ಬೆಂಗಳೂರು; ರಾಜ್ಯದ 6 ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ನಾಗರಿಕ ಸೌಲಭ್ಯಗಳಿಗೆಂದು ಮೀಸಲಿರಿಸಿದ್ದ ಸಿಎ ನಿವೇಶನಗಳನ್ನು ನಿಯಮ ಮೀರಿ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಕೇವಲ ಶೇ.5ರಷ್ಟು ರಿಯಾಯಿತಿ ದರದಲ್ಲಿ ಮಂಜೂರು ಮಾಡಿರುವ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ 16.89 ಕೋಟಿಯಷ್ಟು ನಷ್ಟ ಸಂಭವಿಸಿದೆ.
2023ರಿಂದ 2025ರ ಡಿಸೆಂಬರ್‍ವರೆಗೆ ಒಟ್ಟು 11 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಿ ಎ ನಿವೇಶನಗಳನ್ನು ಮಂಜೂರು ಮಾಡುವ ಸಂಬಂಧ ಕಾಂಗ್ರೆಸ್ ಭವನ ಟ್ರಸ್ಟ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪೈಕಿ 5 ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಅಳತೆಯ ಸಿ ಎ ನಿವೇಶನಗಳನ್ನು ಪೌರಾಡಳಿತ ಇಲಾಖೆಯು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡಿತ್ತು. ಮಂಜೂರಾತಿಗೆ ಬಾಕಿ ಇದ್ದ 6 ಸ್ಥಳೀಯ ಸಂಸ್ಥೆಗಳ ಪ್ರಸ್ತಾವಗಳನ್ನು ಸಚಿವ ಸಂಪುಟವು ಅನುಮೋದಿಸಿದೆ.
ರಾಜಕೀಯ ಪಕ್ಷಗಳ ಭವನಗಳಿಗೆ ನಾಗರಿಕ ಸೌಲಭ್ಯ ನಿವೇಶನಗಳನ್ನು ಹಂಚಿಕೆ ಮಾಡಲು ಕೆಟಿಸಿಪಿ (ಸಿ ಎ ನಿವೇಶನ ಹಂಚಿಕೆ) ನಿಯಮಗಳಲ್ಲಿ ಅವಕಾಶವಿಲ್ಲ. ಈ ಬಗ್ಗೆ ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ನಗರ ಮತ್ತು ಗ್ರಾಮಾಂತರ ಯೋಜನೆ ಆಯುಕ್ತಾಲಯವು ಸರ್ಕಾರಕ್ಕೆ ಸ್ಪಷ್ಟ ಅಭಿಪ್ರಾಯ ನೀಡಿತ್ತು. ಆದರೂ ಈ ಎಲ್ಲಾ ಅಭಿಪ್ರಾಯಗಳನ್ನು ಬದಿಗೊತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ನಿವೇಶನ ಮೌಲ್ಯದ ಶೇ.5ರಷ್ಟು ದರ ವಿಧಿಸಿ ಖಾಯಂ ಆಗಿ ಮಂಜೂರು ಮಾಡಿದೆ.
ಈ ಸಂಬಂಧ 2026ರ ಜನವರಿ 13ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ದೇವನಹಳ್ಳಿಯಲ್ಲೇ 16.45 ಕೋಟಿ ನಷ್ಟ
ದೇವನಹಳ್ಳಿ ಪುರಸಭೆ ವ್ಯಾಪ್ತಿಯ ವಾರ್ಡ್ ನಂ 10ರಲ್ಲಿರುವ ಅಜ್ಮಲ್ ಬಡಾವಣೆಯಲ್ಲಿ 6,841.97 ಚ ಮೀಟರ್ ವಿಸ್ತೀರ್ಣದ ನಿವೇಶನವನ್ನು (ಖಾತೆ ಸಂಖ್ಯೆ; 3224/49/2/5/51/52/2) ನಾಗರಿಕ ಸೌಲಭ್ಯಕ್ಕಾಗಿ ಮೀಸಲಿರಿಸಿ ಕಾಯ್ದಿರಿಸಿತ್ತು. 2025-26ನೇ ಸಾಲಿನ ಮಾರ್ಗಸೂಚಿ ದರ ಪಟ್ಟಿಯಂತೆ ಪ್ರತಿ ಚದರ ಮೀಟರ್‍ಗೆ 23,000 ಇದೆ. ಅಲ್ಲದೇ ಈ ನಿವೇಶನವು ಮೂಲೆ ನಿವೇಶನವಾಗಿದ್ದರಿಂದ ಪ್ರತಿ ಚದರ ಮೀಟರ್‍ಗೆ ಶೇ. 10ರಷ್ಟು ಅಂದರೇ 2,300 ರು ನಂತೆ ಒಟ್ಟು 25,300 ರು ಆಗಲಿದೆ.

