ನಗದು ಘೋಷಣೆ ವಹಿ ನಿರ್ವಹಿಸದ ಸರ್ಕಾರಿ ನೌಕರರು; ಪತ್ತೆ ಹಚ್ಚಿದ ತಪಾಸಣೆ ತಂಡ, ಅಕ್ರಮ ಸಂಪಾದನೆಗಿಲ್ಲ ತಡೆ!

ಬೆಂಗಳೂರು; ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಹಿಂದಿನ ಬಿಜೆಪಿ ಸರ್ಕಾರವು ಜಾರಿಗೆ ತಂದಿದ್ದ ನಗದು ಘೋಷಣೆ ವಹಿಯನ್ನು ಸಚಿವಾಲಯದ ಬಹುತೇಕ ಅಧಿಕಾರಿ ನೌಕರರ ವರ್ಗವು ನಿರ್ವಹಿಸುತ್ತಿಲ್ಲ. ಅಲ್ಲದೇ ಕಚೇರಿಯಲ್ಲಿ ನಿಗದಿತ ಅವಧಿ ಪ್ರಕಾರ ಕರ್ತವ್ಯ ನಿರ್ವಹಿಸುತ್ತಿಲ್ಲ. ಇದರ ಚಲನವಲನ ವಹಿಯನ್ನೂ ನಿರ್ವಹಿಸುತ್ತಿಲ್ಲ  ಎಂಬ ಸಂಗತಿಯು ಬಯಲಾಗಿದೆ.

 

ರಾಜ್ಯದ   ಎಲ್ಲಾ  ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕತೆ ತರಲು, ತಕ್ಷಣದಿಂದ ಜಾರಿಗೆ ಬರುವಂತೆ ನಗದು ಘೋಷಣೆ ವಹಿ (ಲೆಡ್ಜರ್) ನಿರ್ವಹಿಸಬೇಕು ಎಂದು ನೀಡಿದ್ದ ನಿರ್ದೇಶನವನ್ನೂ ಅಧಿಕಾರಿ ನೌಕರ  ವರ್ಗವು ನೇರಾ ನೇರ ಉಲ್ಲಂಘಿಸಿದೆ.

 

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಆಡಳಿತ ಸುಧಾರಣೆ ವಿಭಾಗದ ಅಧಿಕಾರಿಗಳು, ಸಚಿವಾಲಯದ ಎಲ್ಲಾ ಇಲಾಖೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದರು. ಸಚಿವಾಲಯದ ಎಲ್ಲಾ ಶಾಖೆಗಳಲ್ಲಿನ ಅಧಿಕಾರಿ, ನೌಕರ ವರ್ಗವು ನಗದು ವಹಿ ಘೋಷಣೆ ವಹಿಯನ್ನು ನಿರ್ವಹಿಸುತ್ತಿಲ್ಲ ಎಂದು ತಪಾಸಣೆ ವೇಳೆಯಲ್ಲಿ ಪತ್ತೆ ಹಚ್ಚಿರುವುದು ಗೊತ್ತಾಗಿದೆ.

 

ಇಲಾಖೆಯ ಮಾಸಿಕ ಪ್ರಗತಿ ವರದಿಯಲ್ಲಿಯೂ ಅಧಿಕಾರಿ ನೌಕರರ ವರ್ತನೆ ಕುರಿತು ದಾಖಲಿಸಿರುವ ಆಡಳಿತ ಸುಧಾರಣೆ ಶಾಖೆಯು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ವರದಿಯನ್ನು ಸಲ್ಲಿಸಿದೆ ಎಂದು ತಿಳಿದು ಬಂದಿದೆ.

 

ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಡಳಿತ ಸುಧಾರಣೆ) ಸರ್ಕಾರದ ಕಾರ್ಯದರ್ಶಿ ತುಲಸಿ ಮದ್ದಿನೇನಿ ಅವರು ಎಲ್ಲಾ ಇಲಾಖೆಗಳ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. 2025ರ ಮಾರ್ಚ್‌ 12ರಂದು ಬರೆದಿರುವ ಪತ್ರವು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

ಸಚಿವಾಲಯದ ಎಲ್ಲಾ ಇಲಾಖೆಗಳಲ್ಲಿನ ಶಾಖೆಗಳಲ್ಲಿ ಮತ್ತು ಶಾಖೆಗಳ ಸಿಬ್ಬಂದಿ ನಡುವೆ ಸಮಾನ ಕೆಲಸದ ಹಂಚಿಕೆಯ ಉದ್ದೇಶದಿಂದ ಕಾರ್ಯಾಧ್ಯಯನ ಮಾಡಲಾಗುತ್ತಿದೆ. ನಿಗದಿತ ಕಾರ್ಯಾಧ್ಯಯನ ನಮೂನೆ ಭರ್ತಿ ಮಾಡಿರುವ ಕಳಿಸಿರುವ ಇಲಾಖೆಗಳಲ್ಲಿನ ಶಾಖೆಗಳಿಗೆ ಕಾರ್ಯಾಧ್ಯಯನ ತಂಡವು ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದೆ.

 

ಕರ್ನಾಟಕ ಉಚ್ಛ ನ್ಯಾಯಾಲಯವು ನೀಡಿರುವ ಆದೇಶದನ್ವಯ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ಮಂಡಳಿಗಳೂ, ನಿಗಮಗಳು ನಗದು ಘೋಷಣೆ ವಹಿ ನಿರ್ವಹಣೆ ಮಾಡಬೇಕು. ಅದರಂತೆ ಸರ್ಕಾರವು 2022ರ ಮಾರ್ಚ್‌ 14ರಂದೇ ಸುತ್ತೋಲೆ ಹೊರಡಿಸಿದೆ. ಆದರೆ ಸಚಿವಾಲಯದ ಬಹುತೇಕ ಶಾಖೆಗಳಲ್ಲಿ ನಗದು ಘೋಷಣೆ ವಹಿ ನಿರ್ವಹಿಸದಿರುವುದನ್ನು ಗಮನಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

 

ಸಾರ್ವಜನಿಕರು ದೂರು ಊರುಗಳಿಂದ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದಾಗ ಅವರಿಗೆ ತೊಂದರೆಯಿಲ್ಲದೆ ಮಾಹಿತಿ ನೀಡಬೇಕಾಗಿರುವುದು ಕಚೇರಿಗಳಲ್ಲಿನ ಅಧಿಕಾರಿ, ಸಿಬ್ಬಂದಿಯ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ರಾಜ್ಯ ಸರ್ಕಾರಿ ನೌಕರರು ಕಚೇರಿಗೆ ನಿಗದಿತ ಅವಧಿಗೆ ಹಾಜರಾಗಲು ಮತ್ತು ಶಾಖೆಗಳಲ್ಲಿ ಚಲನ ವಲನ ವಹಿ ನಿರ್ವಹಿಸಬೇಕು ಎಂದು 2022ರ ಜುಲೈ 27ರಂದೇ ಸುತ್ತೋಲೆ ಹೊರಡಿಸಿದೆ. ಆದರೆ ಸಚಿವಾಲಯದ ಬಹುತೇಕ ಶಾಖೆಗಳಲ್ಲಿ ಚಲನ ವಲನ ವಹಿಯನ್ನು ನಿರ್ವಹಿಸದಿರುವುದನ್ನು ಗಮನಿಸಲಾಗಿದೆ ಎಂದು ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

‘ಎಲ್ಲಾ ಶಾಖೆಗಳು ನಗದು ಘೋಷಣೆ ವಹಿ ಮತ್ತು ಸಿಬ್ಬಂದಿಯ ಚಲನ ವಲನ ವಹಿಯನ್ನು ಕಡ್ಡಾಯವಾಗಿ ನಿರ್ವಹಿಸಬೇಕಾಗಿದೆ. ಈ ಬಗ್ಗೆ ಮೇಲ್ವಿಚಾರಣೆ ಮಾಡಲು ಇಲಾಖೆಯಲ್ಲಿ ಒಬ್ಬ ನೋಡಲ್‌ ಅಧಿಕಾರಿ, ಉಪ, ಜಂಟಿ ಕಾರ್ಯದರ್ಶಿ ಹಂತದ ಅಧಿಕಾರಿಯನ್ನು ನೇಮಿಸಬೇಕು,’ ಎಂದು ತುಲಸಿ ಮದ್ದಿನೇನಿ ಅವರು ಸೂಚಿಸಿದ್ದಾರೆ.

 

ಹೈಕೋರ್ಟ್ ನವೆಂಬರ್ 10 ರಂದು ನೀಡಿರುವ ನಿರ್ದೇಶನದನ್ವಯ, ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು/ ಮಂಡಳಿಗಳು/ ನಿಗಮಗಳು ಕೆಲ ಕಾರ್ಯ ವಿಧಾನ ಅನುಸರಿಸಿ, ನಗದು ಘೋಷಣೆ ವಹಿಯನ್ನು ನಿರ್ವಹಣೆ ಮಾಡುವಂತೆ ಸರ್ಕಾರದ ಹಿಂದಿನ  ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಆದೇಶ ಹೊರಡಿಸಿದ್ದರು.

 

ಕಾರ್ಯ ವಿಧಾನ ಏನು?

 

ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬ ನೌಕರರ ವೈಯಕ್ತಿಕ ನಗದನ್ನು ಗಮನಿಸಲು ಪ್ರತಿ ಕೆಲಸದ ದಿನದ ಪ್ರಾರಂಭದಲ್ಲಿ “ನಗದು ಘೋಷಣೆ ವಹಿ”ಯನ್ನು ತೆರೆಯಬೇಕು. ಸರ್ಕಾರಿ ನೌಕರರು ಅಧಿಕೃತ ಸಹಿ ಹಾಜರಾತಿ ವಹಿ/ಎಎಂಎಸ್​​​ನಲ್ಲಿ ಕೆಲಸದ ದಿನದಂದು ಕರ್ತವ್ಯಕ್ಕೆ ವರದಿ ಮಾಡಿದ ತಕ್ಷಣ, ಅವನು/ಅವಳು ಕಚೇರಿಗೆ ತಂದ ನಗದು ಮೊತ್ತವನ್ನು ನಗದು ಘೋಷಣೆ ವಹಿಯಲ್ಲಿ ತನ್ನ ಸಹಿಯೊಂದಿಗೆ ಘೋಷಿಸಬೇಕು.

 

ನಗದು ಘೋಷಣೆ ವಹಿಯು ಸಂಬಂಧಪಟ್ಟ ವಿಭಾಗ/ಶಾಖೆಯ ಗ್ರೂಪ್ – ಬಿ ಅಧಿಕಾರಿಯ ವಶದಲ್ಲಿರತಕ್ಕದ್ದು ಮತ್ತು ಸದರಿ ಅಧಿಕಾರಿಯು ನೌಕರರು ಮಾಡಿದ ನಮೂದುಗಳ ಸತ್ಯಾಸತ್ಯತೆ ಪರಿಶೀಲಿಸುವ ಅಧಿಕಾರವನ್ನು ಹೊಂದಿರುತ್ತಾರೆ. ಯಾವುದೇ ನೌಕರರು ನಗದು ಘೋಷಣೆ ವಹಿಯಲ್ಲಿ ಘೋಷಿಸಿದ್ದಕ್ಕಿಂತ ಹೆಚ್ಚಿನ ಹಣವನ್ನು ಹೊಂದಿರುವುದು ಕಂಡು ಬಂದರೆ, ಅಂತಹ ಹೆಚ್ಚುವರಿ ಹಣವನ್ನು ಅಕ್ರಮ ಸಂಪಾದನೆ ಎಂದು ಅರ್ಥೈಸಲಾಗುತ್ತದೆ ಹಾಗೂ ಅಂತಹ ಹೆಚ್ಚುವರಿ ಹಣವನ್ನು ಸಕ್ರಮ ಹಣ ಎಂದು ಸಾಬೀತುವಡಿಸುವುದು ನೌಕರರ ಹೊಣೆಯಾಗಿರುತ್ತದೆ.

 

ನಗದು ಘೋಷಣೆ ವಹಿಯನ್ನು ಕಚೇರಿ ವೇಳೆಯ ಎಲ್ಲ ಸಮಯದಲ್ಲಿ, ಯಾವುದೇ ಉನ್ನತ/ಸಕ್ಷಮ ಪ್ರಾಧಿಕಾರ/ಘಟಕದ ಮುಖ್ಯಸ್ಥರು, ವಿಭಾಗದ ಮುಖ್ಯಸ್ಥರ ತಪಾಸಣೆಗಾಗಿ ತೆರೆದಿರಬೇಕು. ಎಲ್ಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಈ ಬಗ್ಗೆ ಯಾವುದೇ ಲೋಪವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಸುತ್ತೋಲೆಯಲ್ಲಿ ಹೇಳಿದ್ದನ್ನು ಸ್ಮರಿಸಬಹುದು.

 

ನಗದು ಘೋಷಣೆ ವಹಿಯು ಸಂಬಂಧಪಟ್ಟ ವಿಭಾಗ/ಶಾಖೆಯ ಗ್ರೂಪ್-ಬಿ ಅಧಿಕಾರಿಯ ವಶದಲ್ಲಿರುತ್ತದೆ.  ಮತ್ತು ಈ ಅಧಿಕಾರಿಯು,  ನೌಕರರು ಮಾಡಿದ ನಮೂದುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಅಧಿಕಾರ  ಹೊಂದಿರುತ್ತಾರೆ. ಯಾವುದೇ ನೌಕರರು ನಗದು ಘೋಷಣೆ ವಹಿಯಲ್ಲಿ ಘೋಷಿಸಿದ್ದಕ್ಕಿಂತ ಹೆಚ್ಚಿನ ಹಣವನ್ನು ಹೊಂದಿರುವುದು ಕಂಡು ಬಂದರೆ, ಅಂತಹ ಹೆಚ್ಚುವರಿ ಹಣವನ್ನು ಅಕ್ರಮ ಸಂಪಾದನೆ ಎಂದು ಅರ್ಥೈಸಲಾಗುತ್ತದೆ.

SUPPORT THE FILE

Latest News

Related Posts