ಬೆಂಗಳೂರು; ಕೋಲಾರ ಅರಣ್ಯ ವಿಭಾಗದಲ್ಲಿನ ಜಿನಗುಲಕುಂಟೆ ಅರಣ್ಯ ಪ್ರದೇಶದಲ್ಲಿನ 61.39 ಎಕರೆ ಒತ್ತುವರಿಗೆ ಸಂಬಂಧಿಸಿದಂತೆ ತಕ್ಷಣವೇ ಜಂಟಿ ಸರ್ವೆ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದು ಬೆಂಗಳೂರು ಪ್ರಾದೇಶಿಕ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಯವರು ಕೋಲಾರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ಅರಣ್ಯ ಪ್ರದೇಶಗಳ ಒತ್ತುವರಿ ಸಂಬಂಧ ಸಚಿವ ಈಶ್ವರ್ ಖಂಡ್ರೆ ಅವರು ಈಚೆಗಷ್ಟೇ ಸೂಚಿಸಿದ್ದರು. ಈ ಬೆಳವಣಿಗೆ ನಡುವೆಯೇ ಇದೀಗ ಮಾಜಿ ಸಚಿವ ಹಾಗೂ ಸ್ಪೀಕರ್ ಆಗಿದ್ದ ಕೆ ರಮೇಶ್ ಕುಮಾರ್ ಅವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿರುವ 61.39 ಎಕರೆ ಅರಣ್ಯ ಪ್ರದೇಶದ ಕುರಿತು ಜಂಟಿ ಸರ್ವೆ ನಡೆಸಲು ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.
ಬೆಂಗಳೂರು ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಯವರು 2024ರ ಡಿಸೆಂಬರ್ 14ರಂದು ಕೋಲಾರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಅರಣ್ಯ ಇಲಾಖೆಯ ಮತ್ತು ರಮೇಶ್ ಕುಮಾರ್ ಮಧ್ಯೆ ನಡೆಯುತ್ತಿದ್ದ ಕಾನೂನು ಹೋರಾಟ ಇದೀಗ ತಾರ್ಕಿಕ ಹಂತಕ್ಕೆ ಬಂದು ತಲುಪಿದೆ.
ಒತ್ತುವರಿಯಾಗಿದೆ ಎಂದು ಹೇಳಲಾಗಿರುವ ಜಿನಗುಲಕುಂಟೆ ಅರಣ್ಯ ಪ್ರದೇಶವನ್ನು 2024ರ ಡಿಸೆಂಬರ್ 20ರಂದು ಬೆಳಿಗ್ಗೆ ಜಂಟಿ ಸರ್ವೆ ನಡೆಸಲು ಮುಂದಾಗಿದೆ. ಇದೇ ದಿನದಂದು ರಮೇಶ್ ಕುಮಾರ್ ಅವರೂ ಸಹ ದಾಖಲೆಗಳೊಂದಿಗೆ ಹಾಜರಾಗಬೇಕು ಎಂದು ಸೂಚಿಸಿದೆ.
ಕೋಲಾರ ವಿಭಾಗದ ಶ್ರೀನಿವಾಸಪುರ ವಲಯದ ಜಿನಗಲಕುಂಟೆ ಅರಣ್ಯ ಪ್ರದೇಶದ ಹೊಸ ಹುಡ್ಯ ಗ್ರಾಮದ ಸರ್ವೆ ನಂಬರ್ 1 ಮತ್ತು 2ರಲ್ಲಿ 61.39 ಎಕರೆ ಅರಣ್ಯ ಪ್ರದೇಶವು ಒತ್ತುವರಿಯಾಗಿದೆ. ಈ ಕುರಿತು ನ್ಯಾಯಾಲಯದಲ್ಲಿ ರಿಟ್ ಅರ್ಜಿ ಕೂಡ (ಸಂಖ್ಯೆ; 12996/2012) ದಾಖಲಾಗಿತ್ತು. ಈ ಕುರಿತು ಜಂಟಿ ಸರ್ವೆಯನ್ನು ಶೀಘ್ರವಾಗಿ ಕೈಗೆತ್ತಿಗೊಳ್ಳಬೇಕು ಎಂದು ಹೈಕೋರ್ಟ್ 2013ರ ಜುಲೈ 11ರಂದು ಆದೇಶ ಹೊರಡಿಸಿತ್ತು.
ಅಲ್ಲದೇ ಈ ವರದಿಯ ಅನುಸಾರ ಅರಣ್ಯ ಪ್ರದೇಶದ ಒತ್ತುವರಿ ಇದ್ದಲ್ಲಿ ನಿಯಮಾನುಸಾರ ಒತ್ತುವರಿ ತೆರವುಗೊಳಿಸಿ ಕೈಗೊಂಡದ ಕ್ರಮದ ಬಗ್ಗೆ ವರದಿ ಸಲ್ಲಿಸಬೇಕು ಎಂದು ಕೆಂದ್ರ ಸರ್ಕಾರವೂ ಸಹ ಸೂಚಿಸಿತ್ತು. ಆದರೆ ಜಂಟಿ ಸರ್ವೆ ಕಾರ್ಯಕ್ಕೆ ಚಾಲನೆ ದೊರೆತಿರಲಿಲ್ಲ. ಹೀಗಾಗಿ ಬೆಂಗಳೂರು ಪ್ರಾದೇಶಿಕ ಅರಣ್ಯ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಯವರು ಅತಿ ಜರೂರು ಎಂದು ನೆನಪೋಲೆ ಬರೆದಿರುವುದು ಗೊತ್ತಾಗಿದೆ.
ಕೋಲಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು 2024ರ ನವೆಂಬರ್ 6ರಂದು ಜಂಟಿ ಸರ್ವೆಗೆ ದಿನಾಂಕ ನಿಗದಿಪಡಿಸಿದ್ದರು. ಆದರೆ ತಾಂತ್ರಿಕ ಕಾರಣಗಳಿಂದ ಅದನ್ನು ಹಿಂಪಡೆದುಕೊಂಡಿತ್ತು. ಅಲ್ಲದೇ ಪ್ರಸ್ತಾಪಿತ ಪ್ರದೇಶದ ಜಂಟಿ ಮೋಜಣಿ ಕಾರ್ಯವನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಸಹ ವರದಿ ಮಾಡಿದ್ದರು.
ಈ ಪ್ರಕರಣದಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ತುರ್ತಾಗಿ ವರದಿ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹಲವಾರು ಪತ್ರಗಳನ್ನು ಬರೆದಿತ್ತು.
ಅಲ್ಲದೇ ನಿಗದಿತ ಅವಧಿಯೊಳಗೆ ವರದಿ ಸಲ್ಲಿಕೆಯಾಗಿಲ್ಲ ಎಂದು ಕೇಂದ್ರ ಸರ್ಕಾರವು ಸಹ ಅಸಮಾಧಾನ ಹೊರಹಾಕಿ 2024ರ ಡಿಸೆಂಬರ್ 6 ರಂದೇ ಪತ್ರ ಬರೆದಿತ್ತು.
ಅಲ್ಲದೇ ಡಿಸೆಂಬರ್ 12ರಂದೂ ಮತ್ತೊಂದು ಪತ್ರ ಬರೆದಿತ್ತು.
ಹೀಗಾಗಿ ಹೈಕೋರ್ಟ್ 2013ರಲ್ಲೇ ನೀಡಿರುವ ಆದೇಶದಂತೆ ಜಂಟಿ ಸರ್ವೆ ನಡೆಸಲು ಸೂಕ್ತ ದಿನಾಂಕ ನಿಗದಿಪಡಿಸಬೇಕು ಎಂದು ಪತ್ರದಲ್ಲಿ ಸೂಚಿಸಿರುವುದು ತಿಳಿದು ಬಂದಿದೆ.
ಅರಣ್ಯ ಒತ್ತುವರಿ ಬಗ್ಗೆ ಆರೋಪದ ಹಿನ್ನಲೆಯಲ್ಲಿ ರಮೇಶ್ ಕುಮಾರ್ ಅವರು ಸ್ವಾಧೀನದಲ್ಲಿದ್ದ ಜಮೀನನ್ನು ದುರಸ್ತಿ ಮಾಡಿಕೊಡುವಂತೆ ಕಂದಾಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಜಮೀನಿನ ಮಾಲಿಕತ್ವಕ್ಕಾಗಿ ದಾಖಲೆಗಳನ್ನು ಮಂಡಿಸಿದ್ದನ್ನು ಸ್ಮರಿಸಬಹುದು.
ಶ್ರೀನಿವಾಸಪುರ ತಾಲೂಕಿನಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿತ್ತು. ಒಟ್ಟು 560 ಎಕರೆ ಅರಣ್ಯ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಸಂರಕ್ಷಿತ ಅರಣ್ಯ ವಲಯದ ಜಾಗವನ್ನು ವಶಕ್ಕೆ ಪಡೆಯಲು ಅರಣ್ಯ ಇಲಾಖೆ ಮುಂದಾಗಿದೆ.