ಇದರ ಪ್ರಕಾರ 6,841.97 ಚದರ ಮೀಟರ್ ವಿಸ್ತೀರ್ಣದ ಈ ನಿವೇಶನಕ್ಕೆ 17,31,01,841 ರು ಇದೆ. ಈ ನಿವೇಶನವನ್ನು 30 ವರ್ಷಗಳ ಅವಧಿಗೆ ಲೀಸ್ ಆಧಾರದ ಮೇಲೆ ಮಂಜೂರು ಮಾಡಲು ಕೋರಿತ್ತು. ಆದರೆ ನಿಯಮಗಳ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿರುವ ಮಂಡಳಿ, ಶಾಲೆ, ಹಾಸ್ಟೆಲ್‌ಗಳು, ಸಂಘ ಸಂಸ್ಥೆಗಳು, ಇನ್ನಿತರೆ ಸಂಘ ಸಂಸ್ಥೆಗಳಿಗೆ ಮಾರ್ಗಸೂಚಿ ದರದ ಶೇ. 25, ಶೇ. 50 ಹಾಗೂ ಪ್ರಸ್ತುತ ಮಾರುಕಟ್ಟೆ ದರದಲ್ಲಿ ನಿವೇಶನ ಮಾಡಬೇಕಿತ್ತು. ಅಲ್ಲದೇ ಸಾರ್ವಜನಿಕ ಹರಾಜು ಮೂಲಕವೇ ಮಾರಾಟ ಮಾಡಬೇಕಿತ್ತು.
ಮತ್ತೊಂದು ವಿಶೇಷವೆಂದರೇ ಈ ಪ್ರಸ್ತಾವನೆಯಲ್ಲಿ ಯಾವ ದರದಲ್ಲಿ ಮಂಜೂರು ಮಾಡಬೇಕು ಎಂದು ಸಚಿವ ಸಂಪುಟದ ಟಿಪ್ಪಣಿಯಲ್ಲಿಯೂ ಪ್ರಸ್ತಾವಿಸಿರಲಿಲ್ಲ. ಆದರೆ 2026ರ ಜನವರಿ 13ರಂದು ಹೊರಡಿಸಿರುವ ಆದೇಶದ ಪ್ರಕಾರ ನಿವೇಶನ ಮೌಲ್ಯದ ಶೇ.5ರಷ್ಟನ್ನು ವಿಧಿಸಿ ಖಾಯಂ ಆಗಿ ಮಂಜೂರು ಮಾಡಿದೆ.

ನಗರಾಭಿವೃದ್ಧಿ ಇಲಾಖೆಯ ಈ ನಿರ್ಧಾರದಿಂದಾಗಿ ಸ್ಥಳೀಯ ಪುರಸಭೆಗೆ ಅಂದಾಜು 16.45 ಕೋಟಿಯಷ್ಟು ನಷ್ಟವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಕೇಳಿದ್ದು ಗುತ್ತಿಗೆಗೆ, ಆದೇಶವಾಗಿದ್ದು ಖಾಯಂ ಮಂಜೂರಾತಿಗೆ
ಕಲ್ಬುರ್ಗಿ ಜಿಲ್ಲೆಯ ಅಫ್ಜಲಪುರ ಪುರಸಭೆ ವ್ಯಾಪ್ತಿಯಲ್ಲಿ 1,120.60 ಚದರ ಮೀಟರ್ ವಿಸ್ತೀರ್ಣದ ಜಾಗವನ್ನು ನಾಗರಿಕ ಸೌಲಭ್ಯ ನಿವೇಶನಕ್ಕಾಗಿ ಕಾಯ್ದರಿಸಿತ್ತು. ಈ ನಿವೇಶನವನ್ನು ಸಾಮಾಜಿಕ ಉದ್ದೇಶಕ್ಕಾಗಿ ಮಾರುಕಟ್ಟೆ ಮೌಲ್ಯದಂತೆ ಶೇ.100ರಷ್ಟು ನಿಗದಿಪಡಿಸಿ 30 ವರ್ಷ ಗುತ್ತಿಗೆ ಆಧಾರದದ ಮೇಲೆ ಮಂಜೂರು ಮಾಡಲು ಕಲ್ಬುರ್ಗಿ ಜಿಲ್ಲೆಯ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಕೋರಿದ್ದರು.

ಈ ಪ್ರಸ್ತಾವವನ್ನು ಪೌರಾಡಳಿತ ಇಲಾಖೆಯು ತಿರಸ್ಕರಿಸಿತ್ತು.ಕರ್ನಾಟಕ ಯೋಜನಾ ಪ್ರಾಧಿಕಾರಗಳ ನಿಯಿಮ 2016-17ರ ನಿಯಮ 2(3) ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ಅವಕಾಶವಿಲ್ಲ ಎಂದು ಹೇಳಿತ್ತು. ಆದರೆ ನಗರಾಭಿವೃದ್ಧಿ ಇಲಾಖೆಯು ಕಡತವನ್ನು ಸಚಿವ ಸಂಪುಟದ ಮುಂದಿರಿಸಿ ಮಂಜೂರಾತಿಗೆ ಒಪ್ಪಿಗೆ ಪಡೆದಿದೆ. ಸ್ಥಳೀಯ ನಗರಾಭಿವೃದ್ದಿ ಯೋಜನಾ ಕೋಶವು 30 ವರ್ಷಕ್ಕೆ ಗುತ್ತಿಗೆ ಆಧಾರದ ಮೇಲೆ ಮಂಜೂರಾತಿಗೆ ಕೋರಿದ್ದರೇ ನಗರಾಭಿವೃದ್ಧಿ ಇಲಾಖೆಯು ಖಾಯಂ ಆಗಿ ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಕಾಳಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಸರ್ವೆ ನಂಬರ್ 230/3 ಹಾಗೂ ಚಿಂಚೋಳಿ ಪುರಸಭೆ ವ್ಯಾಪ್ತಿಯಲ್ಲಿ ಸರ್ವೇ ನಂಬರ್ 143/2ರಲ್ಲಿನ 1,086.50 ಚದರ ಮೀಟರ್ ವಿಸ್ತೀರ್ಣವನ್ನು ನಾಗರಿಕ ಸೌಲಭ್ಯಕ್ಕಾಗಿ ಮೀಸಲಿರಿಸಿತ್ತು.

