ತಿದ್ದುಪಡಿ ವಿಧೇಯಕ; ಸಂವಿಧಾನದ 320ನೇ ವಿಧಿಗೆ ವಿರುದ್ಧ, ಕೆಪಿಎಸ್ಸಿ ಸ್ವಾಯತ್ತೆ ಮೊಟಕು, ರಾಜ್ಯಪಾಲರ ಆತಂಕ

ಬೆಂಗಳೂರು; ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯವಿಧಾನಕ್ಕೆ ಸಂಬಂಧಿಸಿರುವ 1959ರ ವಿಧೇಯಕಕ್ಕೆ ತರಲು ಹೊರಟಿರುವ ತಿದ್ದುಪಡಿಯು ಸಂವಿಧಾನದ 320ನೇ ವಿಧಿಗೆ ವಿರುದ್ಧವಾಗಿದೆ ಮತ್ತು ಕೆಪಿಎಸ್ಸಿಯ ಸ್ವಾಯತ್ತೆಯನ್ನು ಮೊಟಕುಗೊಳಿಸುತ್ತದೆ ಎಂದು ರಾಜ್ಯಪಾಲರು ಅಭಿಪ್ರಾಯಿಸಿರುವುದು ಇದೀಗ ಬಹಿರಂಗವಾಗಿದೆ.

 

ವಿಶೇಷವೆಂದರೇ ಇದೇ ವಿಧೇಯಕಕ್ಕೆ ಹಿಂದಿನ ಬಿಜೆಪಿ ಸರ್ಕಾರವು ತಿದ್ದುಪಡಿ ತರಲು ಹೊರಟಿತ್ತು. 2023ರ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಇದ್ದ ಕಾರಣಕ್ಕೆ ಈ ತಿದ್ದುಪಡಿ ವಿಧೇಯಕವನ್ನು ಈಗಿನ ಕಾಂಗ್ರೆಸ್‌ ಸರ್ಕಾರವು ಮುಂದುವರೆಸಿದೆ.

 

ಮತ್ತೊಂದು ವಿಶೇಷ ಸಂಗತಿ ಎಂದರೇ ಈ ತಿದ್ದುಪಡಿ ವಿಧೇಯಕಕ್ಕೆ ಸಂಬಂಧಿಸಿದಂತೆ ಕೆಪಿಎಸ್ಸಿಯಿಂದ ಯಾವುದೇ ಅಭಿಪ್ರಾಯವನ್ನೂ ಪಡೆದಿರಲಿಲ್ಲ. ಬದಲಿಗೆ ಸರ್ಕಾರವೇ ಗೌಪ್ಯವಾಗಿಟ್ಟಿತ್ತು. ಹೀಗಾಗಿ ಇಡೀ ತಿದ್ದುಪಡಿ ವಿಧೇಯಕದ ಬಗ್ಗೆ ಹಲವು ಅನುಮಾನಗಳನ್ನು ರಾಜ್ಯಪಾಲರು ವ್ಯಕ್ತಪಡಿಸಿರುವುದು ಗೊತ್ತಾಗಿದೆ.

 

ತಿದ್ದುಪಡಿ ವಿಧೇಯಕಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನೀಡಿದ್ದ ಅಭಿಪ್ರಾಯದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ರಾಜ್ಯಪಾಲರ ಆತಂಕವೇನು?

 

ಈ ತಿದ್ದುಪಡಿ ವಿಧೇಯಕವನ್ನು ಗಮನಿಸಿದಂತೆ, ಸೆಕ್ಷನ್ 18 ರಾಜ್ಯ ಸರ್ಕಾರವು ತನ್ನ ವ್ಯವಹಾರ ಮತ್ತು ಹೆಚ್ಚುವರಿ ಕಾರ್ಯಗಳ ನಡವಳಿಕೆಗಾಗಿ ನಿಯಮಗಳನ್ನು ರೂಪಿಸುವ ಉದ್ದೇಶಕ್ಕಾಗಿ ಆಯೋಗದೊಂದಿಗೆ ಸಮಾಲೋಚಿಸಲು ಅವಕಾಶವನ್ನು ಒದಗಿಸುತ್ತದೆ ಎಂದು ತಿಳಿದು ಬಂದಿದೆ.

