ಹೊಸ ವಿದ್ಯಾರ್ಥಿ ನಿಲಯ ಮಂಜೂರಾತಿಯಿಲ್ಲ, ಹೆಚ್ಚುವರಿ ಅನುದಾನವೂ ಇಲ್ಲ; ‘ಕೈ’ ಎತ್ತಿದ ಸರ್ಕಾರ?

ಬೆಂಗಳೂರು;  ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೊಸ ವಿದ್ಯಾರ್ಥಿ ನಿಲಯಗಳ ಮಂಜೂರಾತಿಗಾಗಿ ಪ್ರಸ್ತಾವನೆಗಳು ಸಲ್ಲಿಕೆಯಾಗುತ್ತಿದ್ದರೂ ಸಹ ಹೆಚ್ಚುವರಿ ಅನುದಾನ ಒದಗಿಸಲು ಸಾಧ್ಯವಿಲ್ಲ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರವು ‘ಕೈ’ ಎತ್ತಿದೆ.

 

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿನ ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಸಿಗದೇ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಹೀಗಾಗಿ ಹೊಸದಾಗಿ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಬೇಕು ಎಂಬ ಬೇಡಿಕೆ ಪ್ರಸ್ತಾವನೆಗಳು ಇಲಾಖೆಗೆ ಸಲ್ಲಿಕೆಯಾಗುತ್ತಲೇ ಇವೆ. ಆದರೆ ಅನುದಾನ ಕೊರತೆಯಿರುವ ಕಾರಣ ಈ ಯಾವ ಪ್ರಸ್ತಾವನೆಗಳನ್ನು ಇಲಾಖೆಯು ಒಪ್ಪುತ್ತಿಲ್ಲ.

 

ಕಲ್ಬುರ್ಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಮಹಾಂತಪೂರ ಗ್ರಾಮದಲ್ಲಿ ಹೊಸ ವಿದ್ಯಾರ್ಥಿ ನಿಲಯಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಒಪ್ಪಿಲ್ಲ. ಈ ಸಂಬಂಧ 2025ರ ಜುಲೈ 2ರಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು, ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿಯೇ ‘ಹೆಚ್ಚುವರಿ ಅನುದಾನ ಒದಗಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

 

ಈ ಪತ್ರವನ್ನು ಸಚಿವ ಶಿವರಾಜ್ ತಂಗಡಗಿ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.

 

ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

ಕಲ್ಬುರ್ಗಿ ಜಿಲ್ಲೆಯ ಅಫಲಜಲಫೂರ ತಾಲೂಕಿನ ಮಹಾಂತಪೂರ ಗ್ರಾಮದಲ್ಲಿ 100 ಸಂಖ್ಯಾಬಲದ 01 ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ಮಂಜೂರು ಮಾಡಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು ಸರ್ಕಾರಕ್ಕೆ 2025ರ ಜನವರಿ 28ರಂದು ಪ್ರಸ್ತಾವ (BCWD-12037/78/2024-BCWD_HOSTEL_BCWD 28.01.2025) ಸಲ್ಲಿಸಿದ್ದರು ಎಂಬುದು ಪತ್ರದಿಂದ ಗೊತ್ತಾಗಿದೆ.

 

ಈ ಪ್ರಸ್ತಾವವನ್ನು ಇಲಾಖೆಯು ಪರಿಶೀಲಿಸಿತ್ತು. ಪ್ರಸಕ್ತ ಸಾಲಲಿನ ಆಯವ್ಯಯ ಭಾಷಣದಲ್ಲಿ 62 ಮೆಟ್ರಿಕ್‌ -ನಂತರದ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲು ಘೋಷಣೆ ಮಾಡಲಾಗಿದೆ. ಇದರ ಅನ್ವಯ ಕಲ್ಬುರ್ಗಿ ಜಿಲ್ಲೆಗೆ 2 ವಿದ್ಯಾರ್ಥಿ ನಿಲಯಗಳೂ ಲಭ್ಯವಾಗುತ್ತವೆ. ಇದನ್ನು ಹೊರತುಪಡಿಸಿ ಹೊಸ ವಿದ್ಯಾರ್ಥಿ ನಿಲಯಗಳನ್ನು ಮಂಜೂರು ಮಾಡಿ ಹೆಚ್ಚುವರಿ ಅನುದಾನ ಒದಗಿಸಲು ಸಾಧ್ಯವಿರುವುದಿಲ್ಲ.

 

 

ಈ ಹಿನ್ನೆಲೆಯಲ್ಲಿ ಆಯವ್ಯಯ ಘೋಷಣೆಯಂತೆ ಲಭ್ಯವಾಗುವ 2 ವಿದ್ಯಾರ್ಥಿ ನಿಲಯಗಳನ್ನು ಆದ್ಯತೆ ಮೇಲೆ ಮಂಜೂರು ಮಾಡುವ ಬಗ್ಗೆ ಕ್ರಮ ವಹಿಸಲಾಗುತ್ತದೆ. ಹಾಗೂ ಈ ಪ್ರಸ್ತಾವನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಆಯುಕ್ತರಿಗೆ ತಿಳಿಸಿರುವುದು ಪತ್ರದಿಂದ ತಿಳಿದು ಬಂದಿದೆ.

 

2024-25ನೇ ಸಾಲಿಗೆ ಕಲ್ಬುರ್ಗಿ ಜಿಲ್ಲೆಗೆ 61 ಹಾಸ್ಟೆಲ್‌ಗಳು ಮೆಟ್ರಿಕ್‌ ನಂತರದ ವಿಭಾಗದಲ್ಲಿ ಮಂಜೂರಾಗಿದ್ದವು. 7,844 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿದ್ದವು. ಈ ಪೈಕಿ 7,521 ವಿದ್ಯಾರ್ಥಿಗಳು ಹಾಸ್ಟೆಲ್‌ಗಳಿಗೆ ದಾಖಲಾಗಿದ್ದರು.
ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ಗಳ ವಿಭಾಗದಲ್ಲಿ ಕಲ್ಬುರ್ಗಿಗೆ 73 ಹಾಸ್ಟೆಲ್‌ಗಳು ಮಂಜೂರಾಗಿವೆ. 3,930 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿದ್ದವು. ಈ ಪೈಕಿ 3,926 ವಿದ್ಯಾರ್ಥಿಗಳು ಹಾಸ್ಟೆಲ್‌ಗಳಿಗೆ ದಾಖಲಾಗಿದ್ದರು.

 

ರಾಜ್ಯ ವಸತಿ ನಿಲಯ ತಂತ್ರಾಂಶ (2024-25)ನೇ ಸಾಲಿನ ಅಂಕಿ ಅಂಶದ ಪ್ರಕಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಮೆಟ್ರಿಕ್‌ ನಂತರದ ವಿಭಾಗದಲ್ಲಿ 1,321 ಹಾಸ್ಟಲ್‌ಗಳು ಮಂಜೂರಾಗಿದ್ದವು. ಇವು 1,75,303 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿದ್ದವು. ಇದೇ ಅವಧಿಯಲ್ಲಿ 81,309 ನವೀಕರಣ ಅರ್ಜಿಗಳು ಸಲ್ಲಿಕೆಯಾಗಿದ್ದವು. ಹಾಗೂ ಹೊಸದಾಗಿ ಹಾಸ್ಟಲ್‌ಗಳಿಗೆ ಪ್ರವೇಶ ಬಯಸಿ 1,94,519 ಅರ್ಜಿಗಳು ಸಲ್ಲಿಕೆಯಾಗಿದ್ದವು.

 

ಹೊಸ ಅರ್ಜಿಗಳ ಪೈಕಿ 88,757 ಅಭ್ಯರ್ಥಿಗಳಿಗೆ ಹಾಸ್ಟೆಲ್‌ ಸೀಟುಗಳು ಹಂಚಿಕೆಯಾಗಿದ್ದವು. ಇದರಲ್ಲಿ 85,520 ವಿದ್ಯಾರ್ಥಿಗಳು ದಾಖಲಾಗಿದ್ದರು.ಹಾಗೆಯೇ 81,309 ವಿದ್ಯಾರ್ಥಿಗಳು ಹಾಸ್ಟೆಲ್‌ ಪ್ರವೇಶವನ್ನು ನವೀಕರಿಸಿಕೊಂಡಿದ್ದರು. ಒಟ್ಟಾರೆ 1,66,829 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದರು.

 

ಮೆಟ್ರಿಕ್‌ ಪೂರ್ವ ವಿಭಾಗದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 2024-25ನೇ ಸಾಲಿನಲ್ಲಿ 1,276 ಹಾಸ್ಟೆಲ್‌ಗಳು ಮಂಜೂರಾಗಿದ್ದವು. ಇವು 68,783 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿದ್ದವು. 38,025 ಅರ್ಜಿಗಳು ನವೀಕರಣಕ್ಕಾಗಿ ಸಲ್ಲಿಕೆಯಾಗಿದ್ದವು. ಹೊಸದಾಗಿ 36,455 ಅರ್ಜಿಗಳು ಸಲ್ಲಿಸಲಾಗಿತ್ತು. ಹೊಸ ಅರ್ಜಿಗಳ ಪೈಕಿ 28,750 ಕ್ಕೆ ಮಾತ್ರ ಹಾಸ್ಟೆಲ್‌ಗಳು ಹಂಚಿಕೆಯಾಗಿದ್ದವು. ಇದರಲ್ಲಿ 28,678 ವಿದ್ಯಾರ್ಥಿಗಳೂ ಹಾಸ್ಟೆಲ್‌ಗಳಿಗೆ ದಾಖಲಾಗಿದ್ದರು.

 

ಹಿಂದುಳಿದ ವರ್ಗಗಳಿಗೆ ಸೇರಿದ 39,332 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶವೇ ದೊರೆತಿರಲಿಲ್ಲ.

 

ಹಿಂದುಳಿದ ವರ್ಗದ 39,332 ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳಲ್ಲಿ ದೊರೆಯದ ಪ್ರವೇಶಾತಿ

 

ಇಲಾಖೆಯಲ್ಲಿ ಲಭ್ಯವಿರುವ 150 ವಿದ್ಯಾರ್ಥಿ ನಿಲಯಗಳನ್ನು ಹಂಚಿಕೆ ಮಾಡಿದ್ದರೂ ಸಹ ರಾಜ್ಯದ ಶಾಸಕರುಗಳು ಸಹ ವಿದ್ಯಾರ್ಥಿ ನಿಲಯಗಳ ಮಂಜೂರಾತಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬೇಡಿಕೆ ಸಲ್ಲಿಸುತ್ತಿದ್ದಾರೆ. ಇದು 2024-25ನೇ ಸಾಲಿನ ಆಯವ್ಯಯದಲ್ಲಿ (ಕಂಡಿಕೆ 178(1)ರಲ್ಲಿ 100 ಸಂಖ್ಯಾಬಲದ ಮೆಟ್ರಿಕ್‌ ನಂತರದ ಬಾಲಕರ ಮತ್ತು ಬಾಲಕಿಯರ 150 ವಿದ್ಯಾರ್ಥಿ ನಿಲಯಗಳ ಸಂಖ್ಯೆಯ ಗಡಿಯನ್ನು ದಾಟಿತ್ತು.

 

ಲಭ್ಯವಿರುವ 150 ವಿದ್ಯಾರ್ಥಿ ನಿಲಯಗಳನ್ನು ಜಿಲ್ಲಾವಾರು,ವಿದ್ಯಾಸಂಸ್ಥೆಗಳ ಸಂಖ್ಯೆಗಳ ಆಧಾರದ ಮೇಲೆ ಹಂಚಿಕೆ ಮಾಡಿದ್ದರೂ ಸಹ ಹಲವು ವಿಧಾನಸಭೆ ಕ್ಷೇತ್ರಗಳಿಗೆ ವಿದ್ಯಾರ್ಥಿ ನಿಲಯಗಳ ಮಂಜೂರು ಮಾಡಲು ಕೋರಿಕೆಗಳು ಸಲ್ಲಿಕೆಯಾಗಿದ್ದವು.

 

ಹೀಗಾಗಿ ಈ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಊಟ ಮತ್ತು ವಸತಿ ಯೋಜನೆಯಡಿ ನೀಡಿದ್ದ 80.00 ಕೋಟಿ ರು ಅನುದಾನ ಬಳಸಿ ಸಹಾಯಧನ ವಿತರಿಸಿತ್ತು.  ಇದೇ ಕಾರ್ಯಕ್ರಮಕ್ಕೆ 2024-25ನೇ ಸಾಲಿಗೆ 100.00 ಕೋಟಿ ರು. ಅನುದಾನ ಒದಗಿಸಿತ್ತು.

 

2023-24ನೇ ಸಾಲಿಗೆ ಕೇಂದ್ರ ಪುರಸ್ಕೃತ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನ ಕಾರ್ಯಕ್ರಮದಡಿಯಲ್ಲಿ ಒಟ್ಟಾರೆ 61.91 ಕೋಟಿ ರು ಅನುದಾನ ಬಿಡುಗಡೆಯಾಗಿದೆ. ಈ ಅನುದಾನ ಬಳಸಿಕೊಂಡು 1,54,305 ವಿದ್ಯಾರ್ಥಿಗಳಿಗೆ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನ ಪಾವತಿಸಿತ್ತು.  2024-25ನೇ ಸಾಲಿಗೆ ಅಗತ್ಯವಿರುವ ಅನುದಾನ ಬಿಡುಗಡೆ ಕುರಿತು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

 

ಅದೇ ರೀತಿ ಕೇಂದ್ರ ಸರ್ಕಾರದ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಒಟ್ಟಾರೆ 257.35 ಕೋಟಿ ರು ಅನುದಾನ ಬಿಡುಗಡೆಯಾಗಿತ್ತು. ಈ ಅನುದಾನ ಬಳಸಿಕೊಂಡು 2,93,777 ವಿದ್ಯಾರ್ಥಿಗಳಿಗೆ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ ಪಾವತಿಸಿತ್ತು.

 

ಹಾಗೆಯೇ 2023-24ನೇ ಸಾಲಿಗೆ ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಕಾರ್ಯಕ್ರಮದಡಿ 400 ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ಈ ಅನುದಾನವನ್ನು ಬಳಸಿಕೊಂಡು 2020-21, 2021-22 ಮತ್ತು 2022-23ನೇ ಆರ್ಥಿಕ ವರ್ಷದಲ್ಲಿ ಬಾಕಿ ಇದ್ದ 3,49,743 ಅರ್ಹ ವಿದ್ಯಾರ್ಥಿಗಳಿಗೆ ಪಾವತಿ ಮಾಡಲು 312.22 ಕೋಟಿ ರು. ವಿನಿಯೋಗಿಸಿತ್ತು.

 

ಉಳಿಕೆ ಅನುದಾನದಲ್ಲಿ 2023-24ನೇ ಸಾಲಿನ 1,42,418 ಅರ್ಹ ವಿದ್ಯಾರ್ಥಿಗಳಿಗೆ ಶುಲ್ಕ ಮರು ಪಾವತಿ ಮಂಜೂರಾಗಿದೆ. ಈ ಕಾರ್ಯಕ್ರಮದಡಿಯಲ್ಲಿ 2020-21, 2021-22, 2022-23 ಮತ್ತು 2023-24ನೇ ಸಾಲಿನಲ್ಲಿ ಒಟ್ಟು 4,90,372 ವಿದ್ಯಾರ್ಥಿಗಳು ಶುಲ್ಕ ಮರುಪಾವತಿ ಪಡೆಯಲು ಅರ್ಹರಿದ್ದಾರೆ. ಈ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಮಾಡಲು 263.59 ಕೋಟಿ ರು ಅನುದಾನದ ಅವಶ್ಯಕತೆ ಇದೆ. ಈ ಕುರಿತೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಇಲಾಖೆಯು ಮಾಹಿತಿ ಒದಗಿಸಿತ್ತು.

 

ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ 2024-25ನೇ ಸಾಲಿಗೆ 200 ಕೋಟಿ ರು ಅನುದಾನ ಒದಗಿಸಲಾಗಿದೆ. ಹೊಸ ವಿದ್ಯಾರ್ಥಿ ನಿಲಯಗಳ ಕಟ್ಟಡ ಕಾಮಗಾರಿಯ ಘಟಕ ವೆಚ್ಚದ ರೂಪದಲ್ಲಿ 400.00 ಲಕ್ಷ ರು. ಅನುದಾನ ಘೋಷಿಸಿತ್ತು.

 

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಪಾಲುದಾರಿಕೆಯೊಂದಿಗೆ ಒಟ್ಟು 82 ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಮುಂದುವರೆಇದೆ. ಆರ್‍‌ಐಡಿಎಫ್‌ ಟ್ರಾಂಚ್‌ 30 ಕಾರ್ಯಕ್ರಮದಡಿ 15 ಹೊಸ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಕೈಗೊಳ್ಳಲು ಸರ್ಕಾರವು ಕ್ರಮವಹಿಸಿತ್ತು.

 

ಹಿಂದುಳಿದ ವರ್ಗಗಳು, ಪರಿಶಿಷ್ಟ ವರ್ಗಗಳು ಮತ್ತು  ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಮೆಟ್ರಿಕ್‌ ಪೂರ್ವ ರಾಜ್ಯ  ವಿದ್ಯಾರ್ಥಿ ವೇತನ ಪಾವತಿಸಲು ಅನುದಾನ ಕೊರತೆ ಎದುರಾಗಿದೆ. ಹೀಗಾಗಿ 2024-25ನೇ ಸಾಲಿಗೆ ಸಂಬಂಧಿಸಿದಂತೆ ಈ ಮೂರು ಇಲಾಖೆಗಳ ವ್ಯಾಪ್ತಿಯಲ್ಲಿ 48,019 ಅರ್ಜಿಗಳಿಗೆ  ಅನುಮೋದನೆ ದೊರೆತಿರಲಿಲ್ಲ.

 

ವಿದ್ಯಾರ್ಥಿ ವೇತನಕ್ಕೆ ಅನುದಾನ ಕೊರತೆ; 48,019 ಅರ್ಜಿಗಳಿಗೆ ಇನ್ನೂ ದೊರೆಯದ ಅನುಮೋದನೆ

 

ಹಾಗೆಯೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 1,00,672 ಅರ್ಜಿಗಳು ಸ್ವೀಕೃತವಾಗಿದ್ದವು. ಈ ಪೈಕಿ 90,671 ಅರ್ಜಿಗಳಿಗೆ ಅನುಮೋದನೆ ದೊರೆತಿದೆ. ಇನ್ನೂ   9,854 ಅರ್ಜಿಗಳಿಗೆ ಅನುಮೋದನೆ ದೊರೆತಿಲ್ಲ. ಉಡುಪಿ ಜಿಲ್ಲೆಯಲ್ಲಿ 1,638, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,209 ಅರ್ಜಿಗಳು ಅನುಮೋದನೆಗೆ ಬಾಕಿ ಇರಿಸಿಕೊಂಡಿದೆ.

 

 

 

ಹಿಂದುಳಿದ ವರ್ಗಗಳ ಇಲಾಖೆಯಡಿಯಲ್ಲಿ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಶುಲ್ಕ ಮರು ಪಾವತಿ, ಪಿಎಂ ಯಶಸ್ವಿ, ಅಲೆಮಾರಿ, ಅರೆಅಲೆಮಾರಿ ವಿದ್ಯಾರ್ಥಿ ವೇತನ ಯೋಜನೆಗಳಡಿಯಲ್ಲಿ 6,74,761 ಅರ್ಜಿಗಳನ್ನು ಸ್ವೀಕರಿಸಿತ್ತು. ಈ ಪೈಕಿ 6,52,577 ಅರ್ಜಿಗಳನ್ನು ಅನುಮೋದಿಸಿದೆ. 6,249 ಅರ್ಜಿಗಳನ್ನು ತಿರಸ್ಕರಿಸಿದೆ.

 

 

 

 

 

ಅನುಮೋದಿತ ಅರ್ಜಿಗಳಲ್ಲಿ 5,61,419 ಅರ್ಜಿಗಳನ್ನು ಮಂಜೂರು ಮಾಡಿದೆ. ಇನ್ನುಳಿದ 5,20,567 ಅರ್ಜಿಗಳನ್ನು ಡಿಬಿಟಿಗೆ ಕಳಿಸಲಾಗಿದೆ. ಮಂಜೂರಾತಿಗೆ 91,158 ಅರ್ಜಿಗಳು ಹಾಗೂ ಡಿಬಿಟಿಗೆ ಕಳಿಸಲು 40,857 ಅರ್ಜಿಗಳು ಬಾಕಿ ಇವೆ. 4,67,952 ಅರ್ಜಿಗಳಿಗೆ 372.06 ಕೋಟಿ ರು ಪಾವತಿಯಾಗಿದೆ. ಉಳಿದ 51,833 ಅರ್ಜಿಗಳಿಗೆ ಪಾವತಿಯಾಗಿರುವ ಬಗ್ಗೆ ಮಾಹಿತಿ ಬರಬೇಕಿದೆ ಎಂದು ಇಲಾಖೆಯು ಸಭೆಗೆ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

 

 

 

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 3,99,965 ಅರ್ಜಿಗಳು ಸ್ವೀಕೃತವಾಗಿದ್ದವು. ಈ ಪೈಕಿ 3,98,863 ಅರ್ಜಿಗಳಿಗೆ ಅನುಮೋದನೆ ದೊರೆತಿದೆ. ಇನ್ನೂ 677 ಅರ್ಜಿಗಳಿಗೆ ಅನುಮೋದನೆ ನೀಡುವುದು ಬಾಕಿ ಇದೆ. ಈ ಇಲಾಖೆಯಲ್ಲಿ 3,681 ಅರ್ಜಿಗಳು ತಿರಸ್ಕೃತವಾಗಿವೆ. 98,260 ಅರ್ಜಿಗಳನ್ನು ಡಿಬಿಟಿಗೆ ಕಳಿಸಿದೆ. ಮಂಜೂರಾತಿಗೆ 854 ಅರ್ಜಿಗಳು ಹಾಗೂ ಡಿಬಿಟಿಗೆ ಕಳಿಸಲು 27,380 ಅರ್ಜಿಗಳು ಬಾಕಿ ಇವೆ. ಡಿಬಿಟಿ ಮೂಲಕ 108.07 ಕೋಟಿ ರುಗಳನ್ನು ಪಾವತಿಯಾಗಿದೆ. ಉಳಿದ 35,852 ಅರ್ಜಿಗಳಿಗೆ ಪಾವತಿಯಾಗಿರುವ ಕುರಿತಾದ ಮಾಹಿತಿಯು ಬರಬೇಕಿದೆ ಎಂದು ಇಲಾಖೆಯು ತಿಳಿಸಿದೆ.

 

 

 

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಮೆಟ್ರಿಕ್‌ ಪೂರ್ವ ರಾಜ್ಯ ವಿದ್ಯಾರ್ಥಿ ವೇತನಕ್ಕೆ ಒಟ್ಟಾರೆ 6,39,601 ಅರ್ಜಿಗಳನ್ನು ಇಲಾಖೆಯು ಸ್ವೀಕರಿಸಿತ್ತು. ಈ ಪೈಕಿ 6,01,527 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ. ಅನುದಾನದ ಕೊರತೆ ಇರುವ ಕಾರಣಕ್ಕೆ ಇನ್ನೂ 37,393 ಅರ್ಜಿಗಳಿಗೆ ಅನುಮೋದನೆ ದೊರೆತಿಲ್ಲ. ಅಂದಾಜು 6.10 ಕೋಟಿ ರು ಮೊತ್ತದ ವಿದ್ಯಾರ್ಥಿ ವೇತನ ಪಾವತಿಸಲು ಬಾಕಿ ಇತ್ತು.

 

ಮೆಟ್ರಿಕ್‌ ನಂತರದ ಶುಲ್ಕ ಮರುಪಾವತಿ ಯೋಜನೆಯಡಿ ಒಟ್ಟು 2,202,438 ಅರ್ಜಿಗಳು ಸ್ವೀಕೃತವಾಗಿದ್ದವು. ಈ ಪೈಕಿ 1,05,128 (2023-24ನೇ ಸಾಲಿನ ಬಾಕಿ ಇರುವ 47,705) ವಿದ್ಯಾರ್ಥಿಗಳಿಗೆ 116.9 ಕೋಟಿ ರು ವಿದ್ಯಾರ್ಥಿ ವೇತನ ನೀಡಲಾಗಿದೆ. 2024-25ನೇ ಸಾಲಿನಲ್ಲಿ ಇನ್ನೂ ಬಾಕಿ ಉಳಿದ ಅಂದಾಜು1,21,956 ವಿದ್ಯಾರ್ಥಿಗಳಿಗೆ ಅಂದಾಜು 89.61 ಕೋಟಿ ರು  ವಿದ್ಯಾರ್ಥಿ ವೇತನ ಮೊತ್ತವನ್ನು ಪಾವತಿಸಬೇಕಾಗಿತ್ತು.

 

 

 

ಅಲ್ಲದೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳಿಸಿರುವ ವಿದ್ಯಾರ್ಥಿ ವೇತನ ಯೋಜನೆಗಳಡಿಯಲ್ಲಿ 2024-25ನೇ ಸಾಲಿನಲ್ಲಿ ಬಾಕಿ ಇರುವ 1,60,055 ವಿದ್ಯಾರ್ಥಿಗಳಿಗೆ ಅಂದಾಜು 99.06 ಕೋಟಿ ರು ವಿದ್ಯಾರ್ಥಿ ವೇತನ ಪಾವತಿಸಬೇಕಿದೆ. ಈ ಸಂಬಂಧ ಆರ್ಥಿಕ ಇಲಾಖೆಯ ಸಹಮತಿಗಾಗಿ ಪ್ರಸ್ತಾವನೆ ಸಲ್ಲಿಸಿತ್ತು.

 

ದಾವಣಗೆರೆ ಜಿಲ್ಲೆಯಲ್ಲಿ ಅತೀ ಹೆಚ್ಚು ಎಂದರೇ 5,501  ಕೊಡಗು ಜಿಲ್ಲೆಯಲ್ಲಿ ಅತೀ ಹೆಚ್ಚು ಎಂದರೇ ಅರ್ಜಿಗಳು ಅನುಮೋದನೆಗೆ ಬಾಕಿ ಇವೆ. ಅದೇ ರೀತಿ ಎರಡನೇ ಸ್ಥಾನದಲ್ಲಿರುವ  ಕೊಡಗು ಜಿಲ್ಲೆಯಲ್ಲಿ  3,827, ಮೂರನೇ ಸ್ಥಾನದಲ್ಲಿರುವ   ಬೆಳಗಾವಿ ಜಿಲ್ಲೆಯಲ್ಲಿ 3,752 ಅರ್ಜಿಗಳಿಗೆ ಅನುಮೋದನೆ ದೊರೆತಿಲ್ಲ.  ಚಾಮರಾಜ ನಗರ ಜಿಲ್ಲೆಯಲ್ಲಿ 2,048, ಗದಗ್‌ನಲ್ಲಿ 1,664, ಹಾವೇರಿಯಲ್ಲಿ 1,450, ರಾಯಚೂರು ಜಿಲ್ಲೆಯಲ್ಲಿ 1,220, ರಾಮನಗರ ಜಿಲ್ಲೆಯಲ್ಲಿ 1,974, ತುಮಕೂರು ಜಿಲ್ಲೆಯಲ್ಲಿ 1,216, ಉತ್ತರ ಕನ್ನಡದಲ್ಲಿ 1,126, ವಿಜಯಪುರದಲ್ಲಿ 1,902 ಅರ್ಜಿಗಳಿಗೆ ಅನುಮೋದನೆ ದೊರೆತಿರಲಿಲ್ಲ.

 

ಪೂರಕವಾಗಿ ಆರ್ಥಿಕ ನೆರವು ನೀಡುವ ಉದ್ದೇಶ ಹೊಂದಿರುವ ವಿದ್ಯಾಸಿರಿ ಯೋಜನೆಗೆ ಹಂಚಿಕೆಯಾಗಿದ್ದ ಒಟ್ಟು 24.99 ಕೋಟಿ ರು.ನಲ್ಲಿ 2025ರ ಫೆ.12ರ ಅಂತ್ಯಕ್ಕೆ 8.62 ಕೋಟಿಯಷ್ಟೇ ಬಿಡುಗಡೆಯಾಗಿತ್ತು. ವಿಶೇಷವೆಂದರೇ 2024-25ನೇ ಸಾಲಿನ ಆಯವ್ಯಯದಲ್ಲಿ ವಿದ್ಯಾಸಿರಿಗೆ ಹಂಚಿಕೆಯಾಗಿದ್ದ ಅನುದಾನವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು    ಡಿಸೆಂಬರ್‍‌ 2ರವರೆಗೆ  ಖರ್ಚು ಮಾಡದೇ ಹಾಗೇ ಇಟ್ಟಿತ್ತು.

 

ಅಲ್ಪಸಂಖ್ಯಾತರ ‘ವಿದ್ಯಾಸಿರಿ’ಯ ಪ್ರಗತಿಯಲ್ಲಿ ಹಿನ್ನಡೆ; 24.99 ಕೋಟಿಯಲ್ಲಿ 8.62 ಕೋಟಿ ಖರ್ಚು, 16.36 ಕೋಟಿ ಬಾಕಿ

 

ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ  ನೀಡುವ ಉದ್ದೇಶದ  ವಿದ್ಯಾಸಿರಿ ಯೋಜನೆಗೆ 24,99,00,000 ರು ಹಂಚಿಕೆಯಾಗಿತ್ತು. ಈ ಪೈಕಿ 2024ರ ಡಿಸೆಂಬರ್‍‌ 2ರ ಅಂತ್ಯಕ್ಕೆ 18,74,25,000 ರು ಅನುದಾನ ಸ್ವೀಕೃತವಾಗಿತ್ತು. ಬಿಡುಗಡೆಯಾಗಿದ್ದ ಈ ಅನುದಾನದ ಪೈಕಿ ನಯಾ ಪೈಸೆಯನ್ನೂ ಇಲಾಖೆಯು ಖರ್ಚು ಮಾಡಿರಲಿಲ್ಲ. ಬದಲಿಗೆ ತನ್ನ ಬಳಿಯೇ ಇಟ್ಟುಕೊಂಡಿತ್ತು.

 

ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ 7.85 ಲಕ್ಷ ವಿದ್ಯಾರ್ಥಿಗಳಿಗೆ 290 ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದರು.

 

2024-25ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಒಟ್ಟಾರೆ 3,059.84 ಕೋಟಿ ರು ಅನುದಾನ ಹಂಚಿಕೆಯಾಗಿತ್ತು. ಡಿಸೆಂಬರ್‍‌ ಅಂತ್ಯಕ್ಕೆ ಒಟ್ಟಾರೆ 1,505.72 ಕೋಟಿ ರು. ಬಿಡುಗಡೆಯಾಗಿತ್ತು. ಇದರಲ್ಲಿ 1,276.29 ಕೋಟಿ ರು ವೆಚ್ಚವಾಗಿತ್ತು. ಒಟ್ಟು ಅನುದಾನದಲ್ಲಿ ಶೇ.41.71ರಷ್ಟೇ ವೆಚ್ಚವಾಗಿತ್ತು ಎಂಬುದು ಕೆಡಿಪಿ ಸಭೆಗೆ ಮಂಡಿಸಿದ್ದ ಅಂಕಿ ಅಂಶದಿಂದ ತಿಳಿದು ಬಂದಿದೆ.

 

 

 

2023ರ ನವೆಂಬರ್‌ 18ರಂದು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಇಲಾಖಾ ಮುಖ್ಯಸ್ಥರು ಆಯವ್ಯಯ ವಾಸ್ತವಿಕ ಬಿಡುಗಡೆ, ವೆಚ್ಚದ ವಿವರಗಳನ್ನು ಮುಂದಿರಿಸಿದ್ದರು.

ಡಿಸೆಂಬರ್ ಅಂತ್ಯಕ್ಕೆ ಶೇ.57.34ರಷ್ಟು ಮಾತ್ರ ವೆಚ್ಚ, ಕಳೆದ ಸಾಲಿಗೆ ಹೋಲಿಸಿದರೆ ಕೇವಲ ಶೇ.2.3ರಷ್ಟೇ ಪ್ರಗತಿ

 

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿಯೂ ಕೇಂದ್ರ ಮತ್ತು ರಾಜ್ಯ ಸರ್ಕಾರವು ತನ್ನ ಪಾಲಿನ ಅನುದಾನದ ಪೈಕಿ ಬಿಡಿಗಾಸನ್ನೂ ಒದಗಿಸಿಲ್ಲ. ಇಲಾಖಾವಾರು ಫಲಾನುಭವಿ ಆಧರಿತ ಕಾರ್ಯಕ್ರಮಗಳಲ್ಲೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಅತ್ಯಂತ ಕನಿಷ್ಠ ಪ್ರಮಾಣದ ಅನುದಾನ ಬಿಡುಗಡೆಯಾಗಿತ್ತು.

 

ಆಯವ್ಯಯದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಒಟ್ಟಾರೆ 2,101.20 ಕೋಟಿ ರು. ಅನುದಾನ ಒದಗಿಸಿದೆ. ಈ ಪೈಕಿ ಅಕ್ಟೋಬರ್‌ ಅಂತ್ಯಕ್ಕೆ 421.06 ಕೋಟಿಯಷ್ಟೇ ಬಿಡುಗಡೆಯಾಗಿದೆ. ಇದು ಒಟ್ಟು ಅನುದಾನಕ್ಕೆ ಶೇ.20ರಷ್ಟು ಮಾತ್ರ ಬಿಡುಗಡೆಯಾದಂತಾಗಿದೆ. ಇದರಲ್ಲಿ 303.58 ಕೋಟಿ ರು. ಖರ್ಚಾಗಿತ್ತು.

 

ಕೇಂದ್ರ ಪುರಸ್ಕೃತ ಯೋಜನೆಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ರಾಜ್ಯ ಸರ್ಕಾರವು 83.00 ಕೋಟಿ ರು.ಗಳನ್ನು ಆಯವ್ಯಯದಲ್ಲಿ  ಅನುದಾನ ಒದಗಿಸಿಕೊಂಡಿದೆ. ಕೇಂದ್ರ ಸರ್ಕಾರವು 100 ಕೋಟಿ ರು. ಒದಗಿಸಿದೆ. ಒಟ್ಟಾರೆ 183 ಕೋಟಿ ರು. ಅನುದಾನವಿದ್ದರೂ ಅಕ್ಟೋಬರ್‌ ಅಂತ್ಯಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ಬಿಡಿಗಾಸೂ ಬಿಡುಗಡೆ ಮಾಡಿರಲಿಲ್ಲ.

 

ಅಲ್ಪಸಂಖ್ಯಾತರಿಗೆ ಅನುದಾನ; 2,101.20 ಕೋಟಿ ರು.ನಲ್ಲಿ ಬಿಡುಗಡೆ ಮಾಡಿದ್ದು ಕೇವಲ 421.60 ಕೋಟಿ

ಅದೇ ರೀತಿ ಇದೇ ಇಲಾಖೆಗೆ ಸಂಬಂಧಿಸಿದ ಪ್ರಧಾನ ಮಂತ್ರಿ ಜನವಿಕಾಸ ಕಾರ್ಯಕ್ರಮಕ್ಕೂ ರಾಜ್ಯದಿಂದ 83 ಕೋಟಿ ರು., ಕೇಂದ್ರದಿಂದಲೂ 100 ಕೋಟಿ ರು. ಅನುದಾನ ಒದಗಿಸಿತ್ತು. ಅಕ್ಟೋಬರ್‌ ಅಂತ್ಯಕ್ಕೆ ನಯಾಪೈಸೆಯನ್ನೂ ನೀಡಿರಲಿಲ್ಲ.

 

ಇಲಾಖಾವಾರು ಫಲಾನುಭವಿ ಆಧರಿತ ಯೋಜನೆಗಳಲ್ಲಿಯೂ ಇದೇ ಸ್ಥಿತಿ ಇದೆ. ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿಗಾಗಿ ಆಯವ್ಯಯದಲ್ಲಿ 160 ಕೋಟಿ ರು. ಅನುದಾನ ಒದಗಿಸಿದೆ. ಅಕ್ಟೋಬರ್‌ ಅಂತ್ಯಕ್ಕೆ ಕೇವಲ 2.29 ಕೋಟಿ ರು ಮಾತ್ರ ಬಿಡುಗಡೆ ಮಾಡಿದೆ. ಇದರಲ್ಲಿ 0.10 ಕೋಟಿ ರು. ಮಾತ್ರ ವೆಚ್ಚವಾಗಿತ್ತು.

 

ಇದೇ ಇಲಾಖೆ ವ್ಯಾಪ್ತಿಯಲ್ಲಿ ವಿವಿಧ ಸಮುದಾಯಗಳ ಅಭಿವೃದ್ಧಿಗೆಂದು 110 ಕೋಟಿ ರು.ಗಳನ್ನು ಆಯವ್ಯಯದಲ್ಲಿ ಒದಗಿಸಿಕೊಂಡಿದೆಯಾದರೂ ಅಕ್ಟೋಬರ್‌ ಅಂತ್ಯಕ್ಕೆ ಕೇವಲ 1.00 ಕೋಟಿ ರು ಮಾತ್ರ ಬಿಡುಗಡೆ ಮಾಡಿತ್ತು.

ದಲಿತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ, ವರ್ಷದಿಂದಲೂ ಬಾಕಿ;ಬಡಮಕ್ಕಳ ಶಿಷ್ಯ ವೇತನಕ್ಕೂ ಹಣವಿಲ್ಲವೇ?

ಅಲ್ಪಸಂಖ್ಯಾತರ ಸಮುದಾಯದ ಎಂ ಫಿಲ್‌, ಪಿಹೆಚ್‌ಡಿ ವಿದ್ಯಾರ್ಥಿಗಳಿಗೆ ಸಹಾಯ ಧನ ಒದಗಿಸಲು 6.0 ಕೋಟಿ ರು. ಆಯವ್ಯಯದಲ್ಲಿ ಒದಗಿಸಿಕೊಂಡಿತ್ತು. ಅಕ್ಟೋಬರ್‌ ಅಂತ್ಯಕ್ಕೆ 2.33 ಕೋಟಿ ರ. ಮಾತ್ರ ವೆಚ್ಚವಾಗಿತ್ತು. ಶುಲ್ಕ ಮರು ಪಾವತಿಗೆ ಸಂಬಂಧಿಸಿದಂತೆ 25 00 ಕೋಟಿ ರು. ಆಯವ್ಯಯದಲ್ಲಿ ಒದಗಿಸಿಕೊಂಡಿತ್ತು. ಆದರೂ ಅಕ್ಟೋಬರ್‌ ಅಂತ್ಯಕ್ಕೆ ಒಂದೇ ಒಂದು ಪೈಸೆಯನ್ನೂ ಕೊಟ್ಟಿರಲಿಲ್ಲ. 18,000 ವಿದ್ಯಾರ್ಥಿಗಳಿಗೆ  ಶುಲ್ಕ ಮರುಪಾವತಿ ಮಾಡಲು ವಾರ್ಷಿಕ ಗುರಿ ನೀಡಲಾಗಿತ್ತು.  6 ತಿಂಗಳವರೆಗೂ  ಬಿಡಿಗಾಸನ್ನೂ ನೀಡಿರಲಿಲ್ಲ. ಹೀಗಾಗಿ ಇಷ್ಟೂ ಸಂಖ್ಯೆಯ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಯಾಗಿರಲಿಲ್ಲ.

 

ಕೆಡಿಪಿ ಪ್ರಕಾರ ಶೇ.35.41ರಷ್ಟೇ ಪ್ರಗತಿ, ಸಿಎಂ ಪ್ರಕಾರ ಶೇ.46ರಷ್ಟು ವೆಚ್ಚ; ವಾಸ್ತವ ಮರೆಮಾಚಲಾಗಿದೆಯೇ?

ಇನ್ನು ಮೌಲಾನಾ ಆಜಾದ್‌ ಶಾಲೆ ಕಾಲೇಜು ನಿರ್ವಹಣೆ ಮತ್ತು ನೂತನ ಹಾಸ್ಟೆಲ್‌ಗಳಿಗೆಂದು 68.29 ಕೋಟಿ ರು. ಒದಗಿಸಿದೆ. ಇದರಲ್ಲಿ 43.55 ಕೋಟಿ ರು.ಬಿಡುಗಡೆ ಮಾಡಿತ್ತು. ಇದರಲ್ಲಿ 35.38 ಕೋಟಿ ರು. ವೆಚ್ಚವಾಗಿತ್ತು. ವಿದ್ಯಾರ್ಥಿನಿಲಯಗಳು ಮತ್ತು ವಸತಿ ಶಾಲೆಗಳ ನಿರ್ವಹಣೆಗೆ 347.89 ಕೋಟಿ ರು. ಅನುದಾನ ಲಭ್ಯವಾಗಿಸಿಕೊಂಡಿತ್ತು. ಇದರಲ್ಲಿ ಅಕ್ಟೋಬರ್‌ ಅಂತ್ಯಕ್ಕೆ 181.42 ಕೋಟಿ ರು. ಮಾತ್ರ ಬಿಡುಗಡೆ ಮಾಡಿತ್ತು. ಈ ಪೈಕಿ 123.12 ಕೋಟಿ ರು ವೆಚ್ಚ ಮಾಡಿತ್ತು.

7 ಇಲಾಖೆಗಳಲ್ಲಿ ವೆಚ್ಚವಾಗದ 29,884 ಕೋಟಿ; ಚುರುಕಾಗದೇ ತೆವಳುತ್ತಿದೆಯೇ ಆಡಳಿತ ಯಂತ್ರ?

ಶ್ರಮ ಶಕ್ತಿ ಸಾಲ ಯೋಜನೆ (ವೈಯಕ್ತಿಕ) ಯಡಿ 1,000 ವ್ಯಕ್ತಿಗಳಿಗೆ ಆರ್ಥಿಕ ನೆರವು ನೀಡಲು 5.00 ಕೋಟಿ ರು. ನೀಡಿದೆ. ಆದರೆ ಬಿಡಿಗಾಸೂ ನೀಡಿಲ್ಲ. ಆದರೆ 11.01 ಕೋಟಿ ವೆಚ್ಚವಾಗಿದೆ ಎಂದು ತೋರಿಸಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts