ಅಪೆಕ್ಸ್‌ ಬ್ಯಾಂಕ್‌ ಅಕ್ರಮಗಳು; ‘ದಿ ಫೈಲ್‌’ನ 16 ಸರಣಿ ವರದಿಗಳನ್ನು ವಿಸ್ತರಿಸಿದ ಪ್ರಜಾವಾಣಿ

ಬೆಂಗಳೂರು; ಚುನಾಯಿತ ಜನಪ್ರತಿನಿಧಿಗಳ ಮಾಲೀಕತ್ವದಲ್ಲಿರುವ ರಾಜ್ಯದ ಹಲವು ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಕರ್ನಾಟಕ ರಾಜ್ಯ ಅಪೆಕ್ಸ್‌ ಬ್ಯಾಂಕ್‌ ನಿಯಮಬಾಹಿರವಾಗಿ ಕೋಟ್ಯಂತರ ಮೊತ್ತದ ಸಾಲ ನೀಡಿರುವ ಪ್ರಕರಣ ಮತ್ತು ವಸೂಲಾಗದ ಸಾಲ ಮೊತ್ತದ ವಿವರಗಳ ಮತ್ತು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳು ತಮ್ಮ ಕಾರ್ಯವ್ಯಾಪ್ತಿ ಮೀರಿ ನೀಡಿದ್ದ ಸಾಲದ ಪ್ರಕರಣಗಳನ್ನು ಲೆಕ್ಕ ಪರಿಶೋಧನೆ ವರದಿ ಮತ್ತು ಹಲವು ದಾಖಲೆಗಳನ್ನಾಧರಿಸಿ ‘ದಿ ಫೈಲ್‌’ 2020ರ ಮಾರ್ಚ್‌ ಮತ್ತು 2021ರ ಆಗಸ್ಟ್‌ನಲ್ಲಿ ಸರಣಿ ವರದಿ ಪ್ರಕಟಿಸಿತ್ತು.

ಅಪೆಕ್ಸ್‌ ಬ್ಯಾಂಕ್‌ ಸೇರಿದಂತೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳು ಕೂಡ ನಿಯಮಬಾಹಿರವಾಗಿ ನೀಡಿರುವ ಸಾಲದ ಪ್ರಕರಣಗಳನ್ನು ಇದೀಗ ಪ್ರಜಾವಾಣಿಯು ವರದಿ ಪ್ರಕಟಿಸುವ ಮೂಲಕ ‘ದಿ ಫೈಲ್‌’ ವರದಿಗಳನ್ನು ವಿಸ್ತರಿಸಿದಂತಾಗಿದೆ. ಬೇರೊಂದು ಮಾಧ್ಯಮದಲ್ಲಿ ಈ ಮೊದಲೇ ಪ್ರಕಟವಾಗಿದ್ದ ವರದಿಗಳನ್ನು ಮುಖ್ಯವಾಹಿನಿ ಪತ್ರಿಕೆಗಳು ಪ್ರಕಟಿಸುವ ಮೂಲಕ ಸಹಭಾಗಿ ಪತ್ರಿಕೋದ್ಯಮವನ್ನು ಮುಂದುವರೆಸಿದೆ.

ಪ್ರಜಾವಾಣಿಯು ಪ್ರಕಟಿಸಿರುವ ವರದಿಯಲ್ಲಿ ಅಪೆಕ್ಸ್ಸ್ ಬ್ಯಾಂಕ್‌ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ನೀಡಿರುವ ಸಾಲದ ವಿವರಗಳನ್ನು ಮಾತ್ರ ಪ್ರಕಟಿಸಲಾಗಿದೆ. ಸಕ್ಕರೆ ಕಾರ್ಖಾನೆಗಳಿಗೆ ನಿಯಮಬಾಹಿರವಾಗಿ ಸಾಲ ನೀಡಿರುವುದು ಮತ್ತು ಕಾರ್ಖಾನೆಗಳು ನೀಡಿದ್ದ ದಾಖಲೆಗಳನ್ನು ಪರಿಶೀಲಿಸದೆಯೇ ಸಾಲ ನೀಡಿದ್ದನ್ನು ಎಳೆಎಳೆಯಾಗಿ ಕಂಪನಿವಾರು ‘ದಿ ಫೈಲ್‌’ ಸರಣಿ ವರದಿಗಳಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.

ಸಹಭಾಗಿ ಪತ್ರಿಕೋದ್ಯಮವು ಆಡಳಿತ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಮುನ್ನೆಲೆಗೆ ತರುವ ಮೂಲಕ ಸರ್ಕಾರದ ಕಣ್ಣು ತೆರೆಸಿದಂತಾಗುವುದಲ್ಲದೆ ಆಡಳಿತ ವ್ಯವಸ್ಥೆಯನ್ನು ನಿಯಮಗಳ ಚೌಕಟ್ಟಿನೊಳಗೆ ತರುವುದಕ್ಕೆ ಸಹಕಾರಿಯಾಗಬಲ್ಲದು ಎಂಬ ಆಶಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂಬ ಆಶಯ ನಮ್ಮದು.

ಅಪೆಕ್ಸ್‌ ಬ್ಯಾಂಕ್‌ನ ಅಕ್ರಮಗಳ ಕುರಿತು ‘ದಿ ಫೈಲ್‌’ ಪ್ರಕಟಿಸಿದ್ದ ಸರಣಿ ವರದಿಗಳನ್ನು ದಿನಾಂಕ ಸಮೇತ ಕೊಂಡಿಗಳನ್ನು ಇಲ್ಲಿ ಕೊಡಲಾಗಿದೆ.

ಜಲ ಸಂಪನ್ಮೂಲ ಸಚಿವರಾಗಿದ್ದ ರಮೇಶ್‌ ಜಾರಕಿಹೊಳಿ ಅವರ ಒಡೆತನದ ಸೌಭಾಗ್ಯಲಕ್ಷ್ಮಿ ಶುಗರ್ಸ್‌ ಲಿಮಿಟೆಡ್‌ ಸೇರಿದಂತೆ ಹಲವು ಪ್ರಭಾವಿ ರಾಜಕೀಯ ಮುಖಂಡರ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ ನೀಡಿದ್ದ ಒಟ್ಟು 1,022.55 ಕೋಟಿ ರು.ಗಳ ಸಾಲ ಮೊತ್ತದ ಪೈಕಿ ಒಟ್ಟಾರೆ 610 ಕೋಟಿಯಷ್ಟು ಅನುತ್ಪಾದಕ ಆಸ್ತಿ (ಎನ್​ಪಿಎ) ಇದೆ ಎಂಬುದನ್ನು ‘ದಿ ಫೈಲ್‌’ 2020ರ ಮಾರ್ಚ್‌ 19ರಂದೇ ಬಹಿರಂಗಪಡಿಸಿತ್ತು.

ವಸೂಲಾಗದ ಸಾಲ 610 ಕೋಟಿ; ಅಪೆಕ್ಸ್‌ ಬ್ಯಾಂಕ್‌ನಲ್ಲಿ ಎನ್‍ಪಿಎ ಕರಾಮತ್ತು

ಅಪೆಕ್ಸ್‌ ಬ್ಯಾಂಕ್‌ನಲ್ಲಿ ಈವರೆವಿಗೂ ನಡೆದಿರುವ ಹಲವು ಅಕ್ರಮಗಳು ಮತ್ತು ನೇಮಕಾತಿಯಲ್ಲಿನ ನಿಯಮಬಾಹಿರ ಚಟುವಟಿಕೆಗಳ ಕುರಿತು ಸಹಕಾರ ಸಂಘಗಳ ಜಂಟಿ ನಿಬಂಧಕರು ತನಿಖಾ ವರದಿಯನ್ನು 2020ರ ಮಾರ್ಚ್‌ 10ರಂದು ಸರ್ಕಾರಕ್ಕೆ ಸಲ್ಲಿಸಿದ್ದರು. 2021ರ ಹೊತ್ತಿಗೆ ಎನ್‌ಪಿಎ ಮೊತ್ತ 734.24 ಕೋಟಿ ಮೀರಿದೆ ಎಂದು ಪ್ರಜಾವಾಣಿ 2021ರ ಅಕ್ಟೋಬರ್‌ 17ರಂದು ವರದಿ ಮಾಡಿದೆ.

ಒಟ್ಟು 27 ಸಕ್ಕರೆ ಕಾರ್ಖಾನೆಗಳಿಗೆ 2019ರ ಮಾರ್ಚ್‌ 31ರ ಅಂತ್ಯಕ್ಕೆ 47 ಪ್ರಕರಣಗಳಲ್ಲಿ ಒಟ್ಟು 1,603.36 ಕೋಟಿ ರು.ಸಾಲದ ಹೊರಬಾಕಿ ಇತ್ತು. ಅದೇ ರೀತಿ 391.15 ಕೋಟಿ ರು.ಸಾಲ ಸುಸ್ತಿಯಾಗಿರುವ ಪೈಕಿ 305.73 ಕೋಟಿ ರು. ಎನ್‌ಪಿಎ(ಕೆಟ್ಟ ಸಾಲ) ಇದೆ ಎಂದು ಸಹಕಾರ ಸಂಘಗಳ ಜಂಟಿ ನಿಬಂಧಕ ಎಂ ಡಿ ನರಸಿಂಹಮೂರ್ತಿ ನೇತೃತ್ವದ ತನಿಖಾ ತಂಡ ನೀಡಿದ್ದ ವರದಿಯನ್ನಾಧರಿಸಿ ‘ದಿ ಫೈಲ್‌’ ಸರಣಿ ವರದಿಗಳನ್ನು ಪ್ರಕಟಿಸಿತ್ತು.

