ಬಿಬಿಎಂಪಿ ಟಿಡಿಆರ್, ಡಿಆರ್‍‌ಸಿ ಹುತ್ತಕ್ಕೆ ಕೈ ಹಾಕಿದ ಜಾರಿ ನಿರ್ದೇಶನಾಲಯ; ವಲಯ ಆಯುಕ್ತರುಗಳಿಗೆ ಸಮನ್ಸ್‌

ಬೆಂಗಳೂರು; ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊಳವೆ ಬಾವಿಗಳ ಕೊರೆಯುವಿಕೆಯಲ್ಲಿ ನಡೆದಿದೆ ಎನ್ನಲಾದ ಬಹು ಕೋಟಿ ಅಕ್ರಮದ ಕುರಿತು ಈಚೆಗಷ್ಟೇ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇದೀಗ ಬಿಬಿಎಂಪಿಯ ವಲಯಗಳಲ್ಲಿನ ರಸ್ತೆ ಅಗಲೀಕರಣ, ರಸ್ತೆ ವಿಸ್ತರಣೆ ಯೋಜನೆಗಳು ಮತ್ತು ಈ ಸಂಬಂಧ ವಿತರಿಸಿರುವ ಟಿಡಿಆರ್ , ಡಿಆರ್‍‌ಸಿ ಜಾಡನ್ನು ಬೇಧಿಸಲು ಮುಂದಾಗಿದ್ದಾರೆ.

 

ಬೋರ್‍‌ವೆಲ್‌ ಕೊರೆಸುವುದರಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ದಾಖಲೆಗಳ ಕಲೆ ಹಾಕಿ ಬಿಬಿಎಂಪಿಯ  ಒಳ ಪ್ರವೇಶಿಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು,  ಇದೀಗ ನೇರವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನೀಡಿರುವ ಟಿಡಿಆರ್ ಮತ್ತು ಡಿಆರ್‍‌ಸಿ ಹುತ್ತಕ್ಕೆ ಕೈ ಹಾಕಿರುವುದು ಅಧಿಕಾರಿಗಳ ವಲಯದಲ್ಲಿ ನಡುಕ ಶುರುವಾಗಿದೆ.

 

ಈ ಸಂಬಂಧ ಇಡಿ ಅಧಿಕಾರಿಗಳು ಹೆಚ್ಚಿನ ಮಾಹಿತಿ ಬಯಸಿ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದರು. ಅದರನ್ವಯ ಬಿಬಿಎಂಪಿಯ ಭೂ ಸ್ವಾಧೀನ, ಟಿಡಿಆರ್‍‌ನ ಉಪ ಆಯುಕ್ತರು ಬಿಬಿಎಂಪಿಯ ಯಲಹಂಕ ವಲಯ ಸೇರಿದಂತೆ ಇತರೆ ವಲಯಗಳ ಜಂಟಿ ಆಯುಕ್ತರುಗಳಿಗೆ ಸಮನ್ಸ್‌ ಹೊರಡಿಸಿದ್ದಾರೆ. 2025ರ ಜನವರಿ 17ರಂದು ಹೊರಡಿಸಿರುವ ಸಮನ್ಸ್‌ ಗಳ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

2025ರ ಜನವರಿ 8ರಂದು ಬಿಬಿಎಂಪಿಗೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ದಾಖಲೆಗಳ  ತಪಾಸಣೆ ನಡೆಸಿದ್ದರು. ಅಲ್ಲದೇ ಟಿಡಿಆರ್‍‌, ಡಿಆರ್‍‌ಸಿಗೆ ಸಂಬಂಧಿಸಿದಂತೆ ಮಾಹಿತಿ ದಾಖಲೆಗಳನ್ನುಒದಗಿಸಬೇಕು ಎಂದು 2025ರ 13ರಂದು ಇ ಮೈಲ್‌ ಮೂಲಕ ತಿಳಿಸಿದ್ದರು. ಹಾಗೆಯೇ  2025ರ ಜನವರಿ 16ರಂದು ಖುದ್ದು ವಿಚಾರಣೆ ಗೆ ಹಾಜರಾಗಬೇಕು ಎಂದು ಸಮನ್ಸ್‌ ಕೂಡ ನೀಡಿದ್ದರು.