 

 

ಲೋಕಸೇವಾ ಸೇವಾ ಆಯೋಗವು ವಿಧಿ 315 ರ ಅಡಿಯಲ್ಲಿ ರಚಿಸಲಾದ ಸಾಂವಿಧಾನಿಕ ಪ್ರಾಧಿಕಾರವಾಗಿದೆ. ಲೋಕ ಸೇವಾ ಆಯೋಗದ ಕಾರ್ಯಗಳನ್ನು ಭಾರತದ ಸಂವಿಧಾನದ ವಿಧಿ 320 ರ ಅಡಿಯಲ್ಲಿ ನಿಯೋಜಿಸಲಾಗಿದೆ. ಇದರಲ್ಲಿ ನಾಗರಿಕ ಸೇವಕರ ನೇಮಕಾತಿ ವಿಧಾನ ಮತ್ತು ಇತರ ಸೇವಾ ಸಂಬಂಧಿತ ವಿಷಯಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ಆಯೋಗದೊಂದಿಗೆ ಸಮಾಲೋಚಿಸಲು ಅವಕಾಶಗಳನ್ನು ಒದಗಿಸಿದೆ.

 

ಈ ನಿಬಂಧನೆಯನ್ನು ಬಿಟ್ಟುಬಿಟ್ಟರೆ, ರಾಜ್ಯ ಸರ್ಕಾರವು ಆಯೋಗದೊಂದಿಗೆ ಯಾವುದೇ ರೀತಿಯಲ್ಲಿ ಸಮಾಲೋಚಿಸದೆ ಈ ವಿಷಯದಲ್ಲಿ ನಿಯಮಗಳನ್ನು ರಚಿಸುವ ಅಧಿಕಾರವನ್ನು ಹೊಂದಿರುತ್ತದೆ.
‘ಪ್ರಸ್ತಾವಿತ ತಿದ್ದುಪಡಿಯು 320 ನೇ ವಿಧಿಗೆ ವಿರುದ್ಧವಾಗಿದೆ ಮತ್ತು ಅದು ಆಯೋಗದ ಸ್ವಾಯತ್ತತೆಯನ್ನು ಮೊಟಕುಗೊಳಿಸುತ್ತದೆ ಎಂಬ ಆತಂಕ ನನಗಿದೆ,’ ಎಂದು ರಾಜ್ಯಪಾಲ ಥಾವರ್ ಚಂದ್‌ ಗೆಹ್ಲೋಟ್‌ ಅವರು ಅಭಿಪ್ರಾಯಿಸಿರುವುದು ಗೊತ್ತಾಗಿದೆ.

 

 

ಹೀಗಾಗಿ ಪ್ರಸ್ತಾವಿತ ತಿದ್ದುಪಡಿಯು ಸಂವಿಧಾನದ 320 ನೇ ವಿಧಿಗೆ ವಿರುದ್ಧವಾಗಿದೆಯೇ ಎಂದು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಆದ್ದರಿಂದ ಈ ಬಗ್ಗೆ ಸ್ಪಷ್ಟೀಕರಣ ಮತ್ತು ಕಾನೂನು ಅಭಿಪ್ರಾಯದೊಂದಿಗೆ ಕಡತವನ್ನು ಮರು ಸಲ್ಲಿಸಬೇಕು ಎಂದು ರಾಜ್ಯಪಾಲರು ನಿರ್ದೇಶನ ನೀಡಿರುವುದು ತಿಳಿದು ಬಂದಿದೆ.

 

ಕರ್ನಾಟಕ ಲೋಕಸೇವಾ ಆಯೋಗ (conduct of business and additional functions 1959- funcitions rules 1973) ನಿಯಮಗಳಿಗೆ ತಿದ್ದುಪಡಿ ಮಾಡಲು ಹಿಂದಿನ ಬಿಜೆಪಿ ಸರ್ಕಾರವು ತೀರ್ಮಾನಿಸಿತ್ತು. ಈ ಸಂಬಂಧಿತ ಕಡತವನ್ನು 2022ರ ಆಗಸ್ಟ್‌ 19ರಂದು ಸಿಬ್ಬಂದಿ ಮತ್ತು ಅಡಳಿತ ಸುಧಾರಣೆ ಇಲಾಖೆಯು (ಕಡತ ಸಂಖ್ಯೆ; DPAR/181/SLA/2022- COMPUTER NUMBER 857064) ತೆರೆದಿತ್ತು.