ಸಿಎ ನಿವೇಶನವನ್ನು 30 ವರ್ಷಕ್ಕೆ ಗುತ್ತಿಗೆ ಆಧಾರದ ಮೇಲೆ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಈ ಪ್ರಕರಣದಲ್ಲಿಯೂ ಸಹ ರಿಯಾಯಿತಿ ದರದಲ್ಲಿ ಮಂಜೂರು ಮಾಡಲು ಅವಕಾಶವಿಲ್ಲ ಎಂದು ಪೌರಾಡಳಿತ ಇಲಾಖೆ ಹೇಳಿತ್ತು. ಆದರೆ ಪೌರಾಡಳಿತ ಸಚಿವ ರಹೀಂ ಖಾನ್ ಅವರು ಆದೇಶದಂತೆ ಈ ವಿಷಯವನ್ನು ಸಚಿವ ಸಂಪುಟದ ಮುಂದಿಡಲಾಗಿತ್ತು. ಕಡೆಯಲ್ಲಿ ಈ ಪ್ರಕರಣದಲ್ಲಿಯೂ ಸಚಿವ ಸಂಪುಟವು ಅನುಮೋದನೆ ನೀಡಿತ್ತು.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಹುಲಿಗುಡ್ಡ ಗ್ರಾಮದ ಸರ್ವೆ ನಂಬರ್ 13/8ರಲ್ಲಿ ಇದ್ದ 5 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣಕ್ಕೆ ಕೋರಿದ್ದರು. ಮಾರುಕಟ್ಟೆ ದರದ ಪ್ರಕಾರ 4,400 ರು.ಗಳಂತೆ ಒಟ್ಟು 1,068 ವಿಸ್ತೀರ್ಣದ ಚದರ ಮೀಟರ್ ಜಾಗಕ್ಕೆ 46,99,200 ರು ಆಗಲಿದೆ. ಆದರೆ ಈ ಪ್ರಕರಣದಲ್ಲಿಯೂ ನಗರಾಭಿವೃದ್ಧಿ ಇಲಾಖೆಯು ಶೇ.5ರ ದರದಲ್ಲಿ ಮಂಜೂರು ಮಾಡಲು ಆದೇಶಿಸಿದೆ.
ಆರ್ಥಿಕ ಪರಿಣಾಮಗಳನ್ನು ಪರಿಗಣಿಸಲಿಲ್ಲವೇಕೆ?
ನಗರ ಸ್ಥಳೀಯ ಸಂಸ್ಥೆ ಮಾಲೀಕತ್ವದ ನಿವೇಶನಗಳನ್ನು ಮಾರುಕಟ್ಟೆ ಮಾರ್ಗಸೂಚಿ ಬೆಲೆ ಮಂಜೂರು ಮಾಡಲು 2017ರ ಅನ್ವಯ ಅವಕಾಶವಿಲ್ಲ. ಸಾರ್ವಜನಿಕ ಹರಾಜು ಮೂಲಕವೇ ವಿಲೇವಾರಿ ಮಾಡಬೇಕು. ಸಾರ್ವಜನಿಕ ಹರಾಜು ಮಾಡದಿದ್ದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಆರ್ಥಿಕ ನಷ್ಟ ಉಂಟಾಗಲಿದೆ. ಇದರಿಂದ ನಗರ ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ದುರ್ಬಲವಾಗುತ್ತದೆ ಎಂದು ಅರ್ಥಿಕ ಇಲಾಖೆಯು ಸ್ಪಷ್ಟವಾಗಿ ಅಭಿಪ್ರಾಯಿಸಿತ್ತು.

ಹಾಗೆಯೇ ರಾಜ್ಯದ ನಗರ ಯೋಜನಾ ಪ್ರಾಧಿಕಾರಗಳಿಗೆ ಸರ್ಕಾರದಿಂದ ಯಾವುದೇ ಅನುದಾನವೂ ಇಲ್ಲ. ಪ್ರಾಧಿಕಾರಗಳು ಸ್ವ-ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು ಕಾರ್ಯನಿರ್ವಹಿಸುತ್ತವೆ. ಕರ್ನಾಟಕ ಯೋಜನಾ ಪ್ರಾಧಿಕಾರಗಳ 2017ರ ಅಧಿಸೂಚನೆ ಪ್ರಕಾರ ನಾಗರಿಕ ಸೌಲಭ್ಯ ಉದ್ದೇಶದ ನಿವೇಶನವನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡಲು ಅವಕಾಶವೇ ಇಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿತ್ತು. ಆದರೆ ಸಚಿವ ಸಂಪುಟವು ಈ ಆರ್ಥಿಕ ಪರಿಣಾಮಗಳನ್ನು ಪರಿಗಣಿಸಿಲ್ಲ.
ಬದಲಿಗೆ ವಿವಿಧ ನಗರ ಯೋಜನಾ ಪ್ರಾಧಿಕಾರಗಳು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಲಭ್ಯವಿರುವ ನಿವೇಶನಗಳನ್ನು ಬ್ಲಾಕ್ ಕಾಂಗ್ರೆಸ್ ಕಚೇರಿ ನಿರ್ಮಾಣ ಮಾಡುವ ಸಲುವಾಗಿ ಶೇ. 5ರ ದರದಲ್ಲಿ ಖಾಯಂ ಆಗಿ ಮಂಜೂರು ಮಾಡಲು ಸಚಿವ ಸಂಪುಟವು ತೀರ್ಮಾನಿಸಿದೆ. ಈ ನಿರ್ಣಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮತಿ ವ್ಯಕ್ತಪಡಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ಈ ಕುರಿತು ವಿಧಾನ ಪರಿಷತ್‌ನಲ್ಲಿ ಸದಸ್ಯ ಚಿದಾನಂದ ಎಂ ಗೌಡ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಪೌರಾಡಳಿತ ಸಚಿವ ರಹೀಂ ಖಾನ್ ಅವರು ಮಾಹಿತಿ ಒದಗಿಸಿದ್ದರು.
ಈಗಾಗಲೇ ಮಂಜೂರು ಮಾಡಿರುವ ಮತ್ತು ಮಂಜೂರಾತಿಗೆ ಬಾಕಿ ಇರುವ ಸಿ ಎ ನಿವೇಶನಗಳ ಮಾರುಕಟ್ಟೆಯ ಮೌಲ್ಯ 4.07 ಕೋಟಿಯಿದೆ. ಈ ಪೈಕಿ 5 ಸ್ಥಳೀಯ ಸಂಸ್ಥೆಗಳಿಗೆ ಸೇರಿದ ಸಿ ಎ ನಿವೇಶನಗಳ ಮಾರುಕಟ್ಟೆ ಮೌಲ್ಯವು 1,82,75,528 ರು ಇದೆ. ಆದರೆ ಈ 5 ಸ್ಥಳೀಯ ಸಂಸ್ಥೆಗಳಿಗೆ ಸೇರಿದ ಸಿ ಎ ನಿವೇಶನಗಳಿಗೆ ಸರ್ಕಾರವು 9,13,776 ರು ರಿಯಾಯಿತಿ ದರದಲ್ಲಿ ಮಂಜೂರು ಮಾಡಲು ಅನುಮೋದಿಸಿತ್ತು.
ರಿಯಾಯಿತಿ ದರದಲ್ಲಿ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಸಿ ಎ ನಿವೇಶನ ಮಂಜೂರು ಮಾಡಿರುವುದರಿಂದ ಒಟ್ಟು ಎಷ್ಟು ನಷ್ಟವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ ಅವರು ಕೇಳಿದ್ದರು. ಆದರೆ ಸರ್ಕಾರವು ನಷ್ಟದ ಮೊತ್ತವನ್ನು ಉತ್ತರದಲ್ಲಿ ತಿಳಿಸಿರಲಿಲ್ಲ.

ಬಾಗಲಕೋಟೆ ಜಿಲ್ಲೆಯ ಲೋಕಾಪುರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಮಾರುಕಟ್ಟೆ ಮೌಲ್ಯವು 21,03,255 ರು ಇದೆ. ಆದರೆ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ರಿಯಾಯಿತಿ ದರ ಅಂದರೇ ಕೇವಲ 1,05,162.75 ರು ಮೊತ್ತಕ್ಕೆ ಮಂಜೂರು ಮಾಡಿದೆ. ಧಾರವಾಡದ ನವಲಗುಂದದಲ್ಲಿಯೂ ಸಹ 38,60,310 ರು ಮಾರುಕಟ್ಟೆ ಮೌಲ್ಯವಿದೆ. ಈ ಸ್ಥಳೀಯ ಸಂಸ್ಥೆಯು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಕೇವಲ 1,93,015.00 ರು ಗೆ ಮಂಜೂರು ಮಾಡಿದೆ. ಧಾರವಾಡದ ಅಣ್ಣೀಗೇರಿ ಪುರಸಭೆ ವ್ಯಾಪ್ತಿಯಲ್ಲಿ 31,70,5000 ರು ಮಾರುಕಟ್ಟೆ ದರವಿದೆ. ಇಲ್ಲಿಯೂ ಸಹ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಕೇವಲ 1,58,537 ರು ದರದಲ್ಲಿ ಮಂಜೂರು ಮಾಡಿದೆ.

ಬೆಂಗಳೂರು ದಕ್ಷಿಣ ಮಾಗಡಿ ಪುರಸಭೆ ವ್ಯಾಪ್ತಿಯಲ್ಲಿ 40,98,513 ರು ಮಾರುಕಟ್ಟೆ ಮೌಲ್ಯವಿದೆ. ಇಲ್ಲಿಯೂ ಸಹ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಕೇವಲ 2,04,925.00 ರು ದರಕ್ಕೆ ಮಂಜೂರು ಮಾಡಿದೆ.