ವಸೂಲಾಗದ ಸಾಲ ಸಚಿವ ರಮೇಶ್‌ ಜಾರಕಿಹೊಳಿ ಒಡೆತನದ ಕಂಪನಿಯಲ್ಲೇ ಹೆಚ್ಚಿತ್ತು ಎಂಬ ವರದಿಯನ್ನು 2020ರ ಮಾರ್ಚ್‌ 20ರಂದು ವರದಿ ಪ್ರಕಟಿಸಿತ್ತು. ರಮೇಶ್‌ ಜಾರಕಿಹೊಳಿ ಅವರ ಒಡೆತನದ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಲಿಮಿಟೆಡ್‌, ಅಪೆಕ್ಸ್‌ ಬ್ಯಾಂಕ್‌ನಿಂದ ಪಡೆದಿರುವ ಸಾಲವನ್ನು ತೀರಿಸದೇ ಅನುತ್ಪಾದಕ ಸಾಲಗಾರರ ಪಟ್ಟಿಗೆ ಸೇರ್ಪಡೆಯಾಗಿದೆ. ರಾಜಕೀಯ ಮುಖಂಡರ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳ ಪೈಕಿ ರಮೇಶ್‌ ಜಾರಕಿಹೊಳಿ ಅವರ ಒಡೆತನದ ಸೌಭಾಗ್ಯಲಕ್ಷ್ಮಿ ಶುಗರ್ಸ್‌ ಲಿಮಿಟೆಡ್‌ನಲ್ಲೇ ವಸೂಲಾಗದ ಆಸ್ತಿ ಪ್ರಮಾಣ ಹೆಚ್ಚಿದೆ ಎಂಬುದನ್ನು ಅಂಕಿ ಅಂಶಗಳ ಸಮೇತ ಪ್ರಕಟಿಸಿದ್ದ ‘ದಿ ಫೈಲ್‌’ ವರದಿ ಸ್ಮರಿಸಬಹುದು.

ವಸೂಲಾಗದ ಸಾಲ ಸಚಿವ ರಮೇಶ್‌ ಜಾರಕಿಹೊಳಿ ಒಡೆತನದ ಕಂಪನಿಯಲ್ಲೇ ಹೆಚ್ಚು

ಈ ಕಾರ್ಖಾನೆ ವಿವಿಧ ಉದ್ದೇಶಗಳ ಹೆಸರಿನಲ್ಲಿ ಪಡೆದಿರುವ ಸಾಲಗಳಲ್ಲಿ 2019ರ ಮಾರ್ಚ್‌ 31ರ ಅಂತ್ಯಕ್ಕೆ ಅಸಲು ಒಟ್ಟು 74.48 ಕೋಟಿ ರು., 29.05 ಕೋಟಿ ರು. ಬಡ್ಡಿ ಸೇರಿ ಒಟ್ಟು 103.54 ಕೋಟಿ ರು.ಬಾಕಿ ಇದೆ. ಆದರೆ ಈ ಸಾಲ ಸುಸ್ತಿಯಾಗಿದೆಯಲ್ಲದೆ 2017ರ ಏಪ್ರಿಲ್‌ 16ರಂದೇ ಇದು ವಸೂಲಾಗದ ಆಸ್ತಿ(ಎನ್‌ಪಿಎ) ಎಂದು ಬ್ಯಾಂಕ್‌ ಪರಿಗಣಿಸಿತ್ತು.

ಅಲ್ಲದೆ ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕ ಎಸ್‌ ಆರ್‌ ಪಾಟೀಲ್‌ ಒಡೆತನದ ಬೀಳಗಿ ಸಕ್ಕರೆ ಕಾರ್ಖಾನೆ, ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಸಚಿವ ಬಿ ಬಿ ಚಿಮ್ಮನಕಟ್ಟಿ ಒಡೆತನದ ಬಾದಾಮಿ ಸಕ್ಕರೆ ಕಾರ್ಖಾನೆ, ಸೋವರಿಯನ್‌ ಸಕ್ಕರೆ ಕಾರ್ಖಾನೆ, ಭವಾನಿ ಖಂಡಸಾರಿ, ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ, ಭಾಗ್ಯಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ, ಬೀದರ್‌ ಸಹಕಾರಿ ಸಕ್ಕರೆ ಕಾರ್ಖಾನೆಗಳು ಪಡೆದಿರುವ ಒಟ್ಟು 358.18 ಕೋಟಿ ರು. ವಸೂಲಾಗದ ಆಸ್ತಿ ಎಂದು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದರು. ಈ ಕುರಿತು ‘ದಿ ಫೈಲ್‌’ 2020ರ ಮಾರ್ಚ್‌ 21ರಂದು ವರದಿ ಪ್ರಕಟಿಸಿತ್ತು.

ಮಾಲೀಕರು ಆಡಿದ್ದೇ ಆಟ, ಅಪೆಕ್ಸ್‌ ಬ್ಯಾಂಕ್‌ ಹೂಡಿದ್ದೇ ಲಗ್ಗೆ; 358 ಕೋಟಿ ರು. ಪಂಗನಾಮ?

ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕ ಎಸ್‌ ಆರ್‌ ಪಾಟೀಲ್‌ ಅವರು ಪಾಲುದಾರರಾಗಿರುವ ಬೀಳಗಿ ಸಕ್ಕರೆ ಕಾರ್ಖಾನೆಗೆ 75.00 ಕೋಟಿ ರು. ಸಾಲ ನೀಡುವ ಮುನ್ನ ಕಾರ್ಖಾನೆಯ ಯಾವುದೇ ಸ್ಥಿರಾಸ್ತಿ-ಚರಾಸ್ತಿಯನ್ನು ಅಡಮಾನ ಮಾಡಿಕೊಳ್ಳದೇ ಬಿಡುಗಡೆ ಮಾಡಿರುವ ಕುರಿತು ತನಿಖಾ ವರದಿಯನ್ನಾಧರಿಸಿ ವರದಿ ಪ್ರಕಟಿಸಿತ್ತು.

ಈ ಕಾರ್ಖಾನೆಗೆ 2018ರ ಜುಲೈ 27ರಂದು ಸಾಲ ಮಂಜೂರಾತಿ ಆದೇಶ ಹೊರಡಿಸಿದ್ದ ಬ್ಯಾಂಕ್‌ನ ಆಡಳಿತ ಮಂಡಳಿ ಸಕ್ಕರೆ ದಾಸ್ತಾನಿನ ಮೇಲೆ 75.00 ಕೋಟಿ ರು.ಗಳನ್ನು ದುಡಿಯುವ ಬಂಡವಾಳ ರೂಪದಲ್ಲಿ ಬಿಡುಗಡೆ ಮಾಡಿತ್ತು. ಅಲ್ಲದೆ ಶೇ 1/3ರಷ್ಟು ಮುಂಗಡ ಬಂಡವಾಳವಾಗಿ ಹಾಗೂ ಶೇ.2/3ರ ಸಕ್ಕರೆ ದಾಸ್ತಾನಿನ ಆಧಾರದ ಮೇಲೆ ಬಿಡುಗಡೆ ಮಾಡಿತ್ತು. ಆದರೆ ಒಂದೇ ತಿಂಗಳಲ್ಲಿ ಅಂದರೆ 2018ರ ಆಗಸ್ಟ್‌ 18ರಂದು ಬ್ಯಾಂಕ್‌ನ ಆಡಳಿತ ಮಂಡಳಿ 75.00 ಕೋಟಿ ರು.ಗಳಲ್ಲಿ ಶೇ.2/3ರ ಅಡಮಾನ ಸಾಲ ಎಂದು ಇರುವುದನ್ನು ತಿದ್ದುಪಡಿ ಮುಂಗಡ ಬಂಡವಾಳ ಎಂದು ಪರಿವರ್ತಿಸಿತ್ತು. 2021ರ ಹೊತ್ತಿಗೆ ಬೀಳಗಿ ಶುಗರ್ಸ್‌ ಕಂಪನಿಗೆ 241.16 ಕೋಟಿ ರು. ಸಾಲ ನೀಡಲಾಗಿದೆ ಎಂದು ಪ್ರಜಾವಾಣಿಯು 2021ರ ಅಕ್ಟೋಬರ್‌ 17ರಂದು ವರದಿ ಮಾಡಿದೆ.

ಮುರುಗೇಶ್ ನಿರಾಣಿ ಒಡೆತನದ ನಿರಾಣಿ ಶುಗರ್ಸ್‍ಗೆ ಒಟ್ಟು 8500.00 ಲಕ್ಷ ರು, ಶ್ರೀ ಸಾಯಿ ಪ್ರಿಯಾ ಶುಗರ್ಸ್‍ಗೆ 3400.00 ಲಕ್ಷ ಎಂ ಆರ್ ಎನ್ ಕೇನ್ ಪವರ್ ಇಂಡಿಯಾ ಲಿಮಿಟೆಡ್‍ಗೆ 3500.00 ಲಕ್ಷ ರು ಸಾಲ ನೀಡಿದೆ. ನಿರಾಣಿ ಶುಗರ್ಸ್‍ನಿಂದ 2020ರ ಜನವರಿ 31ರ ಅಂತ್ಯಕ್ಕೆ ಸಾಲ ಅಸಲು, ಬಡ್ಡಿ ಸೇರಿ 186.35 ಲಕ್ಷ ರು. ಇದೆ. ಮಾಜಿ ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ ಅವರು ಪ್ರತಿನಿಧಿಸುವ ಭವಾನಿ ಖಂಡಸಾರಿ ಕಂಪನಿಗೆ 500.00 ಲಕ್ಷ ರು. ನೀಡಿದೆ. ಮಾಜಿ ಶಾಸಕ ಪ್ರಕಾಶ್ ಬಿ ಖಂಡ್ರೆ ಪ್ರತಿನಿಧಿಸುವ ಭಾಲ್ಕೇಶ್ವರ್ ಶುಗರ್ಸ ಲಿಮಿಟೆಡ್‍ಗೆ ಒಟ್ಟು 19015.0 ಲಕ್ಷ ರು. ಸಾಲ ನೀಡಿದೆ. ಈ ಕಂಪಣಿಯ ಅಸಲು ಮತ್ತು ಬಡ್ಡಿ ಸೇರಿ ಒಟ್ಟು 487.33 ಲಕ್ಷ ರು ಇರುವುದು ವರದಿಯಿಂದ ಗೊತ್ತಾಗಿದೆ.

ಹೂಡಿಕೆ ಖರೀದಿಯಲ್ಲಿಯೂ ಅಪರಾತಪರಾ; ಅಪೆಕ್ಸ್‌ ಬ್ಯಾಂಕ್‌ಗೆ ಆದ ನಷ್ಟ 33.21 ಕೋಟಿ

ಕಾಂಗ್ರೆಸ್ ಶಾಸಕ ಆನಂದ್ ಎಸ್ ನ್ಯಾಮಗೌಡ ಪ್ರತಿನಿಧಿಸುವ ಜಮಖಂಡಿ ಶುಗರ್ಸ್‍ಗೆ 8500.00 ಲಕ್ಷ ರು., ಶ್ರೀಮಂತ ಪಾಟೀಲ್ ಒಡೆತನದ ಅಥಣಿ ಶುಗರ್ಸ್‍ಗೆ 8500.00 ಲಕ್ಷ ರು., ಸಾಲ ನೀಡಿದೆ. ಇದರ ಬಡ್ಡಿ ಮೊತ್ತ ಸೇರಿ ಒಟ್ಟು 11.16 ಲಕ್ಷ ರು. ಇದೆ. ಈ ಕುರಿತು ‘ದಿ ಫೈಲ್‌’ 2020 ರ ಮಾರ್ಚ್‌ 24ರಂದು ವರದಿ ಪ್ರಕಟಿಸಿತ್ತು.

ರಿಯಲ್‌ ಎಸ್ಟೇಟ್‌ ಕಂಪನಿಗಳಿಗೂ ಬೇಕಾಬಿಟ್ಟಿ ಸಾಲ; ದುಸ್ಥಿತಿಗೆ ತಲುಪಿತೇ ಅಪೆಕ್ಸ್‌ ಬ್ಯಾಂಕ್‌?

ಅಪೆಕ್ಸ್‌ ಬ್ಯಾಂಕ್‌ನ ಅಕ್ರಮಗಳ ಕುರಿತು ‘ದಿ ಫೈಲ್‌’ ಸರಣಿ ವರದಿಗಳು ಪ್ರಕಟವಾಗಿದ್ದ ಹೊತ್ತಿನಲ್ಲಿಯೇ 2020ರ ಮಾರ್ಚ್‌ 25ರಂದು ನಡೆದಿದ್ದ ವಿಧಾನಮಂಡಲದ ಅಧಿವೇಶನದಲ್ಲಿಯೂ ಅಪೆಕ್ಸ್‌ ಬ್ಯಾಂಕ್‌ ಅಕ್ರಮಗಳ ಕುರಿತು ಜೆಡಿಎಸ್‌ನ ಎಚ್‌ ಡಿ ರೇವಣ್ಣ ಅವರು ಪ್ರಸ್ತಾಪಿಸಿ ಧರಣಿ ನಡೆಸಿದ್ದನ್ನು ಸ್ಮರಿಸಬಹುದು.

ಅಪೆಕ್ಸ್‌ ಬ್ಯಾಂಕ್‌ ಅಕ್ರಮ; ‘ದಿ ಫೈಲ್‌’ ಸರಣಿ ವರದಿಯಿಂದ ಎಚ್ಚೆತ್ತ ಜೆಡಿಎಸ್‌ನಿಂದ ಸದನದಲ್ಲಿ ಧರಣಿ

ಇದಾದ ನಂತರ ಅಪೆಕ್ಸ್‌ ಬ್ಯಾಂಕ್‌ ಕುರಿತು 2018-19ನೇ ಸಾಲಿನ ಲೆಕ್ಕ ಪರಿಶೋಧನೆಯಲ್ಲಿಯೂ ಬ್ಯಾಂಕ್‌ನ ಹಲವು ಅಕ್ರಮಗಳು ಬಹಿರಂಗಗೊಂಡಿದ್ದವು. ಈ ವರದಿಯನ್ನಾಧರಿಸಿಯೂ ‘ದಿ ಫೈಲ್‌’ ಮುಖ್ಯವಾಹಿನಿಗೂ ಮೊದಲೇ 2021ರ ಆಗಸ್ಟ್‌ 9ರಿಂದ 19ರವರೆಗೆ ಒಟ್ಟು 10 ವರದಿಗಳನ್ನು ಸರಣಿ ರೂಪದಲ್ಲಿ ಪ್ರಕಟಿಸಿತ್ತು.

ಬೃಹತ್‌ ಮತ್ತು ಕೈಗಾರಿಕೆ ಸಚಿವ ಮುರುಗೇಶ್‌ ಆರ್‌ ನಿರಾಣಿ ಅವರ ಒಡೆತನದ ನಿರಾಣಿ ಷುಗರ್ಸ್‌ ಲಿಮಿಟೆಡ್‌, ಸಹ-ಕಂಪನಿಗೆ ಸೇರಿರುವ ಸ್ಥಿರಾಸ್ತಿಯನ್ನು ಅಡಮಾನವಾಗಿರಿಸಿ 85.00 ಕೋಟಿ ರು. ಸಾಲವನ್ನು ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ನಿಂದ ಪಡೆದಿತ್ತು.

85 ಕೋಟಿ ಸಾಲಕ್ಕೆ ಸಹ-ಕಂಪನಿಯ ಸ್ಥಿರಾಸ್ತಿ ಒತ್ತೆ;ನಿಬಂಧನೆ ಪಾಲಿಸದ ನಿರಾಣಿ ಷುಗರ್ಸ್‌

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ನಿರ್ದೇಶಕರಾಗಿರುವ ಹರ್ಷ ಷುಗರ್ಸ್‌ ಲಿಮಿಟೆಡ್‌ ಅಪೆಕ್ಸ್‌ ಬ್ಯಾಂಕ್‌ನಿಂದ ಮಂಜೂರು ಮಾಡಿಸಿಕೊಂಡ ಹೊಸ ಸಾಲದ ಮೊತ್ತದಲ್ಲಿ ಬಹುತೇಕ ಮೊತ್ತವನ್ನು ಹಳೇ ಸಾಲದ ಬಾಕಿಗೆ ಹೊಂದಾಣಿಕೆ ಮಾಡಿರುವುದನ್ನು ಲೆಕ್ಕ ಪರಿಶೋಧನೆ ವರದಿ ಹೊರಗೆಡವಿತ್ತು.

ಹರ್ಷ ಷುಗರ್ಸ್‌ ಕರಾಮತ್ತು; ಹಳೇ ಸಾಲಕ್ಕೆ ಹೊಂದಾಣಿಕೆಯಾಯಿತು ಹೊಸ ಸಾಲದ 50 ಕೋಟಿ

ಅಪೆಕ್ಸ್‌ ಬ್ಯಾಂಕ್‌ ಸಾಲ ಮಂಜೂರಾತಿ ಮಾಡಿದ್ದ 50.00 ಕೋಟಿ ರು. ಪೈಕಿ 30.81 ಕೋಟಿ ರು. ಗಳನ್ನು ಹಳೇ ಬಾಕಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಅಲ್ಲದೆ ಹೆಚ್ಚುವರಿ ಸಾಲ ಮಂಜೂರಾತಿಗೆ ಸಮೂಹ ಬ್ಯಾಂಕ್‌ಗಳಿಂದ ನಿರಾಪೇಕ್ಷಣಾ ಪತ್ರ ಪಡೆಯದ ಕಾರಣ, ಹೆಚ್ಚುವರಿ ಸಾಲದ ಹೊಣೆಯು ಅಪೆಕ್ಸ್‌ ಬ್ಯಾಂಕ್‌ ಮೇಲೆ ಬಿದ್ದಿದೆ ಎಂದು ಶಾಸನಬದ್ಧ ಲೆಕ್ಕಪರಿಶೋಧಕರು ಬಹಿರಂಗಗೊಳಿಸಿದ್ದರು.

ಮಾಜಿ ಶಾಸಕ ಪ್ರಕಾಶ್‌ ಖಂಡ್ರೆ ನಿರ್ದೇಶಕರಾಗಿರುವ ಬಾಲ್ಕೇಶ್ವರ ಷುಗರ್ಸ್‌ ಲಿಮಿಟೆಡ್‌ಗೆ ಸಮೂಹ ಬ್ಯಾಂಕ್‌ಗಳಿಂದ ನಿರಪೇಕ್ಷಣಾ ಪತ್ರ ಬರುವ ಮೊದಲೇ ಅಪೆಕ್ಸ್‌ ಬ್ಯಾಂಕ್‌ 60.00 ಕೋಟಿ ರು. ಸಾಲ ಮಂಜೂರು ಮಾಡಿತ್ತು.

ಬಾಲ್ಕೇಶ್ವರ ಷುಗರ್ಸ್‌ ಲಿಮಿಟೆಡ್‌ಗೆ ಅಪೆಕ್ಸ್‌ ಬ್ಯಾಂಕ್‌, ಪಿಎನ್‌ಬಿ, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕಾರ್ಪ್‌ ಬ್ಯಾಂಕ್‌, ಐಒಬಿ ಸೇರಿದಂತೆ ಇನ್ನಿತರೆ ಬ್ಯಾಂಕ್‌ಗಳು ನೀಡಿದ್ದ ಒಟ್ಟು ಸಾಲದ ಪೈಕಿ 1,51,07,62,364.00 ರಷ್ಟು ಹೊರಬಾಕಿ ಇದ್ದರೂ ಆ ಎಲ್ಲಾ ಬ್ಯಾಂಕ್‌ಗಳು ನಿರಪೇಕ್ಷಣಾ ಪತ್ರ ನೀಡುವ ಮುನ್ನವೇ ಅಪೆಕ್ಸ್‌ ಬ್ಯಾಂಕ್‌ 60.00 ಕೋಟಿ ರು. ಸಾಲ ಮಂಜೂರು ಮಾಡಿದ್ದನ್ನು ಲೆಕ್ಕ ಪರಿಶೋಧನೆ ವರದಿ ಹೊರಗೆಡವಿತ್ತು.

ಮಾರ್ಗಸೂಚಿ ಉಲ್ಲಂಘನೆ; ಎನ್‌ಒಸಿಗೂ ಮುನ್ನವೇ ಖಂಡ್ರೆ ಒಡೆತನದ ಕಂಪನಿಗೆ 60 ಕೋಟಿ ಸಾಲ

ಕಣ್ವ ಫ್ಯಾಷನ್ಸ್‌ ಕಂಪನಿಗೆ ಸಂಬಂಧದಪಟ್ಟ ಖಾತೆಯಲ್ಲಿ ಯಾವುದೇ ವ್ಯಾಪಾರ ವ್ಯವಹಾರಗಳು ಕಂಡು ಬಂದಿಲ್ಲ. 5.60 ಕೋಟಿ ಸಾಲದಲ್ಲಿ ಕಣ್ವ ಫ್ಯಾಷನ್ಸ್‌ಗೆ 4.97ಕೋಟಿ (ಶೇ.89) ಪಾವತಿಯಾಗಿದ್ದರೆ ಉಳಿದ 0.63 ಕೋಟಿ ಕಣ್ವ ಸ್ಟಾರ್‌ ಮತ್ತು ಹೋಟೆಲ್‌ ಪ್ರೈ ಲಿಮಿಟೆಡ್‌ಗೆ ಪಾವತಿಯಾಗಿತ್ತು. ಅಲ್ಲದೆ 2018ರ ಜೂನ್‌ 27ರಂದು 20.00 ಲಕ್ಷ ರು.ಗಳು ನಗದು ರೂಪದಲ್ಲಿ ಡ್ರಾ ಆಗಿದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಲಾಗಿದೆ.

ಕಣ್ವ ಸಮೂಹ ಕಂಪನಿಗಳಿಗೆ ಅಪೆಕ್ಸ್‌ನಿಂದ ಕೋಟ್ಯಂತರ ಸಾಲ; ಹಲವು ಲೋಪಗಳು ಪತ್ತೆ

ಮಂಜೂರು ಮಾಡಿದ ಸಾಲವನ್ನು ಮೂಲ ಉದ್ದೇಶಕ್ಕೆ ಬಳಸಬೇಕು. ಆದರೆ ಕಣ್ವ ಗಾರ್ಮೆಂಟ್ಸ್‌ ಪ್ರೈ ಲಿಮಿಟೆಡ್‌ ಪ್ರಕರಣವನ್ನು ಪರಿಶೀಲಿಸಿದಾಗ ಹೆಚ್ಚಿನ ಮೊತ್ತವನ್ನು ಬೇರೆ ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾಗಿದೆ. ಮಂಜೂರಾತಿ ಉದ್ದೇಶವನ್ನು ಸಾಲಗಾರರದಿಂದ ಬ್ಯಾಂಕ್‌ ದೃಢಪಡಿಸಿಕೊಳ್ಳದಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

ವಿಧಾನಪರಿಷತ್‌ ಸದಸ್ಯ ಕೆ ಪಿ ನಂಜುಂಡಿ ಅವರು ನಿರ್ದೇಶಕರಾಗಿರುವ ಲಕ್ಷ್ಮಿ ಗೋಲ್ಡ್‌ ಖಜಾನ ಪ್ರೈ ಲಿಮಿಟೆಡ್‌ ಕಂಪನಿಯು ಅಪೆಕ್ಸ್‌ ಬ್ಯಾಂಕ್‌ನಿಂದ ಸಾಲ ಪಡೆಯುವ ಸಂದರ್ಭದಲ್ಲಿ ಸ್ವತ್ತಿನ ಮೌಲ್ಯಮಾಪನವನ್ನು ಹೆಚ್ಚುವರಿಯಾಗಿ ಮೌಲ್ಯಮಾಪನ ಮಾಡಿಸಿತ್ತು. ಅಲ್ಲದೆ ಆದಾಯ ಇಲಾಖೆಯ ಜಫ್ತಿಗೊಳಪಟ್ಟಿದ್ದ ಸ್ವತ್ತನ್ನು ಸಾಲಕ್ಕೆ ಹೆಚ್ಚುವರಿ ಭದ್ರತೆಯನ್ನಾಗಿರಿಸಿತ್ತು ಎಂಬ ಸಂಗತಿಯನ್ನು ಲೆಕ್ಕ ಪರಿಶೋಧನೆ ವರದಿಯು ಬಹಿರಂಗಗೊಳಿಸಿತ್ತು.

ಆಸ್ತಿಯ ಮೌಲ್ಯಮಾಪನದಲ್ಲಿ ಹೆಚ್ಚಳ, ಜಫ್ತಿಯಾಗಿದ್ದ ಸ್ವತ್ತಿನ ಭದ್ರತೆ ಇರಿಸಿದ್ದ ಲಕ್ಷ್ಮಿ ಗೋಲ್ಡ್‌ ಖಜಾನ

ಬೆಳಗಾವಿ ತಾಲ್ಲೂಕಿನ ಕಾಕತಿಯಲ್ಲಿರುವ ಮಾರ್ಕಂಡೇಯ ಸಹಹಾರಿ ಸಕ್ಕರೆ ಕಾರ್ಖಾನೆಯು ಅಪೆಕ್ಸ್‌ ಬ್ಯಾಂಕ್‌ನಿಂದ ಪಡೆದಿದ್ದ ಸಾಲದ ಹೊರಬಾಕಿ ಇರಿಸಿಕೊಂಡಿದ್ದ 419.05 ಲಕ್ಷ ರು.ಗಳನ್ನು ಬಡ್ಡಿ ರಿಯಾಯಿತಿ ಯೋಜನೆಯಡಿ ಮನ್ನಾ ಮಾಡಿರುವುದನ್ನು ಬ್ಯಾಂಕ್‌ನ ಶಾಸನಬದ್ಧ ಲೆಕ್ಕ ಪರಿಶೋಧಕರು ಹೊರಗೆಡವಿದ್ದನ್ನು ಸ್ಮರಿಸಬಹುದು.

ಮಾರ್ಕಂಡೇಯ ಸಕ್ಕರೆ ಕಾರ್ಖಾನೆಯ ಹೆಚ್ಚುವರಿ ಸಾಲದ ಹೊಣೆ ಹೊರದ ಸಮೂಹ ಬ್ಯಾಂಕ್‌ಗಳು

ಕರ್ನಾಟಕ ರಾಜ್ಯ ಅಪೆಕ್ಸ್‌ ಬ್ಯಾಂಕ್‌ ತನ್ನ ಕಾರ್ಯವ್ಯಾಪ್ತಿಯಿಂದ ಹೊರಗಿರುವ ಹೊರ ರಾಜ್ಯದಲ್ಲಿ ನೋಂದಾಯಿತವಾಗಿರುವ ಶಿವಶಕ್ತಿ ಷುಗರ್‌ ಮಿಲ್ಸ್‌ ಇಂಡಿಯಾ ಪ್ರೈವೈಟ್‌ ಲಿಮಿಟೆಡ್‌ ಕಂಪನಿಗೆ 19.50 ಕೋಟಿ ರು. ಸಾಲ ನೀಡಿರುವುದನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.

ಉಲ್ಲಂಘನೆ; ಹೊರರಾಜ್ಯದಲ್ಲಿ ನೋಂದಾಯಿತ ಸಕ್ಕರೆ ಕಂಪನಿಗೂ 19.50 ಕೋಟಿ ಸಾಲ

ಸಮೂಹ ಬ್ಯಾಂಕ್‌ಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ 43 ಕೋಟಿ ಮತ್ತು ಎಸ್‌ಬಿಐ ಹುಬ್ಬಳ್ಳಿಯು 45 ಕೋಟಿ ಸಾಲವನ್ನು ದುಡಿಯುವ ಬಂಡವಾಳ ರೂಪದಲ್ಲಿ ಬೀಳಗಿ ಸಕ್ಕರೆ ಕಾರ್ಖಾನೆಗೆ ನೀಡಿರುವುದು ವರದಿಯಿಂದ ಗೊತ್ತಾಗಿದೆ.

ಬೀಳಗಿ ಸಕ್ಕರೆ ಕಾರ್ಖಾನೆಗೆ ದೊರೆಯದ ಎನ್‌ಒಸಿ; ಅಪೆಕ್ಸ್‌ ಹೆಗಲಿಗೆ ಬಿದ್ದಿದೆ ಸಾಲದ ಹೊಣೆಗಾರಿಕೆ

ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ನಿರ್ದೇಶಕರಾಗಿರುವ ಜಮಖಂಡಿ ಷುಗರ್ಸ್‌ ಹೊಂದಿರುವ ಬ್ಯಾಂಕ್‌ ಖಾತೆಗಳ ಸ್ಥಿತಿಗತಿ ವಿವರ ಪಡೆಯದೇ 2018ರ ಮಾರ್ಚ್‌ ಅಂತ್ಯಕ್ಕೆ 272.77 ಕೋಟಿಯಷ್ಟು ದುಡಿಯುವ ಬಂಡವಾಳ ಸಾಲವನ್ನು ಅಪೆಕ್ಸ್‌ ಬ್ಯಾಂಕ್‌ ಮಂಜೂರು ಮಾಡಿದ್ದ ಪ್ರಕರಣವನ್ನು ಶಾಸನಬದ್ಧ ಲೆಕ್ಕಪರಿಶೋಧಕರು ಹೊರಗೆಡವಿದ್ದಾರೆ.

ಬ್ಯಾಂಕ್‌ ಖಾತೆಗಳ ವಿವರ ಪಡೆಯದೇ ಜಮಖಂಡಿ ಷುಗರ್ಸ್‌ಗೆ 272 ಕೋಟಿ ಸಾಲ ಮಂಜೂರು

ಅವಧಿ ಸಾಲವು ಅನುತ್ಪಾದಕ ಆಸ್ತಿಯಾಗಿದ್ದರೂ ಬೀದರ್‌ ಕಿಸಾನ್‌ ಸಕ್ಕರೆ ಕಾರ್ಖಾನೆಗೆ ಅಪೆಕ್ಸ್‌ ಬ್ಯಾಂಕ್‌ 4500.00 ಲಕ್ಷ ರು.ಗಳ ದುಡಿಯುವ ಬಂಡವಾಳ ಮಂಜೂರು ಮಾಡಿರುವ ಪ್ರಕರಣವನ್ನು ಶಾಸನಬದ್ಧ ಲೆಕ್ಕ ಪರಿಶೋಧಕರು ಹೊರಗೆಡವಿದ್ದಾರೆ.

ಸುಸ್ತಿಸಾಲದ ಖಾತೆಗೆ 3.56 ಕೋಟಿ ಹೊಂದಾಣಿಕೆ, ಬಡ್ಡಿ ಬಾಕಿಗೆ 20.65 ಕೋಟಿ ಪಾವತಿ

ಸಹಕಾರಿ ಬ್ಯಾಂಕಗಳಿಗೆ ಸಾಲ ನೀಡಬೇಕಿದ್ದ ಅಪೆಕ್ಸ್‌ ಬ್ಯಾಂಕ್‌ ಇತ್ತೀಚಿನ ವರ್ಷಗಳಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ನಿಯಮಬಾಹಿರವಾಗಿ ಸಾಲ ನೀಡುವ ಮೂಲಕ ದಿವಾಳಿ ಅಂಚಿಗೆ ಬಂದು ನಿಂತಿದೆ. ಅಪೆಕ್ಸ್‌ ಬ್ಯಾಂಕ್‌ನಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಒತ್ತಾಯ ಕೇಳಿ ಬಂದಿತ್ತಾದರೂ ಹಿಂದಿನ ಕಾಂಗ್ರೆಸ್‌ ಸರ್ಕಾರ ಮತ್ತು ಮೈತ್ರಿ ಸರ್ಕಾರದ ಅವಧಿಯಲ್ಲಿ ಈ ಬಗ್ಗೆ ಕ್ರಮವಹಿಸಿರಲಿಲ್ಲ.

the fil favicon

SUPPORT THE FILE

Latest News

Related Posts