ಜೆಎಸ್‌ಎಸ್‌ ಮಹಾವಿದ್ಯಾಪೀಠಕ್ಕೆ 21.08 ಎಕರೆ ಗೋಮಾಳ; ಪಹಣಿ, ಮ್ಯುಟೇಷನ್‌ ಬದಲಿಗೆ ಸರ್ಕಾರ ಪತ್ರ

ಬೆಂಗಳೂರು;  ದನಗಳು ಮೇಯುವ ಉದ್ದೇಶಕ್ಕೆ ಮೀಸಲಿಟ್ಟು ಕಾಯ್ದಿರಿಸಿರುವ  ಸರ್ಕಾರಿ ಬೀಳು ಪ್ರದೇಶವನ್ನು ಮೈಸೂರಿನ ಜೆಎಸ್‌ಎಸ್‌ ಮಹಾವಿದ್ಯಾಪೀಠದ ಅಧ್ಯಕ್ಷರ ಹೆಸರಿನಲ್ಲಿ  ಪಹಣಿ, ಮ್ಯುಟೇಷನ್‌ಗಳಲ್ಲಿ ನಮೂದಿಸಲು ಸರ್ಕಾರದ ಮಟ್ಟದಲ್ಲಿ  ಪತ್ರ ವ್ಯವಹಾರ ನಡೆದಿರುವುದು ಇದೀಗ ಬಹಿರಂಗವಾಗಿದೆ.

 

ಈ ಸಂಬಂಧ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್‍‌ ಕುಮಾರ್‍‌ ಕಟಾರಿಯಾ ಅವರು 2024ರ ಆಗಸ್ಟ್‌ 14ರಂದು ವಿಜಯಪುರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕಲ್ಬುರ್ಗಿಯ ಸಿಂಧಗಿ (ಬಿ ) ಗ್ರಾಮದಲ್ಲಿಯೂ ಜೆಎಸ್‌ಎಸ್‌ ಮಹಾವಿದ್ಯಾಪೀಠಕ್ಕೆ 15 ಎಕರೆ ಗೋಮಾಳ ಮಂಜೂರಾಗಿತ್ತು. ಅಲ್ಲಿಯೂ ಸಹ ಗೋವುಗಳಿಗೆ ಮೇವಿನ ತಾಣವನ್ನು ಕಸಿದುಕೊಂಡಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಇದರ ನಡುವೆಯೇ ವಿಜಯಪುರ ತಾಲೂಕಿನ ಕಸಬಾ ಹೋಬಳಿ ಭೂತನಾಳ ಗ್ರಾಮದ ಸರ್ವೆ ನಂಬರ್‍‌ 162ರಲ್ಲಿ ಜಮೀನಿನ ಪಹಣಿ ಮತ್ತು ಮ್ಯುಟೇಷನ್‌ ತಿದ್ದುಪಡಿಗೊಳಿಸಲು ಹೊರಟಿರುವುದು ಮುನ್ನೆಲೆಗೆ ಬಂದಿದೆ.

 

ಪತ್ರದಲ್ಲೇನಿದೆ?

 

ವಿಜಯಪುರ ಜಿಲ್ಲೆ, ತಾಲೂಕಿನ ಕಸಬಾ ಹೋಬಳಿಯ ಭೂತನಾಳ ಗ್ರಾಮದ ಸರ್ವೆ  ನಂಬರ್‍‌ 162ರ ಜಮೀನಿನ ಪಹಣಿ ಮತ್ತು ಮ್ಯುಟೇಷನ್‌ ತಿದ್ದುಪಡಿಗೊಳಿಸಬೇಕು ಎಂದು 2024ರ ಜುಲೈ 15ರಂದು ಜೆಎಸ್‌ಎಸ್‌ ಮಹಾವಿದ್ಯಾಪೀಠದ ಅಧ್ಯಕ್ಷರು ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದ್ದರು.

 

ಸರ್ವೆ ನಂಬರ್‍‌ 162ರಲ್ಲಿ 21 ಎಕರೆ 08 ಗುಂಟೆ ವಿಸ್ತೀರ್ಣದ ಪಹಣಿ ಕಲಂ 9 ಮತ್ತು 11ರಲ್ಲಿದ್ದ ಹಿಂದಿನ ನಮೂದುಗಳನ್ನು ರದ್ದುಗೊಳಿಸಬೇಕು. ಇದನ್ನು ಜೆಎಸ್‌ಎಸ್‌ ಮಹಾವಿದ್ಯಾಪೀಠದ ಅಧ್ಯಕ್ಷರ ಹೆಸರಿಗೆ ನಮೂದಿಸಿಕೊಡಲು ನಿರ್ದೇಶನ ನೀಡಬೇಕು ಎಂದು ಕೋರಿದ್ದರು. ಈ ಮನವಿ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ಹಿಂಬರಹ ನೀಡಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿಗೆ ನಿರ್ದೇಶಿಸಿರುವುದು ಪತ್ರದಿಂದ ಗೊತ್ತಾಗಿದೆ.

 

 

ಭೂತನಾಳ ಗ್ರಾಮದ ಸರ್ವೆ ನಂಬರ್‍‌ 162ರಲ್ಲಿರುವ 21 ಎಕರೆ 08 ಗುಂಟೆಯು ಸರ್ಕಾರಿ ಬೀಳು ಜಮೀನಾಗಿದ್ದು ಇದು ದನಗಳು ಮೇಯಿಸುವ ಬಗ್ಗೆ ಕಾಯ್ದಿಟ್ಟಿದೆ. 2024-25ರಲ್ಲೂ ಇದು ಸರ್ಕಾರಿ ಬೀಳು, ದನಗಳು ಮೇಯಿಸುವ ಬಗ್ಗೆ ಕಾಯ್ದಿಟ್ಟಿದೆ ಎಂದು ಆರ್‍‌ಟಿಸಿ ದಾಖಲೆಗಳಲ್ಲಿ ನಮೂದಾಗಿರುವುದು ಗೊತ್ತಾಗಿದೆ.

 

ಜೆಎಸ್‌ಎಸ್‌ ಮಹಾವಿದ್ಯಾಪೀಠಕ್ಕೆ ಗೋಮಾಳ ಮಂಜೂರಾಗಿರುವ ಕಲ್ಬುರ್ಗಿಯ ಸಿಂದಗಿ (ಬಿ) ಗ್ರಾಮದಲ್ಲಿ ಜಾನುವಾರುಗಳ ಸಂಖ್ಯೆಗೆ ತಕ್ಕಂತೆ ಗೋಮಾಳ ಇರದೇ ಕೊರತೆ ಎದುರಿಸುತ್ತಿದೆ. ಆದರೂ 15 ಎಕರೆ ಗೋಮಾಳ ಮಂಜೂರಾಗಿತ್ತು. ಇದರಿಂದ  ಗೋವುಗಳಿಗೆ ಮೇವಿನ ತಾಣವನ್ನೇ ಕಸಿದುಕೊಂಡಂತಾಗಿದೆ ಎಂಬ ಆರೋಪವೂ ಕೇಳಿ ಬಂದಿತ್ತು.

 

 

ಕಲ್ಬುರ್ಗಿ ತಾಲೂಕಿನ ಸಿಂದಗಿ (ಬಿ) ಗ್ರಾಮದ ಸರ್ವೆನಂಬರ್‌ 73/1ರಲ್ಲಿನ 15.00 ಎಕರೆ ಗೋಮಾಳ ಜಮೀನನ್ನು ಜೆ ಎಸ್‌ ಎಸ್‌ ಮಹಾವಿದ್ಯಾಪೀಠಕ್ಕೆ ಮಂಜೂರು ಮಾಡುವ ಸಂಬಂಧ ಕಲ್ಬುರ್ಗಿ ವಿಭಾಗದ ಪ್ರಾದೇಶಿಕ ಅಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಯನ್ನು ಪುರಸ್ಕರಿಸಿರುವ ಸರ್ಕಾರವು 2023ರ ಮಾರ್ಚ್‌ 27ರಂದು ಮಂಜೂರು ಮಾಡಿ ಆದೇಶ ಹೊರಡಿಸಿದೆ. ವಿಶೇಷವೆಂದರೇ ಕಲ್ಬುರ್ಗಿ ತಾಲೂಕಿನ ಸಿಂದಗಿ (ಬಿ) ಗ್ರಾಮದಲ್ಲಿ ಗಾಯರಾಣ ಜಮೀನು ಕಡಿಮೆ ಇತ್ತು.

 

‘ಸಿಂದಗಿ (ಬಿ) ಗ್ರಾಮದಲ್ಲಿ ಒಟ್ಟು 892 ಜಾನುವಾರುಗಳಿದ್ದು ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ 267.00ಎಕರೆ ಗೊಮಾಳ ಜಮೀನಿನ ಅವಶ್ಯಕತೆ ಇದೆ. ಆದರೆ ಈ ಗ್ರಾಮದಲ್ಲಿ 233.28 ಎಕರೆ ಗೋಮಾಳ ಜಮೀನು ಮಾತ್ರ ಲಭ್ಯವಿದೆ. ಗಾಯರಾಣ ಜಮೀನು ಕಡಿಮೆ ಇರುವುದರಿಂದ ಗಾಯರಾಣ/ಗೋಮಾಳ ಲೆಕ್ಕ ಶೀರ್ಷಿಕೆಯಿಂದ ತಗ್ಗಿಸಿ ಮಂಜೂರು ಮಾಡಬೇಕಾದರೆ ಸರಕಾರಕ್ಕೆ ಮಾತ್ರ ಅಧಿಕಾರ ಇದೆ,’ ಎಂದು ಕಲ್ಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

 

ಕಲ್ಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತರ ಪ್ರಸ್ತಾವನೆ ಪ್ರಕಾರ ಸಿಂದಗಿ (ಬಿ) ಗ್ರಾಮದಲ್ಲಿ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಇರಬೇಕಿದ್ದ ಜಮೀನಿನ ಪೈಕಿ 33.72 ಎಕರೆ ಜಮೀನು ಕೊರತೆ ಇದ್ದರೂ 15 ಎಕರೆಯನ್ನು ಮಂಜೂರು ಮಾಡಿ ಗೋವುಗಳಿಗಿದ್ದ ಮೇವಿನ ತಾಣವನ್ನೇ ಕಸಿದುಕೊಂಡಂತಾಗಿತ್ತು.

ಗೋಮಾಳ ತಾರತಮ್ಯ; ಸಂಘ ಪರಿವಾರ ಅಂಗ ಸಂಸ್ಥೆಗಳಿಗೆ ಶೇ.5ರ ದರ, ಜೆಎಸ್‌ಎಸ್‌ ವಿದ್ಯಾಪೀಠಕ್ಕೆ ಶೇ.100ರಷ್ಟು ಬೆಲೆ

‘ಸರ್ಕಾರಿ ಗಾಯರಾಣ ಸರ್ವೆ ನಂಬರ್‌ 73/1ರಲ್ಲಿ 15.00 ಎಕರೆ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(4) ಅನ್ವಯ ಗಾಯರಾಣ ಶೀರ್ಷಿಕೆಯಿಂದ ತಗ್ಗಿಸಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1079ರ ನಿಯಮ 27ರಲ್ಲಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರ ಚಲಾಯಿಸಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22(3)(1)(i)(2) ಅನ್ವಯ ಪ್ರಚಲಿತ ಕೃಷಿಯೇತರ ಮಾರುಕಟ್ಟೆ ಮೌಲ್ಯದ ಶೆ.100ರಷ್ಟು ಹಾಗೂ ಇನ್ನಿತರೆ ಶಾಸನಬದ್ಧ ಶುಲ್ಕಗಳನ್ನು ವಿಧಿಸಿ ಶೈಕ್ಷಣಿಕ ಉದ್ದೇಶಕ್ಕಾಗಿ ಜೆಎಸ್‌ಎಸ್‌ ಮಹಾವಿದ್ಯಾಪೀಠಕ್ಕೆ 15 ಎಕರೆ ಮಂಜೂರು ಮಾಡಿದೆ,’ ಎಂದು ಆದೇಶದಲ್ಲಿ ವಿವರಿಸಿತ್ತು.

 

ರಾಜ್ಯ ಸರ್ಕಾರವು ರಾಷ್ಟ್ರೋತ್ಥಾನ ಪರಿಷತ್‌ ಸೇರಿದಂತೆ ಖಾಸಗಿ ಸಂಘ, ಸಂಸ್ಥೆಗಳಿಗೆ ಶೈಕ್ಷಣಿಕ ಉದ್ದೇಶದ ಹೆಸರಿನಲ್ಲಿ ಹತ್ತಾರು ಎಕರೆ ಗೋಮಾಳವನ್ನು ಮಂಜೂರು ಮಾಡುತ್ತಿದೆ. ಈ ಕುರಿತು ‘ದಿ ಫೈಲ್‌’ ಸರಣಿ ರೂಪದಲ್ಲಿ 13 ವರದಿಗಳನ್ನು ಪ್ರಕಟಿಸಿತ್ತು.

 

ರಾಷ್ಟ್ರೋತ್ಥಾನ ಪರಿಷತ್‌, ಬಿಜೆಪಿ ಕಚೇರಿಗೆ ಗೋಮಾಳ, ಜಮೀನು ಹಂಚಿಕೆ ಸುತ್ತ ‘ದಿ ಫೈಲ್‌’ನ 13 ವರದಿಗಳು

 

ಗೋಮಾಳ ಜಮೀನನ್ನು ಖಾಸಗಿ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಅವಕಾಶವಿಲ್ಲ ಎಂದು ಕಾನುನು ಇಲಾಖೆ ತನ್ನ ಅಭಿಪ್ರಾಯವನ್ನು ಪುನರುಚ್ಚರಿಸುತ್ತಿದ್ದರೂ ಜನಸೇವಾ ಟ್ರಸ್ಟ್‌ಗೆ ಚಿಕ್ಕಾಸು ದರದಲ್ಲಿ 35.33 ಎಕರೆ ಗೋಮಾಳವನ್ನು ಮಂಜೂರು ಮಾಡಿತ್ತು. ಅಲ್ಲದೇ ಜನಸೇವಾ ಟ್ರಸ್ಟ್‌ಗೆ ಮಾರುಕಟ್ಟೆ ಮೌಲ್ಯದ ಕೇವಲ ಶೇ.5ರಷ್ಟು ದರ ನಿಗದಿಗೊಳಿಸಿ 139.21 ಕೋಟಿ ರು. ಬೊಕ್ಕಸಕ್ಕೆ ನಷ್ಟಕ್ಕೆ ಕಾರಣವಾಗಿತ್ತು. ಈ ಕುರಿತು ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

 

ಜನಸೇವಾ ಟ್ರಸ್ಟ್‌ಗೆ 35.33 ಎಕರೆ ಗೋಮಾಳ; ಎಕರೆಗೆ ಶೇ. 5ರಷ್ಟು ದರ ನಿಗದಿ, 139.21 ಕೋಟಿ ನಷ್ಟದ ಹೊರೆ

ಕರ್ನಾಟಕ ವಿಧಾನಸಭೆಗೆ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾದ ಮರುಗಳಿಗೆಯಲ್ಲಿಯೇ ಸಂಘ ಪರಿವಾರದ ಅಂಗಸಂಸ್ಥೆಯಾಗಿರುವ ಜನಸೇವಾ ಟ್ರಸ್ಟ್‌ಗೆ ಮಂಜೂರಾಗಿದ್ದ 35.33 ಎಕರೆ ವಿಸ್ತೀರ್ಣದ ಜಮೀನಿಗೆ ಪ್ರಚಲಿತ ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಶೇ. 5ರಷ್ಟು ದರವನ್ನು ಮರು ನಿಗದಿಗೊಳಿಸಿ ಆದೇಶ ಹೊರಡಿಸಿರುವ ರಾಜ್ಯ ಬಿಜೆಪಿ ಸರ್ಕಾರವು ಬೊಕ್ಕಸಕ್ಕೆ ಅಂದಾಜು 139.21 ಕೋಟಿ ರು. ನಷ್ಟವನ್ನು ಹೊರಿಸಿದಂತಾಗಿದೆ.

the fil favicon

SUPPORT THE FILE

Latest News

Related Posts