ಬೆಂಗಳೂರು; ಸರ್ಕಾರದ ಅನುಮತಿಯನ್ನು ಪಡೆಯದೇ 12 ತಿಂಗಳ ಅವಧಿಗೆ ಔಷಧ ಖರೀದಿ ಮಾಡಿರುವ ಕಾರ್ಮಿಕರ ರಾಜ್ಯ ವಿಮಾ ಯೋಜನೆಯ ವೈದ್ಯಕೀಯ ಸೇವೆಗಳ ನಿರ್ದೇಶನಾಲಯವು ನಿಯಮಗಳನ್ನು ಉಲ್ಲಂಘಿಸಿರುವುದು ಇದೀಗ ಬಹಿರಂಗವಾಗಿದೆ.
ಈ ಕುರಿತು ರಾಜ್ಯ ಕಾರ್ಮಿಕ ಇಲಾಖೆಯು, ನಿರ್ದೇಶನಾಲಯದ ನಿರ್ದೇಶಕ ಡಾ ವರದರಾಜು ವಿ ಅವರಿಗೆ ನೋಟೀಸ್ ಜಾರಿಗೊಳಿಸಿದೆ. ನೋಟೀಸ್‌ನ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ರಾಜ್ಯದ ಇಎಸ್‌ಐ ಆಸ್ಪತ್ರೆಗಳಿಗೆ 2023-24ನೇ ಸಾಲಿನಲ್ಲಿ 16.32 ಕೋಟಿ ರು. ವೆಚ್ಚದಲ್ಲಿ ಹೈಟೆಕ್ ಆಂಬ್ಯುಲೆನ್ಸ್, ಇಸಿಜಿ ಯಂತ್ರ ಸೇರಿದಂತೆ ವೈದ್ಯಕೀಯ ಸಲಕರಣೆ ಮತ್ತು ಔಷಧಗಳ ಖರೀದಿಯಲ್ಲಿ ಅಕ್ರಮದ ವಾಸನೆ ಬಡಿದಿತ್ತು. ಇದರ ಬೆನ್ನಲ್ಲೇ ಸರ್ಕಾರದ ಅನುಮತಿ ಪಡೆಯದೇ ಔಷಧ ಖರೀದಿ ಮಾಡಿರುವುದು ಮುನ್ನೆಲೆಗೆ ಬಂದಿದೆ.
2024ರ ಜೂನ್‌ರಿಂದ ನವೆಂಬರ್ 2024ರವರೆಗಿನ 6 ತಿಂಗಳ ಅವಧಿಗೆ ಮಾತ್ರ ಕಾರ್ಮಿಕ ರಾಜ್ಯ ವಿಮಾ ನಿಗಮದ ದರ ಗುತ್ತಿಗೆಯಲ್ಲಿರುವ ಔಷಧಗಳು ಮತ್ತು ಕೇಂದ್ರ ಸರ್ಕಾರಿ ಸ್ವಾಮ್ಯದ (ಪಿಪಿಪಿ)ಲ್ಲಿ ವಿಮಾ ರೋಗಿಗಳಿಗೆ ಹಾಗೂ ಅವರ ಕುಟುಂಬ ವರ್ಗದವರಿಗೆ ಅವಶ್ಯಕವಿರುವ ಔಷಧ ಖರೀದಿ ಮಾಡಲು ಸರ್ಕಾರವು ಅನುಮತಿ ನೀಡಿತ್ತು.
ಸರ್ಕಾರವು ಅನುಮತಿ ನೀಡಿರುವ ಅವಧಿಗೆ ಔಷಧಗಳನ್ನು ಖರೀದಿ ಮಾಡಿರುವ ಬಗ್ಗೆ ನಿರ್ದೇಶನಾಲಯವು ಮಾಹಿತಿ ಒದಗಿಸಿಲ್ಲ. ಸರ್ಕಾರವು ನೀಡಿದ್ದ 6 ತಿಂಗಳ ಅನುಮತಿಯ ಹೊರತಾಗಿಯೂ ಅನುಮತಿಯನ್ನೇ ಪಡೆಯದೇ 12 ತಿಂಗಳ ಅವಧಿಗೆ ಔಷಧಗಳ ಖರೀದಿ ಪ್ರಕ್ರಿಯೆ ಆರಂಭಿಸಿದೆ. ತಮ್ಮ ಹಂತದಲ್ಲಿಯೇ ಪ್ರಕ್ರಿಯೆಯನ್ನು ಆರಂಭಿಸಿದ್ದ ನಿರ್ದೇಶನಾಲಯವು ಕರ್ನಾಟಕ ರಾಜ್ಯ ನಾಗರಿಕ ಸೇವಾ ನಿಯಮಗಳು 2021 ಉಪ ನಿಯಮ 3 ರ ಉಪ ನಿಯಮಗಳನ್ನು ಉಲ್ಲಂಘಿಸಿತ್ತು ಎಂಬುದು ನೋಟೀಸ್‌ನಿಂದ ತಿಳಿದು ಬಂದಿದೆ.
‘ಔಷಧ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಿ 3 ದಿನದೊಳಗಾಗಿ ಲಿಖಿತ ಸಮಜಾಯಿಷಿ ನೀಡಬೇಕು,’ ಎಂದು ನೋಟೀಸ್‌ನಲ್ಲಿ ಸೂಚಿಸಿರುವುದು ಗೊತ್ತಾಗಿದೆ.
ರಿಫಾಕ್ಸ್‌ಮಿನ್ 550 ಟ್ಯಾಬ್ ದರವನ್ನು 15.9 ರಿಂದ 8.49ಕ್ಕೆ ಇಳಿಸಿತ್ತು. ಟಿಕ್ಯಾಗ್ರೀಲರ್ 90 ಎಂಜಿ ಮಾತ್ರೆಯನ್ನು 13.77ರಿಂದ 4.37 ಎಂಜಿಗೆ ಇಳಿಸಿತ್ತು. 159ರಿಂದ 164ರವರೆಗಿನ ಶೇ.80ರಷ್ಟು ಮಾತ್ರೆಗಳ ದರಗಳು ಗಣನೀಯವಾಗಿ ಇಳಿಕೆಯಾಗಿದ್ದವು. ಸರ್ಕಾರಕ್ಕೆ ಆಗಬಹುದಾಗಿದ್ದ ನಷ್ಟವನ್ನು ತಪ್ಪಿಸಬಹುದಿತ್ತು. ಹೆಚ್ಚುವರಿಯಾಗಿ ಖರೀದಿ ಮಾಡಿರುವ ಔಷಧ ಮಾತ್ರೆಗಳು ಹಳೆ ಮತ್ತು ಹೊಸ ದರದ ಮಧ್ಯೆ ಭಾರೀ ವ್ಯತ್ಯಾಸವಿತ್ತು ಎಂದು ನೋಟೀಸ್‌ನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಹಳೆಯ ದರ ಒಪ್ಪಂದವನ್ನು ಮೂರನೇ ಬಾರಿಗೆ ವಿಸ್ತರಿಸಲಾಗಿತ್ತು. ಈ ಒಪ್ಪಂದವು 2025ರ ಏಪ್ರಿಲ್ 30ರವರೆಗಿತ್ತು. ಹೀಗಾಗಿ ಪುನಃ ವಿಸ್ತರಿಸಲು ಅವಕಾಶವಿರಲಿಲ್ಲ. 2024ರ ಅಕ್ಟೋಬರ್‌ನಲ್ಲೇ ಖರೀದಿ/ಸರಬರಾಜು ಆದೇಶ ನೀಡಿದ್ದರೂ ಡಿಸೆಂಬರ್ ಅಂತ್ಯಕ್ಕೆ ಸರಬರಾಜಾಗಿತ್ತು. ಒಬ್ಬ ವ್ಯಕ್ತಿಯ ಪರವಾಗಿ ಇಂಡೆಂಟ್ ಸಿದ್ಧಪಡಿಸಿತ್ತು. ತರಾತುರಿಯಲ್ಲಿ ಖರೀದಿ ಪ್ರಕ್ರಿಯೆ ನಡೆದಿತ್ತು. ಇಂಡೆಂಟ್ 6 ತಿಂಗಳ ಮಾತ್ರ ಅಧಿಕೃತವಾಗಿದ್ದರೇ ಇನ್ನು 6 ತಿಂಗಳು ಅನಧಿಕೃತವಾಗಿದ್ದವು ಎಂದು ನೋಟೀಸ್‌ನಲ್ಲಿ ವಿವರಿಸಿದೆ.
ವಿಮಾದಾರರ ಹಿತದೃಷ್ಟಿಯಿಂದ ಹಾಗೂ ಸಕಾಲದಲ್ಲಿ ತೃಪ್ತಿಕರ ವೈದ್ಯಕೀಯ ಸೇವೆ ಒದಗಿಸಲು ಹಾಗೂ ಆಸ್ಪತ್ರೆಗಳ ಉನ್ನತೀಕರಣಕ್ಕಾಗಿ ಉಪಕರಣಗಳ ಖರೀದಿಗಾಗಿ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ನಿರ್ದೇಶನಾಲಯವು ಸರ್ಕಾರಕ್ಕೆ 2024ರ ಜೂನ್ 27 ಮತ್ತು ಜುಲೈ 18ರಂದು ಪ್ರಸ್ತಾವ ಸಲ್ಲಿಸಿತ್ತು. ಸರ್ಕಾರದ ಅನುಮತಿ ಪಡೆಯುವ ಷರತ್ತಿಗೊಳಪಟ್ಟು ಟೆಂಡರ್ ಪರಿಗಣಿಸಿ ಅದನ್ನು ಮುಂದುವರೆಸಿತ್ತು. ಸರ್ಕಾರವು ಅನುಮೋದಿಸಿದ್ದ ಉಪಕರಣವಾರು ಅರ್ಥಿಕ ಬಿಡ್ ತೆರೆಯಲು ಸರ್ಕಾರವು ಅನುಮತಿ ನೀಡಿತ್ತು ಎಂಬುದು ಗೊತ್ತಾಗಿದೆ.
ಅಲ್ಲದೇ ರಾಜ್ಯದ ಎಲ್ಲಾ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆ ಹಾಗೂ ರೋಗ ಪತ್ತೆ ಹಚ್ಚುವ ಕೇಂದ್ರಗಳಿಗೆ ಇಎನ್‌ಟಿ, ದಂತ, ಜನರಲ್ ಸರ್ಜರಿ, ಮೆಡಿಸಿನ್, ಆಫ್ತಮಾಲಾಜಿ, ಒಬಿಜಿ ಮತ್ತು ಗೈನ್ ವಿಭಾಗಕ್ಕೆ ಉಪಕರಣಗಳನ್ನು ಖರೀದಿಸಲು ಟೆಂಡರ್ ಕರೆದಿತ್ತು. 2024ರ ಜುಲೈ 22ರಂದು ತೆರೆದಿದ್ದ ಆರ್ಥಿಕ ಬಿಡ್‌ನಲ್ಲಿ ಸೌತ್ ಇಂಡಿಯಾ ಸರ್ಜಿಕಲ್ಸ್, ರಿಮೆಡಿಯೋ ಇನ್ನೋವೇಟಿವ್ ಸೊಲ್ಯುಷನ್ಸ್ ಪ್ರೈವೈಟ್ ಲಿಮಿಟೆಡ್, ಕೆ ಕೆ ಅಲೈಯನ್ಜ್ ಪ್ರೈವೈಟ್ ಲಿಮಿಟೆಡ್ ಭಾಗವಹಿಸಿದ್ದವು.
ಈ ಟೆಂಡರ್‌ನಲ್ಲಿ ಕೆಲವು ಉಪಕರಣಗಳಿಗೆ ಏಕ ಬಿಡ್‌ದಾರರು ಭಾಗವಹಿಸಿದ್ದರು. ಹೀಗಾಗಿ ಏಕ ಬಿಡ್ ಟೆಂಡರ್‌ಗಳನ್ನು ತಿರಸ್ಕರಿಸಿ ಮರು ಟೆಂಡರ್ ಕರೆಯಬೇಕಿತ್ತು. ಆದರೆ ಏಕ ಬಿಡ್ ಟೆಂಡರ್ ಪರಿಗಣಿಸಲೇಬೇಕಾದಂತಹ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಟೆಂಡರ್ ದರಗಳು ಅಂದಾಜು ಮೊತ್ತಕ್ಕೆ ಹೋಲಿಸಿದಾಗ ಶೇ. 5ಕ್ಕಿಂತ ಹೆಚ್ಚುವರಿಯಾಗಿದ್ದಲ್ಲಿ ಅಥವಾ ಲಾಭಾಂಶವನ್ನು ಹೊಂದಿದ್ದಲ್ಲಿ ಇ-ಸಂಗ್ರಹಣೆ ಪೋರ್ಟಲ್‌ನಲ್ಲಿಯೇ ದರ ಸಂಧಾನ ಮಾಡುವುದು ಕಡ್ಡಾಯವಾಗಿತ್ತು. ಆದರೆ ಈ ಪ್ರಕ್ರಿಯೆಯಲ್ಲಿಯೂ ಹಲವು ಲೋಪಗಳಾಗಿವೆ ಎಂದು ತಿಳಿದು ಬಂದಿದೆ.
ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗಳು ಮತ್ತು ಔಷಧಾಲಯಗಳಿಗೆ ಖರೀದಿಯಾಗಿರುವ ಬಹುತೇಕ ವೈದ್ಯಕೀಯ ಸಲಕರಣೆಗಳು ಮತ್ತು ಪೀಠೋಪಕರಣಗಳು ಕಳಪೆಯಿಂದ ಕೂಡಿವೆ. ಈ ಕುರಿತು ಇಎಸ್‌ಐನ ವಿಚಕ್ಷಣಾ ದಳದ ತಪಾಸಣೆಯು ಬಹಿರಂಗಗೊಳಿಸಿತ್ತು.
ಈ ಸಂಬಂಧ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೂ ಪತ್ರ ಬರೆದಿದೆ ಎಂದು ತಿಳಿದು ಬಂದಿದೆ.
ಪತ್ರದಲ್ಲೇನಿತ್ತು?
ಕಾರ್ಮಿಕ ವಿಮಾ ಆಸ್ಪತ್ರೆಗಳಿಗೆ 5.99 ಕೋಟಿ ರು. ವೆಚ್ಚದಲ್ಲಿ 8 ಹೈಟೆಕ್ (ಸಿ ಮಾದರಿ) ಆಂಬ್ಯುಲೆನ್ಸ್ ಗಳನ್ನು ಖರೀದಿ ಮಾಡಲಾಗಿದೆ. ಆದರೆ ಅದನ್ನು ಬಳಕೆ ಮಾಡಿಲ್ಲ. ಚಾಲಕರು ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿ ನೇಮಕವಾಗಿರದ ಕಾರಣ ಈ ಆಂಬ್ಯಲೆನ್ಸ್‌ಗಳು ಬಳಕೆ ಮಾಡಿಲ್ಲ ಎಂದು ಪತ್ರದಲ್ಲಿ ತಿಳಿಸಿತ್ತು.
ಹೈಟೆಕ್ ಆಂಬುಲೆನ್ಸ್, ಇಸಿಜಿ ಯಂತ್ರ ಖರೀದಿಯಲ್ಲಿ ಅಕ್ರಮ; ಇಎಸ್‌ಐ ಆಸ್ಪತ್ರೆಗಳಲ್ಲಿ 16.32 ಕೋಟಿ ಅವ್ಯವಹಾರ?
ಇಸಿಜಿ ಯಂತ್ರಗಳು, ವಾಟರ್ ಕೂಲರ್ಸ್, ರೆಫ್ರಿರಿಜೇಟರ್‍ಗಳನ್ನು ಸರಬರಾಜು ಮಾಡಲಾಗಿದೆ. ಆದರೆ ಬಹುತೇಕ ಔಷಧಾಲಯಗಳಲ್ಲಿ ಧೂಳು ಹಿಡಿದು ಕೂತಿದ್ದವು.
ಔಷಧಾಲಯಗಳಿಗೆ 10.33 ಕೋಟಿ ರು ವೆಚ್ಚದಲ್ಲಿ ಖರೀದಿ ಮಾಡಲಾಗಿರುವ ಪೀಠೋಪಕರಣಗಳು ಕಳಪೆಯಾಗಿವೆ. ಹಲವು ಉಪಕರಣಗಳನ್ನು ಇನ್ನೂ ಅಳವಡಿಸಿಲ್ಲ. ಈ ಎಲ್ಲವನ್ನೂ ಪರಿಶೀಲಿಸಿ ಅಂಶವಾರು ಈ ಕಚೇರಿಗೆ ವಾಸ್ತವ ವರದಿಯನ್ನು ನೀಡಬೇಕು ಎಂದು 2024ರ ಜುಲೈ 8ರಂದು ಇಎಸ್‌ಐನ ಉಪ ನಿರ್ದೇಶಕರು (ವಿಚಕ್ಷಣಾ) ವಿನಯ್ ಕುಮಾರ್ ಶರ್ಮಾ ಅವರು ಕಾರ್ಮಿಕ ವಿಮಾ ಆಸ್ಪತ್ರೆಗಳ ರಾಜ್ಯ ನಿರ್ದೇಶಕರಿಗೆ ಸೂಚಿಸಿತ್ತು.
ಇಎಸ್‌ಐ ಆಸ್ಪತ್ರೆ, ಔಷಧಾಲಯಗಳಲ್ಲಿ ಅಕ್ರಮ; ನಕಲಿ ದಾಖಲೆಗಳ ಸೃಷ್ಟಿಸಿ ಲಕ್ಷಾಂತರ ರು ವಂಚನೆ ಆರೋಪ
ರಾಜ್ಯದ ಹಲವು ಜಿಲ್ಲೆಗಳಲ್ಲಿರುವ ಕಾರ್ಮಿಕರ ರಾಜ್ಯ ವಿಮಾ ನಿಗಮದ ಆಸ್ಪತ್ರೆಗಳು ಪಾಳು ಬಿದ್ದಿವೆ. ಅನೇಕ ಆಸ್ಪತ್ರೆಗಳಲ್ಲಿ ಆಧುನಿಕ ವೈದ್ಯಕೀಯ ಸಲಕರಣೆ, ಉಪಕರಣಗಳ ಬಳಕೆ ಆಗುತ್ತಿಲ್ಲ. ಬೇಡಿಕೆ ಇರದೇ ಇದ್ದರೂ ಸಹ ಖರೀದಿ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.