ಕುಲಪತಿ ನೇಮಕ ಪ್ರಕ್ರಿಯೆಗೆ 8 ಲಕ್ಷ ಖರ್ಚು; ಶೋಧನಾ ಸಮಿತಿ ಸದಸ್ಯರಿಗೆ 10 ಸೂಟ್‌ಕೇಸ್‌ ಖರೀದಿ

ಬೆಂಗಳೂರು; ದಾವಣಗೆರೆ ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿ ನೇಮಕಗೊಳಿಸಲು ಶೋಧನಾ ಸಮಿತಿಯು ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲೇ ವಿಶ್ವವಿದ್ಯಾಲಯದ ಅಧಿಕಾರಿಗಳು 10 ಸೂಟ್‌ಕೇಸ್‌ಗಳನ್ನು ಖರೀದಿಸಿದ್ದರು. ಆದರೆ ಈ ಸೂಟ್‌ಕೇಸ್‌ಗಳನ್ನು ಯಾರಿಗೆ, ಯಾವ ಕಾರಣಕ್ಕೆ ನೀಡಲಾಗಿತ್ತು, ಯಾವ ಉದ್ದೇಶಕ್ಕೆ ಬಳಸಲಾಗಿತ್ತು ಎಂಬುದನ್ನು ವಿಶ್ವವಿದ್ಯಾಲಯ ಅಧಿಕಾರಿಗಳು ಮುಚ್ಚಿಟ್ಟಿರುವುದನ್ನು ಸಿಂಡಿಕೇಟ್‌ ಸದಸ್ಯರೇ ಇದೀಗ ಬಹಿರಂಗಗೊಳಿಸಿದ್ದಾರೆ.

 

ವಿಶ್ವವಿದ್ಯಾಲಯಗಳ ಕುಲಪತಿ ಆಯ್ಕೆಯಲ್ಲಿ ಹಣದ ವಹಿವಾಟು ನಡೆಯುತ್ತಿದೆ ಎಂಬ ಗುರುತರ ಆರೋಪಗಳು ಕೇಳಿ ಬರುತ್ತಿರುವ ನಡುವೆಯೇ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಆಯ್ಕೆ ಪ್ರಕ್ರಿಯೆ ವೇಳೆಯಲ್ಲಿ ವಿ ವಿ ಅಧಿಕಾರಿಗಳು 10 ಸೂಟ್‌ಕೇಸ್‌ಗಳನ್ನು ಖರೀದಿಸಿದ್ದರು. ಮತ್ತು ಶೋಧನಾ ಸಮಿತಿಯ ಖರ್ಚು ವೆಚ್ಚಗಳಿಗಾಗಿ ಸಿಂಡಿಕೇಟ್‌ ಅನುಮೋದನೆಯಿಲ್ಲದೆಯೇ ಮುಂಗಡವಾಗಿ ಎ ಸಿ ಬಿಲ್‌ನಲ್ಲಿ 5.00 ಲಕ್ಷ ರು.ಗಳನ್ನು ವಿವಿ ಅಧಿಕಾರಿಗಳು ಪಡೆದಿದ್ದರು.

 

ಶೋಧನಾ ಸಮಿತಿಯ ಸದಸ್ಯರುಗಳಿಗೆ ಬ್ಯುಸಿನೆಸ್‌ ಕ್ಲಾಸ್‌ ವಿಮಾನಯಾನ ದರ ಪಾವತಿಸಲಾಗಿತ್ತು. ನೂತನ ಕುಲಪತಿಗಳ ಆಯ್ಕೆಗೆ ಸಂಬಂಧಿಸಿದಂತೆ ಒಟ್ಟು 8,06,209 ರು.ಗಳನ್ನು ಖರ್ಚು ಮಾಡಲಾಗಿತ್ತು ಎಂಬುದನ್ನು ಸಿಂಡಿಕೇಟ್‌ ಉಪ ಸಮಿತಿಯ ಅಧ್ಯಕ್ಷ ಡಾ ಶ್ರೀಧರ್‌ ಎಸ್‌ ನೇತೃತ್ವದ ಸಮಿತಿಯ ಸದಸ್ಯರು ಬಯಲಿಗೆಳೆದಿದ್ದಾರೆ.

 

ವಿಶ್ವವಿದ್ಯಾಲಯದ ನೂತನ ಕುಲಪತಿಗಳ ಆಯ್ಕೆಗಾಗಿ ಶೋಧನಾ ಸಮಿತಿಯ ಖರ್ಚುವೆಚ್ಚಗಳ ಪರಿಶೀಲನೆಗೆ ಸಂಬಂಧಿಸಿದಂತೆ 2022ರ ಸೆ.7ರಂದು ಸಿಂಡಿಕೇಟ್‌ ಉಪ ಸಮಿತಿ ಸಭೆ ನಡೆದ ವೇಳೆಯಲ್ಲಿ ಸೂಟ್‌ಕೇಸ್‌ ಖರೀದಿ ಸೇರಿದಂತೆ ಶೋಧನಾ ಸಮಿತಿಯ ಖರ್ಚು ವೆಚ್ಚಗಳ ಕುರಿತಂತೆ ಚರ್ಚೆ ನಡೆದಿತ್ತು. ಅಲ್ಲದೇ ಇದೇ ಸಮಿತಿಯು ಹಲವು ನ್ಯೂನತೆಗಳನ್ನು ಗಮನಿಸಿತ್ತು. ಸಿಂಡಿಕೇಟ್‌ ಉಪ ಸಮಿತಿಯ ಸಭೆ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಸಿಂಡಿಕೇಟ್‌ ಉಪ ಸಮಿತಿ ಸಭೆ ನಡವಳಿ ಪ್ರತಿ

 

ಶೋಧನಾ ಸಮಿತಿಯ ಖರ್ಚು ವೆಚ್ಚಗಳ ಹೆಸರಿನಲ್ಲಿ 10 ಸೂಟ್‌ಕೇಸ್‌ಗಳನ್ನು ಖರೀದಿಸಲಾಗಿತ್ತಾದರೂ ಇವುಗಳನ್ನು ಯಾರಿಗೆ, ಯಾವ ಕಾರಣಕ್ಕಾಗಿ ನೀಡಲಾಗಿತ್ತು ಎಂಬ ಕುರಿತು ವಿ ವಿ ಅಧಿಕಾರಿಗಳು ಮಾಹಿತಿ ನೀಡಿರಲಿಲ್ಲ ಎಂದು ನಡವಳಿಯಿಂದ ತಿಳಿದು ಬಂದಿದೆ.

 

’10 ಸೂಟ್‌ಕೇಸ್‌ಗಳನ್ನು ಖರೀದಿಸಲಾಗಿದ್ದು, ಇವುಗಳನ್ನು ಯಾರಿಗೆ, ಯಾವ ಕಾರಣಕ್ಕಾಗಿ ನೀಡಲಾಯಿತು ಎಂಬ ಬಗ್ಗೆ ಮಾಹಿತಿ ಲಭ್ಯವಿರುವುದಿಲ್ಲ. ಸೂಟ್‌ಕೇಸ್‌ಗಳನ್ನು ಯಾವ ಉದ್ದೇಶಕ್ಕಾಗಿ ಬಳಸಲಾಯಿತು ಎಂಬ ಕುರಿತಂತೆ ಮಾಹಿತಿ ಲಭ್ಯವಿಲ್ಲ,’ ಎಂದು ಉಪ ಸಮಿತಿ ಸದಸ್ಯರು ಪ್ರಸ್ತಾಪಿಸಿದ್ದಾರೆ.

 

ಅಲ್ಲದೇ ಶೋಧನಾ ಸಮಿತಿಯ ಸದಸ್ಯರಿಗೆ ಲೇಖನ ಸಾಮಗ್ರಿಗಳಿಗಾಗಿ 92,285 ರು., ಲೆದರ್‌ ಬ್ಯಾಗ್‌ಗಳ ಖರೀದಿಗೆ 99,946 ರು. ಮತ್ತು ಸೂಟ್‌ಕೇಸ್‌ಗಳ ಖರೀದಿಗಾಗಿ 99,120 ರು. ಸೇರಿ ಒಟ್ಟು 2,91,351 ರು. ವೆಚ್ಚವಾಗಿತ್ತು.

 

ಶೋಧನಾ ಸಮಿತಿ ಸದಸ್ಯರಿಗಾಗಿ ವೆಚ್ಚ ಮಾಡಲಾಗಿದ್ದ ವಸತಿ, ಊಟ, ವಾಹನ ಖರ್ಚು, ಸಮಿತಿಗೆ ಸಹಕರಿಸಲು ತೆರಳಿದ್ದ ಸಿಬ್ಬಂದಿಯ ಊಟ, ವಸತಿ, ವಾಹನ ಜೊತೆಗೆ ಒಟ್ಟು 70,000 ರು. ಊಟದ ವೆಚ್ಚ ತೋರಿಸಲಾಗಿದೆ. ಇದು ಯಾವ ಉದ್ದೇಶಕ್ಕೆ ಮತ್ತು ಯಾರಿಗೆ ಊಟೋಪಚಾರ ನೀಡಲಾಯಿತು ಎಂಬ ಮಾಹಿತಿಯೂ ಇಲ್ಲ ಎಂದು ಸಭೆಯ ನಡವಳಿಯಲ್ಲಿ ದಾಖಲಾಗಿದೆ.

 

‘ಶೋಧನಾ ಸಮಿತಿಯ ಖರ್ಚು ವೆಚ್ಚಗಳಿಗಾಗಿ ಭರಿಸಬಹುದಾದ ಅಂದಾಜು ವೆಚ್ಚದ ವಿವರಗಳನ್ನು ಸಿಂಡಿಕೇಟ್‌ ಗಮನಕ್ಕೆ ತಂದಿರುವುದಿಲ್ಲ. ಅಲ್ಲದೆ ಶೋಧನಾ ಸಮಿತಿಯ ಸದಸ್ಯರುಗಳಿಗೆ ಸರ್ಕಾರಿ ಕೆಸಿಎಸ್‌ಆರ್‌ ನಿಯಮಗಳನ್ವಯ ಎಕಾನಮಿ ಕ್ಲಾಸ್‌ ವಿಮಾನಯಾನ ವೆಚ್ಚ ಪಾವತಿಸಬಹುದಾಗಿದ್ದು ಬ್ಯುಸಿನೆಸ್‌ ಕ್ಲಾಸ್‌ ವಿಮಾನಯಾನ ದರಗಳನ್ನು ಪಾವತಿಸಿರುವುದು ಹೆಚ್ಚಿನ ವೆಚ್ಚ ಭರಿಸಿದಂತಾಗಿರುತ್ತದೆ,’ ಎಂದು ಸಮಿತಿ ಸದಸ್ಯರು ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.

 

‘ವಿಶ್ವವಿದ್ಯಾಲಯದ ನೂತನ ಕುಲಪತಿಗಳ ಆಯ್ಕೆ ಸಂಬಂಧಿಸಿದಂತೆ ಒಟ್ಟು 8,06,209 ರು.ಗಳನ್ನು ಖರ್ಚು ಮಾಡಲಾಗಿದ್ದು ಅಗತ್ಯಕ್ಕಿಂತ ಹೆಚ್ಚಿಗೆ ಮೊತ್ತವನ್ನು ಭರಿಸಿದಂತಾಗಿದೆ. ಕುಲಪತಿಗಳ ಆಯ್ಕೆಗೆ ಸಂಬಂಧಪಟ್ಟಂತೆ ಶೋಧನಾ ಸಮಿತಿಯ ಖರ್ಚು ವೆಚ್ಚಗಳ ವಿವರಗಳ ಕುರಿತಂತೆ ನಿಯಮಾವಳಿಗಳನ್ನು ರೂಪಿಸಿಕೊಂಡು ಸಿಂಡಿಕೇಟ್‌ ಅನುಮೋದನೆಯನ್ನು ಪಡೆದುಕೊಳ್ಳಬೇಕು,’ ಎಂದು ಸಮಿತಿಯು ಶಿಫಾರಸ್ಸು ಮಾಡಿದೆ.

 

ದಾವಣಗೆರೆ ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಯನ್ನು ಆಯ್ಕೆ ಮಾಡಲು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ. ತುಳಸಿಮಾಲಾ ನೇತೃತ್ವದ ನಾಲ್ವರು ಸದಸ್ಯರನ್ನು ಒಳಗೊಂಡ ಶೋಧನಾ ಸಮಿತಿಯನ್ನು ರಚಿಸಲಾಗಿತ್ತು.

 

ಅಲ್ಲದೇ ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್‌ನಿಂದ ನಾಮನಿರ್ದೇಶನ ಗೊಂಡಿದ್ದ ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ವಿ. ಕಟ್ಟಿಮನಿ, ರಾಜ್ಯಪಾಲರಿಂದ ನಾಮನಿರ್ದೇಶನಗೊಂಡಿದ್ದ ಮಧ್ಯ ಪ್ರದೇಶ ಸರ್ಕಾರದ ಶಾಲಾ ಪ್ರವೇಶ ಹಾಗೂ ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷ ರವೀಂದ್ರ ರಾಮಚಂದ್ರ ಕನ್ಹರೆ ಹಾಗೂ ಯುಜಿಸಿಯಿಂದ ನಾಮನಿರ್ದೇಶನ ಗೊಂಡಿದ್ದ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ನಾಗೇಶ್ವರ ರಾವ್‌ ಇದ್ದರು.

 

ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಿಂದ ಬೇರ್ಪಟ್ಟು 2009ರಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಸ್ಥಾಪನೆಗೊಂಡ ಬಳಿಕ ಇದುವರೆಗೆ ಮೂವರು ಕುಲಪತಿಗಳು ಸೇವೆ ಸಲ್ಲಿಸಿದ್ದಾರೆ. ಎಸ್‌.ಇಂದುಮತಿ ಅವರು ಮೊದಲ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಬಿ.ಬಿ. ಕಲಿವಾಳ್‌ ಅವರು ಎರಡನೇ ಕುಲಪತಿಯಾಗಿ ನೇಮಕಗೊಂಡಿದ್ದರು. ಆ ಬಳಿಕ ಪ್ರೊ.ಶರಣಪ್ಪ ವಿ. ಹಲಸೆ ಅವರು ಕುಲಪತಿಯಾಗಿ ನೇಮಕಗೊಂಡಿದ್ದು, ಮಾರ್ಚ್‌ನಲ್ಲಿ ಅವಧಿ ಪೂರ್ಣಗೊಳಿಸಿದ್ದರು. ಸದ್ಯ ಹಲಸೆ ಅವರು ಇದೀಗ ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿಯಾಗಿ ಇತ್ತೀಚೆಗಷ್ಟೇ ನೇಮಕಗೊಂಡಿದ್ದಾರೆ.

the fil favicon

SUPPORT THE FILE

Latest News

Related Posts