ಸಚಿವ ರಾಜಣ್ಣ ವಿರುದ್ಧ ವಿಚಾರಣೆ; ರಾಜ್ಯಪಾಲರ ಪತ್ರದತ್ತ ಕಣ್ಣೆತ್ತಿಯೂ ನೋಡದ ಸರ್ಕಾರ

ಬೆಂಗಳೂರು; ಅಪೆಕ್ಸ್‌ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾಗಿರುವ 2,000 ಕೋಟಿ ರೂ ಅಧಿಕ ಮೊತ್ತದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿ ಸಚಿವ ಕೆ ಎನ್‌ ರಾಜಣ್ಣ ಮತ್ತಿತರರ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಅನುಮತಿ ನೀಡಲು ಕಾಂಗ್ರೆಸ್‌ ಸರ್ಕಾರವು ಮೀನಮೇಷ ಎಣಿಸುತ್ತಿದೆ.

 

ಗಣಿಗಾರಿಕೆ ಪ್ರಕರಣದಲ್ಲಿ ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವ ಹೆಚ್‌ ಡಿ ಕುಮಾರಸ್ವಾಮಿ, ಮುರುಗೇಶ್‌ ನಿರಾಣಿ, ಜನಾರ್ದನ ರೆಡ್ಡಿ ಸೇರಿದಂತೆ ಇನ್ನಿತರರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವಲ್ಲಿ ರಾಜ್ಯಪಾಲರು ವಿಳಂಬ ಅನುಸರಿಸುವ ಮೂಲಕ ತಾರತಮ್ಯ ಎಸಗಿದ್ದಾರೆ ಖುದ್ದು ರಾಜ್ಯ ಕಾಂಗ್ರೆಸ್‌ ಸರ್ಕಾರವೇ ಆರೋಪಿಸಿದೆ.

 

ಅಪೆಕ್ಸ್‌ ಬ್ಯಾಂಕ್‌ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಒಳಗಾಗಿರುವ ಸಚಿವ ಕೆ ಎನ್‌ ರಾಜಣ್ಣ ಅವರ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲು ಅನುಮತಿ ನೀಡಲು ವಿಳಂಬ ಮಾಡಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರದ ನಡೆ ಕೂಡ ಚರ್ಚೆಗೆ ಗ್ರಾಸವಾಗಿದೆ.

 

ಅಪೆಕ್ಸ್‌ ಬ್ಯಾಂಕ್‌ ಅಕ್ರಮಗಳ ಕುರಿತು ಸಚಿವ ಕೆ ಎನ್‌ ರಾಜಣ್ಣ ಅವರನ್ನು ಕರ್ನಾಟಕ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಭ್ರಷ್ಟಾಚಾರ ತಡೆ ಅಧಿನಿಯಮ 1988ರ ಪ್ರಕರಣ 19 ಮತ್ತು ದಂಡ ಪ್ರಕ್ರಿಯೆ ಸಂಹಿತೆ 1973 ಖಾಸಗಿ ದೂರು ದಾಖಲಿಸಿ ತನಿಖೆಗೊಳಪಡಿಸಲು ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಅವರು ರಾಜ್ಯಪಾಲರಿಗೆ 2023ರ ಆಗಸ್ಟ್‌ 29ರಂದು ದೂರು ಸಲ್ಲಿಸಿದ್ದರು.

 

 

 

ಈ ದೂರನ್ನು ಪರಿಶೀಲಿಸಿದ್ದ ರಾಜ್ಯಪಾಲರು 2023ರ ಸೆ.21ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮುಂದಿನ ಕ್ರಮಕ್ಕಾಗಿ ರವಾನಿಸಿದ್ದರು. ಆದರೆ 11 ತಿಂಗಳಾದರೂ ರಾಜ್ಯ ಸರ್ಕಾರವು ಇದುವರೆಗೂ ಯಾವುದೇ ಕ್ರಮವಹಿಸಿಲ್ಲ ಎಂದು ತಿಳಿದು ಬಂದಿದೆ.

 

ದೂರಿನಲ್ಲೇನಿತ್ತು?

