ಯುವನಿಧಿ ಯೋಜನೆ ದುರ್ಬಳಕೆ; ಉದ್ಯೋಗದಲ್ಲಿದ್ದರೂ ಫಾರ್ಮಸಿ ಪದವೀಧರರಿಗೆ ಭತ್ಯೆ, ಅಪಾರ ನಷ್ಟ

ಬೆಂಗಳೂರು; ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ  ಫಾರ್ಮಸಿ ಪದವೀಧರರು ಮತ್ತು ಫಾರ್ಮಸಿ ಸ್ನಾತಕೋತ್ತರ ಪದವೀಧರರು  ಯುವ ನಿಧಿ ಯೋಜನೆಯನ್ನು  ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಗುರುತರವಾದ ಆರೋಪವು ಕೇಳಿ ಬಂದಿದೆ.

 

ಇಂತಹ ಪ್ರಕರಣಗಳ ಬಗ್ಗೆ ಬೆಂಗಳೂರು ಜಿಲ್ಲೆಯ ಉದ್ಯೋಗಾಧಿಕಾರಿಗೆ ದೂರು ಸಲ್ಲಿಕೆಯಾಗಿದ್ದರೂ ಸಹ ಯಾವುದೇ ಕ್ರಮಗೊಂಡಿಲ್ಲ.  ಅಲ್ಲಿನ ಅಧಿಕಾರಿಯು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.

 

ಈ ಕುರಿತು ಬೆಂಗಳೂರಿನ ರಾಮರಾಜು ಆಚಾರ್ ಎಂಬುವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ 2025ರ ಫೆ.11ರಂದು ಲಿಖಿತ ದೂರು  ನೀಡಿದ್ದಾರೆ. ಈ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಫಾರ್ಮಸಿ ವಿಭಾಗದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳ ಪೈಕಿ ಶೇ. 60 ರಷ್ಟು ಮಂದಿ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದಾರೆ.  ಉದ್ಯೋಗದಲ್ಲಿರುವ ಅಭ್ಯರ್ಥಿಗಳೂ ಸಹ ಯುವ ನಿಧಿ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಇಲಾಖೆಯಿಂದ ಈ ಬಗ್ಗೆ ಮೇಲ್ವಿಚಾರಣೆಯೇ ನಡೆದಿಲ್ಲ. ಇದರಿಂದಾಗಿ ಸರ್ಕಾರಕ್ಕೆ  ಕೋಟ್ಯಂತರ ರುಪಾಯಿ ನಷ್ಟವಾಗಿದೆ ಎಂದು ರಾಮರಾಜು ಆಚಾರ್‍‌ ಅವರು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

‘ಈ ಮಾಹಿತಿಯನ್ನು ಕರ್ನಾಟಕ ಫಾರ್ಮಸಿ ಕೌನ್ಸಿಲ್‌ನಿಂದ ಪರಿಶೀಲಿಸಬಹುದು. ಈ ಕೌನ್ಸಿಲ್‌ನಲ್ಲಿ ದತ್ತಾಂಶಗಳಿವೆ. ನೋಂದಣಿ ಸಂಖ್ಯೆಗಳೂ ಇವೆ. ನರ್ಸಿಂಗ್‌ ವಲಯದಲ್ಲಿರುವ ಖಾಸಗಿ ಸಂಸ್ಥೆ, ಕಂಪನಿಗಳಲ್ಲಿ ಉದ್ಯೋಗಿಗಳಾಗಿರುವ ಹೆಸರು ಮತ್ತು ನೋಂದಣಿ ಸಂಖ್ಯೆಯೊಂದಿಗೆ ತಾಳೆ ಮಾಡಬಹುದು. ಅಲ್ಲದೇ ಆಧಾರ್‍‌ ಸಂಖ್ಯೆ, ನರ್ಸಿಂಗ್‌ ಕೌನ್ಸಿಲ್‌ನಲ್ಲಿ ನೋಂದಣಿ ಮಾಡಿರುವ ಸಂಖ್ಯೆಯನ್ನು ಪರಿಶೀಲಿಸಬಹುದು,’ ಎಂದು ರಾಮರಾಜ್‌ ಆಚಾರ್‍‌ ಅವರು ದೂರಿನಲ್ಲಿ ಪ್ರಸ್ತಾವಿಸಿರುವುದು ತಿಳಿದು ಬಂದಿದೆ.

