ಟ್ರಾಮಾ ಕೇಂದ್ರಗಳಿಗೆ ಅನುದಾನ ಕಡಿತ ಕುರಿತ ‘ದಿ ಫೈಲ್‌’ ವರದಿ ಬೆನ್ನಲ್ಲೇ ಮಾಹಿತಿ ಕೋರಿದ ಪ್ರತಿಪಕ್ಷ ನಾಯಕ

ಬೆಂಗಳೂರು;  ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಟ್ರಾಮ ಕೇರ್‍‌ ಕೇಂದ್ರಕ್ಕೆ ರಾಜ್ಯ ಕಾಂಗ್ರೆಸ್‌ ಸರ್ಕಾರವು  ಅನುದಾನ ಕಡಿತಗೊಳಿಸಿರುವ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಆರ್‍‌ ಅಶೋಕ್‌ ಅವರು ಇದೀಗ ಟ್ರಾಮಾ ಕೇಂದ್ರಗಳ ಆರ್ಥಿಕ ಸ್ಥಿತಿ ಕುರಿತು ಮಾಹಿತಿ ಕೋರಿ ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

 

ಬೆಂಗಳೂರು ವೈದ್ಯಕೀಯ ಶಿಕ್ಷಣ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿರುವ ಟ್ರಾಮಾ ಕೇರ್‍‌ ಅಧ್ಯಯನ ಕೇಂದ್ರಕ್ಕೆ  2023-24ನೇ ಆರ್ಥಿಕ ವರ್ಷದಲ್ಲಿ ಹಂಚಿಕೆ ಮಾಡಿರುವ ಅನುದಾನಕ್ಕಿಂತಲೂ 2024-25ನೇ ಸಾಲಿನಲ್ಲಿ ಹಂಚಿಕೆ ಮಾಡಿರುವ ಪ್ರಮಾಣಕ್ಕೆ ಹೋಲಿಸಿದರೆ ಶೇ.60ರಷ್ಟು ಕಡಿತಗೊಳಿಸಿತ್ತು. ಈ ಸಂಬಂಧ ‘ದಿ ಫೈಲ್‌’ 2024ರ ಮೇ 1ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

ಟ್ರಾಮಾ ಕೇರ್ ಕೇಂದ್ರಕ್ಕೆ ಶೇ.60ರಷ್ಟು ಅನುದಾನ ಕಡಿತ; ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಹಣವಿಲ್ಲವೇ?

ಈ ವರದಿ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಆರ್‍‌ ಅಶೋಕ್‌ ಅವರು 2024ರ ಮೇ 3ರಂದು ಮಾಹಿತಿ ಕೋರಿ ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲಿ ಕೋರಿರುವ ಮಾಹಿತಿಯಲ್ಲೇನಿದೆ?

 

2023-2ರಲ್ಲಿ ಬೆಂಗಳೂರು ವೈದ್ಯಕೀಯ ಶಿಕ್ಷಣ ಸಂಸ್ಥೆ/ವಿಕ್ಟೋರಿಯಾ ಆಸ್ಪತ್ರೆ ವ್ಯವಸ್ಥೆಯ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಟ್ರಾಮಾ ಕೇಂದ್ರಗಳಿಗೆ ಹಂಚಿಕೆಯಾಗಿದ್ದ ಅನುದಾನ, ಯಾವ ಯಾವ ಉದ್ದೇಶಗಳಿಗೆ ಎಷ್ಟೆಷ್ಟು ಅನುದಾನ ಹಂಚಿಕೆ ಮಾಡಿದೆ ಎಂಬ ಕುರಿತು ಮಾಹಿತಿ ಕೋರಿರುವುದು ಪತ್ರದಿಂದ ಗೊತ್ತಾಗಿದೆ.

 

2024-25ನೇ ಸಾಲಿಗೆ ಟ್ರಾಮಾ ಕೇರ್‍‌ ಕೇಂದ್ರಗಳನ್ನು ಉನ್ನತೀಕರಿಸುವ ಬಗ್ಗೆ ಸರ್ಕಾರ, ವೈದ್ಯಕೀಯ ಶಿಕ್ಷಣ ಇಲಾಖೆ ಏನಾದರೂ ಹೆಜ್ಜೆಗಳನ್ನು ಇಟ್ಟಿದೆಯೇ, 2024-25ನೇ ಸಾಲಿನಗೆ ಟ್ರಾಮ ಕೇರ್‍‌ ಕೇಂದ್ರಗಳನ್ನು ಉತ್ತಮಗೊಳಿಸುವುದಕ್ಕೆ ವೈದ್ಯರ ಲಭ್ಯತೆಗೆ ವೈದ್ಯಕೀಯ ಪರಿಚಾರಕ ಸಿಬ್ಬಂದಿ ಲಭ್ಯತೆಗೆ ಸರ್ಕಾರವು ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಮಾಹಿತಿ ಕೋರಿದ್ದಾರೆ.

 

2023-24ರಲ್ಲಿ ಟ್ರಾಮಾ ಕೇರ್‍‌ ಕೇಂದ್ರಗಳಲ್ಲಿ ದಾಖಲಾದ ರೋಗಿಗಳ, ಅಪಘಾತಪೀಡಿತ ವ್ಯಕ್ತಿಗಳ ಸಂಖ್ಯೆ, ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಎಷ್ಟು ಟ್ರಾಮಾ ಕೇಂದ್ರಗಳ ವಿವರ, ಬೆಂಗಳೂರು ಮಹಾನಗರ ವ್ಯಾಪ್ತಿಯ ಜನರಿಗೆ ಈ ಕೇಂದ್ರಗಳು ತುರ್ತು ಸೌಲಭ್ಯಕ್ಕೆ ಯಾವಾಗ ಲಭ್ಯವಾಗುತ್ತವೆ ಎಂದು ಮಾಹಿತಿ ಕೋರಿರುವುದು ತಿಳಿದು ಬಂದಿದೆ.

 

ಟ್ರಾಮಾ ಕೇರ್‍‌ ಕೇಂದ್ರಗಳಿಗೆ 2024-25ನೇ ಸಾಲಿಗೆ ರಾಜ್ಯ ಸರ್ಕಾರ/ವೈದ್ಯಕೀಯ ಶಿಕ್ಷ ಇಲಾಖೆಯಿಂದ ಹಂಚಿಕೆಯಾದ, ಬಿಡುಗಡೆಯಾದ ಅನುದಾನದ ವಿವರ, 2023-24ನೇ ಸಾಲಿನಲ್ಲಿ ನೀಡಿದ್ದ ಅನುದಾನಕ್ಕೆ ಹೋಲಿಕೆ ಮಾಡಿ ಯಾವ ಕಾರಣಗಳಿಗೆ ಹೀಗೆ ವ್ಯತ್ಯಾಸವಾದ ಅನುದಾನಗಳನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ ಎಂಬ ಕುರಿತೂ ಮಾಹಿತಿ ಕೋರಿದ್ದಾರೆ.

 

 

ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಮೊದಲ ವರ್ಷದಲ್ಲಿ ಅಂದರೆ 2023-24ರಲ್ಲಿ  ನೀಡಿದ್ದ ಅನುದಾನಕ್ಕಿಂತಲೂ 2024-25ನೇ ಸಾಲಿನಲ್ಲಿ ಕಡಿತಗೊಳಿಸಿದ್ದು ಚರ್ಚೆಗೆ ಗ್ರಾಸವಾಗಿತ್ತು.

 

ಗ್ಯಾರಂಟಿಗಳಲ್ಲೊಂದಾದ ಅನ್ನಭಾಗ್ಯ ಮತ್ತು ಗೃಹ ಲಕ್ಷ್ಮಿ ಯೋಜನೆಗಳಿಗೆ ಪ್ರತೀ ವರ್ಷವು ಅನುದಾನ ಹೊಂದಿಸಲು ಸಾಧ್ಯವಿಲ್ಲ. ಅಲ್ಲದೇ ಈ ಯೋಜನೆಗಳಿಗೆ ಅನುದಾನ ಒದಗಿಸಿದಲ್ಲಿ ಇತರೆ ಲೆಕ್ಕ ಶೀರ್ಷಿಕೆಗಳಲ್ಲಿನ ಅನುದಾನದಲ್ಲಿ ಕಡಿತಗೊಳಿಸಬೇಕಾದ ಸ್ಥಿತಿ ಎದುರಾಗಲಿದೆ ಎಂದು ಆರ್ಥಿಕ ಇಲಾಖೆಯು ಹೇಳಿತ್ತು.

ಗೃಹ ಲಕ್ಷ್ಮಿ; ನಿರಂತರ ಸಾಲದ ಸುಳಿ, ಆದಾಯದ ಕೊರತೆ, ಹಣಕಾಸು ಹೊಣೆಗಾರಿಕೆ ಕಾಯ್ದೆ ಉಲ್ಲಂಘನೆ

ಅಲ್ಲದೇ ವಸತಿ ಶಿಕ್ಷಣ ಸಂಸ್ಥೆಗಳಲ್ಲಿನ ಪ್ರವೇಶಾತಿ ಪ್ರಮಾಣ ಹೆಚ್ಚಿಸಲೂ ಸಮಾಜ ಕಲ್ಯಾಣ ಇಲಾಖೆ ಪ್ರಸ್ತಾವಿಸಿತ್ತು. ಆದರೆ ಆರ್ಥಿಕ ಇಲಾಖೆಯು ಪ್ರಸ್ತುತ ಆರ್ಥಿಕ ಕ್ಲಿಷ್ಟತೆಯನ್ನು ಮುಂದಿಟ್ಟು ಪ್ರವೇಶಾತಿ ಹೆಚ್ಚಳಕ್ಕೆ ಅನುಮತಿ ನಿರಾಕರಿಸಿತ್ತು.

ಆರ್ಥಿಕ ಕ್ಲಿಷ್ಟ ಪರಿಸ್ಥಿತಿ; ವಸತಿ ಶಾಲೆಗಳಿಗೆ ಶೇ.10 ಪ್ರವೇಶ ಹೆಚ್ಚಳಕ್ಕೆ 11.29 ಕೋಟಿ ರು. ಹಣವಿಲ್ಲ, ಕೈ ಚೆಲ್ಲಿದ ಇಲಾಖೆ

ಅಲ್ಲದೇ ಅನ್ನಭಾಗ್ಯದ ಗ್ಯಾರಂಟಿ ನೀಡಿರುವುದಕ್ಕೂ ಆರ್ಥಿಕ ಇಲಾಖೆಯು ಆಕ್ಷೇಪ ವ್ಯಕ್ತಪಡಿಸಿತ್ತು.

ಭಾರೀ ಪ್ರಮಾಣದ ಆದಾಯ ಕೊರತೆ; ಅರ್ಥ ಸಚಿವರಿಂದಲೇ ವಿತ್ತೀಯ ಹೊಣೆಗಾರಿಕೆ ಕಾಯ್ದೆ ಉಲ್ಲಂಘನೆ

 

‘ಟ್ರಾಮಾ ಕೇರ್‍‌ ಕೇಂದ್ರಕ್ಕೆ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಸಾಮಾನ್ಯ ಲೆಕ್ಕ ಶೀರ್ಷಿಕೆ 2210ರ 103ರ ಅಡಿಯಲ್ಲಿ 2024-25ನೇ ಸಾಲಿನಲ್ಲಿ ಮೊತ್ತ ರು 722.80/- ನಿಗದಿಪಡಿಸಿದೆ. ಆದರೆ ಈ ಅನುದಾನವು ಹಿಂದಿನ ಆರ್ಥಿಕ ವರ್ಷದಲ್ಲಿ (2023-24) ಹಂಚಿಕೆ ಮಾಡಿರುವ ಅನುದಾನಕ್ಕಿಂತ ಶೇ.44 ಹಾಗೂ ಶೇ.15ರಷ್ಟು ಹಣದುಬ್ಬರದೊಂದಿಗೆ ಒಟ್ಟು ಶೇ.60ರಷ್ಟು ಅನುದಾನವು ಕಡಿತಗೊಂಡಿದೆ,’ ಎಂದು ಸಭೆಗೆ ಮಾಹಿತಿ ಒದಗಿಸಿದ್ದರು.

 

the fil favicon

SUPPORT THE FILE

Latest News

Related Posts