸ್ವಾಧೀನಗೊಂಡಲ್ಲಿ ಅಂತಹ ಸಂದರ್ಭದಲ್ಲಿ ಒಂದೇ ಸರ್ವೆ ನಂಬರ್‍‌ನ್ನು  ಮೂಲ ಪ್ರಕರಣದಲ್ಲಿ ಭಾಗಶಃ ಕ್ಷೇತ್ರವನ್ನು ಹಾಗೂ ಹೆಚ್ಚುವರಿ ಕ್ಷೇತ್ರವನ್ನು ಮೂಲ ಪ್ರಕರಣದ ಹೆಚ್ಚುವರಿ ಪ್ರಕರಣದಲ್ಲಿ ಆವಾರ್ಡ್‌ ಮಾಡಲಾಗುತ್ತದೆ. ಒಂದೇ ಸರ್ವೆ ನಂಬರ್‍‌ಗೆ ಎರಡು ಬಾರಿ ಅವಾರ್ಡ್‌ ಮಾಡುವ ಪ್ರಮೇಯ ಉದ್ಭವವಾಗುತ್ತದೆ ಎಂದು ವಿಶೇಷ ಭೂ ಸ್ವಾಧೀನಾಧಿಕಾರಿ ಸಮಜಾಯಿಷಿ ನೀಡಿದ್ದರು.

 

 

ಸರ್ಕಾರಿ ಜಮೀನೆಂದು ಪರಿವರ್ತನೆಯಾಗಿರಲಿಲ್ಲ; ಪತ್ತೆಯಾದ ಅಧಿಕಾರಿಗಳ ಘೋರ ನಿಷ್ಕಾಳಜಿತನ

ಈ ಪ್ರಕರಣದಲ್ಲಿ ಲೋಕಾಯುಕ್ತ ತನಿಖಾ ತಂಡವು ಕಂದಾಯ ಇಲಾಖೆಯ ಮತ್ತೊಂದು ಬೇಜವಾಬ್ದಾರಿಯನ್ನು ಪತ್ತೆ ಹಚ್ಚಿತ್ತು. ಹಿಡಕಲ್ ಜಲಾಶಯ ಹಿನ್ನೀರಿನಲ್ಲಿ ಮುಳುಗಡೆಯಾದ ಜಮೀನುಗಳ ಪೈಕಿ ಮಾಸ್ತಿಹೊಳಿ ಗ್ರಾಮದ ರಿ ಸರ್ವೆ ನಂಬರ್ ಪೈಕಿ ಕೆಲವು ಸರ್ವೆ ನಂಬರ್‍‌ಗಳ ಮಾಲೀಕತ್ವದ ಜಮೀನುಗಳನ್ನು ಲೋಕಾಯುಕ್ತ ತನಿಖಾ ತಂಡವು ಪರಿಶೀಲಿಸಿತ್ತು. ರಿ ಸರ್ವೆ ನಂಬರ್ 172/1, 172/2, 172/5, 172/6, 172/8, 172/9, 172/11, 172/4, 172/13, 172/14, 172/15, 173/1, 173/3, 173/9ರಿಂದ 173/15, 173/21ರಿಂದ 173/29 ಹಾಘೂ 174/1ರಿಂದ 174/10ವರೆಗಿನ ಸರ್ವೆ ನಂಬರ್‍‌ಗಳ ಜಮೀನುಗಳ ಮಾಲೀಕರಿಗೆ ಈಗಾಗಲೇ ಪರಿಹಾರ ಧನ ಮಂಜೂರಾಗಿತ್ತಲ್ಲದೇ ಹಣವೂ ಹಂಚಿಕೆಯಾಗಿತ್ತು.

 

 

ಆದರೂ ಸಹ 2018ವರೆಗೂ ಈ ಜಮೀನುಗಳನ್ನು ಸರ್ಕಾರಿ ಜಮೀನು ಎಂದು ಪರಿವರ್ತಿಸಿಕೊಂಡಿರಲಿಲ್ಲ. 2018ರವರೆಗೂ ಈ ಜಮೀನುಗಳು ಭೂ ಮಾಲೀಕರ ಹೆಸರಿನಲ್ಲಿಯೇ ಇದ್ದವು. 1973ರಿಂದ 2018ರವರೆಗಿನ ವಿಶೇಷ ಭೂ ಸ್ವಾಧೀನಾಧಿಕಾರಿಗಳು ಮತ್ತು ಹಿಡಕಲ್ ಡ್ಯಾಂನಲ್ಲಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳೂ ಸಹ ಈ ಬಗ್ಗೆ ಯಾವುದೇ ಕ್ರಮವನ್ನು ವಹಿಸಿರಲಿಲ್ಲ. ಇದರಲ್ಲಿ ಅಧಿಕಾರಿಗಳ ಘೋರ ನಿಷ್ಕಾಳಜಿತನ ಕಂಡು ಬಂದಿದೆ ಎಂದು ಲೋಕಾ ವಿಚಾರಣೆ ವರದಿಯಲ್ಲಿ ವಿವರಿಸಿತ್ತು.

 

 

ಬಿಜೆಪಿ ಅವಧಿಯಲ್ಲಿನ ತನಿಖಾ ವರದಿಯಲ್ಲೇನಿದೆ?

ಈ ದೂರನ್ನಾಧರಿಸಿ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ತನಿಖಾ ತಂಡ ರಚನೆಯಾಗಿತ್ತು.  ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಹೆಚ್ಚುವರಿ ಆಯುಕ್ತರು ( ಭೂ ನಿರ್ವಹಣೆ ಯೋಜನೆ ಮತ್ತು ಇತರೆ), ವಿಶೇಷ ಜಿಲ್ಲಾಧಿಕಾರಿಗಳನ್ನೊಳಗೊಂಡ ತನಿಖಾ ತಂಡವು ಹಿಡಕಲ್ ಜಲಾಶಯ ಯೋಜನೆ, ಹಿಡಕಲ್ ಜಲಾಶಯದ ಕಾರ್ಯನಿರ್ವಾಹಕ ಅಭಿಯಂತರರು ಕಚೇರಿಗಳಿಗೆ ಭೇಟಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ಧನ ಐ ತೀರ್ಪು ಘೋಷಿಸಿರುವ ಕಡತಗಳನ್ನು ಪರಿಶೀಲಿಸಿದ್ದರು. ಅವಶ್ಯಕ ದಾಖಲೆಗಳನ್ನಾಧರಿಸಿಸಮಗ್ರ ತನಿಖಾ ವರದಿಯನ್ನು ಸಲ್ಲಿಸಿದ್ದರು.