 

ರಾಜ್ಯ ಅಪೆಕ್ಸ್‌ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಸಿ ಎನ್‌ ದೇವರಾಜ್‌ ಅವರು ಖಾಸಗಿ ವ್ಯಕ್ತಿಗಳು, ವಾಣಿಜ್ಯ ಸಂಸ್ಥೆಗಳು, ಟ್ರಸ್ಟ್‌ ಗಳಿಗೆ ಯಾವುದೇ ಜಾಮೀನು ಮತ್ತು ಭದ್ರತೆ ಪಡೆಯದೇ ಕಟ್ಟಡ ನಿರ್ಮಾಣ ಕಂಪನಿ, ಸಕ್ಕರೆ ಕಾರ್ಖಾನೆ, ಚಿನ್ನದ ಅಂಗಡಿಗಳಿಗೆ ಬೇಕಾಬಿಟ್ಟಿಯಾಗಿ ನೂರಾರು ಕೋಟಿ ರು ನೀಡಲಾಗಿದೆ. ಈ ಸಾಲದ ವ್ಯವಹಾರದಲ್ಲಿ ಅವ್ಯವಹಾರ ನಡೆದಿದೆ. ಇದು ತನಿಖೆಯಿಂದಲೂ ಸಾಬೀತಾಗಿದೆ. ಈ ಎಲ್ಲಾ ಪ್ರಕರಣಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಶಿಫಾರಸ್ಸು ಮಾಡಲಾಗಿದೆ.

 

 

ಆದರೂ ಸಹ ಕೆ ಎನ್‌ ರಾಜಣ್ಣ ಅವರು ಸಿ ಎನ್‌ ದೇವರಾಜ್‌ ಅವರನ್ನು 11 ತಿಂಗಳ ಅವಧಿಗೆ ಸೇವಾ ಗುತ್ತಿಗೆ ಆಧಾರದ ಮೇರೆಗೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ನೇಮಕಾತಿ ಮಾಡಿದ್ದಾರೆ. ಇದರಲ್ಲಿ ವ್ಯಾಪಕ ಅವ್ಯವಹಾರ ಹಾಗೂ ಭ್ರಷ್ಟಾಚಾರ ನಡೆದಿದೆ.

 

ಇವರ ನೇಮಕಾತಿಗೆ ಶಿಫಾರಸ್ಸು ಮಾಡಿರುವ ಸಹಕಾರಿ ಸಚಿವ ಕೆ ಎನ್‌ ರಾಜಣ್ಣ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿ ತನಿಖೆಗೊಳಪಡಿಸಲು ಭ್ರಷ್ಟಾಚಾರ ತಡೆ ಅಧಿ ನಿಯಮ 1988ರ ಪ್ರಕರಣ 19 ಮತ್ತು ದಂಡ ಪ್ರಕ್ರಿಯೆ ಸಂಹಿತೆ 1973ರ ಪ್ರಕರಣ 197ರಡಿ ಮಂಜೂರಾತಿ ನೀಡಬೇಕು ಎಂದು ದಿನೇಶ್‌ ಕಲ್ಲಹಳ್ಳಿ ಅವರು ರಾಜ್ಯಪಾಲರಿಗೆ ಕೋರಿದ್ದರು.

 

ಅಪೆಕ್ಸ್‌ ಬ್ಯಾಂಕ್‌ ಅಕ್ರಮಗಳು; ‘ದಿ ಫೈಲ್‌’ನ 16 ಸರಣಿ ವರದಿಗಳನ್ನು ವಿಸ್ತರಿಸಿದ ಪ್ರಜಾವಾಣಿ

 

 

ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್‌ನಿಂದ ಶಾಸಕರು ಮತ್ತು ಇತರ ಜನಪ್ರತಿನಿಧಿಗಳಿಗೆ ಸಾಲ ಮಂಜೂರು ಮಾಡುವಲ್ಲಿ ಆರ್‌ಬಿಐ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಕಾಂಗ್ರೆಸ್ ಶಾಸಕರೊಬ್ಬರು ಹೇಳಿದ್ದು, ಲೋಪವಾಗಿರುವುದನ್ನು ಸರ್ಕಾರವು ಅಧಿವೇಶನದಲ್ಲೇ ಒಪ್ಪಿಕೊಂಡಿತ್ತು.

 

ಆರ್‌ಬಿಐ ಸುತ್ತೋಲೆಯಂತೆ ಬ್ಯಾಂಕ್‍ಗಳಲ್ಲಿ ಸಾಲ ಪಡೆದಿರುವವರ ಮಾಹಿತಿಯನ್ನು ಗ್ರಾಹಕರ ಒಪ್ಪಿಗೆ ಇಲ್ಲದೆ ಬಹಿರಂಗ ಮಾಡುವಂತಿಲ್ಲ ಎಂದು ರಾಜಣ್ಣ ಅವರು ಹೇಳಿಕೆ ನೀಡಿದ್ದರು. ಇದಕ್ಕೆ ಶಾಸಕ ಆನಂದ್‌ ಆಕ್ಷೇಪ ವ್ಯಕ್ತಪಡಿಸಿದ್ದರು.

 

ಅಪೆಕ್ಸ್ ಬ್ಯಾಂಕ್‍ಗೆ ನಬಾರ್ಡ್‍ನಿಂದ ಎರಡು ಸಾವಿರ ಕೋಟಿ ರೂ.ನೆರವು ಬಂದಿದೆ. ಬಹುತೇಕ ಶಾಸಕರು ಸಕ್ಕರೆ ಕಾರ್ಖಾನೆ ಮಾಡಲು ಅಪೆಕ್ಸ್ ಬ್ಯಾಂಕ್‍ನಿಂದ ಸಾಲ ಪಡೆದಿದ್ದಾರೆ/ ಕೆಲವು ಸಮರ್ಪಕವಾದ ದಾಖಲೆಗಳನ್ನು ನೀಡದೆ ಸಾಲ ಪಡೆದಿದ್ದಾರೆ. ಇದರಲ್ಲಿ ಭ್ರಷ್ಟಾಚಾರ ಆಗಿದೆ. ಹೈಕೋರ್ಟ್ ಸಹ ಈ ಬಗ್ಗೆ ಪ್ರಶ್ನೆ ಎತ್ತಿದೆ. ಡಿಸಿಸಿ ಬ್ಯಾಂಕ್‍ಗಳಲ್ಲಿ ನಲ್ಲಿ ರೈತರಿಗೆ, ಸಾಮಾನ್ಯ ಜನರಿಗೆ ಸಾಲ ಸಿಗುತ್ತಿಲ್ಲ. ಆದರೆ, ಉದ್ಯಮಿಗಳಿಗೆ ಮಾತ್ರ ಸಾಲ ನೀಡುತ್ತಿದ್ದಾರೆ. ಇಲ್ಲಿ ಸಾವಿರಾರು ಕೋಟಿ ರೂ. ಹಗರಣಗಳು ಆಗಿವೆ ಎಂದು ಆನಂದ್ ದೂರಿದ್ದರು.

 

ಸರ್ಕಾರ ಕಾರ್ಖಾನೆಗಳಿಗೆ ನೀಡಲಾಗಿರುವ ಸಾಲದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಲೆಕ್ಕಪರಿಶೋಧನಾ ವರದಿಯಿಂದ ತಿಳಿದುಬಂದಿದೆ ಎಂದು ನಬಾರ್ಡ್ ಮತ್ತು ಆರ್‌ಬಿಐ ಸರ್ಕಾರಕ್ಕೆ ಪತ್ರ ಬರೆದಿತ್ತು.

 

ಇದಕ್ಕೆ ಪ್ರತಿಕ್ರಿಯಿಸಿದ್ದ ರಾಜಣ್ಣ, ಅಪೆಕ್ಸ್‌ ಬ್ಯಾಂಕ್ ನಲ್ಲಿ ಯಾವುದೇ ಹಗರಣ ನಡೆದಿದ್ದರೂ ತನಿಖೆ ಮಾಡಿಸುತ್ತೇವೆ. ಒಂದು ವೇಳೆ ಅಂತಹ ಯಾವುದಾದರೂ ನಿರ್ದಿಷ್ಟ ಪ್ರಕರಣ ಗಮನಕ್ಕೆ ತಂದಿದ್ದರೇ ತನಿಖೆ ಮಾಡಿಸುತ್ತೇವೆ ಎಂದಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts