ಗೋಮಾಳ ತಾರತಮ್ಯ; ಸಂಘ ಪರಿವಾರ ಅಂಗ ಸಂಸ್ಥೆಗಳಿಗೆ ಶೇ.5ರ ದರ, ಜೆಎಸ್‌ಎಸ್‌ ವಿದ್ಯಾಪೀಠಕ್ಕೆ ಶೇ.100ರಷ್ಟು ಬೆಲೆ

ಬೆಂಗಳೂರು; ಸಂಘಪರಿವಾರದ ಅಂಗಸಂಸ್ಥೆಯಾಗಿರುವ ಜನಸೇವಾ ಟ್ರಸ್ಟ್‌ಗೆ ಮಾರ್ಗಸೂಚಿ ಬೆಲೆಯ ಶೇ.5ರಷ್ಟು ದರ ನಿಗದಿಗೊಳಿಸಿ 35 ಎಕರೆ ಗೋಮಾಳವನ್ನು ಮಂಜೂರು ಮಾಡಿರುವ ರಾಜ್ಯ ಬಿಜೆಪಿ ಸರ್ಕಾರವು ಮೈಸೂರಿನ ಜೆ ಎಸ್‌ ಎಸ್‌ ಮಹಾವಿದ್ಯಾಪೀಠಕ್ಕೆ ಕಲ್ಬುರ್ಗಿಯಲ್ಲಿ ಮಾರುಕಟ್ಟೆ ಮೌಲ್ಯದ ಶೇ.100ರಷ್ಟು ದರ ವಿಧಿಸಿ 15 ಎಕರೆ ಗೋಮಾಳವನ್ನು ಮಂಜೂರು ಮಾಡಿರುವುದು ಇದೀಗ ಬಹಿರಂಗವಾಗಿದೆ.

 

ಅಲ್ಲದೇ ಜೆಎಸ್‌ಎಸ್‌ ಮಹಾವಿದ್ಯಾಪೀಠಕ್ಕೆ ಗೋಮಾಳ ಮಂಜೂರಾಗಿರುವ ಕಲ್ಬುರ್ಗಿಯ ಸಿಂದಗಿ (ಬಿ) ಗ್ರಾಮದಲ್ಲಿ ಜಾನುವಾರುಗಳ ಸಂಖ್ಯೆಗೆ ತಕ್ಕಂತೆ ಗೋಮಾಳ ಇರದೇ ಕೊರತೆ ಎದುರಿಸುತ್ತಿದೆ. ಆದರೂ 15 ಎಕರೆ ಗೋಮಾಳವನ್ನು ಮಂಜೂರು ಮಾಡಿ ಗೋವುಗಳಿಗೆ ಮೇವಿನ ತಾಣವನ್ನೇ ಕಸಿದುಕೊಂಡಂತಾಗಿದೆ.

 

ರಾಷ್ಟ್ರೋತ್ಥಾನ ಪರಿಷತ್‌, ಜನಸೇವಾ ಟ್ರಸ್ಟ್‌ಗೆ ಈಗಾಗಲೇ ಕಾನೂನು, ನಿಯಮಗಳನ್ನು ಉಲ್ಲಂಘಿಸಿ ಮಾರುಕಟ್ಟೆ ಮೌಲ್ಯದ ಶೇ.25 ಮತ್ತು ಪ್ರಚಲಿತ ಮಾರ್ಗಸೂಚಿಗಳ ದರಗಳನ್ವಯ ಗೋಮಾಳವನ್ನು ಮಂಜೂರು ಮಾಡಲಾಗಿತ್ತಾದರೂ ಆ ನಂತರ ಈ ಎರಡೂ ಸಂಸ್ಥೆಗಳು ಸರ್ಕಾರಕ್ಕೆ ಸಲ್ಲಿಸಿದ್ದ ಕೋರಿಕೆಯನ್ನು ಪುರಸ್ಕರಿಸಿ ಶೇ.5ರಷ್ಟು ದರವನ್ನು ಮರು ನಿಗದಿಗೊಳಿಸಿದೆ.

 

ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹತ್ತಾರು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿರುವ ಜೆಎಸ್‌ಎಸ್‌ ಮಹಾವಿದ್ಯಾಪೀಠಕ್ಕೆ ಮಾರುಕಟ್ಟೆ ಮೌಲ್ಯದ ಶೇ.100ರಷ್ಟು ದರವನ್ನು ವಿಧಿಸಿ  ತಾರತಮ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.  ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗಷ್ಟೇ ಜೆಎಸ್‌ಎಸ್‌ ಮಹಾವಿದ್ಯಾಪೀಠ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾಪೀಠದ ಶೈಕ್ಷಣಿಕ ಸಂಸ್ಥೆಗಳ ಕುರಿತು ಮೆಚ್ಚುಗೆ ಮಾತುಗಳನ್ನಾಡಿದ್ದರು. ಆದರೂ ಈ ಸಂಸ್ಥೆಗೆ ದರದಲ್ಲಿ ಯಾವುದೇ ರಿಯಾಯಿತಿಯನ್ನೂ ನೀಡದಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಜೆಎಸ್‌ಎಸ್‌ ಮಹಾವಿದ್ಯಾಪೀಠಕ್ಕೆ  15 ಎಕರೆ ಮಂಜೂರು ಮಾಡಿ 2023ರ ಮಾರ್ಚ್‌ 27ರಂದು ಹೊರಡಿಸಿರುವ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕಲ್ಬುರ್ಗಿ ತಾಲೂಕಿನ ಸಿಂದಗಿ (ಬಿ) ಗ್ರಾಮದ ಸರ್ವೆನಂಬರ್‌ 73/1ರಲ್ಲಿನ 15.00 ಎಕರೆ ಗೋಮಾಳ ಜಮೀನನ್ನು ಜೆ ಎಸ್‌ ಎಸ್‌ ಮಹಾವಿದ್ಯಾಪೀಠಕ್ಕೆ ಮಂಜೂರು ಮಾಡುವ ಸಂಬಂಧ ಕಲ್ಬುರ್ಗಿ ವಿಭಾಗದ ಪ್ರಾದೇಶಿಕ ಅಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಯನ್ನು ಪುರಸ್ಕರಿಸಿರುವ ಸರ್ಕಾರವು 2023ರ ಮಾರ್ಚ್‌ 27ರಂದು ಮಂಜೂರು ಮಾಡಿ ಆದೇಶ ಹೊರಡಿಸಿದೆ. ವಿಶೇಷವೆಂದರೇ ಕಲ್ಬುರ್ಗಿ ತಾಲೂಕಿನ ಸಿಂದಗಿ (ಬಿ) ಗ್ರಾಮದಲ್ಲಿ ಗಾಯರಾಣ ಜಮೀನು ಕಡಿಮೆ ಇದೆ.

 

‘ಸಿಂದಗಿ (ಬಿ) ಗ್ರಾಮದಲ್ಲಿ ಒಟ್ಟು 892 ಜಾನುವಾರುಗಳಿದ್ದು ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ 267.00ಎಕರೆ ಗೊಮಾಳ ಜಮೀನಿನ ಅವಶ್ಯಕತೆ ಇದೆ. ಆದರೆ ಈ ಗ್ರಾಮದಲ್ಲಿ 233.28 ಎಕರೆ ಗೋಮಾಳ ಜಮೀನು ಮಾತ್ರ ಲಭ್ಯವಿದೆ. ಗಾಯರಾಣ ಜಮೀನು ಕಡಿಮೆ ಇರುವುದರಿಂದ ಗಾಯರಾಣ/ಗೋಮಾಳ ಲೆಕ್ಕ ಶೀರ್ಷಿಕೆಯಿಂದ ತಗ್ಗಿಸಿ ಮಂಜೂರು ಮಾಡಬೇಕಾದರೆ ಸರಕಾರಕ್ಕೆ ಮಾತ್ರ ಅಧಿಕಾರ ಇದೆ,’ ಎಂದು ಕಲ್ಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು ಎಂಬುದು ಆದೇಶದಿಂದ ತಿಳಿದು ಬಂದಿದೆ.

 

ಕಲ್ಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತರ ಪ್ರಸ್ತಾವನೆ ಪ್ರಕಾರ ಸಿಂದಗಿ (ಬಿ) ಗ್ರಾಮದಲ್ಲಿ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಇರಬೇಕಿದ್ದ ಜಮೀನಿನ ಪೈಕಿ 33.72 ಎಕರೆ ಜಮೀನು ಕೊರತೆ ಇದ್ದರೂ 15 ಎಕರೆಯನ್ನು ಮಂಜೂರು ಮಾಡಿ ಗೋವುಗಳಿಗಿದ್ದ ಮೇವಿನ ತಾಣವನ್ನೇ ಕಸಿದುಕೊಂಡಂತಾಗಿದೆ.

 

‘ಸರ್ಕಾರಿ ಗಾಯರಾಣ ಸರ್ವೆ ನಂಬರ್‌ 73/1ರಲ್ಲಿ 15.00 ಎಕರೆ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(4) ಅನ್ವಯ ಗಾಯರಾಣ ಶೀರ್ಷಿಕೆಯಿಂದ ತಗ್ಗಿಸಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1079ರ ನಿಯಮ 27ರಲ್ಲಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರ ಚಲಾಯಿಸಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22(3)(1)(i)(2) ಅನ್ವಯ ಪ್ರಚಲಿತ ಕೃಷಿಯೇತರ ಮಾರುಕಟ್ಟೆ ಮೌಲ್ಯದ ಶೆ.100ರಷ್ಟು ಹಾಗೂ ಇನ್ನಿತರೆ ಶಾಸನಬದ್ಧ ಶುಲ್ಕಗಳನ್ನು ವಿಧಿಸಿ ಶೈಕ್ಷಣಿಕ ಉದ್ದೇಶಕ್ಕಾಗಿ ಜೆಎಸ್‌ಎಸ್‌ ಮಹಾವಿದ್ಯಾಪೀಠಕ್ಕೆ 15 ಎಕರೆ ಮಂಜೂರು ಮಾಡಿದೆ,’ ಎಂದು ಆದೇಶದಲ್ಲಿ ವಿವರಿಸಿದೆ.

 

ರಾಜ್ಯ ಸರ್ಕಾರವು ರಾಷ್ಟ್ರೋತ್ಥಾನ ಪರಿಷತ್‌ ಸೇರಿದಂತೆ ಖಾಸಗಿ ಸಂಘ, ಸಂಸ್ಥೆಗಳಿಗೆ ಶೈಕ್ಷಣಿಕ ಉದ್ದೇಶದ ಹೆಸರಿನಲ್ಲಿ ಹತ್ತಾರು ಎಕರೆ ಗೋಮಾಳವನ್ನು ಮಂಜೂರು ಮಾಡುತ್ತಿದೆ. ಈ ಕುರಿತು ‘ದಿ ಫೈಲ್‌’ ಸರಣಿ ರೂಪದಲ್ಲಿ 13 ವರದಿಗಳನ್ನು ಪ್ರಕಟಿಸಿತ್ತು.

 

ರಾಷ್ಟ್ರೋತ್ಥಾನ ಪರಿಷತ್‌, ಬಿಜೆಪಿ ಕಚೇರಿಗೆ ಗೋಮಾಳ, ಜಮೀನು ಹಂಚಿಕೆ ಸುತ್ತ ‘ದಿ ಫೈಲ್‌’ನ 13 ವರದಿಗಳು

 

ಗೋಮಾಳ ಜಮೀನನ್ನು ಖಾಸಗಿ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಅವಕಾಶವಿಲ್ಲ ಎಂದು ಕಾನುನು ಇಲಾಖೆ ತನ್ನ ಅಭಿಪ್ರಾಯವನ್ನು ಪುನರುಚ್ಚರಿಸುತ್ತಿದ್ದರೂ ಜನಸೇವಾ ಟ್ರಸ್ಟ್‌ಗೆ ಚಿಕ್ಕಾಸು ದರದಲ್ಲಿ 35.33 ಎಕರೆ ಗೋಮಾಳವನ್ನು ಮಂಜೂರು ಮಾಡಿತ್ತು. ಅಲ್ಲದೇ ಜನಸೇವಾ ಟ್ರಸ್ಟ್‌ಗೆ ಮಾರುಕಟ್ಟೆ ಮೌಲ್ಯದ ಕೇವಲ ಶೇ.5ರಷ್ಟು ದರ ನಿಗದಿಗೊಳಿಸಿ 139.21 ಕೋಟಿ ರು. ಬೊಕ್ಕಸಕ್ಕೆ ನಷ್ಟಕ್ಕೆ ಕಾರಣವಾಗಿತ್ತು. ಈ ಕುರಿತು ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

 

ಜನಸೇವಾ ಟ್ರಸ್ಟ್‌ಗೆ 35.33 ಎಕರೆ ಗೋಮಾಳ; ಎಕರೆಗೆ ಶೇ. 5ರಷ್ಟು ದರ ನಿಗದಿ, 139.21 ಕೋಟಿ ನಷ್ಟದ ಹೊರೆ

ಕರ್ನಾಟಕ ವಿಧಾನಸಭೆಗೆ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾದ ಮರುಗಳಿಗೆಯಲ್ಲಿಯೇ ಸಂಘ ಪರಿವಾರದ ಅಂಗಸಂಸ್ಥೆಯಾಗಿರುವ ಜನಸೇವಾ ಟ್ರಸ್ಟ್‌ಗೆ ಮಂಜೂರಾಗಿದ್ದ 35.33 ಎಕರೆ ವಿಸ್ತೀರ್ಣದ ಜಮೀನಿಗೆ ಪ್ರಚಲಿತ ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಶೇ. 5ರಷ್ಟು ದರವನ್ನು ಮರು ನಿಗದಿಗೊಳಿಸಿ ಆದೇಶ ಹೊರಡಿಸಿರುವ ರಾಜ್ಯ ಬಿಜೆಪಿ ಸರ್ಕಾರವು ಬೊಕ್ಕಸಕ್ಕೆ ಅಂದಾಜು 139.21 ಕೋಟಿ ರು. ನಷ್ಟವನ್ನು ಹೊರಿಸಿದಂತಾಗಿದೆ.

the fil favicon

SUPPORT THE FILE

Latest News

Related Posts