ಆರ್ಥಿಕ ಬಿಕ್ಕಟ್ಟಿನಲ್ಲಿ ಎತ್ತಿನಹೊಳೆ; ಗುತ್ತಿಗೆದಾರರ ಆರ್ಥಿಕ ಸಾಮರ್ಥ್ಯ, ಅನುಭವದ ಮೌಲ್ಯಮಾಪನವೇ ಆಗಿಲ್ಲ

ಬೆಂಗಳೂರು;  ಎತ್ತಿನಹೊಳೆ ಯೋಜನೆಗೆ 2018-19ರಿಂದ 2022-23ರವರೆಗಿನ ಆಯವ್ಯಯದಲ್ಲಿ ಕೇವಲ ಶೇ. 25ರಿಂದ 54ರಷ್ಟನ್ನು ಅನುದಾನವನ್ನು  ಮಾತ್ರ ಒದಗಿಸಿತ್ತು. ಹೀಗಾಗಿ ಇಡೀ ಯೋಜನೆಯು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತು. ಅಲ್ಲದೇ ಗುತ್ತಿಗೆದಾರರ ಆರ್ಥಿಕ ಸಾಮರ್ಥ್ಯ, ಬಿಡ್‌ ಸಾಮರ್ಥ್ಯ ಮತ್ತು ಕೆಲಸದ ಅನುಭವವನ್ನೇ ಮೌಲ್ಯಮಾಪನ ಮಾಡಿರಲಿಲ್ಲ. ಮೌಲ್ಯಮಾಪನ ಮಾಡದೆಯೇ ಶೇ. 80ರಷ್ಟು ಕಾಮಗಾರಿಗಳನ್ನು ಅಸಮರ್ಥತೆ ಹೊಂದಿದ್ದ ಗುತ್ತಿಗೆಯನ್ನು ನೀಡಲಾಗಿತ್ತು.

 

2026ರ ಜನವರಿ 29ರಂದು ನಡೆದ ವಿಧಾನಸಭೆ ಅಧಿವೇಶನದಲ್ಲಿ ಮಂಡನೆಯಾಗಿರುವ  ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಅನುಷ್ಠಾನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕ ಪರಿಶೋಧನೆಯು, ಇಡೀ ಯೋಜನೆಯನ್ನು ಪುನರ್ ಅವಲೋಕಿಸಿದೆ. ಮತ್ತು ಇದರ ಆರ್ಥಿಕ ಪರಿಣಾಮಗಳ ಮೇಲೆ ಬೆಳಕು ಚೆಲ್ಲಿದೆ.

 

ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಅವರು ಎತ್ತಿನಹೊಳೆ ಯೋಜನೆಯ ಕಾರ್ಯಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಇದರ ಬೆನ್ನಲ್ಲೇ ಸಿಎಜಿ ನೀಡಿರುವ ವರದಿಯು ಮುನ್ನೆಲೆಗೆ ಬಂದಿದೆ.

 

ಬರಪೀಡಿತ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರು ಒದಗಿಸಲು ರೂಪಿಸಿರುವ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯು 12 ವರ್ಷಗಳಿಗೂ ಹೆಚ್ಚು ಕಾಲ ನೆನೆಗುದಿಗೆ ಬಿದ್ದಿದೆ. ಈ ಯೋಜನೆಯನ್ನು ಪೂರ್ಣಗೊಳಿಸಲು ಸರ್ಕಾರವು ಯಾವುದೇ ಗಡುವನ್ನೂ ನಿಗದಿಪಡಿಸಲು ಸಾಧ್ಯವಾಗಿಲ್ಲ. ಹೀಗಾಗಿ ಇಡೀ ಯೋಜನೆಯು ಬಳಲುತ್ತಿದೆ ಎಂದು ಕಾರ್ಯನಿರ್ವಹಣಾ ವರದಿಯಲ್ಲಿ ವಿಶ್ಲೇಷಿಸಿರುವುದು ತಿಳಿದು ಬಂದಿದೆ.

 

 

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನೀರನ್ನು ಕೊಂಡ್ಯೊಯ್ಯಲು ಗುರುತ್ವಾಕರ್ಷಣಾ ಕಾಲುವೆ ಮತ್ತು ಸಮತೋಲನ ಜಲಾಶಯ ಕಾಮಗಾರಿಯು ಅತ್ಯಗತ್ಯವಾಗಿ ಪೂರ್ಣಗೊಳ್ಳಬೇಕಿತ್ತು. ಪೂರ್ಣಗೊಳ್ಳದ ಕಾರಣ, ಮೊದಲನೇ ಹಂತದಲ್ಲಿ 2,965.77 ಕೋಟಿ ಮೊತ್ತದಲ್ಲಿ ರಚಿಸಿದ್ದ ಸ್ವತ್ತುಗಳು ನಿಷ್ಕ್ರೀಯವಾಗಿದ್ದವು. ಪಂಪ್‌ಗಳು, ಮೋಟಾರ್‍‌ಗಳಂತಹ ಎಲೆಕ್ಟ್ರೋ ಮೆಕ್ಯಾನಿಕಲ್ ಉಪಕರಣಗಳನ್ನು ಪರೀಕ್ಷಿಸಲೂ ಸಹ ಸಾಧ್ಯವಾಗಲಿಲ್ಲ. ಈ ಉಪಕರಣಗಳ ಉಪಯುಕ್ತ ಜೀವಿತಾವಧಿಯ ಗಮನಾರ್ಹ ಭಾಗವನ್ನೂ ಸಹ ಬಳಸಲಾಗಲಿಲ್ಲ. ಹೀಗಾಗಿ ಈ ಉಪಕರಣಗಳು ನಿಷ್ಕ್ರೀಯವಾಗಿದ್ದವು ಎಂದು ಕಾರ್ಯನಿರ್ವಹಣಾ ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಸಿಎಜಿ ಗಮನಿಸಿರುವುದೇನು?

 

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ಎರಡು ಬಾರಿ ಪರಿಷ್ಕರಿಸಲಾಗಿದೆ. 2012ರಲ್ಲಿ ಅನುಮೋದಿಸಿದ್ದ ಮೂಲ ಯೋಜನೆ ಮೊತ್ತ 8,323.50 ಕೊಟಿ ಗಳಿಂದ 2014ರ ಫೆಬ್ರುವರಿಯಲ್ಲಿ 12,912.36 ಕೊಟಿ ರುಗೆ, 2023ರ ಜನವರಿಯಲ್ಲಿ 23,251.66 ಕೋಟಿ ರು ಗಳಿಗೆ ಪರಿಷ್ಕರಿಸಲಾಗಿದೆ. ಎರಡು ಹಂತಗಳಲ್ಲಿ ಕಾರ್ಯಗತಗೊಳಿಸಲು ಉದ್ದೇಶಿಸಿದ್ದ ನಿಗಮವು, 2014ರ ಮಾರ್ಚ್‌ನಿಂದ ವಿವಿಧ ಪ್ಯಾಕೇಜ್‌ಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿತ್ತು. ಆದರೂ ಸಹ ಯೋಜನಾ ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿವೆ. ಮತ್ತು ಪೂರ್ಣಗೊಳ್ಳಲು ಹಾಗೂ ಉದ್ದೇಶಿತ ಯೋಜನೆಯ ಪ್ರಯೋಜನ ಆಗಬೇಕಾದರೆ ಇನ್ನೂ ಕಾಲಾವಕಾಶ ಬೇಕಿದೆ ಎಂದು ವರದಿ ಹೇಳಿದೆ.

 

 

ಅಲ್ಲದೇ ಈ  ಕಾರ್ಯಸಾಧ್ಯತೆ (ಡಿಪಿಆರ್‍‌) ವರದಿಗಳು ಯೋಜನೆಯನ್ನು ಪೂರ್ಣಗೊಳಿಸಲು ಉದ್ದೇಶಿತ ದಿನಾಂಕವನ್ನು ನಿಗದಿಪಡಿಸಿಲ್ಲ. ಸಮತೋಲನ ಜಲಾಶಯದ ಸ್ಥಳವನ್ನು ಎರಡು ಬಾರಿ ಬದಲಾಯಿಸಲಾಗಿದೆ. ಮತ್ತು ಅದರ ಸಾಮರ್ಥ್ಯಕ್ಕೆ ಅನುಗುಣವಾಗಿ ಆರಂಭದಲ್ಲಿ ಪ್ರಸ್ತಾವಿಸಿದ್ದ ಹತ್ತು ಟಿಎಂಸಿಯಿಂದ ಎರಡು ಟಿಎಂಸಿಗೆ ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಮಳೆಗಾಲದ ತಿಂಗಳಲ್ಲಿ ಹೆಚ್ಚಿನ ನೀರನ್ನು ಪಂಪ್‌ ಮಾಡುವ ಅಗತ್ಯವಿದೆ. ವಿನ್ಯಾಸದಲ್ಲೇ ಬದಲಾವಣೆ ಮಾಡಿರುವ ಕಾಋಣ 621.45 ಕೋಟಿಯಷ್ಟು ಹೆಚ್ಚುವರಿಯಾಗಿ ವೆಚ್ಚ ಮಾಡಬೇಕಾದ ಪರಿಸ್ಥಿತಿಗೆ ದೂಡಿದಂತಾಗಿರುವುದು ವರದಿಯಿಂದ ಗೊತ್ತಾಗಿದೆ.

 

ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ ಯೋಜನೆ

 

2018-19ರಿಂದ 2022-23ರ ಅವಧಿಯಲ್ಲಿ ಯೋಜನೆಗೆ ಆಯವ್ಯಯ ಅವಕಾಶದಲ್ಲಿ ಕೇವಲ ಶೆ. 25ರಿಂದ 54ರಷ್ಟನ್ನು ಮಾತ್ರ ಸರ್ಕಾರವು ಅನುದಾನ ಒದಗಿಸಿದೆ. ಹೀಗಾಗಿ ಈ ಯೋಜನೆಯು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತು. ಯೋಜನೆಯ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯವಾದ ಹೊಸ ಸಾಲ ಪಡೆಯಲು ವಿಜೆಎನ್‌ಎಲ್‌ ಕೋರಿತ್ತು. 2024ರ ಮಾರ್ಚ್‌ವರೆಗೆ ಸರ್ಕಾರದ ಅನುಮೋದನೆಗೆ ಕಾಯ್ದಿರಿಸಲಾಗಿತ್ತು. ಹೀಗಾಗಿ 2024ರ ಮಾರ್ಚ್‌ನಲ್ಲಿದ್ದಂತೆ ಈ ಯೋಜನೆಯು ಪೂರ್ಣಗೊಳಿಸಲು ಅಗತ್ಯವಿರುವ 7,954.63 ಕೋಟಿ ರು.ಗಳ ಬಗ್ಗೆ ನಿಗಮವು  ಆರ್ಥಿಕ ಅನಿ‍ಶ್ಚತೆಯಲ್ಲಿದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಿದೆ.

 

 

ಫಲಪ್ರದವಾಗದ 2,965.77 ಕೋಟಿ ವೆಚ್ಚ

 

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಲಿಫ್ಟ್‌ ಮಾಡಿದ ನೀರನ್ನು ಸಾಗಿಸಲು ಹಂತ-1ರಲ್ಲಿ ಲಿಫ್ಟಿಂಗ್‌ ಘಟಕ ಮತ್ತು ಎಲೆಕ್ಟ್ರೋ ಮೆಕ್ಯಾನಿಕಲ್‌ ಕಾಮಗಾರಿಗಳು, ಎರಡನೇ ಹಂತದಲ್ಲಿ ಗುರುತ್ವಾಕರ್ಷಣೆ, ಫೀಡರ್ ಕಾಲುವೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿತ್ತು. ಎರಡನೇ ಹಂತದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಭೂ ಸ್ವಾಧೀನಪಡಿಸಿಕೊಳ್ಳಬೇಕಿದ್ದ ವಿಜೆಎನ್‌ಎಲ್‌, ಪ್ರಸ್ತಾವನೆಗಳನ್ನು ನಿಗದಿತ ಅವಧಿಯೊಳಗೆ ಸಲ್ಲಿಸಲಿಲ್ಲ. ಭೂ ಸ್ವಾಧೀನದಲ್ಲಿನ ವಿಳಂಬ ಮತ್ತು ಸಾಮಾಜಿಕ ಪರಿಣಾಮ ಮೌಲ್ಯಮಾಪನ ಕಾಮಗಾರಿಗಳೂ ಸಹ ವಿಳಂಬವಾಗಿದ್ದವು.

 

ಈ ಅವಧಿ ಮಧ್ಯೆ ಪಂಪ್‌, ಮೋಟಾರ್‍‌ಗಳಂತಹ ಎಲೆಕ್ಟ್ರೋ ಮೆಕ್ಯಾನಿಕಲ್ ಉಪೊಕರಣಗಳಿಗಾಗಿ 2,965.77 ಕೋಟಿ ರುಪಾಯಿ ವೆಚ್ಚ ಮಾಡಲಾಗಿತ್ತು. ನಿಗದಿತ ಅವಧಿಯಲ್ಲಿ ಪ್ರಕ್ರಿಯೆಗಳು ಆರಂಭವಾಗದ ಕಾರಣ, 2,965.77 ಕೋಟಿ ರು ಮೊತ್ತದ ಉಪಕರಣಗಳನ್ನು ಬಳಸಲಾಗಲಿಲ್ಲ. ಅವುಗಳು ನಿಷ್ಕ್ರೀಯಯವಾಗಿದ್ದವು ಎಂದು ಸಿಎಜಿ ವರದಿಯಲ್ಲಿ ವಿಶ್ಲೇಷಿಸಿದೆ.

 

ರೈತರ ಪ್ರತಿಭಟನೆ, ಕಾಮಗಾರಿ ಅಪೂರ್ಣ

 

ಭೂ ಸ್ವಾಧೀನಕ್ಕಿಂತ ಮುಂಚಿತವಾಗಿಯೇ ಅಂದರೇ 2017ರ ಡಿಸೆಂಬರ್ ಮತ್ತು 2023ರ ಮಾರ್ಚ್‌ ಮಧ್ಯೆ  ಎರಡನೇ ಹಂತದಲ್ಲಿ ಗುರುತ್ವಾಕರ್ಷಣೆ ಕಾಲುವೆ ಕಾಮಗಾರಿಗಳನ್ನು  8,609.23 ಕೋಟಿ ರು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಭೂ ಸ್ವಾಧೀನವಾಗದಿರುವುದರಿಂದ ಹಾಗೂ ರೈತರ ಪ್ರತಿಭಟನೆಗಳಿಂದಾಗಿ ಕಾಮಗಾರಿಗಳು ಅಪೂರ್ಣಗೊಂಡಿದ್ದವು. ಶೇ.4ರಿಂದ ಶೇ. 92ರಷ್ಟು ಕಾಮಗಾರಿಗಳು ಬಾಕಿ ಉಳಿದಿದ್ದವು. 592.35 ಕೋಟಿ ರು  ಮೊತ್ತದಲ್ಲಿ  ಸಮತೋಲನ ಜಲಾಶಯ ನಿರ್ಮಾಣದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಮಂಜೂರು ಮಾಡಲಾಗಿತ್ತು. ಆದರೆ ಭೂಮಿಯು ಲಭ್ಯವಾಗಿರಲಿಲ್ಲ. ಹೀಗಾಗಿ ಈ ಯೋಜನೆಯನ್ನು 2024ರ ಮಾರ್ಚ್‌ವರೆಗೆ ಆರಂಭಿಸಿರಲಿಲ್ಲ.

 

 

ಆರ್ಥಿಕ ಸಾಮರ್ಥ್ಯವೂ ಇಲ್ಲ, ಮೌಲ್ಯಮಾಪನವೂ ಇಲ್ಲ

 

ಯೋಜನೆ ಗುತ್ತಿಗೆ ನಿರ್ವಹಣೆಯಲ್ಲಿ ನಿಗಮವು ಪ್ರಮಾಣಿತ ಟೆಂಡರ್‍‌ ದಾಖಲೆಯನ್ನೇ ಅಳವಡಿಸಿಕೊಂಡಿರಲಿಲ್ಲ. ಗುತ್ತಿಗೆದಾರರ ಬಿಡ್‌ ಸಾಮರ್ಥ್ಯವನ್ನೂ ಮೌಲ್ಯಮಾಪನ ಮಾಡಿರಲಿಲ್ಲ. ಅಲ್ಲದೇ 87.08 ಕೋಟಿ ರುಗಳಿಂದ 1,135.03 ಕೋಟಿ ರು. ವ್ಯಾಪ್ತಿಯ ಹೆಚ್ಚಿನ ಮೌಲ್ಯದ ಗುತ್ತಿಗೆಗಳಿಗೆ ಸಾಕಷ್ಟು ಬಿಡ್ಡಿಂಗ್‌ ಸಮಯವೇ ಇರಲಿಲ್ಲ. ಇಂತಹ ಹತ್ತಾರು ನ್ಯೂನತೆಗಳನ್ನು ಸಿಎಜಿಯು ಪತ್ತೆ ಹಚ್ಚಿದೆ.

 

ಒಬ್ಬನೇ ಗುತ್ತಿಗೆದಾರನಿಗೆ 5,216.58 ಕೋಟಿ ರು ಮೊತ್ತದ 11 ಗುತ್ತಿಗೆ

 

ಆರ್ಥಿಕ ಸಾಮರ್ಥ್ಯ, ಬಿಡ್‌ ಸಾಮರ್ಥ್ಯ ಮತ್ತು ಕೆಲಸದ ಅನುಭವವನ್ನೇ ಮೌಲ್ಯಮಾಪನ ಮಾಡಿರಲಿಲ್ಲ. ಆದರೂ ಶೇ.80ರಷ್ಟು ಕಾಮಗಾರಿಗಳನ್ನು ಅನನುಭವಿ, ಅಸಾಮರ್ಥ್ಯ ಗುತ್ತಿಗೆದಾರರಿಗೆ ನೀಡಲಾಗಿತ್ತು. ಹೀಗಾಗಿಯೇ ಯೋಜನೆಗಳ ಕಾಮಗಾರಿಗಳು ಸರಿಯಾದ ಸಮಯಕ್ಕೆ ಪೂರ್ಣಗೊಂಡಿಲ್ಲ. ಅಲ್ಲದೇ 14,805.80 ಕೋಟಿಯಷ್ಟು ಮೊತ್ತದ  ಶೇ.67ರಷ್ಟು ಕಾಮಗಾರಿಗಳನ್ನು ಕೇವಲ 7 ಮಂದಿ ಗುತ್ತಿಗೆದಾರರಿಗೆ ನೀಡಲಾಗಿತ್ತು. ಮತ್ತು ಒಬ್ಬೇ ಒಬ್ಬ ಗುತ್ತಿಗೆದಾರನಿಗೆ 5,216.58 ಕೋಟಿ ರು ಮೊತ್ತದ 11 ಗುತ್ತಿಗೆಗಳನ್ನು ನೀಡಲಾಗಿತ್ತು. ಈ ಪ್ರಕರಣದಲ್ಲಿ ವಿಜೆಎನ್‌ಎಲ್‌ ಇಎಂಡಿ ಮುಟ್ಟುಗೋಲು ಹಾಕಿಕೊಳ್ಳಲು ವಿಫಲವಾಯಿತು. ಇದರಿಂದಾಗಿ ಗುತ್ತಿಗೆದಾರರಿಗೆ ಅನುಚಿತ ಲಾಭವಾದಂತಾಗಿದೆ ಎಂದು ಸಿಎಜಿ ವರದಿಯು ಬಹಿರಂಗಗೊಳಿಸಿದೆ.

 

ಪೈಪ್‌ ಸಾಮಗ್ರಿಗಳ ಹೆಚ್ಚುವರಿ ಪೂರೈಕೆಯನ್ನು ವಸೂಲು ಮಾಡುವ ನಿಬಂಧನೆಯೇ ಇಲ್ಲವಾಗಿತ್ತು. ಟರ್ನ್‌ ಕೀ ಒಪ್ಪಂದದ ಭಾಗವಾಗಿದ್ದ ಕೆಲಸಗಳಿಗೂ ಹೆಚ್ಚುವರಿಯಾಗಿ ಪಾವತಿಸಲಾಗಿತ್ತು. ಪೈಪ್‌ಗಳ ಪೂರೈಕೆಗಾಗಿ ಅನಿಯಮಿತ ಮುಂಗಡ ಪೊಆವತಿಗಳು ಮತ್ತು ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಅನುಷ್ಠಾನವಾಗಿದ್ದರೂ ಸಹ ಗುತ್ತಿಗೆದಾರರಿಗೆ ದೊರೆತಿದ್ದ ಪ್ರಯೋಜನೆಗಳನ್ನೂ ವಸೂಲು ಮಾಡಲಿಲ್ಲ. ಹೀಗಾಗಿ ಗುತ್ತಿಗೆದಾರರಿಗೆ ಅನುಚಿತ ಅನುಕೂಲಗಳನ್ನು ಮಾಡಿಕೊಟ್ಟಂತಾಗಿದೆ ಎಂದು ಹಲವು ನಿದರ್ಶನಗಳನ್ನು ಸಿಎಜಿಯು ಮುನ್ನೆಲೆಗೆ ತಂದಿದೆ.

 

15,297 ಕೋಟಿ ವೆಚ್ಚ, ಆದರೂ ಕುಡಿಯುವ ನೀರಿಲ್ಲ

 

ಬರ ಪೀಡಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಎತ್ತಿನಹೊಳೆ ಯೋಜನೆಗೆ ಕಳೆದ 12 ವರ್ಷಗಳಲ್ಲಿ 15,297 ಕೋಟಿ ರುಗಳಷ್ಟು ವೆಚ್ಚವಾಗಿದೆ. ಆದರೂ ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವ ಉದ್ದೇಶವೇ ಈಡೇರಲಿಲ್ಲ. ಸಮತೋಲನ ಜಲಾಶಯದ ಸ್ಥಳ, ಸಾಮರ್ಥ್ಯವನ್ನು ಅಂತಿಮಗೊಳಿಸುವಲ್ಲಿ ಆಗಿದ್ದ ಅತಿಯಾದ ವಿಳಂಬ, ಹಣಕಾಸಿನ ಮೂಲದ ಬಗ್ಗೆ ಅನಿಶ್ಚಿತತೆ, ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಆಗಿದ್ದ ದೀರ್ಘ ವಿಳಂಬವಾಗಿತ್ತು. ಅಲ್ಲದೇ ಅನುಷ್ಠಾನದ ಸಮಯದಲ್ಲಿ ವಿವಿಧ ಅಡಚಣೆಗಳನ್ನು ಸಕಾಲಿಕವಾಗಿ ಪರಿಹರಿಸಿರಲಿಲ್ಲ. ಹೀಗಾಗಿಯೇ ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಗೆ ಕುಡಿಯುವ ನೀರು ಒದಗಿಸುವ ಉದ್ದೇಶವೇ ಸಾಫಲ್ಯವಾಗಲಿಲ್ಲ ಎಂದು ಸಿಎಜಿಯು ವಿಶ್ಲೇಷಿಸಿದೆ.

 

 

ಭೂ ಸ್ವಾಧೀನ ಸಮಸ್ಯೆಗಳು, ಪರಿಸರ, ಅರಣ್ಯ ತೀರುವಳಿ, ಎನ್‌ಜಿಟಿಯಲ್ಲಿ ದಾಖಲಾದ ದಾವೆಗಳು, ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಪೆಟ್ರೋನೆಟ್‌, ಗೇಲ್‌ ಕ್ರಾಸಿಂಗ್‌ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿತ ಇಲಾಖೆಗಳ ಅನುಮತಿ, ಆರ್ಥಿಕ ಸಂಪನ್ಮೂಲಗಳ ಲಭ್ಯತೆ ಕೊರತೆ ಸೇರಿದಂತೆ ಇನ್ನಿತರೆ ಅಂಶಗಳಿಂದಾಗಿ ವಿಳಂಬಗೊಂಡಿರುವ ಎತ್ತಿನಹೊಳೆ ಯೋಜನೆಯ ವೆಚ್ಚವು 33 ಸಾವಿರ ಕೋಟಿಗೆ ಪರಿಷ್ಕೃತಗೊಂಡಿತ್ತು.

 

ಎತ್ತಿನಹೊಳೆ; ಹತ್ತು ವರ್ಷದಲ್ಲಿ 10,783 ಕೋಟಿ ಖರ್ಚು, ಯೋಜನಾ ವೆಚ್ಚ 33 ಸಾವಿರ ಕೋಟಿಗೆ ಪರಿಷ್ಕೃತ?

 

ಯೋಜನೆ ಆರಂಭವಾದ ವರ್ಷದಲ್ಲಿ 12,912.36 ಕೋಟಿ ರು. ಇದ್ದ ಯೋಜನಾ ವೆಚ್ಚವು ಆಗಸ್ಟ್‌ ಮೊದಲ ವಾರದ ಹೊತ್ತಿಗೆ 23,251 ಕೋಟಿ ರು. ಹೆಚ್ಚಳವಾಗಿತ್ತು. ಇದು ಒಂದು ಟಿಎಂಸಿಗೆ 1,000 ಕೋಟಿ ರು.ನಂತೆ ಅಂದಾಜಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೀಗ ಯೋಜನಾ ವೆಚ್ಚವನ್ನು ಮತ್ತಷ್ಟು ಪರಿಷ್ಕೃತಗೊಳಿಸಿರುವ ಜಲಸಂಪನ್ಮೂಲ ಇಲಾಖೆಯು ಅದನ್ನು 33,000 ಕೋಟಿ ರು.ಗೆ ಏರಿಸಿದೆ. ಇದರ ಪ್ರಕಾರ ಯೋಜನೆ ವೆಚ್ಚದಲ್ಲಿ 10 ವರ್ಷದಲ್ಲಿ 20,087.44 ಕೋಟಿ ರು. ಹೆಚ್ಚಳವಾಗಿತ್ತು.

 

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಕುರಿತು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ವಿವರಣೆ ನೀಡಿರುವ ಜಲಸಂಪನ್ಮೂಲ ಇಲಾಖೆಯು 2012-13ರಿಂದ 2022ರ ಜೂನ್‌ ಅಂತ್ಯಕ್ಕೆ ಒಟ್ಟಾರೆ 10,783.05 ಕೋಟಿ ರು. ವೆಚ್ಚ ಮಾಡಿದೆ ಎಂದು ಮಾಹಿತಿ ಒದಗಿಸಿದೆ. ಜಲಸಂಪನ್ಮೂಲ ಇಲಾಖೆಯು ನೀಡಿರುವ ವಿವರಣಾತ್ಮಕ ಟಿಪ್ಪಣಿ ಆಧರಿಸಿ  ದಿ ಫೈಲ್‌’ 2022ರ ಆಗಸ್ಟ್‌ 26ರಂದೇ ವರದಿ ಪ್ರಕಟಿಸಿತ್ತು.

Your generous support will help us remain independent and work without fear.

Latest News

Related Posts