 

ಈ ತಿದ್ದುಪಡಿಗೆ ಸಚಿವ ಸಂಪುಟದ ಅನುಮೋದನೆ ಅಗತ್ಯವಿತ್ತು. ಹೀಗಾಗಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಪರಿಶೀಲನಾ ಸಮಿತಿ ಮುಂದೆ ಈ ವಿಧೇಯಕವನ್ನು ಮಂಡಿಸಿತ್ತು. ಆದರೆ ಚುನಾವಣೆ ನೀತಿ ಸಂಹಿತೆ ಘೋಷಣೆಯಾದ ಕಾರಣಕ್ಕೆ ಈ ತಿದ್ದುಪಡಿ ವಿಧೇಯಕವು ನೆನೆಗುದಿಗೆ ಬಿದ್ದಿತ್ತು. ಕಡತವು ಸಂಬಂಧಿಸಿದ ಶಾಖೆಗೆ ಹಿಂದಿರುಗಿತ್ತು.

 

ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ಕೆಲವೇ ಕೆಲವು ತಿಂಗಳಲ್ಲಿ ಈ ತಿದ್ದುಪಡಿ ವಿಧೇಯಕವು ಮತ್ತೆ ಚಾಲ್ತಿಗೆ ಬಂದಿತು. ಇದೇ ಕಡತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮೋದನೆಗೆ ಮರು ಮಂಡಿಸಿತ್ತು ಎಂಬುದು ತಿಳಿದು ಬಂದಿದೆ.

 

ಈ ಪ್ರಸ್ತಾವನೆ ಉದ್ಭವವಾಗಿದ್ದಾದರೂ ಎಲ್ಲಿಂದ?

 

ಈ ತಿದ್ದುಪಡಿ ವಿಧೇಯಕವು ಕರ್ನಾಟಕ ಲೋಕಸೇವಾ ಆಯೋಗಕ್ಕೆ ನೇರವಾಗಿ ಸಂಬಂಧಿಸಿದೆ. ಆದರೆ ಸರ್ಕಾರವು ಈ ಬಗ್ಗೆ ಕೆಪಿಎಸ್‌ಸಿಯಿಂದ ಯಾವುದೇ ಅಭಿಪ್ರಾಯ ಪಡೆದಿರಲಿಲ್ಲ ಮತ್ತು ಆಯೋಗದ ಅಧ್ಯಕ್ಷ, ಕಾರ್ಯದರ್ಶಿ ಅವರೊಂದಿಗೆ ಇಲಾಖೆಯು ಯಾವುದೇ ಸಭೆಯನ್ನೂ ನಡೆಸಿರಲಿಲ್ಲ. ಕೆಪಿಎಸ್‌ಸಿ ಕಾರ್ಯದರ್ಶಿ ಜತೆ ಚರ್ಚಿಸಲು ಸಭೆ ಏರ್ಪಡಿಸಲು ಡಿಪಿಎಆರ್‍‌ನ ಕಾರ್ಯದರ್ಶಿಯಾಗಿದ್ದ ಎಂ ಕೆ ಶ್ರೀಕರ್‍‌ ಅವರು ಸೂಚಿಸಿದ್ದರು. ಆದರೆ ಸಭೆ ನಡೆಸಿರಲಿಲ್ಲ. ಈ ತಿದ್ದುಪಡಿ ವಿಧೇಯಕದ ವಿಷಯವು ಗೌಪ್ಯವಾಗಿರಿಸಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಆಯೋಗದ ಹಾಲಿ ಕಾರ್ಯದರ್ಶಿ ಅವರೊಂದಿಗೆ ಈ ತಿದ್ದುಪಡಿ ವಿಧೇಯಕದ ಕುರಿತು ಡಿಪಿಎಆರ್‍‌ ಚರ್ಚಿಸಿದೆ. ಚರ್ಚಿಸಿದ ನಂತರ ಈ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ಕೋರುವ ಕಡತವನ್ನು ಪುನಃ ಮುಖ್ಯಮಂತ್ರಿಗೆ 2025ರ ಜನವರಿ 16ರಂದು ಮಂಡಿಸಿತ್ತು. ಕರಡು ವಿಧೇಯಕಕ್ಕೆ ಹೊಸದಾಗಿ ಹಲವು ಅಂಶಗಳನ್ನು ಸೇರಿಸಿತ್ತು.

 

ಆಯೋಗದ ಕಾಯ್ದೆ ಸೆಕ್ಷನ್‌ 15ನ್ನು ಕೈ ಬಿಡಬೇಕು ಮತ್ತು ಸೆಕ್ಷನ್‌ 18ರಲ್ಲಿನ (ಇತರ ಸಂದರ್ಭಗಳಲ್ಲಿ ಕಾರ್ಯವಿಧಾನ) 18(1)ರಲ್ಲಿನ ಆಯೋಗದೊಂದಿಗೆ ಸಮಾಲೋಚಿಸಿ ಎಂಬ ಪದವನ್ನು ಕೈ ಬಿಡುವುದು ಮತ್ತು ಪ್ರಧಾನ ಕಾಯ್ದೆಯಿಂದ ಸೆಕ್ಷನ್‌ 18, ಸಬ್‌ ಸೆಕ್ಷನ್‌ (2)ನ್ನು ಕೈ ಬಿಡಲು ಈಗಿನ ಕಾಂಗ್ರೆಸ್‌ ಸರ್ಕಾರವು ತೀರ್ಮಾನಿಸಿತ್ತು.
ಈ ಅಂಶಗಳನ್ನು ತಿದ್ದುಪಡಿ ವಿಧೇಯಕದಲ್ಲಿ ಸೇರಿಸಿತ್ತು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾನೂನು ಸಚಿವ ಹೆಚ್‌ ಕೆ ಪಾಟೀಲ್‌ ಅವರು 2025ರ ಮಾರ್ಚ್‌ 3ರಂದು ಅನುಮೋದಿಸಿದ್ದರು.

 

ಸಮಾಲೋಚನೆ ವಿವೇಚನೆಗೆ ಒಳಪಟ್ಟಿದೆಯೇ?

 

ರಾಜ್ಯಪಾಲರು ಕೋರಿದ್ದ ಸ್ಪಷ್ಟೀಕರಣ ಕುರಿತು ಸಹ ಅಧಿಕಾರಿಗಳೊಂದಿಗೆ ಚರ್ಚಿಸಿತ್ತು. ಮೂಲ ಕಾಯ್ದೆಯಲ್ಲಿ ಸೆಕ್ಷನ್‌ 18ನ್ನು ಕೈಬಿಡುವ ಸಂಬಂಧ ಹಲವು ಸುತ್ತಿನ ಸಭೆಗಳನ್ನೂ ನಡೆಸಿತ್ತು. ‘ಈ ಹಿನ್ನೆಲೆಯಲ್ಲಿ ಸರ್ಕಾರವು ನಿಯಮಗಳನನ್ನು ರೂಪಿಸುವ ಹಂತದಲ್ಲಿ ಆಯೋಗದೊಂದಿಗೆ ಸಮಾಲೋಚಿಸುವುದು ಸರ್ಕಾರದ ವಿವೇಚನೆಗೆ ಒಳಪಟ್ಟಿರುತ್ತದೆ ಎಂದು ಪರಿಭಾವಿಸದೇ,” ಎಂಬ ಕುರಿತೂ ಚರ್ಚೆಯಾಗಿತ್ತು.

 

ರಾಜ್ಯಪಾಲರು ವ್ಯಕ್ತಪಡಿಸಿದ್ದ ಆತಂಕವನ್ನು ನಿವಾರಿಸಿ ಕಡತದಲ್ಲಿ ವಿವರಣೆ ನೀಡಲಾಗಿತ್ತು. ಈ ತಿದ್ದುಪಡಿಗಳು ಭಾರತ ಸಂವಿಧಾನದ ಅನುಚ್ಛೇದ 320ಕ್ಕೆ ವಿರುದ್ಧವಾಗಿಲ್ಲ ಎಂದು ಸ್ಪಷ್ಟಪಡಿಸಿತ್ತು. ಇದಾದ ಮೇಲೂ ರಾಜ್ಯಪಾಲರು ಎರಡನೇ ಬಾರಿ ಕೆಲವೊಂದು ಸ್ಪಷ್ಟೀಕರಣ ಕೋರಿ ಕಡತವನ್ನು ಹಿಂದಿರುಗಿಸಿದ್ದರು ಎಂದು ತಿಳಿದು ಬಂದಿದೆ.

 

ಈ ಕುರಿತಾದ ಕಡತವು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯಲ್ಲಿದೆ.

SUPPORT THE FILE

Latest News

Related Posts