ಬೆಂಗಳೂರು; ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕಡುಬಡವರಿಗಾಗಿ ನಿರ್ಮಿಸಲಿರುವ 97,134 ಮನೆಗಳ ನಿರ್ಮಾಣ ಕಾಮಗಾರಿಗೆ 6,516.17 ಕೋಟಿ ಮೊತ್ತದ ಟೆಂಡರ್‌ನಲ್ಲಿ ಅಕ್ರಮಗಳು ನಡೆದಿವೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿರುವ ಬೆನ್ನಲ್ಲೇ ಟೆಂಡರ್ ಪ್ರಕ್ರಿಯೆಗಳ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೊಳಗೇರಿ ಮಂಡಳಿ ಆಯುಕ್ತರಿಗೆ ಮಾಹಿತಿ ಕೇಳಿ ಪತ್ರ ಬರೆದಿದ್ದಾರೆ.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ 2020ರ ಜುಲೈ 24ರಂದು ಕರೆದಿದ್ದ ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ತಾಂತ್ರಿಕ ಮಂಜೂರಾತಿ, ಕೇಂದ್ರದ ಮಂಜೂರಾತಿ, ರಾಜ್ಯಮಟ್ಟದ ಮಂಜೂರಾತಿ, ಮೇಲ್ವಿಚಾರಣೆ ಸಮಿತಿ ಸಭೆಯಲ್ಲಿ ದೊರೆತಿರುವ ಅನುಮೋದನೆ ಸೇರಿದಂತೆ ಇಡೀ ಯೋಜನೆ ಕುರಿತು ಸಮಗ್ರ ವಿವರಗಳನ್ನು ಒದಗಿಸಿ ಎಂದು 2020ರ ಸೆ.10ರಂದು ಬರೆದಿರುವ ಪತ್ರಕ್ಕೆ ಕೊಳಗೇರಿ ಮಂಡಳಿ ಆಯುಕ್ತರು ಈವರೆವಿಗೂ ಯಾವ ಮಾಹಿತಿಯನ್ನೂ ಒದಗಿಸಿಲ್ಲ ಎಂದು ತಿಳಿದು ಬಂದಿದೆ. ಪತ್ರದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
‘129 ಯೋಜನೆಗಳಲ್ಲಿ ಬರುವ 97,134 ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಿಎಸ್ಎಂಸಿ, ಎಸ್‌ಎಲ್‌ಎಸ್‌ಎಂಸಿ ಸಭೆಗಳಲ್ಲಿ ಅನುಮೋದಿಸಿದಂತೆ ಯಥಾವತ್ತಾಗಿ ಅನುಷ್ಠಾನಗೊಳಿಸದೇ 2020ರ ಜುಲೈ 22ರಂದು ಹೊರಡಿಸಿದ್ದ ಆದೇಶವನ್ನು ಮಾರ್ಪಡಿಸಿ ಹೊಸ ಸ್ಥಳದಲ್ಲಿ ನಿರ್ಮಿಸಲು ಆದೇಶಿಸಲಾಗಿದೆ. ಈ ಕುರಿತು ಪ್ರಸ್ತಾಪಿಸಿರುವ ಯೋಜನೆಗಳ ವಿಸ್ತೃತ ಯೋಜನಾ ವರದಿಗಳನ್ನು ಒದಗಿಸಬೇಕು,’ ಎಂದು ಆಯುಕ್ತರಿಗೆ ನಿರ್ದೇಶಿಸಿರುವುದು ಪತ್ರದಿಂದ ಗೊತ್ತಾಗಿದೆ.
ಹಾಗೆಯೇ ಪ್ರತಿ ಯೋಜನೆ, ಕಾಮಗಾರಿಗೆ ಟೆಂಡರ್‌ಗಿಟ್ಟ ಮೊತ್ತದ ಲೆಕ್ಕಾಚಾರ, ಆರ್ಥಿಕ ಬಿಡ್‌ನಲ್ಲಿ ಸಫಲರಾದ ಬಿಡ್‌ದಾರರ ವಿವರಗಳನ್ನೂ ಒದಗಿಸಲು ಪತ್ರದಲ್ಲಿ ಸೂಚಿಸಿರುವುದು ತಿಳಿದು ಬಂದಿದೆ. ಈ ಕುರಿತು ‘ದಿ ಫೈಲ್’ 2020ರ ಅಕ್ಟೋಬರ್ 1ರಂದು ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.
ವಸತಿ ಇಲಾಖೆಯ 6,516 ಕೋಟಿ ಟೆಂಡರ್‌ನಲ್ಲಿ ಅವ್ಯವಹಾರ?; ಭ್ರಷ್ಟರ ‘ಕೊಳಗೇರಿ’ ಮಂಡಳಿ
ತರಾತುರಿಯ ಅನುಮೋದನೆ
ಇ-ಪ್ರೊಕ್ಯೂರ್‌ಮೆಂಟ್ ನಿಯಮಗಳನ್ನು ಉಲ್ಲಂಘಿಸಿ ಟೆಂಡರ್‌ಗೆ ಅನುಮೋದನೆ ಪಡೆದುಕೊಳ್ಳಲು ಎಸ್‌ಎಲ್‌ಎಂಸಿ ಸಭೆಯ ಮುಂದೆ ತರಾತುರಿಯಲ್ಲಿ 2020ರ ಸೆಪ್ಟಂಬರ್ 16ರಂದು ಮಂಡಿಸಿತ್ತು. ಕೊಳಗೇರಿ ಮಂಡಳಿಯಲ್ಲಿ ಈ ಹಿಂದೆ ಕೆಲಸ ನಿರ್ವಹಿಸಿದ್ದ ಗುತ್ತಿಗೆದಾರರೊಂದಿಗೆ ಮಂಡಳಿಯ ಅಧಿಕಾರಿಗಳ ಮಧ್ಯೆ ಶೇ. 08ರಷ್ಟು ಕಮಿಷನ್ ವ್ಯವಹಾರ ನಡೆದಿದೆ ಎಂಬ ಬಲವಾದ ಆರೋಪ ಕೇಳಿ ಬಂದಿದ್ದವು.
ಟೆಂಡರ್ ಪ್ರೀಮಿಯಂ ಮೊತ್ತ ಕಡಿಮೆಯಾಯಿತೇ?
ಅಲ್ಲದೆ ಟೆಂಡರ್ ಪ್ರಕ್ರಿಯೆಗಳನ್ನು ಅಲ್ಪಾವಧಿಯಲ್ಲಿ ಪರಿಶೀಲನೆ ನಡೆಸಲು ಸಾಧ್ಯವಿಲ್ಲ ಎಂದು ಎಸ್‌ಎಲ್‌ಎನ್‌ಎ 2020ರ ಸೆ.10ರಂದು ನಡೆಸಿದ್ದ ಪರಿಶೀಲನೆ ವೇಳೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿತ್ತು. ಎಲ್ 1 ಬಿಡ್‌ದಾರರು ನಮೂದಿಸಿದ್ದ ಟೆಂಡರ್ ಪ್ರೀಮಿಯಂ ಮೊತ್ತವನ್ನು ಕಡಿಮೆ ಮಾಡಲು ಸಂಧಾನ ನಡೆಸಬೇಕು ಎಂದು ಸೂಚಿಸಿತ್ತು. ಹಾಗೆಯೇ ವಾಸ್ತವ ಟೆಂಡರ್ ಪ್ರೀಮಿಯಂ ಮೊತ್ತ ಅಥವಾ ಶೇ. 6ರಷ್ಟು ಟೆಂಡರ್ ಪ್ರೀಮಿಯಂ ಮೊತ್ತವನ್ನು ನಮೂದಿಸುವ ಬಿಡ್‌ದಾರರಿಗೆ ಟೆಂಡರ್ ನೀಡಬೇಕು ಎಂದು ಸಮಿತಿ ನೀಡಿದ್ದ ನಿರ್ದೇಶನ ಪಾಲನೆಯಾಗಿಲ್ಲ ಎಂಬ ಆರೋಪಗಳಿವೆ.
ಮರು ಟೆಂಡರ್ ಕರೆಯಲಿಲ್ಲವೇಕೆ?
ಬೆಂಗಳೂರು ಮತ್ತು ಧಾರವಾಡ ವೃತ್ತದ ವ್ಯಾಪ್ತಿಯಲ್ಲಿರುವ ಕೆ ಆರ್ ನಗರ ಮತ್ತು ಕುಷ್ಟಗಿಯಲ್ಲಿ ಮನೆಗಳ ನಿರ್ಮಾಣ ಕಾಮಗಾರಿಗೆ ಕೇವಲ ಒಂದು ಕಂಪನಿ ಮಾತ್ರ ಬಿಡ್‌ನಲ್ಲಿ ಭಾಗವಹಿಸಿದ್ದ ಕಾರಣ ಮರು ಟೆಂಡರ್ ಕರೆಬೇಕು ಎಂದು ಎಸ್‌ಎಲ್‌ಎನ್‌ಎ ಸಭೆಯಲ್ಲಿ ಮಂಡಳಿಗೆ ಸೂಚಿಸಿತ್ತು. ಆದರೆ ಮರು ಟೆಂಡರ್ ಕರೆಯಲು ಮುಂದಾಗಿಲ್ಲ.
ಹಾಗೆಯೇ ಎಲ್ 1 ಬಿಡ್‌ದಾರರು 6 ಪ್ಯಾಕೇಜ್‌ಗಳಿಗೂ ಹೆಚ್ಚು ಮೊತ್ತವನ್ನು ಬಿಡ್‌ನಲ್ಲಿ ನಮೂದಿಸಿದ್ದಾರೆ. ಇದೇ ಎಲ್ 1 ಬಿಡ್‌ದಾರರಿಗೆ 83,119 ಮನೆ ನಿರ್ಮಾಣಕ್ಕೆ ಟೆಂಡರ್ ನೀಡಲಾಗಿದೆ. ಆದರೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ಇದನ್ನು ಮರು ಪರಿಶೀಲನೆಗೆ ಒಳಪಡಿಸಿಲ್ಲ. ಬಿಡ್‌ದಾರರ ಸಾಮರ್ಥ್ಯವನ್ನು ಪ್ರಕರಣವಾರು ಮರು ಪರಿಶೀಲಿಸದಿರುವುದು ಅಕ್ರಮ ನಡೆದಿದೆ ಎಂಬ ಸಂಶಯಗಳನ್ನು ಬಲಪಡಿಸಿವೆ.
ಫಲಾನುಭವಿಗಳ ಪಟ್ಟಿ ಒದಗಿಸಿಲ್ಲ
ಇನ್ನು ಈ ಯೋಜನೆಯಡಿ ಆಯ್ಕೆಯಾದ ಫಲಾನುಭವಿದಾರರೇ ಮನೆಗಳನ್ನು ನಿರ್ಮಿಸಿಕೊಳ್ಳುತ್ತಾರೆ ಎಂದು ಹೇಳಲಾಗಿದ್ದರೂ ಫಲಾನುಭವಿಗಳ ಪಟ್ಟಿ, ಅಂದಾಜು ವೆಚ್ಚ ವೈಯಕ್ತಿಕ ಮನೆ ನಕ್ಷೆಯನ್ನೂ ಒದಗಿಸಿಲ್ಲ ಎಂಬ ಅಂಶವಬ್ಬಯ ಎಸ್‌ಎಲ್‌ಎನ್‌ಎ ಸಭೆ ಹೊರಗೆಡವಿತ್ತು. 30 ದಿನಗಳ ಅವಧಿಗೆ ಅಲ್ಪಾವಧಿ ಟೆಂಡರ್ ಕರೆಯಬೇಕಿತ್ತು ಎಂದು ಎಸ್‌ಎಲ್‌ಎನ್‌ಎ ಅಭಿಪ್ರಾಯಪಟ್ಟಿತ್ತು. ಆದರೆ ಮಂಡಳಿ 11 ಮತ್ತು 25 ದಿನಗಳ ಅವಧಿಗೆ ಅಲ್ಪಾವಧಿ ಟೆಂಡರ್ ಕರೆದಿತ್ತು. ಈ ಕುರಿತು ಎಸ್‌ಎಲ್‌ಎನ್‌ಎ ಸ್ಪಷ್ಟನೆಯನ್ನೂ ಕೇಳಿತ್ತು.
ಬೆಂಗಳೂರಿನ ಕೆ ಆರ್ ಪುರಂ (500 ಮನೆಗಳು), ಗೋವಿಂದರಾಜನಗರ (500) ಚಿಟಗುಪ್ಪ (545), ಔರಾದ್ (350), ಬೀದರ್ (750), ಹುಮನಾಬಾದ್ (500), ಚಿಂಚೋಳಿ (1263), ಸೇಡಂ (467), ಆಲಂದ (1314), ಶಹಬಾದ್ ( 1473), ಕಲ್ಬುರ್ಗಿ (1447) ಗುರುಮಿಠಕಲ್ ( 200) ಶೋರಾಪುರ್ (300) ಸಿಂಧನೂರು ಪಟ್ಟಣ (200) ರಾಯಚೂರು (1400) ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ, ತಾಲೂಕು ಪ್ರದೇಶಗಳಲ್ಲಿರುವ ಕೊಳಗೇರಿ ಪ್ರದೇಶದಲ್ಲಿ ಒಟ್ಟು 97,134 ಮನೆಗಳ ನಿರ್ಮಾಣಕ್ಕೆ ಕೊಳಗೇರಿ ಪ್ರದೇಶ ಅಭಿವೃದ್ಧಿ ಮಂಡಳಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.
ಕೇಂದ್ರ ಸರ್ಕಾರ 1457.01 ಕೋಟಿ, ರಾಜ್ಯ ಸರ್ಕಾರ 1903.34 ಕೋಟಿ, ಇತರೆ 3,155.92 ಕೋಟಿ ರು. ಸೇರಿದಂತೆ ಒಟ್ಟು 6,516.27 ಕೋಟಿಯ ಯೋಜನಾ ವೆಚ್ಚಕ್ಕೆ ಅನುಮೋದನೆ ಪಡೆದುಕೊಳ್ಳಲು ಮುಂದಾಗಿದೆ ಎಂದು ಗೊತ್ತಾಗಿದೆ. ಇದರಲ್ಲಿ ಈಗಾಗಲೇ ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆಗೊಂಡು ಆಡಳಿತಾತ್ಮಕ ಅನುಮೋದನೆ ನಿರೀಕ್ಷೆಯಲ್ಲಿರುವ 97,134 ಮನೆಗಳ ಪೈಕಿ 31,353 ಮನೆಗಳ ಸ್ಥಳಗಳನ್ನು ಅವಶ್ಯವಿರುವ ಬೇರೆ ನಗರ/ಪಟ್ಟಣಗಳ ಸ್ಥಳಗಳಿಗೆ ಬದಲಾಯಿಸಿ ಅನುಮೋದಿತ ಯೋಜನಾ ಮೊತ್ತದಲ್ಲಿ ಯಾವುದೇ ಬದಲಾವಣೆಯಾಗದಂತೆ ಮನೆಗಳ ನಿರ್ಮಾಣ ಮಾಡುವ ಪರಿಷ್ಕೃತ ಪ್ರಸ್ತಾವನೆಗೆ ಘಟನೋತ್ತರ ಅನುಮೋದನೆ ಪಡೆಯಲು ಸೆ.16ರಂದು ನಡೆದ ಸಭೆ ಮುಂದೆ ಮಂಡಿಲಾಗಿತ್ತು ಎಂಬುದು ದಾಖಲೆಯಿಂದ ತಿಳಿದು ಬಂದಿದೆ.