2018-22ರ ಮಧ್ಯೆ 1,962 ಶಾಲೆಗಳನ್ನು ಮುಚ್ಚಿದ್ದ ಸರ್ಕಾರ; ಮೌಲ್ಯಮಾಪನ ವರದಿ ಬಹಿರಂಗ

ಬೆಂಗಳೂರು; ರಾಜ್ಯದ ಎಲ್ಲೆಡೆ ಪ್ರಾಥಮಿಕ ಹಂತದಿಂದ ಪಿಯುಸಿವರೆಗೆ ಒಂದೇ ಸೂರಿನಡಿ ಶಿಕ್ಷಣ ನೀಡುವ ಆಶಯದ ಕೆಪಿಎಸ್‌ ಶಾಲೆಗಳನ್ನು ಹೆಚ್ಚೆಚ್ಚು ಆರಂಭಿಸಲು ರಾಜ್ಯ ಸರ್ಕಾರವು ಉತ್ಸುಕವಾಗಿದ್ದು ಇದರಿಂದ ಸಾವಿರಾರು ಕನ್ನಡ ಶಾಲೆಗಳು ಮುಚ್ಚುವ ಆತಂಕ ಎದುರಾಗಿದೆ. ಈ ಸಂಬಂಧ ಪರ-ವಿರುದ್ಧ ಟೀಕೆ ಟಿಪ್ಪಣಿಗಳು ಕೇಳಿ ಬರುತ್ತಿವೆ. ಆದರೆ ಕೆಪಿಎಸ್‌ ಶಾಲೆಗಳ ಆರಂಭಕ್ಕೆ ಮೊದಲೆ ಅಂದರೇ 2018ರಿಂದ 2022ರ ವೇಳೆಗೆ 1,962 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿತ್ತು.

 

ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮಕ್ಕೆ 2018-19ರಿಂದ 2020-21ವರೆಗಿನ ಮೌಲ್ಯಮಾಪನ ನೆಡಸಿದ ಮೈಸೂರಿನ ಗ್ರಾಸ್ ರೂಟ್ಸ್‌ ರಿಸರ್ಚ್‌ ಅಂಡ್‌ ಅಡ್ವೊಕಸಿ ಮೂವ್‌ಮೆಂಟ್‌ ಸಂಸ್ಥೆಯು 2025ರ ಜುಲೈನಲ್ಲಿ ಸರ್ಕಾರಕ್ಕೆ ಸಲ್ಲಿಸಿರುವ ಮೌಲ್ಯಮಾಪನ ವರದಿಯಲ್ಲಿ ಈ ಮಾಹಿತಿ ಇದೆ.

 

ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ನೀಡಿರುವ ಈ ವರದಿ ಕುರಿತು ಅಧಿಕಾರಿಗಳೊಂದಿಗೆ ಸಚಿವ ಮಧು ಬಂಗಾರಪ್ಪ ಅವರು ಹಲವು ಸಭೆಗಳನ್ನು ನಡೆಸಿದ್ದಾರೆ ಎಂದು ಗೊತ್ತಾಗಿದೆ.

 

ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ರಾಜ್ಯದಲ್ಲಿ 2018-19ನೇ ಶೈಕ್ಷಣಿಕ ವರ್ಷದಲ್ಲಿ ಪ್ರಾಥಮಿಕದಿಂದ ಪಿಯುಸಿವರೆಗಿನ ಶಾಲೆ, ಕಾಲೇಜುಗಳ ಸಂಖ್ಯೆ 78, 233ರಷ್ಟಿದ್ದವು. ಈ ಸಂಖ್ಯೆ 2021-22ರ ವೇಳೆಗೆ 76, 450ಕ್ಕೆ ಕುಸಿದಿದೆ. ಪಿಯುಸಿ ಹೊರತು ಎಲ್ಲಾ ಹಂತದ ಶಾಲೆಗಳ ಸಂಖ್ಯೆಯಲ್ಲಿಯೂ ಕುಸಿತವಾಗಿದೆ. ಈ ಪೈಕಿ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳ ಸಂಖ್ಯೆಯಲ್ಲಿನ ಕುಸಿತ ಗಮನಾರ್ಹವಾಗಿದೆ. ಮಾತ್ರವಲ್ಲ, ಸರ್ಕಾರಿ ಶಾಲೆಗಳ ಸಂಖ್ಯೆಯ ಅರ್ಧಕ್ಕಿಂತ ಕಡಿಮೆ ಸಂಖ್ಯೆಯಲ್ಲಿರುವ ಖಾಸಗಿ ಶಾಲೆಗಳು ದಾಖಲಾತಿಯಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣವನ್ನು ಸರಿಗಟ್ಟುವ ಹಂತಕ್ಕೆ ತಲುಪಿವೆ. ಇದು ಕಳವಳಕಾರಿ ಸಂಗತಿ ಎಂದು ಮೌಲ್ಯಮಾಪನ ವರದಿ ಹೇಳಿದೆ.

 

ಸಮೀಕ್ಷೆಗೆ ಒಳಪಡಿಸಿದ ನಾಲ್ಕು ವರ್ಷಗಳ ಅವಧಿಯಲ್ಲಿ 1,084 ಪ್ರಾಥಮಿಕ ಶಾಲೆಗಳು, 878 ಹಿರಿಯ ಪ್ರಾಥಮಿಕ ಶಾಲೆಗಳು ಮುಚ್ಚಿವೆ. 2018-19ರಲ್ಲಿ 15,388 ಸಂಖ್ಯೆಯಲ್ಲಿದ್ದ ಪ್ರೌಢಶಾಲೆಗಳ ಸಂಖ್ಯೆ ಮುಂದಿನ ಎರಡು ಶೈಕ್ಷಣಿಕ ವರ್ಷದಲ್ಲಿ ಕ್ರಮವಾಗಿ 15, 238 ಮತ್ತು 15,295ಕ್ಕೆ ಇಳಿದಿವೆ. 2021-22ರ ವೇಳೆಗೆ ಈ ಸಂಖ್ಯೆಯು ಮತ್ತೆ ಹೆಚ್ಚಿರುವುದನ್ನು (15,385) ಯು ಡೈಸ್‌ ದತ್ತಾಂಶವನ್ನಾಧರಿಸಿ ವರದಿ ಹೇಳಿದೆ. ಪದವಿ ಪೂರ್ವ ಕಾಲೇಜುಗಳ ಸಂಖ್ಯೆಯೂ ಹೆಚ್ಚಳವಾಗಿದೆ.

 

ಶಾಲೆಗಳ ಸಂಖ್ಯೆ ಕುಸಿದಿದ್ದರೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದನ್ನು ವರದಿ ಉಲ್ಲೇಖಿಸಿದೆ. 2018-19ರಲ್ಲಿ ಪ್ರಾಥಮಿಕ ಶಾಲೆ ಹೊರತುಪಡಿಸಿ ಪಿಯುವರೆಗಿನ ಉಳಿದ ಶಾಲೆ, ಕಾಲೇಜು ಹಂತದಲ್ಲಿ ದಾಖಲಾತಿ ಸಂಖ್ಯೆ 1,13,53,975 ಇತ್ತು. ಈ ಸಂಖ್ಯೆ 2021-22ರ ವೇಳೆಗೆ 1,18, 27,353ಕ್ಕೆ ಏರಿಕೆಯಾಗಿದೆ. ಆದರೆ ಈ ಅವಧಿಯಲ್ಲಿ ಪ್ರಾಥಮಿಕ ಶಾಲೆಗಳ ದಾಖಲಾತಿ ಸಂಖ್ಯೆ 46, 277ಕ್ಕೆ ಕುಸಿದಿದೆ. ಹಿರಿಯ ಪ್ರಾಥಮಿಕ ಹಂತದಲ್ಲಿ 1,24,729ರ ಪ್ರೌಢಶಾಲೆಗಳೀಗೆ 1,70,051 ಮತ್ತು ಪಿಯು ಕಾಲೇಜುಗಳಿಗೆ ಗಣನೀಯ 2,24,875ರಷ್ಟು ವಿದ್ಯಾರ್ಥಿಗಳು ದಾಖಲಾಗಿದ್ದರು ಎಂದು ವರದಿಯಲ್ಲಿ ವಿವರಿಸಿದೆ.

 

ಇನ್ನೊಂದು ಗಮನಾರ್ಹ ಸಂಗತಿ ಎಂದರೇ ಶೇ. 64.98ರಷ್ಟಿರುವ ಸರ್ಕಾರಿ ಶಾಲೆಗಳಲ್ಲಿ ಶೇ 64.98ರಷ್ಟಿರುವ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವು ಶೇ. 45.04ರಷ್ಟಿದೆ. ಶೇ. 25.70ರಷ್ಟಿರುವ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವು ಶೇ. 42.6ರಷ್ಟಿದೆ. 2021-22ರ ಯೂ-ಡೈಸ್‌ ದತ್ತಾಂಶದ ಪ್ರಕಾರ 49,679 ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣವು 54,45,989ರಷ್ಟಿತ್ತು.

 

7,110 ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ದಾಖಲಾತಿ ಸಂಖ್ಯೆಯು 14,92,350ರಷ್ಟಿದೆ. ಇದೇ ಶೈಕ್ಷಣಿಕ ವರ್ಷದಲ್ಲಿ 19,650 ಖಾಸಗಿ ಶಾಲೆಗಳಲ್ಲಿ 51,53,185 ವಿದ್ಯಾರ್ಥಿಗಳು ದಾಖಲಾಗಿದ್ದರು. ‘ಖಾಸಗಿ ಶಾಲೆಗಳಲ್ಲೇ ಓದಿಸಬೇಕೆನ್ನುವ ಬಡ ಕುಟುಂಬಗಳಿಗೆ ಮಕ್ಕಳ ಶಿಕ್ಷಣವು ದುಬಾರಿಯಾಗಿ ಪರಿಣಿಮಿಸಿದೆ,’ ಎಂದೂ ವರದಿ ವಿಶ್ಲೇಷಿಸಿದೆ.

 

 

 

2018ರಲ್ಲಿ 6ರಿಂದ 14 ವಯಸ್ಸಿನ ಶೇ. 29.1ರಷ್ಟು ಮಕ್ಕಳು ಖಾಸಗಿ ಶಾಲೆಗಳಿಗೆ ದಾಖಲಾಗಿದ್ದರು. 2022ರ ವೇಳೆಗೆ ಈ ಪ್ರಮಾಣವು ಶೇ. 23.3ಕ್ಕೆ ಇಳಿದಿತ್ತು. ಇದು ಸಕಾರಾತ್ಮಕ ಬೆಳವಣಿಗೆ ಎಂದು ವರದಿ ಹೇಳಿದೆ. ಹರ್ಯಾಣ ರಾಜ್ಯದಲ್ಲಿ ಖಾಸಗಿ ಶಾಲೆ ದಾಖಲಾತಿ ಪ್ರಮಾಣವು 2018ರಲ್ಲಿ ಶೇ. 55.3 ಮತ್ತು 2022ರಲ್ಲಿ ಶೇ. 47ರಷ್ಟಿತ್ತು. ಈ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿನ ಖಾಸಗಿ ಶಾಲಾ ಮೋಹ ಕಡಿಮೆ ಇದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಈ ಸಂಖ್ಯೆಯು ಕ್ರಮವಾಗಿ ಶೇ. 7.9 ಮತ್ತು ಶೇ. 5.8ರಷ್ಟಿದೆ ಎನ್ನುವುದು ವರದಿ ಉಲ್ಲೇಖಿಸಿದೆ.

 

ಖಾಸಗಿ ಶಾಲೆಗೆ ಆದ್ಯತೆ ನೀಡಲು ಕಾರಣಗಳೇನು?

 

ಮಕ್ಕಳ ಪೋಷಕರು ಖಾಸಗಿ ಶಾಲೆಗೆ ಆದ್ಯತೆ ನೀಡಲು ಕಾರಣಗಳೇನು ಎನ್ನುವ ಪ್ರಶ್ನೆಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರು ಖಾಸಗಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳು ಉತ್ತಮ ಇರುವುದು ಕಾರಣ (ಶೇ. 63.55), ಖಾಸಗಿ ಶಾಲೆಗಳಲ್ಲಿ ಉತ್ತಮ ಇಂಗ್ಲೀಷ್‌ ಶಿಕ್ಷಣ ನೀಡುತ್ತಾರೆ (ಶೇ. 66.36), ಉತ್ತಮ ಗುಣಮಟ್ಟದ ಶಿಕ್ಷಣ ಲಭ್ಯವಿದೆ (ಶೇ. 48.60), ಖಾಸಗಿ ಶಾಲೆಗಳಿಗೆ ಸಂಬಂಧಿಸಿದ ಆಕರ್ಷಣೆ ಕಾರಣ (ಶೇ. 41.12) ಮುಂತಾದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

 

 

ಖಾಸಗಿ ಶಾಲೆಗಳಿಗೆ ಸೇರಿದ ಮಕ್ಕಳು ಉತ್ತಮ ಗುಣಮಟ್ಟದ ಬೋಧನೆ (ಶೆ. 81.82), ಇಂಗ್ಲೀಷ್‌ನ್ನು ಉತ್ತಮವಾಗಿ ಕಲಿಸಲಾಗುತ್ತದೆ (ಶೇ. 65.910, ಉತ್ತಮ ಮೂಲಸೌಲಭ್ಯಗಳಿವೆ (ಶೇ. 53.79), ಪ್ರತಿಷ್ಠೆ ಮತ್ತು ಖ್ಯಾತಿ ಕಾರಣ (ಶೇ. 15.40) ಎಂದು ಪ್ರತಿಕ್ರಿಯಿಸಿದರೆ ಶೇ. 21.ರಷ್ಟು ಮಕ್ಕಳು ಪೋಷಕರ ಒತ್ತಾಯ ಕಾರಣ ಎಂದೂ ಸೇರಿಸಿದ್ದಾರೆ.

 

 

ಆದರೆ ಖಾಸಗಿ ಶಾಲೆ ಅದ್ಯತೆಯಾಗುತ್ತಿರುವ ಬಗ್ಗೆ ನಡೆಸಿದ ಕೇಂದ್ರೀಕೃತ ಗುಂಪು ಚರ್ಚೆ (ಎಫ್‌ಜಿಡಿ)ಗಳಲ್ಲಿ ಪಾಲ್ಗೊಂಡ ಪೋಷಕರ ಅಭಿಪ್ರಾಯಗಳು ಭಿನ್ನವಾಗಿವೆ. ಉಚಿತ ಶಿಕ್ಷಣ, ಸಮೀಪದಲ್ಲೇ ಶಾಲೆಗಳಿರುವುದು, ಸರ್ಕಾರಿ ಶಾಲೆಗಳಲ್ಲಿ ಓದಿದವರೂ ಉತ್ತಮ ಉದ್ಯೋಗ, ಸ್ಥಾನಗಳನ್ನು ಪಡೆದಿರುವುದು, ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಜೀವನ ಕೌಶಲ್ಯ, ಸಾಮಾಜಿಕ ಮತ್ತು ನೈತಿಕ ಮೌಲ್ಯಗಳೂ ಹೆಚ್ಚು ಪಾಲನೆಯಾಗುತ್ತಿವೆ. ಖಾಸಗಿ ಶಾಲೆಗಳಲ್ಲಿ ಶಿಕ್ಷಣ ವ್ಯಾಪಾರೀಕರಣವಾಗುತ್ತಿದೆ. ಅಲ್ಲಿ ಚೆನ್ನಾಗಿ ಕಲಿಯುವ ಮಕ್ಕಳು ಮಾತ್ರ ಶೈಕ್ಷಣಿಕವಾಗಿ ಬೆಳೆಯುತ್ತಾರೆ ಎಂದು ಹಲವು ಪೋಷಕರು ವಿಶ್ಲೇಷಿಸಿದ್ದಾರೆ.

 

 

 

ಸರ್ಕಾರಿ ಶಾಲೆಗಳಿಗೆ ಹೋಲಿಸಿದರೇ ಖಾಸಗಿ ಸಂಸ್ಥೆಗಳಲ್ಲಿ ಉತ್ತಮ ಮೂಲ ಸೌಕರ್ಯ, ನವೀಕೃತ ತಂತ್ರಜ್ಞಾನ, ಸಮರ್ಥ ಕಲಿಕಾ ವಿಧಾನಗಳ ಅಳವಡಿಕೆ, ಉತ್ತಮ ವಿದ್ಯಾರ್ಥಿ ಶಿಕ್ಷಕರ ಅನುಪಾತ ಮತ್ತು ಶಿಕ್ಷಕರ ವರ್ಧಿತ ಬೋಧನಾ ಅನುಭವಗಳು ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಕಾರಣ ಎಂದೂ ಕೆಲವು ಪೋಷಕರು ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಖಾಸಗಿ ಶಾಲೆಗಳಲ್ಲಿ ಆರ್‍‌ಟಿಇ ಮಕ್ಕಳಿಗೆ ತಾರತಮ್ಯ ಅನುಭವ

 

ಖಾಸಗಿ ಶಾಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ (ಇಡಬ್ಲ್ಯೂಎಸ್‌) ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಶೇ. 25ರಷ್ಟು ಕೋಟಾ ನೀಡುವುದನ್ನು ಶಿಕ್ಷಣ ಹ ಕ್ಕು ಕಾಯ್ದೆ (ಆರ್‍‌ಟಿಇ) ಕಡ್ಡಾಯಗೊಳಿಸಿದೆ. ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ಪ್ರವೇಶ ಕೋಟಾ ಇರಬೇಕೇ ಎನ್ನುವ ಸಮೀಕ್ಷಕರ ಪ್ರಶ್ನೆಗೆ ಶೇ. 72.73ರಷ್ಟು ಸರ್ಕಾರಿ, ಅನುದಾನಿತ ಶಾಲೆ ಶಿಕ್ಷಕರು ಇರಬೇಕು ಎನ್ನುವ ಪ್ರತಿಕ್ರಿಯೆ ನೀಡಿದರೇ ಇದೇ ಅಭಿಪ್ರಾಯ ದಾಖಲಿಸಿದ ಖಾಸಗಿ ಶಾಲೆಗಳ ಶಿಕ್ಷಕರ ಸಂಖ್ಯೆ ಶೇ. 90.15ರಷ್ಟು ಕೋಟಾ ಬೇಕಿಲ್ಲ ಎನ್ನುವುದು ಶೇ. 23.94 ಸರ್ಕಾರಿ, ಅನುದಾನಿತ ಶಾಲೆ ಶಿಕ್ಷಕರದ್ದಾಗಿದೆ. ಶೇ. 8.33 ಖಾಸಗಿ ಶಾಲೆಗಳ ಶಿಕ್ಷಕರೇ ಈ ಅಭಿಪ್ರಾಯ ನೀಡಿರುವುದು ವರದಿಯಿಂದ ತಿಳಿದು ಬಂದಿದೆ.

 

 

 

‘ಬಡ ಮಕ್ಕಳು ಕೂಡ ಖಾಸಗಿ ಶಾಲೆಗಳಲ್ಲಿ ಓದುವ ಆಯ್ಕೆ ಮತ್ತು ಅವಕಾಶಗಳನ್ನು ಹೊಂದಿರಬೇಕು ಎಂಬ ನಂಬಿಕೆಯನ್ನು ಇದು ಸೂಚಿಸುತ್ತದೆ,’ ಎಂದು ವರದಿ ಹೇಳಿದೆ. ಈ ಸಂಬಂಧ ಅಧ್ಯಯನ ತಂಡವು ಹಲವು ಮುಖ್ಯ ಶಿಕ್ಷಕರನ್ನು ಸಂದರ್ಶಿಸಿದೆ. ಆರ್‍‌ಟಿಇ ನಿಬಂಧನೆಯಲ್ಲಿ ಇಡಬ್ಲ್ಯೂಎಸ್‌ ಮಕ್ಕಳಿಗೆ ಶುಲ್ಕ ಮನ್ನಾ ಸೌಲಭ್ಯವಷ್ಟೇ ದೊರೆಯಲಿದೆ. ಪುಸ್ತಕ, ಬೋಧನಾ ಸಾಧನ, ಪಠ್ಯೇತರ ಶುಲ್ಕ ಸಹಿತ ಇತರೆ ಶೈಕ್ಷಣಿಕ ವೆಚ್ಚಗಳನ್ನು ಇದು ಒಳಗೊಳ್ಳುವುದಿಲ್ಲ. ಮಾತ್ರವಲ್ಲ, ಖಾಸಗಿ ಶಾಲೆಗಳ ದಾಖಲಾತಿ ಹೆಚ್ಚಳವು ಸರ್ಕಾರಿ ಶಾಲೆಯ ದಾಖಲಾತಿಯಲ್ಲಿ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಕೆಲವು ಮುಖ್ಯ ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

 

 

 

‘ಆರ್‍‌ಟಿಇ ಕೋಟಾದಲ್ಲಿ ಖಾಸಗಿ ಶಾಲೆಗಳಿಗೆ ಸೇರುವ ಮಕ್ಕಳು ತಮ್ಮ ಹಿನ್ನೆಲೆಯ ಕಾರಣದಿಂದ ಕೆಲವೊಮ್ಮೆ ತಾರತಮ್ಯವನ್ನು ಎದುರಿಸುತ್ತಾರೆ. ಇಂಥ ಬೇಸರದ ಅನುಭವದಿಂದ ಕೆಲವು ಮಕ್ಕಳು ಸರ್ಕಾರಿ ಶಾಲೆಗಳಿಗೆ ಮರಳಿದ ನಿದರ್ಶನಗಳೂ ಇವೆ,’ ಎಂದು ಕೆಲವರು ಪ್ರತಿಕ್ರಿಯಿಸಿರುವುದನ್ನು ವರದಿ ಉಲ್ಲೇಖಿಸಿದೆ.

 

ಶಾಲೆಯ ಆಯ್ಕೆ ಸಮೀಪದಲ್ಲಿರುವುದೋ, ದೂರದ್ದೋ?

 

ವಿದ್ಯಾರ್ಥಿ ತಮ್ಮ ಮನೆಯ ನೆರೆಹೊರೆಯಲ್ಲಿರುವ ಶಾಲೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೋ, ಅಥವಾ ದೂರದ ಶಾಲೆಗಳಿಗೆ ಹೋಗುತ್ತಾರೋ ಎನ್ನುವ ಕುರಿತೂ ಅಧ್ಯಯನ ತಂಡವು ಸಮೀಕ್ಷೆ ನಡೆಸಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶೇ. 62.1ರಷ್ಟು ಮಕ್ಕಳು ಶಾಲೆ ಇರುವ ಸ್ಥಳದಲ್ಲಿಯೇ ಅಥವಾ ಶಾಲೆಯ ನೆರೆಹೊರೆಯಲ್ಲಿ ವಾಸಿಸುತ್ತಿರುವುದಾಗಿ, ಶೇ. 32.83ರಷ್ಟು ವಿದ್ಯಾರ್ಥಿಗಳು ದೂರದಿಂದ ಪ್ರಯಾಣ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

 

 

ಈ ಕುರಿತಂತೆ ಖಾಸಗಿ ಶಾಲೆ ವಿದ್ಯಾರ್ಥಿಗಳ ಪ್ರತಿಕ್ರಿಯೆ ಕ್ರಮವಾಗಿ ಶೇ. 51.77 ಮತ್ತು ಶೇ. 48.23 ಆಗಿತ್ತು. ಅಂದರೇ ಖಾಸಗಿ ಶಾಲೆ ವಿದ್ಯಾರ್ಥಿಗಳಿಗಿಂತ ಸರ್ಕಾರಿ, ಅನುದಾನಿತ ಶಾಲೆ ವಿದ್ಯಾರ್ಥಿಗಳು ಹೆಚ್ಚು ಶಾಲೆಯ ಸಮೀಪ ಅಥವಾ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಈ ವಿದ್ಯಾರ್ಥಿಗಳು ಹೆಚ್ಚು ಶಾಲೆಗೆ ನಡೆದುಕೊಂಡು ಹೋಗುತ್ತಾರೆ. ಖಾಸಗಿ ಶಾಲೆ ವಿದ್ಯಾರ್ಥಿಗಳು ಶಾಲಾ ಬಸ್‌ ಅಥವಾ ಖಾಸಗಿ ಸಾರಿಗೆ ಬಸ್‌ ವ್ಯವಸ್ಥೆಯನ್ನು ಅವಲಂಬಿಸಿದ್ದಾರೆ.

 

ಈ ಕುರಿತಂತೆ ಅಧ್ಯಯನ ತಂಡವು ಪೋಷಕರು ಮತ್ತು ಸಮುದಾಯ ಕೇಂದ್ರೀಕೃತ ಗುಂಪು ಚರ್ಚೆಗಳಲ್ಲಿ ವ್ಯಕ್ತವಾದ ಸಂಗತಿಗಳನ್ನು ಪಟ್ಟಿ ಮಾಡಿದೆ. ಮಾಧ್ಯಮಿಕ ಶಾಲೆಗಳು ಮೂಲಸೌಕರ್ಯಗಳ ಕೊರತೆ ಮತ್ತು ಕಳಪೆ ನಿರ್ವಹಣೆಯ ಸಮಸ್ಯೆಯಿಂದ ಬಳಲುತ್ತಿವೆ. ಕಾಲೇಜು ಹಂತಕ್ಕೆ ಮಕ್ಕಳು, ಮುಖ್ಯವಾಗಿ ಹೆಣ್ಣು ಮಕ್ಕಳು ದೂರ ಪ್ರಯಾಣಿಸಬೇಕಾಗುವುದರಿಂದ ಶಿಕ್ಷಣವನ್ನು ಮುಂದುವರೆಸಲು ಕಷ್ಟವಾಗಬಹುದು. ಸರ್ಕಾರವು ಪ್ರೌಢಶಾಲೆ ವಿದ್ಯಾರ್ಥಿಗಳೀಗೆ ಸೈಕಲ್ ನೀಡುವುದನ್ನು ನಿಲ್ಲಿಸಿದಾಗಿನಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಎಲ್ಲ ಗ್ರಾಮಗಳಿಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರುವುದಿಲ್ಲ.

 

 

ಅಲ್ಲೆಲ್ಲ ವಿದ್ಯಾರ್ಥಿಗಳು ಮುಖ್ಯ ರಸ್ತೆಗಳಿಗೆ ನಡೆದುಕೊಂಡು ಹೋಗಬೇಕು. ಸಾರ್ವಜನಿಕ ಸಾರಿಗೆಗಳು ಸರಿಯಾದ ಸಮಯಕ್ಕೆ ಬಾರದ ದಿನಗಳಲ್ಲಿ ವಿದ್ಯಾರ್ಥಿಗಳು ತರಗತಿಗಳನ್ನು ಕಳೆದುಕೊಳ್ಳುತ್ತಾರೆ. ಮತ್ತು ಮನೆಯಲ್ಲೇ ಉಳಿಯಬೇಕಾಗಬಹುದು. ಗುಡ್ಡಗಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಸಾರಿಗೆ ಸಮಸ್ಯೆಯಿಂದ ಶಾಲಾ ಪ್ರವೇಶ ಮತ್ತು ಹಾಜರಾತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕೊಡಗಿನಲ್ಲಿ ಹೆಚ್ಚು ದೂರ ಮತ್ತು ರಸ್ತೆಯ ಕೊರತೆಗಳ ಕಾರಣ ಮಕ್ಕಳು ಶಾಲೆ ತಲುಪಲು ಸಮಸ್ಯೆ ಎದುರಿಸುತ್ತಿದ್ದಾರೆ ಎಂಬಿತ್ಯಾದಿ ಸಂಗತಿಗಳನ್ನು ವರದಿ ಎತ್ತಿ ತೋರಿಸಿದೆ.

 

 

 

ಶಾಲೆಗಳ ವಿಲೀನ ಮುಚ್ಚಿದಂತೆಯೇ ಅಲ್ಲವೇ?

 

ಅಧ್ಯಯನ ವರದಿ ಎತ್ತಿ ತೋರಿಸಿರುವ ಶೈಕ್ಷಣಿಕ ಸಮಸ್ಯೆ, ಸವಾಲುಗಳು ಮತ್ತು ಅದು ನೀಡಿರುವ ಸಮಸ್ಯೆಗಳನ್ನು ಆಧರಿಸಿಯೇ ರಾಜ್ಯ ಸರ್ಕಾರವು ಶಿಕ್ಷಣ ಕ್ಷೇತ್ರದಲ್ಲಿ ಹಲವು ಬದಲಾವಣೆಗಳನ್ನು ತರಲು, ಗ್ರಾಮ ಪಂಚಾಯ್ತಿ ಹಂತಕ್ಕೆ ಒಂದರಂತೆ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಆರಂಭಿಸಲು ಮುಂದಾಗಿದೆ.

 

ಗ್ರಾಮಾಂತರ ಪ್ರದೇಶದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಬಯಸುತ್ತಿರುವುದರಿಂದ ಮತ್ತು ಖಾಸಗಿ ಸಂಸ್ಥೆಗಳು ಮಕ್ಕಳು, ಪೋಷಕರನ್ನು ಸೆಳೆಯುತ್ತಿರುವುದರಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಮಕ್ಕಳ ಕೊರತೆಯಿಂದ ಮುಚ್ಚಿ ಹೋಗುತ್ತಿವೆ. ಸರ್ಕಾರವೇ ಕೆಪಿಎಸ್‌ ಶಾಲೆಗಳನ್ನು ಆರಂಭಿಸಿದರೇ ಹಳ್ಳಿ ಹಳ್ಳಿಗಳಲ್ಲಿರುವ ಮತ್ತಷ್ಟು ಕನ್ನಡ ಶಾಲೆಗಳು ಮುಚ್ಚಿ ಹೋಗುತ್ತವೆ. ಹಳ್ಳಿ ಶಾಲೆಗಳನ್ನು ಮುಚ್ಚಿದರೇ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ, ಅದರಲ್ಲೂ ಹೆಣ್ಣು ಮಕ್ಕಳ ಸಂಖ್ಯೆ ಮತ್ತಷ್ಟು ಹೆಚ್ಚಬಹುದು,’ ಎನ್ನುವ ಆತಂಕ ವ್ಯಕ್ತವಾಗುತ್ತಿದೆ.

 

ಪ್ರಾಥಮಿಕದಿಂದ ಪಿಯುವರೆಗೆ ಒಂದೇ ಆವರಣದಲ್ಲಿ ಕನ್ನಡ, ಇಂಗ್ಲೀಷ್‌ ಎರಡೂ ಭಾಷೆಗೆ ಸಮಾನ ಆದ್ಯತೆ ಶಿಕ್ಷಣ ನೀಡುವ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಕೆಲವೆಡೆ ತೆರೆಯುವ ಆದೇಶ ಹೊರಡಿಸಿರುವ ಶಿಕ್ಷಣ ಇಲಾಖೆ, ಆ ಸುತ್ತಲಿನ 6 ಕಿ ಮೀ ವ್ಯಾಪ್ತಿಯ ಎಲ್ಲ ಪ್ರಾಥಮಿಕ ಶಾಲೆಗಳನ್ನು ವಿಲೀನಗೊಳಿಸಲು ಮುಂದಾಗಿರುವುದು ಈ ಆತಂಕಕ್ಕೆ ಕಾರಣ.

 

‘ ಒಂದೇ ಒಂದು ಕನ್ನಡ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಬಹಿರಂಗದಲ್ಲಿ ಹೇಳುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ವಿಲೀನಕ ಪ್ರಕ್ರಿಯೆ ಮೂಲಕ ಮುಚ್ಚುವ ಕೆಲಸವನ್ನು ಸದ್ದಿಲ್ಲದೇ ಪೋಷಿಸುತ್ತಿದ್ದಾರೆ,’ ಎನ್ನುವ ಟೀಕೆ, ಶಿಕ್ಷಣ ತಜ್ಞರ ವಲಯದಿಂದ ಕೇಳಿ ಬರುತ್ತಿದೆ.

 

ಯಾವುದನ್ನೇ ಆಗಲಿ, ಆರಂಭಿಸುವುದಕ್ಕೆ ಅತ್ಯಾಸಕ್ತಿ ತೋರಿಸುವ ಸರ್ಕಾರಿ ಯಂತ್ರಕ್ಕೆ, ಹೀಗೆ ಆರಂಭಿಸುವುದನ್ನು ಮುನ್ನಡೆಸುವುದರಲ್ಲಿ, ಅಗತ್ಯ ಮೂಲ ಸೌಲಭ್ಯಗಳನ್ನು ನೀಡುವುದರಲ್ಲಿ ಇರುವುದಿಲ್ಲ ಎನ್ನುವ ವಾಸ್ತವ ಸತ್ಯಗಳು ಎಲ್ಲರ ಆತಂಕ, ಟೀಕೆಗಳಿಗೆ ಕಾರಣವಾಗಿದೆ.

Your generous support will help us remain independent and work without fear.

Latest News

Related Posts