 

ಅಲ್ಲದೇ ಯುವನಿಧಿಯ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡಿರುವ ನರ್ಸಿಂಗ್‌ ಪದವೀಧರರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಆದರೆ ಯುವ ನಿಧಿ ಯೋಜನೆಗೆ ಅವರ ಮೂಲ ಜಿಲ್ಲೆಯಲ್ಲಿ ನೋಂದಾಯಿಸಿದ್ದಾರೆ. ಈ ಎಲ್ಲಾ ಮಾಹಿತಿಗಳನ್ನು ಕೇಂದ್ರೀಕೃತ ಸಮಿತಿ ಮೂಲಕ ಕ್ರೋಢೀಕರಿಸಿಲ್ಲ. ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಯುವ ನಿಧಿ, ಆಧಾರ್ ನಲ್ಲಿ ನೋಂದಣಿಯಾಗಿರುವ  ಈ ಎಲ್ಲ ದತ್ತಾಂಶ ಮತ್ತು ಮಾಹಿತಿಗಳನ್ನು ಒರೆಗೆ ಹಚ್ಚಿದರೇ ಅಕ್ರಮ ಹೊರಗೆ ಬರಲಿದೆ ಎಂದು ಉಲ್ಲೇಖಿಸಿರುವುದು ಗೊತ್ತಾಗಿದೆ.

 

‘ಯುವನಿಧಿ ಯೋಜನೆಯು ನೈಜ ಮತ್ತು ಅರ್ಹರಿಗೆ ಮಾತ್ರ ಸಿಗಬೇಕು. ಆದರೆ ಇದನ್ನು ಅನರ್ಹರು ವಾಮಮಾರ್ಗದ ಮೂಲಕ ಫಲಾನುಭವಿಗಳಾಗಿದ್ದಾರೆ. ಇದನ್ನು ಕಾನೂನು ಪ್ರಕಾರ ತನಿಖೆ ನಡೆಸಬೇಕು.  ಸರ್ಕಾರದ ಬೊಕ್ಕಸ ನಷ್ಟವನ್ನು ತಂದೊಡ್ಡಿರುವವರನ್ನು ಕಾನೂನು ಪ್ರಕಾರ ಶಿಕ್ಷೆ ವಿಧಿಸಬೇಕು,’ ಎಂದು ದೂರಿನಲ್ಲಿ ಒತ್ತಾಯಿಸಿರುವುದು ತಿಳಿದು ಬಂದಿದೆ.

 

ಈ ಕುರಿತು ಸಚಿವ ಶರಣ ಪ್ರಕಾಶ್‌ ಪಾಟೀಲ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆಯ ನಿಧಿಯಿಂದ ಯುವ ನಿಧಿ ಯೋಜನೆಗೆ ಒದಗಿಸಿದ್ದ 175.50 ಕೋಟಿ ರು.ನಲ್ಲಿ 2025ರ ಜನವರಿ 15ರ ಅಂತ್ಯಕ್ಕೆ ಕೇವಲ 43.88 ಕೋಟಿ ರು ಮಾತ್ರ  ಬಿಡುಗಡೆಯಾಗಿದೆ. ಬಿಡುಗಡೆಗೆ ಇನ್ನು 131.62 ಕೋಟಿ ರು ಬಾಕಿ ಉಳಿಸಿಕೊಂಡಿತ್ತು.

 

ಯುವ ನಿಧಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಎಸ್‌ಸಿಎಸ್‌ಪಿ ಅಡಿ 123.50 ಕೋಟಿ ರು ಮತ್ತು ಟಿಎಸ್‌ಪಿ ಅಡಿಯಲ್ಲಿ 52.00 ಕೋಟಿ ರು ಸೇರಿ ಒಟ್ಟಾರೆ 175.50 ಕೋಟಿ ರು ಒದಗಿಸಿತ್ತು. 2025ರ ಜನವರಿ 15ರ ಅಂತ್ಯಕ್ಕೆ ಕೇವಲ 43.88 ಕೋಟಿ ರು ಅನುದಾನ ಬಿಡುಗಡೆಯಾಗಿದೆ.

 

ಯುವನಿಧಿಗೆ ಪರಿಶಿಷ್ಟ ಉಪ ಯೋಜನೆ ಅನುದಾನ; 175.50 ಕೋಟಿಯಲ್ಲಿ ಕೇವಲ 43.88 ಕೋಟಿಯಷ್ಟೇ ಬಿಡುಗಡೆ

 

 

ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೋಮಾ ಪದವಿದಾರರು ನಿರುದ್ಯೋಗ ಭತ್ಯೆ ಪಡೆಯಲು  ಯುವನಿಧಿ ಯೋಜನೆಗಾಗಿ  ಸಲ್ಲಿಸಿದ್ದ ಅರ್ಜಿಗಳನ್ನು  ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್‌) ತಂತ್ರಾಂಶದ ಮೂಲದ 6,641 ಅರ್ಜಿಗಳನ್ನು ಅನರ್ಹಗೊಳಿಸಲಾಗಿತ್ತು.

 

ಯುವ ನಿಧಿ ಯೋಜನೆ; 6,641 ನಿರುದ್ಯೋಗಿಗಳ ಅನರ್ಹಗೊಳಿಸಿದ ಯುಯುಸಿಎಂಎಸ್ ತಂತ್ರಾಂಶ

ಇಂತಹ ತಂತ್ರಾಂಶದ ಮೂಲಕ 6,641 ನಿರುದ್ಯೋಗಿ ಪದವೀಧರರನ್ನು ಯುವ ನಿಧಿ ಯೋಜನೆಯಿಂದಲೇ ಅನರ್ಹಗೊಳಿಸಿರುವುದು ಚರ್ಚೆಗೆ ಗ್ರಾಸವಾಗಿತ್ತು.

 

 

ಅಲ್ಲದೇ ಐಟಿ ಮತ್ತಿ ಜಿಎಸ್‌ಟಿ ವ್ಯಾಪ್ತಿಗೊಳಪಡುವ   268 ನಿರುದ್ಯೋಗಿಗಳನ್ನೂ ಯುವ ನಿಧಿ ಯೋಜನೆಯಿಂದಲೇ ಅನರ್ಹಗೊಳಿಸಲಾಗಿದೆ. ಅದೇ ರೀತಿ ಋಣಾತ್ಮಕವಾಗಿ ಸ್ವಯಂ ಘೋಷಣೆ ಸಲ್ಲಿಸಿದ್ದ  34,670 ಮಂದಿಯನ್ನು ಯೋಜನೆಯಿಂದ ಹೊರಗಿಡಲಾಗಿದೆ.

 

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು 2022-23, 2023-24 ಮತ್ತು 2024-25ನೇ ಸಾಲಿಗೆ ಸಂಬಂಧಿಸಿದಂತೆ ಆರ್ಥಿಕ ಪ್ರಗತಿ ಕುರಿತು ಸಭೆ ನಡೆದಿತ್ತು. ಈ ಸಭೆಯಲ್ಲಿ ಯುವ ನಿಧಿ ಯೋಜನೆಯ ಕುರಿತೂ ಚರ್ಚೆ ನಡೆದಿತ್ತು.

 

ಯುವ ನಿಧಿ ಯೋಜನೆಗೆ 2025ರ ಜನವರಿ 6ರ ಅಂತ್ಯಕ್ಕೆ ಒಟ್ಟಾರೆ 1,97,060 ಅಭ್ಯರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಪೈಕಿ 1,61,883 ಅರ್ಹ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ  216.38 ಕೊಟಿ ರು. ಮೊತ್ತದ ನಿರುದ್ಯೋಗ ಭತ್ಯೆ ಪಾವತಿಸಲಾಗಿತ್ತು.

 

 

ಅದೇ ರೀತಿ ಯುವ ನಿಧಿ ಯೋಜನೆಗೆ ತಾತ್ಕಾಲಿಕ ಪ್ರಮಾಣ ಪತ್ರಗಳನ್ನು (ಪಿಡಿಸಿ) ವಿವಿಧ ವಿಶ್ವವಿದ್ಯಾಲಯಗಳಿಂದ ಹಾಗೂ ಬೋರ್ಡ್‌ಗಳಿಂದ ನ್ಯಾಡ್‌ ಪೋರ್ಟಲ್‌ನಲ್ಲಿ ಅಪ್‌ಲೋಡ ಮಾಡುವುದು ಕಡ್ಡಾಯ. ಈ ಪೋರ್ಟಲ್‌ ಮೂಲಕ 2023ರಲ್ಲಿ 4,88,112, 2024ರಲ್ಲಿ 2,96,697 ಮಂದಿ ತಾತ್ಕಾಲಿಕ ಪದವಿ ಪ್ರಮಾಣ ಪತ್ರ ಪಡೆದವರು ನೋಂದಣಿ ಮಾಡಿಸಿದ್ದರು.

 

 

ಯುವನಿಧಿ ಯೋಜನೆಗೆ ಶೇ. 46.65ರಷ್ಟು ಯುವಜನರು ಅನರ್ಹ; ಸಮೀಕ್ಷೆ ವರದಿ

 

ಪದವೀಧರರಿಗೆ ನಿರುದ್ಯೋಗಿ ಭತ್ಯೆ ನೀಡುವ ಯುವ ನಿಧಿ ಯೋಜನೆಗೆ ಮಾರ್ಚ್‌ 13ರ ಅಂತ್ಯಕ್ಕೆ ಒಟ್ಟು 2,409 ಅರ್ಜಿಗಳು ತಿರಸ್ಕೃತಗೊಂಡಿವೆ. ಈ ಪೈಕಿ 1,645 ಫಲಾನುಭವಿಗಳ ಆಧಾರ್‌ ಸಂಖ್ಯೆಯು ಬ್ಯಾಂಕ್‌ ಖಾತೆಯೊಡನೆ ಸೀಡ್‌ ಆಗಿರದ ಕಾರಣ ನೇರ ನಗದು ವರ್ಗಾವಣೆ ಆಗಿರಲಿಲ್ಲ.

 

ಯುವ ನಿಧಿ; 2,409 ಅರ್ಜಿಗಳು ತಿರಸ್ಕೃತ, ಮೂರು ತಿಂಗಳಲ್ಲಿ 15.89 ಕೋಟಿ ನಿರುದ್ಯೋಗ ಭತ್ಯೆ ಪಾವತಿ

 

ಯುವ ನಿಧಿ ಯೋಜನೆಯಡಿ ಪದವಿಧರರಿಗೆ/ಸ್ನಾತಕೋತ್ತರ ಪದವೀಧರರಿಗೆ ಪ್ರತಿ ತಿಂಗಳು 3,000 ರು ಮತ್ತು ಡಿಪ್ಲೋಮಾ ತೇರ್ಗಡೆಯಾದವರಿಗೆ ಪ್ರತಿ ತಿಂಗಳು 1,500 ರು. ನಿರುದ್ಯೋಗ ಭತ್ಯೆ ಯೋಜನೆಯಡಿ ಒಟ್ಟಾರೆ 1,43,549 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ಧಾರೆ. ಈ ಪೈಕಿ ನ್ಯಾಡ್‌ ಪೋರ್ಟಲ್‌ನಲ್ಲಿ 38,511 ಅಭ್ಯರ್ಥಿಗಳು ಡಿಪ್ಲೋಮಾ ಪ್ರಮಾಣ ಪತ್ರಗಳನ್ನು ಅಪ್‌ಲೋಡ್‌ ಮಾಡಿದ್ದರು.