 

 

26.96 ಕೋಟಿ ಆರ್ಥಿಕ ನಷ್ಟ

ಮಾಸ್ತಿಹೊಳಿ ಗ್ರಾಮದಲ್ಲಿನ ಜಮೀನುಗಳು ಈ ಹಿಂದೆ ಎರಡು ಹಂತಗಳಲ್ಲಿ ಸ್ವಾಧೀನಕ್ಕೊಳಪಡಿಸಲಾಗಿತ್ತು. ಅವಾರ್ಡ್‌ ಆಗಿ ಪರಿಹಾರ ಧನವೂ ವಿತರಣೆಯಾಗಿತ್ತು. ಆದರೂ 2014-15 ಮತ್ತು 2015-16ರಲ್ಲಿ ಮತ್ತೊಮ್ಮೆ ಸ್ವಾಧೀನಪಡಿಸಿಕೊಂಡಿರುವುದು ಕಂಡುಬಂದಿದೆ ಎಂದು ತನಿಖಾ ತಂಡವು ತನ್ನ ವರದಿಯಲ್ಲಿ ವಿವರಿಸಿದೆ.

 

 

ಮಾಸ್ತಿಹೊಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿ ಈ ಹಿಂದೆ ಒಟ್ಟಾರೆ 147.17 ಎಕರೆ ಕ್ಷೇತ್ರದ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೂ ಎರಡನೇ ಬಾರಿ ಸ್ವಾಧೀನಪಡಿಸಿಕೊಂಡು 26,96,04,503 ರು.ಗಳನ್ನು ಪರಿಹಾರ ನೀಡಲಾಗಿತ್ತು. ಇದರಿಂದ ಸರ್ಕಾರಕ್ಕೆ ಆರ್ಥಿಕ ನಷ್ಟವುಂಟಾಗಿದೆ ಎಂದು ತನಿಖಾ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಹಗರಣಕ್ಕೆ ಮೂಲ ಕಾರಣವೇನು?

1976ರಲ್ಲಿ ಆಗಿರುವ ಅವಾರ್ಡ್‌ಗಳನ್ನು ಆಧರಿಸಿ ಕಂದಾಯ ಮತ್ತು ಭೂ ಮಾಪನ ದಾಖಲೆಗಳನ್ನು ಕಾಲೋಚಿತಗೊಳಿಸಲೂ ಕ್ರಮ ಕೈಗೊಂಡಿಲ್ಲ. ಹಾಗೆಯೇ ಭೂ ಕೋರಿಕೆ ಇಲಾಖೆಯ ದಾಖಲೆಗಳನ್ನೂ ಸರಿಯಾಗಿ ನಿರ್ವಹಣೆ ಮಾಡದೇ ಇರುವುದು ಸಹ ಈ ಹಗರಣಕ್ಕೆ ಕಾರಣವಾಗಿದೆ ಎಂದು ತನಿಖಾ ತಂಡವು ಅಭಿಪ್ರಾಯಪಟ್ಟಿದೆ. ಆದ್ದರಿಂದ ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ವಿವರಣೆ ಪಡೆದು ನಿಯಮಾನುಸಾರ ಕ್ರಮಕೈಗೊಳ್ಳುವ ಅವಶ್ಯಕತೆ ಇದೆ ಎಂದು ತನಿಖಾ ತಂಡವು ಅಭಿಪ್ರಾಯಿಸಿರುವುದು ವರದಿಯಿಂದ ತಿಳಿದು ಬಂದಿದೆ.

‘ಮಾಸ್ತಿಹೊಳಿ ಗ್ರಾಮದ ವಿವಿಧ ಸರ್ವೇ ನಂಬರ್‍‌ಗಳಲ್ಲಿನ ಈ ಹಿಂದೆ 1969-79ರಿಂದ 1979-80ರ ಅವಧಿಯಲ್ಲಿ ಭೂಸ್ವಾಧೀನವಾದ ಒಟ್ಟು 147 ಎಕರೆ 17 ಗುಂಟೆ ವಿಸ್ತೀರ್ಣದ ಕ್ಷೇತ್ರದ ಜಮೀನನ್ನೇ 2014-15 ಮತ್ತು 2015-16ರಲ್ಲಿ ಮತ್ತೊಮ್ಮೆ ಭೂ ಸ್ವಾಧೀನಪಡಿಸಿಕೊಂಡು ಸದರಿ ಜಮೀನುಗಳಿಗೆ 26,96,04,503 ರು.ಗಳ ಪರಿಹಾರ ನೀಡಿ ಸರ್ಕಾರಕ್ಕೆ ಆರ್ಥಿಕ ನಷ್ಟವುಂಟಾಗಿದೆ. ಇದಕ್ಕೆ ಕಾರಣರಾದ ತಪ್ಪಿತಸ್ಥ ಅಧಿಕಾರಿ, ನೌಕರರ ವಿರುದ್ಧ ಕ್ರಮ ಜರುಗಿಸುವ ಅವಶ್ಯಕತೆ ಇದೆ,’ ಎಂದು ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

ಈ ತನಿಖಾ ವರದಿಯನ್ನು ಕಂದಾಯ ಸಚಿವಾಲಯವೂ ಪರಿಶೀಲಿಸಿದೆ. ತನಿಖಾ ವರದಿಯಲ್ಲಿ ನೀಡಿದ್ದ ಅಭಿಪ್ರಾಯವನ್ನು ಕಂದಾಯ ಸಚಿವಾಲಯವೂ ಅನುಮೋದಿಸಿದೆ. ‘ಮಾಸ್ತಿಹೊಳಿ ಗ್ರಾಮಕ್ಕೆ ಸಂಬಂಧಿಸಿದಂತೆ ಈ ಹಿಂದೆ ಭೂಸ್ವಾಧೀನವಾದ ಒಟ್ಟು 147 ಎಕರೆ 17 ಗುಂಟೆ ಕ್ಷೇತ್ರದ ಜಮೀನನ್ನು ಮತ್ತೊಮ್ಮೆ ಭೂಸ್ವಾಧೀನಪಡಿಸಿಕೊಂಡು 26,96,04,503 ರು.ಗಳ ಪರಿಹಾರ ನೀಡಿ ಸರ್ಕಾರಕ್ಕೆ ನಷ್ಟವುಂಟು ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಹಿಂದೆ ಎರಡು ಹಂತಗಳಲ್ಲಿ ಭೂ ಸ್ವಾಧೀನಪಡಿಸಿಕೊಂಡು ಪರಿಹಾರ ವಿತರಣೆಯಾಗಿದ್ದರೂ ಸಹ ಅದೇ ಜಮೀನನ್ನು 2014-15, 2-15-16ರಲ್ಲಿ ಭೂ ಸ್ವಾಧೀನಪಡಿಸಿಕೊಂಡಿರುವುದು ತನಿಖೆಯಿಂದ ಕಂಡುಬಂದಿದೆ,’ ಎಂದು ಕಂದಾಯ ಸಚಿವಾಲಯವೂ ತನಿಖಾ ವರದಿಯನ್ನು ಎತ್ತಿಹಿಡಿದಿರುವುದು ಗೊತ್ತಾಗಿದೆ.

 

 

ಹಿಡಕಲ್ ಜಲಾಶಯಕ್ಕೆ ಮುಳುಗಡೆಯಾಗಿರುವ ಜಮೀನುಗಳ ಸರ್ವೆ ನಡೆಸಬೇಕು ಎಂದು ಗ್ರಾಮಸ್ಥರು ಸಲ್ಲಿಸಿದ್ದ ಕೋರಿಕೆ ಆಧರಿಸಿ  2006ರಲ್ಲಿ ಮುಖ್ಯಮಂತ್ರಿ ಅವರು ಜಮೀನುಗಳ ಸರ್ವೆಗೆ ಸೂಚಿಸಿದ್ದರು. ಬೆಳಗಾವಿ ವಿಭಾಗದ ಉತ್ತರ ವಲಯದ ಮುಖ್ಯ ಇಂಜಿನಿಯರ್ ಅವರು ಮಾಸ್ತಿಹೊಳಿ ಗ್ರಾಮದ 108 ಎಕರೆ 33 ಗುಂಟೆ ಕ್ಷೇತ್ರವನ್ನು ಸ್ವಾಧೀನಪಡಿಸಿಕೊಳ್ಳಲು ಅನುಮತಿ ಕೋರಿ ಮುಖ್ಯ ಆಡಳಿತಾಧಿಕಾರಿಗಳು ಕರ್ನಾಟಕ ನೀರಾವರಿ ನಿಗಮಕ್ಕೆ ಪತ್ರ ಬರೆದಿದ್ದರು. ಕರ್ನಾಟಕ ನೀರಾವರಿ ನಿಗಮದ ಮುಖ್ಯ ಆಡಳಿತಾಧಿಕಾರಿಗಳು ಭೂ ಸ್ವಾಧೀನಪಡಿಸಿಕೊಳ್ಳಲು ಅನುಮೋದನೆ ನೀಡಿದ್ದರು ಎಂದು ತನಿಖಾ ತಂಡವು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

 

 

ಬೆಳಗಾವಿ ಉತ್ತರ ವಲಯದ ಮುಖ್ಯ ಇಂಜಿನಿಯರ್ ಅವರು ಮಾಸ್ತಿಹೊಳಿ ಗ್ರಾಮದ 31 ಎಕರೆ 03 ಗುಂಟೆ ವಿಸ್ತೀರ್ಣದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅನುಮತಿ ಕೋರಿದ್ದರು. ಇದಕ್ಕೂ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಆಡಳಿತಾಧಿಕಾರಿಗಳು ಅನುಮೋದನೆ ನೀಡಿದ್ದರು. ಹಾಗೆಯೇ ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ 58 ಸರ್ವೆ ನಂಬರ್‍‌ಗಳಲ್ಲಿನ 139 ಎಕರೆ 36 ಗುಂಟೆ ವಿಸ್ತೀರ್ಣದ  ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು ಜಿಲ್ಲಾಧಿಕಾರಿಗೆ ಪ್ರಸ್ರಾವ ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳು ಇದಕ್ಕೆ ಅನುಮೋದನೆ ನೀಡಿದ್ದರು.

 

 

ಆ ನಂತರ 150 ಎಕರೆ ವಿಸ್ತೀರ್ಣದ ಜಮೀನುಗಳನ್ನು ಸರ್ವೇ ಮಾಡಲಾಗಿತ್ತು. 122 ಎಕರೆ 09 ಗುಂಟೆ ವಿಸ್ತೀರ್ಣದ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು.  122 ಎಕರೆ 09 ಗುಂಟೆ ವಿಸ್ತೀರ್ಣದ ಜಮೀನುಗಳಿಗೆ ವಿಶೇಷ ಭೂಸ್ವಾಧೀನಾಧಿಕಾರಿಗಳು ಪರಿಹಾರ ಧನ ಕರಡು ಐ ತೀರ್ಪುನ್ನು ರಚಿಸಿದ್ದರು. ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ ಆಯುಕ್ತರು ಕರಡು ಐ ತೀರ್ಪಿಗೆ ಅನುಮೋದನೆ ನೀಡಿದ್ದರು. ಹಾಗೆಯೇ ಈ ಪ್ರಸ್ತಾವನೆಯಲ್ಲಿನ ಸರ್ವೆ ನಂಬರ್‍‌ಗಳಲ್ಲಿನ ಜಮೀನುಗಳು ಇದಕ್ಕೂ ಮುನ್ನ ಭೂಸ್ವಾಧೀನಕ್ಕೆ ಒಳಪಟ್ಟಿವೆಯೇ ಹೇಗೆ ಎಂದು ಮಾಹಿತಿ ಪಡೆದಿದ್ದರು. ಅಲ್ಲದೇ ಕಡತಗಳನ್ನು ಪರಿಶೀಲನೆ ಮಾಡಿದ ನಂತರ ಈ ಜಮೀನುಗಳನ್ನು 2013ರ ಭೂಸ್ವಾಧೀನ ಕಾಯ್ದೆಯಡಿ ಸ್ವಾಧೀನಕ್ಕೊಳಪಡಿಸಲು ವಿಶೇಷ ಭೂಸ್ವಾಧೀನಾಧಿಕಾರಿಗೆ ಪತ್ರ ಬರೆದಿದ್ದರು.

ಇದಾದ ನಂತರ 27 ಎಕರೆ 33 ಗುಂಟೆ ಭೂ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ತಯಾರಿಸಲಾಗಿತ್ತು. ಇದಕ್ಕೆ ವಿಶೇಷ ಜಿಲ್ಲಾಧಿಕಾರಿಗಳು ಅನುಮೋದಿಸಿದ್ದರು. ನಂತರ 27 ಎಕರೆ 33 ಗುಂಟೆ ವಿಸ್ತೀರ್ಣದ ಭೂ ಸ್ವಾಧೀನಕ್ಕೆ  ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಪರಿಹಾರ ಧನ ಐ ತೀರ್ಪಿಗೂ ಅನುಮೋದನೆ ನೀಡಲಾಗಿತ್ತು. ಈ ಹಗರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ವಿವರಣೆ ಪಡೆದು ನಿಯಮಾನುಸಾರ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದು 2022ರ ಜುಲೈ 5ರಂದೇ ಟಿಪ್ಪಣಿ ಹಾಳೆಯಲ್ಲಿ ವಿವರಿಸಿತ್ತು.

ಭೂ ಸ್ವಾಧೀನ ಪ್ರಕರಣಗಳನ್ನು ನಿರ್ವಹಿಸುವಾಗ ಹಲವು ಮಾರ್ಗಸೂಚಿಗಳನ್ನು ರೂಪಿಸಿದೆ. ಭೂ ಸ್ವಾಧೀನ ಪ್ರಕರಣಗಳನ್ನು ನಿರ್ವಹಿಸುವಾಗ ಮೊದಲಿಗೆ ಕೋರಿಕೆ ಇಲಾಖೆಯಿಂದ ಪ್ರಸ್ತಾವನೆ ಪಡೆದು ನಂತರ ಭೂ ಸ್ವಾಧೀನ ಪ್ರಕ್ರಿಯೆಯನ್ನು ಭೂ ಸ್ವಾಧೀನ ಕಾಯ್ದೆಯಡಿ ನಿರ್ವಹಿಸಬೇಕು.

 

 

ಭೂ ಸ್ವಾಧೀನಪಡಿಸಿದ ಜಮೀನುಗಳಿಗೆ ಪರಿಹಾರ ಪಾವತಿಸಿ ನಂತರ ಜಮೀನುಗಳನ್ನು ವಶಕ್ಕೆ ಪಡೆದು ಕೋರಿಕೆ ಇಲಾಖೆಗೆ ಹಸ್ತಾಂತರಿಸಬೇಕು. ಈ ರೀತಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಗೊಳ್ಳಬೇಕಾದಾಗ ಕೋರಿಕೆ ಇಲಾಖೆಯಿಂದ ಹಿಡಿದು ಕಂದಾಯ ಇಲಾಖೆವರೆಗೂ ಪ್ರತಿ ಹಂತದಲ್ಲಿಯೂ ಸಂಬಂಧಪಟ್ಟ ನೌಕರರಿಗೆ , ಅಧಿಕಾರಿಗಳಿಗೆ ಜವಾಬ್ದಾರಿ ಮತ್ತು ಹೊಣೆಗಾರಿಕೆ ಹಂಚಲಾಗಿರುತ್ತದೆ.

ಭೂ ಸ್ವಾಧೀನ ಪ್ರಕ್ರಿಯೆ ಎಂದರೇ ಕೇವಲ ಭೂ ಸ್ವಾಧೀನ ಕಾಯ್ದೆಯಡಿ ಮಾತ್ರ ಕಾರ್ಯನಿರ್ವಹಿಸದೇ ಸಂಬಂಧಪಟ್ಟ ಪ್ರಾಧಿಕಾರವು ಕಂದಾಯ ಇಲಾಖೆಗೆ ಭೂ ಕಂದಾಯ ಕಾಯ್ದೆ, ಭೂ ಕಂದಾಯ ನಿಯಮಗಳು, ಭೂ ಮಂಜೂರಾತಿ ನಿಯಮಗಳು ಹಾಗೂ ಕರ್ನಾಟಕ ಸರ್ವೇ ಕೈಪಿಡಿ ಪ್ರಕಾರ ಕಾರ್ಯನಿರ್ವಹಿಸಬೇಕು. ಅಲ್ಲದೇ ಭೂಮಿಯ ಮೇಲಿನ ಹಕ್ಕು ಭೂ ಕಂದಾಯ ಕಾಯ್ದೆ ಅನ್ವಯ ರಾಜ್ಯ ಸರ್ಕಾರಕ್ಕೆ ನಿಹಿತಗೊಂಡಿದ್ದರೂ ಸಹ ಆ ಭೂಮಿಯಲಲ್ಇ ಸರ್ಕಾರಿ ಮಾಲೀಕತ್ವದ ಮತ್ತು ಖಾಸಗಿ ಮಾಲೀಕತ್ವದ ಜಮೀನುಗಳನ್ನಾಗಿ ವಿಂಗಡಿಸಿದೆ.

ಖಾಸಗಿ ಮಾಲೀಕತ್ವದ ಜಮೀನಿನ ಹಕ್ಕು, ಭಾರತ ಸಂವಿಧಾನದ ಅನುಚ್ಛೇಧ 330 ಎ ಅಡಿ ಬರಲಿದೆ. ಮತ್ತು ಇದು ಕಾನೂನಾತ್ಮಕ ಹಕ್ಕಾಗಿದೆ. ಹೀಗಾಗಿ ಸಾರ್ವಜನಿಕ ಯೋಜನೆಗಳಿಗಾಗಿ ಖಾಸಗಿ ಜಮೀನುಗಳನ್ನು ಪರಿಹಾರ ಪಾವತಿಸುವ ಮೂಲಕ ಭೂ ಸ್ವಾಧೀನ ಕಾಯ್ದೆಯಡಿ ಜಮೀನುಗಳನ್ನು ಸರ್ಕಾರಕ್ಕೆ  ನಿಹಿತಗೊಳಿಸಬೇಕು. ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸಾರ್ವಜನಿಕ ಉಪಯೋಗಕ್ಕೆ ತೆರೆದಿಡಬೇಕು.

ಕೋರಿಕೆ ಇಲಾಖೆಯಿಂದ ಅವಶ್ಯವಿರುವ ಜಮೀನಿಗೆ ಅಂದಾಜು ನಕ್ಷೆಯನ್ನು ತಯಾರಿಸಿಕೊಂಡು ನಂತರ ಜಮೀನಿಗೆ ಪ್ರಸ್ತಾವನೆಯನ್ನು ಸಲ್ಲಿಲಸಬೇಕಿತ್ತು. ಅಲ್ಲದೇ ಭೂ ಸ್ವಾಧೀನಗೊಂಡ ನಂತರ ತಮ್ಮ ಇಲಾಖೆಯ ವ್ಯಾಪ್ತಿಗೆ ಭೂ ದಾಖಲೆಗಳಲ್ಲಿ  ಇಂಡೀಕರಣಗೊಳಿಸುವುದು ಭೂ ಕೋರಿಕೆ ಇಲಾಖೆಗಳ ನೇರ ಜವಾಬ್ದಾರಿಯಾಗಿದೆ. ಹಾಗೂ ಕೋರಿಕೆ ಇಲಾಖೆಗಳು ಭೂ ಕೋರಿಕೆಗಾಗಿ ಪ್ರಸ್ತಾವನೆ ಸಲ್ಲಿಸಬೇಕಾದ ಸಂದರ್ಭಗಳಲ್ಲಿ ಈ ಹಿಂದೆ ಯಾವ ಉದ್ದೇಶಕ್ಕೂ ಭೂಸ್ವಾಧೀನವಾಗಿರುವುದಿಲ್ಲವೆಂದು ದೃಢೀಕರಣ ಪತ್ರ ನೀಡಬೇಕು. ನಂತರ ಕೋರಿಕೆ ಇಲಾಖೆಯ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ನಂತರ ಅವಶ್ಯ ಜಮೀನುಗಳ ಸರ್ವೆ ನಡೆಸಲು ಸ್ಥಳ ತನಿಖೆ ನಡೆಸಬೇಕು. ನಂತರ ಭೂ ಸ್ವಾಧೀನಕ್ಕಾಗಿ ಅಧಿಸೂಚನೆ ಹೊರಡಿಸಿದ ನಂತರ ವಿಶೇಷ ಭೂ ಸ್ವಾಧೀನಾಧಿಕಾರಿಗಳು ಭೂ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ಆದರೆ ಹಿಡಕಲ್ ಜಲಾಶಯ ಹಿನ್ನೀರಿನ ಜಲಾಶಯ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಈ ಯಾವ ಪ್ರಕ್ರಿಯೆಗಳೂ ನಡೆದಿಲ್ಲ.

 

 

ಅಲ್ಲದೇ ವಿಶೇಷ ಭೂ ಸ್ವಾಧೀನಾಧಿಕಾರಿಗಳು ಹಾಗೂ ಕೋರಿಕೆ ಇಲಾಖೆಯು ಇದಕ್ಕೆ ಪ್ರತ್ಯಕ್ಷ ಕಾರಣವಾಗಿದೆ. ಇನ್ನುಳಿದ ಕಂದಾಯ ಇಲಾಖೆಯ ಪ್ರಾಧಿಕಾರಗಳ ಸಂಬಂಧಿತ ಭೂ ಮಾಪನ ಕಚೇರಿಯ ಹಾಗೂ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳೂ ಪರೋಕ್ಷವಾಗಿ ಕಾರಣರಾಗಿದ್ದಾರೆ. ಸರ್ಕಾರದ ಹಣವು ದುರುಪಯೋಗ ಮಾಡಲು ಇವರೂ ಸಹ ಕಾರಣಕರ್ತರಾಗಿದ್ದಾರೆ ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಿದೆ.

‘ಈ ವಿವರಣೆಗಳನ್ನು ಪರಿಶೀಲಿಸಿ ತನಿಖಾ ತಂಡವು ಸಲ್ಲಿಸಿರುವ ವರದಿಗೆ ಹಾಗೂ ಸಂಬಂಧಿತ ದಾಖಲಾತಿಗಳನ್ನು  ಕೂಲಂಕಷವಾಗಿ ಪರಿಶೀಲಿಸಿ ತಪ್ಪಿತಸ್ಥರ ಅಧಿಕಾರಿ, ನೌಕರರನ್ನು ಗುರುತಿಸಿ ಸಂಬಂಧಿಸಿದವರ ಮೇಲೆ ಇಲಾಖೆ ವಿಚಾರಣೆ ನಡೆಸುವ ಸಲುವಾಗಿ ಆರೋಪ ಪಟ್ಟಿ ಸಿದ್ಧಪಡಿಸಬೇಕು. ಪ್ರತಿಯೊಬ್ಬ ಅಧಿಕಾರಿ, ನೌಕರರಿಗೆ ಪ್ರತ್ಯೇಕವಾದ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಬೇಕು ಎಂದು ಪ್ರಾದೇಶಿಕ ಆಯುಕ್ತರನ್ನು ಕೋರಬಹುದು,’ ಎಂದು ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಟಿಪ್ಪಣಿ ಹಾಳೆಯಲ್ಲಿ ಸೂಚಿಸಿದ್ದರು.

2 ವರ್ಷವಾಗಿದ್ದರೂ ಸಿದ್ಧಗೊಳ್ಳದ ಆರೋಪಪಟ್ಟಿ

ಈ ಪ್ರಕರಣಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಅಧಿಕಾರಿ, ನೌಕರರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಬೇಕು ಎಂದು 2022ರಲ್ಲೇ ಕಂದಾಯ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಸೂಚಿಸಿದ್ದರು.

 

 

ಆದರೂ ಸಹ 2024ರವರೆಗೂ ಯಾವುದೇ ಕ್ರಮ ವಹಿಸಿರಲಿಲ್ಲ. ಹೀಗಾಗಿ ಕಡತವು ಇತ್ಯಥವಾಗದೇ ಸರ್ಕಾರಲ್ಲಿಯೇ ಸುಮಾರು ಒಂದು ವರ್ಷದಿಂದ ಬಾಕಿ ಉಳಿದಿತ್ತು.

 

 

ಆದರೂ ಈ ಬಗ್ಗೆ ಕ್ರಮ ವಹಿಸಿರಲಿಲ್ಲ. ಹೀಗಾಗಿ ಮತ್ತೊಮ್ಮೆ  ಈ ಬಗ್ಗೆ ವೈಯಕ್ತಿಕ ಗಮನಹರಿಸಿ ತುರ್ತಾಗಿ ದೋಷಾರೋಪಣೆ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು 2022ರ  ನವೆಂಬರ್ 17

 

 

ಮತ್ತು 2024ರ ಮಾರ್ಚ್‌ 2ರಂದೇ ಬೆಳಗಾವಿ ಉಪ ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ನೆನಪೋಲೆಗಳನ್ನು ಬರೆದಿತ್ತು.

 

 

 

2025ರಲ್ಲಿ ಕ್ಲೀನ್ ಚಿಟ್ ಸಿಕ್ಕಿದ್ಹೇಗೆ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಈ ಪ್ರಕರಣದ ಕುರಿತು ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ನೀಡಿದ್ದ ಮೊದಲ ತನಿಖಾ ವರದಿಯನ್ನು ಮರು ಪರಿಶೀಲಿಸಲು ಹಿಡಕಲ್ ಡ್ಯಾಂನ ವಿಶೇಷ ಭೂ ಸ್ವಾಧೀನಾಧಿಕಾರಿಗಳ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿತ್ತು. ಈ ಸಮಿತಿಯು 2022ರಲ್ಲಿಯೇ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ನೀಡಿದ್ದ ತನಿಖಾ ವರದಿಯನ್ನು ಸಮಗ್ರವಾಗಿ ಮರು ಪರಿಶೀಲಿಸಿತ್ತು.

 

 

ಮಾಸ್ತಿಹೊಳಿ ಗ್ರಾಮಕ್ಕೆ ಸಂಬಂಧಿಸಿದಂತೆ 200ರಿಂದ 2016ರವರೆಗೆ ಐದು ಪ್ರಕರಣಗಳಲ್ಲಿ (LAQ.JSR.01/13-14, LAQ.JSR.01/11/13-14, LAQ.JSR/1863/08-09, LAQ.JSR/1265/39 A, LAQ.JSR/1266/101 A) ಭೂ ಸ್ವಾಧೀನ ಪ್ರಕ್ರಿಯೆ ಜರುಗಿದೆ ಎಂದು ಮರು ಪರಿಶೀಲನಾ ತನಿಖಾ ಸಮಿತಿಯು ಹೇಳಿತ್ತು. 2013-14 ಮತ್ತು 2015-16ರಲ್ಲಿ ಎರಡನೇ ಬಾರಿ ಭೂಸ್ವಾಧೀನಪಡಿಸಲಾಗಿದೆ ಎನ್ನಲಾದ ಕಡತಗಳಲ್ಲಿ ನಮೂದಿಸಿರುವ ಸರ್ವೆ ನಂಬರ್‍‌ಗಳಲ್ಲಿನ (LAQ.JSR.01/13-14, LAQ.JSR.01/11/13-14) ಜಮೀನುಗಳು ಜೆಎಂಸಿ ಮತ್ತು ಪಿಟಿ ಶೀಟ್ ಆಧಾರದ ಮೇಲೆ 1962, 1963, 1972, 1974ರ ಅವಧಿಯಲ್ಲಿ ಭೂ ಸ್ವಾಧೀನಕ್ಕೊಳಪಟ್ಟಿತ್ತು ಎಂದು ಈ ಸಮಿತಿಯು ಹೇಳಿತ್ತು.

 

 

ಅಲ್ಲದೇ ಅವಾರ್ಡ್‌ ಖಚಿತವಾದಲ್ಲಿ ಜೆಎಂಸಿ ಮತ್ತು ಪಿಟಿ ಶೀಟ್ ಪ್ರಕಾರ ಈಗಾಗಲೇ ಸ್ವಾಧೀನಕ್ಕೊಳಪಡಿಸಿರುವ  ಕ್ಷೇತ್ರವು ಪುನರವಾರ್ತನೆಯಾಗಿದೆ ಎಂದು ವಿವರಿಸಿತ್ತು.

 

 

ಒಟ್ಟು  22 ಸರ್ವೆ ನಂಬರ್‍‌ಗಳಲ್ಲಿನ 50 ಎಕರೆ 5 ಗುಂಟೆ ಜಮೀನು 1976ರಿಂದ 1980ರ ಅವಧಿಯಲ್ಲಿ ಸ್ವಾಧೀನಪಡಿಸಿ ಪರಿಹಾರ ಧನ ಐ ತೀರ್ಪನ್ನು ರಚಿಸಿರುವ ದಾಖಲೆಗಳು ಮಾತ್ರ ಲಭ್ಯವಿವೆ. ಉಳಿದ 37 ಸರ್ವೆ ನಂಬರ್‍‌ಗಳಲ್ಲಿನ ಜಮೀನುಗಳಿಗೆ ರಚಿಸಿರುವ ಅವಾರ್ಡ್ ದಾಖಲೆಗಳು ಕಂಡು ಬಂದಿಲ್ಲ ಎಂದು ಹೇಳಿತ್ತು. ಆದರೆ ಹಿಡಕಲ್ ಡ್ಯಾಂ ವಿಶೇಷ ಭೂಸ್ವಾಧೀನಾಧಿಕಾರಿಗಳು 1980ರಲ್ಲಿ ತಯಾಋಇಸಿದ್ದ ನಮೂನೆಯಲ್ಲಿ ನ ಸರ್ವೆ ನಂಬರ್‍‌ಗಳ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಂಡು ಪೊರಿಹಾಋ ನೀಡಿ ವಶಕ್ಕೆ ಪಡೆದಿರುವ ಬಗ್ಗೆ ಕಡತ ಸಂಖ್ಯೆ ಮತ್ತು ದಿನಾಂಕಗಳು ನಮೂದಾಗಿದ್ದವು.

 

 

ಆದರೆ 1980ರ ಅಕ್ಟೋಬರ್ 31ರಂದು ನಮೂನೆ 1ರಲ್ಲಿ ನಮೂದಿಸಿದ್ದ ಈ ಸರ್ವೆ ನಂಬರ್‍‌ಗಳಲ್ಲಿನ ಕ್ಷೇತ್ರವನ್ನು ಭೂ ಸ್ವಾಧೀನ ಪ್ರಕ್ರಿಯೆಯ ಕಲಂ 4(1), ಕಲಂ 6(1)ರ ದಿನಾಂಕ, ಅವಾರ್ಡ್‌, ಕಡತ ಸಂಖ್ಯೆ, ವಶಕ್ಕೆ ಪಡೆದಿರುವ ದಿನಾಂಕ ನಮೂದಿಸಿದೆ. ಆದರೆ ಪರಿಹಾರ ನೀಡಿಕೆ ಮತ್ತು ವಿತರಣೆ ದಿನಾಂಖದ ಬಗ್ಗೆ ಯಾವುದೇ ನಮೂದು ಮಾಡಿರಲಿಲ್ಲ ಎಂಬುದನ್ನು ಮರು ಪರಿಶೀಲನಾ ತನಿಖಾ ಸಮಿತಿಯು ಪತ್ತೆ ಹಚ್ಚಿತ್ತು.

 

 

ಹಾಗೆಯೇ ಹಿಡಕಲ್ ಡ್ಯಾಂ ಭೂ ಸ್ವಾಧೀನಾಧಿಕಾರಿಗಳ ಕಚೇರಿಯಲ್ಲಿ ಕಡತ, ದಾಖಲೆಗಳ ಶೋಧ ಕಾರ್ಯವನ್ನು ಕೈಗೊಂಡಿತ್ತು. ಈ ವೇಳೆ, ಗ್ರಾಮದ ಭೂ ಸ್ವಾಧೀನಕ್ಕೆ ಸಂಬಂಧಿಸಿದ ಯಾವುದೇ ಕಡತಗಳಾಗಲೀ ಅಥವಾ ಪರಿಹಾರ ಧನ ವಿತರಣೆ ಮಾಡಿದ ಬಗ್ಗೆ ಯಾವುದೇ ರಿಜಿಸ್ಟರ್‍‌ಗಳೂ ಇರಲಿಲ್ಲ. ಮಾಸ್ತಿಹೊಳಿ ಗ್ರಾಮಕ್ಕೆ ಸಂಬಂಧಿಸಿದ 50 ವರ್ಷಗಳ ಹಿಂದಿನ ಕಡತ, ದಾಖಲಾತಿಗಳು ನಶಿಸಿ ಹೋಗಿವೆ. ಪ್ರಸ್ತುವ ರೆಕಾರ್ಡ್‌ ರೂಂನಲ್ಲಿಯೂ ದಾಖಲೆಗಳನ್ನು ಶೋಧಿಸಿದ್ದರೂ ಯಾವುದೇ ದಾಖಲೆಗಳೂ ಕಂಡು ಬಂದಿಲ್ಲ ಎಂದು ವರದಿ ಮಾಡಿದ್ದರು.

26.96 ಕೋಟಿ ನಷ್ಟಕ್ಕೆ ದಾಖಲೆಗಳೇ ಇಲ್ಲವೆಂದ ಸಮಿತಿ

ಈ ಪ್ರಕರಣದಲ್ಲಿ 26.96 ಕೋಟಿ ರು ನಷ್ಟವಾಗಿರುವುದನ್ನು 2022ರಲ್ಲಿನ ತನಿಖಾ ತಂಡವು  ಸಾಬೀತುಪಡಿಸಿತ್ತು. ಆದರೆ 2025ರಲ್ಲಿ ನ ತನಿಖಾ ಸಮಿತಿಯು 29.96 ಕೋಟಿ ನಷ್ಟದ ಕುರಿತು ದಾಖಲೆಗಳೇ ಇಲ್ಲ ಎಂದು ಷರಾ ಬರೆದಿದೆ.  22 ಸರ್ವೆ ನಂಬರ್‍‌ಗಳಲ್ಲಿನ ಒಟ್ಟು 50.05 ಎಕರೆ ಜಮೀನಿಗೆ ಈ ಹಿಂದೆ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಂಡು ಅವಾರ್ಡ್‌ ರಚಿಸಿರುವುದು ಕಂಡು ಬಂದಿದೆ ಎಂದಿರುವ ಎರಡನೇ ತನಿಖಾ ಸಮಿತಿಯು, ಪರಿಹಾರ ವಿತರಿಸಿದ್ದರ ಬಗ್ಗೆ ಯಾವುದೇ ನಗದು ಪುಸ್ತಕ, ದಾಖಲೆಗಳು ಕಚೇರಿಯಲ್ಲಿ ಕಂಡುಬಂದಿಲ್ಲ. ಬದಲಿಗೆ 1962ರಿಂದ 1980ರ ಅವಧಿಯಲ್ಲಿ ಸ್ವಾಧೀನಕ್ಕೊಳಪಡಿಸಿರುವ ಅವಾರ್ಡ್‌ ಪ್ರತಿಗಳು ಮಾತ್ರ ಕಂಡುಬಂದಿವೆ. ಪರಿಹಾರ ನೀಡಿರುವ ಅಔಉದೇ ದಾಖಲೆಗಳು ಭೂ ಸ್ವಾಧೀನಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿಲ್ಲ ಎಂದು ವಿವರಿಸಿದೆ.

