ಬೆಂಗಳೂರು; ನೂತನ ಕುಲಪತಿ ನೇಮಕಗೊಳಿಸುವ ಸಂಬಂಧ ಶೋಧನಾ ಸಮಿತಿಯ ಸದಸ್ಯರಿಗೆ 10 ಸೂಟ್‌ಕೇಸ್ ಖರೀದಿ, ನ್ಯಾಕ್ ಸಮಿತಿ ಪರಿಶೀಲನೆ ಸಂದರ್ಭದಲ್ಲಿ ನಡೆದಿದ್ದ ಕಾಮಗಾರಿ ಮತ್ತು 2 ಕೋಟಿಗೂ ಹೆಚ್ಚು ಖರೀದಿ ಮಾಡಿರುವ ಪ್ರಕರಣಗಗಳಲ್ಲಿ ಸರ್ಕಾರದ ಮೂಲ ನಿಯಮಗಳನ್ನು ದಾವಣಗೆರೆ ವಿಶ್ವವಿದ್ಯಾಲಯವು ಉಲ್ಲಂಘಿಸಿರುವುದನ್ನು ಐಎಎಸ್ ಅಧಿಕಾರಿ ಸ್ನೇಹಲ್ ಸುಧಾಕರ ಲೋಖಂಡೆ ನೇತೃತ್ವದ ತನಿಖಾ ಸಮಿತಿಯು ದೃಢಪಡಿಸಿದೆ.
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಖಾಲಿ ಇದ್ದ ಕುಲಪತಿ ಹುದ್ದೆಗೆ ನೇಮಕ ಪ್ರಕ್ರಿಯೆ ನಡೆಸಲು ರಚಿಸಿದ್ದ ಶೋಧನಾ ಸಮಿತಿ ಮತ್ತು ನ್ಯಾಕ್ ಪರಿಶೀಲನೆ ಸಮಿತಿ ಸಂದರ್ಭದಲ್ಲಿ ನಿಯಮ ಉಲ್ಲಂಘನೆ ಆಗಿದ್ದವು. ಅಲ್ಲದೇ ಖರೀದಿ ಪ್ರಕ್ರಿಯೆ ಮತ್ತು ಕಾಮಗಾರಿಯಲ್ಲಿಯೂ ಹಲವು ಅಕ್ರಮಗಳು ನಡೆದಿದ್ದವು. ಈ ಕುರಿತು ‘ದಿ ಫೈಲ್’ ಸರಣಿ ವರದಿಗಳನ್ನು ಪ್ರಕಟಿಸಿತ್ತು.
ಈ ವರದಿಗಳನ್ನಾಧರಿಸಿ ಕರ್ನಾಟಕ ರಾಷ್ಟ್ರಸಮಿತಿಯು ಸಲ್ಲಿಸಿದ್ದ ದೂರನ್ನು ಲೋಕಾಯುಕ್ತ ಸಂಸ್ಥೆಯು ವಿಚಾರಣೆ ನಡೆಸುತ್ತಿದೆ. ಈ ಮಧ್ಯೆಯೇ ಐಎಎಸ್ ಅಧಿಕಾರಿ ಸ್ನೇಹಲ್ ಸುಧಾಕರ ಲೋಖಂಡೆ ನೇತೃತ್ವದ ತನಿಖಾ ಸಮಿತಿಯು ಸರ್ಕಾರಕ್ಕೆ ವರದಿಯನ್ನು ನೀಡಿದೆ. ಈ ವರದಿ ಆಧರಿಸಿ ಕ್ರಮ ಕೈಗೊಳ್ಳಬೇಕು ಎಂದು ಉನ್ನತ ಶಿಕ್ಷಣ ಇಲಾಖೆಯು ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಹಲವಾರು ಬಾರಿ ಪತ್ರ ಬರೆದಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ಇಲಾಖೆಯ ಉನ್ನತ ಅಧಿಕಾರಿಗಳು ಸಚಿವ ಡಾ ಎಂ ಸಿ ಸುಧಾಕರ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ವಿಶೇಷವೆಂದರೇ ನ್ಯಾಕ್ ಎ ++ ಗ್ರೇಡ್ ಪಡೆಯಲು ಲಂಚ ಪಡೆದ ಆರೋಪಕ್ಕೆ ಗುರಿಯಾಗಿರುವ ನ್ಯಾಕ್ ಪರಿಶೀಲನಾ ಸಮಿತಿಯ ಸದಸ್ಯರ ಪೈಕಿ ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಗಾಯತ್ರಿ ದೇವರಾಜ್ ಅವರ ವಿರುದ್ಧದ ದೂರಿನ ಕುರಿತು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರೋಪ ಕೇಳಿ ಬಂದಿತ್ತು. ನ್ಯಾಕ್ ಸಮಿತಿಯು ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ 2 ಕೋಟಿಗಿಂತ ಅಧಿಕ ವೆಚ್ಚವಾಗಿದೆ ಎಂದು ಸಿಂಡಿಕೇಟ್ ಸದಸ್ಯರು ದೂರಿದ್ದರು.
ಈ ಕುರಿತು ತನಿಖೆ ನಡೆಸಿರುವ ಸ್ನೇಹಲ್ ಸುಧಾಕರ್ ಲೋಖಂಡೆ ನೇತೃತ್ವದ ತನಿಖಾ ತಂಡವು ನ್ಯಾಕ್ ಸಮಿತಿ ಪರಿಶೀಲನೆ ವೇಳೆಯಲ್ಲಿ 2 ಕೋಟಿ ಗಿಂತಲೂ ಅಧಿಕ ವೆಚ್ಚವಾಗಿದೆ ಎಂಬ ಪ್ರಕರಣಕ್ಕೆ ಕ್ಲೀನ್ ಚಿಟ್ ನೀಡಿದೆ.
ತನಿಖಾ ಸಮಿತಿಯ ವರದಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕುಲಪತಿಗಳ ನೇಮಕಕ್ಕೆ ನಡೆಸಿದ್ದ ಆಯ್ಕೆ ಪ್ರಕ್ರಿಯೆ, ನ್ಯಾಕ್ ಪರಿಶೀಲನೆ, ಕಾಮಗಾರಿ, ಟೆಂಡರ್ ಸೇರಿದಂತೆ ಇನ್ನಿತರೆ ವಿಚಾರಗಳಲ್ಲಿ ಯಾವುದೇ ಲೋಪವಾಗಲೀ, ಅಕ್ರಮವಾಗಲೀ, ನಿಯಮ ಉಲ್ಲಂಘನೆಯಾಗಲೀ ನಡೆದಿಲ್ಲ ಎಂದು ಆಪಾದಿತರು ನೀಡಿದ್ದ ಮೌಖಿಕ ಸಮಜಾಯಿಷಿಗಳನ್ನು ತನಿಖಾ ಸಮಿತಿಯು ತಳ್ಳಿ ಹಾಕಿದೆ. ಅಲ್ಲದೇ ಆರ್ಥಿಕ ಮಿತವ್ಯಯವನ್ನು ಪಾಲಿಸಿಲ್ಲ ಹಾಗೂ ನಿಯಮಗಳಿಗೆ ವ್ಯತಿರಿಕ್ತವಾಗಿ ಹೆಚ್‌ಆರ್‌ಎ ಇತರೆ ಭತ್ಯೆಗಳನ್ನು ನೀಡಲಾಗಿದೆ. ಇದನ್ನು ವಸೂಲು ಮಾಡಬೇಕು ಎಂದು ತನಿಖಾ ಸಮಿತಿಯು ಹೇಳಿರುವುದು ವರದಿಯಿಂದ ತಿಳಿದು ಬಂದಿದೆ.
‘ವಿಶ್ವವಿದ್ಯಾಲಯವು ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ 2000ರಡಿಯಲ್ಲಿ ಶಾಸನಬದ್ಧವಾಗಿ ರಚನೆಯಾಗಿರುವ ಸಿಂಡಿಕೇಟ್ ಮತ್ತು ಹಣಕಾಸು ಸಮಿತಿ ಸಭೆಗಳಲ್ಲಿ ಅನುಮೋದನೆ ಪಡೆದುಕೊಂಡರೂ ಸಹ ಸರ್ಕಾರದ ಮೂಲ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬರುತ್ತವೆ. ಇದು ಆಕ್ಷೇಪಣಾರ್ಹ ವಿಷಯ ಎಂಬುದನ್ನು ಸಮಿತಿ ತಿಳಿಸಬಯಸುತ್ತದೆ,’ ಎಂದು ಸಮಿತಿಯು ಅಭಿಪ್ರಾಯಿಸಿರುವುದು ವರದಿಯಿಂದ ಗೊತ್ತಾಗಿದೆ.
ಶೋಭ್ಯಾನಾಯಕ್ ಮತ್ತು ಪ್ರಶಾಂತ್ ವಿ ಅವರ ಸೇವೆಯನ್ನು ವಿಲೀನಗೊಳಿಸುವ ಸಂಬಂಧ ಸರ್ಕಾರದಿಂದ ಪೂರ್ವಾನುಮತಿ ಪಡೆದಿಲ್ಲ. ಈ ಉದ್ಯೋಗಿಗಳನ್ನು ಖಾಯಂ ಮಾಡಲು ಸರ್ಕಾರದ ಅನುಮತಿ ಪಡೆದ ನಂತರ ನಿಯಮಾನುಸಾರ ಕ್ರಮವಹಿಸಬೇಕಿತ್ತು. ಅಲ್ಲಿಯವರೆಗೆ ಸಂಚಿತ ವೇತನ ಪಾವತಿಸಲು ತೀರ್ಮಾನಿಸಿದೆ. ಆಧರೆ 2022ರ ಫೆ.23ರಂದು ಹೊರಡಿಸಿದ್ದ ಅಧಿಕೃತ ಜ್ಞಾಪನವನ್ನು ಹಿಂಪಡೆದಿಲ್ಲ. ಇದು ನಿಯಮಬಾಹಿರವಾಗಿದೆ. ಅಲ್ಲದೇ ಈ ನೌಕರರಿಗೆ ಸಂಚಿತ ವೇತನದ ಜೊತೆಗೆ ಡಿಎ, ಹೆಚ್‌ಆರ್‌ಎ, ಇತರೆ ಭತ್ಯೆಗಳನ್ನು ನೀಡುತ್ತಿರುವುದು ಸಹ ನಿಯಮಗಳಿಗೆ ವ್ಯತಿರಿಕ್ತವಾಗಿದೆ. ಹೀಗಾಗಿ ಹೆಚ್ಚುವರಿ ಭತ್ಯೆಗಳನ್ನು ವಸೂಲಿಸಬೇಕಾಗಿದೆ ಎಂದು ತನಿಖಾ ಸಮಿತಿಯು ಶಿಫಾರಸ್ಸು ಮಾಡಿರುವುದು ತಿಳಿದು ಬಂದಿದೆ.
ಕುಲಪತಿಗಳ ಆಯ್ಕೆ ಸಮಿತಿಯಾಗಿರುವ ಶೋಧನಾ ಸಮಿತಿಯ ಒಂದು ದಿನದ ಸಭೆಗೆ 8.6 ಲಕ್ಷ ರು.ಗಳಿಗಿಂತಲೂ ಹೆಚ್ಚಿನ ವೆಚ್ಚ ಮಾಡಿರುವುದು ಸಹ ಆರ್ಥಿಕ ಮಿತವ್ಯಯದ ನಿಯಮ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತನಿಖಾ ಸಮಿತಿಯು ವಿವರಿಸಿದೆ.
‘ಶೋಧನಾ ಸಮಿತಿಯ ಓರ್ವ ಸದಸ್ಯರಿಗೆ (ಇಗ್ನೋ ಕುಲಪತಿ) ಬಿಸಿನೆಸ್ ಕ್ಲಾಸಿನ ವಿಮಾನಯಾನ ಟಿಕೇಟ್ ಬುಕ್ ಮಾಡಿರುವುದು ಕಂಡು ಬಂದಿದೆ. ಇದನ್ನು ಅವರ ಕೋರಿಕೆ (ವಾಟ್ಸಾಪ್ ಸಂದೇಶ) ಈ ರೀತಿ ಮಾಡಿದ್ದಾಗಿ ಹೇಳಿಕೆ ನೀಡಿದ್ದರು. ಆಧರೆ ಇದು ಸರ್ಕಾರದ ಆರ್ಥಿಕ ಮಿತವ್ಯಯದ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ,’ ಎಂದು ವರದಿಯಲ್ಲಿ ತನಿಖಾ ಸಮಿತಿಯು ಅಭಿಪ್ರಾಯಿಸಿದೆ.
ಶೋಧನಾ ಸಮಿತಿಯ ವಾಸ್ತವ್ಯಕ್ಕೆ ಪಂಚತಾರಾ ಹೋಟೆಲ್ (ಐಟಿಸಿ ಮೆರಿಡಿಯನ್ ಹೋಟೆಲ್) ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸಕರ್ಸಾರಿ ವಸತಿ ಗೃಹದಲ್ಲಿ ವಾಸ್ತವ್ಯ ಕಲ್ಪಿಸಬೇಕೆನ್ನುವ ಸರ್ಕಾರದ ನಿಯಮವನ್ನೂ ಉಲ್ಲಂಘಿಸಲಾಗಿದೆ. ವಿಶ್ವವಿದ್ಯಾಲಯದಿಂದ ಶೋಧನಾ ಸಮಿತಿಯ ನಿರ್ವಹಣೆಗೆ ತೆರಳಿದ ಸಿಬ್ಬಂದಿಗಳ ಊಟೋಪಚಾರದ ವೆಚ್ಚವನ್ನು ಹಾಗೂ ಬಾಡಿಗೆ ವಾಹನದ ವೆಚ್ಚ ಸಹ ಕಡಿಮೆ ಮಾಡಬಹುದಾಗಿತ್ತು. ಆದರೆ ಆರ್ಥಿಕ ಮಿತವ್ಯಯ ಸಾಧಿಸಿಲ್ಲ ಎಂಬುದು ಕಂಡು ಬರುತ್ತದೆ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಘಟಿಕೋತ್ಸವ ಸಂದರ್ಭದಲ್ಲಿ ಶಾಮಿಯಾನಕ್ಕೆ 5.00 ಲಕ್ಷ ಹಾಗೂ ಊಟೋಪಚಾರಕ್ಕೆ 3.00 ಲಕ್ಷ ಹೆಚ್ಚುವರಿ ವೆಚ್ಚ ಮಾಡಿರುವುದನ್ನೂ ತನಿಖಾ ಸಮಿತಿಯು ಪರಿಶೀಲಿಸಿದೆ. ನಿಯಮಾನುಸಾರ ಇ-ಪ್ರೊಕ್ಯೂರ್‌ಮೆಂಟ್ ಮೂಲಕ ಟೆಂಡರ್ ಕರೆದಿದ್ದರೂ ಸಹ ಕಾಲಾವಕಾಶ ಕಡಿಮೆ ಇದೆ ಎಂಬ ಕಾರಣದಿಂದ ಟೆಂಡರ್‌ನ ಒಟ್ಟು ಮೊತ್ತಕ್ಕಿಂತ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸಿ ಬಿಲ್‌ಗಳನ್ನು ಪಡೆದಿರುವುದನ್ನು ತನಿಖಾ ಸಮಿತಿಯು ಪತ್ತೆ ಹಚ್ಚಿದೆ. ಇದು ನಿಯಮಬಾಹಿರವಾಗಿದೆ ಎಂದೂ ವರದಿಯಲ್ಲಿ ಹೇಳಿದೆ.
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಹಲವು ಅಕ್ರಮ, ಅವ್ಯವಹಾರಗಳ ಕುರಿತು ಈಗಾಗಲೇ ಉನ್ನತ ಶಿಕ್ಷಣ ಇಲಾಖೆಯು ವರದಿ ಕೇಳಿ ನಿರ್ದೇಶನ ನೀಡಿರುವ ಬೆನ್ನಲ್ಲೇ ಲೋಕಾಯುಕ್ತಕ್ಕೆ ದಾಖಲಿಸಿತ್ತು. ಈ ದೂರಿನ ವಿಚಾರಣೆಯು ಇನ್ನೂ ಅಂತಿಮಗೊಂಡಿಲ್ಲ.
ಸೂಟ್‌ಕೇಸ್ ಖರೀದಿ, 2 ಕೋಟಿ ದುಂದುವೆಚ್ಚ; ಕುಲಪತಿ ಸೇರಿ ಮೂವರ ವಿರುದ್ಧ ದೂರು ಸಲ್ಲಿಸಿದ ಕೆಆರ್‌ಎಸ್
ಶೋಧನಾ ಸಮಿತಿಯು ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲೇ ವಿಶ್ವವಿದ್ಯಾಲಯದ ಅಧಿಕಾರಿಗಳು 10 ಸೂಟ್‌ಕೇಸ್‌ಗಳನ್ನು ಖರೀದಿಸಿದ್ದರು.
ಕುಲಪತಿ ನೇಮಕ ಪ್ರಕ್ರಿಯೆಗೆ 8 ಲಕ್ಷ ಖರ್ಚು; ಶೋಧನಾ ಸಮಿತಿ ಸದಸ್ಯರಿಗೆ 10 ಸೂಟ್‌ಕೇಸ್ ಖರೀದಿ
ಈ ಸಂಬಂಧ ದಾಖಲೆಗಳನ್ನು ತನಿಖಾ ಸಮಿತಿಯು ಪರಿಶೀಲಿಸಿದೆ. ಶೋಧನಾ ಸಮಿತಿಗೆ ಸಂಬಂಧಪಟ್ಟಂತೆ ಲೇಖನ ಸಾಮಗ್ರಿಗಳಿಗೆ ಮಾತ್ರ ವೆಚ್ಚ ತೋರಿಸಲಾಗಿದೆ. ನಂತರ ಸೂಟ್‌ಕೇಸ್ ಮತ್ತು ಊಟಕ್ಕೆ ಹೆಚ್ಚುವರಿಯಾಗಿ ವೆಚ್ಚ ಮಾಡಲಾಗಿತ್ತು. ಇದರಿಂದ ವಿ ವಿ ಗೆ ಆರ್ಥಿಕ ನಷ್ಟವುಂಟಾಗಿದೆ ಎಂಬ ಆಕ್ಷೇಪಣೆ ವ್ಯಕ್ತವಾಗಿತ್ತು. ಈ ಸಂಗತಿಯನ್ನು ಕುಲಸಚಿವರು ತನಿಖಾ ಸಮಿತಿಯ ಗಮನಕ್ಕೆ ತಂದಿದ್ದರು.
‘ಶೋಧನಾ ಸಮಿತಿಯ ನೋಡಲ್ ಅಧಿಕಾರಿಯಾದ ನಾಗಸ್ವರೂಪ್ ಅವರು ಇವರಿಗೆ ಕಾರಣ ಕೇಳುವ ನೋಟೀಸ್ ನೀಡುವುದು ಹಾಗೂ ಇವರಿಂದ ಹೆಚ್ಚುವರಿ ವೆಚ್ಚವಾಗಿರುವ 2,91,351 ರು.ಗ ಳ ವಸೂಲು ಮಾಡುವುದು ಮತ್ತು ಮಲ್ಲೇಶ್ವರಂ ಪ್ರಿಂಟರ್ಸ್ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲು ಸಭೆಯು ನಿರ್ಣಯ ತೆಗೆದುಕೊಂಡಿದೆ,’ ಎಂದು ಕುಲಸಚಿವರು ಸಮಿತಿಯ ಗಮನಕ್ಕೆ ತಂದಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ನ್ಯಾಕ್ ಸಮಿತಿಯು ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದಾಗಲೂ 2 ಕೋಟಿ ರು.ಗೂ ಹೆಚ್ಚು ಹಣವನ್ನು ಖರ್ಚು ಮಾಡಲಾಗಿತ್ತು ಎಂದು ಸಿಂಡಿಕೇಟ್ ಉಪ ಸಮಿತಿಯು ವಿಚಾರಣೆಯಲ್ಲಿ ಸಾಬೀತುಪಡಿಸಿತ್ತು.
ನ್ಯಾಕ್ ಸಮಿತಿ ಪರಿಶೀಲನೆ ಪ್ರಕ್ರಿಯೆಗೆ 2 ಕೋಟಿಗೂ ಹೆಚ್ಚು ವೆಚ್ಚ; ವರದಿ ನೀಡಲು ನಿರ್ದೇಶನ ನೀಡಿದ ಸರ್ಕಾರ
ಆದರೆ ಈ ಪ್ರಕರಣದಲ್ಲಿ ತನಿಖಾ ಸಮಿತಿಯು ಕ್ಲೀನ್ ಚಿಟ್ ನೀಡಿದೆ.
ನಾಲ್ಕು ಕಾಮಗಾರಿಗಳ ಕುರಿತು ಮಾರುಕಟ್ಟೆ ದರಕ್ಕಿಂತ ಹೆಚ್ಚುವರಿ ದರ ನಮೂದಿಸಿದೆ ಎಂಬ ಆರೋಪಗಳಿದ್ದರೂ ಸಹ ಆಗಿನ ಮಾರುಕಟ್ಟೆ ದರದ ಜೊತೆಗೆ ತುಲನೆ ಮಾಡಲು ಯಾವುದೇ ಮಾಪನ ಇರುವುದಿಲ್ಲ. ದಾವಣಗೆರೆ ವಿವಿಯಲ್ಲಿ ಪ್ರತ್ಯೇಕ ಇಂಜಿನಿಯರಿಂಗ್ ವಿಭಾಗ ಇದ್ದರೂ ಸಹ ಕಾರ್ಯಪಾಲಕ ಇಂಜಿನಿಯರ್ ನಿವೃತ್ತರಾಗಿದ್ದ ಕಾರಣ ತುರ್ತು ಅಗತ್ಯದ ಮೇರೆಗೆ ಜಿಲ್ಲಾ ನಿರ್ಮಿತಿ ಕೇಂದ್ರದ ಹಾಗೂ ಕೆಆರ್‌ಐಡಿಎಲ್ ಮೂಲಕ ಕಾಮಗಾರಿ ನಿರ್ವಹಿಸಿದೆ. ಹಾಗೂ ಯುಪಿಎಸ್, ಬ್ಯಾಟರಿ, ಸ್ವಚ್ಛತಾ ಸಾಮಗ್ರಿ ಸೇರಿದಂತೆ ಇನ್ನಿತರೆ ಸರಕುಗಳನ್ನು ಸಹ ನಿಯಮಾನುಸಾರ ಖರೀದಿ ಮಾಡಿದೆ ಎಂದು ಕ್ಲೀನ್ ಚಿಟ್ ನೀಡಿರುವುದು ವರದಿಯಿಂದ ಗೊತ್ತಾಗಿದೆ.