ಕಲ್ಬುರ್ಗಿಯ ಅಫಜಲಪುರದಲ್ಲಿ ಮಾರುಕಟ್ಟೆ ಮೌಲ್ಯವು 50,42,700 ರು ಇದೆ. ಆದರೆ ಇಲ್ಲಿನ ಸ್ಥಳೀಯ ಸಂಸ್ಥೆಯು ಕಾಂಗ್ರೆಸ್ ಭವನ ಟ್ರಸ್ಟ್‌ಗೆ 2,52,135 ರು ಗೆ ಮಂಜೂರು ಮಾಡಿದೆ. ಉಳಿದ 5 ಕಡೆ ಪರಿಶೀಲನೆಯಲ್ಲಿದೆ ಎಂದು ಸಚಿವರು ಮಾಹಿತಿ ಒದಗಿಸಿದ್ದರು.

ದೇವನಹಳ್ಳಿ ಸೇರಿದಂತೆ ವಿವಿದೆಡೆ ಮೊಬೈಲ್ ರಿಪೇರಿ ತರಬೇತಿ ನೀಡುವ ಉದ್ದೇಶದ ಹೆಸರಿನಲ್ಲಿ ಕಾಂಗ್ರೆಸ್ ಭವನ ಟ್ರಸ್ಟ್, ಸಿಎ ನಿವೇಶನಗಳನ್ನು ಮಂಜೂರು ಮಾಡಿಸಿಕೊಂಡಿದೆ.
ಕಾಂಗ್ರೆಸ್ ಭವನ ಟ್ರಸ್ಟ್‌ನಿಂದ ಮೊಬೈಲ್ ರಿಪೇರಿ ತರಬೇತಿ; ಸಿಎ ನಿವೇಶನಗಳಿಗಾಗಿ ಹೊಸ ವೇಷ ತೊಟ್ಟ ಕಾಂಗ್ರೆಸ್
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡಲು ಉದ್ದೇಶಿಸಿರುವ ಜಮೀನು, ಡೀಮ್ಡ್ ಅರಣ್ಯದ ಪಟ್ಟಿಯಲ್ಲಿ ಅಧಿಸೂಚಿಸಲಾಗಿದೆಯೇ ಎಂಬ ಬಗ್ಗೆ ಅರಣ್ಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿದ್ದಾರೆ. ಈ ಪ್ರಸ್ತಾವನೆಯು ಸಹ ಪರಿಶೀಲನೆಯಲ್ಲಿದೆ.
ಅರಣ್ಯ ಜಮೀನಿನ ಮೇಲೂ ಕಣ್ಣು ಹಾಕಿದ ಕಾಂಗ್ರೆಸ್ ಭವನ ಟ್ರಸ್ಟ್; ಕುಮ್ಕಿ ಹಕ್ಕಿನಿಂದ ವಿನಾಯಿತಿ ಸಿಗಲಿದೆಯೇ?
ಉಡುಪಿ ಜಿಲ್ಲೆ ಮತ್ತು ತಾಲೂಕಿನ ಅಂಜಾರು ಗ್ರಾಮದ ಸರ್ವೆ ನಂಬರ್ 32ರಲ್ಲಿ ಒಟ್ಟಾರೆ 86 ಸೆಂಟ್ಸ್ ವಿಸ್ತೀರ್ಣದ ಗೋಮಾಳ ಜಮೀನನ್ನೂ ಸಹ ಈಗಾಗಲೇ ಮಂಜೂರು ಮಾಡಿದೆ.
ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಸರ್ಕಾರಿ ಜಮೀನು; ಆರ್ಥಿಕ ಇಲಾಖೆಯಿಂದ ಪ್ರಸ್ತಾವ ತಿರಸ್ಕೃತವಾದರೂ ಮಂಜೂರು
ನಗರ ಸ್ಥಳೀಯ ಸಂಸ್ಥೆಗಳ ಸಾರ್ವಜನಿಕ ಉದ್ದೇಶಗಳನ್ನು ಹೊರತುಪಡಿಸಿ ಬೇರೆ ಉದ್ದೇಶಗಳಿಗೆ ನಗರ ಸ್ಥಳೀಯ ಸಂಸ್ಥೆಗಳ ಮಾಲೀಕತ್ವದಲ್ಲಿರುವ ನಾಗರಿಕ ಸೌಲಭ್ಯದ ನಿವೇಶನಗಳನ್ನು ಹಂಚಿಕೆ ಮಾಡಲು ಅವಕಾಶವಿಲ್ಲ. ಈ ಸಂಬಂಧ ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೇ (ಸರ್ಕಾರದ ಅಧಿಸೂಚನೆ ದಿನಾಂಕ; 24/05/2017) ಅಧಿಸೂಚನೆ ಹೊರಡಿಸಿತ್ತು. ಆದರೀಗ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಂದರ್ಭದಲ್ಲೇ 2017ರ ಅಧಿಸೂಚನೆಯನ್ನೇ ಉಲ್ಲಂಘಿಸಿತ್ತು.
ಕಾಂಗ್ರೆಸ್ ಭವನ ಟ್ರಸ್ಟ್‌ಗೆ ನಿವೇಶನ; ತನ್ನದೇ ಅಧಿಸೂಚನೆ ಉಲ್ಲಂಘಿಸಿದ ಕಾಂಗ್ರೆಸ್ ಸರ್ಕಾರ
ಪೌರಾಡಳಿತ ಇಲಾಖೆ ವ್ಯಾಪ್ತಿಯಲ್ಲಿನ ಪುರಸಭೆಗಳ ವ್ಯಾಪ್ತಿಯಲ್ಲಿ 25 ನಿವೇಶನಗಳನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸಚಿವ ರಹೀಂ ಖಾನ್ ಅವರಿಗೆ ನಿರ್ದೇಶನ ನೀಡಿದ್ದರು.