 

ಅದರಂತೆ ವಿಚಾರಣೆ ಸಮಯದಲ್ಲಿ ಟಿಡಿಆರ್‍‌ ಮತ್ತು ಡಿಆರ್‍‌ಸಿಗೆ ಸಂಬಂಧಿಸಿದಂತೆ ತಮ್ಮ  ವಲಯದ ವ್ಯಾಪ್ತಿಯಲ್ಲಿ ಮಾಹಿತಿಗಳನ್ನು ಸಲ್ಲಿಸಬೇಕು ಎಂದು ಬಿಬಿಎಂಪಿಯ ಭೂ ಸ್ವಾಧೀನ ಟಿಡಿಆರ್‍‌ ವಿಭಾಗದ ಉಪ ಆಯುಕ್ತರು ಸಮನ್ಸ್‌ ಹೊರಡಿಸಿದರುವುದು ಗೊತ್ತಾಗಿದೆ.

 

 

ಟಿಡಿಆರ್‍‌ ಯೋಜನೆಗೆ ಸಂಬಂಧಿಸಿದಂತೆ ಬಿಬಿಎಂಪಿಯ ಅಧಿಕಾರಿಗಳ ವಿರುದ್ಧ ಸಲ್ಲಿಕೆಯಾಗಿರುವ ದೂರುಗಳು ಮತ್ತು ಅದರ ಪ್ರತಿಗಳನ್ನು ಒದಗಿಸಬೇಕು. 2005ರಿಂದಲೂ ಇದುವರೆಗೂ ಸಲ್ಲಿಕೆಯಾಗಿರುವ ದೂರು ಮತ್ತು ದೂರುಗಳ ಸ್ಥಿತಿ, ಈ ದೂರುಗಳನ್ನು ಆಧರಿಸಿ ಕೈಗೊಂಡಿರುವ ಕ್ರಮಗಳ ಕುರಿತು ಸಮಗ್ರ ವಿವರ ಒದಗಿಸಬೇಕು ಎಂದು ಸೂಚಿಸಲಾಗಿದೆ.

 

 

ಟಿಡಿಆರ್‍‌ ಪ್ರಕರಣದಲ್ಲಿ ಯಾವ್ಯಾವ ಅಧಿಕಾರಿಗಳ ಮೇಲೆ ಎಫ್‌ಐಆರ್‍‌ ದಾಖಲಾಗಿದೆ ಎಂಬ ಕುರಿತು ಮಾಹಿತಿ ಒದಗಿಸಬೇಕು. ಯೋಜನೆ ಹೆಸರು, ಡಿಆರ್‍‌ಸಿ ನಂ, ಜಿಪಿಎ ಹೋಲ್ಡರ್‍‌, ಟಿಡಿಆರ್‍‌ ಮೌಲ್ಯ, ಆಸ್ತಿ ವಿವರಗಳು, ಸ್ವಾಧೀನದ ದಿನಾಂಕ ಮತ್ತು ಟಿಡಿಆರ್‍‌ ಬಳಕೆ ಆಗಿರುವ ಕುರಿತು ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿದೆ.

 

ಟಿಡಿಆರ್‍‌ ಯೋಜನೆಯಲ್ಲಿ ಯಾವ್ಯಾವ ಅಧಿಕಾರಿಗಳು ಭಾಗಿ ಆಗಿದ್ದಾಋಎ ಎಂಬು ಮತ್ತು ಅವರು ಈಗ ಯಾವ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿಯನ್ನೂ ಬಯಸಿರುವ ಇ ಡಿ  ಅಧಿಕಾರಿಗಳು ಅದೇ ರೀತಿ ರಸ್ತೆ ಅಗಲೀಕರಣ, ರಸ್ತೆ ವಿಸ್ತರಣೆ ಯ ಯೋಜನೆಗಳು ಮತ್ತು ಯಾರ್‍ಯಾರಿಗೆ ಟಡಿಆರ್‍‌ ಗಳನ್ನು ವಿತರಿಸಲಾಗಿದೆ ಎಂಬ ವಿವರಗಳನ್ನು ನೀಡಬೇಕು ಎಂದು ಸೂಚಿಸಿರುವುದು ಗೊತ್ತಾಗಿದೆ.

 

 

ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಬೋರ್‌ವೆಲ್‌ ಕೊರೆಯುವ ಪ್ರಕ್ರಿಯೆಯಲ್ಲಿನಡೆದಿದ್ದ ಸುಮಾರು 400 ಕೋಟಿ ರೂ. ಅಕ್ರಮ ಆರೋಪ ಪ್ರಕರಣದ ಕುರಿತು  ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ಚುರುಕುಗೊಳಿಸಿದ್ದರು.  ಪಾಲಿಕೆ ಕಚೇರಿಗಳು ಹಾಗೂ ಅಧಿಕಾರಿಗಳ ನಿವಾಸಗಳಲ್ಲಿ ದಾಳಿ ನಡೆಸಿದ್ದ ಇ.ಡಿ ಅಧಿಕಾರಿಗಳು ಮಹತ್ವದ ಕಡತಗಳನ್ನು ಜಪ್ತಿ ಮಾಡಿದ್ದರು.

 

ಬಿಬಿಎಂಪಿ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದ ಇ.ಡಿ ತಂಡ, ಪಾಲಿಕೆ ಪ್ರಧಾನ ಎಂಜಿನಿಯರ್‌ ಬಿ.ಎಸ್‌. ಪ್ರಹ್ಲಾದ್‌ ಅವರ ಸಮ್ಮುಖದಲ್ಲಿಯೇ ಕಡತಗಳ ಪರಿಶೀಲನೆ ನಡೆಸಿತ್ತು.   2016ರಿಂದ 2019ರ ನಡುವಣ ಅವಧಿಯಲ್ಲಿಪಾಲಿಕೆ ವ್ಯಾಪ್ತಿಯಲ್ಲಿಕುಡಿಯುವ ನೀರಿನ ಸೌಲಭ್ಯ ಸಲುವಾಗಿ ಕೊರೆದ ಬೋರ್‌ವೆಲ್‌ಗಳು, ಟೆಂಡರ್‌ ಪ್ರಕ್ರಿಯೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ಅಳವಡಿಕೆ ಕುರಿತ ಸಮಗ್ರ ಮಾಹಿತಿಯನ್ನು ತನಿಖಾ ತಂಡ ಪಡೆದಿತ್ತು.

 

ಅಕ್ರಮದ ಆರೋಪ ಕೇಳಿ ಬಂದಿದ್ದ ಅವಧಿಯಲ್ಲಿದ್ದ ಪಾಲಿಕೆಯ ಐದು ವ್ಯಾಪ್ತಿಯ ಎಂಜಿನಿಯರ್‌ಗಳೂ ಸೇರಿದಂತೆ ಇನ್ನಿತರೆ ಅಧಿಕಾರಿಗಳ ಕುರಿತು ಇ.ಡಿ ಮಾಹಿತಿ ಪಡೆದಿದೆ. ಯಾವ್ಯಾವ ವಲಯದಲ್ಲಿಎಷ್ಟೆಷ್ಟು ಬೋರ್‌ವೆಲ್‌ ಕೊರೆಯಲಾಗಿದೆ,  ಎಷ್ಟು ಅನುದಾನ ಬಿಡುಗಡೆ ಮಾಡಲಾಗಿತ್ತು,  ಎಷ್ಟು ಮೊತ್ತಕ್ಕೆ ಟೆಂಡರ್‌ ಕರೆಯಲಾಗಿತ್ತು,  ಟೆಂಡರ್‌ ಪಡೆದವರ ವಿವರ ಸೇರಿದಂತೆ ಇನ್ನಿತರೆ ಮಾಹಿತಿಯನ್ನು ಇ.ಡಿ ತಂಡ ಪಡೆದಿದೆ ಎಂದು ಗೊತ್ತಾಗಿದೆ.

 

ಪಾಲಿಕೆಯ ಬೊಮ್ಮನಹಳ್ಳಿ, ರಾಜರಾಜೇಶ್ವರಿನಗರ, ಯಲಹಂಕ, ಮಹದೇವಪುರ, ದಾಸರಹಳ್ಳಿ ವಲಯದಲ್ಲಿ2016ರಿಂದ 2019ರ ಅವಧಿಯಲ್ಲಿಬೋರ್‌ವೆಲ್‌ ಕೊರೆಯುವುದು ಹಾಗೂ ಆರ್‌ಒ ಘಟಕಗಳ ಅನುಷ್ಠಾನದಲ್ಲಿನೂರಾರು ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್‌.ಆರ್‌. ರಮೇಶ್‌ 2020ರಲ್ಲಿ 273 ದಾಖಲೆಗಳ ಸಮೇತ ಎಸಿಬಿಯಲ್ಲಿ ದೂರು ದಾಖಲಿಸಿದ್ದರು. ಇ.ಡಿಗೂ ಪ್ರತ್ಯೇಕ ದೂರು ಸಲ್ಲಿಸಿದ್ದನ್ನು ಸ್ಮರಿಸಬಹುದು.

 

ಈ ಕುರಿತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರು ಇ ಡಿ ಅಧಿಕಾರಿಗಳ ದಾಳಿ ಸುಳಿವನ್ನು ಊಹಿಸಿದ್ದರು. ಅಲ್ಲದೇ ಇ ಡಿ ಕೇಳುವ ಎಲ್ಲಾ ಮಾಹಿತಿಗಳನ್ನು ಒದಗಿಸಬೇಕು ಎಂದು ಸೂಚಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts