ಬೆಂಗಳೂರು; ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಅವರ ತವರು ಕ್ಷೇತ್ರ ಬಬಲೇಶ್ವರದ ಹಲವು ಹೋಬಳಿಗಳಿಗೆ ನಿಗದಿತ ಸಂಖ್ಯೆಯಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚರಿಸುತ್ತಿಲ್ಲ. ಪಿಯುಸಿ ಮತ್ತು ಪ್ರಥಮದರ್ಜೆ ಕಾಲೇಜುಗಳ ವಿದ್ಯಾರ್ಥಿಗಳು ನೂಕುನುಗ್ಗಲಿನಲ್ಲಿ, ತೂರಾಡುತ್ತ ಕಾಲೇಜುಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಸಂಗತಿಯನ್ನು ಖುದ್ದು ಸಚಿವ ಎಂ ಬಿ ಪಾಟೀಲ್ ಅವರು ತೆರೆದಿಟ್ಟಿದ್ದಾರೆ. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಎಂ ಬಿ ಪಾಟೀಲ್ ಅವರು ಬಬಲೇಶ್ವರದಲ್ಲಿನ ವಾಸ್ತವ ಸ್ಥಿತಿಯನ್ನು ಕಟ್ಟಿಕೊಟ್ಟಿದ್ದಾರೆ.
ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆ, ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲೂ ಸರಿಯಾದ ಸಾರಿಗೆ ವ್ಯವಸ್ಥೆಗಳಿಲ್ಲ, ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚರಿಸುತ್ತಿಲ್ಲ ಎಂಬ ಸಾಮಾನ್ಯ ದೂರುಗಳು ಆಗಾಗ್ಗೆ ಕೇಳಿ ಬರುತ್ತಲೇ ಇವೆ. ಆದರೀಗ ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿನ ಹೋಬಳಿಗಳಲ್ಲೂ ಸಾರಿಗೆ ಸಂಪರ್ಕ ವ್ಯವಸ್ಥೆಯು ಅದ್ವಾನವಾಗಿದೆ ಎಂದು ಖುದ್ದು ಸಚಿವರೇ ತೆರೆದಿಟ್ಟಿರುವುದು, ಪ್ರತಿಪಕ್ಷಗಳ ಟೀಕೆಗೆ ಬಲ ಬಂದಂತಾಗಿದೆ.
ಬಬಲೇಶ್ವರ ಹೋಬಳಿಯ ಮಮದಾಪುರ ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಸತಿ ನಿಲಯ ವ್ಯವಸ್ಥೆ ಕಲ್ಪಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋರಿರುವ ಪತ್ರದಲ್ಲಿ ಸಾರಿಗೆ ವ್ಯವಸ್ಥೆ ಕುರಿತು 2025ರ ನವೆಂಬರ್ 12ರಂದೇ ವಿವರಿಸಿದ್ದಾರೆ.
ಎಂ ಬಿ ಪಾಟೀಲ್‌ರ ಪತ್ರದಲ್ಲೇನಿದೆ?
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮವು ಹೋಬಳಿ ಕೇಂದ್ರವಾಗಿದೆ. ಗ್ರಾಮದಲ್ಲಿ ಪದವಿಪೂರ್ವ ಕಾಲೇಜು ಮತ್ತು ಪ್ರಥಮ ದರ್ಜೆ ಕಾಲೇಜುಗಳಿವೆ. ಸುತ್ತಮುತ್ತಲಿನ ರೈತಾಪಿ ಕುಟುಂಬದ, ಕೂಲಿ ಕಾರ್ಮಿಕರ ಮಕ್ಕಳು ವ್ಯಾಸಂಗಕ್ಕಾಗಿ ಮಮದಾಪುರ ಕಾಲೇಜುಗಳಿಗೆ ಬರುತ್ತಿದ್ದಾರೆ. ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಬಸ್ ಹಾಗೂ ಇತರೆ ವಾಹನಗಳಲ್ಲಿ ನೂಕು ನುಗ್ಗಲು ಪರಿಸ್ಥಿತಿಯಲ್ಲಿ ವಿದ್ಯಾಭ್ಯಾಸವನ್ನು ಅರಸಿ ಮಮದಾಪೂರಕ್ಕೆ ಬರುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಸಮಯ ವ್ಯರ್ಥವಾಗುತ್ತಿದೆ. ಶಿಕ್ಷಣ ವ್ಯವಸ್ಥೆಯೂ ಕುಂಠಿತವಾಗುತ್ತಿದೆ ಎಂದು ವಿವರಿಸಿರುವುದು ಪತ್ರದಿಂದ ಗೊತ್ತಾಗಿದೆ.

