ಕಾಂಗ್ರೆಸ್‌ ಅವಧಿಯಲ್ಲೂ ಅಕ್ರಮ ಗಣಿಗಾರಿಕೆ; ಎಲ್ಒಇ ಅನುಷ್ಟಾನ, ಅಭಿಪ್ರಾಯಗಳು ವಿರೋಧಾಭಾಸವಾಗಿವೆಯೇ?

ಬೆಂಗಳೂರು;  ಅದಾನಿ ಸಮೂಹದ ಎಸಿಸಿ ಸಿಮೆಂಟ್‌ ಲಿಮಿಟೆಡ್‌,  ಸಿದ್ದರಾಮಯ್ಯ ಅವರ ನೇತೃತ್ವದ ಎರಡನೇ ಬಾರಿಯ ಅಧಿಕಾರದ ಅವಧಿಯಲ್ಲಿಯೂ ಕಲ್ಬುರ್ಗಿಯ ವಾಡಿಯಲ್ಲಿ  ನಿಯಮಗಳನ್ನು ಉಲ್ಲಂಘಿಸಿ ಗಣಿಗಾರಿಕೆ ನಡೆಸಿದೆ. ಅಲ್ಲದೇ ಕಾನೂನುಬಾಹಿರವಾಗಿ 78,33,415 ಟನ್‌ ಪ್ರಮಾಣದ ಸುಣ್ಣದ ಕಲ್ಲನ್ನೂ ಸಾಗಾಣಿಕೆ ಮಾಡಿದೆ. ಆದರೆ ಇದುವರೆಗೂ 482,69,65,137 ರು.ಗಳಷ್ಟು ದಂಡ ವಸೂಲು ಮಾಡಿಲ್ಲ.

 

ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಲಿಮಿಟೆಡ್‌ ಗೆ ಲೆಟರ್ ಆಫ್‌ ಇಂಟೆಂಟ್‌ನ್ನು ಅನುಷ್ಠಾನಗೊಳಿಸುವ ಸಂಬಂಧ ರಾಜ್ಯದ ಅಡ್ವೋಕೇಟ್‌ ಜನರಲ್ ಶಶಿಕಿರಣ್ ಶೆಟ್ಟಿ ಅವರು ನೀಡಿರುವ ಅಭಿಪ್ರಾಯದಲ್ಲಿ ಈ ಮಾಹಿತಿ ಇದೆ.

 

ರಾಜ್ಯದ ಅಡ್ವೋಕೇಟ್ ಜನರಲ್ ಅವರು ಈ ಪ್ರಕರಣದಲ್ಲಿ ನೀಡಿರುವ ಅಭಿಪ್ರಾಯವನ್ನು ದಿ ಫೈಲ್‌, ಆರ್‍‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

ವಿಶೇಷವೆಂದರೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಸಿ ಲಿಮಿಟೆಡ್ ಅನ್ನು ಭವಿಷ್ಯದಲ್ಲಿ  ಸರ್ಕಾರಿ ಟೆಂಡರ್‌ಗಳು, ಹರಾಜುಗಳು ಮತ್ತು ಗಣಿಗಾರಿಕೆ-ಸಂಬಂಧಿತ ಪ್ರಕ್ರಿಯೆಗಳಲ್ಲಿ ಭಾಗವಹಿಸದಂತೆ ನಿರ್ಬಂಧಿಸಬೇಕು. ಎಸಿಸಿ ಲಿಮಿಟೆಡ್‌ ಗೆ  ಮತ್ತೊಂದು 50 ವರ್ಷಗಳ ಗುತ್ತಿಗೆಯೊಂದಿಗೆ ಮುಂದುವರಿಯುವುದು ರಾಜ್ಯ ಹಿತಾಸಕ್ತಿಯಾಗುವುದಿಲ್ಲ ಅಥವಾ 50 ವರ್ಷಗಳ ಗುತ್ತಿಗೆಯೊಂದಿಗೆ ಮುಂದುವರೆಯುವುದು  ವಿವೇಕಯುತವೂ ಅಲ್ಲ  ಎಂದು ಸಚಿವ ಹೆಚ್‌ ಕೆ ಪಾಟೀಲ್ ಅವರು ಶಿಫಾರಸ್ಸು ಹೇಳಿದ್ದರು.

 

ಆದರೆ  ರಾಜ್ಯದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಇದೇ ಎಸಿಸಿ ಲಿಮಿಟೆಡ್‌ ಪರವಾಗಿ ಗಣಿ ಅಭಿವೃದ್ಧಿ ಮತ್ತು ಉತ್ಪಾದನಾ ಒಪ್ಪಂದ (ಎಂಡಿಪಿಎ) ಕಾರ್ಯಗತಗೊಳಿಸುವುದನ್ನು ಪರಿಗಣಿಸಬಹುದು, ಇದಕ್ಕೆ ಯಾವುದೇ ಅಡ್ಡಿಯೂ ಇಲ್ಲ. ಎಸಿಸಿ ಲಿಮಿಟೆಡ್ ಪರವಾಗಿ ಎಂಡಿಪಿಎ ಯನ್ನು ಜಾರಿಗೊಳಿಸುವುದರಿಂದ ಕಾನೂನಿನ ಪ್ರಕಾರ ಬಾಕಿ/ಬಾಕಿಗಳನ್ನು ವಸೂಲಿ ಮಾಡುವುದು ಮತ್ತು ಎಲ್ಒಇ ಅನುಷ್ಟಾನ ಮಾಡಿದಲ್ಲಿ  ರಾಜ್ಯದ ಹಿತಾಸಕ್ತಿಗೆ ಯಾವುದೇ ರೀತಿಯಲ್ಲಿಯೂ ಹಾನಿಯಾಗುವುದಿಲ್ಲ  ಎಂದು ಅಭಿಪ್ರಾಯಿಸಿದ್ದಾರೆ.

 

ಸಚಿವ  ಹೆಚ್‌ ಕೆ ಪಾಟೀಲ್ ಅವರು ಮತ್ತು  ರಾಜ್ಯದ ಅಡ್ವೋಕೇಟ್‌ ಜನರಲ್ ಶಶಿಕಿರಣ್ ಶೆಟ್ಟಿ ಅವರು ನೀಡಿರುವ ಅಭಿಪ್ರಾಯಗಳು ಪರಸ್ಪರ  ವಿರೋಧಾಭಾಸಗಳಿಂದ ಕೂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

 

ಎಸಿಸಿ ಲಿಮಿಟೆಡ್‌ ಕಾನೂನುಬಾಹಿರವಾಗಿ ಗಣಿಗಾರಿಕೆ ನಡೆಸಿರುವುದು, ರಾಜಧನ ಬಾಕಿ ಮತ್ತು ದಂಡದ ಮೊತ್ತವನ್ನು ಬಾಕಿ ಉಳಿಸಿಕೊಂಡಿರುವುದು, ಉಚ್ಛ ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳದ ಅರ್ಜಿಗಳು ಮತ್ತು ಅದರಲ್ಲಿನ ಕಾನೂನಾತ್ಮಕ ಸಂಗತಿಗಳ ಕುರಿತು ರಾಜ್ಯದ ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ ಅವರು ಅಮೂಲಾಗ್ರವಾಗಿ ಅವಲೋಕಿಸಿದ್ದಾರೆ. ಈ ಅವಲೋಕನಗಳ ನಂತರ, ಎಸಿಸಿ ಲಿಮಿಟೆಡ್‌ ಪ್ರಕರಣದಲ್ಲಿ ಅಭಿಪ್ರಾಯ ನೀಡಿರುವುದು ಗೊತ್ತಾಗಿದೆ.

 

ಅಡ್ವೋಕೇಟ್ ಜನರಲ್ ನೀಡಿರುವ ಅಭಿಪ್ರಾಯದ ಪ್ರತಿ

 

 

ರಾಜ್ಯದ ಹಿತಾಸಕ್ತಿಗೆ ಧಕ್ಕೆಯಿಲ್ಲವೆಂದ ಅಡ್ವೋಕೇಟ್ ಜನರಲ್

 

ಕಲ್ಬುರ್ಗಿಯ ವಾಡಿಯಲ್ಲಿ ಹೊಂದಿರುವ ಗಣಿ ಗುತ್ತಿಗೆ (ಸಂಖ್ಯೆ; 2641) ಯ ಅವಧಿಯು 2023ರ ಫೆಬ್ರುವರಿ 18ಕ್ಕೆ ಪೂರ್ಣಗೊಂಡಿತ್ತು. ಇದೇ ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಮೂರು ರಿಟ್‌ ಅರ್ಜಿಗಳು ವಿಚಾರಣೆ ಹಂತದಲ್ಲಿವೆ. ಈ ಅರ್ಜಿಗಳು ವಿಭಿನ್ನವಾಗಿವೆ. ಆದ್ದರಿಂದ ಈ ಕಂಪನಿ ಪರವಾಗಿ ಕಣ್ಣೂರು ವಾಡಿಯಲ್ಲಿ ಎಂಡಿಪಿಎನ್ನು ಎಸಿಸಿ ಲಿಮಿಟೆಡ್ ಪರವಾಗಿ ಜಾರಿಗೊಳಿಸುವುದರಿಂದ ರಾಜ್ಯದ ಹಿತಾಸಕ್ತಿಗೆ ಯಾವುದೇ ರೀತಿಯಲ್ಲಿಯೂ ಹಾನಿಯಾಗುವುದಿಲ್ಲ. ಈ ಗಣಿ ಗುತ್ತಿಗೆಯು, 2641 ರ ಅಡಿಯಲ್ಲಿ ನೀಡಲಾದ ಗಣಿಗಾರಿಕೆ ಗುತ್ತಿಗೆಯಿಂದ ಸ್ವತಂತ್ರವಾಗಿದೆ ಎಂದು ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.

 

ಅಲ್ಲದೇ 1995ರಿಂದಲೂ ಇದೇ ಎಸಿಸಿ ಲಿಮಿಟೆಡ್‌ 792.41 ಕೋಟಿಯಷ್ಟು ರಾಯಧನ ಪಾವತಿಸಬೇಕಿತ್ತು ಎಂದು ಅಭಿಪ್ರಾಯದಲ್ಲಿ ಉಲ್ಲೇಖವಾಗಿದೆ.

 

 

ಇದು ಭಾರೀ ಆರ್ಥಿಕ ಪರಿಣಾಮಗಳನ್ನು ಬೀರುವುದರಿಂದ ಹಣಕಾಸು ಇಲಾಖೆಯ ಒಪ್ಪಿಗೆಯನ್ನು ಪಡೆಯಬೇಕು. ರಿಟ್‌ ಅರ್ಜಿಗಳು ಬಾಕಿ ಇರುವ ಹಂತದಲ್ಲಿಯೇ ಎಂಡಿಪಿಎಯನ್ನು ಜಾರಿಗೊಳಿಸುವುದನ್ನು ಪರಿಗಣಿಸಬೇಕಾದರೆ ರಾಜ್ಯದ ಹಿತಾಸಕ್ತಿಗಳನ್ನು ಕಾಪಾಡಲು ನಿರ್ದಿಷ್ಟ ಕಾನೂನು ಸುರಕ್ಷತೆಗಳು, ಷರತ್ತುಗಳು ಮತ್ತು ರಕ್ಷಣಾತ್ಮಕ ಷರತ್ತುಗಳನ್ನು ಸೇರಿಸುವ ಬಗ್ಗೆಯೂ ಸಹ ಅಡ್ವೋಕೇಟ್ ಜನರಲ್ ಅವರು ಅಭಿಪ್ರಾಯಿಸಿದ್ದಾರೆ.

 

ರಿಟ್ ಅರ್ಜಿಗಳು ಬಾಕಿ ಇರುವಾಗ ರಾಜ್ಯ ಸರ್ಕಾರವು ಎಂಡಿಪಿಎ ಕಾರ್ಯಗತಗೊಳಿಸಲು ನಿರ್ಧರಿಸಿದರೆ, ರಾಜಸ್ವ ಮತ್ತು ದಂಡದ ಬಾಕಿಗಳಿಗೆ ಸಂಬಂಧಿಸಿದ ಅಂಶಗಳು ಸಹ ಪ್ರಸ್ತುತವಾಗಲಿದೆ. ಈ ಕಂಪನಿಗೆ 2019ರ ಆಗಸ್ಟ್‌ 17ರಂದೇ ಡಿಮ್ಯಾಂಡ್‌ ನೋಟೀಸ್‌ ನೀಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಅಫಿಡೆವಿಟ್‌ ಸಲ್ಲಿಸಲಾಗಿದೆ. ಆಗ ಈ ಪ್ರಕರಣವನ್ನು ಪರಿಷ್ಕರಣಾ ಪ್ರಾಧಿಕಾರದ ಮುಂದೆ ಪ್ರಶ್ನಿಸಲಾಗಿತ್ತು. ಮುಂದಿನ ದಿನಗಳಲ್ಲಿ ಈ ಪ್ರಕರಣವು ರಾಜ್ಯ ಸರ್ಕಾರದ ಮುಂದೆಯೂ ಬಂದಿದೆ.

 

 

ಬಾಕಿ ಉಳಿಸಿಕೊಂಡಿರುವ ರಾಯಧನವನ್ನು ವಸೂಲು ಮಾಡಲು 2019ರಂದು ನೀಡಿದ್ದ ಡಿಮ್ಯಾಂಡ್‌ ನೋಟೀಸ್‌ನ್ನೇ 2024ರ ಏಪ್ರಿಲ್‌ 10ರಂದು ಮುಂದುವರೆಸಿತ್ತು. ರಿವಿಷನ್ ಅಥಾರಿಟಿಯು 2025ರ ಸೆ.9ರಂದು ಆದೇಶವನ್ನೂ ಹೊರಡಿಸಿತ್ತು. ಈ ಸಂಬಂಧ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ರಿಟ್‌ ಅರ್ಜಿ (ಸಂಖ್ಯೆ 36850/2025) ಯಲ್ಲಿ ರಿಮ್ಯಾಂಡ್‌ ಆದೇಶದ ಸಿಂಧುತ್ವವನ್ನು ಪ್ರಶ್ನಿಸಲಾಗಿತ್ತು. ಈ ಅರ್ಜಿಯು ಸಹ ಹೈಕೋರ್ಟ್‌ ಮುಂದೆ ವಿಚಾರಣೆಗೆ ಬಾಕಿ ಇದೆ. ಹೀಗಾಗಿ ರಾಜಧನ ಬಾಕಿ ಮೊತ್ತವನ್ನು ಆ ದಿನಾಂಕಕ್ಕೆ ಅಂತಿಮವಾಗಿ ನಿರ್ಧರಿಸಿಲ್ಲ ಎಂದು ಅಡ್ವೋಕೇಟ್‌ ಜನರಲ್‌ ಅವರು ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.

 

 

ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಬಾಕಿ ಇರುವ ರಿಟ್‌ ಅರ್ಜಿಗಳಲ್ಲಿನ ಆದೇಶಗಳಲ್ಲಿನ ಫಲಿತಾಂಶಗಳಿಗೆ ಒಳಪಟ್ಟು ಅಥವಾಬಾಕಿ ಇರುವ ರಿಟ್‌ ಅರ್ಜಿಗಳಲ್ಲಿ ಹೈಕೋರ್ಟ್‌ ತೀರ್ಪನ್ನು ಆಧರಿಸಿ ರಾಯಧನದ ಬಾಕಿಗಳ ಕುರಿತು ರಾಜ್ಯ ಸರ್ಕಾರವು ಭವಿಷ್ಯದಲ್ಲಿ ನಿರ್ಧರಿಸಬಹುದು. ಗಣಿ ಗುತ್ತಿಗೆ 2641 ರಲ್ಲಿ ರಾಕಿ ಇರುವ ರಾಯಧನ ಪಾವತಿಸುವ ಷರತ್ತಿನ ಒಪ್ಪಂದದೊಂದಿಗೆ ಹೊಸ ಅಫಿಡೆವಿಟ್‌ ಪಡೆಯುವ ಮೂಲಕ ಎಂಡಿಪಿಎಯನ್ನು ಕಾರ್ಯಗತಗೊಳಿಸಲು ಯಾವುದೇ ಅಡ್ಡಿಯಿಲ್ಲ ಎಂದು ಸ್ಪಷ್ಟ ಅಭಿಪ್ರಾಯ ನೀಡಿರುವುದು ಗೊತ್ತಾಗಿದೆ.

 

ಕಾನೂನುಬಾಹಿರವಾಗಿ 78.33 ಲಕ್ಷ ಟನ್ ಸುಣ್ಣದ ಕಲ್ಲು ಸಾಗಾಣಿಕೆ

 

ಎಸಿಸಿ ಲಿಮಿಟೆಡ್‌, 2021ರ ಜೂನ್‌ 18ರಂದು ಸಲ್ಲಿಸಿದ್ದ ಪ್ರಮಾಣಪತ್ರವು, ಗಣಿ ಗುತ್ತಿಗೆ 2461ಕ್ಕೆ ವಿಧಿಸಿದ್ದ ದಂಡದ ಮೊತ್ತಕ್ಕೆ ಸಂಬಂಧಿಸಿದೆ. ಇದಾದ ನಂತರವೂ ರಾಜ್ಯ ಸರ್ಕಾರವು ದಂಡ ವಿಧಿಸಿ 2025ರ ಜೂನ್‌ 5ರಂದು ಆದೇಶಿಸಿತ್ತು. ಈ ಆದೇಶದಲ್ಲಿ 2023ರ ಫೆಬ್ರುವರಿ 19ರಿಂದ 2024ರ ಆಗಸ್ಟ್‌ 18ರವರೆಗೆ ಅಕ್ರಮವಾಗಿ ಗಣಿಗಾರಿಕೆ ನಡೆಸಿದೆ. ಮತ್ತು ಕಾನೂನುಬಾಹಿರವಾಗಿ 78,33,415 ಟನ್ ಸುಣ್ಣದ ಕಲ್ಲನ್ನು ಸಾಗಿಸಿದೆ. ಕಾನೂನು ಉಲ್ಲಂಘಿಸಿದ್ದಕ್ಕಾಗಿ 482,69,65,137 ರು.ಗಳಷ್ಟು ದಂಡವನ್ನು ವಿಧಿಸಿದೆ.

 

 

ವಿಶೇಷವೆಂದರೇ ಈ ದಂಡದ ಆದೇಶವನ್ನು ಎಸಿಸಿ ಲಿಮಿಟೆಡ್‌ ( 18655/2025) ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಮೂಲಕ ಪ್ರಶ್ನಿಸಿದೆ. ಆದರೂ ಸಹ ದಂಡದ ಆದೇಶವನ್ನು ಕಾರ್ಯಗತಗೊಳಿಸಲು ಉಚ್ಛ ನ್ಯಾಯಾಲಯವು ಯಾವುದೇ ತಡೆಯನ್ನು ನೀಡಿಲ್ಲ. ಈ ಸಂದರ್ಭದಲ್ಲಿ, ಟೆಂಡರ್ ಅಧಿಸೂಚನೆಯ ಷರತ್ತು 10 (ಎಫ್) ರ ನಿಯಮಗಳು ಮತ್ತು ಷರತ್ತುಗಳು ದಂಡದ ಆದೇಶಕ್ಕೆ ಅನ್ವಯವಾಗುತ್ತವೆ ಎಂದು ರಾಜ್ಯದ ಅಡ್ವೋಕೇಟ್ ಜನರಲ್‌ ಅವರು ಸರ್ಕಾರದ ಗಮನಸೆಳೆದಿದ್ದಾರೆ.

 

 

2021ರ ಜನವರಿ 5ರಂದು ನೀಡಿದ್ದ ಲೆಟರ್ ಇಂಟೆಂಟ್‌ನ ಷರತ್ತಿನ v ಪ್ರಕಾರ ಇದನ್ನು 2024ರ ಅಕ್ಟೋಬರ್‍‌ 30ರವರೆಗೆ ವಿಸ್ತರಿಸಲಾಗಿದೆ. 2020ರ ಅಕ್ಟೋಬರ್‍‌ 5ರಂದು ಟೆಂಡರ್‍‌ ಅಧಿಸೂಚನೆಯ ಷರತ್ತಿನ 10 (ಎಫ್‌) ರಂತೆಯೇ ಅದೇ ಷರತ್ತನ್ನೂ ನಿಗದಿಪಡಿಸುತ್ತದೆ. ಹಾಗೆಯೇ ಈ ದಂಡದ ಆದೇಶವು ಹೈಕೋರ್ಟ್‌ನಲ್ಲಿ ಪ್ರಶ್ನಿಸಿರುವ ಕಾರಣ, ಟೆಂಡರ್ ಅಧಿಸೂಚನೆ/ಎಲ್‌ಒಐಗೆ ಅನುಸಾರವಾಗಿ ಎಸಿಸಿ ಲಿಮಿಟೆಡ್‌ 482,69,65,137 ದಂಡವನ್ನು ಪಾವತಿಸಿದರೇ ರಿಟ್ ಅರ್ಜಿ (18655/2025) ಫಲಿತಾಂಶಕ್ಕೆ ಒಳಪಟ್ಟು, ಎಸಿಸಿ ಪರವಾಗಿ ಎಂಡಿಪಿಎಯನ್ನು ಕಾರ್ಯಗತಗೊಳಿಸಬಹುದು ಎಂದು ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.

 

 

‘ಈ ಮೇಲ್ಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಕಲಬುರಗಿಯ ಕಣ್ಣೂರುನಲ್ಲಿರುವ ಗಣಿಗಾರಿಕೆ ಬ್ಲಾಕ್‌ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಎಸಿಸಿ ಪರವಾಗಿ ಎಂಡಿಪಿಎ ಕಾರ್ಯಗತಗೊಳಿಸುವುದನ್ನು ಪರಿಗಣಿಸಬಹುದು ,’ ಎಂದು ಅಭಿಪ್ರಾಯಿಸಿರುವ ಶಶಿಕಿರಣ್ ಶೆಟ್ಟಿ ಅವರು ಕೆಲವೊಂದು ಕ್ರಮಗಳನ್ನು ಕೈಗೊಳ್ಳಲು ಸಲಹೆ ನೀಡಿದ್ದಾರೆ.

 

 

ಅಡ್ವೋಕೇಟ್ ಜನರಲ್ ನೀಡಿರುವ ಸಲಹೆಗಳೇನು ?

 

ಈ ಪ್ರಕರಣದಲ್ಲಿನ ದೊಡ್ಡ ಆರ್ಥಿಕ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಎಂಡಿಪಿಎ ಕಾರ್ಯಗತಗೊಳಿಸಲು ಮುಂದುವರಿಯುವ ಮೊದಲು ಹಣಕಾಸು ಇಲಾಖೆಯ ಒಪ್ಪಿಗೆಯನ್ನು ಪಡೆಯುವುದು ಸೂಕ್ತ ಎಂಬ ಸಲಹೆ ನೀಡಿದ್ದಾರೆ.

 

 

2024ರ ಏಪ್ರಿಲ್‌ 10ರಂದು ಹೊರಡಿಸಿರುವ ರಾಯಧನದ ಮೌಲ್ಯಮಾಪನ ಆದೇಶ ಅಥವಾ ರಿಟ್‌ ಅರ್ಜಿಗಳ (25298/2024, 18655/2025, 36850/2025) ಫಲಿತಾಂಶವನ್ನು ಆಧರಿಸಿ ಹೊರಡಿಸಬಹುದಾದ ಇತರ ಭವಿಷ್ಯದ ಆದೇಶಗಳು ಅಥವಾ ಗಣಿಗುತ್ತಿಗೆ 2641 ಗೆ ಸಂಬಂಧಿಸಿದಂತೆ ಯಾವುದೇ ಇತರ ಭವಿಷ್ಯದ ಮೌಲ್ಯಮಾಪನ ಆದೇಶದ ಆಧಾರದ ಮೇಲೆ 2641 ಗಾಗಿ ಬಾಕಿ ರಾಯಲ್ಟಿಯನ್ನು ಪಾವತಿಸುವುದಾಗಿ ಅಫಿಡವಿಟ್ ಮೂಲಕ ಹೊಸ ಒಪ್ಪಂದವನ್ನು ಪಡೆಯ ಬಹುದು ಎಂದು ಸಲಹೆ ನೀಡಿದ್ದಾರೆ.

 

 

ಎಸಿಸಿ ಲಿಮಿಟೆಡ್‌ ಸಂಪೂರ್ಣವಾಗಿ ದಂಡದ ಮೊತ್ತವಾಗಿರುವ 482,69,65,137 ರು.ಗಳನ್ನು ಪಾವತಿಗೆ ಸಂಬಂಧಿಸಿದಂತೆ ರಿಟ್‌ ಅರ್ಜಿ (18655/2025) ಫಲಿತಾಂಶಕ್ಕೆ ಒಳಪಡಬೇಕು ಎಂದು ಸಲಹೆ ನೀಡಿರುವುದು ಗೊತ್ತಾಗಿದೆ.

 

ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಪ್ರೈವೈಟ್‌ ಲಿಮಿಟೆಡ್‌ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಸಂಪೂರ್ಣವಾಗಿ 850 ಕೋಟಿ ವಸೂಲು ಮಾಡಬೇಕು ಎಂದು ಖುದ್ದು ಕಾನೂನು ಸಚಿವ ಎಚ್‌ ಕೆ ಪಾಟೀಲ್ ಅವರು ಸ್ಪಷ್ಟವಾಗಿ ನೀಡಿದ್ದ ಅಭಿಪ್ರಾಯವನ್ನೇ ಕಾನೂನು ಇಲಾಖೆ (ಅಭಿಪ್ರಾಯ) ಅಧಿಕಾರಿಗಳು ಮುಚ್ಚಿಟ್ಟಿದ್ದಾರೆ.

 

ಅದಾನಿ ಸಮೂಹದ ಎಸಿಸಿ ಪ್ರಕರಣ; ಕಾನೂನು ಅಧಿಕಾರಿಗಳ ಕಳ್ಳಾಟ, ಅಭಿಪ್ರಾಯವನ್ನೇ ಮುಚ್ಚಿಟ್ಟಿತೇ?

 

 

ಕಾನೂನು ಇಲಾಖೆ ನೀಡಿರುವ ಅಭಿಪ್ರಾಯದಲ್ಲೇನಿದೆ?

 

ಕಣ್ಣೂರು ವಾಡಿ ಸುಣ್ಣದ ಕಲ್ಲು ಬ್ಲಾಕ್‌ಗೆ ಸಂಬಂಧಿಸಿದಂತೆ ಎಸಿಸಿ  ಲಿಮಿಟೆಡ್ ಪರವಾಗಿ ಗಣಿ ಅಭಿವೃದ್ಧಿ ಮತ್ತು ಉತ್ಪಾದನಾ ಒಪ್ಪಂದ (MDPA) ಅನ್ನು ಕಾರ್ಯಗತಗೊಳಿಸಲು ಅನುಮತಿ ಇದೆಯೇ, ಮತ್ತು  ವಿಶೇಷವಾಗಿ  ಉಚ್ಚ ನ್ಯಾಯಾಲಯದ ಮುಂದೆ ಬಾಕಿ ಇರುವ ರಿಟ್ ಅರ್ಜಿಗಳ ಕುರಿತಾಗಿ  ಕಾನೂನು ಅಭಿಪ್ರಾಯವನ್ನು ಕೋರಲಾಗಿದೆ. ಇಲಾಖೆಯು ಸಲ್ಲಿಸಿದ ಕಡತ ಮತ್ತು ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿದೆ.

 

2020ರ ಅಕ್ಟೋಬರ್‍‌ 5ರಂದು  2020ರ ಅಕ್ಟೋಬರ್ 05 ರಂದು ರಾಜ್ಯ ಸರ್ಕಾರವು ಕಲಬುರಗಿ ಜಿಲ್ಲೆಯ 533.65 ಹೆಕ್ಟೇರ್ ಭೂಪ್ರದೇಶದಲ್ಲಿ ಕಣ್ಣೂರು ವಾಡಿ ಸುಣ್ಣದ ಕಲ್ಲು ಬ್ಲಾಕ್‌ನ ಹರಾಜಿಗಾಗಿ ಟೆಂಡರ್ ಅಧಿಸೂಚನೆಯನ್ನು ಹೊರಡಿಸಿತ್ತು.  ಮತ್ತು ಎಸಿಸಿ  ಲಿಮಿಟೆಡ್ ಮಾತ್ರ   ಅರ್ಜಿ ಸಲ್ಲಿಸಿತ್ತು.  ಮತ್ತು ಈಗ ಎಸಿಸಿ  ಲಿಮಿಟೆಡ್ ಪರವಾಗಿ ಆದೇಶ ಹೊರಡಿಸಲು ಬಯಸಿದೆ.  ಈ  ಹರಾಜು ಪ್ರಕ್ರಿಯೆಯಲ್ಲಿ ಐಬಿಎಂ  ಬೆಲೆಯ ಶೇ.  35.15 ರಷ್ಟು ಉಲ್ಲೇಖಿಸಿತ್ತು.

 

 

 

ಕಾನೂನು ಇಲಾಖೆಯಿಂದ ಟೆಂಡರ್ ಷರತ್ತಿನ ಷರತ್ತು 10(ಎಫ್) ಉಲ್ಲೇಖ

 

ಈ ಪ್ರಕರಣದಲ್ಲಿ ಅಭಿಪ್ರಾಯ ನೀಡಿರುವ ಕಾನೂನು ಇಲಾಖೆಯು ಟೆಂಡರ್ ಷರತ್ತಿನ ಷರತ್ತು 10(ಎಫ್) ನ್ನು ಉಲ್ಲೇಖಿಸಿದೆ. ಎಂಎಂಡಿಆರ್ 1957ರಡಿಯಲ್ಲಿ ಜಾರಿಯಲ್ಲಿರುವ ಎಲ್ಲಾ ನಿಬಂಧನೆಗಳ ಪ್ರಕಾರ ಬಿಡ್ಡರ್‍‌ ರಾಜ್ಯದಲ್ಲಿ  ಹಿಂದಿನ ಗಣಿಗಾರಿಕೆ ಚಟುವಟಿಕೆ ನಡೆಸಿದ್ದಕ್ಕೆ ಮೊತ್ತ ಪಾವತಿಸಬೇಕು. ಮತ್ತು ಭವಿಷ್ಯದಲ್ಲಿ ಕರ್ನಾಟಕ ಸರ್ಕಾರವು ನಿರ್ಧರಿಸುವ ಎಲ್ಲಾ ಬಾಕಿಗಳನ್ನೂ ಸಹ ತೀರುವಳಿ ಮಾಡುವುದಾಗಿ ಮುಚ್ಚಳಿಕೆ ನೀಡಬೇಕು.

 

 

 

ಒಂದೊಮ್ಮೆ ಬಾಕಿಗಳನ್ನು ನಿರ್ಧರಿಸದೇ ಇದ್ದರೇ ಎಂಎಂಡಿಅರ್‍‌ ಕಾಯ್ದೆ 1957ರ ನಿಯಮದ ನಿಬಂಧನೆಗಳ ಪ್ರಕಾರ ಹಿಂದಿನ ಗಣಿಗಾರಿಕೆ ಚಟುವಟಿಕೆಯಿಂದ ಉಂಟಾದ ನಷ್ಟವನ್ನು ಸರ್ಕಾರಕ್ಕೆ ಪಾವತಿಸಬೇಕು ಎಂದು 10 ಎಫ್‌ನ ಸಾರಾಂಶವನ್ನು ಅಭಿಪ್ರಾಯದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಎಸಿಸಿ ಲಿಮಿಟೆಡ್‌ ನ್ಯಾಯಾಲಯದಲ್ಲಿ ಸಲ್ಲಿಸಿರುವ ರಿಟ್‌ ಅರ್ಜಿಗಳನ್ನೂ ಕಾನೂನು ಇಲಾಖೆಯು ಅವಲೋಕಿಸಿದೆ. ಈ ಅರ್ಜಿಗಳೂ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ ಎಂಬ ಅಂಶವನ್ನು ಉಲ್ಲೇಖಿಸಿರುವ ಕಾನೂನು ಇಲಾಖೆಯು,  ಕಂಪನಿಯು  ಅಧಿಸೂಚನೆಯ   10(ಎಫ್) ನಲ್ಲಿನ ಷರತ್ತುಗಳನ್ನು  ಪಾಲಿಸಿಲ್ಲ.

 

ಅಲ್ಲದೇ  ಎಸಿಸಿ ಲಿಮಿಟೆಡ್‌ ಗೆ  ಮತ್ತೊಂದು 50 ವರ್ಷಗಳ ಗುತ್ತಿಗೆಯೊಂದಿಗೆ ಮುಂದುವರಿಯುವುದು ರಾಜ್ಯ ಹಿತಾಸಕ್ತಿಯಾಗುವುದಿಲ್ಲ ಅಥವಾ 50 ವರ್ಷಗಳ ಗುತ್ತಿಗೆಯೊಂದಿಗೆ ಮುಂದುವರೆಯುವುದು  ವಿವೇಕಯುತವೂ ಅಲ್ಲ ಎಂದು ಕಾನೂನು ಇಲಾಖೆಯು ಸ್ಪಷ್ಟವಾಗಿ ಹೇಳಿತ್ತು.

 

ರಾಜ್ಯದ ಹಿತಾಸಕ್ತಿ ಬಲಿ ಕೊಟ್ಟು ಅದಾನಿಗೆ ರತ್ನಗಂಬಳಿ; ಕಾನೂನು ಅಭಿಪ್ರಾಯ ಕೈ ಸೇರದೆಯೇ ಕೇಂದ್ರಕ್ಕೆ ಪ್ರಸ್ತಾವ

 

ಕಾನೂನುಬದ್ಧ ಪ್ರಾಧಿಕಾರವಿಲ್ಲದೆ ಗಣಿಗಾರಿಕೆಯನ್ನು ನಡೆಸಿದರೆ ಎಂಎಂಡಿಆರ್ ಕಾಯ್ದೆಯ ಸೆಕ್ಷನ್‌ 21(5) ಅನ್ವಯವಾಗುತ್ತದೆ. ಹೀಗಾಗಿ ರಾಯಧನ, ಮತ್ತು ಕಾನೂನುಬಾಹಿರವಾಗಿ ಗಣಿಗಾರಿಕೆ ಮಾಡಿದ ಖನಿಜದ ಬೆಲೆಯ ಶೇ.100ರಷ್ಟನ್ನೂ ವಸೂಲು ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಅಲ್ಲದೇ  ಅಂತಹ ವಸೂಲಾತಿಯು ಕ್ರಿಮಿನಲ್ ಮೊಕದ್ದಮೆಯಿಂದ ಸ್ವತಂತ್ರವಾಗಿದೆ ಎಂದು ಕಾನೂನು ಅಭಿಪ್ರಾಯದಲ್ಲಿ ವಿವರಿಸಿದೆ.

 

‘ಆದ್ದರಿಂದ, ವಸೂಲಾತಿಯನ್ನು ಕೇವಲ ದಂಡದ ಮೊತ್ತಕ್ಕೆ ಸೀಮಿತಗೊಳಿಸಲಾಗುವುದಿಲ್ಲ. ಸಂಪೂರ್ಣ ₹850.21 ಕೋಟಿ ರು.ಗಳನ್ನು  ವಸೂಲಿ ಮಾಡಬೇಕು. ಕಂಪನಿಯು ರಾಜ್ಯದ ಅನುಮತಿಯಿಲ್ಲದೆ ಸುಮಾರು ಎರಡು ವರ್ಷಗಳ ಕಾಲ ಗಣಿಗಾರಿಕೆ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಇದು ಎಂಎಂಡಿಆರ್ ಕಾಯಿದೆಯಡಿಯಲ್ಲಿ “ಕಾನೂನುಬಾಹಿರ ಗಣಿಗಾರಿಕೆ” ಯ ವ್ಯಾಖ್ಯಾನದೊಳಗೆ ಸ್ಪಷ್ಟವಾಗಿ ಬರುತ್ತದೆ,’ ಎಂದು ‍ಹೇಳಿರುವುದು ಗೊತ್ತಾಗಿದೆ.

 

ಜಯಂತ್‌/ ಮಧ್ಯಪ್ರದೇಶ ರಾಜ್ಯ ಸರ್ಕಾರ ಪ್ರಕರಣದಲ್ಲಿ (2020) 18 SCC 401)  ಅಪರಾಧಗಳ ಸಂಯೋಜನೆ ಅಥವಾ ದಂಡದ ಪಾವತಿಯು ಕ್ರಿಮಿನಲ್ ಮೊಕದ್ದಮೆಗೆ ಅಡ್ಡಿಯಾಗುವುದಿಲ್ಲ. ಆಡಳಿತಾತ್ಮಕ ದಂಡಗಳು ಮತ್ತು ಕ್ರಿಮಿನಲ್ ಪ್ರಕ್ರಿಯೆಗಳು ವಿಭಿನ್ನ ಕಾನೂನು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನೂ ಉಲ್ಲೇಖಿಸಿದೆ.

 

ಹೀಗಾಗಿ, ವಿತ್ತೀಯ ದಂಡಕ್ಕೆ ಸೀಮಿತವಾದ ಪ್ರಸ್ತುತ ಇಲಾಖಾ ಕ್ರಮವು ಕಾನೂನುಬದ್ಧವಾಗಿ ಸಾಕಷ್ಟಿಲ್ಲ.  ಮತ್ತು ಕಾನೂನುಬಾಹಿರ ಗಣಿಗಾರಿಕೆ ಮತ್ತು ಕಾನೂನಿನ ನಿಬಂಧನೆಗಳ ಪುನರಾವರ್ತಿತ ಉಲ್ಲಂಘನೆಗಳಿಗಾಗಿ ಎಂಎಂಡಿಆರ್  ಕಾಯಿದೆಯ ಸೆಕ್ಷನ್ 21(1) ಮತ್ತು (2) ರ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಅದಕ್ಕೆ ಅನುಗುಣವಾಗಿ, ಆಡಳಿತ ಇಲಾಖೆಯು ತಕ್ಷಣವೇ ಕಾನೂನುಬಾಹಿರವಾಗಿ ಗಣಿಗಾರಿಕೆ ಮಾಡಿದ ಖನಿಜದ ಬೆಲೆ, ರಾಯಧನ, ಬಡ್ಡಿ ಮತ್ತು ದಂಡದ ಶೇ. 100ರಷ್ಟು  ವಸೂಲಿಗಾಗಿ ಬೇಡಿಕೆಗಳನ್ನು ಹೆಚ್ಚಿಸಿಬೇಕಲ್ಲದೇ ಅದನ್ನು  ಜಾರಿಗೊಳಿಸಬೇಕು ಎಂದು ಹೇಳಿದೆ.

 

 

ಹಾಗೆಯೇ ಕಾನೂನುಬಾಹಿರ  ಗಣಿಗಾರಿಕೆ ಮತ್ತು ಪುನರಾವರ್ತಿತ ಉಲ್ಲಂಘನೆಗಳಿಗಾಗಿ ಎಂಎಂಡಿಆರ್ ಕಾಯಿದೆಯ ಸೆಕ್ಷನ್‌ಗಳು 21(1) ಮತ್ತು 21(2) ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಾರಂಭಿಸಬೇಕು ಎಂದು ಕಾನೂನು ಇಲಾಖೆಯು ತನ್ನ ಅಭಿಪ್ರಾಯದಲ್ಲಿ ಶಿಫಾರಸ್ಸು ಮಾಡಿರುವುದು ತಿಳಿದು ಬಂದಿದೆ.

 

ಎಸಿಸಿಯನ್ನು ನಿರ್ಬಂಧಿಸಿ

 

ಈ ಪ್ರಕರಣದಲ್ಲಿ ಗಮನಾರ್ಹವಾದ ಆರ್ಥಿಕ ಪರಿಣಾಮಗಳನ್ನು ಒಳಗೊಂಡಿದೆ. ಅಲ್ಲದೇ  ಬಿಡ್ಡಿಂಗ್/ಹರಾಜು ಕಾರ್ಯವಿಧಾನಗಳು ಒಳಗೊಂಡಿರುವುದರಿಂದ   ಹಣಕಾಸು ಇಲಾಖೆಯನ್ನು ಸಂಪರ್ಕಿಸಬಹುದು.  ಮತ್ತು ಕಾನೂನುಗಳ ಪರಿಪಾಲನೆಯನ್ನು  ಖಚಿತಪಡಿಸಿಕೊಳ್ಳುವವರೆಗೆ  ಎಸಿಸಿ ಲಿಮಿಟೆಡ್ ಅನ್ನು ಭವಿಷ್ಯದಲ್ಲಿ  ಸರ್ಕಾರಿ ಟೆಂಡರ್‌ಗಳು, ಹರಾಜುಗಳು ಮತ್ತು ಗಣಿಗಾರಿಕೆ-ಸಂಬಂಧಿತ ಪ್ರಕ್ರಿಯೆಗಳಲ್ಲಿ ಭಾಗವಹಿಸದಂತೆ ನಿರ್ಬಂಧಿಸಬೇಕು ಎಂದು ಕಾನೂನು ಇಲಾಖೆಯು ಶಿಫಾರಸ್ಸು ಮಾಡಿದೆ. ಇದನ್ನು ಸಚಿವ ಎಚ್‌ ಕೆ ಪಾಟೀಲ್‌ ಅವರೂ ಸಹ ಅನುಮೋದಿಸಿದ್ದಾರೆ.

 

 

 

ಕಾನೂನು ಇಲಾಖೆಯ ಅಭಿಪ್ರಾಯಕ್ಕೂ ಎದುರು ನೋಡದೆಯೇ  ಲೆಟರ್ ಅಫ್‌ ಇಂಟೆಂಟ್‌ನ್ನು ಒಂದು ವರ್ಷದ ಅವಧಿಯವರೆಗೆ ವಿಸ್ತರಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ)ಯು ನೇರವಾಗಿ  ಕೇಂದ್ರ ಸರ್ಕಾರದ ನಿರ್ದೇಶನ ಕೋರಿದೆ.

 

ಲೋಕಸಭೆ ಪ್ರತಿಪಕ್ಷ  ನಾಯಕ ರಾಹುಲ್ ಗಾಂಧಿ ಆದಿಯಾಗಿ ಕಾಂಗ್ರೆಸ್‌ನ ಧುರೀಣರು ಅದಾನಿ ವಿರುದ್ಧ ಪ್ರತಿನಿತ್ಯ ಟೀಕೆಗಳನ್ನು ಮಾಡುತ್ತಿದ್ದಾರೆ. ಇತ್ತ ಕರ್ನಾಟಕ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು (ಗಣಿ) ಕಾನೂನು ಅಭಿಪ್ರಾಯಕ್ಕೆ ಎದುರು ನೋಡದೆಯೇ ಅದಾನಿ ಸಮೂಹಕ್ಕೆ ಅನುಕೂಲವಾಗುವಂತೆ  ಕೇಂದ್ರ ಸರ್ಕಾರದ ನಿರ್ದೇಶನ ಕೋರಿ ಪ್ರಸ್ತಾವ ಸಲ್ಲಿಸಿದೆ.   2026ರ ಆರಂಭದಲ್ಲೇ  ಬಹುದೊಡ್ಡ ಹಗರಣಕ್ಕೆ ರಾಜ್ಯ ಕಾಂಗ್ರೆಸ್‌ ಸರ್ಕಾರವು  ಮುನ್ನುಡಿ ಬರೆದಂತಾಗಿದೆ.

 

 

ಕಾನೂನು ಅಭಿಪ್ರಾಯ ಕೈ ಸೇರುವ ಮುನ್ನವೇ ಪ್ರಸ್ತಾವ ಸಲ್ಲಿಸಿದ್ದ ಇಲಾಖೆ

 

ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ಲೆಟರ್ ಆಫ್‌ ಇಂಟೆಂಟ್‌ನ್ನು ವಿಸ್ತರಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು (ಗಣಿ)  ಕಾನೂನು ಇಲಾಖೆಯ ಅಭಿಪ್ರಾಯವನ್ನು ಕೋರಿತ್ತು.  ಆದರೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು (ಗಣಿ)   ಈ ಅಭಿಪ್ರಾಯಕ್ಕೂ ಕಾದಿರಲಿಲ್ಲ. ಬದಲಿಗೆ ಕಾನೂನು ಅಭಿಪ್ರಾಯ ತನ್ನ ಕೈ ಸೇರುವ ಮುನ್ನವೇ  ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು.

 

ಅದಾನಿ ಅಧಿಪತ್ಯದ ಎಸಿಸಿ ಸಿಮೆಂಟ್ಸ್‌ಗೆ ಗಣಿ ಗುತ್ತಿಗೆ ಕರಾರು; ವಸೂಲಿಗೆ 850 ಕೋಟಿ ಬಾಕಿ ಇದ್ದರೂ ಕೇಂದ್ರಕ್ಕೆ ಪ್ರಸ್ತಾವ?

 

ಈ ಸಂಬಂಧ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದೆ ಎಂದು ದಿ ಫೈಲ್‌ 2026ರ ಜನವರಿ 7ರಂದೇ ವರದಿ ಪ್ರಕಟಿಸಿತ್ತು.

Your generous support will help us remain independent and work without fear.

Latest News

Related Posts