ನ್ಯಾಕ್‌ ಸಮಿತಿ ಪರಿಶೀಲನೆ ಪ್ರಕ್ರಿಯೆಗೆ 2 ಕೋಟಿಗೂ ಹೆಚ್ಚು ವೆಚ್ಚ; ವರದಿ ನೀಡಲು ನಿರ್ದೇಶನ ನೀಡಿದ ಸರ್ಕಾರ

ಬೆಂಗಳೂರು; ದಾವಣಗೆರೆ ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿ ನೇಮಕಗೊಳಿಸಲು ಶೋಧನಾ ಸಮಿತಿಯು ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲೇ ವಿಶ್ವವಿದ್ಯಾಲಯದ ಅಧಿಕಾರಿಗಳು 10 ಸೂಟ್‌ಕೇಸ್‌ಗಳನ್ನು ಖರೀದಿಸಲಾಗಿತ್ತು ಎಂದು ‘ದಿ ಫೈಲ್‌’ ಪ್ರಕಟಿಸಿದ ವರದಿ ಚರ್ಚೆ ಹುಟ್ಟುಹಾಕಿರುವ ಬೆನ್ನಲ್ಲೇ ಇದೇ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ನ್ಯಾಕ್‌ ಸಮಿತಿಯು ಭೇಟಿ ನೀಡಿದಾಗಲೂ 2 ಕೋಟಿ ರು.ಗೂ ಹೆಚ್ಚು ಹಣವನ್ನು ಖರ್ಚು ಮಾಡಲಾಗಿತ್ತು ಎಂಬುದು ಇದೀಗ ಬಹಿರಂಗಗೊಂಡಿದೆ.

 

ನ್ಯಾಕ್‌ ಸಮಿತಿಗೆ ಎಷ್ಟೆಷ್ಟು ಹಣ ಖರ್ಚಾಗಿದೆ ಎಂಬುದನ್ನು ಪತ್ತೆ ಹಚ್ಚಿರುವ ವಿಶ್ವವಿದ್ಯಾಲಯದ ಸಿಂಡಿಕೇಟ್‌ನ ಉಪ ಸಮಿತಿಯ ಸದಸ್ಯರು ವಿ ವಿ ಬೊಕ್ಕಸದಿಂದ ಹಣ ಹೇಗೆ ಲೂಟಿಯಾಗುತ್ತಿದೆ ಎಂಬುದನ್ನೂ ಹೊರಗೆಳೆದಿದ್ದಾರೆ. ಸಿಂಡಿಕೇಟ್‌ ಸದಸ್ಯರುಗಳು ನೀಡಿದ್ದ ದೂರನ್ನಾಧರಿಸಿ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಈ ಸಂಬಂಧ ಒಂದು ವಾರದೊಳಗೆ ವರದಿ ಸಲ್ಲಿಸಬೇಕು ಎಂದು 2022ರ ನವೆಂಬರ್‌ 10ರಂದೇ ನಿರ್ದೇಶನ ನೀಡಿದ್ದಾರೆ. ವಿಶ್ವವಿದ್ಯಾಲಯದ ಕುಲಸಚಿವರಿಗೆ ನಿರ್ದೇಶನ ನೀಡಿರುವ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಅಕ್ರಮ ನೇಮಕಾತಿ, ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಸಿಂಡಿಕೇಟ್‌ ಮತ್ತು ಸರ್ಕಾರದ ಗಮನಕ್ಕೆ ಬಾರದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಸಿಂಡಿಕೇಟ್‌ ಸದಸ್ಯರು ಸಲ್ಲಿಸಿರುವ ದೂರಿನಲ್ಲಿನ ಪ್ರತಿಯೊಂದು ಅಂಶಗಳಿಗೆ ಕಂಡಿಕೆವಾರು ಮಾಹಿತಿ/ವರದಿಯನ್ನು ಒಂದು ವಾರದೊಳಗೆ ನೀಡಬೇಕು,’ ಎಂದು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶೀತಲ್‌ ಎಂ ಹಿರೇಮಠ ಅವರು ಸೂಚಿಸಿದ್ದಾರೆ.

 

ನ್ಯಾಕ್‌ ಸಮಿತಿ ಭೇಟಿ ಮತ್ತು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಆಗಿರುವ ವೆಚ್ಚವನ್ನು ಪರಿಶೀಲಿಸಿರುವ ಸಿಂಡಿಕೇಟ್‌ ಉಪ ಸಮಿತಿ ಸದಸ್ಯರುಗಳು ವೆಚ್ಚಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಪಾಲಿಸಿಲ್ಲ ಎಂಬುದನ್ನೂ ಪತ್ತೆ ಹಚ್ಚಿದ್ದಾರೆ.

 

8ನೇ ಘಟಿಕೋತ್ಸವಕ್ಕೆ ಶಾಮೀಯಾನಕ್ಕೆ ಹೆಚ್ಚುವರಿಯಾಗಿ 5,86,548 ರು., ಊಟೋಪಚಾರಕ್ಕೆಂದು 1,87, 030 ರು. ವೆಚ್ಚ ಮಾಡಲಾಗಿದೆ. 9ನೇ ಘಟಿಕೋತ್ಸವಕ್ಕೆ ಸಂಬಂಧಿಸಿದಂತೆ ಶಾಮೀಯಾನಕ್ಕೆ 6,39,029 ರು., ಊಟೋಪಚಾರಕ್ಕೆಂದು 3,98,899 ರು.ಗಳನ್ನು ಹೆಚ್ಚುವರಿಯಾಗಿ ವೆಚ್ಚ ಮಾಡಲಾಗಿದೆ ಎಂದು ಸಿಂಡಿಕೇಟ್‌ ಉಪ ಸಮಿತಿ ಸದಸ್ಯರುಗಳು ಬಹಿರಂಗಗೊಳಿಸಿದ್ದಾರೆ.

 

ಇದಲ್ಲದೇ ಸರ್ಕಾರದ ಜತೆ ಸಮಾಲೋಚನೆ ನಡೆಸದೆಯೇ 10 ಬೋಧಕೇತರ ಹುದ್ದೆಗಳಿಗೆ ಸಂಬಂಧಿಸಿದಂತೆ ಅಧಿಸೂಚನೆಯನ್ನು 2022ರ ಸೆ.19ರಂದು ಪ್ರಕಟಿಸಲಾಗಿದೆ. ಈ ಹುದ್ದೆಗಳಿಗೆ 2016,2017, 2018ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತಲ್ಲದೇ ಈಗಾಗಲೇ ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆಯೂ ನಡೆಸಲಾಗಿದೆ. ಅರ್ಹತಾ ಪಟ್ಟಿ ಸಿದ್ಧಗೊಂಡಿದ್ದರೂ ಇನ್ನೂ ಪ್ರಕಟಿಸಿಲ್ಲ ಎಂದು ಸಿಂಡಿಕೇಟ್‌ ಸದಸ್ಯರುಗಳು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

 

ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಆಯ್ಕೆ ಪ್ರಕ್ರಿಯೆ ವೇಳೆಯಲ್ಲಿ ವಿ ವಿ ಅಧಿಕಾರಿಗಳು 10 ಸೂಟ್‌ಕೇಸ್‌ಗಳನ್ನು ಖರೀದಿಸಿದ್ದರು. ಮತ್ತು ಶೋಧನಾ ಸಮಿತಿಯ ಖರ್ಚು ವೆಚ್ಚಗಳಿಗಾಗಿ ಸಿಂಡಿಕೇಟ್‌ ಅನುಮೋದನೆಯಿಲ್ಲದೆಯೇ ಮುಂಗಡವಾಗಿ ಎ ಸಿ ಬಿಲ್‌ನಲ್ಲಿ 5.00 ಲಕ್ಷ ರು.ಗಳನ್ನು ವಿವಿ ಅಧಿಕಾರಿಗಳು ಪಡೆದಿದ್ದರು.

ಕುಲಪತಿ ನೇಮಕ ಪ್ರಕ್ರಿಯೆಗೆ 8 ಲಕ್ಷ ಖರ್ಚು; ಶೋಧನಾ ಸಮಿತಿ ಸದಸ್ಯರಿಗೆ 10 ಸೂಟ್‌ಕೇಸ್‌ ಖರೀದಿ

ಹಾಗೂ ಶೋಧನಾ ಸಮಿತಿಯ ಸದಸ್ಯರುಗಳಿಗೆ ಬ್ಯುಸಿನೆಸ್‌ ಕ್ಲಾಸ್‌ ವಿಮಾನಯಾನ ದರ ಪಾವತಿಸಲಾಗಿತ್ತು. ನೂತನ ಕುಲಪತಿಗಳ ಆಯ್ಕೆಗೆ ಸಂಬಂಧಿಸಿದಂತೆ ಒಟ್ಟು 8,06,209 ರು.ಗಳನ್ನು ಖರ್ಚು ಮಾಡಲಾಗಿತ್ತು ಎಂಬುದನ್ನು ಸಿಂಡಿಕೇಟ್‌ ಉಪ ಸಮಿತಿಯ ಅಧ್ಯಕ್ಷ ಡಾ ಶ್ರೀಧರ್‌ ಎಸ್‌ ನೇತೃತ್ವದ ಸಮಿತಿಯ ಸದಸ್ಯರು ಬಯಲಿಗೆಳೆದಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts