ಕವಿಕಾ,ಎನ್‌ಜಿಇಎಫ್‌ಗೆ ಚೊಂಬು; ಕೇರಳದಿಂದ ಪ್ರತೀ ವರ್ಷವೂ ಬಹುಕೋಟಿ ವೆಚ್ಚದಲ್ಲಿ ಟ್ರಾನ್ಸ್‌ಫಾರ್ಮ್‌ರ್ ಖರೀದಿ

ಬೆಂಗಳೂರು;  ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಪ್ರತೀ ವರ್ಷವೂ ನೇರವಾಗಿ  ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯಿಂದಲೇ  ಮೂರ್ನಾಲ್ಕು ಬಾರಿ  ವಿದ್ಯುತ್‌ ಪರಿವರ್ತಕಗಳನ್ನು ನೇರವಾಗಿ  ಖರೀದಿಸಿದೆ.

 

ಹುಬ್ಬಳ್ಳಿಯಲ್ಲಿರುವ ಎನ್‌ಜಿಎಫ್‌, ಬೆಂಗಳೂರಿನಲ್ಲಿರುವ ಕರ್ನಾಟಕ ವಿದ್ಯುತ್ ಕಾರ್ಖಾನೆಯನ್ನು ಬದಿಗೊತ್ತಿ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯಿಂದಲೇ ವಿದ್ಯುತ್‌ ಪರಿವರ್ತಕಗಳನ್ನು  ಖರೀದಿಸುತ್ತಿರುವ ಇಂಧನ ಇಲಾಖೆಯು ಇದಕ್ಕೆ ಯಾವುದೇ ಸಮರ್ಥನೆಗಳನ್ನೂ ಒದಗಿಸಿಲ್ಲ.

 

ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯಿಂದಲೇ 2019ರಿಂದ 2025ರವರೆಗೆ 180.37 ಕೋಟಿ ರು ವೆಚ್ಚದಲ್ಲಿ ವಿದ್ಯುತ್ ಪರಿವರ್ತಕಗಳನ್ನು ನೇರವಾಗಿ ಖರೀದಿಸಿದೆ. 2026ರಲ್ಲಿಯೂ ಇದೇ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯಿಂದಲೇ 174 ಕೋಟಿ ವೆಚ್ಚದಲ್ಲಿ ವಿದ್ಯುತ್ ಪರಿವರ್ತಕಗಳನ್ನು ನೇರವಾಗಿ ಖರೀದಿಸಲು ಮುಂದಾಗಿದೆ.

 

ಇದೇ  ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯು, ತಾನೇ  ನೀಡಿದ್ದ ದರಗಳನ್ನು  ಕೇವಲ ಎರಡು ತಿಂಗಳಲ್ಲೇ ಹೆಚ್ಚು ಮಾಡಿತ್ತು. ಆದರೆ ರಾಜ್ಯ ಇಂಧನ ಇಲಾಖೆಯು ಇದಕ್ಕೆ  ಯಾವುದೇ ಸಮರ್ಥನೆಗಳನ್ನೂ ನೀಡಿರಲಿಲ್ಲ.

 

ಇದರ ಬೆನ್ನಲ್ಲೇ ಆರ್‍‌ಟಿಐ ಮೂಲಕ ದಿ ಫೈಲ್‌,  ಮತ್ತಷ್ಟು ದಾಖಲೆಗಳನ್ನು ಪಡೆದಿದೆ.  ಅಲ್ಲದೇ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯಿಂದ ವಿದ್ಯುತ್‌ ಪರಿವರ್ತಕಗಳನ್ನು ಖರೀದಿಸಲು 4 ಜಿ ವಿನಾಯಿತಿ ನೀಡಿದ್ದ ಪ್ರಕ್ರಿಯೆಗಳಲ್ಲಿನ ಹಲವು ನ್ಯೂನತೆಗಳನ್ನೂ ಬಹಿರಂಗಪಡಿಸುತ್ತಿದೆ.

 

ಅಲ್ಲದೇ 2019, 2024 ಮತ್ತು 2025ರಲ್ಲಿಯೂ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯಿಂದಲೇ ವಿದ್ಯುತ್ ಪರಿವರ್ತಕಗಳನ್ನು ಖರೀದಿಸಲು ಆರ್ಥಿಕ ಇಲಾಖೆಯು  4 ಜಿ ವಿನಾಯಿತಿ ನೀಡಿದೆ.

 

2019-20ನೇ ಸಾಲಿನಲ್ಲಿ ಅಗತ್ಯವಿದ್ದ ವಿವಿಧ ಸಾಮರ್ಥ್ಯದ ವಿದ್ಯುತ್ ವಿತರಣಾ ಪರಿವರ್ತಕಗಳನ್ನು 78.45 ಕೋಟಿ ರು ವೆಚ್ಚದಲ್ಲಿ ಕೇರಳ ಎಲೆಕ್ಟ್ರಿಕಲ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯಿಂದ ನೇರವಾಗಿ ಖರೀದಿಸಲು 2019ರ ಮೇ 13ರಲ್ಲೇ 4 ಜಿ ವಿನಾಯಿತಿ ನೀಡಿತ್ತು.

 

 

ಅದೇ ರೀತಿ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಸಂಸ್ಥೆಗಳು 2023-24ನೇ ಸಾಲಿಗಾಗಿ 4,500 ಪರಿವರ್ತಕಗಳನ್ನು 69.76 ಕೋಟಿ ರು ವೆಚ್ಚದಲ್ಲಿ ಕೇರಳ ಎಲೆಕ್ಟ್ರಿಕಲ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯಿಂದ ನೇರವಾಗಿ ಖರೀದಿಸಲು   2024ರ ಮಾರ್ಚ್‌ 16ರಂದು 4 ಜಿ ವಿನಾಯಿತಿ ನೀಡಿತ್ತು.

 

 

ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ 2025-26ನೇ ಸಾಲಿನಲ್ಲಿ ಅವಶ್ಯಕವಿರುವ 2,000 ವಿದ್ಯುತ್ ಪರಿವರ್ತಕಗಳನ್ನು 32.16 ಕೋಟಿ ರು ವೆಚ್ಚದಲ್ಲಿ ಕೇರಳ ಎಲೆಕ್ಟ್ರಿಕಲ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯಿಂದ ನೇರವಾಗಿ ಖರೀದಿಸಲು  2025ರ ಸೆಪ್ಟಂಬರ್ 2ರಂದು 4 ಜಿ ವಿನಾಯಿತಿ ನೀಡಿತ್ತು.

 

 

 

ಕೇರಳ ಸರ್ಕಾರಿ ಕಂಪನಿಗೆ 180.37 ಕೋಟಿ

 

2019ರಿಂದ 2025ರ ಸೆಪ್ಟಂಬರ್‍‌ವರೆಗೆ ಒಟ್ಟಾರೆ 180.37 ಕೋಟಿ ರು ವೆಚ್ಚದಲ್ಲಿ 6,500ಕ್ಕೂ ಹೆಚ್ಚು ಪರಿವರ್ತಕಗಳನ್ನು ಕೇರಳ ಎಲೆಕ್ಟ್ರಿಕಲ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯಿಂದಲೇ ನೇರವಾಗಿ ಖರೀದಿಸಿದೆ.  ಆರ್ಥಿಕ ಇಲಾಖೆಯು, 2025-26ನೇ ಸಾಲಿನಲ್ಲಿ 174 ಕೋಟಿ ರು ಮೊತ್ತದದಲ್ಲಿ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯಿಂದಲೇ ವಿದ್ಯುತ್ ಪರಿವರ್ತಕಗಳನ್ನು ಖರೀದಿಸಲು   4 ಜಿ ವಿನಾಯಿತಿ ನೀಡಲು ತಕರಾರು ಎತ್ತಿದೆ.

 

ಈ ಹಿಂದಿನ ಮೂರು ವರ್ಷಗಳಲ್ಲಿ ಕೆಇಎಲ್‌ಗೆ  4 ಜಿ ವಿನಾಯಿತಿ ನೀಡಿದ್ದ ಆರ್ಥಿಕ ಇಲಾಖೆಯು  2025-26ರಲ್ಲಿ ಕೆಇಎಲ್‌ಗೆ 4 ಜಿ ವಿನಾಯಿತಿ ನೀಡಲು ಆಕ್ಷೇಪ ಎತ್ತಿರುವುದು ಅದರ ದ್ವಿಮುಖ ನೀತಿಗೆ ಕೈಗನ್ನಡಿ ಹಿಡಿದಂತಾಗಿದೆ.

 

ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜನಿಯರಿಂಗ್‌ ಲಿಮಿಟೆಡ್‌ನಿಂದಲೇ 174.73 ಕೋಟಿ ರು ಮೊತ್ತದಲ್ಲಿ ವಿದ್ಯುತ್‌ ಪರಿವರ್ತಕಗಳನ್ನು ನೇರವಾಗಿ ಖರೀದಿಸಲು ಮುಂದಾಗಿದೆ.  ಇದಕ್ಕಾಗಿ 4 ಜಿ ವಿನಾಯಿತಿಯನ್ನೂ ಕೋರಿದೆ. ಒಂದೊಮ್ಮೆ ಇದಕ್ಕೆ ಸಹಮತಿ ದೊರೆತಲ್ಲಿ ಸ್ಪರ್ಧಾತ್ಮಕ ದರಗಳಿಂದ ಸಿಗಬಹುದಾದ ಕಡಿಮೆ ದರಗಳ ಲಾಭದಿಂದ ರಾಜ್ಯಕ್ಕೆ ವಂಚನೆಯಾಗಲಿದೆ. ಮತ್ತು ಸಂಪನ್ಮೂಲ ದುರ್ಬಳಕೆ ಅಗುವ ಸಾಧ್ಯತೆಯೂ ಇದೆ. ಅಲ್ಲದೇ ಕೆಟಿಪಿಪಿ ಆಶಯಕ್ಕೆ ವ್ಯತಿರಿಕ್ತವಾಗಲಿದೆ ಎಂದು ಆರ್ಥಿಕ ಇಲಾಖೆ ಹೇಳಿತ್ತು. ಈ ಸಂಬಂಧ ಕಡತವು ಚಲನವಲನದಲ್ಲಿದೆ.

 

ಹೆಸ್ಕಾಂ, ಬೆಸ್ಕಾಂ ಮತ್ತು ಮೆಸ್ಕಾಂಗಳು ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜನಿಯರಿಂಗ್‌ ಲಿಮಿಟೆಡ್‌ನಿಂದಲೇ ನೇರವಾಗಿ  ಒಟ್ಟಾರೆ 12,721 ವಿದ್ಯುತ್ ಪರಿವರ್ತಕಗಳನ್ನು ಖರೀದಿಸಲು ಕೆಟಿಪಿಪಿ ಕಾಯ್ದೆಯ 4 ಜಿ ವಿನಾಯಿತಿ ಕೋರಿವೆ. ಈ ಕಡತವೂ ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿದೆ.

 

 

 

ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯ ವ್ಯಾಪ್ತಿಯಲ್ಲಿ 2023ರ ಸೆಪ್ಟಂಬರ್‍‌ 22 ಅಂತ್ಯಕ್ಕೆ ನೋಂದಣಿಗೊಂಡು ಮೂಲ ಸೌಕರ್ಯ ರಚನೆಗೆ ಬಾಕಿ ಇರುವ ನೀರಾವರಿ ಪಂಪ್‌ ಸೆಟ್‌ ಸ್ಥಾವರಗಳಿಗೆ 2025-26ನೇ ಸಾಲಿನಲ್ಲಿ ವಿದ್ಯುದ್ದೀಕರಣ ಪೂರ್ಣಗೊಳಿಸಬೇಕು. ಇದನ್ನೇ ನೆಪವಾಗಿರಿಸಿಕೊಂಡಿರುವ ಇಂಧನ ಇಲಾಖೆಯು, ಕರ್ನಾಟಕ ವಿದ್ಯುತ್ ಕಾರ್ಖಾನೆಯನ್ನು ಬದಿಗೊತ್ತಿದೆ. ಅಲ್ಲದೇ ಸಮಯಾವಕಾಶ ಕಡಿಮೆ ಇದೆ ಮತ್ತು ವಿದ್ಯುತ್ ಪರಿವರ್ತಕಗಳನ್ನು ತುರ್ತಾಗಿ ಒದಗಿಸಬೇಕು. ಹೀಗಾಗಿ 4 ಜಿ ವಿನಾಯಿತಿ ನೀಡಬೇಕು ಎಂದು ಇಂಧನ ಇಲಾಖೆಯು ಆರ್ಥಿಕ ಇಲಾಖೆಯನ್ನು ಕೋರಿತ್ತು.

 

 

ಕವಿಕಾ ಬದಿಗೊತ್ತಿದ ಸರ್ಕಾರ

 

ಮತ್ತೊಂದು ವಿಶೇಷವೆಂದರೇ ಎಲ್ಲಾ ಎಸ್ಕಾಂಗಳಿಗೆ ಅವಶ್ಯಕವಿರುವ ವಿದ್ಯುತ್ ಪರಿವರ್ತಕಗಳನ್ನು ಕರ್ನಾಟಕ ವಿದ್ಯುತ್ ಕಾರ್ಖಾನೆಯಿಂದಲೇ ನೇರವಾಗಿ ಖರೀದಿಸಲು ದರ ನಿಗದಿಪಡಿಸಿದೆ. ಇದೇ ದರವು ಸಮಂಜಸವಾಗಿದೆ ಎಂದು ಸಮರ್ಥನೆ ನೀಡಿದ್ದ ಇಂಧನ ಇಲಾಖೆಯು ನಂತರ  ಕವಿಕಾವನ್ನೇ ಬದಿಗೊತ್ತಿತ್ತು. ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿ ನೀಡಿದ್ದ ದರವೂ ಸಹ ಕವಿಕಾ ನೀಡಿದ್ದ ದರವೂ ಒಂದೇ ತೆರನಾಗಿತ್ತು. ಆದರೂ ರಾಜ್ಯ ಕಾಂಗ್ರೆಸ್‌ ಸರ್ಕಾರವು ಕವಿಕಾದಿಂದ ವಿದ್ಯುತ್ ಪರಿವರ್ತಕಗಳನ್ನು ಖರೀದಿಸದೇ  ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯಿಂದಲೇ ವಿದ್ಯುತ್ ಪರಿವರ್ತಕಗಳನ್ನು ಖರೀದಿಸಿರುವುದು ಟಿಪ್ಪಣಿ ಹಾಳೆಗಳಿಂದ ತಿಳಿದು ಬಂದಿದೆ.

 

ಕವಿಕಾಕ್ಕೆ 4 ಜಿ ಮುಂದುವರೆಸದ ಸರ್ಕಾರ

 

ಕರ್ನಾಟಕ ವಿದ್ಯುತ್ ಕಾರ್ಖಾನೆಯಿಂದಲೂ ನೇರವಾಗಿ 30,000 ಸಂಖ್ಯೆಯ ವಿದ್ಯುತ್ ವಿತರಣಾ ಪರಿವರ್ತಕಗಳನ್ನು ಖರೀದಿಸಲು  2025ರ ಆಗಸ್ಟ್‌ನಲ್ಲಿಯೇ 4 ಜಿ ವಿನಾಯಿತಿ ನೀಡಿತ್ತು. ಆದರೆ ಆ ನಂತರ ಕವಿಕಾಕ್ಕೆ 4 ಜಿ ವಿನಾಯಿತಿಯನ್ನು ಮುಂದುವರೆಸಿಲ್ಲ. ಇದಕ್ಕೆ ಸಕಾರಣಗಳನ್ನೂ ನೀಡಿಲ್ಲದಿರುವುದು ಟಿಪ್ಪಣಿ ಹಾಳೆಗಳಿಂದ ಗೊತ್ತಾಗಿದೆ.

 

ದರದಲ್ಲಿ ವ್ಯತ್ಯಾಸ

 

25 ಕೆವಿಎ ಸ್ಟಾರ್ 1 ಸಾಮರ್ಥ್ಯದ ವಿದ್ಯುತ್ ಪರಿವರ್ತಕಕ್ಕೆ ಕರ್ನಾಟಕ ವಿದ್ಯುತ್ ಕಾರ್ಖಾನೆಯು 1,15,008.00 ರು ನಿಗದಿಪಡಿಸಿತ್ತು. ಇದೇ ಸಾಮರ್ಥ್ಯದ ವಿದ್ಯುತ್ ಪರಿವರ್ತಕ್ಕೆ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯು 1,02,722.97 ರು ನಿಗದಿಪಡಿಸಿತ್ತು. ಇದರಲ್ಲಿ 12,285.03 ರು ದರ ವ್ಯತ್ಯಾಸವಿತ್ತು.

 

 

ಅದೇ ರೀತಿ 63 ಕೆವಿಎ ಸ್ಟಾರ್ 1 ಸಾಮರ್ಥ್ಯದ ವಿದ್ಯುತ್ ಪರಿವರ್ತಕಕ್ಕೆ ಕವಿಕಾವು  2,24,865.00 ರು ದರ ನಿಗದಿಪಡಿಸಿದ್ದರೇ ಕೆಇಎಲ್‌, 1,86,875.21 ರು ನಿಗದಿಪಡಿಸಿತ್ತು. 37,989.79 ರು ವ್ಯತ್ಯಾಸವಿತ್ತು. 63ಕೆವಿಎ ಸ್ಟಾರ್ 2 ಸಾಮರ್ಥ್ಯದ ಪರಿವರ್ತಕಕ್ಕೆ ಕವಿಕಾವು 2,47,713.00 ರು ನಿಗದಿಪಡಿಸಿದ್ದರೇ ಕೆಇಎಲ್‌ 2,05,862.90 ರು ನಿಗದಿಪಡಿಸಿತ್ತು. 41,851ರು ದರ ವ್ಯತ್ಯಾಸವಿತ್ತು.

 

 

100 ಕೆವಿಎ ಸ್ಟಾರ್ 1 ಸಾಮರ್ಥ್ಯದ ಪರಿವರ್ತಕಕ್ಕೆ ಕವಿಕಾವು  2,87,155.00 ರು ನಿಗದಿಪಡಿಸಿದ್ದರೇ ಕೆಇಎಲ್‌ 2,38, 639.64 ರು ನಿಗದಿಪಡಿಸಿತ್ತು. 100 ಕೆವಿಎ ಸ್ಟಾರ್ 2 ಸಾಮರ್ಥ್ಯದ ವಿದ್ಯುತ್ ಪರಿವರ್ತಕಕ್ಕೆ ಕವಿಕಾವು 3,01,188.00 ರು ನಿಗದಿಪಡಿಸಿದ್ದರೇ ಕೆಇಎಲ್‌ 2,50,302.99 ರು ನಿಗದಿಪಡಿಸಿತ್ತು. 50,886 ರು ವ್ಯತ್ಯಾಸವಿತ್ತು. ಆದರೆ ದರದಲ್ಲಿಯೂ ವ್ಯತ್ಯಾಸ ಕಂಡುಬಂದಿತ್ತು.

 

ಈ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಪರಿಶೀಲಿಸಿತ್ತು. ಕೇರಳ ಎಲೆಕ್ಟ್ರಿಕಲ್ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿ ಲಿಮಿಟೆಡ್‌ಗೆ 2025ರ ಸೆಪ್ಟಂಬರ್‍‌ನಲ್ಲಿ 32,16,10,603 ರ ವೆಚ್ಚದಲ್ಲಿ ವಿದ್ಯುತ್ ಪರಿವರ್ತಕಗಳನ್ನು ಪೂರೈಸಲು ನೀಡಿದ್ದ ಈ ದರಗಳು, ಕೇವಲ ಎರಡು ತಿಂಗಳಲ್ಲಿ ಹೆಚ್ಚಾಗಿತ್ತು. ಆದರೆ ಇಂಧನ ಇಲಾಖೆಯು ಇದಕ್ಕೆ ಯಾವುದೇ ಸಮರ್ಥನೆ, ಮಾಹಿತಿ, ಸ್ಪಷ್ಟೀಕರಣವನ್ನೂ ಒದಗಿಸಿರಲಿಲ್ಲ.

 

21.78 ಕೋಟಿ ಹೆಚ್ಚುವರಿ ದರ

 

ಬೆಸ್ಕಾಂ ಸಂಸ್ಥೆಯು 3,721 ಸಂಖ್ಯೆಯಲ್ಲಿ ಪರಿವರ್ತಕಗಳನ್ನು ಕೇರಳ ಸರ್ಕಾರಿ ಕಂಪನಿಯಿಂದಲೇ ಖರೀದಿಸಲು 2025ರ ಸೆ.2ರಂದು  ಪ್ರಸ್ತಾವಿಸಿತ್ತು. ಈ ದರಗಳನ್ನು ಆರ್ಥಿಕ ಇಲಾಖೆಯು ಪರಿಶೀಲಿಸಿತ್ತು. ಇದರ ಪ್ರಕಾರ ಒಟ್ಟಾರೆ 21,78,56,906.28 ರು ಹೆಚ್ಚುವರಿಯಾಗಿತ್ತು.

 

 

ಹುಬ್ಬಳ್ಳಿ ಎನ್‌ಜಿಇಎಫ್‌ ಬದಿಗೊತ್ತಿದ್ದೇಕೆ?

 

ಹಾಗೆಯೇ ಹುಬ್ಬಳ್ಳಿಯಲ್ಲಿರುವ  ಎನ್‌ಜಿಇಎಫ್‌ ಸಂಸ್ಥೆಯಲ್ಲಿ ತಯಾರಿಸಿದ್ದ ಪರಿವರ್ತಕಗಳನ್ನು ಕೆಪಿಟಿಸಿಎಲ್‌ ಕೂಡ ಅನುಮೋದಿಸಿತ್ತು. ಕೆಪಿಟಿಸಿಎಲ್‌ ಅನುಮೋದಿಸಿದ್ದ ಎಸ್‌ ಆರ್ ದರಗಳಲ್ಲಿಯೇ 25 ಕೆವಿಎ, 63 ಕೆವಿಎ, 100 ಕೆವಿಎ, 250 ಕೆವಿಎ ಮತ್ತು 500 ಕೆವಿಎ ಸಾಮರ್ಥ್ಯದ ಟ್ರಾನ್ಸ್‌ಫಾರ್ಮ್‌ರ್‍‌ಗಳನ್ನು  ರಾಜ್ಯದ ವಿದ್ಯುತ್ ಸರಬರಾಜು ಸಂಸ್ಥೆಗಳಿಗೆ ಪೂರೈಸುವ ಪ್ರಸ್ತಾವನೆಯು ಚಾಲ್ತಿಯಲ್ಲಿತ್ತು.

 

 

ಈ ಮಧ್ಯೆ ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಪಂಕಜ್ ಕುಮಾರ್ ಪಾಂಡೆ ಅವರು 2025-26ನೇ ಸಾಲಿನಲ್ಲಿ ಹೆಸ್ಕಾಂ, ಬೆಸ್ಕಾಂ, ಮೆಸ್ಕಾಂ ಕಂಪನಿಗಳಿಗೆ 11,721 ವಿದ್ಯುತ್ ಪರಿವರ್ತಕಗಳನ್ನು ಕೇರಳ ಸರ್ಕಾರಿ ಕಂಪನಿಯಿಂದಲೇ ಖರೀದಿಲು 4 ಜಿ ವಿನಾಯಿತಿ ಕೋರಿದ್ದರು.  ಇದರ ಒಟ್ಟಾರೆ ಮೊತ್ತವೇ 372.47 ಕೋಟಿಯಷ್ಟಿತ್ತು.

 

 

 

ಎನ್‌ಜಿಇಎಫ್‌ ಸಂಸ್ಥೆಯು ರಾಜ್ಯ ಸರ್ಕಾರದ ಅಧೀನ ಸಂಸ್ಥೆಯಾಗಿದ್ದರೂ ಸಹ  ಆದರೂ ಇಂಧನ ಇಲಾಖೆಯು ಕೇರಳ ಎಲೆಕ್ಟ್ರಿಕಲ್ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿ ಲಿಮಿಟೆಡ್‌ಗೆ ರತ್ನಗಂಬಳಿ ಹಾಸಿರುವುದು ಕಡತದ ಟಿಪ್ಪಣಿ ಹಾಳೆಗಳಿಂದ ತಿಳಿದು ಬಂದಿದೆ.

 

ಇಂಧನ ಇಲಾಖೆಯು ಪ್ರಸ್ತಾವಿತ ವಿದ್ಯುತ್ ಪರಿವರ್ತಕಗಳನ್ನು ಟೆಂಡರ್ ಮೂಲಕ ಸಂಗ್ರಹಣೆ ಮಾಡಿಕೊಳ್ಳದೇ ಕೆಟಿಪಿಪಿ ಕಾಯ್ದೆ ಕಲಂ 4 ಜಿ ಅಡಿ ವಿನಾಯಿತಿ ಕೋರಿರುವುದಕ್ಕೆ ಯಾವುದೇ ಸಮರ್ಥನೆಯನ್ನೂ ನೀಡಿಲ್ಲ. ಅಲ್ಲದೇ ಕೇರಳ ಎಲೆಕ್ಟ್ರಿಕಲ್ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿ ಲಿಮಿಟೆಡ್‌ ಏಕಾಏಕೀ ಕೇವಲ ಎರಡು ತಿಂಗಳಲ್ಲಿ ದರಗಳನ್ನು ಹೆಚ್ಚು ಮಾಡಿದ್ದಕ್ಕೆ ಯಾವುದೇ ಸಮರ್ಥನೆಯನ್ನೂ ನೀಡಿರಲಿಲ್ಲ.

 

ಕೆಇಎಲ್‌ನಿಂದಲೇ ಏಕೆ  ಖರೀದಿಸಬೇಕು?

 

ಕವಿಕಾ ದರದಲ್ಲಿಯೇ ಪೂರೈಸುವುದಿದ್ದರೇ ಕೇರಳ ಎಲೆಕ್ಟ್ರಿಕಲ್ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿ ಲಿಮಿಟೆಡ್‌ನಿಂದಲೇ ಏಕೆ ಸಂಗ್ರಹಣೆ ಮಾಡಿಕೊಳ್ಳಬೇಕು, ಕವಿಕಾದಿಂದಲೇ ಸಂಗ್ರಹಣೆ ಮಾಡಿಕೊಳ್ಳಬಹುದು ಎಂದು ಆರ್ಥಿಕ ಇಲಾಖೆಯು ಸಲಹೆ ನೀಡಿತ್ತು. ಆದರೆ ಇಂಧನ ಇಲಾಖೆಯು ಕೆಇಎಲ್‌ನಿಂದಲೇ ಏಕೆ  ಖರೀದಿಸಬೇಕು ಎಂದು ಇಂಧನ ಇಲಾಖೆಯು ಸಮರ್ಥನೆ ನೀಡಿರಲಿಲ್ಲ.

 

‘ರಾಜ್ಯ ಸರ್ಕಾರದ ಅಧೀನ ಸಂಸ್ಥೆಯಾದ ಎನ್‌ಜಿಇಎಫ್‌ನಿಂದಲೇ ಟ್ರಾನ್ಸ್‌ಫಾರ್ಮ್‌ರ್ ಗಳನ್ನು ಖರೀದಿಸಲು ಇಂಧನ ಇಲಾಖೆಯು ಪರಿಶೀಲಿಸಿಲ್ಲ. ಇಂಧನ ಇಲಾಖೆಯು ಪ್ರತಿ ವರ್ಷವೂ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್ ಇಂಜಿನಿಯರಿಂಗ್‌ ಕಂಪನಿಯಿಂದಲೇ ನೇರವಾಗಿ ಕೆಟಿಪಿಪಿ ಕಾಯ್ದೆ ಕಲಂ 4 ಜಿ ಅಡಿ ಸಂಗ್ರಹಣೆ ಮಾಡಿಕೊಳ್ಳಲು ಕಾರಣಗಳೇನು, ಈ ಬಗ್ಗೆ ಯಾವುದೇ ಸಮರ್ಥನೆಗಳು ಲಭ್ಯವಿಲ್ಲ,’ ಎಂದು ಆರ್ಥಿಕ ಇಲಾಖೆಯು ಹೇಳಿತ್ತು.

 

ಅಲ್ಲದೇ ಟ್ರಾನ್ಸ್‌ಫಾರ್ಮ್‌ರ್ ಗಳುನ್ನು ಸರಬರಾಜು ಮಾಡಲು ಮಾರುಕಟ್ಟೆಯಲ್ಲಿ ಹಲವಾರು ಸಂಸ್ಥೆಗಳು ಲಭ್ಯವಿವೆ. ಟೆಂಡರ್ ಮೂಲಕ ಈ ಉಪಕರಣಗಳನ್ನು  ಸಂಗ್ರಹಣೆ ಮಾಡಿಕೊಳ್ಳಲು ವಿಫುಲವಾದ ಅವಕಾಶಗಳೂ ಇವೆ. ಆದರೂ ಇಂಧನ ಇಲಾಖೆಯು ಪದೇ ಪದೇ ವಿನಾಯಿತಿ ಕೋರಿ ಪ್ರಸ್ತಾವ ಸಲ್ಲಿಸುತ್ತಿದೆ. ಆಡಳಿತ ಇಲಾಖೆಯ ಪ್ರಸ್ತಾವನೆಯಂತೆ ಸಹಮತಿ ನೀಡಿದ್ದಲ್ಲಿ ಸ್ಪರ್ಧಾತ್ಮಕ ದರಗಳಲ್ಲಿ ಸಿಗಬಹುದಾದ ಕಡಿಮೆ ದರಗಳ ಲಾಭದಿಂದ ಸರ್ಕಾರವು ವಂಚಿತವಾಗಲಿದೆ. ಇದರಿಂದ ಸಂಪನ್ಮೂಲ ದುರ್ಬಳಕೆಯಾಗುವ ಸಾಧ್ಯತೆ ಇದೆ. ಇದರಿಂದ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗಲಿದೆ ಎಂದು ಆರ್ಥಿಕ ಇಲಾಖೆಯು ಎಚ್ಚರಿಸಿತ್ತು.

 

ಈಗಾಗಲೇ ಎರಡು ಬಾರಿ ಕೆಇಎಲ್‌ನಿಂದಲೇ ನೇರವಾಗಿ ವಿದ್ಯುತ್ ಪರಿವರ್ತಕಗಳನ್ನು ಖರೀದಿಸಿರುವುದರಿಂದ ರಾಜ್ಯದ ಕವಿಕಾ ಮತ್ತು ಎನ್‌ಜಿಇಎಫ್‌ ಸೇರಿದಂತೆ ಇನ್ನಿತರೆ ಕಂಪನಿಗಳಿಂದ ಪರಿವರ್ತಕಗಳನ್ನು ಗರಿಷ್ಠ ಮಟ್ಟದಲ್ಲಿ ಖರೀದಿಸಬೇಕು. ಬಾಕಿ ಉಳಿದ ಪ್ರಮಾಣವನ್ನು ಟೆಂಡರ್ ಮೂಲಕವೇ ಖರೀದಿಸಬೇಕು ಎಂದು ಆರ್ಥಿಕ ಇಲಾಖೆಯು ಸೂಚಿಸಿತ್ತು.

 

ಈ ಮಧ್ಯೆ ಈಗಾಗಲೇ ಬಾಕಿ ಇರುವ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಶೀಘ್ರದಲ್ಲಿ  ವಿದ್ಯುತ್ ಮೂಲ ಸೌಕರ್ಯ ಒದಗಿಸಬೇಕು. ವಿದ್ಯುತ್  ಸಂಪರ್ಕ ಯೋಜನೆಯನ್ನು  ಜಾರಿಗೊಳಿಸಬೇಕು ಎಂದು ಇಂಧನ ಸಚಿವರು ನಿರ್ದೇಶನ ನೀಡಿದ್ದರು. ಅಲ್ಲದೇ ಎಲ್ಲಾ ಎಸ್ಕಾಂಗಳಿಗೆ 2025-26ನೇ ಸಾಲಿಗಾಗಿ ಬೇಡಿಕೆ ಇರುವ 15,000 ಪರಿವರ್ತಕಗಳನ್ನು ಖರೀದಿಸಲು 2025ರ ಏಪ್ರಿಲ್‌ ಮೊದಲನೇ ವಾರದಲ್ಲಿ ಬೇಡಿಕೆ ಸಲ್ಲಿಸಿ 4 ಜಿ ವಿನಾಯಿತಿ ಪಡೆಯಲು ಸೂಚಿಸಿದ್ದರು.

 

ಕವಿಕಾ ಬಿಟ್ಟು ಕೆಇಎಲ್‌ ಬಾಗಿಲು ಬಡಿದಿದ್ದ ಹೆಸ್ಕಾಂ

 

ಈ ನಿರ್ದೇಶನದ ಬೆನ್ನಲ್ಲೇ  ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯು ಸಹ ಕೆಇಎಲ್‌ನಿಂದಲೇ ವಿದ್ಯುತ್ ಪರಿವರ್ತಕಗಳನ್ನು ಖರೀದಿಸಲು 2025ರ ಮಾರ್ಚ್‌ 21ರಲ್ಲೇ ಇಂಧನ ಇಲಾಖೆಗೆ ಪತ್ರ ಬರೆದಿತ್ತು.

 

 

 

2025-26ನೇ ಸಾಲಿನಲ್ಲಿ ಒಟ್ಟಾರೆ 7,500 ವಿದ್ಯುತ್ ಪರಿವರ್ತಕಗಳನ್ನು ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್ ಇಂಜಿನಿಯರಿಂಗ್‌ ಕಂಪನಿಯಿಂದಲೇ 105.77 ಕೋಟಿ ರು ವೆಚ್ಚದಲ್ಲಿ  ಖರೀದಿಸಲು ಮುಂದಾಗಿತ್ತು.

 

 

ಇದರ ಬೆನ್ನಲ್ಲೇ  ಕೇರಳ ಎಲೆಕ್ಟ್ರಿಕಲ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯು ಕೆಪಿಟಿಸಿಎಲ್‌ಗೆ 2025ರ ಜೂನ್‌ 11ರಂದು ಪತ್ರ ಬರೆದಿತ್ತು. ರಾಜ್ಯದ ಎಸ್ಕಾಂಗಳ ವ್ಯಾಪ್ತಿಯಲ್ಲಿ ಬೇಡಿಕೆ ಇರುವ ವಿದ್ಯುತ್ ಪರಿವರ್ತಕಗಳನ್ನು ಪೂರೈಸಲು 4 ಜಿ ವಿನಾಯಿತಿ ನೀಡಬೇಕು ಎಂದು ಪತ್ರದಲ್ಲಿ ಕೋರಿತ್ತು.

 

 

ಕೇರಳ ಎಲೆಕ್ಟ್ರಿಕಲ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಗೂ 2025ರ ಜನವರಿ 28ರಂದೇ ಕೋರಿಕೆ ಸಲ್ಲಿಸಿತ್ತು.

 

 

ಈ ಪತ್ರವನ್ನಾಧರಿಸಿ  ಕೇರಳ ಎಲೆಕ್ಟ್ರಿಕಲ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯಿಂದಲೇ 3,721 ಸಂಖ್ಯೆಯ ವಿದ್ಯುತ್ ಪರಿವರ್ತಕಗಳನ್ನು ಖರೀದಿಸಲು ಇಂಧನ ಇಲಾಖೆಗೆ 2025ರ ಆಗಸ್ಟ್‌ 8ರಂದೇ ಬೆಸ್ಕಾಂ ಕೂಡ  ಪ್ರಸ್ತಾವ ಸಲ್ಲಿಸಿತ್ತು.

 

 

ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯೂ ಕೇರಳ ಎಲೆಕ್ಟ್ರಿಕಲ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯಿಂದಲೇ  ವಿದ್ಯುತ್ ಪರಿವರ್ತಕಗಳನ್ನು 5.75 ಕೋಟಿ ವೆಚ್ಚದಲ್ಲಿ  ನೇರವಾಗಿ ಖರೀದಿಸಲು 2025ರ ಆಗಸ್ಟ್‌ 7ರಂದೇ  4 ಜಿ ವಿನಾಯಿತಿ ಕೋರಿತ್ತು.

 

 

 

ಇದಾದ ನಂತರ 2025ರ ಸೆ.26ರಂದು ಇಂಧನ ಇಲಾಖೆಗೆ ಮತ್ತೊಂದು ಪತ್ರವನ್ನೂ ಬರೆದಿತ್ತು.

 

 

 

‘ಈ ಹಿಂದೆ ಇದೇ ಸಂಸ್ಥೆಯಿಂದಲೇ ಹಲವಾರು ಬಾರಿ ವಿದ್ಯುತ್ ಪರಿವರ್ತಕಗಳನ್ನು ಖರೀದಿಸಲಾಗಿದೆ. ಅದರ ಗುಣಮಟ್ಟವು ತೃಪ್ತಿಕರವಾಗಿದೆ. ಅಲ್ಲದೇ ಈ ಹಿಂದೆ ಪರಿವರ್ತಕಗಳ ತಪಾಸಣೆಯ ವೇಳೆ ಪರಿಶೀಲಿಸಿರುವಂತೆ ಕೆಇಎಲ್‌ ಕೊಚ್ಚಿ ಇವರು ಪರಿವರ್ತಕಗಳನ್ನು ತಮ್ಮ ಸ್ವಂತ ಕಾರ್ಖಾನೆಯಲ್ಲಿಯೇ ತಯಾರಿಸುತ್ತಿದೆ. ಸಂಸ್ಥೆಯ ಉತ್ಪಾದನಾ ಸಾಮರ್ಥ್ಯವು ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಪ್ರಸ್ತುತ ವಿನಾಯಿತಿ ಕೋರಿರುವ ಪ್ರಮಾಣದ ಪರಿವರ್ತಕಗಳ ಅವಶ್ಯಕತೆಯನ್ನು ಪೂರೈಸಬಹುದಾಗಿದೆ,’ ಎಂದು ಮೆಸ್ಕಾಂನ ಅಧೀಕ್ಷಕ ಇಂಜಿನಿಯರ್ ಅವರು ಪತ್ರದಲ್ಲಿ ಕೋರಿದ್ದರು.

 

 

ಈ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಪರಿಶೀಲಿಸಿತ್ತು. ಕೆಟಪಿಪಿ ಕಾಯ್ದೆ ಸೆಕ್ಷನ್‌ 4 ಜಿ ಅಡಿ ವಿನಾಯಿತಿ ನೀಡುವ ಪ್ರಸ್ತಾವನೆಗೆ ಆಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಯಾವುದೇ ಸಮರ್ಥನೆಗಳನ್ನು ನೀಡಿಲ್ಲ. ಆದ್ದರಿಂದ  2024ರ ಮಾರ್ಚ್‌ 15ರಂದು ಹೊರಡಿಸಿದ್ದ ಮಾರ್ಗಸೂಚಿಗಳ ಅನ್ವಯ ಪ್ರಸ್ತಾವನೆಯನ್ನು ಪರಿಶೀಲಿಸಬೇಕು ಎಂದು ಆರ್ಥಿಕ ಇಲಾಖೆಯು 2025ರ ನವೆಂಬರ್‍‌ 20ರಂದೇ ಪತ್ರ ಬರೆದಿತ್ತು.

 

ಬೆಂಗಳೂರಿನ ಯಲಹಂಕದ ಕೋಗಿಲು ಸಮೀಪ ಅಕ್ರಮ ಕಟ್ಟಡಗಳ ನೆಲಸಮ ವಿಚಾರದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅಲ್ಲಿನ ಸಂಸದ ಕೆ.ಸಿ.ವೇಣುಗೋಪಾಲ್ ಅವರು ಮಧ್ಯೆ ಪ್ರವೇಶಿಸಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ 174.73 ಕೋಟಿ ರು ಮೊತ್ತದಲ್ಲಿ ವಿದ್ಯುತ್‌ ಪರಿವರ್ತಕಗಳನ್ನು ಖರೀದಿಸಲು ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜನಿಯರಿಂಗ್‌ ಲಿಮಿಟೆಡ್‌ಗೆ 4 ಜಿ ವಿನಾಯಿತಿ ನೀಡುವ ಪ್ರಸ್ತಾವವು ಮುನ್ನೆಲೆಗೆ ಬಂದಿತ್ತು. ಅಲ್ಲದೇ ಪ್ರತಿಪಕ್ಷಗಳಿಗೆ ಮತ್ತೊಂದು ಅಸ್ತ್ರವೊಂದನ್ನು ನೀಡಿದಂತಾಗಿತ್ತು.

 

ಕೇರಳ ಸರ್ಕಾರಿ ಕಂಪನಿಯಿಂದ ಟ್ರಾನ್ಸ್‌ಫಾರ್ಮ್‌ರ್‍‌ಗಳ ಖರೀದಿ; 174.73 ಕೋಟಿ ರು ಮೊತ್ತಕ್ಕೆ 4 (ಜಿ) ಪ್ರಸ್ತಾವ

 

2025-26ನೇ ಸಾಲಿನಲ್ಲಿ ಎಸ್ಕಾಂಗಳಿಗೆ ವಿದ್ಯುತ್‌ ಪರಿವರ್ತಕಗಳನ್ನು ನೇರವಾಗಿ ಕೇರಳ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜನಿಯರಿಂಗ್‌ ಲಿಮಿಟೆಡ್‌ನಿಂದಲೇ ಖರೀದಿಸಲು ಗೆ 4 ಜಿ ವಿನಾಯಿತಿ ಕೋರಿರುವುದನ್ನು ಸ್ಮರಿಸಬಹುದು. ಈ ಕುರಿತು ದಿ ಫೈಲ್ 2026ರ ಜನವರಿ 8ರಂದು ವರದಿ ಪ್ರಕಟಿಸಿತ್ತು.

Your generous support will help us remain independent and work without fear.

Latest News

Related Posts