 

ಯುವನಿಧಿ ಚಾಲನೆ ಸಮಾರಂಭಕ್ಕೆ ಕಡ್ಡಾಯವಾಗಿ ಹಾಜರಾಗಿ, ಗೈರಾದರೇ ಕಠಿಣ ಶಿಸ್ತು ಕ್ರಮ; ಸಿಮ್ಸ್‌ ನಿರ್ದೇಶಕರ ಎಚ್ಚರಿಕೆ

 

2023ರ ಡಿಸೆಂಬರ್‍‌ ಅಂತ್ಯಕ್ಕೆ 2,617 ಅಭ್ಯರ್ಥಿಗಳು 0.79 ಕೋಟಿ ರು., ಜನವರಿ 2024ರಲ್ಲಿ 21,858 ಅಭ್ಯರ್ಥಿಗಳು 6.56 ಕೋಟಿ ರು., ಫೆಬ್ರುವರಿಯ್ಲಿ 28,926 ಅಭ್ಯರ್ಥಿಗಳು 8.55 ಕೋಟಿ ರು ಸೇರಿ ಒಟ್ಟಾರೆ 15.89 ಕೋಟಿ ರು.ಮೊತ್ತದ ನಿರುದ್ಯೋಗ ಭತ್ಯೆ ಪಡೆದಿದ್ದರು.

 

ಯುವನಿಧಿ; ಅಂತಿಮಗೊಳ್ಳದ ರೂಪುರೇಷೆ, 5.29 ಲಕ್ಷ ಪದವೀಧರರಿಗೆ ವಾರ್ಷಿಕ 444.49 ಕೋಟಿ ರು ಅಂದಾಜು

38,511 ಅಭ್ಯರ್ಥಿಗಳ ಪೈಕಿ ತಾಂತ್ರಿಕ ಶಿಕ್ಷಣ ಇಲಾಖೆಯು 16,863, ಪ್ಯಾರಾ ಮೆಡಿಕಲ್‌ ಬೋರ್ಡ್‌ 10,254, ಜಿಟಿಟಿಸಿ 825, ಕರ್ನಾಟಕ ನರ್ಸಿಂಗ್‌ ಡಿಪ್ಲೋಮಾ ಪರೀಕ್ಷಾ ಮಂಡಳಿಯು 6,769, ಡಿ ಫಾರ್ಮಾದ 3,800 ಅಭ್ಯರ್ಥಿಗಳಿದ್ದಾರೆ.ಪದವೀಧರರ ಪೈಕಿ 4,84,981 ಅಭ್ಯರ್ಥಿಗಳು ಸೇರಿ ಒಟ್ಟಾರೆ 5,23, 492 ಅಭ್ಯರ್ಥಿಗಳ ಪ್ರಮಾಣ ಪತ್ರಗಳು ನ್ಯಾಡ್‌ ಪೋರ್ಟಲ್‌ನಲ್ಲಿ ಅಪ್ಲೋಡ್‌ ಆಗಿತ್ತು.

 

…………

 

ಶಕ್ತಿ ಯೋಜನೆ; ಎಸ್‌ ಸಿ , ಎಸ್‌ ಟಿ ಫಲಾನುಭವಿಗಳ ನಿಖರ ಅಂಕಿ ಅಂಶ ಒದಗಿಸದ ಸಾರಿಗೆ ಇಲಾಖೆ

………..

ಗೃಹ ಜ್ಯೋತಿ; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳ ಅಂಕಿ ಅಂಶಗಳೇ ಸರ್ಕಾರದಲ್ಲಿಲ್ಲ

…………….

SUPPORT THE FILE

Latest News

Related Posts