ಬೆಂಗಳೂರು; ವಿವಿಧ ವಸತಿ ಯೋಜನೆಗಳಡಿ ಗ್ರಾಮೀಣ ಮತ್ತು ನಗರ ವಲಯಗಳಿಗೆ ಮಂಜೂರಾಗಿದ್ದ 6,72,499 ಮನೆಗಳ ಪೈಕಿ 4,01,072 ಮನೆಗಳು ಇನ್ನೂ ಪ್ರಗತಿಯಲ್ಲಿವೆ. ಈ ಯೋಜನೆಗಳಡಿಯಲ್ಲಿ ಮಂಜೂರಾಗಿರುವ ಮನೆಗಳ ನಿರ್ಮಾಣ ಪೈಕಿ 2,71,427 ಮನೆಗಳಿಗೆ ಮೊದಲನೇ ಕಂತಿನ ಅನುದಾನವಷ್ಟೇ ಬಿಡುಗಡೆಯಾಗಿದೆ. ಒಟ್ಟಾರೆ ಶೇ 42ರಷ್ಟೇ ಪ್ರಗತಿ ಸಾಧಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ 2025ರ ಮೇ 30, 31 ರಂದು ನಡೆದಿದ್ದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮೇಳನಕ್ಕೆ ವಸತಿ ಇಲಾಖೆಯು ಈ ಕುರಿತಾದ ಸಮಗ್ರ ವಿವರ, ಮಾಹಿತಿಗಳನ್ನು ನೀಡಿತ್ತು. ಈ ವಿವರಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ವಸತಿ ಇಲಾಖೆಯಲ್ಲಿ ಮಂಜೂರಾಗಿರುವ ಮನೆಗಳ ಹಂಚಿಕೆಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಅಳಂದ ಶಾಸಕ ಬಿ ಆರ್ ಪಾಟೀಲ್ ಅವರು ನೀಡಿರುವ ಹೇಳಿಕೆಯು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ವಿವಿಧ ವಸತಿ ಯೋಜನೆಗಳಡಿ ಪ್ರಗತಿಯಲ್ಲಿರುವ ಮನೆಗಳ ವಿವರಗಳು ಮುನ್ನೆಲೆಗೆ ಬಂದಿವೆ.
ವಿವಿಧ ವಸತಿ ಯೋಜನೆಗಳಡಿ ಗ್ರಾಮೀಣ ವಲಯ ಪೈಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿಗೆ 35,451 ಮನೆಗಳು ಮಂಜೂರಾಗಿದ್ದು ಈ ಪೈಕಿ 19,673 ಮನೆಗಳು ಪ್ರಗತಿಯಲ್ಲಿವೆ. 15,778 ಮನೆಗಳಿಗೆ ಮೊದಲನೇ ಕಂತು ಬಿಡುಗಡೆಯಾಗಿದೆ. ಇನ್ನೂ ಕಾಮಗಾರಿ ಆರಂಭಗೊಳ್ಳಬೇಕಿದೆ.
ಆಳಂದ ಶಾಸಕ ಬಿ ಆರ್ ಪಾಟೀಲ್ ಅವರ ತವರು ಜಿಲ್ಲೆ ಕಲ್ಬುರ್ಗಿಗೆ 40,007 ಮನೆಗಳು ಮಂಜೂರಾಗಿದ್ದವು. ಈ ಪೈಕಿ 20,869 ಮನೆಗಳು ಪ್ರಗತಿಯಲ್ಲಿವೆ. 19,138 ಮನೆಗಳಿಗೆ ಮೊದಲ ಕಂತಿನ ಅನುದಾನ ಬಿಡುಗಡೆಯಾಗಿದೆ. ಇನ್ನಷ್ಟೇ ಕಾಮಗಾರಿಗಳಿಗೆ ಚಾಲನೆ ದೊರಕಬೇಕಿದೆ.
ವಸತಿ ಸಚಿವ ಬಿ ಝಡ್ ಜಮೀರ್ ಅಹ್ಮದ್ ಖಾನ್ ಅವರ ತವರು ಬೆಂಗಳೂರು ನಗರ ಜಿಲ್ಲೆಗೆ 3,095 ಮನೆಗಳು ಮಂಜೂರಾಗಿವೆ. 2,704 ಮನೆಗಳು ಪ್ರಗತಿಯಲ್ಲಿವೆ. 391 ಮನೆಗಳಿಗೆ ಮೊದಲ ಕಂತು ಅನುದಾನ ಬಿಡುಗಡೆಯಾಗಿದೆ. ಈ ಮನೆಗಳ ಕಾಮಗಾರಿಗಳೂ ಸಹ ಇನ್ನಷ್ಟೇ ಆರಂಭಗೊಳ್ಳಬೇಕಿರುವುದು ದಾಖಲೆಯಿಂದ ತಿಳಿದು ಬಂದಿದೆ.
ಜಿಲ್ಲಾವಾರು ಪಟ್ಟಿ
ವಿಜಯಪುರ ಜಿಲ್ಲೆಗೆ 42,966 ಮನೆಗಳು ಮಂಜೂರಾಗಿದ್ದ ಪೈಕಿ 18,170 ಮನೆಗಳು ಪ್ರಗತಿಯಲ್ಲಿವೆ. 24,796 (ಶೇ.58) ಮನೆಗಳಿಗೆ ಮೊದಲನೇ ಕಂತು ಬಿಡುಗಡೆಯಾಗಿದೆ. ಬೆಳಗಾವಿ ಜಿಲ್ಲೆಗೆ ಮಂಜೂರಾಗಿದ್ದ 42,237 ಮನೆಗಳ ಪೈಕಿ 24,887 ಮನೆಗಳು ಪ್ರಗತಿಯಲ್ಲಿವೆ. 20.350 ಮನೆಗಳಿಗೆ ಮೊದಲನೇ ಕಂತು ಬಿಡುಗಡೆಯಾಗಿದೆ. ಬೀದರ್ ಜಿಲ್ಲೆಗೆ 31,960 ಮನೆಗಳು ಮಂಜೂರಾಗಿದ್ದು 13,658 ಮನೆಗಳು ಪ್ರಗತಿಯಲ್ಲಿವೆ. 13,302 ಮನೆಗಳಿಗೆ ಮೊದಲನೇ ಕಂತಿನ ಅನುದಾನ ಬಿಡುಗಡೆಯಾಗಿದೆ.
ರಾಯಚೂರು ಜಿಲ್ಲೆಗೆ 40,096 ಮನೆಗಳು ಮಂಜೂರಾಗಿದ್ದವು. ಈ ಪೈಕಿ 22,131 ಮನೆಗಳು ಪ್ರಗತಿಯಲ್ಲಿವೆ. ಇನ್ನೂ 17,965 ಮನೆಗಳು ನಿರ್ಮಾಣ ಇನ್ನಷ್ಟೇ ಶುರುವಾಗಬೇಕಿದೆ. ಕೊಪ್ಪಳ ಜಿಲ್ಲೆಗೆ 30,527 ಮನೆಗಳು ಮಂಜೂರಾಗಿದ್ದು 15,067 ಮನೆಗಳು ಪ್ರಗತಿಯಲ್ಲಿವೆ. 15,460 ಮನೆಗಳಿಗೆ ಮೊದಲನೇ ಕಂತಿನ ಅನುದಾನ ಬಿಡುಗಡೆಯಾಗಿದೆ. ಯಾದಗಿರಿ ಜಿಲ್ಲೆಗೆ ಮಂಜೂರಾಗಿದ್ದ 22,218 ಮನೆಗಳ ಪೈಕಿ 9,208 ಮನೆಗಳು ಪ್ರಗತಿಯಲ್ಲಿವೆ. 13,010 ಮನೆಗಳಿಗೆ ಮೊದಲನೇ ಕಂತಿನ ಅನುದಾನ ಬಿಡುಗಡೆಯಾಗಿದೆ. ಹೀಗಾಗಿ ಈ ಮನೆಗಳ ನಿರ್ಮಾಣ ಕಾಮಗಾರಿಗಳು ಆರಂಭವಾಗಬೇಕಿದೆ.
ತುಮಕೂರು ಜಿಲ್ಲೆಗೆ 32,479 ಮನೆಗಳು ಮಂಜೂರಾಗಿದ್ದು 20,895 ಮನೆಗಳು ಪ್ರಗತಿಯಲ್ಲಿವೆ. 11,584 ಮನೆಗಳ ನಿರ್ಮಾಣಕ್ಕೆ ಮೊದಲನೇ ಕಂತಿನ ಅನುದಾನ ಒದಗಿಸಿದೆ. ಚಾಮರಾಜನಗರಕ್ಕೆ ಮಂಜೂರಾಗಿರುವ 23,479 ಮನೆಗಳ ಪೈಕಿ 12,415 ಮನೆಗಳು ಪ್ರಗತಿಯಲ್ಲಿವೆ. 11,064 ಮನೆಗಳ ನಿರ್ಮಾಣಕ್ಕೆ ಮೊದಲನೇ ಕಂತು ಬಿಡುಗಡೆಯಾಗಿದೆ. ಬಾಗಲಕೋಟೆಯಲ್ಲಿ 23,297 ಮನೆಗಳ ನಿರ್ಮಾಣಕ್ಕೆ ಮಂಜೂರಾಗಿದ್ದರೂ 12,234 ಮನೆಗಳಷ್ಟೇ ಪ್ರಗತಿಯಲ್ಲಿವೆ. 11,063 ಮನೆಗಳ ಕಾಮಗಾರಿಗಳಿಗೆ ಮೊದಲನೇ ಕಂತಿನ ಹಣ ಬಿಡುಗಡೆಯಾಗಿರುವುದು ತಿಳಿದು ಬಂದಿದೆ.
ಚಿತ್ರದುರ್ಗ ಜಿಲ್ಲೆಗೆ 25,330 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿರಬೇಕಿತ್ತು. ಆದರೆ 17, 014 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 8,316 ಮನೆಗಳಿಗೆ ಮೊದಲನೇ ಕಂತಿನ ಅನುದಾನವಷ್ಟೇ ಬಿಡುಗಡೆಯಾಗಿದೆ. ಗದಗ್‌ಗೆ 17,134 ಮನೆಗಳ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು ಈ ಪೈಕಿ 9,759 ಮನೆಗಳ ಕಾಮಗಾರಿ ಪ್ರಗತಿಯಲ್ಲಿವೆ. 7,375 ಮನೆಗಳಿಗೆ ಮೊದಲನೇ ಕಂತಿನ ಅನುದಾನ ಬಿಡುಗಡೆಯಾಗಿದೆ. ಹಾವೇರಿಯಲ್ಲಿ 21,239 ಮನೆಗಳ ಪೈಕಿ 13,925 ಮನೆಗಳಷ್ಟೇ ಪ್ರಗತಿಯಲ್ಲಿವೆ. 7,314 ಮನೆಗಳ ನಿರ್ಮಾಣಕ್ಕೆ ಮೊದಲನೇ ಕಂತಿನ ಅನುದಾನ ಬಿಡುಗಡೆಯಾಗಿರುವುದು ಗೊತ್ತಾಗಿದೆ.
ಹಾಸನದಲ್ಲಿ 18,770 ಮನೆಗಳ ಪೈಕಿ 11,790 ಮನೆಗಳು ಪ್ರಗತಿಯಲ್ಲಿವೆ. 6,980 ಮನೆಗಳಿಗೆ ಮೊದಲನೇ ಕಂತಿನ ಅನುದಾನ ಬಿಡುಗಡೆಯಾಗಿದೆ. ಧಾರವಾಡದಲ್ಲಿ 11,605 ಮನೆಗಳು ಮಂಜೂರಾಗಿದ್ದವು. 5,121 ಮನೆಗಳಷ್ಟೇ ಪ್ರಗತಿಯಲ್ಲಿವೆ. 6,484 ಮನೆಗಳಿಗಷ್ಟೇ ಮೊದಲನೇ ಕಂತಿನ ಅನುದಾನ ಒದಗಿಸಿದೆ. ಉತ್ತರ ಕನ್ನಡದಲ್ಲಿ 18,864 ಮನೆಗಳು ಮಂಜೂರಾಗಿದ್ದು 12,524 ಮನೆಗಳು ಪ್ರಗತಿಯಲ್ಲಿವೆ. 6,340 ಮನೆಗಳಿಗೆ ಮೊದಲನೇ ಕಂತಿನ ಅನುದಾನ ನೀಡಿದೆ. ದಾವಣಗೆರೆ ಜಿಲ್ಲೆಗೆ 17,866 ಮನೆಗಳು ಮಂಜೂರಾಗಿದ್ದು 11,748 ಮನೆಗಳು ಪ್ರಗತಿಯಲ್ಲಿವೆ. 6,118 ಮನೆಗಳಿಗೆ ಮೊದಲನೇ ಕಂತಿನ ಅನುದಾನ ಬಿಡುಗಡೆಯಾಗಿದೆ. ಮಂಡ್ಯಕ್ಕೆ ಮಂಜೂರಾಗಿದ್ದ 14,105 ಮನೆಗಳ ಪೈಕಿ 8,601 ಮನೆಗಳು ಪ್ರಗತಿಯಲ್ಲಿವೆ. 5,504 ಮನೆಗಳಿಗೆ ಮೊದಲನೇ ಕಂತಿನ ಅನುದಾನವು ಬಿಡುಗಡೆಯಾಗಿರುವುದು ತಿಳಿದು ಬಂದಿದೆ.