ಒಂದೇ ಸರ್ವೆ ನಂಬರ್‍‌ಗೆ ಎರಡು ಬಾರಿ ಅವಾರ್ಡ್‌ ಆಗಿತ್ತೇ?

ಮಂಜೂರಾದ ಅವಾರ್ಡ್‌ಗಳಲ್ಲಿ ಜೆಎಂಸಿ ಪ್ರಕಾರ ಹೆಚ್ಚುವರಿ ಕ್ಷೇತ್ರವು ಭೂ ಸ್ವಾಧೀನಗೊಂಡ ಸಂದರ್ಭದಲ್ಲಿ ಒಂದೇ ಸರ್ವೆ ನಂಬರ್‍‌ನ್ನು ಮೂಲ ಪ್ರಕರಣದಲ್ಲಿ ಭಾಗಶಃ ಕ್ಷೇತ್ರ ಹಾಗೂ ಹೆಚ್ಚುವರಿ ಕ್ಷೇತ್ರವನ್ನು ಮೂಲ ಪ್ರಕರಣದ ಹೆಚ್ಚುವರಿ ಪ್ರಕರಣದಲ್ಲಿ ಅವಾರ್ಡ್‌ ಮಾಡಲಾಗುತ್ತೆ. ಹೀಗಾಗಿ ಒಂದೇ ಸರ್ವೆ ನಂಬರ್‍‌ನ್ನು ಎರಡು ಬಾರಿ ಅವಾರ್ಡ್‌ ಮಾಡುವ ಸಂದರ್ಭ ಉಂಟಾಗುತ್ತದೆ ಎಂದು ಎರಡನೇ ತನಿಖಾ ಸಮಿತಿಯು ಹೇಳಿದೆ. ಅದೇ ಕಾರಣಕ್ಕೆ ಮಾಸ್ತಿಹೊಳಿ ಗ್ರಾಮದ ಕೆಲವು ಸರ್ವೆ ನಂಬರ್‍‌ಗಳಿಗೆ ಸಂಬಂಧಿಸಿದಂತೆ ಎರಡು ಬಾರಿ ಅವಾರ್ಡ್‌ ಆಗಿರುವುದು ಕಂಡು ಬರುತ್ತದೆ. ಆದರೆ ಲಭ್ಯವಿರುವ ದಾಖಲೆಗಳ ಪ್ರಕಾರ ಎರಡು ಬಾರಿ ಪರಿಹಾರ ನೀಡಿಲ್ಲ ಎಂದು ಹೇಳಿದೆ.

ಸರ್ಕಾರಕ್ಕೆ ನಷ್ಟವೇ ಆಗಿಲ್ಲವೆಂದ ಎರಡನೇ ತನಿಖಾ ಸಮಿತಿ

22 ಸರ್ವೆ ನಂಬರ್‍‌ಗಳಲ್ಲಿನ 50 ಎಕರೆ 05 ಗುಂಟೆ ವಿಸ್ತೀರ್ಣದ ಜಮೀನಿಗೆ 1962ರಿಂದ 1980ರ ಅವಧಿಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಂಡು ಅವಾರ್ಡ್ ರಚಿಸಿದ್ದರೂ ಸಹ ಪರಿಹಾರ ವಿತರಿಸಿಲ್ಲ. 2022ರಲ್ಲಿ ನೀಡಿರುವ ತನಿಖಾ ವರದಿಯಲ್ಲಿ ಪ್ರಸ್ತಾಪಿಸಿರುವ 22 ಸರ್ವೆ ನಂಬರ್‍‌ಗಳು 2015 ಮತ್ತು 2016ರ ಅನುಮೋದಿತ ಐ ತೀರ್ಪಿನಲ್ಲಿ ಪುನರಾವರ್ತನೆ ಆಗಿರುವುದಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಸರ್ಕಾರಕ್ಕೆ ಯಾವುದೇ ನಷ್ಟವಾಗಿರುವುದಿಲ್ಲ ಎಂದು ತೀರ್ಮಾನಿಸಿರುವ ಎರಡನೇ ತನಿಖಾ ಸಮಿತಿಯು ಈ ಪ್ರಕರಣವನ್ನು ಇದೇ ಹಂತದಲ್ಲಿ ಮುಕ್ತಾಯಗೊಳಿಸಬೇಕು ಎಂದು ಮನವಿ ಮಾಡಿರುವುದು ವರದಿಯಿಂದ ತಿಳಿದು ಬಂದಿದೆ.

ಈ ವರದಿಯನ್ನು ಈಗಿನ ಕಾಂಗ್ರೆಸ್‌ ಸರ್ಕಾರವು ಒಪ್ಪಿಕೊಂಡಿದೆ.

 

 

ಅಲ್ಲದೇ ಇದೇ ವರದಿ ಆಧರಿಸಿ ಈ ಪ್ರಕರಣವನ್ನು ಮುಕ್ತಾಯಗೊಳಿಸಬೇಕು ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಿಗೆ 2026ರ ಜನವರಿ 19ರಂದು ನಿರ್ದೇಶಿಸಿರುವುದು ಗೊತ್ತಾಗಿದೆ.

Hot this week

ಬೆಳೆ ಹವಾಮಾನ ನಿಗಾ ಸಭೆ ನಡೆಸಿಲ್ಲ, ಮಾಹಿತಿ ವ್ಯವಸ್ಥೆಯೂ ಇಲ್ಲ; ಸಿಎಜಿಯನ್ನೂ ತಪ್ಪುದಾರಿಗೆಳೆದ ಸರ್ಕಾರ

ಬೆಂಗಳೂರು;  ರಾಜ್ಯದಲ್ಲಿ ಬರ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಬೆಳೆ ಹವಾಮಾನ ನಿಗಾ...

ರಾಡಾರ್ ಸ್ಟ್ರೀಮ್‌ ಗೇಜ್‌, ವೈರ್‍‌ಲೆಸ್‌ ಸಾಧನ ಅಳವಡಿಕೆ; ನಡೆಯದ ತಾಂತ್ರಿಕ ಪರಿಶೀಲನೆ, 3.54 ಕೋಟಿ ವ್ಯರ್ಥ

ಬೆಂಗಳೂರು;  ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹದ ಮುನ್ನೆಚ್ಚರಿಕೆಗಾಗಿ 2.45 ಕೋಟಿ...

ಎಂ ಆರ್ ಸೀತಾರಾಂ ಕುಟುಂಬ ಸದಸ್ಯರ ವಿರುದ್ಧ ಭೂಕಬಳಿಕೆ ಆರೋಪ; ದೂರು ಮರೆಮಾಚಿತ್ತೇ ಕಂದಾಯ ಇಲಾಖೆ?

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಅಕ್ಲೇನಹಳ್ಳಿ...

ನರೇಗಾ ಅಕ್ರಮ; 2 ವರ್ಷದಲ್ಲಿ 105.1 ಕೋಟಿ ದುರುಪಯೋಗ, 12.34 ಕೋಟಿಯಷ್ಟೇ ವಸೂಲು

  ಬೆಂಗಳೂರು; ಕಳೆದ ಮೂರು ವರ್ಷಗಳಲ್ಲಿ  ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 64,806 ಪ್ರಕರಣಗಳಲ್ಲಿ...

ಚೆಮನೂರು ಬ್ಲಾಕ್‌ನಲ್ಲಿ ಗಣಿಗಾರಿಕೆ; ಅದಾನಿ ಸಮೂಹದ ಎಸಿಸಿಗೆ ಲೆಟರ್ ಆಫ್ ಇಂಟೆಂಟ್‌ ಕೊಡಲು ಗಣಿ ಇಲಾಖೆ ಉತ್ಸುಕ!

ಬೆಂಗಳೂರು; ಭವಿಷ್ಯದ ಸರ್ಕಾರಿ ಟೆಂಡರ್, ಹರಾಜು ಮತ್ತು ಗಣಿಗಾರಿಕೆ ಸಂಬಂಧಿತ ಪ್ರಕ್ರಿಯೆಗಳಲ್ಲಿ...

Topics

ಬೆಳೆ ಹವಾಮಾನ ನಿಗಾ ಸಭೆ ನಡೆಸಿಲ್ಲ, ಮಾಹಿತಿ ವ್ಯವಸ್ಥೆಯೂ ಇಲ್ಲ; ಸಿಎಜಿಯನ್ನೂ ತಪ್ಪುದಾರಿಗೆಳೆದ ಸರ್ಕಾರ

ಬೆಂಗಳೂರು;  ರಾಜ್ಯದಲ್ಲಿ ಬರ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಬೆಳೆ ಹವಾಮಾನ ನಿಗಾ...

ರಾಡಾರ್ ಸ್ಟ್ರೀಮ್‌ ಗೇಜ್‌, ವೈರ್‍‌ಲೆಸ್‌ ಸಾಧನ ಅಳವಡಿಕೆ; ನಡೆಯದ ತಾಂತ್ರಿಕ ಪರಿಶೀಲನೆ, 3.54 ಕೋಟಿ ವ್ಯರ್ಥ

ಬೆಂಗಳೂರು;  ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹದ ಮುನ್ನೆಚ್ಚರಿಕೆಗಾಗಿ 2.45 ಕೋಟಿ...

ಎಂ ಆರ್ ಸೀತಾರಾಂ ಕುಟುಂಬ ಸದಸ್ಯರ ವಿರುದ್ಧ ಭೂಕಬಳಿಕೆ ಆರೋಪ; ದೂರು ಮರೆಮಾಚಿತ್ತೇ ಕಂದಾಯ ಇಲಾಖೆ?

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಅಕ್ಲೇನಹಳ್ಳಿ...

ನರೇಗಾ ಅಕ್ರಮ; 2 ವರ್ಷದಲ್ಲಿ 105.1 ಕೋಟಿ ದುರುಪಯೋಗ, 12.34 ಕೋಟಿಯಷ್ಟೇ ವಸೂಲು

  ಬೆಂಗಳೂರು; ಕಳೆದ ಮೂರು ವರ್ಷಗಳಲ್ಲಿ  ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 64,806 ಪ್ರಕರಣಗಳಲ್ಲಿ...

ಚೆಮನೂರು ಬ್ಲಾಕ್‌ನಲ್ಲಿ ಗಣಿಗಾರಿಕೆ; ಅದಾನಿ ಸಮೂಹದ ಎಸಿಸಿಗೆ ಲೆಟರ್ ಆಫ್ ಇಂಟೆಂಟ್‌ ಕೊಡಲು ಗಣಿ ಇಲಾಖೆ ಉತ್ಸುಕ!

ಬೆಂಗಳೂರು; ಭವಿಷ್ಯದ ಸರ್ಕಾರಿ ಟೆಂಡರ್, ಹರಾಜು ಮತ್ತು ಗಣಿಗಾರಿಕೆ ಸಂಬಂಧಿತ ಪ್ರಕ್ರಿಯೆಗಳಲ್ಲಿ...

ರೋಹಿತ್ ವೇಮುಲ ಕಾಯ್ದೆ; ವ್ಯಾಖ್ಯಾನಗಳು ಅಸ್ಪಷ್ಟ, ಕಾನೂನು ಬಲವಿಲ್ಲ, ವಿಧೇಯಕವೇ ಅಪೂರ್ಣ

ಬೆಂಗಳೂರು; ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಯಾರೊಬ್ಬರೂ ಜಾತಿ ಆಧಾರದಲ್ಲಿ ತಾರತಮ್ಯ ಎದುರಿಸಬಾರದು...

ಗ್ರಾಮಠಾಣ ಜಮೀನು ಅದಲು-ಬದಲು; ಆರ್ಥಿಕ ಇಲಾಖೆ ಆಕ್ಷೇಪ ಬದಿಗೊತ್ತಿ ಎಂ ಆರ್ ಸೀತಾರಾಂ ಕುಟುಂಬದ ಬೆನ್ನಿಗೆ ನಿಂತ ಸರ್ಕಾರ

ಬೆಂಗಳೂರು; ಸರ್ಕಾರಿ ಭೂಮಿಗೆ ರಸ್ತೆಯ ಸಂಪರ್ಕ ಹೊಂದಿಲ್ಲದಿರುವ, ರಸ್ತೆ ಸಂಪರ್ಕ ಕಲ್ಪಿಸದೇ...

ಅದಾನಿ ಎಸಿಸಿ ಲಿಮಿಟೆಡ್‌ನಿಂದ ಅಕ್ರಮ ಗಣಿಗಾರಿಕೆ; ನಿರ್ದೇಶಕರು, ಅಧಿಕಾರಿಗಳ ವಿರುದ್ಧ ಲೋಕಾ ತನಿಖೆಗೆ ಶಿಫಾರಸ್ಸು, ಕಡತಕ್ಕೆ ಧೂಳು

ಬೆಂಗಳೂರು;  ಕಲ್ಬುರ್ಗಿಯ ವಾಡಿಯಲ್ಲಿ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್ ಪ್ರೈವೈಟ್ ಲಿಮಿಟೆಡ್...

Related Articles

Popular Categories

error: Content is protected !!