Wednesday | July 22, 2026 |

ಗಂಗಾ ಕಲ್ಯಾಣ ಯೋಜನೆಯಲ್ಲಿ ಅಕ್ರಮ; ಆರೋಪಗಳ ತಳ್ಳಿ ಹಾಕಿದ ಕಂಪನಿಗಳು, ವರದಿ ನೀಡಲು ನಿರ್ದೇಶಿಸಿದ ಸರ್ಕಾರ

ಬೆಂಗಳೂರು; ಡಾ ಬಿ ಆರ್ ಅಂಬೇಡ್ಕರ್‍‌ ಅಭಿವೃದ್ದಿ ನಿಗಮವೂ ಸೇರಿದಂತೆ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳು ಅನುಷ್ಠಾನಗೊಳಿಸಿದ್ದ ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಿದ್ದ ಕೊಳವೆ ಬಾವಿಗಳಿಗೆ ಪೂರಕ ಸಾಮಗ್ರಿಗಳನ್ನು ಒದಗಿಸಿಲ್ಲ ಎಂಬ ಆರೋಪಕ್ಕೆ ಯಾವುದೇ ಆಧಾರಗಳಿಲ್ಲ ಎಂದು ಕೆಲ ಕಂಪನಿಗಳು ಪ್ರತಿಪಾದಿಸಿವೆ.

 

ಗಂಗಾ ಕಲ್ಯಾಣ ಯೋಜನೆಯಡಿ ನಡೆದಿದೆ ಎನ್ನಲಾಗಿರುವ ವಿವಿಧ ರೀತಿಯ ಅಕ್ರಮಗಳ ಕುರಿತು ತನಿಖೆ ನಡೆಸಲು ಕರ್ನಾಟಕ ವಿಧಾನ ಪರಿಷತ್‌ನ ಸದಸ್ಯ ಡಾ ವೈ ಎ ನಾರಾಯಣಸ್ವಾಮಿ ನೇತೃತ್ವದ ವಿಶೇಷ ಸದನ ಸಮಿತಿಯು ಆರೋಪಿಸಿತ್ತು. ಈ ಸಮಿತಿಯು ರಾಯಚೂರು, ಬಳ್ಳಾರಿ ಸೇರಿದಂತೆ ವಿವಿಧೆಡೆ ಪ್ರವಾಸ ಮತ್ತು ಸ್ಥಳ ಪರಿಶೀಲನೆ ಕೈಗೊಂಡಿದ್ದ ಸಂದರ್ಭದಲ್ಲಿ ಫಲಾನುಭವಿಗಳು ಹಲವು ಅರೋಪಗಳನ್ನು ಮಾಡಿದ್ದರು. ಈ ಆರೋಪಗಳನ್ನು ಕಂಪನಿಗಳು ತಳ್ಳಿ ಹಾಕಿವೆ.

 

ವಿಶೇಷ ಸದನ ಸಮಿತಿಗೆ ಯುನೈಟೆಡ್‌ ಇಂಜಿನಿಯರಿಂಗ್‌ ವರ್ಕ್ಸ್‌, ಅಹಮದಾಬಾದ್‌ ಮೂಲದ  ಮಹಾವೀರ್ ಸಬ್‌ ಮರ್ಸಿಬಲ್‌  ಪ್ರೈವೈಟ್‌ ಲಿಮಿಟೆಡ್‌ ಪತ್ರ ಬರೆದು ಸ್ಪಷ್ಟನೆ ನೀಡಿವೆ. ಈ ಕುರಿತು ಒಂದು ವಾರದೊಳಗಾಗಿ ಪರಿಶೀಲಿಸಿ ವರದಿ ನೀಡಬೇಕು ಎಂದು ಡಾ ಬಿ ಆರ್‍‌ ಅಂಬೇಡ್ಕರ್‍‌ ಅಭಿವೃದ್ಧಿ ನಿಗಮ, ಆದಿ ಜಾಂಬವ, ಬೋವಿ, ತಾಂಡ ಮತ್ತು ಅಲೆಮಾರಿ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಪತ್ರ ಬರೆದು ನಿರ್ದೇಶಿಸಿದ್ದಾರೆ.

 

ಕಂಪನಿಗಳು ಬರೆದಿರುವ ಪತ್ರಗಳ ಕುರಿತು ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

 

2025ರ ಜನವರಿ 8ರಂದು ಬರೆದಿರುವ ಪತ್ರದ ಪ್ರತಿ, ವಿಶೇಷ ಸದನ ಸಮಿತಿಗೆ ಕಂಪನಿಗಳು ಬರೆದಿರುವ ಪತ್ರಗಳ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ವಿಧಾನ ಪರಿಷತ್‌ನ ವಿಶೇಷ ಸದನ ಸಮಿತಿಯು ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಯಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿತ್ತು. ಈ ವೇಳೆ ಫಲಾನುಭವಿಗಳು ಯುನೈಟೆಡ್‌ ಇಂಜಿನಿಯರಿಂಗ್‌ ವರ್ಕ್ಸ್‌ ಮತ್ತು ಮಹಾವೀರ್‍‌ ಸಬ್‌ ಮರ್ಸಿಬಲ್ಸ್‌ ಪ್ರೈ ಲಿ., ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಕೊಳವೆ ಬಾವಿಗಳಿಗೆ ಪೂರಕ ಸಾಮಗ್ರಿಗಳನ್ನು ಪೂರೈಸಿಲ್ಲ ಎಂದು ದೂರು ಸಲ್ಲಿಸಿದ್ದರು.

 

ಈ ದೂರಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಯುನೈಟೆಡ್‌ ಇಂಜಿನಿಯರಿಂಗ್‌ ವರ್ಕ್ಸ್‌ ಮತ್ತು ಮಹಾವೀರ್ ಸಬ್ ಮರ್ಸಿಬಲ್‌ ಪ್ರೈ ಲಿ., ಈ ದೂರುಗಳು ತಪ್ಪು ಗ್ರಹಿಕೆಯಿಂದ ಕೂಡಿವೆ. ಯಾವುದೇ ಆಧಾರವಿಲ್ಲ. ಸದನಕ್ಕೆ ಸಲ್ಲಿಕೆಯಾಗಿರುವ ವರದಿಯಲ್ಲಿನ ಅರೋಪ ಪಟ್ಟಿಯಿಂದ ಕೈ ಬಿಡಬೇಕು ಎಂದು ಸದನ ಸಮಿತಿಗೆ ಪತ್ರ ಬರೆದಿದ್ದವು.

 

 

ಈ ಕುರಿತಾದ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಒಂದು ವಾರದೊಳಗಾಗಿ ವರದಿ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್‌ ಅವರು ಪತ್ರದಲ್ಲಿ ನಿರ್ದೇಶಿಸಿರುವುದು ಗೊತ್ತಾಗಿದೆ.

 

 

ಇವೇ ಕಂಪನಿಗಳು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮವು ಅನುಷ್ಠಾನಗೊಳಿಸಿದ್ದ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊರೆಸಿದ್ದ ಕೊಳವೆ ಬಾವಿಗಳಿಗೆ ಪೂರಕ ಸಾಮಗ್ರಿಗಳನ್ನು ಒದಗಿಸಿದ್ದವು. ಈ ಕಂಪನಿಗಳು ಬಳ್ಳಾರಿ ಜಿಲ್ಲೆಯಲ್ಲಿ ಪೂರೈಸಿದ್ದ ಸಾಮಗ್ರಿಗಳು ಗುಣಮಟ್ಟದಿಂದ ಕೂಡಿರಲಿಲ್ಲ. ಕೆಲವು ಕೊಳವೆ ಬಾವಿಗಳಲ್ಲಿ ಕಡಿಮೆ ನೀರು ಬಿದ್ದಿದೆ. ಮೋಟಾರ್‍‌ ಪಂಪ್‌ ಸರಬರಾಜು ಮಾಡಿಲ್ಲ. ಕೊಳವೆ ಬಾವಿಗಳಿಗೆ ಸಣ್ಣ ಪೈಪ್‌ಗಳನ್ನು ಅಳವಡಿಸಿದೆ ಎಂದು ಫಲಾನುಭವಿಗಳು ಯುನೈಟೆಡ್‌ ಇಂಜಿನಿಯರಿಂಗ್‌ ವರ್ಕ್ಸ್‌ ವಿರುದ್ಧ ದೂರು ಸಲ್ಲಿಸಿದ್ದವು.

 

 

ಅದೇ ರೀತಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಗೊಳಿಸಿದ್ದ ಕೊಳವೆ ಬಾವಿಗಳ ಯೋಜನೆಯಲ್ಲಿಯೂ ಸಾಕಷ್ಟು ಲೋಪಗಳು ಕಂಡು ಬಂದಿದ್ದವು. ಈ ಯೋಜನೆಯಡಿಯಲ್ಲಿ ಆಯ್ಕೆಯಾಗಿದ್ದ ಫಲಾನುಭವಿಗಳು ಮಹಾವೀರ್ ಸಬ್‌ ಮರ್ಸಿಬಲ್‌ ಪ್ರೈ ಲಿ ವಿರುದ್ಧ ಫಲಾನುಭವಿಗಳು  ದೂರಿದ್ದರು.

 

 

58 ಅಡಿಗೆ ಪಿವಿಸಿ ಕೇಸಿಂಗ್‌ ಪೈಪ್‌ ಹಾಕಲಾಗಿದೆ. ಅದು 60 ಅಡಿಗೆ ಒಡೆದು ಹೋಗಿದೆ. 20 ಅಡಿಗೆ ಪಿವಿಸಿ ಕೇಸಿಂಗ್‌ ಪೈಪ್‌ ಹಾಕಲಾಗಿದೆ. ನೀರಿನ ಮೂಲ 25 ಅಡಿ ಇದೆ. ಕೊಳವೆ ಬಾವಿ ಕೊರೆದು 4 ವರ್ಷಗಳಾಗಿದೆ. ಇದಾಗಿ 2 ವರ್ಷದ ನಂತರ ಮೋಟಾರ್ ನೀಡಲಾಗಿದೆ. ಆದರೆ ಇದುವರೆಗೂ ವಿದ್ಯುತ್‌ ಸಂಪರ್ಕ ನೀಡಿರುವುದಿಲ್ಲ. ಮೋಟಾರ್ ಒಂದು ವರ್ಷಕ್ಕೆ 4 ಬಾರಿ ದುರಸ್ತಿಗೆ ಬಂದಿವೆ.

 

 

ಮಹಾವೀರ್‍‌ ಕಂಪನಿಯಿಂದ ನೀಡಿದ್ದ ಮೋಟಾರ್‍‌ ದುರಸ್ಥಿಯಲ್ಲಿದೆ. ಹೆಚ್‌ ಪಿ ಮೋಟಾರ್‍‌ ಎಂದು ನಿಗಮದವರು ಹೇಳುತ್ತಿದ್ದರೂ ಸಹ ಮೋಟಾರ್‍‌ ನೀರನ್ನೇ ಎತ್ತುವುದಿಲ್ಲ. ವಿದ್ಯುತ್‌ ಸಂಪರ್ಕ ಪಡೆಯಲು ಹಲವಾರು ಬಾರಿ ಕಚೇರಿಗೆ ಅಲೆದಾಡಬೇಕು. ಗುತ್ತಿಗೆದಾರರಿಗೆ 20-30 ಸಾವಿರ ನೀಡಬೇಕು. ಗುಣಮಟ್ಟದ ಮೋಟಾರ್‍‌ಗಳನ್ನು ನೀಡಿಲ್ಲ ಎಂದು ದೂರಿದ್ದರು.

 

 

ಆದರೆ ಈ ಎಲ್ಲಾ ಆರೋಪಗಳನ್ನೂ ಯುನೈಟೆಡ್‌ ಇಂಜಿನಿಯರಿಂಗ್‌ ವರ್ಕ್ಸ್‌ ತಳ್ಳಿ ಹಾಕಿದೆ.

 

‘ನಿಗಮವು ನೀಡಿರುವ ಕಾರ್ಯಾದೇಶದಂತೆಯೇ ನಾವು ಪಂಪ್‌ಸೆಟ್‌ ಸಮೇತವಾಗಿ ಎಲ್ಲಾ ಸಾಮಗ್ರಿಗಳನ್ನೂ ಫಲಾನುಭವಿಗಳಿಗೆ ಒದಗಿಸಿದ್ದೇವೆ. ನಮ್ಮಿಂದ ಯಾವುದೇ ತರಹದ ಲೋಪ ದೋಷವಾಗಿಲ್ಲ. ಕಾರ್ಯಾದೇಶಕ್ಕೆ ಅನುಗುಣವಾಗಿ ಗುಣಮಟ್ಟದ ಸಾಮಗ್ರಿಗಳನ್ನು ಪೂರೈಸಿದ್ದೇವೆ.

 

 

ಸದನ ಸಮಿತಿಯು ಪರಿಶೀಲನೆ ಮಾಡಿರುವ ಎಲ್ಲಾ ಫಲಾನುಭವಿಗಳ ಸಾಮಗ್ರಿಗಳಿಗೆ ನೀಡಿರುವ ಎರಡು ವರ್ಷದ ಗ್ಯಾರಂಟಿ ಅವಧಿ ಮುಗಿದಿದೆ. ಹೀಗಾಗಿ ಫಲಾನುಭವಿಗಳು ತಪ್ಪು ಗ್ರಹಿಕೆಯಿಂದ ಆಧಾರವಿಲ್ಲದೇ ಆರೋಪ ಮಾಡಿದ್ದಾರೆ,’ ಎಂದು ಯುನೈಟೆಡ್‌ ಇಂಜಿನಿಯರಿಂಗ್‌ ವರ್ಕ್ಸ್‌ ಪ್ರತಿಪಾದಿಸಿರುವುದು ಪತ್ರದಿಂದ ಗೊತ್ತಾಗಿದೆ.

 

 

ಅದೇ ರೀತಿ ಅಹಮದಾಬಾದ್‌ ಮೂಲದ ಮಹಾವೀರ್ ಸಬ್‌ ಮರ್ಸಿಬಲ್‌ ಪ್ರೈ ಲಿ., ಕೂಡ ಆರೋಪಗಳನ್ನು ತಳ್ಳಿ ಹಾಕಿದೆ.

 

‘ಸಮಿತಿ ಪರಿಶೀಲನೆ ಮಾಡಿರುವ ಪೈಕಿ ಗೋವಿಂದ ಸಿಂಗನೋಡಿ ಎಂಬ ರೈತನು ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಯಾಗಿಲ್ಲ. ಈ ಫಲಾನುಭವಿಗೆ ಏಷಿಯನ್‌ ಇಂಜಿನಿಯರ್ಸ್‌ ಸಾಮಗ್ರಿ  ಸರಬರಾಜು ಮಾಡಿದೆ. ಫಲಾನುಭವಿಯು ಮುಕ್ತ ಮಾರುಕಟ್ಟೆಯಲ್ಲಿ ನಮ್ಮ ಕಂಪನಿಯ ಪಂಪ್‌ ಸೆಟ್‌ ಖರೀದಿಸಿರಬಹುದು. ನಮ್ಮ ಕಂಪನಿಯ ನಿಯಮಾನುಸಾರ ಪಂಪ್‌ ಸೆಟ್‌ನ್ನು ಟ್ಯಾಂಪರ್‍‌ ಮಾಡಿದಲ್ಲಿ ಗ್ಯಾರಂಟಿ ಕೊಡಲು ಬರುವುದಿಲ್ಲ.

 

 

ನಮ್ಮನ್ನು ಸಂಪರ್ಕಿಸದೇ ತಾವೇ ರಿಪೇರಿ ಮಾಡಿಕೊಂಡ ರೈತನ ದೂರಿಗೆ ನಾವು ಜವಾಬ್ದಾರರಾಗಿಲ್ಲ. ಹಾಗೂ ಫಲಾನುಭವಿಗೆ ಬೇರೆ ಕಂಪನಿಯಿಂದ ಸಾಮಗ್ರಿಗಳನ್ನು ಸರಬರಾಜು ಮಾಡಿ ಬಿಲ್ ಕ್ಲೈಮ್‌ ಮಾಡಿರುವುದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ,’ ಎಂದು ಆರೋಪಗಳನ್ನು ತಳ್ಳಿ ಹಾಕಿರುವುದು ಪತ್ರದಿಂದ ತಿಳಿದು ಬಂದಿದೆ.

 

 

ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ನಿರ್ಮಾಣ ಕಾರ್ಯದಲ್ಲಿ ಶೇ.30 ರಿಂದ 40 ರಷ್ಟು ಅಕ್ರಮ ನಡೆದಿದೆ. 100 ಕೋಟಿ ರೂ. ಅನುದಾನದಲ್ಲಿ 30ರಿಂದ 40 ಕೋಟಿ ರೂ. ದೋಚುವ ಕೆಲಸ ಮಾಡಲಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್‌ನ ಗಂಗಾ ಕಲ್ಯಾಣ ವಿಶೇಷ ಸದನ ಸಮಿತಿಯ ಅಧ್ಯಕ್ಷ ಡಾ.ವೈ.ಎ. ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದರು.

 

ಗಂಗಾ ಕಲ್ಯಾಣ ಯೋಜನೆಯಲ್ಲಿ ಹಲವಾರು ಅಕ್ರಮಗಳು ನಡೆದಿದ್ದು ಸಮಿತಿಯ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಇದರ ಕುರಿತು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ 2015ರಿಂದ ಇಲ್ಲಿಯವರೆಗೆ ಕೋಟ್ಯಂತರ ರೂ. ಅಕ್ರಮ ನಡೆದಿರುವುದು ಸಮಿತಿಗೆ ಗೊತ್ತಾಗಿದೆ.  ಗೋಲ್‌ಮಾಲ್‌ನಲ್ಲಿ ಭಾಗಿಯಾದವರ ವಿರುದ್ಧ ಕ್ರಮಕೈಗೊಳ್ಳುವಂತೆ ಸಮಿತಿ ಶಿಫಾರಸು ಮಾಡಲಿದೆ ಎಂದಿದ್ದರು.

 

ಗಂಗಾ ಕಲ್ಯಾಣ ಯೋಜನೆಯಡಿ 2015-16, 17, 18, 19 ರವರೆಗೆ ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ 2381, ವಾಲ್ಮೀಕಿ ಅಭಿವೃದ್ಧಿ ನಿಗಮದಡಿ 2344, ಹಿಂದುಳಿದ ಅಭಿವೃದ್ಧಿ ನಿಗಮದಡಿ 863, ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದಡಿ 325 ಸೇರಿ ಒಟ್ಟು 5913 ಕೊಳವೆಬಾವಿ ಕೊರೆಯಿಸಲಾಗಿದೆ.

 

ಈ ಎಲ್ಲ ಕೊಳವೆ ಬಾವಿಗಳು ಕಾರ್ಯರೂಪಕ್ಕೆ ಬಂದಿದ್ದರೆ, 20 ಸಾವಿರ ಎಕರೆಗೆ ನೀರುಣಿಸಬಹುದಾಗಿತ್ತು. ಆದರೆ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಅಕ್ರಮಗಳಿಂದ 2 ಸಾವಿರ ಕೊಳವೆ ಬಾವಿಗಳು ಇಂದಿಗೂ ನೀರು ಕಂಡಿಲ್ಲಎಂದು ವಿವರಿಸಿದ್ದರು.

Hot this week

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೇರದ ಭದ್ರಾ ಮೇಲ್ದಂಡೆ ಯೋಜನೆ; ಸಹಾಯಧನ ಬಿಡುಗಡೆ ವಿಳಂಬಕ್ಕೆ ನೆಪವೊಡ್ಡಿದ ಕೇಂದ್ರ

ಬೆಂಗಳೂರು; ರಾಜ್ಯದ ಮಹತ್ವಾಕಾಂಕ್ಷೆ ನೀರಾವರಿ ಯೋಜನೆ ಭದ್ರಾ ಮೇಲ್ದಂಡೆ ಯೋಜನೆಯ ಅಂದಾಜು...

ಶೌಚಗುಂಡಿಗಳಲ್ಲಿ ಸ್ವಚ್ಛತೆ; 5 ವರ್ಷದಲ್ಲಿ ದೇಶದಾದ್ಯಂತ 332 ಮಂದಿ ಸಾವು, ಕರ್ನಾಟಕದೊಂದಿಗೆ ತಾಳೆಯಾಗದ ಮರಣದ ಅಂಕಿಅಂಶ

ಬೆಂಗಳೂರು; ರಾಜ್ಯದಲ್ಲಿ ಶೌಚ ಗುಂಡಿಗಳು ಮತ್ತು ಒಳಚರಂಡಿಗಳಲ್ಲಿ  ಅಪಾಯಕಾರಿ ಪರಿಸ್ಥಿತಿಯಲ್ಲಿ 2024ನೇ...

ವಸತಿ ಬಡಾವಣೆ ನಿರ್ಮಾಣ, ಅಭಿವೃದ್ಧಿ ಕಾಮಗಾರಿ, ಬಡ್ಡಿ ಪಾವತಿ; ಲೆಕ್ಕಪತ್ರವನ್ನೇ ನಿರ್ವಹಿಸಿಲ್ಲ, ದಾಖಲೆಗಳನ್ನೂ ಒದಗಿಸಿಲ್ಲ, ಮುಡಾ ದುರಾಡಳಿತ

ಮಂಗಳೂರು: ಕುಂಜತ್‌ ಬೈಲ್ ಸೇರಿದಂತೆ ಹಲವೆಡೆ ವಸತಿ ಬಡಾವಣೆಗಳನ್ನು ರಚಿಸುವ ಉದ್ದೇಶದಿಂದ...
Please Scan to make Your Contribution

Topics

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೇರದ ಭದ್ರಾ ಮೇಲ್ದಂಡೆ ಯೋಜನೆ; ಸಹಾಯಧನ ಬಿಡುಗಡೆ ವಿಳಂಬಕ್ಕೆ ನೆಪವೊಡ್ಡಿದ ಕೇಂದ್ರ

ಬೆಂಗಳೂರು; ರಾಜ್ಯದ ಮಹತ್ವಾಕಾಂಕ್ಷೆ ನೀರಾವರಿ ಯೋಜನೆ ಭದ್ರಾ ಮೇಲ್ದಂಡೆ ಯೋಜನೆಯ ಅಂದಾಜು...

ಶೌಚಗುಂಡಿಗಳಲ್ಲಿ ಸ್ವಚ್ಛತೆ; 5 ವರ್ಷದಲ್ಲಿ ದೇಶದಾದ್ಯಂತ 332 ಮಂದಿ ಸಾವು, ಕರ್ನಾಟಕದೊಂದಿಗೆ ತಾಳೆಯಾಗದ ಮರಣದ ಅಂಕಿಅಂಶ

ಬೆಂಗಳೂರು; ರಾಜ್ಯದಲ್ಲಿ ಶೌಚ ಗುಂಡಿಗಳು ಮತ್ತು ಒಳಚರಂಡಿಗಳಲ್ಲಿ  ಅಪಾಯಕಾರಿ ಪರಿಸ್ಥಿತಿಯಲ್ಲಿ 2024ನೇ...

ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ; ಡಿಪಿಆರ್, ಟೆಂಡರ್ ಪ್ರಕ್ರಿಯೆಯಲ್ಲಿ ಲೋಪ ದೋಷ, 130 ಕೋಟಿ ರು ಹೆಚ್ಚುವರಿ

ಬೆಂಗಳೂರು; ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ನಡೆಸಲು ಕರೆದಿದ್ದ...

ಆದಾಯಕ್ಕಿಂತ ಹೆಚ್ಚಿನ ಅಕ್ರಮ ಸಂಪತ್ತು ಗಳಿಕೆ ; ಡಾ ಬೂವನಹಳ್ಳಿ ನಾಗರಾಜ್ ವಿರುದ್ಧದ ಪ್ರಕರಣದಲ್ಲಿ ಬಿ ರಿಪೋರ್ಟ್‌ ಅಂಗೀಕರಿಸಿದ ನ್ಯಾಯಾಲಯ

ಬೆಂಗಳೂರು; ತುಮಕೂರು ಜಿಲ್ಲಾ ಪಂಚಾಯ್ತಿಯಲ್ಲಿ ಕುಂದುಕೊರತೆ ನಿವಾರಣೆ ಪ್ರಾಧಿಕಾರಿಯಾಗಿದ್ದ ಡಾ ಬೂವನಹಳ್ಳಿ...

Related Articles

Popular Categories

error: Content is protected !!