ಕೋಲಾರಕ್ಕೆ 17,668 ಮನೆಗಳು ಮಂಜೂರಾಗಿದ್ದವು. 12,205 ಮನೆಗಳು ಪ್ರಗತಿಯಲ್ಲಿವೆ. 5,463 ಮನೆಗಳಿಗೆ ಮೊದಲನೇ ಕಂತಿನ ಅನುದಾನ ನೀಡಿದೆ. ರಾಮನಗರಕ್ಕೆ 15,003 ಮನೆಗಳು ಮಂಜೂರಾಗಿದ್ದು ಈ ಪೈಕಿ 9,946 ಮನೆಗಳು ಪ್ರಗತಿಯಲ್ಲಿವೆ. 5,057 ಮನೆಗಳಿಗೆ ಮೊದಲನೇ ಕಂತಿನ ಹಣವು ಬಿಡುಗಡೆಯಾಗಿದೆ. ಚಿಕ್ಕಬಳ್ಳಾಪುರದಲ್ಲಿ 16,427 ಮನೆಗಳಿಗೆ ಮಂಜೂರಾತಿ ನೀಡಿದ್ದು 11,751 ಮನೆಗಳು ಪ್ರಗತಿಯಲ್ಲಿವೆ. 4,676 ಮನೆಗಳಿಗೆ ಮೊದಲನೇ ಕಂತಿನ ಹಣಕಾಸು ನೀಡಲಾಗಿದೆ. ಬಳ್ಳಾರಿಗೆ 11,320 ಮನೆಗಳ ಪೈಕಿ 6,294 ಮನೆಗಳು ಪ್ರಗತಿಯಲ್ಲಿದ್ದು 4,336 ಮನೆಗಳ ಕಾಮಗಾರಿಗಳಿಗೆ ಇನ್ನಷ್ಟೇ ಚಾಲನೆ ಸಿಗಬೇಕಿದೆ.
ವಿಜಯನಗರ ಜಿಲ್ಲೆಗೆ 14,757 ಮನೆಗಳು ಮಂಜೂರಾಗಿದ್ದು 10,726 ಮನೆಗಳು ಪ್ರಗತಿಯಲ್ಲಿವೆ. 4,031 ಮನೆಗಳಿಗೆ ಮೊದಲನೇ ಕಂತಿನ ಅನುದಾನ ಬಿಡುಗಡೆಯಾಗಿದೆ. ಶಿವಮೊಗ್ಗಕ್ಕೆ 13,273 ಮನೆಗಳ ಮಂಜೂರಾಗಿವೆ. ಈ ಪೈಕಿ 9,294 ಮನೆಗಳು ಪ್ರಗತಿಯಲ್ಲಿದ್ದು 3,979 ಮನೆಗಳ ನಿರ್ಮಾಣಕ್ಕೆ ಮೊದಲನೇ ಕಂತಿನ ಅನುದಾನ ಒದಗಿಸಿದೆ. ಬೆಂಗಳೂರು ಗ್ರಾಮಾಂತರಕ್ಕೆ 6,571 ಮನೆಗಳು ಮಂಜೂರಾಗಿವೆ. 4,776 ಮನೆಗಳು ಪ್ರಗತಿಯಲ್ಲಿವೆ. 1,795 ಮನೆಗಳಿಗೆ ಮೊದಲನೇ ಕಂತಿನ ಅನುದಾನ ನೀಡಿದೆ.
ಚಿಕ್ಕಮಗಳೂರಿಗೆ 6,879 ಮನೆಗಳ ನಿರ್ಮಾಣಕ್ಕೆ ಮಂಜೂರಾಗಿದ್ದು ಈ ಪೈಕಿ 5,312 ಮನೆಗಳು ಪ್ರಗತಿಯಲ್ಲಿವೆ. 1,567 ಮನೆಗಳ ಕಾಮಗಾರಿಗಳು ಇನ್ನಷ್ಟೇ ನಡೆಯಬೇಕಿದೆ. ಕೊಡಗು ಜಿಲ್ಲೆಗೆ 3,675 ಮನೆಗಳ ಪೈಕಿ 2,747 ಮನೆಗಳು ಪ್ರಗತಿಯಲ್ಲಿವೆ. 928 ಮನೆಗಳಿಗೆ ಮೊದಲನೇ ಕಂತಿನ ಅನುದಾನ ಒದಗಿಸಿದೆ. ಉಡುಪಿಗೆ 4,445 ಮನೆಗಳು ಮಂಜೂರಾಗಿದ್ದು 3,746 ಮನೆಗಳು ಪ್ರಗತಿಯಲ್ಲಿದ್ದು 699 ಮನೆಗಳಿಗೆ ಮೊದಲನೇ ಕಂತಿನ ಹಣ ನೀಡಿದೆ. ದಕ್ಷಿಣ ಕನ್ನಡಕ್ಕೆ 4,218 ಮನೆಗಳನ್ನು ನೀಡಿದ್ದರೇ ಈ ಪೈಕಿ 3,889 ಮನೆಗಳು ಪ್ರಗತಿಯಲ್ಲಿವೆ. 329 ಮನೆಗಳಿಗೆ ಮೊದಲನೇ ಕಂತಿನ ಅನುದಾನ ನೀಡಿರುವುದು ಗೊತ್ತಾಗಿದೆ.
ಪ್ರಧಾನಮಂತ್ರಿ ಆವಾಸ್ ಮತ್ತು ವಿವಿಧ ವಸತಿ ಯೋಜನೆಗಳಡಿಯಲ್ಲಿ ನಗರ ಮತ್ತು ಗ್ರಾಮೀಣ ನಿವೇಶನ ಯೋಜನೆಯಡಿ ರಾಜ್ಯದ ಹಲವು ಜಿಲ್ಲೆಗಳು ನಿರೀಕ್ಷಿತ ಪ್ರಗತಿಯನ್ನು ಸಾಧಿಸಿಲ್ಲ. ವಿಶೇಷವಾಗಿ ಉಡುಪಿ ಮತ್ತು ಬೆಂಗಳೂರು ನಗರ ಜಿಲ್ಲೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಫಲಾನುಭವಿಗಳ ಆಯ್ಕೆಗೆ ನೀಡಿದ್ದ ಗುರಿಯನ್ನೇ ತಲುಪಿಲ್ಲ. ರಾಜ್ಯದ 31 ಜಿಲ್ಲೆಗಳಲ್ಲಿ ಈ ಯೋಜನೆಯಡಿ ಒಟ್ಟಾರೆ ಶೇ. 26ರಷ್ಟು ಮಾತ್ರ ಪ್ರಗತಿ ಸಾಧಿಸಿದೆ.
ಪ್ರಧಾನಮಂತ್ರಿ ಆವಾಸ್‌ಗೆ ಆಯ್ಕೆ; ನಿಗದಿತ ಗುರಿ ಮುಟ್ಟದ ವಸತಿ ಇಲಾಖೆ, ಕಳಪೆ ಸಾಧನೆ, ಶೇ.26ರಷ್ಟು ಪ್ರಗತಿ
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಸತಿ ಇಲಾಖೆಗೆ ಹಂಚಿಕೆಯಾಗಿದ್ದ ಒಟ್ಟು ಅನುದಾನದ ಪೈಕಿ 751 ಕೋಟಿ ರುಪಾಯಿಗಳನ್ನು ಬಳಕೆ ಮಾಡಿಕೊಂಡಿರಲಿಲ್ಲ.
ಸರ್ಕಾರಕ್ಕೆ 751 ಕೋಟಿ ವಾಪಾಸ್; ದುರ್ಬಲ ವರ್ಗಗಳಿಗೆ ಸೂರು ಕಲ್ಪಿಸಲು ವಿಫಲವಾಯಿತೇ?
ವಸತಿ ಇಲಾಖೆಯು ಕೊಳಗೇರಿ ಮಂಡಳಿ ಮೂಲಕ ಅನುಷ್ಠಾನಗೊಳಿಸಿದ್ದ ಯೋಜನೆಗಳ ಟೆಂಡರ್‍ನಲ್ಲೇ ಸಾಕಷ್ಟು ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು.
ವಸತಿ ಇಲಾಖೆಯ 6,516 ಕೋಟಿ ಟೆಂಡರ್‌ನಲ್ಲಿ ಅವ್ಯವಹಾರ?; ಭ್ರಷ್ಟರ ‘ಕೊಳಗೇರಿ’ ಮಂಡಳಿ
ವಸತಿ ಇಲಾಖೆಯ 6,516 ಕೋಟಿ ರು ಮೊತ್ತದ ಟೆಂಡರ್‍ನಲ್ಲಿ ನಡೆದಿದೆ ಎನ್ನಲಾಗಿದ್ದ ಅಕ್ರಮ ಅವ್ಯವಹಾರದ ಬಗ್ಗೆ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಪತ್ರವನ್ನು ಬರೆದಿದ್ದರು.
6,516 ಕೋಟಿ ಟೆಂಡರ್ ಅವ್ಯವಹಾರ ಪ್ರಕರಣದ ಬೆನ್ನು ಬಿದ್ದ ಸಿದ್ದರಾಮಯ್ಯ; ಮಾಹಿತಿ ಮುಚ್ಚಿಟ್ಟಿತೇ?
ವಸತಿ ಇಲಾಖೆಯು ಸರ್ಕಾರಿ ಜಾಗಗಳಲ್ಲಿ ವಸತಿ ಯೋಜನೆಯನ್ನು ಅನುಷ್ಠಾನಗೊಳಿಸಲು ಬೋಸ್ಟನ್ ಕಂಪನಿಯೊಂದಿಗೆ ಪತ್ರ ವ್ಯವಹಾರ ನಡೆಸಿತ್ತು.
ಸರ್ಕಾರಿ ಜಾಗಗಳಲ್ಲಿ ವಸತಿ ಯೋಜನೆ; ಬೋಸ್ಟನ್‌ನೊಂದಿಗೆ ಆಂತರಿಕ ಸಭೆ, ಖಾಸಗಿ ಬಿಲ್ಡರ್ಸ್, ಡೆವಲಪರ್ಸ್‌ಗಳಿಗೆ ಮಣೆ
ಬಿಜೆಪಿ ಅವಧಿಯಲ್ಲಿ ರಾಜೀವ್‌ಗಾಂಧಿ ವಸತಿ ನಿಗಮದ ಮೂಲಕ ಜಾರಿಗೊಂಡಿದ್ದ ವಸತಿ ಯೋಜನೆಗಳಲ್ಲೂ ವ್ಯಾಪಕವಾಗಿ ಅವ್ಯವಹಾರ ನಡೆದಿತ್ತು. ಈ ಕುರಿತು ವಾಸ್ತವಾಂಶದ ವರದಿಯನ್ನು ಕೇಳಿ ಈಗಿನ ಕಾಂಗ್ರೆಸ್ ಸರ್ಕಾರವು ಪತ್ರ ಬರೆದಿತ್ತು.
ಬಿಜೆಪಿ ಅವಧಿಯ ವಸತಿ ಯೋಜನೆಗಳಲ್ಲಿ ಬಹುಕೋಟಿ ಭ್ರಷ್ಟಾಚಾರ; ವಾಸ್ತವಾಂಶ ವರದಿ ಸಲ್ಲಿಕೆಗೆ ನಿರ್ದೇಶನ
ಅದೇ ರೀತಿ ವಿವಿಧ ವಸತಿ ಯೋಜನೆಗಳಡಿಯಲ್ಲಿ ನಗರ ವಿಭಾಗದಲ್ಲಿ ರಾಜ್ಯದ 31 ಜಿಲ್ಲೆಗಳಿಗೆ 42,538 ಮನೆಗಳು ಮಂಜೂರಾಗಿವೆ.
ಈ ಪೈಕಿ 37,303 ಮನೆಗಳು ಪ್ರಗತಿಯಲ್ಲಿವೆ. 5,235 ಮನೆಗಳ ಕಾಮಗಾರಿಗಳು ಇನ್ನಷ್ಟೇ ನಡೆಯಬೇಕಿದೆ.