ಯುವನಿಧಿ; ಅಂತಿಮಗೊಳ್ಳದ ರೂಪುರೇಷೆ, 5.29 ಲಕ್ಷ ಪದವೀಧರರಿಗೆ ವಾರ್ಷಿಕ 444.49 ಕೋಟಿ ರು ಅಂದಾಜು

ಬೆಂಗಳೂರು; ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ಐದನೇ ಗ್ಯಾರಂಟಿ ಯುವ ನಿಧಿ ಯೋಜನೆಯ ರೂಪುರೇಷೆಗಳಿನ್ನೂ ಅಂತಿಮಗೊಳಿಸಿಲ್ಲ.

 

ಯೋಜನೆಯ ರೂಪುರೇಷೆಗಳ ಕುರಿತಾಗಿ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯು ಕಳೆದ ಹಲವು ತಿಂಗಳಿನಿಂದಲೂ ಸಭೆಗಳನ್ನು ನಡೆಸುತ್ತಿದೆ. ಆದರೆ ಮಾರ್ಗಸೂಚಿಗಳನ್ನು ಅಂತಿಮಗೊಳಿಸಿಲ್ಲ. ಆದರೆ ಯೋಜನೆಗೆ ತಗಲುವ ಮಾಸಿಕ ಮತ್ತು ವಾರ್ಷಿಕ ವೆಚ್ಚವನ್ನು ಅಂದಾಜಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ಯುವ ನಿಧಿ ಯೋಜನೆ ಬರುತ್ತೋ ಇಲ್ಲವೋ ಎಂದು ಎಕ್ಸ್‌ (ಟ್ವಿಟರ್‌) ಖಾತೆಯಲ್ಲಿ ಹೇಳಿರುವ ಬೆನ್ನಲ್ಲೇ ಯುವ ನಿಧಿ ಯೋಜನೆ ಕುರಿತಾದ ಹೊಸ ಮಾಹಿತಿಗಳು ಮುನ್ನೆಲೆಗೆ ಬಂದಿವೆ.

 

ಕೌಶಲ್ಯಾಭಿವೃದ್ದಿ ಮತ್ತು ಜೀವನೋಪಾಯ ಇಲಾಖೆಯು ಹಿಂದಿನ ವರ್ಷದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಬಳಿ ಇದ್ದ ಸಾಮಾನ್ಯ ಮತ್ತು ಡಿಪ್ಲೋಮಾ ಪದವಿ ಪಡೆದ ಯುವಜನರ ದತ್ತಾಂಶಗಳನ್ನು ಕಲೆ ಹಾಕಿದೆ. ಇದನ್ನಾಧರಿಸಿ ಯುವ ನಿಧಿಗೆ ಮಾಸಿಕವಾಗಿ 111.12 ಕೋಟಿ ರು ಮತತ್ತು ವಾರ್ಷಿಕವಾಗಿ 444.49 ಕೋಟಿ ರು. ಬೇಕಾಗಲಿದೆ ಎಂದು ಅಂದಾಜಿಸಿದೆ.

 

ಇಲಾಖಾಧಿಕಾರಿಗಳು ಮಾಡಿರುವ ಅಂದಾಜಿನ ಕುರಿತು ಸಚಿವ ಡಾ ಶರಣಪ್ರಕಾಶ ಪಾಟೀಲ್‌ ಅವರು ಚರ್ಚಿಸಿದ್ದಾರೆ. ಇದು ಅಂತಿಮಗೊಂಡ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಿದ್ದಾರೆ ಎಂದು ಗೊತ್ತಾಗಿದೆ.

 

2023-24ನೇ ಸಾಲಿನಲ್ಲಿ ಸಾಮಾನ್ಯ ಮತ್ತು ಡಿಪ್ಲೋಮಾ ಪದವೀಧರರ  ನಿಖರ ಅಂಕಿ ಅಂಶಗಳು ದೊರೆತ ನಂತರ ಮಾಸಿಕ ಮತ್ತು ವಾರ್ಷಿಕವಾಗಿ ಅನುದಾನಕ್ಕೆ ಇಲಾಖೆಯು  ಪ್ರಸ್ತಾವನೆ ಸಲ್ಲಿಸಲಿದೆ. ಹಿಂದಿನ ವರ್ಷದ ದತ್ರಾಂಶಗಳನ್ನು ಅಂದಾಜಿಸಿರುವ ಇಲಾಖೆಯು ಬಹುತೇಕ ಅಷ್ಟೇ ಮೊತ್ತ ಬೇಕಾಗಲಿದೆ ಎಂದೂ ಪ್ರಸ್ತಾವನೆ ಸಿದ್ಧಪಡಿಸಿರುವುದು ತಿಳಿದು ಬಂದಿದೆ.

 

ಇದರ ಪ್ರಕಾರ ಕಳೆದ ವರ್ಷ 4,81,000 ಪದವೀಧರರು ಮತ್ತು 48,153 ಡಿಪ್ಲೋಮಾ ಪದವೀಧರರು ಸೇರಿ ಒಟ್ಟಾರೆ 5,29,153 ಮಂದಿ ಪದವೀಧರರಿದ್ದಾರೆ. ಈ ಪೈಕಿ 91,390 ಮಂದಿ ಪರಿಶಿಷ್ಟ ಜಾತಿಗೆ ಸೇರಿದ್ದರೇ, 34,480 ಪರಿಶಿಷ್ಟ ಪಂಗಡಕ್ಕೆ ಸೇರಿದ ಸಾಮಾನ್ಯ ಪದವೀಧರರಿದ್ದಾರೆ. ಅದೇ ರೀತಿ 9,149 ಮಂದಿ ಪರಿಶಿಷ್ಟ ಜಾತಿಗೆ ಸೇರಿದ್ದರೇ 3,852 ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಡಿಪ್ಲೋಮಾ ಪದವೀಧರರಿದ್ದಾರೆ. ಇದರಲ್ಲಿ ಶೇ.70ರಷ್ಟು ಫಲಾನುಭವಿಗಳು ಎಂದು ಲೆಕ್ಕಾಚಾರ ಹಾಕಿದರೆ ಒಟ್ಟಾರೆ 3,70,407 ಪದವೀಧರರು ಅರ್ಹವಾಗುತ್ತಾರೆ.

 

ಸಾಮಾನ್ಯ ಪದವೀಧರರಿಗೆ ಮಾಸಿಕ 101.01 ಕೋಟಿ ರು., ಡಿಪ್ಲೋಮಾ ಪದವೀಧರರಿಗೆ 10.11 ಕೋಟಿ ಸೇರಿ ಒಟ್ಟಾರೆ 111.12 ಕೋಟಿ ರು. ವೆಚ್ಚವಾಗಲಿದೆ. ವಾರ್ಷಿಕವಾಗಿ ಸಾಮಾನ್ಯ ಪದವೀಧರರಿಗೆ 404.04 ಕೋಟಿ ರು., ಡಿಪ್ಲೋಮಾ ಪದವೀಧರರಿಗೆ 40.45 ಕೋಟಿ ರು. ಸೇರಿ ಒಟ್ಟಾರೆ 444.49 ಕೋಟಿ ರು. ವೆಚ್ಚವಾಗಲಿದೆ ಎಂದು ಕೌಶಲ್ಯಾಭಿವೃದ್ಧಿ ಇಲಾಖೆಯು ಅಂದಾಜಿಸಿರುವುದು ತಿಳಿದು ಬಂದಿದೆ.

 

ಯುವನಿಧಿ ಅನುದಾನವನ್ನು ಸರ್ಕಾರವು ನೇರವಾಗಿ ಡಿಐಟಿಇ ಆಯುಕ್ತರಿಗೆ ಬಿಡುಗಡೆ ಮಾಡಬೇಕು. ಆಯುಕ್ತರು ಜಿಲ್ಲಾ ಉದ್ಯೋಗ ಅಧಿಕಾರಿಗಳಿಗೆ ಹಂಚಿಕೆ ಮಾಡಬೇಕು ಎಂದು ಸಲಹೆ ನೀಡಿರುವುದು ಗೊತ್ತಾಗಿದೆ.

 

ಆದೇಶದಲ್ಲಿ 2022-23ನೇ ಸಾಲಿನಲ್ಲಿ ತೇರ್ಗಡೆಯಾಗಿರುವ ಪದವೀಧರರಿಗೆ ಮಾತ್ರ ಯುವ ನಿಧಿ ಸಹಾಯ ಹಸ್ತ ನೀಡಲಿದೆ ಎಂದು ಘೋಷಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನಿರುದ್ಯೋಗಿಗಳು ಆಕ್ರೋಶ ಹೊರಹಾಕಿದ್ದರು.

 

ರಾಜ್ಯದಲ್ಲಿ 2022ರ ನವೆಂಬರ್‌ ಅಂತ್ಯಕ್ಕೆ ರಾಜ್ಯದ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ 2,76,356 ಮಂದಿ ಉದ್ಯೋಗಕ್ಕಾಗಿ ನೋಂದಾಯಿಸಿದ್ದಾರೆ. ಇವರೆಲ್ಲರೂ ನಿರುದ್ಯೋಗಿಗಳು. ಸರ್ಕಾರದ 43 ಇಲಾಖೆಗಳಲ್ಲಿ ಒಟ್ಟು 2,58,709 ಹುದ್ದೆಗಳು ಖಾಲಿ ಇವೆ.
ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022ರ ಡಿಸೆಂಬರ್‌ 22ರಲ್ಲಿ ವಿಧಾನಪರಿಷತ್‌ಗೆ ನೀಡಿದ್ದ ಉತ್ತರದಲ್ಲಿ ಉಲ್ಲೇಖಿಸಿರುವ ಅಂಕಿ ಅಂಶಗಳ ಪ್ರಕಾರ ಬಾಕಿ 2,58,709 ಹುದ್ದೆಗಳು ಖಾಲಿ ಇವೆ. ಇದರಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣದಲ್ಲಿ 66,059, ಉನ್ನತ ಶಿಕ್ಷಣ ಇಲಾಖೆಯಲ್ಲಿ ಉನ್ನತ ಶಿಕ್ಷಣದಲ್ಲಿ 12,674 ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ 34,644 ಒಳಾಡಳಿತಲ್ಲಿ 23,557 ಹುದ್ದೆಗಳು ಖಾಲಿ ಇರುವುದು ಗೊತ್ತಾಗಿದೆ.