ಕಾಂಗ್ರೆಸ್ ಭವನ ಟ್ರಸ್ಟ್‌ಗೆ 25 ನಿವೇಶನ; ಪೌರಾಡಳಿತ ಇಲಾಖೆ ಕುತ್ತಿಗೆ ಮೇಲೆ ಕುಳಿತ ಡಿ ಕೆ ಶಿವಕುಮಾರ್
ಕೊಪ್ಪಳ ನಗರದಲ್ಲಿ ಸರ್ಕಾರಿ ಮಾರ್ಗಸೂಚಿ ದರದ ಪ್ರಕಾರ 1.31 ಕೋಟಿ ರು ಬೆಲೆಬಾಳುವ ಸಿ ಎ ನಿವೇಶನವನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಕೇವಲ 13.19 ಲಕ್ಷ ರುಪಾಯಿಗೆ ರಿಯಾಯಿತಿ ದರದಲ್ಲಿ ಮಂಜೂರು ಮಾಡಿತ್ತು.
ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಕೊಪ್ಪಳದಲ್ಲೂ ನಿವೇಶನ; 1.18 ಕೋಟಿ ನಷ್ಟ, ನಿಯಮ ಉಲ್ಲಂಘಿಸಿದ ಸರ್ಕಾರ
ರಾಜ್ಯ ಕಾಂಗ್ರೆಸ್ ಸರ್ಕಾರವು ನಗರಾಭಿವೃದ್ಧಿ, ಪೌರಾಡಳಿತ, ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳ ವಶ ಅಥವಾ ಸ್ವಾಧೀನದಲ್ಲಿರುವ ಸರ್ಕಾರಿ ಜಾಗಗಳನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡುತ್ತಿರುವ ಪ್ರಕರಣದಲ್ಲಿ ಹಿತಾಸಕ್ತಿ ಸಂಘರ್ಷ ಎದುರಾಗಿತ್ತು.
ತುಮಕೂರು ಮಹಾನಗರ ಪಾಲಿಕೆಯ ಸುಪರ್ದಿಯಲ್ಲಿರುವ ಬಹು ಕೋಟಿ ಬೆಲೆಬಾಳುವ ಒಟ್ಟು ಜಮೀನಿನ ಪೈಕಿ 2 ಎಕರೆ ಜಾಗವನ್ನು ಸಾರ್ವಜನಿಕ ಹರಾಜು ನಡೆಸದೇ ನೇರವಾಗಿ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಅಲ್ಲದೇ ಈ ಜಾಗವು ವ್ಯಾಜ್ಯದಿಂದ ಕೂಡಿದೆಯಲ್ಲದೇ ನ್ಯಾಯಾಲಯದಲ್ಲಿ ಅಸಲು ದಾವೆ ಅರ್ಜಿಯ ವಿಚಾರಣೆಯು ಇನ್ನೂ ಇತ್ಯರ್ಥಗೊಂಡಿಲ್ಲ. ಆದರೂ ಸಹ ಕಾಂಗ್ರೆಸ್ ಭವನ ಟ್ರಸ್ಟ್‌ಗೆ 2 ಎಕರೆ ಜಮೀನು ಮಂಜೂರು ಮಾಡಲು ಸಚಿವ ಸಂಪುಟವು ತೀರ್ಮಾನ ತೆಗೆದುಕೊಂಡಿತ್ತು.
ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಚಿಲ್ಲರೆ ದರದಲ್ಲಿ 2 ಎಕರೆ ಜಮೀನು; ಹರಾಜು ನಡೆಸದೇ ಮಂಜೂರು, ನಿಯಮ ಉಲ್ಲಂಘನೆ
ಹೀಗೆ ಬಹುಕೋಟಿಯಷ್ಟು ಬೆಲೆ ಬಾಳುವ ಈ ಜಮೀನನ್ನು ಮಾರ್ಗಸೂಚಿ ಮೌಲ್ಯದ ಕೇವಲ ಶೇ.5ರಷ್ಟು ಅಂದರೇ 90 ಲಕ್ಷ ರು ದರ ವಿಧಿಸಿ ಈಗ ಕಾಂಗ್ರೆಸ್ ಪಕ್ಷಕ್ಕೆ ಮಂಜೂರು ಮಾಡಲಾಗಿದೆ. ಸಚಿವ ಸಂಪುಟವು ಕೈಗೊಂಡಿರುವ ತೀರ್ಮಾನವು (ಸಂಖ್ಯೆ ಸಿ; 396/2025) ಸರ್ಕಾರದ ಬೊಕ್ಕಸಕ್ಕೆ ಉಂಟಾಗಿರುವ ನಷ್ಟಕ್ಕೆ ಕಾರಣವಾಗಿತ್ತು.
ಕಾಂಗ್ರೆಸ್ ಭವನ ಟ್ರಸ್ಟ್‌ಗೆ ನಿವೇಶನ; ಆರ್‍ಡಿಪಿಆರ್‍ನಿಂದ ಪ್ರಸ್ತಾವ ತಿರಸ್ಕೃತ, ಸರ್ಕಾರಕ್ಕೆ ಮುಖಭಂಗ?
ಬೆಳಗಾವಿಯಲ್ಲಿನ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷಗಳಾದ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು (ಕೆಪಿಸಿಸಿ) ರಾಜ್ಯಾದ್ಯಂತ 100 ಕಾಂಗ್ರೆಸ್ ಭವನಗಳನ್ನು ನಿರ್ಮಾಣ ಮಾಡಲು ತೀರ್ಮಾನಿಸಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈ ಸಂಬಂಧ ಪಕ್ಷಕ್ಕೆ ಗುರಿ ನೀಡಿದ್ದರು. ಹೀಗಾಗಿ ಎಲ್ಲಾ ಸಚಿವರೂ ನಗರ ಮತ್ತು ಗ್ರಾಮೀಣ ಸ್ಥಳೀಯ ಸರ್ಕಾರಗಳ ಅಧೀನದಲ್ಲಿರುವ ಮತ್ತು ಅವುಗಳ ಹೆಸರಿನಲ್ಲಿರುವ ಜಮೀನು, ನಿವೇಶನಗಳನ್ನು ಮಂಜೂರು ಮಾಡಿಸಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.
ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣ; ಪಂಚಾಯ್ತಿಗಳ ಜಾಗದ ಮೇಲೂ ಕಣ್ಣು ಹಾಕಿದ ಕಾಂಗ್ರೆಸ್ ಭವನ ಟ್ರಸ್ಟ್
ಕಾಂಗ್ರೆಸ್ ಭವನ ಟ್ರಸ್ಟ್ ಯಾವ ಕಾಯ್ದೆ ಅಡಿ ನೋಂದಣಿಯಾಗಿದೆ ಎಂಬುದರ ಕುರಿತು ಇಲಾಖೆಯು ಪ್ರಶ್ನಿಸಿತ್ತು.
ಸರ್ಕಾರಿ ಜಾಗ ಮಂಜೂರು ಮಾಡಿಸಿಕೊಳ್ಳುತ್ತಿರುವ ಕಾಂಗ್ರೆಸ್ ಭವನ ಟ್ರಸ್ಟ್, ಯಾವ ಕಾಯ್ದೆಯಡಿ ನೋಂದಣಿಯಾಗಿದೆ?
ಹಿಂದುಳಿದ ಮತ್ತು ನಾಯಕ ಜನಾಂಗದವರ ಸ್ಮಶಾನಕ್ಕೆ ಮೀಸಲಿಟ್ಟಿರುವುದು ಮತ್ತು ಒಕ್ಕಲಿಗರ ಸಮುದಾಯ ಭವನ, ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳಿಗೆ ನಿವೇಶನ, ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಸ್ಥಾಪನೆ ಸೇರಿದಂತೆ ಇನ್ನಿತರೆ ಸಾರ್ವಜನಿಕ ಉದ್ದೇಶಗಳಿಗಾಗಿ ಕಾಯ್ದಿರಿಸಿದ್ದ ಸರ್ಕಾರಿ ಜಮೀನನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡಲು ಸಚಿವ ಸಂಪುಟವು ಈಚೆಗಷ್ಟೇ ಅನುಮೋದನೆ ನೀಡಿತ್ತು.
ಹಿಂದುಳಿದ ಜಾತಿಗಳ ಜನರ ಸ್ಮಶಾನ, ನಿವೇಶನ ಉದ್ದೇಶದ ಸರ್ಕಾರಿ ಭೂಮಿ ಮೇಲೂ ಕಾಂಗ್ರೆಸ್ ಭವನ ಟ್ರಸ್ಟ್‌ನ ಕಣ್ಣು
ಚಿಕ್ಕಬಳ್ಳಾಪುರ ತಾಲೂಕು ನಂದಿ ಹೋಬಳಿಯ ಅಗಲಕುರ್ಕಿ ಗ್ರಾಮದಲ್ಲಿ ಅನುಮೋದಿತ ಬಡಾವಣೆಯಲ್ಲಿ ನಿವೇಶನ ಕೋರಿದ್ದರು. ಆದರೀಗ ನಗರಾಭಿವೃದ್ದಿ ಇಲಾಖೆಯು ಸ್ಥಳವನ್ನು ಬದಲಾಯಿಸಿತ್ತು.
ಕಾಂಗ್ರೆಸ್ ಭವನ ಟ್ರಸ್ಟ್‌ಗೆ ‘ಪುಕ್ಕಟೆ’ಯಾಗಿ ಸಿ ಎ ನಿವೇಶನ; ಬೊಕ್ಕಸಕ್ಕೆ ನಷ್ಟವಾದರೂ ಸಚಿವ ಸಂಪುಟಕ್ಕೆ ಕಡತ ಮಂಡನೆ
ಚಿಕ್ಕಬಳ್ಳಾಪುರ ಜಿಲ್ಲೆಗೆ ಉಸ್ತುವಾರಿ ಸಚಿವ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಅವರ ಸೂಚನೆಯಂತೆ ನಗರಾಭಿವೃದ್ದಿ ಇಲಾಖೆಯು ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಭವನದ ಕಟ್ಟಡ ನಿರ್ಮಾಣಕ್ಕೆ ನಿವೇಶನವನ್ನು ಮಂಜೂರು ಮಾಡಲು ತಯಾರಿ ನಡೆಸಿತ್ತು. ಈ ಕುರಿತು ‘ದಿ ಫೈಲ್’, ಮೇ 5ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಕಾಂಗ್ರೆಸ್ ಭವನಗಳಿಗೆ ಸಿ ಎ ನಿವೇಶನ!; ಬಹುಕೋಟಿ ಬೆಲೆಯಿದ್ದರೂ ಉಚಿತ ಮಂಜೂರಿಗೆ ತರಾತುರಿ
ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ವ್ಯಾಪ್ತಿ ಮತ್ತು ವಶದಲ್ಲಿರುವ ನಿವೇಶನವನ್ನು ಜಿಲ್ಲಾ ಕಾಂಗ್ರೆಸ್ ಭವನ ಕಟ್ಟಡ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲು ಸಚಿವ ಸಂಪುಟವು ಅನುಮೋದಿಸಿತ್ತು.
ಕಾಂಗ್ರೆಸ್ ಪಕ್ಷಕ್ಕೆ ನಗರ ಪಾಲಿಕೆ ಆಸ್ತಿ ಮಂಜೂರು; ಬಿಜೆಪಿ ಹಾದಿ ತುಳಿದ ಕಾಂಗ್ರೆಸ್, ಕಡಿಮೆ ಬೆಲೆ ನಿಗದಿಯೇಕೆ?
ಆದರೀಗ ಆರ್ಥಿಕ ಇಲಾಖೆಯು ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಆಸ್ತಿಯನ್ನು ಮಂಜೂರು ಮಾಡುವ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ಒಪ್ಪಿಗೆ ಸೂಚಿಸಿತ್ತು. ಇದರ ಅಭಿಪ್ರಾಯದ ಮೇರೆಗೆ ಸಚಿವ ಸಂಪುಟವೂ 2025ರ ಫೆ.20ರಂದು ನಡೆದ ಸಭೆಯಲ್ಲಿ ಮಂಜೂರು ಮಾಡಿತ್ತು.
ಕಚೇರಿ ನಿರ್ಮಾಣಕ್ಕೆ ಪಾಲಿಕೆ ಆಸ್ತಿ ಮೇಲೆ ಕಣ್ಣು ಹಾಕಿದ ಕೆಪಿಸಿಸಿ; ಕಡಿಮೆ ಬೆಲೆಯಲ್ಲಿ ಮಂಜೂರಾತಿಗೆ ಒತ್ತಡ
ಭಾರತೀಯ ಜನತಾ ಪಾರ್ಟಿಯು ತಾಲೂಕು ಪ್ರದೇಶಗಳಲ್ಲಿ ಸ್ವಂತ ಕಚೇರಿಗಾಗಿ ಕಟ್ಟಡ ನಿರ್ಮಾಣ ಮಾಡಲು ಪರಿಶಿಷ್ಟ ಜಾತಿಯ ಸರ್ಕಾರಿ ವಿದ್ಯಾರ್ಥಿ ನಿಲಯಗಳೂ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಿರುವ ನಿವೇಶನ, ಜಮೀನುಗಳ ಮೇಲೆ ಕಣ್ಣು ಹಾಕಿತ್ತು.
ಬಿಜೆಪಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಪರಿಶಿಷ್ಟರ ವಿದ್ಯಾರ್ಥಿ ನಿಲಯಕ್ಕೆ ಮೀಸಲಾದ ನಿವೇಶನ!; ಕಾರಜೋಳರ ಒತ್ತಡ?
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ರಾಷ್ಟ್ರೋತ್ಥಾನ ಪರಿಷತ್, ಜನಸೇವಾ ಟ್ರಸ್ಟ್ ಸೇರಿದಂತೆ ಸಂಘ ಪರಿವಾರದ ಇನ್ನಿತರೆ ಸಂಘ ಸಂಸ್ಥೆಗಳಿಗೂ ಗೋಮಾಳ, ಸರ್ಕಾರಿ ಜಮೀನು, ಬಿ ಖರಾಬು ಜಮೀನುಗಳನ್ನು ಚಿಲ್ಲರೆ ದರದಲ್ಲಿ ಮಂಜೂರು ಮಾಡಿತ್ತು.
ರಾಷ್ಟ್ರೋತ್ಥಾನ ಪರಿಷತ್, ಬಿಜೆಪಿ ಕಚೇರಿಗೆ ಗೋಮಾಳ, ಜಮೀನು ಹಂಚಿಕೆ ಸುತ್ತ ‘ದಿ ಫೈಲ್’ನ 13 ವರದಿಗಳು
ಇದೀಗ ಕಾಂಗ್ರೆಸ್ ಸರ್ಕಾರವು ಸಹ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಭವನಗಳಿಗೆ ಕಟ್ಟಡ ನಿರ್ಮಾಣಕ್ಕೆ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧೀನದಲ್ಲಿ ಮತ್ತು ನಾಗರಿಕ ಸೌಲಭ್ಯಗಳಿಗೆಂದು ಮೀಸಲಿರಿಸಿರುವ ನಿವೇಶನಗಳ ಮೇಲೆ ಕಣ್ಣು ಹಾಕಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.









