ಸರ್ಕಾರಕ್ಕೆ 751 ಕೋಟಿ ವಾಪಾಸ್‌; ದುರ್ಬಲ ವರ್ಗಗಳಿಗೆ ಸೂರು ಕಲ್ಪಿಸಲು ವಿಫಲವಾಯಿತೇ?

ಬೆಂಗಳೂರು; ದುರ್ಬಲ ವರ್ಗದವರಿಗೆ ಕೈಗೆಟುಕುವ ರೀತಿಯಲ್ಲಿ ವಸತಿ ಒದಗಿಸುವ ಗುರಿ ಹೊಂದಿರುವ ಪ್ರಧಾನಮಂತ್ರಿ ಆವಾಸ್‌ ಯೋಜನೆ ನಗರ ಮತ್ತು ಗ್ರಾಮೀಣ ಯೋಜನೆಯೂ ಸೇರಿದಂತೆ ಹಲವು ಯೋಜನೆಗಳಿಗೆ ಮಂಜೂರಾಗಿದ್ದ ಒಟ್ಟು ಅನುದಾನದ ಪೈಕಿ 751.35 ಕೋಟಿ ರು.ಗಳನ್ನು ವಸತಿ ಇಲಾಖೆಯು ಉಳಿತಾಯದ ಹೆಸರಿನಲ್ಲಿ ಸರ್ಕಾರಕ್ಕೆ ಮರಳಿಸಿದೆ.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ರಹಿತ ದುರ್ಬಲ ವರ್ಗಗಳಿಗೆ ಸೂರು ಕಲ್ಪಿಸುವ ಯೋಜನೆ ಅನುಷ್ಠಾನಗೊಳಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರವು ವಿಫಲವಾಗಿದೆ ಎಂಬ ಬಲವಾದ ಆರೋಪ ಮತ್ತು ರಾಜ್ಯ ಸರ್ಕಾರದ ಬಸವ ವಸತಿ ಯೋಜನೆ ಸೇರಿದಂತೆ ಇನ್ನಿತರೆ ವಸತಿ ಯೋಜನೆಗಳಡಿಯಲ್ಲಿ ಮನೆಗಳನ್ನು ಪೂರ್ಣಗೊಳಿಸಲು 6,200 ಕೋಟಿ ರು.ಗಳನ್ನು ಅಗತ್ಯವಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಸತಿ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾಹಿತಿ ಒದಗಿಸಿದ ಬೆನ್ನಲ್ಲೇ 751 ಕೋಟಿ ರು.ಗಳನ್ನು ಆರ್ಥಿಕ ಇಲಾಖೆಗೆ ಹಿಂದಿರುಗಿಸಿರುವುದು ಮುನ್ನೆಲೆಗೆ ಬಂದಿದೆ.

ವಸತಿ ಇಲಾಖೆಯ 2020-21ನೇ ಸಾಲಿನ ಲೆಕ್ಕ ಶೀರ್ಷಿಕೆ (2216-80-198-6-02)ಯಲ್ಲಿ ಪ್ರಧಾನಮಂತ್ರಿ ಆವಾಸ್‌ ಗ್ರಾಮೀಣ ಉಪ ಲೆಕ್ಕ ಶೀರ್ಷಿಕೆ (300) ಯಡಿಯಲ್ಲಿ 50000.00 ಲಕಷ ರು., ಲೆಕ್ಕ ಶೀರ್ಷಿಕೆ (2216-02-800-0-04) ಪ್ರಧಾನ ಮಂತ್ರಿ ಆವಾಸ್‌ ಯೋಜನೆ ನಗರ ಉಪ ಲೆಕ್ಕ ಶೀರ್ಷಿಕೆ (032) ಬಂಡವಾಳ ಆಸ್ತಿ ಸೃಜನೆಗೆ ಅವಕಾಶಗಳ ಅಡಿಯಲ್ಲಿ 0.46 ಲಕ್ಷ, ಪರಿಶಿಷ್ಟ ಜಾತಿ ಉಪ ಯೋಜನೆ ಅಡಿ 1134.40 ಲಕ್ಷ, ಮತ್ತು ಗಿರಿಜನ ಉಪ ಯೋಜನೆಯಡಿ 13536.00 ಲಕ್ಷ, ಆಶ್ರಯ ಸಾಲ ಮತ್ತು ಬಡ್ಡಿ ಪಾವತಿ, ಸಾಲ ಮೇಲುಸ್ತುವಾರಿ ಅಡಿ 174.25 ಲಕ್ಷ, ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮ 28.14 ಲಕ್ಷ, ಸಹಾಯನುದಾನ 56.28 ಲಕ್ಷ ಸೇರಿದಂತೆ ಒಟ್ಟು 751.35 ಕೋಟಿ ರು.ಗಳನ್ನು ಹಿಂದಿರುಗಿಸಲು ಆರ್ಥಿಕ ಇಲಾಖೆಯು ಒಪ್ಪಿರುವುದು ದಾಖಲೆಯಿಂದ ತಿಳಿದು ಬಂದಿದೆ.

2015ರ ಜೂನ್‌ 25ರಂದು ಆರಂಭಗೊಂಡಿರುವ ಪ್ರಧಾನಮಂತ್ರಿ ಆವಾಸ್‌ ಯೋಜನೆ ಪ್ರಕಾರ 2022ರ ಮಾರ್ಚ್‌ ಅಂತ್ಯಕ್ಕೆ ನಗರಗಳಲ್ಲಿ ವಾಸಿಸುವ ಬಡವರಿಗೆ 2 ಕೋಟಿ ಮನೆಗಳನ್ನು ನಿರ್ಮಿಸಬೇಕು. ಇದನ್ನು ರಿಯಲ್‌ ಎಸ್ಟೇಟ್‌ ಬಿಲ್ಡರ್‌ಗಳೊಂದಿಗೆ ಆಯ್ದ ನಗರಗಳಲ್ಲಿ ಪರಿಸರ ಸ್ನೇಹಿ ಪದ್ಧತಿಗಳನ್ನು ಬಳಸಿಕೊಂಡು ಪಕ್ಕಾ ಮನೆಗಳನ್ನು ಕಟ್ಟುವ ಉದ್ಧೇಶ ಹೊಂದಿದೆ.

ರಾಜ್ಯದಲ್ಲಿ ಈ ಯೋಜನೆಯಡಿ 6,51,203 ಮನೆಗಳು ಮಂಜೂರಾಗಿವೆ. ಆದರೆ ಈವರೆವಿಗೆ ಶೇ.25ರಷ್ಟು ಮಾತ್ರ ಪ್ರಗತಿ ಕಂಡಿದೆ ಎಂದು ತಿಳಿದು ಬಂದಿದೆ. ಬಿಡುಗಡೆಯಾಗಿದ್ದ ಅನುದಾನವನ್ನು ಪೂರ್ಣ ಪ್ರಮಾಣವಾಗಿ ಬಳಸಿಕೊಳ್ಳದ ವಸತಿ ಇಲಾಖೆಯು 500 ಕೋಟಿಯಷ್ಟು ಹಣವನ್ನು ಉಳಿತಾಯದ ಹೆಸರಿನಲ್ಲಿ ಸರ್ಕಾರಕ್ಕೆ ಹಿಂದಿರುಗಿಸಿರುವುದು ಸರ್ಕಾರದ ಇಚ್ಛಾಶಕ್ತಿಯ ಕೊರತೆಗೆ ಕೈಗನ್ನಡಿ ಹಿಡಿದಂತಾಗಿದೆ.

ಇತ್ತೀಚೆಗಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ವಸತಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿತ್ತು. ವಿವಿಧ ವಸತಿ ಯೋಜನೆಗಳಡಿಯಲ್ಲಿ ಮುಂದಿನ ಎರಡು ವರ್ಷಗಳಲ್ಲಿ 9 ಲಕ್ಷ ಮನೆಗಳನ್ನು ನಿರ್ಮಿಸಲು ನಿರ್ಧರಿಸಿತ್ತು. ಈ ಪೈಕಿ ರಾಜ್ಯದ ವಸತಿ ಯೋಜನೆಗಳಡಿ ನಿರ್ಮಿಸುವ 5 ಲಕ್ಷ ಮನೆ ಮತ್ತು ಕೇಂದ್ರ ಸರ್ಕಾರದ ಯೋಜನೆಗಳಡಿ 4 ಲಕ್ಷ ಮನೆಗಳೂ ಸೇರಿವೆ ಎಂದು ಸಭೆಯಲ್ಲಿ ಮಾಹಿತಿ ಒದಗಿಸಿತ್ತು.

ಮನೆ ನಿರ್ಮಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ 1.75 ಲಕ್ಷ ಹಾಗೂ ಇತರರಿಗೆ 1.20 ಲಕ್ಷ ಸಹಾಯ ಧನ ನೀಡುವುದಲ್ಲದೆ ಕೇಂದ್ರದ ವಸತಿ ಯೋಜನೆಗಳಡಿ ಮಂಜೂರಾಗಿರುವ ಮನೆಗಳ ಫಲಾನುಭವಿಗಳಿಗೆ ಶೇ.60 ಅಂದರೆ 72,000 ಮತ್ತು ರಾಜ್ಯದ ಪಾಲು ಶೇ.40 ಅಂದರೆ 48,000 ರು. ಸಹಾಯಧನ ಲಭ್ಯವಿದೆ ಎಂದು ಸಚಿವ ಸೋಮಣ್ಣ ಅವರು ಬೀಗಿದ್ದರು.

ಬಸವ ವಸತಿ, ಡಾ ಬಿ ಆರ್‌ ಅಂಬೇಡ್ಕರ್‌ ನಿವಾಸ್‌, ದೇವರಾಜು ಅರಸು ಮತ್ತು ವಾಜಪೇಯಿ ನಗರ ವಸತಿ ಯೋಜನೆಗಳಡಿಯಲ್ಲಿ ಕೈಗೆತ್ತಿಕೊಂಡಿರುವ ಮನೆಗಳನ್ನು ಪೂರ್ಣಗೊಳಿಸಲು 6,200 ಕೋಟಿ ರು. ಅಗತ್ಯವಿದೆ ಎಂದು ಗೊತ್ತಾಗಿದೆ. ಅಲ್ಲದೆ ಮುಖ್ಯಮಂತ್ರಿಗಳ 1 ಲಕ್ಷ ಬೆಂಗಳೂರು ಬಹುಮಹಡಿ ಯೋಜನೆಯಡಿ ಆಗಸ್ಟ್‌ 15ರಂದು 5 ಸಾವಿರ ಮನೆಗಳನ್ನು ಹಂಚಿಕೆ ಮಾಡಲು ಸಭೆಯು ತೀರ್ಮಾನಿಸಿದೆ.

2013-14ನೇ ಸಾಲಿನಿನಿಂದಲೂ ಆಡಳಿತಾತ್ಮಕ ವೆಚ್ಚಕ್ಕಾಗಿ ಪ್ರತಿಶತ 4ರಷ್ಟು ಅನುದಾನವನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗಿತ್ತು. ಆದರೆ ಈ ಅನುದಾನವನ್ನು ಖರ್ಚು ಮಾಡುವ ಸಂಬಂಧವಾಗಿ ನಿಗಮದಿಂದಲೇ ಕ್ರಿಯಾ ಯೋಜನೆಯನ್ನು ತಯಾರಿಸಿ ಈಗಾಗಲೇ ಹಣ ನೀಡಲಾಗಿದ್ದರೂ ಬಹಳಷ್ಟು ಜಿಲ್ಲೆಗಳು ಅನುದಾನವನ್ನು ಖರ್ಚು ಮಾಡಿರಲಿಲ್ಲ.

2016-17ನೇ ಸಾಲಿನ 2ನೇ ಕಂತಿನ ಅನುದಾನ ಮತ್ತು 2017-18ನೇ ಸಾಲಿನ ಆಡಳಿತಾತ್ಮಕ ವೆಚ್ಚದ ಅನುದಾನವನ್ನು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿರಲಿಲ್ಲ. ಆದರೂ ಸುಮಾರು 76.85 ಕೋಟಿಯಷ್ಟು ಅನುದಾನವು ಖರ್ಚಾಗದೇ ಉಳಿದಿತ್ತು.

the fil favicon

SUPPORT THE FILE

Latest News

Related Posts