ಬಿಳಿ ಹಾಳೆ ಮೇಲೆ ಸಲ್ಲಿಸಿದ್ದ ಬಿಲ್‌ಗಳಿಗೂ ಮಾನ್ಯತೆ; ಆದಾಯ ತೆರಿಗೆಯಲ್ಲೂ 1.41 ಕೋಟಿ ರು. ನಷ್ಟ

ಬೆಂಗಳೂರು;  ಗ್ರಂಥಾಲಯ ಇಲಾಖೆಯ ನಿರ್ದೇಶಕರು ತಮ್ಮ ವಿವೇಚನೆಯಂತೆ ಮಾರ್ಗಸೂಚಿ ನಿಯಮಗಳನ್ನು ತಿರುಚಿದ್ದರು.  ಸರ್ಕಾರದ ಮಾರ್ಗಸೂಚಿಗಳಿಗೆ ವ್ಯತಿರಿಕ್ತವಾಗಿ ಸರಬರಾಜು ಆದೇಶಗಳನ್ನು ನೀಡಿ ಕೋಟ್ಯಂತರ ರುಪಾಯಿ ಮೌಲ್ಯದ ಪುಸ್ತಕಗಳನ್ನು ಖರೀದಿ ಮಾಡಿದ್ದರು. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟವನ್ನುಂಟಾಗಿದೆ ಎಂದು ತನಿಖಾ ಸಮಿತಿಯು ಪತ್ತೆ ಹಚ್ಚಿದೆ.

 

ಪುಸ್ತಕಗಳ ಖರೀದಿ, ಡಿಜಿಟಲ್‌ ಲೈಬ್ರರಿ ಅನುಷ್ಠಾನದಲ್ಲಿನ ಅಕ್ರಮ, ಇ-ಕಂಟೆಂಟ್‌ಗಳ ಹಿಂದಿನ ವ್ಯವಹಾರ, ಪುಸ್ತಕಗಳ ಆಯ್ಕೆ ಪ್ರಕ್ರಿಯೆಗಳಲ್ಲಾಗಿರುವ ಹಲವು ಲೋಪಗಳು ಬಹಿರಂಗಗೊಂಡಿರುವ ಬೆನ್ನಲ್ಲೇ ಪುಸ್ತಕಗಳ ಖರೀದಿಯಲ್ಲಿನ ಅವ್ಯವಹಾರಗಳೂ ಮುನ್ನೆಲೆಗೆ ಬಂದಿವೆ.

 

ನಿಯಮಬಾಹಿರವಾಗಿ ಸರಬರಾಜು ಹಕ್ಕನ್ನು ಪಡೆದ ಪುಸ್ತಕ ಸರಬರಾಜುದಾರರುಗಳು ಕೇವಲ ಬಿಳಿ ಹಾಳೆಯ ಮೇಲೆ ಬಿಲ್‌ನ್ನು ಸಲ್ಲಿಸಿದ್ದರು. ಆದರೂ ಸಹ ಅಂತಹ ಬಿಲ್‌ಗಳನ್ನು ಸಹ ಮಾನ್ಯ ಮಾಡಿದ್ದರು. ಟ್ಯಾಕ್ಸ್‌ ಇನ್‌ವಾಯ್ಸ್‌ಗಳನ್ನು ಪಡೆದುಕೊಳ್ಳದೆಯೇ ಇವರಿಗೆ ಈ ನಿಯಮವು ಅನ್ವಯವಾಗುವುದಿಲ್ಲ ಎಂಬ ಕಾರಣ ನೀಡಿ ಬಿಲ್‌ಗಳನ್ನು ಪಾವತಿ ಮಾಡಲಾಗಿದೆ. ನಿರ್ದೇಶಕರ ಈ ಕ್ರಮವು ಕ್ರಮಬದ್ಧವಾಗಿಲ್ಲ ಎಂದು ತನಿಖಾ ಸಮಿತಿಯು ವರದಿಯಲ್ಲಿ ವಿವರಿಸಿದೆ.

 

ಏಕಗವಾಕ್ಷಿ ಯೋಜನೆಯಡಿಯಲ್ಲಿ ಪುಸ್ತಕ ಖರೀದಿ ಸಂದರ್ಭದಲ್ಲಿ ಶಾಸನಬದ್ಧ ಕಟಾವಣೆಗಳನ್ನು ಮಾಡಬೇಕಿರುವುದು ಡ್ರಾಯಿಂಗ್‌ ಅಧಿಕಾರಿಯ ಕರ್ತವ್ಯವಾಗಿದೆ. ಆದರೆ ಆದಾಯ ತೆರಿಗೆ ನಿಯಮ 194 ಸಿ ಅನ್ವಯ ಬಿಲ್‌ನ ಪಾವತಿ ಸಂದರ್ಭದಲ್ಲಿ ಕಡ್ಡಾಯವಾಗಿ ಮೂಲದಲ್ಲೇ ಕಟಾಯಿಸಬೇಕಾದ ಆದಾಯ ತೆರಿಗೆಯನ್ನು ಕಟಾಯಿಸಿರಲಿಲ್ಲ. ಆದರೆ ಪೂರ್ಣ ಹಣವನ್ನು ಸರಬರಾಜುದಾರರಿಗೆ ಪಾವತಿಸಲಾಗಿತ್ತು. ಇದರಿಂದ ಸರ್ಕಾರಕ್ಕೆ ಸಂದಾಯವಾಗಬೇಕಿದ್ದ 1,41,61,180 ರು.ಗಳನ್ನು ಕಟಾಯಿಸದೇ ಆರ್ಥಿಕ ನಷ್ಟವಾಗಿದೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

2018-19ನೇ ಸಾಲಿನಿಂದ 2022-23ನೇ ಸಾಲಿನವರೆಗೆ ರಾಜ್ಯಮಟ್ಟದ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿಯು ಆಯ್ಕೆ ಮಾಡಿರುವ ಪುಸ್ತಕಗಳನ್ನು ಸಾಗಾಣಿಕೆ ಮಾಡುವ ಬಗ್ಗೆ ಟೆಂಡರ್‌ ಕರೆಯಲಾಗಿತ್ತು. ಪ್ರತಿ ಬಾರಿ ಟೆಂಡರ್‌ ಪ್ರಕ್ರಿಯೆ ನಡೆದಾಗಲೂ ವೆಂಕಟೇಶ್‌ ಹೇಮಂತ್‌ ಕುಮಾರ್‌, ಓಂ ಶಕ್ತಿ ಎಂಟರ್‌ ಪ್ರೈಸೆಸ್‌ ಇವರನ್ನು ಹೊರತುಪಡಿಸಿ ಉಳಿದ ಬಿಡ್‌ದಾರರು ತಾಂತ್ರಿಕ ಸಮಿತಿಯಿಂದ ತಿರಸ್ಕೃತವಾಗಿದ್ದರು.

 

‘ಈ ಅಂಶವನ್ನು ಗಮನಿಸಿದಾಗ ಟೆಂಡರ್‌ ಪ್ರಕ್ರಿಯೆಗಳು ಸಂಶಯಕ್ಕೆ ಎಡೆಮಾಡಿಕೊಡುವಂತೆ ಕಂಡು ಬರುತ್ತಿದೆ. ಸಾಗಾಣಿಕೆ ಕಾರ್ಯವನ್ನು 2018-19ರಿಂದ ಇಲ್ಲಿಯವರೆಗೂ (ಹಿಂದಿನ ವರ್ಷಗಳಲ್ಲಿಯೂ ಮಾಡಿರಬಹುದು) 5 ವರ್ಷಗಳಿಂದಲೂ ನಿರಂತರವಾಗಿ ವೆಂಕಟೇಶ್‌ ಹೇಮಂತ್‌ ಕುಮಾರ್‌, ಓಂಶಕ್ತಿ ಎಂಟರ್‌ ಪ್ರೈಸೆಸ್‌ ಇವರಿಗೆ ನೀಡಲಾಗಿದೆ,’ ಎಂದು ವರದಿಯಲ್ಲಿ ಹೇಳಲಾಗಿದೆ.

 

ಈ ಸಂಸ್ಥೆಯವರು ದರ ನಮೂದಿಸುವುದು, ಇಲಾಖೆಯಿಂದ ದರ ಸಂಧಾನ ಮಾಡುವುದು ಈ ಎರಡು ಪ್ರಕ್ರಿಯೆಗಳು ಏಕಸ್ವಾಮ್ಯಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೇ ಪರಸ್ಪರ ಹೊಂದಾಣಿಕೆ ಅವಕಾಶವನ್ನು ಕಲ್ಪಿಸಿರುವ ಸಂದರ್ಭವನ್ನು ತಳ್ಳಿಹಾಕುವಂತಿಲ್ಲ. ಈ ಅಂಶಗಳನ್ನು ಗಮನಿಸಿದಾಗ ಸಾಗಾಣಿಕೆ ಕಾರ್ಯದಲ್ಲಿ ಸರ್ಕಾರದ ಹಣ ದುರುಪಯೋಗವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಡಿಜಿಟಲ್‌ ಗ್ರಂಥಾಲಯದಲ್ಲಿ ದೊರೆಯುವ ಉಚಿತ ಹಾಗೂ ಪಾವತಿಸಿದ ಮಾಹಿತಿ, ಪುಸ್ತಕಗಳ ಕುರಿತಂತೆ ಇಲಾಖೆಯು ಖರೀದಿಯ ಪೂರ್ವದಲ್ಲಿ ಹಾಗೂ ನಂತರದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯವಿರುವ ಕಂಟೆಂಟ್‌ಗಳನ್ನು ಗುರುತಿಸಿ ವಿಷಯ ಪರಿಣಿತರು ಹಾಗೂ ತಜ್ಞರೊಡನೇ ಸಮಾಲೋಚಿಸಿಲ್ಲ.

 

‘ಪಟ್ಟಿ ಮಾಹಿತಿ ಸಿದ್ಧಪಡಿಸಿಕೊಂಡು ಸದರಿ ಕಂಟೆಂಟ್‌ಗಳ ಲಭ್ಯತೆ ಬಗ್ಗೆ ಸರಬರಾಜುದಾರರಲ್ಲಿ ಚರ್ಚಿಸಿಲ್ಲ ಮತ್ತು ತೀರ್ಮಾನಿಸಿಲ್ಲ. ಸರಬರಾಜುದಾರರೇ ಅವರಿಗೆ ಅನುಕೂಲವಾದ ರೀತಿಯಲ್ಲಿ ನಿರ್ಧರಿಸಿರುವುದರಿಂದ ಏಕಪಕ್ಷೀಯವಾಗಿ ಮಾರಾಟದಾರ ಸ್ನೇಹಿಯಾಗಿ ವರ್ತಿಸಿರುವುದು ಕಂಡುಬಂದಿದೆ. ಸಾರ್ವಜನಿಕರಿಗೆ ಸಹ ಈ ಕುರಿತಂತೆ ಯಾವುದೇ ಮಾಹಿತಿ ಇರುವುದಿಲ್ಲ,’ ಎಂದು ವರದಿಯಲ್ಲಿ ಹೇಳಲಾಗಿದೆ.

 

ಸಾರ್ವಜನಿಕ ಗ್ರಂಥಾಲಯ ಇಲಾಖೆ ವ್ಯಾಪ್ತಿಯ ಗ್ರಂಥಾಲಯಗಳಿಗೆ ಭಾರತೀಯ ಭಾಷೆಗಳ ಪುಸ್ತಕಗಳ ಖರೀದಿಗೆ ಸೀಮಿತವಾದಂತೆ ಆಯ್ಕೆ ಪ್ರಕ್ರಿಯೆ ನಡೆದಿರಲಿಲ್ಲ. ಅದೇ ರೀತಿ ಪುಸ್ತಕಗಳ ಆಯ್ಕೆ ಸಮಿತಿಗೆ ಆಯವ್ಯಯದ ಮಾಹಿತಿಯನ್ನೂ ಒದಗಿಸಿರಲಿಲ್ಲ ಎಂಬುದನ್ನು ತನಿಖಾ ಸಮಿತಿಯು ಬಹಿರಂಗಗೊಳಿಸಿತ್ತು.

 

ಪುಸ್ತಕಗಳ ಖರೀದಿಸಿದ್ದ ಸಾರ್ವಜನಿಕ ಗ್ರಂಥಾಲಯವು ತನ್ನ ಅಧೀನದ ಜಿಲ್ಲಾ ಕೇಂದ್ರ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಸರಬರಾಜು ಮಾಡಿರಲಿಲ್ಲ.

ಉಗ್ರಾಣದಲ್ಲೇ ಕೊಳೆತ 20 ಕೋಟಿ ಮೊತ್ತದ ಪುಸ್ತಕಗಳು; ನಿರ್ದೇಶಕರ ವೈಫಲ್ಯವನ್ನು ಎತ್ತಿಹಿಡಿದ ತನಿಖಾ ಸಮಿತಿ

 

ಡಿಜಿಟಲ್‌ ಲೈಬ್ರರಿ ಅನುಷ್ಠಾನದಲ್ಲಿನ ಅಕ್ರಮ ನಡೆದಿದೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿತ್ತು.

ಡಿಜಿಟಲ್‌ ಲೈಬ್ರರಿ ಯಶಸ್ಸಿಗೆ ದಾಖಲೆಗಳೇ ಇಲ್ಲ; ಅನುಷ್ಠಾನಕ್ಕೂ ಮುನ್ನವೇ 2.59 ಕೋಟಿ ಪಾವತಿ

ಇ-ಕಂಟೆಂಟ್‌ಗಳ ಹಿಂದಿನ ವ್ಯವಹಾರಗಳನ್ನೂ ತನಿಖಾ ಸಮಿತಿಯು ಬಹಿರಂಗಗೊಳಿಸಿತ್ತು.

ಇ-ಕಂಟೆಂಟ್‌ ಉಚಿತವಾಗಿ ಲಭ್ಯವಿದ್ದರೂ ಪೇಯ್ಡ್‌ ಕಂಟೆಂಟ್‌ ಎಂದು ಬಿಂಬಿಸಿದ್ದ ನಿರ್ದೇಶಕ; ತನಿಖಾ ವರದಿ

ಅಲ್ಲದೇ   ತನಿಖಾ ಸಮಿತಿಯು ಇದೀಗ ಪುಸ್ತಕಗಳ ಆಯ್ಕೆ ಪ್ರಕ್ರಿಯೆಗಳಲ್ಲಾಗಿರುವ ಹಲವು ಲೋಪಗಳನ್ನು ಮುನ್ನೆಲೆಗೆ ತಂದಿತ್ತು.

ಮಾರ್ಗಸೂಚಿಗೆ ವ್ಯತಿರಿಕ್ತವಾಗಿ ಖರೀದಿ, ಅಧಿಕಾರವ್ಯಾಪ್ತಿ ಮೀರಿ ಪುಸ್ತಕಗಳ ಆಯ್ಕೆ; ನಿಯಮ ಉಲ್ಲಂಘನೆ

 

ಈ ಎಲ್ಲಾ ಪ್ರಕರಣಗಳನ್ನು ಪತ್ತೆ ಹಚ್ಚಿ ಪರಿಶೀಲಿಸಿರುವ ಸಮಿತಿಯು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್‌ ಹೊಸಮನಿ ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಿದೆ. ತನಿಖಾ ಸಮಿತಿಯು ನೀಡಿದ್ದ ವರದಿಯನ್ನಾಧರಿಸಿ ಸರ್ಕಾರವು 2024ರ ಮಾರ್ಚ್‌ 11ರಂದು ಸತೀಶ್‌ ಹೊಸಮನಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಅದೇಶ ಹೊರಡಿಸಿತ್ತು.

ಪುಸ್ತಕ ಖರೀದಿ ಸೇರಿ ಹತ್ತಾರು ಅಕ್ರಮಗಳನ್ನು ಹೊರಗೆಳೆದ ತನಿಖಾ ಸಮಿತಿ; ನಿರ್ದೇಶಕ ಹೊಸಮನಿ ಅಮಾನತು

 

ಪುಸ್ತಕ ಖರೀದಿ, ಡಿಜಿಟಲ್‌ ಗ್ರಂಥಾಲಯ ಯೋಜನೆ ಅನುಷ್ಠಾನ, ಇ-ಕಂಟೆಂಟ್‌ ಅಭಿವೃದ್ಧಿ, ಪುಸ್ತಕಗಳ ಸಾಗಾಣಿಕೆ, ಟೆಂಡರ್‌ ಅಕ್ರಮ, ನಿಯಮಗಳ ಉಲ್ಲಂಘನೆ, ಯೋಜನೆ ಅನುಷ್ಠಾನಗೂ ಮುನ್ನವೇ ಸರಬರಾಜುದಾರರು ಮತ್ತು ಸೇವಾದಾರರಿಗೂ ಮುಂಗಡವಾಗಿ ಹಣ ಪಾವತಿ, ಹಣ ದುರುಪಯೋಗ, ಅಧಿಕಾರ ದುರುಪಯೋಗವನ್ನು ಪತ್ತೆ ಹಚ್ಚಿತ್ತು.

 

ಸತೀಶ್‌ ಕುಮಾರ್‍‌ ಹೊಸಮನಿ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಮೊದಲು ಪತ್ರ ಬರೆದಿದ್ದ ವಿಧಾನ ಪರಿಷತ್ ಸದಸ್ಯ ಎಚ್‌ ವಿಶ್ವನಾಥ್‌ ಅವರು ಆ ನಂತರ ನಡೆದ ಬೆಳವಣಿಗೆಯಲ್ಲಿ ವಿಚಾರಣೆ ಕೈಬಿಡಬೇಕು ಎಂದು ಬರೆದಿದ್ದ ಪತ್ರ ಆಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶನ ನೀಡಿದ್ದರು. ಆದರೂ ತನಿಖಾ ಸಮಿತಿಯು ವಿಚಾರಣೆ ನಡೆಸಿತ್ತು.

 

ಹೊಸಮನಿ ವಿರುದ್ಧ ವಿಚಾರಣೆ ಕೈಬಿಡಲು ಸಿಎಂ ನಿರ್ದೇಶನ; ಮುನ್ನಲೆಗೆ ಬಂದ ಆಪ್ತ ಕಾರ್ಯದರ್ಶಿ ಟಿಪ್ಪಣಿ

ಹೊಸಮನಿ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಈ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಚ್‌ ವಿಶ್ವನಾಥ್‌ ಪತ್ರ ಬರೆದಿದ್ದರು. ಆದರೀಗ ತನಿಖೆಯನ್ನೇ ಕೈಬಿಡಬೇಕು ಮತ್ತು ಅದೇ ಹುದ್ದೆಯಲ್ಲಿಯೇ ಮುಂದುವರೆಸಲು ನಿರ್ದೇಶನ ನೀಡಬೇಕು ಎಂದು ಮುಖ್ಯಮಂತ್ರಿಗೆ 2024ರ ಜನವರಿ 10ರಂದು ‌ ಪತ್ರ ಬರೆದಿದ್ದರು. ವಿಶ್ವನಾಥ್‌ ಅವರ ಈ ನಡೆಯು ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿತ್ತು.

ಗ್ರಂಥಾಲಯ ಇಲಾಖೆ ಅಕ್ರಮ; ತನಿಖೆಗೆ ಬರೆದ ಪತ್ರವನ್ನೇ ಹಿಂಪಡೆದುಕೊಂಡ ಪರಿಷತ್‌ ಸದಸ್ಯ ವಿಶ್ವನಾಥ್‌

 

ಗ್ರಂಥಾಲಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ನಿರ್ದೇಶಕ  ಸತೀಶ್‌ ಕುಮಾರ್‍‌ ಹೊಸಮನಿ ಅವರು  ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ಸಲ್ಲಿಕೆಯಾಗಿತ್ತು.

 

‘ನಾನು ಹೇಳಿದ ಹಾಗೆ ಕೇಳು, ರಾತ್ರಿ ಊಟಕ್ಕೆ ರೆಡಿ ಮಾಡು’; ನಿರ್ದೇಶಕರ ವಿರುದ್ಧ ಲೈಂಗಿಕ ಕಿರಕುಳ ಆರೋಪ

 

ಇದರ ಬೆನ್ನಲ್ಲೇ ಗ್ರಂಥಾಲಯ ಇಲಾಖೆಯಲ್ಲಿ ಕಂಪ್ಯೂಟರ್‍‌, ಯುಪಿಎಸ್‌, ಝೆರಾಕ್ಸ್‌ ಉಪಕರಣ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಇಲಾಖೆ ಅಧಿಕಾರಿಗಳಿಂದ ತನಿಖೆ ನಡೆದಿತ್ತು.

 

ಗ್ರಂಥಾಲಯ ಇಲಾಖೆಯಲ್ಲಿ ಕಂಪ್ಯೂಟರ್‌, ಯುಪಿಎಸ್‌, ಝೆರಾಕ್ಸ್‌ ಉಪಕರಣ ಖರೀದಿ ಹಗರಣ; ತನಿಖಾ ವರದಿ

 

ವಿಶೇಷವೆಂದರೆ ಈ ಹಗರಣದಲ್ಲಿ ಕರ್ತವ್ಯಲೋಪ ಎಸಗಿದ್ದಾರೆ ಎನ್ನಲಾಗಿದ್ದ ಬಹುತೇಕ ಅಧಿಕಾರಿಗಳು ನಿವೃತ್ತಿಯಾಗಿದ್ದರು.

 

ಕಂಪ್ಯೂಟರ್‍‌ ಖರೀದಿ ಹಗರಣ; ಕರ್ತವ್ಯಲೋಪವೆಸಗಿದ ಅಧಿಕಾರಿಗಳ ಪಟ್ಟಿ ಬಹಿರಂಗ, ಬಹುತೇಕರು ನಿವೃತ್ತಿ

 

ಕಂಪ್ಯೂಟರ್‍‌ ಮತ್ತಿತರೆ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ಕುರಿತು ಕೆಲ ಅಧಿಕಾರಿಗಳಿಗೆ ಆರೋಪ ಪಟ್ಟಿಯೂ ಜಾರಿಯಾಗಿತ್ತು.

 

ಕಂಪ್ಯೂಟರ್‍‌ ಮತ್ತಿತರೆ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ; ಸರ್ಕಾರದಿಂದ ಆರೋಪ ಪಟ್ಟಿ ಜಾರಿ

ಹಿಂದಿನ ಬಿಜೆಪಿ ಸರ್ಕಾರದಲ್ಲಿಯೂ ಡಿಸಿಎಂಗಳ ಹೆಸರಿನಲ್ಲಿ 5 ಕೋಟಿ ಸಂಗ್ರಹಿಸಲು ಕೆಳ ಹಂತದ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

 

ಡಿಸಿಎಂಗಳಿಗೆ 5 ಕೋಟಿ ಸಂಗ್ರಹಿಸಲು ತಾಕೀತು; ಗ್ರಂಥಾಲಯ ನಿರ್ದೇಶಕರೇ ವಸೂಲಿಗಿಳಿದರೇ?

 

‘ಹಲವು ಗುರುತರವಾದ ಆರೋಪಗಳಿಗೆ ಗುರಿಯಾಗಿರುವ ಹೊಸಮನಿ ಅವರ ವಿರುದ್ಧ ತನಿಖೆ ನಡೆಯುತ್ತಿದೆಯಾದರೂ ನಿರ್ದೇಶಕರ ಹುದ್ದೆಯಲ್ಲಿಯೇ ಸರ್ಕಾರವು ಮುಂದುವರೆಸಿರುವುದು ಸರಿಯಲ್ಲ. ಆರೋಪಿತ ವ್ಯಕ್ತಿಯು ಅದೇ ಹುದ್ದೆಯಲ್ಲಿ ಮುಂದುವರೆದರೆ ದಾಖಲೆ, ಸಾಕ್ಷ್ಯ ನಾಶವಾಗಲಿದೆ. ಕನಿಷ್ಠ ವಿಚಾರಣೆ ಪೂರ್ಣಗೊಳ್ಳುವವರೆಗಾದರೂ ನಿರ್ದೇಶಕರನ್ನು ರಜೆ ಮೇಲೆ ತೆರಳಲು ನಿರ್ದೇಶಿಸಬೇಕಿತ್ತು, ‘ಎನ್ನುತ್ತಾರೆ ಗ್ರಂಥಾಲಯ ಇಲಾಖೆಯ ಅಧಿಕಾರಿಯೊಬ್ಬರು.

the fil favicon

SUPPORT THE FILE

Latest News

Related Posts