 

ಇಲಾಖಾವಾರು ಪಟ್ಟಿ

 

ಕೃಷಿ ಇಲಾಖೆಯಲ್ಲಿ 6,316, ಪಶು ಸಂಗೋಪನೆಯಲ್ಲಿ 9,972, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 8,063, ಸಹಕಾರ ಇಲಾಖೆಯಲ್ಲಿ 4,738, ಸಿಬ್ಬಂದಿ ಆಡಳಿತ ಸುಧಾರಣೆಯಲ್ಲಿ 5,738, ಇ-ಆಡಳಿತದಲ್ಲಿ 75, ಪರಿಸರ ಮತ್ತು ಜೀವಿಶಾಸ್ತ್ರದಲ್ಲಿ 75, ಇಂಧನದಲ್ಲಿ 245, ಅರ್ಥಿಕ ಇಲಾಖೆಯಲ್ಲಿ 8,779, ಮೀನುಗಾರಿಕೆಯಲ್ಲಿ 777, ಆಹಾರ ಮತ್ತುನಾಗರಿಕ ಸರಬರಾಜು ಇಲಾಖೆಯಲ್ಲಿ 1,187, ಅರಣ್ಯದಲ್ಲಿ 4,562, ಕೈ ಮಗ್ಗ ಮತ್ತು ಜವಳಿಯಲ್ಲಿ 39, ಉನ್ನತ ಶಿಕ್ಷಣದಲ್ಲಿ 12,674, ಒಳಾಡಳಿತಲ್ಲಿ 23,557, ತೋಟಗಾರಿಕೆಯಲ್ಲಿ 3,092, ವಾರ್ತೆ ಇಲಾಖೆಯಲ್ಲಿ 319, ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನದಲ್ಲಿ 60, ಕನ್ನಡ ಸಂಸ್ಕೃತಿಯಲ್ಲಿ 423 ಹುದ್ದೆಗಳು ಖಾಲಿ ಇವೆ.

 

ಕಾರ್ಮಿಕ ಇಲಾಖೆಯಲ್ಲಿ 2,500, ಕಾನೂನು ಇಲಾಖೆಯಲ್ಲಿ 8,370, ಭಾರೀ ಮಧ್ಯಮ ಕೈಗಾರಿಕೆಯಲ್ಲಿ 353, ಭಾರೀ ನೀರಾವರಿಯಲ್ಲಿ 500, ಗಣಿಯಲ್ಲಿ 677, ಸಣ್ಣ ನೀರಾವರಿಯಲ್ಲಿ 1,095, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ 3,633, ಸಂಸದೀಯ ವ್ಯವಹಾರಗಳಲ್ಲಿ 435, ಯೋಜನೆ ಸಾಂಖ್ಯಿಕ ಇಲಾಖೆಯಲ್ಲಿ 1,282, ಪ್ರಾಥಮಿಕ, ಪ್ರೌಢಶಿಕ್ಷಣದಲ್ಲಿ 66,059, ಲೋಕೋಪಯೋಗಿ ಇಲ್ಲಿ 2,063, ಕಂದಾಯದಲ್ಲಿ 10,621, ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ನಲ್ಲಿ 10,409 ಹುದ್ದೆಗಳು ಭರ್ತಿಯಾಗಿಲ್ಲ.

 

ಪರಿಶಿಷ್ಟ ಜಾತಿಗಳ ಕಲ್ಯಾಣದಲ್ಲಿ 9,592, ಪರಿಶಿಷ್ಟ ಪಂಗಡಗಳ ಕಲ್ಯಾಣದಲ್ಲಿ 2,318, ರೇಷ್ಮೆಯಲ್ಲಿ 2,802, ಕೌಶಲ್ಯ ಅಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆಯಲ್ಲಿ 4,216, ಸಣ್ಣ ಕೈಗಾರಿಕೆಯಲ್ಲಿ 356, ಪ್ರವಾಸೋದ್ಯಮದಲ್ಲಿ 286, ಸಾರಿಗೆಯಲ್ಲಿ 1,602, ನಗರಾಭಿವೃದ್ಧಿಯಲ್ಲಿ 839, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಯಲ್ಲಿ 3,230, ಯುವಜನ ಸೇವೆಗಳು 207, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ 34,644 ಸೇರಿ ಒಟ್ಟು 2,58,709 ಹುದ್ದೆಗಳು ಖಾಲಿ ಇವೆ.

the fil favicon

SUPPORT THE FILE

Latest News

Related Posts