ಇದಲ್ಲದೇ ವಿಜಯಪುರದಲ್ಲಿ ಬಸ್‌ಗಳ ಕೊರತೆಯೂ ಎದುರಾಗಿದೆ. ಬಸ್‌ಗಳ ವೇಳಾಪಟ್ಟಿಯೂ ಅಪೂರ್ಣವಾಗಿವೆ. ಹೀಗಾಗಿ ಅತಿಯಾದ ಜನದಟ್ಟಣೆಯಿಂದಾಗಿ ಜನರು ತೊಂದರೆಗೊಳಗಾಗುತ್ತಿದ್ದಾರೆ. ಇಂಚಗೇರಿ, ದೇವರಹಿಪ್ಪರಗಿಗಳಂತಹ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳು ಕಾಲೇಜುಗಳಿಗೆ ತಲುಪಲು ಕಷ್ಟಪಡುತ್ತಿದ್ದಾರೆ. ಅಲ್ಲದೇ ಬಸ್‌ಗಳ ಬಾಗಿಲಿನಲ್ಲಿ ನೇತಾಡುತ್ತಾ ಅಪಾಯಕಾರಿ ಪ್ರಯಾಣಕ್ಕೆ ಕಾರಣವಾಗುತ್ತಿದೆ. ಹೊಸ ಬಸ್‌ಗಳು ಮಂಜೂರಾಗಿದ್ದೂ ಸಹ ಬಸ್ ಪ್ರಯಾಣದ ಸಂಕಷ್ಟಗಳು ತಪ್ಪಿಲ್ಲ ಎಂದು ವಿಜಯಪುರ ಜಿಲ್ಲೆಯ ಹಲವರು ಆರೋಪಿಸಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ,ಬೆಳಗಾವಿ ಪ್ರಾದೇಶಿಕ ವಿಭಾಗದಲ್ಲಿ ಸಾರಿಗೆಗಾಗಿ ಅನುದಾನ ಮಂಜೂರಾಗುತ್ತಿದೆಯಾದರೂ ವಿಜಯಪುರಕ್ಕೆ ಅನುದಾನ ಹಂಚಿಕೆಯಾಗುತ್ತಿಲ್ಲ. ಹೀಗಾಗಿ ಬಸ್ ಖರೀದಿ ಮತ್ತು ಮೂಲಭೂತ ಸೌಲಭ್ಯಕ್ಕೆ ಹಣದ ಕೊರತೆಯಾಗುತ್ತಿದೆ. ಇದನ್ನು ಖುದ್ದು ಸಚಿವ ರಾಮಲಿಂಗಾರೆಡ್ಡಿ ಅವರೂ ಸಹ ಒಪ್ಪಿಕೊಂಡಿದ್ದಾರೆ. ಅಲ್ಲದೇ 2025ರ ಆಗಸ್ಟ್‌ನಲ್ಲಿ ನಡೆದಿದ್ದ ವಿಧಾನಸಭೆ ಅಧಿವೇಶನದಲ್ಲಿಯೂ ಲಿಖಿತ ಉತ್ತರ ಮಂಡಿಸಿದ್ದರು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿ ವಿಜಯಪುರವೂ ಬರಲಿದೆ. ವಿಜಯಪುರ ವಿಭಾಗವು ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಮತ್ತು ಬೆಳಗಾವಿ ಪ್ರಾದೇಶಿಕ ವಿಭಾಗದ ವ್ಯಾಪ್ತಿಗೆ ಒಳಪಟ್ಟಿಲಲ. ಆದರೂ ಸಹ ಸರ್ಕಾರದ ಇಗತರೆ ಅನುದಾನ ಹಾಗೂ ನಿಗಮದ ಆಂತರಿಕ ಸಂಪನ್ಮೂಲಗಳಿಂದ ಹಾಗೂ ಪಡೆದ ಸಾಲದ ಹಣವನ್ನು ಕ್ರೋಢೀಕರಿಸಿ 2023-24 ಮತ್ತು 2024-25ನೇ ಸಾಲಿನಲ್ಲಿ ಒಟ್ಟು 119 ವಿವಿಧ ಮಾದರಿಯ ವಾಹನಗಳನ್ನು ವಿಜಯಪುರ ವಿಭಾಗಕ್ಕೆ ಒದಗಿಸಲಾಗಿದೆ ಎಂದು ಆಗಸ್ಟ್ 2025ರಲ್ಲಿಯೇ ಉತ್ತರಿಸಿದ್ದರು.

113 ವೇಗದೂತ, 04 ಹವಾ ನಿಯಂತ್ರಣ ರಹಿತ ಸ್ಲೀಪರ್, ಹವಾನಿಯಂತ್ರಿತ ಮಲ್ಟಿ ಆಕ್ಸಲ್ ಓಲ್ವೋ ಸ್ವೀಪರ್ 2 ಬಸ್‌ಗಳು ಸೇರಿ ಒಟ್ಟಾರೆ 119 ವಾಹನಗಳನ್ನು ಒದಗಿಸಲಾಗಿದೆ ಎಂದು ಅಂಕಿ ಅಂಶಗಳನ್ನು ಒದಗಿಸಿದ್ದರು. ಅಲ್ಲದೇ ಕಳೆದ 3 ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗಕ್ಕೆ ಇಲ್ಲಿಯವರೆಗೆ ಮೂಲಭೂತ ಸೌಕರ್ಯಗಳಿಗಾಗಿ ಬಂಡವಾಳ ವೆಚ್ಚದಡಿಯಲ್ಲಿ ಅನುದಾನ ಬಿಡುಗಡೆ ವಿವರಗಳನ್ನೂ ಒದಗಿಸಿದ್ದರು.
2022-23ರಲ್ಲಿ ಮುದ್ದೇಬಿಹಾಳದ ನಾಲತವಾಡದಲ್ಲಿ ಬಸ್ ನಿಲ್ಣಾಣವನ್ನು ಮರು ನಿರ್ಮಾಣಕ್ಕೆ 1.00 ಕೋಟಿ, ಚಡಚಣದ ನಾಗಠಾಣದಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ 25 ಲಕ್ಷ, ದೇವರಹಿಪ್ಪರಗಿಯಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ 1 ಕೋಟಿ, ವಿಜಯಪುರ ಘಟಕದ ಖಾಲಿ ನಿವೇಶನದಲ್ಲಿ 27 ಸಂಖ್ಯೆಯ ವಸತಿ ಗೃಹಗಳ ನಿರ್ಮಾಣಕ್ಕೆ 1 ಕೋಟಿ, ತಾಳಿಕೋಟೆ ಘಟಕದ ಪಕ್ಕದ ಖಾಲಿ ನಿವೇಶನದಲ್ಲಿ 14 ಸಂಖ್ಯೆಯ ವಸತಿ ಗೃಹಗಳನ್ನು ನಿರ್ಮಾಣ ಮಾಡಲು 50 ಲಕ್ಷ, ಸಿಂಧಗಿ ಘಟಕದ ಪಕ್ಕದ ಖಾಲಿ ನಿವೇಶನದಲ್ಲಿ 14 ಸಂಖ್ಯೆ ವಸತಿ ಗೃಹಗಳ ನಿರ್ಮಾಣಕ್ಕೆ 40 ಲಕ್ಷ ರು ಸೇರಿ ಒಟ್ಟಾರೆ 4.15 ಕೋಟಿ ರು. ಅನುದಾನ ಹಂಚಿಕೆಯಾಗಿತ್ತು.

2023-24ರಲ್ಲಿ ದೇವರಹಿಪ್ಪರಗಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲು 2.50 ಕೋಟಿ, ಚಡಚಣದ ನಾಗಠಾಣದಲ್ಲಿ ಬಸ್ ನಿಲ್ಧಾಣ ನಿರ್ಮಾಣ ಮಾಡಲು 75 ಲಕ್ಷ, ತಾಳಿ ಕೋಟೆ ಘಟಕದ ಪಕ್ಕದ ಖಾಲಿ ನಿವೇಶನದಲ್ಲಿ ಸಿಬ್ಬಂದಿ ವಸತಿ ಗೃಹ ನಿರ್ಮಾಣಕ್ಕೆ 40 ಲಕ್ಷ, ಆಲಮಟ್ಟಿ ಕ್ರಾಸ್‌ನಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ 10 ಲಕ್ಷ ರು ಸೇರಿ ಒಟ್ಟಾರೆ 3.75 ಕೋಟಿ ರು ಅನುದಾನ ಹಂಚಿಕೆಯಾಗಿತ್ತು.

2024-25ನೇ ಸಾಲಿನಲ್ಲಿ ಆಲಮಟ್ಟಿ ಕ್ರಾಸ್‌ನಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡಲು 25 ಲಕ್ಷ, ಇಂಡಿ ತಾಲೂಕಿನ ತಾಂಬಾದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲು 5 ಲಕ್ಷ, ಮುದ್ದೇಬಿಹಾಳದಲ್ಲಿ ಬಸ್ ಘಟಕ ನಿರ್ಮಾಣಕ್ಕೆ 5 ಲಕ್ಷ, ಚಡಚಣದಲ್ಲಿ ಬಸ್ ಘಟಕ ನಿರ್ಮಾಣಕ್ಕೆ 5 ಲಕ್ಷ, ದೇವರಹಿಪ್ಪರಗಿ ಬಸ್ ನಿಲ್ದಾಣದಲ್ಲಿ ಹೆಚ್ಚುವರಿ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಲು 95 ಲಕ್ಷ, ಸಿಂಧಗಿ ಸಿಬ್ಬಂದಿ ವಸತಿ ಗೃಹಗಳ ಮುಂಭಾಗದ ಅಭಿವೃದ್ದಿ ಕೆಲಸಗಳಿಗಾಗಿ 30 ಲಕ್ಷ, ತಾಳಿಕೋಟೆಯ ಸಿಬ್ಬಂದಿ ವಸತಿ ಗೃಹಗಳ ಮುಂಭಾದ ಅಭಿವೃದ್ಧಿ ಕೆಲಸಗಳಿಗೆ 30 ಲಕ್ಷ, ಮುದ್ದೆಬಿಹಾಳದ ಬಸ್ ನಿಲ್ದಾಣದಲ್ಲಿ ಹೆಚ್ಚುವರಿ ಅಭಿವೃದ್ಧಿ ಕೆಲಸಗಳಿಗೆ 30 ಲಕ್ಷ, ವಿಜಯಪುರದಲ್ಲಿ ಸಿಬ್ಬಂದಿ ವಸತಿ ಗೃಹಗಳ ಅಭಿವೃದ್ಧಿ ಕೆಲಸಗಳಿಗೆ 30 ಲಕ್ಷ ರು ಒಟ್ಟಾರೆ 2.50 ಕೋಟಿ ರು ಅನುದಾನ ಹಂಚಿಕೆಯಾಗಿತ್ತು.

ಈ ಉತ್ತರ ಒದಗಿಸಿ 4 ತಿಂಗಳಾದರೂ ಸಹ ವಿಜಯಪುರದಲ್ಲಿ ಬಸ್‌ಗಳಿಗಾಗಿ ವಿದ್ಯಾರ್ಥಿಗಳ ಪರದಾಟ ನಿಂತಿಲ್ಲ. ಬಬಲೇಶ್ವರ ಮಾತ್ರವಲ್ಲ, ಜಮಖಂಡಿ ತಾಲೂಕಿನಲ್ಲಿಯೂ ಇದೇ ಸ್ಥಿತಿ ಇದೆ. ಶಾಸಕ ಜಗದೀಶ ಗುಡಗುಂಟಿ ಅವರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 2025ರ ನವೆಂಬರ್‍ನಲ್ಲಿಯೇ ಪತ್ರ ಬರೆದಿದ್ದಾರೆ.
ಶಾಸಕರ ಪತ್ರದಲ್ಲೇನಿದೆ?
ಜಮಖಂಡಿ ತಾಲೂಕಿನಲ್ಲಿ ಸಾಕಷ್ಟು ಸಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಬೇರೆ ಬೇರೆ ಜಿಲ್ಲೆ ಮತ್ತು ತಾಲೂಕುಗಳಿಂದ ವಿದ್ಯಾಭ್ಯಾಸಕ್ಕಾಗಿ ರಾಯಭಾಗ, ಅಥಣಿ, ಗೋಕಾಕ, ಮುಧೋಳ, ಬೀಳಗಿ, ಬಬಲೇಶ್ವರ, ಮಹಾಲಿಂಗಾಪುರ, ರಬಕವಿ-ಬನಹಟ್ಟಿ ಭಾಗದ ಹಿಂದುಳಿದ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರ ವರ್ಗದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬರುತ್ತಿದ್ದಾರೆ.

ಜಮಖಂಡಿ ತಾಲೂಕಿನಲ್ಲಿಯೇ ಸುಮಾರು 8ರಿಂದ 10 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಪ್ರತೀ ವರ್ಷ ಪ್ರವೇಶಾತಿಯಲ್ಲಿ ನೂಕುನುಗ್ಗಲು ಪರಿಸ್ಥಿತಿ ಉದ್ಭವವಾಗುತ್ತಿದೆ. ಜಮಖಂಡಿ ತಾಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಾಕಷ್ಟು ಬಸ್‌ಗಳ ಸೌಕರ್ಯಗಳೇ ಇಲ್ಲ. ಹೀಗಾಗಿ ಈ ಭಾಗದ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಶಾಸಕ ಜಗದೀಶ್ ಗುಡಗುಂಟಿ ಅವರು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.









